ಖಾಲಿಸ್ಥಾನಿಗಳಿಗೇಕೆ ಕೆನಡಾದ ಆಶ್ರಯ? ಇವರ ಹಿಂದು ದ್ವೇಷಕ್ಕಿರುವ ಪ್ರಚೋದನೆಯಾದರೂ ಏನು? (ತೆರೆದ ಕಿಟಕಿ)

ನಡಾದ ರಾಜಕೀಯ ವ್ಯವಸ್ಥೆಗೆ ಅಲ್ಲಿನ ಸಿಖ್ ಮತ್ತು ಹಿಂದು ಜನಸಂಖ್ಯೆಯನ್ನು ಪರಸ್ಪರರ ವಿರುದ್ಧ ಎತ್ತಿಕಟ್ಟಿ ಸಿಖ್ ಮತಗಳ ಧ್ರುವೀಕರಣ ಮಾಡುವುದರಲ್ಲಿ ಬಹಳ ದೊಡ್ಡ ಫಾಯಿದೆ ಇದೆ...
Protest against Khalisthanis in Kanada
ಖಾಲಿಸ್ಥಾನಿಗಳ ವಿರುದ್ಧ ಕೆನಡಾದಲ್ಲಿನ ಪ್ರತಿಭಟನೆ (ಸಂಗ್ರಹ ಚಿತ್ರ)online desk
Updated on

ಭಾರತ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ಬಾಂಧವ್ಯ ಪಾತಾಳ ಕಂಡಿದೆ. ನವೆಂಬರ್ 3ರ ಭಾನುವಾರ ಬ್ರಾಮ್ಟನ್ ಹಿಂದು ದೇವಾಲಯದಲ್ಲಿ ಪ್ರಾರ್ಥನಾ ನಿರತ ಹಿಂದುಗಳ ಮೇಲೆ ಅಲ್ಲಿನ ಖಾಲಿಸ್ತಾನಿ ಗುಂಪು ದಾಳಿ ನಡೆಸಿತು. ಕೆನಡಾದ ಪೊಲೀಸರು ಆಗ ಅಲ್ಲಿನ ಹಿಂದುಗಳಿಗೆ, ದೇವಾಲಯಕ್ಕೆ ಭೇಟಿ ನೀಡಿದ್ದ ಭಾರತದ ದೂತಾವಾಸ ಅಧಿಕಾರಿಗಳಿಗೆ ರಕ್ಷಣೆ ನೀಡುವುದನ್ನು ಆದ್ಯತೆಯಾಗಿಸಿಕೊಳ್ಳಬೇಕಿತ್ತು. ಆದರೆ, ಈಗ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾಗಿರುವ ವಿಡಿಯೊಗಳ ಪ್ರಕಾರ ಪೊಲೀಸ್ ಬಲ ಪ್ರಯೋಗವಾಗಿದ್ದು ಹಿಂದುಗಳ ವಿರುದ್ಧವೇ! ಪ್ರಧಾನಿ ನರೇಂದ್ರ ಮೋದಿ ಸಹಿತ ಭಾರತ ಸರ್ಕಾರದ ಪ್ರಮುಖರೆಲ್ಲ ಈ ಘಟನೆಯನ್ನು ಖಂಡಿಸಿದ್ದಾಗಿದೆ. ಆದರೆ, ಖಾಲಿಸ್ತಾನಿಗಳ ಕಾರಣಕ್ಕಾಗಿ ಭಾರತದೊಂದಿಗೆ ಬಾಂಧವ್ಯವನ್ನೇ ಮುಕ್ಕಾಗಿಸಿಕೊಳ್ಳುವುದಕ್ಕೆ ಸಿದ್ಧ ಎಂಬ ಸೂಚನೆಯನ್ನು ಈ ಹಿಂದೆಯೇ ಸಾಕಷ್ಟು ಬಾರಿ ಕೊಟ್ಟುಬಿಟ್ಟಿರುವ ಕೆನಡಾದ ರಾಜಕೀಯ ವ್ಯವಸ್ಥೆಯಲ್ಲಿ ಸುಧಾರಣೆಗಳಾಗುತ್ತವೆ ಎಂದೇನೂ ಆಶಿಸುವಂತಿಲ್ಲ. 

