ಗೆಲುವು, ವಿಜಯ, ವಿಕ್ಟರಿ…
ಆಧುನಿಕ ಯುಗದಲ್ಲಿ ಈ ಶಬ್ದಪುಂಜಗಳು ಅದ್ಯಾರ ಮನಸ್ಸನ್ನು ಆಕರ್ಷಿಸಲಾರವು ಹೇಳಿ? ಎಲ್ಲರಿಗೂ ಬೇಕಿದು. ಅಂಥ ವಿಜಯ ಸಂಭ್ರಮವನ್ನು ಅಡಿಗಡಿಗೆ ಇಡಿಇಡಿಯಾಗಿ ನೆನಪಿಸುವ ಹಬ್ಬವೆಂದರೆ ದೀಪಾವಳಿ! ನಿಜ, ವಿಜಯ ದಶಮಿ ಸೇರಿದಂತೆ ಹಲವು ಹಬ್ಬಗಳು ದುಷ್ಟಸಂಹಾರ-ಶಿಷ್ಟರಕ್ಷಣೆಯ ಸಂಭ್ರಮಗಳೇ. ಆದರೆ, ಈ ದೀಪಾವಳಿ ಮಾತ್ರ ವಿಜಯದ ಪುರಾಣೇತಿಹಾಸಗಳೊಂದಿಗೆ ಹಲವು ಬಗೆಗಳಲ್ಲಿ ಬೆರೆತುಕೊಂಡಿದೆ, ಬೆರಗಿನ ಬೆಳಕನ್ನು ಚಿಮ್ಮಿಸುತ್ತಿದೆ.
ರಕ್ಕಸಶಕ್ತಿಯ ಮರ್ದಿಸಿ ದೇವನುದಯಿಸಿದ ಕ್ಷಣ
ಬರೋಬ್ಬರಿ ಹದಿನಾಲ್ಕು ವರ್ಷಗಳು…
ಅಯೋಧ್ಯೆಗೆ ರಾಮ ಮರಳುತ್ತಿದ್ದಾನೆ. ಪ್ರಜಾಸಮೂಹಕ್ಕೆ ಆಪ್ತನಾಗಿದ್ದ ಶ್ರೀರಾಮ ಪಿತೃವಾಕ್ಯಪರಿಪಾಲನೆಗೆ ಕಾಡಿಗೆ ಹೋಗಿದ್ದು ಕೇವಲ ವನವಾಸವಾಗಿ ಉಳಿಯಲಿಲ್ಲ. ರಾವಣನೆಂಬ ಮಹಾದುಷ್ಟಶಕ್ತಿಯ ಅಂತ್ಯಕ್ಕೆ ನಿಮಿತ್ತವಾಯಿತು. ಪತ್ನಿಯನ್ನು ಕಳೆದುಕೊಂಡ ದುಃಖ, ಸಹೋದರನ ಧೀರ ಸಾಂಗತ್ಯ, ಹನುಮಂತನ ಸ್ನೇಹ, ಪರಿಭ್ರಮಿಸುತ್ತಿದ್ದ ನೆಲದಲ್ಲೇ ಕಟ್ಟಿದ ಸೇನೆ, ವಿಜಯದಶಮಿಯ ದಿನದಂದು ದಶಕಂಠನ ಸಂಹಾರ ಇಷ್ಟೆಲ್ಲ ಆಗಿ, ಅಲ್ಲಿನ ರಾಜ್ಯಭಾರವನ್ನೆಲ್ಲ ವಿಭೀಷಣನಿಗೆ ಒಪ್ಪಿಸಿ, ಹದಿನಾಲ್ಕು ವರ್ಷಗಳ ಅವಧಿಯನ್ನೂ ಮುಗಿಸಿ, ಆಶ್ವೀಜದ ಅಮವಾಸೆಯಂದು ಸೀತಾಲಕ್ಷ್ಮಣರೊಡಗೂಡಿ ಅಯೋಧ್ಯೆಗೆ ಮರಳಿದನು ರಾಮ. ಅಂದು ಅಮವಾಸೆಯ ಗುರುತೇ ಮರೆತುಹೋಗುವಂತೆ ಜನ ಆ ನಗರವನ್ನೆಲ್ಲ ದೀಪಾಲಂಕೃತಗೊಳಿಸಿದರು. ಅಯೋಧ್ಯೆಯಷ್ಟೇ ಏಕೆ? ಇಡೀ ಭರತವರ್ಷವೇ ಅಂದಿನಿಂದ ಹಲವು ದಿನಗಳವರೆಗೆ ಹಬ್ಬದಲ್ಲಿ ಮುಳುಗೆದ್ದಿರಬೇಕು! ಪರಂಪರೆ ಮುಂದುವರಿಯುತ್ತಿರಬೇಕು ಅನವರತ…ಅಂದಿಗೂ ಇಂದಿಗೂ.
