ಇರಾನ್ ಎಂಬ ದೇಶಕ್ಕೆ ಸಮರಾಂಗಣದಲ್ಲಿ ಬಡಿದಾಡಲು ಪ್ರೇರೇಪಿಸುತ್ತಿರುವ ಅಂಶ ಯಾವುದದು? (ತೆರೆದ ಕಿಟಕಿ)
ಈ ಹಿಂದಿನ ಮಹಾಕದನಗಳ ಚರಿತ್ರೆಯ ಸಾರಾಂಶ ನೋಡಹೊರಟರೆ, ಅಲ್ಲಿ ಕದನಕ್ಕಿಳಿಯುವ ಉತ್ಸುಕತೆ ತೋರುವವರಿಗೆ ಪ್ರೇರಕ ಕಾರಣಗಳು ನಾನಾ ಬಗೆಯವಿದ್ದವು. ಹಿಟ್ಲರನ ಜರ್ಮನಿಗೆ ತನಗೆ ಈ ಹಿಂದಿನ ಯುದ್ಧದಲ್ಲಾದ ಶರಣಾಗತಿ ಒಪ್ಪಂದದಲ್ಲಿ ಅವಮಾನವಾಗಿದೆ ಎಂಬ ಭಾವವಿತ್ತು. ಅದೇ ಕಾಲಕ್ಕೆ ಅದಾಗಲೇ ಆರ್ಥಿಕ ಶಕ್ತಿ ಆಗಿದ್ದ ಜಪಾನಿಗೆ ತನ್ನ ಸಾಮ್ರಾಜ್ಯ ವಿಸ್ತರಿಸಿಕೊಳ್ಳುವ ಬಯಕೆ ಇತ್ತು. ಅವತ್ತಿನ ಸೋವಿಯತ್ ಒಕ್ಕೂಟ ಮತ್ತು ಅಮೆರಿಕಗಳ ನಡುವಿನ ಶೀತಲ ಸಮರಕ್ಕಿದ್ದ ಕಾರಣ ಜಾಗತಿಕ ರಾಜಕಾರಣದ ನಿರ್ದೇಶನ ಸ್ಥಾನದಲ್ಲಿ ತಾವೇ ಕೂರಬೇಕೆಂಬ ಅಭೀಪ್ಸೆ.
ಇವತ್ತಿಗೆ ಇಸ್ರೇಲನ್ನು ಎದುರುಹಾಕಿಕೊಂಡಿರುವ ಇರಾನನ್ನು ಪ್ರೇರೇಪಿಸುತ್ತಿರುವ ಅಂಶ ಯಾವುದು ಹಾಗಾದರೆ? ತೈಲ ಇದೆ ಎಂಬಂಶ ಬಿಟ್ಟರೆ ಇರಾನ್ ಯಾವ ಕೋನದಲ್ಲೂ ಇವತ್ತಿಗೆ ಆರ್ಥಿಕ ಬಲಾಢ್ಯ ದೇಶವೇನಲ್ಲ. ಡಾಲರ್ ಎಂಬುದೇ ಜಾಗತಿಕ ವಿನಿಮಯದ ಕರೆನ್ಸಿ ಆಗಿರುವ ಕಾಲಘಟ್ಟದಲ್ಲಿ ಇರಾನ್ ಅಮೆರಿಕದಿಂದ ಥರಹೇವಾರಿ ನಿರ್ಬಂಧಗಳನ್ನು ಹಾಕಿಸಿಕೊಂಡು ಕುಳಿತಿದೆ. ಪರಿಣಾಮವಾಗಿ, ಸುಮಾರು 40,000 ಇರಾನಿ ರಿಯಾಲ್ ಹಾಕಿದರೆ ಅದು ಒಂದು ಡಾಲರಿಗೆ ಸಮವಾಗುತ್ತದೆ. ಮಿಲಿಟರಿ ವಿಷಯಕ್ಕೆ ಬಂದರೆ ಚೀನಾ -ಭಾರತಗಳಂತೆ ದೊಡ್ಡ ಸಂಖ್ಯೆಯಲ್ಲಿ ಯೋಧರನ್ನು ಹೊದಿರುವುದರಲ್ಲಾಗಲೀ ಇಲ್ಲವೇ ಅಮೆರಿಕ-ಫ್ರಾನ್ಸ್-ರಷ್ಯ-ಜರ್ಮನಿಗಳಂತೆ ಮಿಲಿಟರಿ ಉಪಕರಣ ಮತ್ತು ಶಸ್ತ್ರಾಸ್ತ್ರ ತಯಾರಿಕೆಗಳಲ್ಲಿ ಪಾರಮ್ಯ ಮೆರೆದಿರುವಂಥ ವ್ಯವಸ್ಥೆಯನ್ನಾಗಲೀ ಇರಾನ್ ಏನೂ ಹೊಂದಿಲ್ಲ. ಇರಾನಿನ ಮಿಲಿಟರಿ ಬಲ ಪ್ರಮುಖವಾದದ್ದೇ ಆದರೂ ಕಾಲಾಳುಗಳು ಮತ್ತು ಸಂಪನ್ಮೂಲಗಳ ಮಾನದಂಡದಲ್ಲಿ ಜಗತ್ತಿನ ಟಾಪ್-10 ಸೇನೆಗಳನ್ನು ಹೆಸರಿಸಿದರೆ ಅದರಲ್ಲೇನೂ ಅದು ಸ್ಥಾನ ಪಡೆಯುವುದಿಲ್ಲ.