ಈಗ ಅಧಿಕಾರದಲ್ಲಿರುವ ಜಸ್ಟಿನ್ ಟ್ರೂಡೊರನ್ನು ಖಂಡಿಸಿ, ಆ ವ್ಯಕ್ತಿಯ ವಿರುದ್ಧ ಆಕ್ರೋಶದ ಮಾತುಗಳನ್ನಾಡುವುದರಿಂದ ನಮಗೊಂದಿಷ್ಟು ಸಮಾಧಾನ ಸಿಗಬಹುದಾದರೂ ಮೂಲ ಸಮಸ್ಯೆಯೇನೂ ವ್ಯಕ್ತಿಮೂಲದ್ದಲ್ಲ. ಅಲ್ಲಿನ ಪ್ರತಿಪಕ್ಷ ನಾಯಕ ಸಹ ಈ ಬಾರಿ ಅಲ್ಲಿನ ಭಾರತೀಯ ನಿವಾಸಿಗಳಿಗೆ ನೀಡಬೇಕಿದ್ದ ಔತಣಕೂಟವನ್ನು ಹಬ್ಬವೆಲ್ಲ ಮುಗಿದು ಪ್ರಾಮುಖ್ಯವೇ ಇರದಿದ್ದ ದಿನವೊಂದಕ್ಕೆ ಮುಂದೂಡಿದ. ಇವೆಲ್ಲದರ ಅರ್ಥ ಇಷ್ಟೇ. ಕೆನಡಾದ ರಾಜಕೀಯ ವ್ಯವಸ್ಥೆಗೆ ಅಲ್ಲಿನ ಸಿಖ್ ಮತ್ತು ಹಿಂದು ಜನಸಂಖ್ಯೆಯನ್ನು ಪರಸ್ಪರರ ವಿರುದ್ಧ ಎತ್ತಿಕಟ್ಟಿ ಸಿಖ್ ಮತಗಳ ಧ್ರುವೀಕರಣ ಮಾಡುವುದರಲ್ಲಿ ಬಹಳ ದೊಡ್ಡ ಫಾಯಿದೆ ಇದೆ. ಅದನ್ನೇ ಕಾಲಕಾಲಕ್ಕೆ ಅಲ್ಲಿನ ರಾಜಕೀಯ ಶಕ್ತಿಗಳೆಲ್ಲ ಒಂದೊಂದು ಬಗೆಯಲ್ಲಿ ಮಾಡಿಕೊಳ್ಳುತ್ತ ಬರುತ್ತಿವೆ. 

ಈ ಬಾರಿ ಕೆನಡಾ-ಭಾರತಗಳ ನಡುವೆ ಸಂಬಂಧ ಬಿಗಡಾಯಿಸುವುದಕ್ಕೆ ಆರಂಭವಾಗಿದ್ದು ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ವಿಷಯದಲ್ಲಿ. ಈ ನಿಜ್ಜರ್ ಕೆನಡಾದಲ್ಲಿದ್ದುಕೊಂಡು ಭಾರತದಲ್ಲಿ ಖಾಲಿಸ್ಥಾನವೆಂಬ ಪ್ರತ್ಯೇಕ ದೇಶ ಸಿಖ್ಖರಿಗಾಗಿ ಸ್ಥಾಪನೆಯಾಗಬೇಕು ಎಂಬ ಪ್ರತಿಪಾದನೆಯಲ್ಲಿದ್ದವ. ಈ ಸಂಬಂಧ ಆತ ಭಾರತದಲ್ಲಿ ಆತ ಹಲವು ಉಗ್ರಕೃತ್ಯಗಳಿಗೂ ಸಹಕರಿಸಿದ್ದ ಎಂಬ ಕಾರಣಕ್ಕೆ ಭಾರತ ಆತನನ್ನು ಉಗ್ರವಾದಿ ಪಟ್ಟಿಯಲ್ಲಿರಿಸಿತ್ತು. ಇಂಥ ನಿಜ್ಜರ್ ಜೂನ್ 2022ರ ಒಂದು ದಿನ ವಾಂಕೊವರ್ ಪಟ್ಟಣದ ಸಿಖ್ ದೇವಾಲಯದ ಹೊರಗೆ ನಿಂತಿದ್ದಾಗ ಮೊಟಾರುಬೈಕಿನಲ್ಲಿ ಬಂದ ಇಬ್ಬರು ಮುಸುಕುಧಾರಿ “ಅಪರಿಚಿತ ಬಂದೂಕುಧಾರಿಗಳು” ಗುಂಡಿಟ್ಟು ಕೊಂದು ಪರಾರಿಯಾದರು. ಈ ಕೃತ್ಯವನ್ನು ಭಾರತದ ಗೂಢಚಾರ ವಿಭಾಗವೇ ಮಾಡಿಸಿದ್ದು ಅಂತ ಕೆನಡಾದ ಜಸ್ಟೀನ್ ಟ್ರೂಡೊ ಆಡಳಿತ ಗಲಾಟೆ ಎಬ್ಬಿಸಿತು.