ರಾಮ ಸ್ವಸ್ಥಾನಕ್ಕೆ ಮರಳುವುದೆಂದರೆ ಸಮೃದ್ಧಿಯೂ ನೆಲೆಯಾದಂತೆ. ಅಮವಾಸೆಯ ಆ ಸಂಜೆಯೇ ಲಕ್ಷ್ಮೀಯೂ ಬರುವಳಂತೆ ಮನೆಯಂಗಳಕ್ಕೆ. ಅದ್ಯಾವ ದೈವೀಶಕ್ತಿಯಿದ್ದರೂ ಸ್ವಚ್ಛ, ಪ್ರಶಾಂತ, ದೀಪಪ್ರಜ್ವಲಿತ ಮನೆ-ಮನಗಳಲ್ಲಿ ಮಾತ್ರ ಅಂಥ ಶಕ್ತಿ ನೆಲೆಯೂರುತ್ತದಷ್ಟೆ. ಹಾಗೆಂದೇ ದೀಪಾವಳಿ ಎಂದರೆ ಮನೆ-ಅಂಗಡಿ-ಕಾರ್ಯಸ್ಥಾನಗಳನ್ನೆಲ್ಲ ಶುಚಿಯಾಗಿಸಿ ದೀಪ ಬೆಳಗುವ ಸಮಯ. ಮತ್ಯಾವುದೋ ಯುಗದಲ್ಲಿ ಸಮುದ್ರಮಂಥನದಲ್ಲಿ ಲಕ್ಷ್ಮೀ, ಧನ್ವಂತರಿಯರೆಲ್ಲ ಉದಯಿಸಿದ್ದರ ನೆನಪಲ್ಲೂ ದಂತೇರಸ-ಲಕ್ಷ್ಮೀಪೂಜೆ. ದ್ವಾಪರದಲ್ಲಿ ಅತಿವೃಷ್ಟಿಯಾಗಿ ಕೃಷ್ಣನು ಗೋವರ್ಧನ ಗಿರಿ ಎತ್ತಿ ಹಿಡಿದು ಗೋವು-ಜನರನ್ನೆಲ್ಲ ರಕ್ಷಿಸಿದ್ದು ದೀಪಾವಳಿಯ ಆಚೀಚಿನ ದಿನಗಳಲ್ಲೇ ಎಂಬ ಸ್ಮೃತಿಯಲ್ಲಿ ಗೋವರ್ಧನಗಿರಿ ಪೂಜೆ-ಗೋಪೂಜೆ.
ವ್ಯಾಪ್ತಿ ಮೀರಿದಾಗಲೂ ಬರುವನು ದೇವ…
ವಿಷ್ಣುವಿನ ಏಳನೇ ಅವತಾರವಾದ ರಾಮಾವತರಣಕ್ಕೂ ಮುಂಚೆ, ಐದನೇ ಸಂಖ್ಯೆಯಲ್ಲಿ ನಿಲ್ಲುವಂಥದ್ದು ವಾಮನ ಅವತಾರ. ವಿದ್ವಾಂಸರಾದವರು ಇದನ್ನು ಏನೆಲ್ಲ ಆಯಾಮಗಳಲ್ಲಿ ವಿಶ್ಲೇಷಿಸಿಯಾರೇನೋ. ಆದರೆ ಕತೆಗಳ ಮೂಲಕವಷ್ಟೇ ತತ್ತ್ವ ಅರ್ಥಮಾಡಿಕೊಳ್ಳುವ ನಮ್ಮಂಥ ಸಾಮಾನ್ಯರ ಪಾಲಿಗೆ ಇಲ್ಲಿ ಸ್ವಲ್ಪ ಕಷ್ಟ ಎದುರಾಗುತ್ತದೆ.
ರಾಮ, ಕೃಷ್ಣರೆಲ್ಲ ಅವತರಿಸಿದ್ದೇಕೆ ಎಂಬುದಕ್ಕೆ ರಾಮಾಯಣ-ಮಹಾಭಾರತಗಳ ದೀರ್ಘ ಕಥಾನಕದಲ್ಲಿ ನಮಗೆ ಮನದಟ್ಟಾಯಿತೆಂಬಂಥ ಉತ್ತರಗಳು ತೋಚಿಬಿಡುತ್ತವೆ. ತಪಃಶ್ಶಕ್ತಿ, ಜ್ಞಾನಗಳಲ್ಲಿ ಎಷ್ಟೇ ಸಾಧನೆ ಮಾಡಿದ್ದರೂ ಸಹ, ತನಗೆ ಬೇಕೆನಿಸದವರನ್ನೆಲ್ಲ ಹೊತ್ತೊಯ್ಯುವ, ಎಲ್ಲವನ್ನೂ ತನ್ನಡಿಯ ಕ್ರೌರ್ಯದಲ್ಲಿರಿಸಿಕೊಳ್ಳುವ ರಾವಣನ ಸಂಹಾರ ಅಗತ್ಯವಿತ್ತು. ಅತ್ತ, ಕಂಸ -ಬಕಾಸುರ -ನರಕಾಸುರರಂಥ ಅಸುರೀ ಶಕ್ತಿಗಳನ್ನೆಲ್ಲ ಸಂಹರಿಸುವುದಕ್ಕೆ ಹಾಗೂ ಮಹಾಭಾರತ ಸಮರದ ಚಾಲಕ ಸ್ಥಾನದಲ್ಲಿದ್ದುಕೊಂಡು ಪಾಂಡವರ ಮೂಲಕ ಧರ್ಮಪ್ರತಿಷ್ಠಾಪನೆ ಮಾಡಿಸುವುದಕ್ಕೆ ಕೃಷ್ಣನ ಅವತಾರವಾಗಬೇಕಾಯ್ತು. ರಕ್ಷಿಸಬೇಕಾದವರೇ ಪೀಡಕರಾದಾಗ ಅವರ ಸಂಹಾರಕ್ಕೆ ಪರಶುರಾಮ, ಮನುಕುಲವನ್ನು ವಿನಾಶಕಾರಿ ಪ್ರಳಯದಿಂದ ರಕ್ಷಿಸುವುದಕ್ಕೆ ಮತ್ಸ್ಯಾವತಾರ, ಸಮುದ್ರಮಂಥನದ ಕಡೆಗೋಲಿಗೆ ಬೆನ್ನಾಗುವುದಕ್ಕೆ ಕೂರ್ಮ, ರಕ್ಕಸ ಹಿರಣ್ಯಾಕ್ಷನಿಂದ ಭೂಮಿಯ ರಕ್ಷಣೆಗೆ ಬಂದೊದಗಿದ ವರಾಹ, ತಾನೇ ದೇವರಾದ್ದರಿಂದ ಉಳಿದವರಿಗೆ ಪೂಜೆ ಸಲ್ಲ ಎಂದಬ್ಬರಿಸುತ್ತಿದ್ದ ಹಿರಣ್ಯಕಶಿಪುವನ್ನು ಕೊನೆಗಾಣಿಸುವುದಕ್ಕೆ ನರಸಿಂಹ… ಹೀಗೆಲ್ಲ ಪ್ರತಿ ಕತೆಯ ಹಿಂದಿನ ತತ್ತ್ವವನ್ನು ಮೇಲ್ನೋಟದಲ್ಲಿ ದಕ್ಕಿಸಿಕೊಳ್ಳಬಹುದು.