ಹಾಗಾದರೆ, ಇರಾನನ್ನು ಸಮರಾಂಗಣಕ್ಕೆ ದೂಡುತ್ತಿರುವ ಪ್ರೇರಕಾಂಶ ಯಾವುದು? ನಿಜ. ಒಂದೊಮ್ಮೆ ಇರಾನಿನ ನೆಲ ನಾಗರಿಕತೆಗೆ ಹಾಗೂ ಸಾಮ್ರಾಜ್ಯಶಕ್ತಿಗೆ ಹೆಸರಾಗಿತ್ತು. ಹೀಗೆ ನಾಗರಿಕತೆಯ ಇತಿಹಾಸವನ್ನು ತಮ್ಮ ಅಂತಃಸತ್ವದಲ್ಲಿರಿಸಿಕೊಂಡಿರುವ ದೇಶಗಳಿಗೆ ಇಂದಲ್ಲ ನಾಳೆ ತಾವು ಜಾಗತಿಕ ರಾಜಕಾರಣವನ್ನು ರೂಪಿಸುವ ಚಾಲಕ ಶಕ್ತಿಗಳಾಗುತ್ತೇವೆ ಎಂಬ ವಿಶ್ವಾಸ ಮತ್ತು ಮಹಾತ್ತ್ವಾಕಾಂಕ್ಷೆಗಳಿರುತ್ತವೆ.
ಉದಾಹರಣೆಗೆ ಚೀನಾ ಮತ್ತು ಭಾರತಗಳನ್ನೇ ತೆಗೆದುಕೊಳ್ಳಬಹುದು. ಆದರೆ, ಪರ್ಶಿಯಾ ಎಂದು ಕರೆಸಿಕೊಳ್ಳುತ್ತಿದ್ದ ತನ್ನ ನೆಲದ ನಾಗರಿಕತೆಗೆ ಖುದ್ದು ಇರಾನ್ ಬೆಸೆದುಕೊಂಡಿಲ್ಲ. ಯಾವ ಸಭ್ಯತೆ ಮತ್ತು ನಾಗರಿಕ ಶಕ್ತಿಗಳು ಆ ನೆಲದಲ್ಲಿ ಸಾಮ್ರಾಜ್ಯಗಳನ್ನು ಉದಯಿಸಿದ್ದವೋ ಅಂಥ ಎಲ್ಲವನ್ನೂ ಇಸ್ಲಾಮೀಕರಣದ ಇರಾನ್ ತಿರಸ್ಕರಿಸಿಬಿಟ್ಟಿದೆ. ಹೀಗಾಗಿ, “ನಮ್ಮ ಪೂರ್ವಜರು ಇಷ್ಟು ಮಹಾನ್ ಆಗಿದ್ದರಾದ್ದರಿಂದ, ನಾವೂ ಅವರಂತಾಗಲು ಶಕ್ತಿ ಬೆಳೆಸಿಕೊಳ್ಳುತ್ತಿದ್ದೇವೆ” ಎಂಬ ಪರಂಪರೆ ಪ್ರಜ್ಞೆಯೇನೂ ಇರಾನಿನ ಜನಮಾನಸಕ್ಕಿಲ್ಲ.