ಅಲ್ಲಿಂದ ತೀವ್ರವಾದ ಸಂಘರ್ಷವು ತಾರಕಕ್ಕೇರಿ, ಕೆನಡಾದಲ್ಲೀಗ ಭಾರತದ ರಾಜತಾಂತ್ರಿಕರು ಹಾಗೂ ಹಿಂದುಗಳನ್ನು ಗುರಿಯಾಗಿರಿಸಿಕೊಂಡು ಸಿಖ್ ಖಾಲಿಸ್ಥಾನಿಗಳು ದಾಳಿ ಮತ್ತು ಹಿಂಸಾಕೃತ್ಯಗಳನ್ನು ಮಾಡುತ್ತಿದ್ದಾರೆ. ಕೆನಡಾದ ಆಡಳಿತವು ಈ ಖಾಲಿಸ್ಥಾನಿಗಳಿಗೆ ಪೂರಕವಾಗಿಯೇ ವ್ಯವಹಾರ ಮಾಡುತ್ತಿದೆ. ಈಗಿನ ಸಂಘರ್ಷಕ್ಕೆ ನಿಜ್ಜರ್ ಪ್ರಕರಣವು ಮೂಲವಾದರೂ, ಕೆನಡಾದ ಖಾಲಿಸ್ಥಾನಿ ತುಷ್ಟಿಕರಣವು ಲಾಗಾಯ್ತಿನಿಂದ ಇದೆ. 1985ರ ಜೂನ್ ತಿಂಗಳಲ್ಲಿ ಕೆನಡಾದಿಂದ ಇಂಗ್ಲೆಂಡ್ ಹೋಗಿ ನಂತರ ಭಾರತಕ್ಕೆ ಬರಲಿದ್ದ ಏರ್ ಇಂಡಿಯಾ ವಿಮಾನವನ್ನು ಖಾಲಿಸ್ಥಾನಿ ಉಗ್ರರು ಸ್ಫೋಟಿಸಿ 329 ಮಂದಿ ಸಾವಿಗೆ ಕಾರಣರಾದರು. ಇದರ ತನಿಖೆಯಲ್ಲಿ ಸಹ ಕೆನಡಾವು ಭಾರತಕ್ಕೆ ಸಂಪೂರ್ಣ ಸಹಕಾರ ಕೊಟ್ಟಿರಲಿಲ್ಲ. 

ಕೆನಡಾವು ಖಾಲಿಸ್ಥಾನಿಗಳ ಬೀಡಾಗಿದ್ದಾದರೂ ಹೇಗೆ?

ಇವತ್ತಿಗೆ ಕೆನಡಾದ ಜನಸಂಖ್ಯೆಯ ಶೇ. 2ರಷ್ಟಿರುವ ಸಿಖ್ಖರು ರಾಜಕೀಯವಾಗಿ ಪ್ರಬಲರು. ಅಲ್ಲಿನ ಗುರುದ್ವಾರಗಳು ಖಾಲಿಸ್ಥಾನಿಗಳ ಬಿಗಿಹಿಡಿತದಲ್ಲಿರುವುದರಿಂದ ಅಲ್ಲಿ ಮಾಡರೇಟ್ ಎಂದು ಕರೆಸಿಕೊಳ್ಳುವ ಸಿಖ್ಖರಿಗೆ ಧ್ವನಿ ಇಲ್ಲ. ಹಾಗಾದರೆ, ಕೆನಡಾವು ಮೂಲತಃ ಸಿಖ್ ಪಂಗಡದವರಿಗೆ ಆಶ್ರಯತಾಣವಾಗಿದ್ದಾದರೂ ಏಕೆ ಎಂಬ ಪ್ರಶ್ನೆಗೆ ಉತ್ತರವು ಭಾರತವನ್ನಾಳಿದ್ದ ಬ್ರಿಟಿಷರ ಕಾಲುಬುಡಕ್ಕೆ ಬಂದು ನಿಲ್ಲುತ್ತದೆ.

ಬ್ರಿಟಿಷ್ ಅಧೀನದಲ್ಲಿದ್ದ ಭಾರತೀಯ ಸೇನೆಯಲ್ಲಿ ಸಿಖ್ ಯೋಧರು ಆಂಗ್ಲರಿಗೆ ಅಚ್ಚುಮೆಚ್ಚಿನವರಾಗಿದ್ದರು. ಕಾರಣ, 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ. ಅಲ್ಲಿ ಭಿನ್ನ ಕಾರಣಗಳಿಗಾಗಿ ಹಿಂದು-ಮುಸ್ಲಿಂ ಯೋಧರೆಲ್ಲ ಬ್ರಿಟಿಷರ ವಿರುದ್ಧ ಬಂಡಾಯ ಎದ್ದಿದ್ದರು. ಆದರೆ, ಇದಕ್ಕೆ ದೊಡ್ಡಮಟ್ಟದಲ್ಲಿ ಅಪವಾದವಾಗಿ ಉಳಿದವರೆಂದರೆ ಅವತ್ತಿನ ಬ್ರಿಟಿಷ್ ಸೇನೆಯ ಸಿಖ್ ಯೋಧರು! ಪಂಜಾಬ್ ಪ್ರಾಂತ್ಯದ ಎಲ್ಲ ಜಮೀನ್ದಾರರು ಹಾಗೂ ರಾಜರೆಲ್ಲ ಬ್ರಿಟಿಷರಿಗೆ ಅಂದು ಬೆಂಬಲವಾಗಿ ನಿಂತರು. ಸಿಖ್ ಯೋಧರು ಬ್ರಿಟಿಷರಿಗಾಗಿ ದೆಹಲಿ ಮಾರ್ಗವನ್ನು ತೆರೆದಿರಿಸಿದರಲ್ಲದೇ, ದಂಗೆಯೆದ್ದ ಸಿಪಾಯಿಗಳು ಆ ಮಾರ್ಗಗಳನ್ನು ಬಳಸುವುದಕ್ಕೆ ಅಡ್ಡಲಾದರು.