ಆದರೆ, ಬಲಿ ಚಕ್ರವರ್ತಿಯನ್ನು ನೆನಪಿಸಿಕೊಳ್ಳಿ. ಆತ ಧರ್ಮಮಾರ್ಗದಲ್ಲೇ ಇದ್ದವ. ಅಸುರನಾಗಿದ್ದರೇನಂತೆ ಆತನ ಹರಿಭಕ್ತಿಯಲ್ಲಿ ಕುಂದಿರಲಿಲ್ಲ. ನೃಸಿಂಹ ರೂಪದಲ್ಲಿ ಹರಿಯನ್ನು ಸಾಕ್ಷಾತ್ಕರಿಸಿಕೊಂಡಿದ್ದ ಪ್ರಹ್ಲಾದನ ಮೊಮ್ಮಗನಲ್ಲವೇ ಎಷ್ಟೆಂದರೂ! ಪ್ರಜಾ ಪರಿಪಾಲನೆಯಲ್ಲಿ, ದಾನ ಮತ್ತು ನ್ಯಾಯ ನಿರ್ಣಯಗಳಲ್ಲಿ ಆದರ್ಶನಾಗಿದ್ದು ತನ್ನ ಸಾಮ್ರಾಜ್ಯವನ್ನು ಸುಭಿಕ್ಷವಾಗಿಯೇ ಇಟ್ಟವ. ಈತನನ್ನು ಮೆಟ್ಟುವುದಕ್ಕೆ ಹರಿ ವಾಮನನಾಗಿ ಬಂದಿದ್ದೇಕೆ? ಅದಕ್ಕಾಗಿಯೇ ಒಂದು ಅವತಾರವಾಗಿದ್ದೇಕೆ? ಬಹುಶಃ, ಎಂಥ ಧರ್ಮಿಷ್ಟನೇ ಆಗಿದ್ದರೂ ವ್ಯಾಪ್ತಿ ಮೀರುವಂತಿಲ್ಲ ಎಂಬ ಸಂದೇಶವೊಂದನ್ನು ಇಲ್ಲಿಂದ ಆರಿಸಿಕೊಳ್ಳಬೇಕೇನೋ. ಸ್ವರ್ಗವೂ ಸೇರಿದಂತೆ ಮೂರು ಲೋಕಗಳನ್ನು ವಶಪಡಿಸಿಕೊಂಡವ ಬಲಿ. ಇದಕ್ಕೆ ಪ್ರತಿಯಾಗಿ ದೇವತೆಗಳಿಂದ ವಿಷ್ಣುವಿಗೆ ಅಹವಾಲು, ತಮ್ಮ ಲೋಕವನ್ನು ಬಿಡಿಸಿಕೊಡುವಂತೆ. ಆದರೆ, ಈ ಬಾರಿ ಹರಿಗೆ ಸಂಹಾರಕ್ಕಂತೂ ಕಾರಣವಿರಲಿಲ್ಲ. ಹಾಗೆಂದೇ ದಾನ ಕೇಳುವ ವಾಮನ ವಟುವಿನ ಅವತಾರದಲ್ಲಿ ಬಂದು, ಕೇವಲ ಮೂರು ಹೆಜ್ಜೆ ಭೂಮಿ ಕೇಳಿ, ಎರಡು ಹೆಜ್ಜೆಗಳಲ್ಲಿ ಭೂಮ್ಯಾಕಾಶಗಳನ್ನೆಲ್ಲ ವ್ಯಾಪಿಸಿ, ಮೂರನೇ ಹೆಜ್ಜೆಯನ್ನು ಬಲಿಯ ಕೋರಿಕೆಯಂತೆ ಆತನ ತಲೆಯ ಮೇಲೆಯೇ ಇರಿಸಿ ಪಾತಾಳಕ್ಕೆ ತಳ್ಳಿದ್ದಾಗಿ ಕತೆ.
ವ್ಯಾಪ್ತಿ ಮೀರಿದ್ದಕ್ಕೆ ಬಲಿಗೆ ಅಂಥದೊಂದು ಸನ್ನಿವೇಶ ಪ್ರಾಪ್ತವಾದರೂ, ನಮ್ಮ ನಾಗರಿಕ ಸ್ಮೃತಿ ಆತನ ಒಳ್ಳೆಯತನವನ್ನು ಮರೆಯಲು ಬಿಟ್ಟಿಲ್ಲ. ಹಾಗೆಂದೇ, ತ್ರೇತಾಯುಗದ ಅಸುರ ಬಲಿಗೆ ಅಮವಾಸೆಯ ಮರುದಿನ ಪಾಡ್ಯದಂದು ಪೂಜೆ ಸಲ್ಲುತ್ತದೆ. ದೀಪಾವಳಿಯ ಮೂರು ದಿನ ಆತನನ್ನು ಪ್ರತಿಷ್ಟಾಪಿಸಿ ಬೀಳ್ಕೊಡುವ ಪದ್ಧತಿ ಕರ್ನಾಟಕವೂ ಸೇರಿದಂತೆ ದಕ್ಷಿಣದ ರಾಜ್ಯಗಳಲ್ಲಿದೆ. ಕೇರಳದಲ್ಲಿ ಓಣಂ ಸಮಯದಲ್ಲೂ ಬಲಿ ಚಕ್ರವರ್ತಿಯ ನೆನಕೆಯಾಗುತ್ತದೆ. ಮುಂದಿನ ತ್ರೇತಾಯುಗದಲ್ಲಿ ಸ್ವರ್ಗದ ಅಧಿಪತ್ಯ ಈ ಬಲಿಗೇ ಎಂಬ ಮಾತೂ ಇದೆ.