ಹಾಗಾದರೆ, ಇರಾನ್ ಅನ್ನು ಸಂಘರ್ಷಪ್ರೇರಿತವನ್ನಾಗಿಸುತ್ತಿರುವ ಅಂಶ ಯಾವುದು? ಯಹೂದಿಗಳ ಮೇಲೆ ಹೊಟ್ಟೆಕಿಚ್ಚಿದ್ದರೂ ಅವರ ಅಸ್ತಿತ್ವವನ್ನು ಹೆಚ್ಚು-ಕಡಿಮೆ ಒಪ್ಪಿರುವ ಸೌದಿ, ಯುಎಇ ಥರದ ದೇಶಗಳಂತೆ ಇರಾನ್ ಸಹ ಇರಬಹುದಾಗಿತ್ತಲ್ಲ? ಅವೆಲ್ಲ ಬಿಟ್ಟು ಇಸ್ರೇಲ್ ಮತ್ತು ಅಮೆರಿಕಗಳ ವಿನಾಶಕ್ಕೆ ಪಟ್ಟು ಹಿಡಿಯುತ್ತ ತನ್ನನ್ನು ತಾನು ಸಂಘರ್ಷದ ಬಿಸಿಗೆ ಇರಾನ್ ಒಡ್ಡಿಕೊಳ್ಳುತ್ತಿರುವುದೇಕೆ ಎಂಬ ಪ್ರಶ್ನೆಗೆ ಉತ್ತರಕ್ಕೆ, ಇಸ್ಲಾಮಿಕ್ ಜಗತ್ತಿನಲ್ಲೇ ಇರಾನ್ ತನ್ನನ್ನು ತಾನು ಯಾವ ಭಿನ್ನ ಐಡೆಂಟಿಟಿಯಲ್ಲಿ ಗುರುತಿಸಿಕೊಂಡಿದೆ ಎಂಬುದನ್ನು ಗಮನಿಸಬೇಕು. ಇರಾನಿನ ಶಿಯಾ ಐಡೆಂಟಿಟಿ, ಅಲ್ಲಿನ ಆಯತೊಲ್ಲ ಪರಂಪರೆ, ಸೌದಿ ಅರೇಬಿಯವೂ ಸೇರಿದಂತೆ ಮುಸ್ಲಿಂ ಸತ್ತೆಗಳೇ ಇದ್ದೆಡೆಯಲ್ಲೂ ಇರಾನಿಗಿರುವ ಭಯಂಕರ ದ್ವೇಷ ಇಂಥ ಎಲ್ಲ ಆಯಾಮಗಳನ್ನು ತಡವುತ್ತ ಹೋದಂತೆ ಅಲ್ಲೊಂದು ಇಸ್ಲಾಂ ಅಂತರ್ಯುದ್ಧದ ಐತಿಹಾಸಿಕ ಅಧ್ಯಾಯ ತೆರೆದುಕೊಳ್ಳುತ್ತದೆ. ಇರಾನನ್ನು ಸಮರಾಂಗಣಕ್ಕೆ ನೂಕುತ್ತಿರುವ ಮಾನಸಿಕ, ಸೈದ್ಧಾಂತಿಕ ಶಕ್ತಿ ಯಾವುದು ಎಂಬುದು ಆಗ ಮಾತ್ರ ನಿಚ್ಚಳವಾಗುತ್ತದೆ.
ಯಾರೀ ಇರಾನಿನ ಅಯತೊಲ್ಲಗಳು?
ಇರಾನ್ ತನ್ನ ಮೇಲೆ ಮಾಡಿರುವ ಕ್ಷಿಪಣಿ ದಾಳಿಗೆ ಬೆಲೆ ತೆರಲೇಬೇಕಾಗುತ್ತದೆ ಎಂದು ಇಸ್ರೇಲ್ ಖಡಾಖಡಿಯಾಗಿ ಹೇಳಿರುವುದರಿಂದ ಪಶ್ಚಿಮ ಏಷ್ಯವು ಮುಂದಿನ ಮಹಾಸ್ಫೋಟ ಎಲ್ಲಿ ಎಂದು ಕಾಯುವಂತಾಗಿದೆ. ಇಸ್ರೇಲ್ ಈ ಬಾರಿ ಇರಾನಿನ ಅಣುಶಕ್ತಿ ಸ್ಥಾವರಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡುತ್ತದಾ ಅಥವಾ ತೈಲಾಗಾರಗಳಿಗೆ ಮಾತ್ರ ಬೆಂಕಿ ಸೋಕಿಸಿ ಇರಾನಿಗೆ ಪ್ರತಿಘಾತ ಮಾಡುತ್ತದಾ ಎಂದೆಲ್ಲ ಚರ್ಚೆಗಳಾಗುತ್ತಿವೆ. ಆದರೆ, ಅಕ್ಟೋಬರ್ ನಾಲ್ಕರ ಶುಕ್ರವಾರದ ಪ್ರಾರ್ಥನೆ ವೇಳೆ ಕಾಣಿಸಿಕೊಂಡಿರುವ ಇರಾನಿನ ಪರಮೋಚ್ಚ ನಾಯಕ ಅಯತೊಲ್ಲ ಸಯ್ಯೆದ್ ಅಲಿ ಖಮೇನಿ ಮಾತ್ರ, “ಇಸ್ರೇಲ್ ತುಂಬ ಸಮಯದವರೆಗೇನೂ ಸಮರಾಂಗಣದಲ್ಲಿ ನಿಲ್ಲಲಾರದು. ಇರಾನ್ ಕ್ಷಿಪಣಿ ದಾಳಿ ಮೂಲಕ ಅದಕ್ಕೆ ಕೊಟ್ಟಿರುವ ಶಿಕ್ಷೆ ತುಂಬ ಕಡಿಮೆಯದ್ದು. ನಾವು ನಮ್ಮ ಗುರಿ ಈಡೇರಿಕೆಗೆ ಗಡಿಬಿಡಿಯಲ್ಲೂ ಇಲ್ಲ, ಅಥವಾ ತೀರ ಮುಂದೂಡುವುದೂ ಇಲ್ಲ.” ಅಂತೆಲ್ಲ ಮಾತನಾಡುವ ಮೂಲಕ ಸಂಘರ್ಷ ಮುಂದುವರಿಕೆಗೆ ನಾಂದಿ ಹಾಡಿದ್ದಾಗಿದೆ.