ಈ ಹಿಂದೆ ನಡೆದ ಎರಡು ಆಂಗ್ಲೊ-ಸಿಖ್ ಯುದ್ಧಗಳಲ್ಲಿ ಬ್ರಿಟಿಷರು ಜಯ ಸಾಧಿಸಿದ್ದರು. ಹೀಗೆ ಬ್ರಿಟಿಷರು ಜಯ ಸಾಧಿಸುವುದಕ್ಕೆ ಬ್ರಿಟಿಷ್ ಸೇನೆಯಲ್ಲಿದ್ದ ಬೆಂಗಾಳಿ-ಹಿಂದು ಯೋಧರೆಲ್ಲ ಸಹಕರಿಸಿರುವಾಗ ತಾವೇಕೆ ಪರಿಸ್ಥಿತಿ ಲಾಭ ಪಡೆಯಬಾರದೆಂಬ ಯೋಚನೆಯೂ ಇದ್ದಿರಬಹುದು. ಇನ್ನೊಂದು ವಿಶ್ಲೇಷಣೆ ಪ್ರಕಾರ, ದಂಗೆಯೆದ್ದ ಸಿಪಾಯಿಗಳ ಕೈಮೇಲಾದರೆ ಮತ್ತೆ ಮೊಘಲ್ ಆಡಳಿತ ಬರುತ್ತದೆ; ಅವರಿಗಿಂತ ಬ್ರಿಟಿಷರೇ ಸರಿ ಎಂದು ಸಿಖ್ಖರು ಯೋಚಿಸಿದ್ದರು ಎನ್ನಲಾಗುತ್ತದೆ.

ಅದೇನೇ ಇದ್ದರೂ ಭಾರತದಲ್ಲಿ ಹಿಂದುಗಳಿಂದ ಸಿಖ್ಖರನ್ನು ಬೇರ್ಪಡೆಸುವ ಸೂತ್ರವೊಂದು ಅವತ್ತು ಬ್ರಿಟಿಷರಿಗೆ ಸಿಕ್ಕಿಯೇ ಹೋಯಿತು. ಪ್ರಥಮ ಸ್ವಾತಂತ್ರ್ಯ ಸಂಗ್ರಾಮವನ್ನು 1859ರ ವೇಳೆಗೆ ಹತ್ತಿಕ್ಕುತ್ತಲೇ ಬ್ರಿಟಿಷರು ಮಾಡಿದ ಮೊದಲ ಕೆಲಸವೆಂದರೆ, ಸೇನೆಯಲ್ಲಿ ಬಂಗಾಳದ ಯೋಧರನ್ನೆಲ್ಲ ವಜಾಗೊಳಿಸಿ, ‘ಖಾಲ್ಸಾ’ ಪಾಲಿಸುವ, ಅಂದರೆ ಖಂಗಾ-ಕೇಶ-ಖಡಾ-ಕಚ್ಚಾ-ಕ್ರಿಪಣ್ ಧಾರಣೆಯ ಪಂಜಾಬಿನ ಜಾಟ್-ಸಿಖ್ ಯೋಧರನ್ನು ಹೆಚ್ಚುಹೆಚ್ಚಾಗಿ ಸೇನೆಯಲ್ಲಿ ಭರ್ತಿ ಮಾಡಿಕೊಂಡಿದ್ದು. ಇವರಿಗೆ ಪಂಜಾಬಿನ ಫಲವತ್ತು ಕೃಷಿಭೂಮಿಯನ್ನೂ ಬ್ರಿಟಿಷರು ಹಂಚಿದರು. ಪರಿಣಾಮವಾಗಿ ಸೇನೆಯಲ್ಲಿ ಹಿಂದುಗಳು ಹಾಗೂ ಸಿಖ್ಖರಲ್ಲೇ ಮತ್ತೊಂದು ಪ್ರಮುಖ ಪಂಗಡವಾದ ಖತ್ರಿಗಳು ಮೂಲೆಗುಂಪಾಗಿಹೋದರು.