ಹಿರಿಯರ ದಾರಿಯಲ್ಲೊಂದು ಕೃತಜ್ಞತೆಯ ದೀಪ
ದೀಪಾವಳಿಯ ಆಯಾಮಗಳಿಗೆ ಕೊನೆ ಇಲ್ಲ. ಇತ್ತೀಚೆಗೆ ಖ್ಯಾತ ನ್ಯಾಯವಾದಿ ಮತ್ತು ಬರಹಗಾರ ಜೆ ಸಾಯಿ ದೀಪಕ್, ತಮ್ಮ ಉಪನ್ಯಾಸವೊಂದರಲ್ಲಿ ನೀಡಿರುವ ಹೊಳಹು ಆಸಕ್ತಿಕರವಾಗಿದೆ. ಮಹಾಲಯ ಅಮವಾಸೆಯಿಂದ ಒಂದು ತಿಂಗಳಿಗೆ ದೀಪಾವಳಿ. ಪಿತೃಪಕ್ಷವೆಂಬ ಹದಿನೈದು ದಿನಗಳ ಆಚರಣೆ ಇದ್ದರೂ ಆ ಅವಧಿಯಲ್ಲಿ ಪಿತೃಕಾರ್ಯ ಮಾಡಲಾಗದಿದ್ದವರು ದೀಪಾವಳಿಗೆ ಮೊದಲು ಪೂರೈಸಿಕೊಳ್ಳಬಹುದೆಂಬ ಅಭಿಪ್ರಾಯವೂ ವಿದ್ವಜ್ಜನರಲ್ಲಿದೆ. ಒಟ್ಟಿನಲ್ಲಿ ದೀಪಾವಳಿ ವೇಳೆಗೆಲ್ಲ ಪಿತೃದೇವತೆಗಳು ತಮ್ಮ ಲೋಕಕ್ಕೆ ಹಿಂತಿರುಗುವ ಕಾಲ. ಹಾಗೆ ನೋಡಿದರೆ ತರ್ಪಣದಿಂದ ಹಿಡಿದು ಎಲ್ಲ ಪೂಜೆಗಳು ಮನೋರೂಪ, ಯೋಚನಾರೂಪವೇ. ಅದಕ್ಕೊಂದು ಸಾಕಾರರೂಪವಿರಲೆಂದು ಹಲವು ಭೌತಿಕ ಮಾದರಿಗಳಷ್ಟೆ. ನಾವಿಟ್ಟ ಪಿಂಡವನ್ನು ಅದೇ ರೂಪದಲ್ಲೇನೂ ದೇವತೆಗಳು ಸ್ವೀಕರಿಸುವುದಿಲ್ಲವಷ್ಟೆ. ಅದೇರೀತಿ, ದೇವತೆಗಳು ಹಿಂತಿರುಗುವ ಕಾಲಕ್ಕೆ ದೀಪ, ಬಾಣ ಬಿರುಸುಗಳು ಅವರ ದಾರಿಯನ್ನು ಪ್ರಜ್ವಲಿಸುವುದಕ್ಕೆ ನಮ್ಮ ಸಾಂಕೇತಿಕ ಆಚರಣೆ. ಹೀಗಾಗಿ ಒಂದು ನಿಯಂತ್ರಿತ ರೀತಿಯಲ್ಲಿ ಬಾಣ-ಬಿರುಸುಗಳನ್ನು ಸುಡುವುದಕ್ಕೆ ಹಿಂಜರಿಕೆಯನ್ನೇನೂ ಇರಿಸಿಕೊಳ್ಳಬೇಕಿಲ್ಲ, ಅವತ್ತಿನ ಮಟ್ಟಗೆ ಮಾತ್ರವೇ ಪರಿಸರ ಪ್ರಜ್ಞೆಯನ್ನು ಆವಿರ್ಭವಿಸಿಕೊಂಡು ಅತಿ ಆದರ್ಶವಾದಿಗಳಾಗುವ ಪ್ರಯತ್ನವನ್ನೂ ಮಾಡಬೇಕಿಲ್ಲ.
ತೀರ್ಥಂಕರರ ನಿರ್ವಾಣ
ಜೈನರ ಪಾಲಿಗೆ ದೀಪಾವಳಿಯ ಅಮವಾಸೆ, 24ನೇ ತೀರ್ಥಂಕರ ಮಹಾವೀರರು ಮೋಕ್ಷ ಪಡೆದ ದಿನ. ಅವರಿಗೆ ದೀಪಾವಳಿಯೆಂಬುದು ದೀಪಾಳಿಕಾಯ ಅಂದರೆ ಬೆಳಕು ದೇಹವನ್ನು ತೊರೆದ ದಿನ. ಅಂದು ಜಪ, ಪ್ರಾರ್ಥನೆ, ಮಹಾವೀರರಿಗೆ ಸಿಹಿ ಭಕ್ಷ್ಯ ನಿವೇದನೆ. ಈ ಸಮುದಾಯ ದೊಡ್ಡಮಟ್ಟದಲ್ಲಿ ವ್ಯಾಪಾರ-ವಹಿವಾಟುಗಳಲ್ಲೂ ತೊಡಗಿರುವುದರಿಂದ ಲಕ್ಷ್ಮೀಪೂಜೆಯ ರಂಗು, ದೀಪಗಳ ಮೆರಗು ಸಹ ದೊಡ್ಡದು.
