ಬದಲಾಗುತ್ತಿರುವ ಜಾಗತಿಕ ಜನಸಂಖ್ಯಾ ರಚನೆಯಲ್ಲಿ ಭಾರತೀಯರ ಎದುರಿಗಿರುವ ಭವಿಷ್ಯವೇನು? (ತೆರೆದ ಕಿಟಕಿ)

ಉತ್ತರ ಪ್ರದೇಶ ಮತ್ತು ಬಿಹಾರದಂಥ ರಾಜ್ಯಗಳು ಜನಸಂಖ್ಯೆ ದರ ಹಾಗೆಯೇ ಇಟ್ಟುಕೊಂಡು ಹೆಚ್ಚು-ಹೆಚ್ಚು ‘ಮತದಾರ’ರನ್ನು ಸೃಷ್ಟಿಸುತ್ತ ಹೋದಂತೆಲ್ಲ ನಾವೆಲ್ಲ ಕೇವಲ ಜಿಎಸ್ಟಿ-ಆದಾಯ ತೆರಿಗೆಗಳನ್ನು ಕಟ್ಟಿಕೊಂಡು ಬೇರೆಯವರನ್ನು ಪೊರೆಯುವ ಕೆಲಸವಾಗಿಬಿಡುತ್ತದಲ್ಲವೇ ಎಂಬುದು ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳ ಆತಂಕವಾಗಿದೆ.
file pic
ಸಾಂಕೇತಿಕ ಚಿತ್ರonline desk
Updated on

800 ಕೋಟಿ ಜನರು…

ದಾಖಲಿತ ಇತಿಹಾಸದಲ್ಲಿ ಭೂಮಿಯ ಮೇಲೆ ಈ ಪ್ರಮಾಣದ ಜನ ಇದ್ದದ್ದು ಲೆಕ್ಕಾಚಾರದಲ್ಲಾಗಲೀ, ಅಂದಾಜಿನಲ್ಲಾಗಲೀ ಎಲ್ಲೂ ಸಿಗುವುದಿಲ್ಲ. ಗಣತಿ-ದಾಖಲೆ ನಿರ್ವಹಣೆ ಇತ್ಯಾದಿಗಳು ಸುಧಾರಿಸಿರುವ ತಂತ್ರಜ್ಞಾನ ಯುಗದಲ್ಲಿ ಲೆಕ್ಕವು ಹೆಚ್ಚು-ಕಡಿಮೆ ನಿಖರವಾಗಿ ಸಿಗುತ್ತಿದೆ ಎಂಬುದು ಹೌದಾದರೂ ಐದನೇ ಶತಮಾನದ್ದೋ, ಹನ್ನೊಂದನೇ ಶತಮಾನದ್ದೋ, ಸಾಮಾನ್ಯ ಶಕೆಗೆ ಮೊದಲಿನ ಶತಮಾನಗಳದ್ದೋ ಒಂದು ಅಂದಾಜು ಲೆಕ್ಕವಾದರೂ ಇದೆಯಲ್ಲ. ಆ ಯಾವ ಅಂದಾಜುಗಳೂ ಇವತ್ತಿನ ಜನಸಂಖ್ಯೆಯ ಪ್ರಮಾಣದ ಹತ್ತಿರ-ಹತ್ತಿರವೂ ಸುಳಿಯಲಾರವು. 

ಭಾರತದ್ದೇ ಲೆಕ್ಕ ತೆಗೆದುಕೊಳ್ಳೋಣ. 1947ರ ಹೊತ್ತಿಗೆ ಸ್ವಾತಂತ್ರ್ಯ ಪಡೆಯುತ್ತಿದ್ದಾಗ ಅವಿಭಜಿತ ಭಾರತದ ಅವತ್ತಿನ ಅಂದಾಜು ಜನಸಂಖ್ಯೆ 36 ಕೋಟಿ. ಈಗ ಭಾರತ, ಪಾಕಿಸ್ತಾನ, ಮತ್ತು ಬಾಂಗ್ಲಾದೇಶಗಳ ಜನಸಂಖ್ಯೆ ಕೂಡಿಸಹೋದರೆ ಅದು 183 ಕೋಟಿ ದಾಟಿಬಿಡುತ್ತದೆ!