Protest against Khalisthanis in Kanada
ದೀಪಾವಳಿ ಬೆಳಕಲ್ಲಿ ಹೊಳೆಯುತ್ತಿವೆ ಭರತಭೂಮಿಯ ತರಹೇವಾರಿ ವಿಜಯಗಾಥೆಗಳು! (ತೆರೆದ ಕಿಟಕಿ)

ಹೀಗೆ ಸಿಖ್ಖರ ಒಂದು ನಿರ್ದಿಷ್ಟ ಪಂಗಡ, ಸ್ಪಷ್ಟವಾಗಿ ಹೇಳುವುದಿದ್ದರೆ, ಜಾಟ್-ಸಿಖ್ಖರು ಬ್ರಿಟಿಷರಿಗೆ ಆಪ್ತರಾದರು. ಕೆನಡಾ ಸಹ ಬ್ರಿಟಿಷರ ವಸಾಹತೇ ಆಗಿತ್ತು. 1897ರಲ್ಲಿ ಕ್ವೀನ್ ವಿಕ್ಟೋರಿಯಾಳ ವಜ್ರ ಮಹೋತ್ಸವವೊಂದು ಕೆನಡಾದ ವಾಂಕೋವರ್ ನಲ್ಲಾಗಿತ್ತು. ತನ್ನಿಮಿತ್ತ ಅಲ್ಲಿಗೆ ತೆರಳಿದ್ದ ಹಾಕಾಂಗ್ ರೆಜಿಮೆಂಟಿನಲ್ಲಿದ್ದ ರೈಸಲ್ದಾರ ಮೇಜರ್ ಕೇಸುರ್ ಸಿಂಘ್ ಅಲ್ಲಿಯೇ ತಳವೂರಿದ್ದಾಗಿ ಹೇಳುತ್ತಾರೆ. 1900ರ ಹೊತ್ತಿಗೆ ಬ್ರಿಟಿಷ್ ಕೊಲಂಬಿಯಾ ಮತ್ತು ಒಂಟಾರಿಯೊಗಳ ಉತ್ಪಾದನಾ ಘಟಕಗಳಲ್ಲಿ ಕೂಲಿಗಳಾಗಿ ದುಡಿಯುವುದಕ್ಕೆ ಸುಮಾರು 5,000 ಸಿಖ್ಖರು ಹೋದರು.

ಎರಡನೇ ವಿಶ್ವಯುದ್ಧದ ನಂತರ ಸ್ವಾತಂತ್ರ್ಯವನ್ನೂ ಪಡೆದಿದ್ದ ಕೆನಡಾಕ್ಕೆ ಕೆಲಸಗಾರರ ಅಗತ್ಯ ಇತ್ತು. ಒಂದೊಮ್ಮೆ ತಮ್ಮ ಅಧೀನದಲ್ಲಿದ್ದ ಕೆನಡಾದ ಸ್ವಾಯತ್ತ ಆಡಳಿತ ವ್ಯವಸ್ಥೆ ಅಡಿ ದುಡಿಯುವುದಕ್ಕೆ ಯುರೋಪಿಯನ್ನರಿಗೆ ಇಷ್ಟವಿರಲಿಲ್ಲ. ಈ ವಿದ್ಯಮಾನವು ಅದಾಗಲೇ ಅಲ್ಲಿ ನೆಲೆ ನಿಂತಿದ್ದ ಸಿಖ್ಖರಿಗೆ ಹೆಚ್ಚಿನ ಜನರನ್ನು ಕರೆತರುವುದಕ್ಕೆ ಅನುವು ಮಾಡಿಕೊಟ್ಟಿತು. 

ಯಾವಾಗ 1984ರಲ್ಲಿ ಜರ್ನೈಲ್ ಸಿಂಘ್ ಭಿಂಧ್ರನ್ವಾಲೆ ಎಂಬ ಪ್ರತ್ಯೇಕತಾವಾದಿಯನ್ನು ಅಮೃತಸರದ ಸ್ವರ್ಣಮಂದಿರ ಮತ್ತು ಅದಕ್ಕೆ ಹೊಂದಿಕೊಂಡಿರುವ ಅಖಾಲ್ ತಖ್ತ್ ಗಳಿಗೆ ಸೇನೆ ನುಗ್ಗಿಸಿ ಸಾಯಿಸಲಾಯಿತೋ, ಇದಕ್ಕೆ ಪೂರಕವಾಗಿ ಕೆ ಪಿ ಎಸ್ ಗಿಲ್ ಎಂಬ ಜಾಟ್-ಸಿಖ್ ಪಂಗಡಕ್ಕೇ ಸೇರಿದ ಪೊಲೀಸ್ ಅಧಿಕಾರಿ ಭಾರತದ ಪಂಜಾಬಿನಲ್ಲಿ ಹರಡಿಕೊಂಡಿದ್ದ ಖಾಲಿಸ್ಥಾನಿಗಳನ್ನು ಅತ್ಯಂತ ನಿರ್ದಯವಾಗಿ ದಮನಿಸಿದರೋ, ಆ ಎಲ್ಲ ಹಂತಗಳಲ್ಲಿ ಖಾಲಿಸ್ಥಾನಿ ಯುವಕರು ಕೆನಡಾಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಹೋಗಿ ಸೇರಿಕೊಂಡರು.