ಮೊಘಲರ ಅಸುರೀ ಶಕ್ತಿಗೊಂದು ಪ್ರತಿರೋಧ
ನಾನೇ ದೇವರು, ಅಥವಾ ನನ್ನ ದೇವರಷ್ಟೇ ಸತ್ಯ ಹಾಗೂ ಉಳಿದವುಗಳ ಪೂಜೆ ನಿಷಿದ್ಧ ಎಂಬುದು ಅಸುರೀ ಇಲ್ಲವೇ ರಾಕ್ಷಸ ಶಕ್ತಿಯ ಮುಖ್ಯ ಲಕ್ಷಣ. ನಮ್ಮ ಪುರಾಣೇತಿಹಾಸಗಳ ದೈವಾಸುರ ಸಂಗ್ರಾಮಗಳೆಲ್ಲ ಈ ಹಿನ್ನೆಲೆಯಲ್ಲೇ ಆದದ್ದು. ಇದರ ಸಮತೋಲನಕ್ಕೇ ದೈವ ಬಂದಿದ್ದು. ನಾನೇ ಸರ್ವಶಕ್ತನಾಗಿರುವಾಗ ಹರಿಯನ್ನೇಕೆ ಪೂಜಿಸುವೆ ಎಂದು ಮಗ ಪ್ರಹ್ಲಾದನನ್ನೇ ಪ್ರತಿಬಂಧಿಸುವುದಕ್ಕೆ ಹೋದ ಹಿರಣ್ಯಕಶಿಪುವನ್ನು ನೃಸಿಂಹ ಅವತರಿಸಿ ಸಂಹರಿಸಿದ. ಹಾಗೆಂದು, ಇಂದಿನಿಂದ ಜಗತ್ತಲ್ಲೆಲ್ಲ ನರಸಿಂಹ ದೇವರದ್ದೇ ಪೂಜೆಯಾಗಬೇಕು ಎಂಬ ಆದೇಶವೇನೂ ಅವತ್ತು ಹೊರಡಲಿಲ್ಲ. ಸನಾತನ ಧರ್ಮಕ್ಕೂ ಇತರ ಮತಗಳಿಗೂ ಇರುವ ಅಂತರದ ದೊಡ್ಡ ಆಯಾಮವೇ ಇದು.
ಆಧುನಿಕ ಲಿಖಿತ ಇತಿಹಾಸದಲ್ಲಿ ಇಂಥದೊಂದು ಅಸುರೀ ಶಕ್ತಿ ಭಾರತೀಯರನ್ನು ಹಿಂಡಿದ್ದು ಇಸ್ಲಾಂ ಆಕ್ರಮಣವಾದಾಗ. ಭಾರತೀಯರ ಶ್ರದ್ಧಾಕೇಂದ್ರಗಳನ್ನು ಬಾಬರ್, ಔರಂಗಜೇಬರ ಮೊಘಲ್ ಸಂತಾನ ಜರ್ಜರಿತವಾಗಿಸಿತ್ತು. ಆಗ ಸಜ್ಜನಶಕ್ತಿ-ದೈವೀಶಕ್ತಿ ಸೋತಂತೆ ಕಂಡದ್ದು ಹೌದು. ಆದರೆ ಅದು ವಜ್ರಾಘಾತಕ್ಕೆ ತುತ್ತಾಗಿದ್ದು ಹೌದಾದರೂ ಸೋತಿರಲಿಲ್ಲ ಎಂಬುದಕ್ಕೆ ನಾವೀಗಲೂ ದೀಪಾವಳಿ ಆಚರಿಸುತ್ತಿರುವುದೇ ಸಾಕ್ಷಿ. ಅದಿಲ್ಲದಿದ್ದರೆ, ಗ್ರೀಕ್-ಪರ್ಶಿಯಾಗಳ ನೆಲವೀಗ ಇಸ್ಲಾಮೀಕರಣಗೊಂಡ ಈಜಿಪ್ತ್ - ಇರಾನ್ ಆಗಿರುವಂತೆ ನಾವೂ ನಮ್ಮೆಲ್ಲ ಸ್ಮೃತಿಗಳನ್ನು ಕಳಚಿಕೊಂಡು ದೀಪ ಹಚ್ಚುವುದನ್ನೇ ಮರೆತಿರುತ್ತಿದ್ದೆವು.