ಇರಾನಿನಲ್ಲಿ ಅಧ್ಯಕ್ಷ ಪದವಿ, ಸಂಸದೀಯ ವ್ಯವಸ್ಥೆ ಎಲ್ಲವೂ ಅಸ್ತಿತ್ವದಲ್ಲಿವೆಯಾದರೂ ಅಯತೊಲ್ಲಗಳೆಂಬ ಮತಬೋಧಕರೇ ಪರಮೋಚ್ಚ ನಾಯಕ. 1979ರಲ್ಲಿ ಅಲ್ಲಿನ ಪಾಶ್ಚಾತ್ಯ ಪ್ರೇರಿತ ಪ್ರಜಾಪ್ರಭುತ್ವವನ್ನು ಬದಲಾಯಿಸಿ ಇಸ್ಲಾಮಿಕ್ ಕ್ರಾಂತಿ ಮಾಡುವುದರಲ್ಲಿ ಅಲ್ಲಿನ ರಾಜಕೀಯದೊಳಗೆ ಆಯತೊಲ್ಲ ರುಹುಲ್ಲ ಖೊಮೇನಿಯ ಆಗಮನವಾಗಿದ್ದೇ ಪ್ರಾರಂಭ ಬಿಂದು. ಸಲ್ಮಾನ್ ರಶ್ದಿಯನ್ನು ಕೊಲ್ಲುವುದಕ್ಕೆ ಫತ್ವಾ ಹೊರಡಿಸಿದ್ದು, ಅಮೆರಿಕವನ್ನು ಮಹಾ ಸೈತಾನ ಹಾಗೂ ಸೋವಿಯತ್ ಅನ್ನು ಚಿಕ್ಕ ಸೈತಾನ ಎಂದು ಕರೆದಿದ್ದು ಇದೇ ಖೊಮೇನಿ. ರುಹುಲ್ಲ ಖೊಮೇನಿಯ ಮರಣಾನಂತರ ಇರಾನಿನ ಪರಮೋಚ್ಚ ನಾಯಕ ಪಟ್ಟದಲ್ಲಿರುವ ವ್ಯಕ್ತಿ ಅಯತೊಲ್ಲ ಅಲಿ ಖಮೇನಿ.
ಇಬ್ಬರ ಹೆಸರಿನ ಮೊದಲೂ ತಗುಲಿಕೊಂಡಿರುವ ‘ಅಯತೊಲ್ಲ’ ಎಂಬ ಶಬ್ದದ ಅರ್ಥ ದೇವರ ಸೂಚನೆ ಎಂಬರ್ಥದ್ದು. ಮತ ಬೋಧನೆಯ ಶಿಕ್ಷಣದಲ್ಲಿ ಅವರ ಮಾನದಂಡದ ಪ್ರಕಾರ ಅತಿ ನುರಿತವರು ಅಯತೊಲ್ಲ ಎನಿಸಿಕೊಳ್ಳುತ್ತಾರೆ. ಅಂದಹಾಗೆ, ಸುನ್ನಿ ಮುಸ್ಲಿಮರು ಈ ಅಯತೊಲ್ಲ ಕಲ್ಪನೆಯನ್ನು ಇರಿಸಿಕೊಂಡಿಲ್ಲ, ಅಂತಹ ಯಾವ ಪದವಿಗಳೂ ಸುನ್ನಿ ಆಡಳಿತವಿರುವ ಮುಸ್ಲಿಂ ದೇಶಗಳಲ್ಲಿ ಸಿಗದು. ಈ ಅಯತೊಲ್ಲಗಳ ಮುಖ್ಯ ಜವಾಬ್ದಾರಿ ಎಂದರೆ ‘ಟ್ವೆಲ್ವರ್ ಶಿಯಾ’ ಸಮುದಾಯವನ್ನು ಮುನ್ನಡೆಸುವುದು. ಮುಸ್ಲಿಮರ ಶಿಯಾ ಪಂಗಡದಲ್ಲಿ ಶೇಕಡ 90ರಷ್ಟು ಮಂದಿ ಇಲ್ಲಿಗೆ ಸೇರುತ್ತಾರೆ. ಉಳಿದ ಶಿಯಾ ಪಂಗಡಗಳಲ್ಲಿ ಅಲ್ಪಸ್ವಲ್ಪ ಭಿನ್ನಾಭಿಪ್ರಾಯದ ದೃಷ್ಟಿಕೋನಗಳಿವೆ.