ಅಂದಹಾಗೆ, ಭಿಂದ್ರನ್ವಾಲೆ ಎಂಬ ಖಾಲಿಸ್ಥಾನಿ ಉಗ್ರನನ್ನು ಪ್ರಾರಂಭದಲ್ಲಿ ಬೆಳೆಸಿದ್ದು ಇಂದಿರಾ ಗಾಂಧಿ ಪ್ರಣೀತ ರಾಜಕೀಯ ವ್ಯವಸ್ಥೆಯೇ ಎಂಬುದನ್ನೂ ತಪ್ಪದೇ ದಾಖಲಿಸಬೇಕು. 1977ರಲ್ಲಿ ಪಂಜಾಬಿನ ವಿಧಾನಸಭೆಯಲ್ಲಿ ಕಾಂಗ್ರೆಸ್ಸನ್ನು ಸೋಲಿಸಿ ಅಕಾಲಿ ದಳ-ಜನತಾ ಪರಿವಾರದ ಮೈತ್ರಿ ಅಧಿಕಾರವನ್ನು ಹಿಡಿಯಿತು. ಇದು ಇಂದಿರಾ ಗಾಂಧಿಗೆ ಅರಗಿಸಿಕೊಳ್ಳಲಾಗದ ವಿಚಾರ. ಆಗ ಮುಖ್ಯಮಂತ್ರಿಯಾಗಿ ಅಧಿಕಾರ ಕಳೆದುಕೊಂಡಿದ್ದ ಜೈಲ್ ಸಿಂಘ್ (ಮುಂದೆ ರಾಷ್ಟ್ರಪತಿಯಾದ ವ್ಯಕ್ತಿ) ಮತ್ತು ಇಂದಿರೆಯ ಮಗ ಸಂಜಯ ಸೇರಿಕೊಂಡು ತಂತ್ರ ಹೆಣೆದರು. ಅಕಾಲಿ ದಳದ ಸಿಖ್ ಐಡೆಂಟಿಟಿ ಮೀರಿಸುವ ಸಮುದಾಯದ ‘ಸಂತ ಲೀಡರ್’ ಒಬ್ಬಾತನನ್ನು ಸೃಷ್ಟಿಸಬೇಕು ಎಂಬ ಶೋಧದಲ್ಲಿ ಇವರಿಗೆ ಸಿಕ್ಕವ ಭಿಂದ್ರನವಾಲೆ. ಕೊನೆಗೆ ಇಂದಿರಾರ ಗಟ್ಟಿ ರಾಜಕೀಯ ನಿಲುವೇ ಭಿಂದ್ರನ್ವಾಲೆಯನ್ನು ಹೊಸಕುವುದಕ್ಕೆ ಪ್ರೇರಕವಾಗಿದ್ದು ಹೌದಾದರೂ, ಅದಾಗಲೇ ಹಚ್ಚಿದ್ದ ಕಿಚ್ಚಿನ ದೊಡ್ಡ ಭಾಗವೊಂದು ಅವತ್ತಿಗೆ ಕೆನಡಾಕ್ಕೆ ರಫ್ತಾಗಿತ್ತು!

ಇಷ್ಟಕ್ಕೂ ಏನಿದು ಖಾಲಿಸ್ಥಾನದ ಪರಿಕಲ್ಪನೆ?

ಇವೆಲ್ಲ ಸರಿ. ಆದರೆ ಕೆನಡಾದಲ್ಲಿರಲಿ, ಪಂಜಾಬಿನಲ್ಲಿರಲಿ ಕೆಲವರು ಬೇಕೆಂದು ಆಗ್ರಹಿಸುತ್ತಿರುವ ಖಲಿಸ್ಥಾನವೆಂಬುದು ಏನದು? 1799ರಲ್ಲಿ ಅವತ್ತಿನ ಅವಿಭಜಿತ ಭಾರತದ ಲಾಹೋರನ್ನು ಗೆದ್ದುಕೊಂಡು, ಸಣ್ಣ ಅವಧಿಗೆ ದುರ್ಗಮ ಅಫಘಾನಿಸ್ತಾನವನ್ನೂ ಅಧೀನದಲ್ಲಿರಿಸಿಕೊಂಡಿದ್ದವರು ರಣಜೀತ್ ಸಿಂಘ್. ಅವರು ಆಳಿದ್ದ ಪ್ರದೇಶಗಳು ಸ್ವತಂತ್ರ ದೇಶವಾಗಿ ತಮಗೆ ಸೇರಬೇಕೆಂಬುದು ಖಾಲಿಸ್ಥಾನಿ ಪ್ರತ್ಯೇಕತಾವಾದಿಗಳ ವಾದ. ಹಾಗಾದರೆ ಇವತ್ತಿಗೆ ಪಾಕಿಸ್ತಾನದಲ್ಲಿರುವ ಲಾಹೋರನ್ನು ಮೊದಲು ಕೇಳಿ ಪಡೆದುಕೊಳ್ಳಿ ಎಂಬ ತರ್ಕ ಮುಂದಿರಿಸಿದರೆ ಖಾಲಿಸ್ಥಾನಿಗಳ ಬಳಿ ಉತ್ತರವಿಲ್ಲ.

ಬದಲಿಗೆ, ಇಸ್ಲಾಮಿಸ್ಟ್ ಗಳ ಜತೆ ಕೈಜೋಡಿಸಿ ಭಾರತದ ಪಂಜಾಬನ್ನು ಪ್ರತ್ಯೇಕಿಸುವುದಷ್ಟೇ ಇವರ ಕಾರ್ಯಸೂಚಿ. ಇಷ್ಟಾಗಿ, ರಣಜೀತ ಸಿಂಘರ ಸಿಖ್ ಸಾಮ್ರಾಜ್ಯ ವಿಸ್ತರಣೆಗೆ ಹಿಂದು ಯೋಧರೂ ದೊಡ್ಡಮಟ್ಟದಲ್ಲಿ ಪ್ರಾಣಾರ್ಪಣೆ ಮಾಡಿದ್ದಾರೆ. ಖುದ್ದು ರಣಜೀತ ಸಿಂಘರು ತಮ್ಮ ಸಾಮ್ರಾಜ್ಯವನ್ನು ಇಂಥ ಮತೀಯ ನೆಲೆಯಲ್ಲಿ ನೋಡಿರಲಿಲ್ಲ ಎಂಬುದಕ್ಕೆ, 1835ರಲ್ಲಿ ಅವರು ಕಾಶಿ ವಿಶ್ವನಾಥ ಮಂದಿರದ ಗೋಪುರಕ್ಕೆ ಚಿನ್ನದ ಹೊದಿಕೆ ನೀಡಿದ್ದಕ್ಕಿಂತ ಉದಾತ್ತ ಉದಾಹರಣೆ ಬೇಕೇ? ಇದೀಗ ಹಿಂದುಗಳ ಮೇಲೆ ಹಲ್ಲೆ ಮಾಡಿಕೊಂಡು ಹಿಂದು ದೇವಾಸ್ಥಾನಗಳ ಧ್ವಂಸಕ್ಕೆ ಪ್ರಚೋದಿಸುತ್ತಿರುವ ಖಲಿಸ್ಥಾನಿಗಳಿಗೆ ಮಹಾರಾಜ ರಣಜೀತ ಸಿಂಘರ ಹೆಸರು ತೆಗೆದುಕೊಳ್ಳುವ ಯೋಗ್ಯತೆಯಾದರೂ ಇದೆಯೇ?

Protest against Khalisthanis in Kanada
ಇರಾನ್-ಇಸ್ರೇಲ್ ಕದನದಲ್ಲಿ ಭಾರತಕ್ಕಿರುವ ಧರ್ಮಸಂಕಟವೇನು? (ತೆರೆದ ಕಿಟಕಿ)