ಹದಿನೈದನೇ ಶತಮಾನದ ಉತ್ತರಾರ್ಧದಲ್ಲಿ ಗುರು ನಾನಕರ ಬೋಧೆಗಳಿಂದ ರೂಪುಗೊಂಡ ಸಿಖ್ ಪಂಥಕ್ಕೆ ಆರನೇ ಗುರುವಾಗಿದ್ದವರು ಗುರು ಅರ್ಜನ ದೇವ್. ಇವರನ್ನು ಬಂಧಿಸಿದ್ದ ಮೊಘಲ ದೊರೆ ಜಹಾಂಗೀರ್, ಇಸ್ಲಾಮಿಗೆ ಮತಾಂತರವಾಗುವಂತೆ ಒತ್ತಡ ಹೇರಿದ. ಅದಕ್ಕೊಪ್ಪದಿದ್ದಾಗ ಗುರು ಅರ್ಜನ ದೇವರನ್ನು ಕ್ರೂರ ಹಿಂಸೆಗೊಳಪಡಿಸಿ 1606ರಲ್ಲಿ ಹತ್ಯೆ ಮಾಡಲಾಯಿತು. ಇವರ ಮಗ ಹರಗೋವಿಂದರೇ ಸಿಖ್ಖರ ಆರನೇ ಗುರುವಾದರು. ಮೊಘಲರಿಂದ ತಂದೆಗೆ ಒದಗಿದ್ದ ಸ್ಥಿತಿಯ ಅರಿವಿದ್ದ ಇವರು ಸಿಖ್ ಮತಸ್ಥರನ್ನು ಕ್ಷಾತ್ರ ವ್ಯವಸ್ಥೆಗೆ ಒಳಪಡಿಸುವುದಕ್ಕೆ ಹೆಚ್ಚಿನ ಆಸ್ಥೆ ತೋರಿದರಲ್ಲದೇ, ಹಿಂದು ಮತ್ತು ಸಿಖ್ಖರನ್ನು ಮತಾಂಧ ಶಕ್ತಿ ವಿರುದ್ಧ ಒಗ್ಗೂಡಿಸುವುದರಲ್ಲಿ ಶ್ರಮ ವಹಿಸಿದರು.
ಇವರನ್ನೂ ಜಹಾಂಗೀರ ಬಂಧನಕ್ಕೆ ಒಳಪಡಿಸುತ್ತಾನೆ. ಬಹುಶಃ ಅವತ್ತಿಗೆ ಸಿಖ್ ಮತ್ತು ಹಿಂದುಗಳ ಜನಮಾನಸದಲ್ಲಿ ಒಂದು ಹಂತದ ಪ್ರತಿರೋಧ ಬೆಳೆದಿತ್ತಾದ್ದರಿಂದ ಮೊದಲಿನಂತೆ ಏಕಾಏಕಿ ಪ್ರಾಣತೆಗೆಯುವುದಕ್ಕೆ ಮೊಘಲರು ಹಿಂಜರಿಕೆ ಹೊಂದಿದ್ದರು. ಹಾಗೆಂದೇ 1609ರಲ್ಲಿ ಹರಗೋವಿಂದರನ್ನು ಗ್ವಾಲಿಯರಿನಲ್ಲಿ ಸೆರೆಮನೆವಾಸದಲ್ಲಿರಿಸಲಾಯಿತು. ಅದಾಗಿ ಎರಡು ವರ್ಷಗಳ ನಂತರ ಜಹಾಂಗೀರ ಅವರನ್ನು ಬಿಡುಗಡೆ ಮಾಡುವುದಕ್ಕೆ ಮುಂದಾದ. ಅವತ್ತಿಗೆ ಅದೇ ಗ್ವಾಲಿಯರ್ ಸೆರೆಮನೆಯಲ್ಲಿದ್ದ 52 ಹಿಂದು ರಾಜರನ್ನೂ ತನ್ನೊಂದಿಗೆ ಬಿಡುಗಡೆ ಮಾಡುವಂತೆ ಹರಗೋವಿಂದರು ಪಟ್ಟು ಹಿಡಿದರು. ಅದಕ್ಕೆ ಜಹಾಂಗೀರ್ ಒಪ್ಪಿದ ಎಂದರೆ ಅದರರ್ಥ ಅದವನ ಔದಾರ್ಯವೇನಾಗಿರಲಿಲ್ಲ, ಬದಲಿಗೆ ಹರಗೋವಿಂದರಿಗೆ ಜನಮಾನಸದಲ್ಲಿದ್ದ ಸ್ಥಾನ ಅಂಥಾದ್ದಾಗಿತ್ತು. ಆದರೂ ಜಹಾಂಗೀರ ಒಂದು ಕೊಂಕು ತೆಗೆದ. ಹಾಗೆಲ್ಲ ಎಲ್ಲರನ್ನೂ ಬಿಡುವುದಕ್ಕೆ ಸಾಧ್ಯವಿಲ್ಲ, ನಿಮ್ಮ ವಸ್ತ್ರದ ಚುಂಗು ಹಿಡಿದುಕೊಂಡು ಎಷ್ಟು ಮಂದಿ ಹೊರಬರಬಹುದೋ ಅಷ್ಟುಮಂದಿಗೆ ಮಾತ್ರ ಬಿಡುಗಡೆ ಅಂತ. ಆಗ ಸ್ವಲ್ಪ ಸಮಯ ತೆಗೆದುಕೊಂಡ ಹರಗೋವಿಂದರು ಸೆರೆಮನೆಯಲ್ಲಿದ್ದುಕೊಂಡೇ, ಎಲ್ಲ 52 ಮಂದಿ ಹಿಡಿದುಕೊಳ್ಳಬಹುದಾದ ಚುಂಗಿನ ನಿಲುವಂಗಿಯೊಂದನ್ನು ತಯಾರಿಸಿಕೊಂಡು, ಅವರೆಲ್ಲರನ್ನೂ ಕರೆದುಕೊಂಡೇ ಸೆರೆಮನೆಯಿಂದಾಚೆ ಬಂದರು ಎನ್ನುತ್ತದೆ ಸಿಖ್ ಐತಿಹ್ಯ. ಇದಾಗಿದ್ದು 1611ರಲ್ಲೋ 1612ರಲ್ಲೋ ಎಂಬ ಬಗ್ಗೆ ಸ್ಪಷ್ಟವಿಲ್ಲ. ಆದರೆ, ಅಲ್ಲಿಂದ ಮುಂದೆ ಅಮೃತಸರದ ಸ್ವರ್ಣಮಂದಿರ ಸೇರಿದಂತೆ ಸಿಖ್ ಶ್ರದ್ಧಾಸ್ಥಾನಗಳಲ್ಲಿ ‘ಬಂಧಿ ಚೋಡ್ ದಿವಸ್’ (ಬಂಧಿಗಳ ಬಿಡುಗಡೆ ದಿನ) ಆಚರಣೆಯು ದೀಪಗಳನ್ನು ಹಚ್ಚಿ ಸಂಭ್ರಮಿಸುವ ಮೂಲಕ ಆರಂಭವಾಯಿತು. ಇವತ್ತಿಗೂ ಸಿಖ್ಖರು ದೀಪಾವಳಿ ಹೊತ್ತಿನಲ್ಲೇ ಈ ಸಂಭ್ರಮವನ್ನು ಆಚರಿಸುತ್ತಾರೆ.