ಅದೇನೇ ಇದ್ದರೂ ಈ ಟ್ವೆಲ್ವರ್ ಶಿಯಾವನ್ನು ಸಂಕ್ಷಿಪ್ತವಾಗಿ ಹಿಡಿದಿಡುವುದಾದರೆ- ಇಸ್ಲಾಮಿನ ಆಡಳಿತವನ್ನು ಮುಂದುವರಿಸಿಕೊಂಡು ಹೋಗುವ ಅಧಿಕಾರವು ದೈವದತ್ತವಾಗಿ 12 ಇಮಾಮ್ (ಮತಗುರು)ಗಳಿಗೆ ಸಿಕ್ಕಿದೆ. ಇವರು ಕ್ರಮವಾಗಿ ಅಧಿಕಾರ ನಡೆಸಿಕೊಂಡು ಬರುತ್ತ, 12 ನೇ ಇಮಾಮ್ ಮಾತ್ರ ಅದೃಶ್ಯ ಸ್ಥಿತಿಯಲ್ಲಿದ್ದು, ಜಗತ್ತಿನ ಕಾಲ ಮುಗಿಯುವಾಗ ಎಲ್ಲರ ನ್ಯಾಯನಿರ್ಣಯವಾಗುವ ಸಮಯದಲ್ಲಿ ಕಾಣಿಸಿಕೊಳ್ಳುತ್ತಾರೆ.
ಟ್ವೆಲ್ವರ್ ಶಿಯಾಗಳು ಇರಾನ್, ಇರಾಕ್, ಬಹ್ರೇನ್, ಲೆಬನಾನುಗಳಲ್ಲಿ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಆದರೆ ಟ್ವೆಲ್ವರ್ ಶಿಯಾ ಎಂಬುದು ರಾಜ್ಯಾಧಿಕಾರದ ಭಾಗವಾಗಿರುವುದು ಇರಾನಿನಲ್ಲಿ ಮಾತ್ರ. ಹಾಗೆಂದೇ ಅಯತೊಲ್ಲ ಎಂಬ ಪದವಿ ಹೊತ್ತ ಇಮಾಮ್ ಪ್ರಮುಖರಿಗೆ ಆ ದೇಶದಲ್ಲಿ ಪರಮೋಚ್ಚ ಅಧಿಕಾರ.
ಅಂತರ್ಯುದ್ಧದ ಇತಿಹಾಸ ಮತ್ತದರ ಮುಂದುವರಿಕೆ!
ಪ್ರವಾದಿ ಮಹಮ್ಮದ್ ಪೈಗಂಬರ್ ಸಮಯದಲ್ಲೇ ಮದೀನಾ ಸೇರಿದಂತೆ ಸೌದಿಯ ಹೆಚ್ಚಿನ ಪ್ರದೇಶಗಳನ್ನೆಲ್ಲ ಗೆದ್ದುಕೊಳ್ಳಲಾಗಿತ್ತು. ಪ್ರವಾದಿ ಪೈಗಂಬರ್ ನಂತರ ಇಸ್ಲಾಮಿನ ರಾಜಕೀಯ ಅಧಿಕಾರ ಯಾರ ಕೈಯಲ್ಲಿರಬೇಕು ಎಂಬಲ್ಲಿಂದಲೇ ಸಂಘರ್ಷ ಮತ್ತು ಅಂತರ್ಯುದ್ಧದ ರಕ್ತರಂಜಿತ ಇತಿಹಾಸ ಶುರುವಾಯಿತು. ಪೈಗಂಬರರ ರಕ್ತಸಂಬಂಧಿ ಅಲಿ ಇಬ್ನ ಅಬಿ ತಾಲಿಬ್ ಕೈಯಲ್ಲಿ ಅಧಿಕಾರ ಇರಬೇಕು ಎಂದು ಹೇಳುವವವರು ಶಿಯಾತು ಅಲಿ ಅರ್ಥಾತ್ ಅಲಿಯ ಪಕ್ಷದವರೆನಿಸಿದರು. ಅಲ್ಲಿಂದಲೇ ಶಿಯಾ ಪಂಗಡ ಹುಟ್ಟಿಕೊಂಡಿತು. ಹೀಗೆಲ್ಲ ಏನೂ ಇಲ್ಲ, ಪ್ರವಾದಿ ಅನುಯಾಯಿಗಳ ಪೈಕಿ ಸಮರ್ಥರು ಇಸ್ಲಾಂ ಸಾಮ್ರಾಜ್ಯದ ಅಧಿಪತ್ಯ ವಹಿಸಿ ಮುನ್ನೆಡಸಲಿ ಎಂದವರು ಸುನ್ನಿಗಳಾದರು. ಸಾಮಾನ್ಯ ಶಕೆ 632 ರಿಂದ 661ರವರೆಗೆ ಪಶ್ಚಿಮ ಏಷ್ಯದಲ್ಲಿ ವಿಸ್ತರಣೆಗೊಳ್ಳುತ್ತ ಸಾಗಿದ ರಶೀದುನ್ ಖಲೀಫತ್, ಪ್ರವಾದಿ ಅನುಯಾಯಿ ಅಬು ಬಕ್ರ ನೇತೃತ್ವದಲ್ಲಿ ಮುನ್ನೆಡೆದದ್ದು. ಶಿಯಾಗಳು ತಮ್ಮ ಮೊದಲ ಇಮಾಮ್ ಎಂದು ಗುರುತಿಸಿಕೊಳ್ಳುವ ಇಮಾಮ್ ಅಲಿ ಇಬ್ನ ಅಬಿ ತಾಲಿಬ್ ಅವರನ್ನು ಸುನ್ನಿ ಇತಿಹಾಸವು ರಶೀದುನ್ ಖಲೀಫತ್ ನ ನಾಲ್ವರು ದಿಗ್ದರ್ಶಕರಲ್ಲಿ ಒಬ್ಬರೆಂದು ಗುರುತಿಸುತ್ತದೆ. ಆದರೆ, ಆ ಸಮಯದಲ್ಲಿ ಅವರ ಅಧಿಕಾರವು ಧಾರ್ಮಿಕ ಸಲಹೆ ಇತ್ಯಾದಿಗಳಿಗೆ ಸೀಮಿತವಾಗಿತ್ತು. ಉಳಿದವರೊಂದಿಗೆ ನಿರಂತರ ಭಿನ್ನಾಭಿಪ್ರಾಯವೂ ಇತ್ತು.
ಹೀಗೆ ಶುರುವಾದ ಇಸ್ಲಾಂ ಖಲೀಫ ಆಳ್ವಿಕೆ ಮುಂದೆ ತಮ್ಮ ತಮ್ಮಲ್ಲೇ ನಾಯಕರನ್ನು ಕೊಂದುಕೊಳ್ಳುತ್ತ, ಮತ್ತು ಅದೇ ಸಮಯದಲ್ಲಿ ಇತರರ ಮೇಲೂ ದಾಳಿ ಮಾಡಿ ಆ ಪ್ರದೇಶಗಳನ್ನು ಇಸ್ಲಾಂಮಯವಾಗಿಸುತ್ತ ಸಾಗಿತು. ಈ ಇತಿಹಾಸದುದ್ದಕ್ಕೂ ಒಮ್ಮೊಮ್ಮೆ ಶಿಯಾಗಳ, ಮತ್ತೆಲ್ಲ ಬಾರಿ ಸುನ್ನಿಗಳ ಕೈಮೇಲಾಗುತ್ತಿತ್ತು.
ಈ ಪೈಕಿ ಶಿಯಾಗಳು ತಮ್ಮ ಮೂರನೇ ಇಮಾಮ್ ಆಗಿ ಗುರುತಿಸುವ ಹುಸೇನ್ ಇಬ್ನ ಅಲಿ ನೆನಪು ಇವತ್ತಿಗೂ ಮೊಹರಂ ಆಚರಣೆ ವೇಳೆ ಶೋಕದ ಕತೆ ಹೇಳುತ್ತದೆ. ಉಮಯ್ಯದ್ ಖಲೀಫತ್ತಿನ ಎರಡನೇ ಖಲೀಫನ ಸೇನೆ ಹುಸೆನ್ ಮತ್ತವರ ಬೆಂಬಲಿಗರನ್ನು ಇವತ್ತಿನ ಇರಾಕಿನಲ್ಲಿ ಬರುವಂಥ ಕರ್ಬಾಲಾದಲ್ಲಿ 680ರಲ್ಲಿ ಹತ್ಯೆ ಮಾಡುತ್ತಾರೆ. ಮೊದಲನೇ ಇಮಾಮ್ ಅಲಿ ಮತ್ತವರ ಮಡದಿ, ಪ್ರವಾದಿ ಮೊಹಮ್ಮದ್ ಮಗಳು ಫಾತಿಮಾ ಮಗ ಈ ಹುಸೇನ್ ಇಬ್ನ ಅಲಿ. ಅರ್ಥಾತ್, ಇಸ್ಲಾಂ ಸಾಮ್ರಾಜ್ಯವು ಪ್ರವಾದಿ ಮೊಮ್ಮಗನನ್ನು ಕತ್ತರಿಸಿ ಹಾಕುವುದಕ್ಕೂ ಯಾವ ಹಿಂಜರಿಕೆ ಇರಿಸಿಕೊಳ್ಳಲಿಲ್ಲ! ಸುನ್ನಿ-ಶಿಯಾ ಸಂಘರ್ಷ ತೀವ್ರತೆಯ ಐತಿಹಾಸಿಕ ಪರಿಪ್ರೇಕ್ಷವನ್ನು ಈ ಮೂಲಕವೇ ಮನದಟ್ಟಾಗಿಸಿಕೊಳ್ಳಬಹುದು.