ರಣಜೀತ ಸಿಂಘರ ಸೇನೆ ಸಿಖ್ಖರ ‘ಖಾಲ್ಸಾ’ ಪರಿಕಲ್ಪನೆ ಜತೆ ಗುರುತಿಸಿಕೊಂಡಿರುವಂಥದ್ದು. ಈ ಖಾಲ್ಸಾಗಳು ಗೆದ್ದುಕೊಂಡ ನೆಲ ಖಾಲಿಸ್ಥಾನ ಎಂಬ ಪರಿಕಲ್ಪನೆ. ಆದರೆ ರಣಜೀತ್ ಸಿಂಘರ ಸೇನೆಯಾಗಲೀ, ಈ ಖಾಲ್ಸಾ ಪರಿಕಲ್ಪನೆಯನ್ನು ಮೂಲತಃ ಕೊಟ್ಟ ಗುರು ಗೋವಿಂದ ಸಿಂಘರಾಗಲೀ ಇದರಿಂದ ಬೇರೆ ಜಾತಿ-ಮತಸ್ಥರನ್ನೆಲ್ಲ ಹೊರಗಿರಿಸಿರಲಿಲ್ಲ. ಕೇಶ-ಪಗಡಿ-ಕತ್ತಿ ಮುಂತಾದ ಮುಖ್ಯ ಸಂಗತಿಗಳೊಂದಿಗೆ ಗುರು ಗೋವಿಂದರು ಖಾಲ್ಸಾವನ್ನು ನಿರೂಪಿಸಿದ್ದೇ ಮೊಘಲರ ಅಡಿಯಲ್ಲಿ ಅವತ್ತಿನ ಇಸ್ಲಾಮಿನ ಕ್ರೂರ ದಬ್ಬಾಳಿಕೆಯನ್ನು ಪ್ರತಿರೋಧಿಸುವುದಕ್ಕಾಗಿ. ಆದರೆ ಕಾಲಾಂತರದಲ್ಲಿ ಖಾಲ್ಸಾ, ಖಲಿಸ್ಥಾನಗಳೆಲ್ಲ ಜಾಟ್-ಸಿಖ್ಖರಿಗೆ ಸೇರಿದ ಸಂಗತಿಗಳಾಗಿ ಹೋದವು. ಅದಕ್ಕೆ ಈ ಮೊದಲು ವಿವರಿಸಿದ ಬ್ರಿಟೀಷ್ ಸೇನಾ ನೀತಿಯೂ ಕಾರಣ. 

ಹಾಗೆಂದು ಚರಿತ್ರೆಯಲ್ಲಿ ಹಿಂದುಗಳ ಕಡೆಯಿಂದ ತಪ್ಪುಗಳೇ ಆಗಿಲ್ಲ ಎಂದಲ್ಲ. ಉದಾಹರಣೆಗೆ, ಭಾಯ್ ಮಣಿಸಿಂಘ್ ಅವರು ಮೊಘಲರ ಬಂಧನದಲ್ಲಿ ಕ್ರೂರ ಹಿಂಸೆ ಅನುಭವಿಸಿ ಸಾಯುವುದಕ್ಕೆ ಅವತ್ತಿಗೆ ಆ ಸಾಮ್ರಾಜ್ಯದ ದಿವಾನನಾಗಿದ್ದ ಲಖ್ಪತಿ ರಾಯನ ಬೆಂಬಲವಿತ್ತು ಹಾಗೂ ಈ ಲಖಪತಿ ರಾಯ ಹಲವು ವಿಧದಲ್ಲಿ ಸಿಖ್ಖರ ವಿರುದ್ಧ ಹಿಂಸಾಚಾರಕ್ಕೆ ಕಾರಣನಾಗಿದ್ದ. ಭಿಲಾಸಪುರದ ಹಿಂದು ರಾಜನೊಬ್ಬ ತನ್ನ ಅಸ್ತಿತ್ವ ಗಟ್ಟಿ ಮಾಡಿಕೊಳ್ಳುವುದಕ್ಕೆ ಮೊಘಲರ ಸಹಾಯ ಪಡೆದು ಗುರು ಗೋವಿಂದ ಸಿಂಘರ ವಿರುದ್ಧ ಸೆಣೆಸಿದ್ದ. ಆದರೆ, ಅದೇ ಚರಿತ್ರೆ ಹೇಳುವಂತೆ, ಸಿಖ್ ಮತಗುರುವಿನ ಸೇವೆಯಲ್ಲಿ ಮೊಘಲರನ್ನು ಎದುರುಹಾಕಿಕೊಂಡು  ಭಾಯ್ ಮತಿ ದಾಸ್, ಭಾಯ್ ಸತಿ ದಾಸ್ ಹಾಗೂ ಭಾಯ್ ದಯಾಳ ದಾಸ್ ಈ ಮೂವರೂ ಬ್ರಾಹ್ಮಣರು ಪ್ರಾಣತೆತ್ತಿದ್ದರು. 

ಆದರೆ ಇವತ್ತಿಗೆ ಅಂಥ ಐತಿಹಾಸಿಕ ಪರಿಪ್ರೇಕ್ಷಗಳನ್ನೆಲ್ಲ ಪಕ್ಕಕ್ಕಿರಿಸಿ, ಪಾಕಿಸ್ತಾನ ಹಾಗೂ ತುಸುಮಟ್ಟಿಗೆ ಪಾಶ್ಚಾತ್ಯ ಪ್ರೇರಿತ ಹಿಂದು ದ್ವೇಷವನ್ನೇ ಇಂಧನವಾಗಿರಿಸಿಕೊಂಡಿದೆ ಖಾಲಿಸ್ಥಾನ ಪ್ರತ್ಯೇಕತಾವಾದ. ಅದಕ್ಕೊಂದು ಸುರಕ್ಷಿತ ಜಾಗ ಒದಗಿಸಿದೆ ಕೆನಡಾ.

- ಚೈತನ್ಯ ಹೆಗಡೆ

cchegde@gmail.com

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com