ಈ ಒಗ್ಗಟ್ಟಿನ ಆಚರಣೆಯನ್ನು ಸಹಜವಾಗಿಯೇ ಅವತ್ತಿನ ಮೊಘಲ್ ಆಡಳಿತ ಸಹಿಸದಾಯಿತು. ಉತ್ತರ ಭಾರತದಲ್ಲಿ ಈ ಆಚರಣೆ ಮತ್ತು ಹಿಂದುಗಳ ದೀಪಾವಳಿಗೆ ಔರಂಗಜೇಬನ ಕಾಲದಲ್ಲಿ (1658-1707) ಪ್ರತಿಬಂಧವನ್ನೇ ಹೇರಲಾಗಿತ್ತು. ಇಸ್ಲಾಮಿಗೆ ಮತಾಂತರವಾಗುವುದಕ್ಕೆ ನಿರಾಕರಿಸಿದ ಸಿಖ್ಖರ 9ನೇ ಗುರು ತೇಜ ಬಹದ್ದೂರರನ್ನು 1675ರಲ್ಲಿ ಔರಂಗಜೇಬನು ತಲೆಕಡಿಸಿ ಕೊಲ್ಲಿಸಿದ್ದ. ಇವೆಲ್ಲದರ ಹೊರತಾಗಿಯೂ ನಮ್ಮ ಮತಾಚರಣೆಗಳನ್ನು ಮತ್ತು ಶ್ರದ್ಧಾಬಿಂದುಗಳನ್ನು ಮುಕ್ಕಾಗದಂತೆ ಇಟ್ಟುಕೊಳ್ಳುವ ಧೀರ ಪ್ರಯತ್ನಗಳು ನಿರಂತರವಾಗಿದ್ದವು ಎಂಬುದಕ್ಕೆ ಭಾಯ್ ಮಣಿ ಸಿಂಘರ ವಿದ್ಯಮಾನವನ್ನು ನೆನಪಿಸಿಕೊಳ್ಳಲೇಬೇಕು.
ತೇಜ ಬಹದ್ದೂರರ ಬಲಿದಾನದ ನಂತರ ಸಿಖ್ಖರ 10ನೇ ಗುರುವಾದ ಗೋವಿಂದ ಸಿಂಘರ ಜತೆಗಿದ್ದು, ಗುರು ಗ್ರಂಥ ಸಾಹಿಬಾ ರಚಿಸುವುದರಲ್ಲಿ ನೆರವಾದವರು ಮಣಿ ಸಿಂಘ್. ಗುರು ಗೋವಿಂದ ಸಿಂಘರ ಕಾಲಾನಂತರ ಸ್ವರ್ಣಮಂದಿರದ ಪೂಜೆ-ಆಡಳಿತದ ಜವಾಬ್ದಾರಿ ಹೊರುತ್ತಾರೆ. ಮೊಘಲರು ಪ್ರತಿಬಂಧಿಸಿದ್ದ ದೀಪಾವಳಿ ಮತ್ತು ಬಂಧಿ ಚೋಡ್ ದಿವಸವನ್ನು ಮತ್ತೆ ವಿಜೃಂಭಣೆಯಿಂದ ಆಚರಿಸಿ ಜನರಲ್ಲಿ ಸ್ಫೂರ್ತಿ ತುಂಬುವುದಕ್ಕೆ ಮುಂದಾದ ಮಣಿ ಸಿಂಘ್, ಅವತ್ತಿನ ಮೊಘಲ ಸಾಮ್ರಾಜ್ಯದ ಲಾಹೋರಿನ ಗವರ್ನರ್ ಝಕಾರಿಯಾ ಖಾನ್ ಬಳಿ ಅಮೃತಸರದ ಸ್ವರ್ಣಮಂದಿರದಲ್ಲಿ ದೀಪಾವಳಿ ಆಚರಣೆಗೆ ಅನುಮತಿ ಕೋರುತ್ತಾರೆ. ಪ್ರತಿಯಾಗಿ 5,000 ರುಪಾಯಿಗಳ ಸುಂಕ ಕಟ್ಟುವುದಾಗಿ ಮಾತು ಕೊಡುತ್ತಾರೆ. ಅವತ್ತಿಗೆ ಬಹುದೊಡ್ಡ ಮೊತ್ತ ಅದು. ದುಡ್ಡಿನ ಕಾರಣಕ್ಕೆ ಮೊಘಲಾಡಳಿತ ಒಪ್ಪಿಗೆಯನ್ನೇನೋ ಕೊಡುತ್ತದೆ, ಜತೆಯಲ್ಲೇ ಆ ಉತ್ಸವ ತಡೆಯುವುದಕ್ಕೆ ಸಂಚನ್ನೂ ಮಾಡುತ್ತದೆ. ಭಾಯ್ ಮಣಿ ಸಿಂಘರಿಗಿದ್ದ ಲೆಕ್ಕಾಚಾರವೆಂದರೆ, ದೀಪಾವಳಿಗೆ ಸಹಸ್ರಾರು ಮಂದಿ ಜಮೆಯಾಗುತ್ತಾರಾದ್ದರಿಂದ ಅವರೆಲ್ಲರಿಂದ ಚಿಕ್ಕ ಮೊತ್ತದ ದೇಣಿಗೆ ಪಡೆದರೂ ಮೊಘಲರಿಗೆ ಕೊಡಬೇಕಾದ ಮೊತ್ತ ಆಗಿಬಿಡುತ್ತದೆ ಅನ್ನೋದು. ಆದರೆ, ಝಕಾರಿಯಾ ಖಾನ್ ದೀಪಾವಳಿಗೆ ಬೇರೆ ಬೇರೆ ಕಡೆಗಳಿಂದ ಸೇರಲು ಬರುತ್ತಿದ್ದ ಜನರ ಮೇಲೆಯೇ ದಾಳಿ ಮಾಡುವುದಕ್ಕೆ ಸೂಚನೆ ಕೊಡುತ್ತಾನೆ. ಇದು ತಿಳಿಯುತ್ತಲೇ, ಮುಗ್ಧ ಜನರ ಜೀವ ಹೋಗುವುದು ಬೇಡವೆಂದು ಮಣಿ ಸಿಂಘರು ದೀಪಾವಳಿ ಉತ್ಸವವನ್ನೇ ರದ್ದು ಮಾಡಿ ಎಲ್ಲರಿಗೂ ಸಂದೇಶ ಕಳುಹಿಸುತ್ತಾರೆ.