ಹಸನ್ ಅಲ್-ಅಸ್ಕಾರಿ ಎಂಬ 11ನೇ ಇಮಾಮರ ಕಾಲ 846-874. ಅವತ್ತಿನ ಅಬ್ಬಾಸೀದ್ ಖಲೀಫ ಸಾಮ್ರಾಜ್ಯವೇ ಇವರನ್ನು ಬಂಧನದಲ್ಲಿರಿಸಿತ್ತು. ಅವರೇ ವಿಷಪ್ರಾಸನ ಮಾಡಿಸಿ ಸಾಯಿಸಿದ್ದಾರೆ ಎಂಬ ವಾದವೂ ಇದೆ. ಇದಾದ ನಂತರ ಇಮಾಮ್ ಹಸನ್ ಅಲ್-ಅಸ್ಕಾರಿ ಅವರ ಅನುಚರರು ಪ್ರತಿಪಾದಿಸಿದ್ದೇನೆಂದರೆ, ಇವರಿಗೆ ಮೊಹಮ್ಮದ್ ಅಲ್-ಮಹ್ದಿ ಎಂಬ ಮಗನೊಬ್ಬನಿದ್ದರು. ಅಬ್ಬಾಸೀದ್ ಖಲೀಫತ್ ಇವರ ಸಂತಾನವನ್ನು ಗುರಿಯಾಗಿಸುತ್ತದೆಂಬ ಕಾರಣಕ್ಕೆ ಇದನ್ನು ಗುಟ್ಟಾಗಿರಿಸಲಾಗಿತ್ತು. ಹೀಗಾಗಿ ಹನ್ನೆರಡನೇ ಇಮಾಮ್ ಆಗಿರುವ ಮೊಹಮ್ಮದ್ ಅಲ್-ಮಹ್ದಿ ರಹಸ್ಯ ಸ್ಥಿತಿಯಲ್ಲಿ ಲೋಕದ ಕಣ್ಣಿಗೆ ಕಾಣದಂತಿದ್ದಾರೆ. ಭೂಮಿಯಲ್ಲಿ ಅಖಂಡವಾಗಿ ಇಸ್ಲಾಂ ಸ್ಥಾಪನೆಯಾಗಿ, ನ್ಯಾಯ ನಿರ್ಣಯದ ದಿನ ಬರುವಾಗ ಇವರು ಪ್ರಕಟಗೊಳ್ಳುತ್ತಾರೆ ಎಂಬುದು ಟ್ವೆಲ್ವರ್ ಶಿಯಾ ಪ್ರತಿಪಾದನೆ. ವರ್ತಮಾನದಲ್ಲಿ ಮತಬೋಧಕರನ್ನೇ ಪರಮೋಚ್ಚ ನಾಯಕರನ್ನಾಗಿಸಿಕೊಂಡಿರುವ ಇರಾನ್ ಈ ಐಡಿಯಾದ ಪೋಷಣಾ ಮತ್ತು ಚಾಲನಾ ಶಕ್ತಿ. ಹೀಗೆಂದೇ ಪಶ್ಚಿಮ ಏಷ್ಯದಲ್ಲಿ ಇರಾನ್ ಹೊತ್ತಿಸಿರುವ ಕಿಡಿ ಕೇವಲ ಯಹೂದಿ ದ್ವೇಷದ್ದಲ್ಲ, ಅದರ ವಿಸ್ತಾರ ಇವತ್ತಿನ ಇತರ ಇಸ್ಲಾಂ ದೇಶಗಳನ್ನೂ ಸೇರಿಸಿಕೊಂಡು ಎಲ್ಲರನ್ನೂ ಆವರಿಸಿಕೊಳ್ಳುವಂಥದ್ದು.