ದೀಪಾವಳಿ ಮುಗಿಯುತ್ತಲೇ ಮಣಿ ಸಿಂಘರ ಬಂಧನವಾಗುತ್ತದೆ. ಮೊಘಲರಿಗೆ ಕೊಡಬೇಕಿದ್ದ 5,000 ರುಪಾಯಿ ಕೊಡಲಿಲ್ಲ ಎಂಬ ಕಾರಣಕ್ಕೆ. ಅವರೆದುರು ಎರಡು ಆಯ್ಕೆಗಳನ್ನು ಇಡಲಾಗುತ್ತದೆ. ಇಸ್ಲಾಮಿಗೆ ಮತಾಂತರ ಇಲ್ಲವೇ ಮರಣದಂಡನೆ. ಅವತ್ತಿನ ಸಿಖ್ ಪರಂಪರೆ ಮತಾಂತರಕ್ಕಿಂತ ಮರಣದಂಡನೆಯನ್ನೇ ಆಯ್ದುಕೊಂಡುಬಂದಿತ್ತು ಹಾಗೂ ಮಣಿ ಸಿಂಘ್ ಅದಕ್ಕೆ ಹೊರತಾಗಿರಲಿಲ್ಲ. ಮಣಿ ಸಿಂಘರ ದೇಹದ ಪ್ರತಿ ಸಂಧಿಯನ್ನೂ ಕತ್ತರಿಸಿ ಸಾಯಿಸಬೇಕೆಂದು ಮೊಘಲರ ಫರ್ಮಾನು ಜಾರಿಯಾಗುತ್ತದೆ. ಕಡಿಯುವಾತ ಮೊದಲಿಗೆ ಮಣಿ ಸಿಂಘರ ಮೊಣಕೈಯನ್ನು ಹಿಡಿದುಕೊಂಡಾಗ ಅವರು ಹೇಳುತ್ತಾರೆ- “ನನ್ನ ದೇಹದ ಸಂಧಿ ಶುರುವಾಗುವುದು ಮೊಣಕೈನಿಂದಲ್ಲ..ಬೆರಳು ಮಡಿಚುವ ಜಾಗದಿಂದ..ಅಲ್ಲಿಂದಲೇ ಶುರುಮಾಡಿ!” ಹಾಗವತ್ತು, (ಇಸ್ವಿ, 1737) ಕೇವಲ ದೀಪ ಹಚ್ಚುವ ಬದ್ಧತೆಯೊಂದಕ್ಕೆ ತಮ್ಮ ಬಲಿದಾನ ಕೊಟ್ಟುಕೊಳ್ಳುತ್ತಾರೆ ಮಣಿ ಸಿಂಘರು.
ಈ ಬಾರಿ ದೀಪಾವಳಿಗೆ, ಪ್ರತಿ ಬಾರಿ ದೀಪಾವಳಿಗೆ ನಾವೆಲ್ಲ ಉತ್ಸುಕತೆಯಿಂದಲೇ ದೀಪ ಬೆಳಗೋಣ. ಇವತ್ತಿಗೆ ಅಮೆರಿಕದ ಶ್ವೇತಭವನವೂ ಸೇರಿದಂತೆ ಜಗತ್ತನ್ನು ಆಕರ್ಷಿಸುವ ದೀಪಾವಳಿ ವೈಭವದ ಹಿಂದೆ ನಮ್ಮ ಹಿರಿಯರ, ಒಂದಿಡೀ ನಾಗರಿಕತೆಯ ಸಂಘರ್ಷವಿದೆ. ಈಗಲೂ ಬೇರೆ ಬೇರೆ ಆಯಾಮಗಳಲ್ಲಿ ನಡೆಯುತ್ತಿರುವ ದೇವಾಸುರ ಸಂಗ್ರಾಮದಲ್ಲಿ ಶಿಷ್ಟತೆಯ ವಿಜಯವಾಗಬೇಕಾದರೆ ಅದಕ್ಕೆ ದೀಪಾವಳಿ ಜ್ಯೋತಿಯ ಬಲ ಬೇಕು.
- ಚೈತನ್ಯ ಹೆಗಡೆ
cchegde@gmail.com
Advertisement