ಇರಾನಿನ ವರ್ತಮಾನದ ಸಂಘರ್ಷದ ಬಹುಆಯಾಮಗಳು
ಇಸ್ರೇಲ್-ಅಮೆರಿಕಗಳನ್ನು ಇರಾನ್ ದ್ವೇಷಿಸುವುದು ತಿಳಿದಿರುವಂಥದ್ದೇ. ಆದರೆ, ಸೌದಿ ಅರೇಬಿಯದ ಜತೆಗೂ ಅದಕ್ಕಿರುವ ಬದ್ಧವೈರಕ್ಕೆ ಕಾರಣವೇನೆಂದರೆ, ಅಲ್ಲಿನ ಸುನ್ನಿ ರಾಜಮನೆತನವನ್ನು ಅಧಿಕಾರದಿಂದ ಕೆಳಗಿಳಿಸಿ ಮೆಕ್ಕ-ಮದೀನಗಳನ್ನು ತನ್ನ ನಿಯಂತ್ರಣದಲ್ಲಿರಿಸಿಕೊಳ್ಳಬೇಕೆಂಬ ಇರಾನಿನ ತಹತಹ.
ಶಿಯಾ ಜನಸಂಖ್ಯೆ ಹೆಚ್ಚಿರುವ ಇರಾಕ್ ಅನ್ನು ಸುನ್ನಿ ಮುಸ್ಲಿಂ ಆಗಿದ್ದ ಸದ್ದಾಂ ಹುಸೇನ್ ಆಳುತ್ತಿದ್ದ ಎಂಬಂಶವೇ 1980ರೀಚೆಯ ಇರಾನ್-ಇರಾಕ್ ಯುದ್ಧಗಳಿಗೆ ಕಾರಣ. ಅಮೆರಿಕವು ತನ್ನದೇ ಆದ ಕಾರಣಗಳಿಗೆ ಸದ್ದಾಂ ಹುಸೇನನನ್ನು ಹತ್ತಿಕ್ಕಿತಾದರೂ ಆ ಮೂಲಕ ತನ್ನ ವೈರಿ ಇರಾನಿಗೆ ಲಾಭ ಮಾಡಿಕೊಟ್ಟಿದ್ದು ಮಾತ್ರ ವಿಪರ್ಯಾಸ.
ಸಿರಿಯಾ ಎಂಬ ಸುನ್ನಿ ಬಹುಸಂಖ್ಯಾತ ದೇಶವನ್ನು ಅಲ್ಲಿನ ಎಲ್ಲ ಬಂಡಾಯಗಳ ಧ್ವನಿ ಅಡಗಿಸಿ ಅಸಾದ್ ಎಂಬ ಶಿಯಾ ಮುಸ್ಲಿಂ ಆಳುತ್ತಿರುವುದಕ್ಕೆ ಇರಾನ್ ಬೆಂಬಲವೇ ಕಾರಣ. ಸೌದಿಯ ಪಕ್ಕದಲ್ಲೇ ಇರುವ ಯೆಮೆನ್ ನಲ್ಲಿ ಶಿಯಾಕ್ಕೆ ಸೇರಿದ ಹೌತಿ ಬಂಡುಕೋರರು ಅಲ್ಲಿನ ಸರ್ಕಾರ ಉರುಳಿಸಿ ಪಾರಮ್ಯ ಸಾಧಿಸಿರೋದಕ್ಕೆ ಇರಾನ್ ಬೆಂಬಲವೇ ಕಾರಣ.
ಬಹರೈನ್ ಅನ್ನು ಆಳ್ತಿರೋ ರಾಜಮನೆತನ ಸುನ್ನಿ. ಅಲ್ಲಿನ ಅಧಿಕೃತ ಲೆಕ್ಕದ ಪ್ರಕಾರ ಶಿಯಾ ಜನಸಂಖ್ಯೆಯ ಪಾಲು 49 ಶೇಕಡ. ಈ ಸಂಖ್ಯೆಯನ್ನು ಅಲ್ಲಿನ ಸುನ್ನಿ ಆಡಳಿತ ಬೇಕಂತಲೇ ಕಡಿಮೆ ಮಾಡಿ ಹೇಳ್ತಿದೆ ಅನ್ನೋ ವಾದಗಳಿವೆ. ಇಸ್ರೇಲ್ ವಿರುದ್ಧ ಹಮಾಸ್ ಕೃತ್ಯವನ್ನು ಖಂಡಿಸಿರೋ ಅರಬ್ಬರ ಪೈಕಿ ಬಹರೈನ್ ಸಹ ಒಂದು ಅನ್ನೋದನ್ನು ಗಮನಿಸಬೇಕು. ಈ ಎಲ್ಲ ಹಿನ್ನೆಲೆಗಳನ್ನು ಮನದಟ್ಟಾಗಿಸಿಕೊಂಡರೆ ಈಗ ಕಣ್ಣೆದುರು ತೆರೆದುಕೊಳ್ಳುತ್ತಿರುವುದು ಕೇವಲ ಇರಾನ್ ವರ್ಸಸ್ ಇಸ್ರೇಲ್ ಅಲ್ಲ ಎಂಬುದು ಸ್ಪಷ್ಟವಾಗುತ್ತದೆ.
- ಚೈತನ್ಯ ಹೆಗಡೆ
cchegde@gmail.com
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