ಈಗ ಎರಡು-ಮೂರು ದಶಕಗಳ ಹಿಂದೆ ಜನಸಂಖ್ಯಾ ನಿಯಂತ್ರಣ ಎನ್ನುವುದು ಬಹಳ ಜನಪ್ರಿಯ ವಿಚಾರಧಾರೆ ಆಗಿತ್ತು. ಇವತ್ತಿಗೂ ಆ ತರ್ಕ ಪ್ರಸ್ತುತವೇ. ಈಗಾಗಲೇ ಗಿಜಿಗುಡುತ್ತಿರುವ ಜನಸಂಖ್ಯೆಗೆ ಮತ್ತೆ ನಮ್ಮಿಂದ ಸೇರ್ಪಡೆ ಆಗಬೇಕೆ ಅಂತ ಇವತ್ತಿನ ಯುವಕ-ಯುವತಿಯರು ಪ್ರಶ್ನಿಸಿದರೆ ಅದನ್ನು ಅತಾರ್ಕಿಕ ಎಂದೇನೂ ಹೇಳಲಾಗದು. ಏಕೆಂದರೆ, ಭೂಮಿಯಲ್ಲಿ ಸಂಪನ್ಮೂಲಗಳು ಅನಂತವೇನಲ್ಲ ಎಂದಾದಾಗ ಹೆಚ್ಚು ಹೆಚ್ಚು ಮಂದಿ ಸೇರಿಕೊಳ್ಳುವುದೆಂದರೆ ಅವಿಷ್ಟೇ ಸಂಪನ್ಮೂಲಕ್ಕೆ ಹೆಚ್ಚು ಕೈಗಳು ಹೋರಾಡುವ ಸಂಘರ್ಷ ತೆರೆದುಕೊಳ್ಳುತ್ತದೆ ಎಂಬುದನ್ನು ತರ್ಕದ ನೆಲೆಯಲ್ಲಂತೂ ಯಾರೂ ಇಲ್ಲವೆನ್ನುವಂತಿಲ್ಲ.

ಆದರೆ… ಸಂಖ್ಯೆಯಾಗಿ ಜನರನ್ನು ನೋಡಿದರೆ ಸಾಕು-ಸಾಕೆನಿಸುತ್ತಿರುವಾಗಲೇ ಅವುಗಳ ನಡುವಿಂದಲೇ ಹಲವು ವಿರೋಧಾಭಾಸಗಳು, ಭಿನ್ನಧ್ವನಿಗಳು ಮೇಲೆದ್ದು ಅನುರಣಿಸುತ್ತಿವೆ. 

ಜನಸಂಖ್ಯೆ ಕಥಾನಕದ ವಿರೋಧಾಭಾಸ

ಭಾರತದಲ್ಲಿ ಬಹುತೇಕ ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿವೆ ಎನ್ನುತ್ತೇವೆ. ಸಾಂಸ್ಕೃತಿಕ ಪುನರುಜ್ಜೀವನ ಹಾಗೂ ಶ್ರೀಮಂತ ಬದುಕಿನ ಇತಿಹಾಸ ಜಳಪಳಿಸುವ ಯುರೋಪ್ ಇನ್ನೇನು ವಯೋವೃದ್ಧವಾಗುತ್ತಿದೆ ಎಂಬ ಬಗ್ಗೆ ಸಾಕಷ್ಟು ಓದಿರುತ್ತೀರಿ. 

ಕರ್ನಾಟಕವೂ ಸೇರಿದಂತೆ ಭಾರತದಲ್ಲೇ ಹಲವು ರಾಜ್ಯಗಳು ಫರ್ಟಿಲಿಟಿ ರಿಪ್ಲೇಸ್ಮೆಂಟ್ ರೇಟ್ ಬಗ್ಗೆ ಆತಂಕಗೊಂಡಿವೆ. ಜನಸಂಖ್ಯೆ ನಿಯಂತ್ರಣ ಮಾಡಿಕೊಂಡು ಒಂದುಮಟ್ಟದ ಆರ್ಥಿಕ ಉನ್ನತಿ ಕಂಡುಕೊಂಡಿದ್ದವರಿಗೆ ಈಗ ಅನ್ನಿಸುತ್ತಿರುವುದು - ಉತ್ತರ ಪ್ರದೇಶ ಮತ್ತು ಬಿಹಾರದಂಥ ರಾಜ್ಯಗಳು ಜನಸಂಖ್ಯೆ ದರ ಹಾಗೆಯೇ ಇಟ್ಟುಕೊಂಡು ಹೆಚ್ಚು-ಹೆಚ್ಚು ‘ಮತದಾರ’ರನ್ನು ಸೃಷ್ಟಿಸುತ್ತ ಹೋದಂತೆಲ್ಲ ನಾವೆಲ್ಲ ಕೇವಲ ಜಿಎಸ್ಟಿ-ಆದಾಯ ತೆರಿಗೆಗಳನ್ನು ಕಟ್ಟಿಕೊಂಡು ಬೇರೆಯವರನ್ನು ಪೊರೆಯುವ ಕೆಲಸವಾಗಿಬಿಡುತ್ತದಲ್ಲವೇ ಎಂಬುದು ಇವುಗಳ ಆತಂಕ. ಏಕೆಂದರೆ, ಅದು ಯಾವುದೇ ಪಕ್ಷದ ಸರ್ಕಾರವಿರಲಿ ಸಂಖ್ಯಾಬಲಕ್ಕೆ ಪ್ರಾಮುಖ್ಯ ಕೊಡಬೇಕಾಗುತ್ತದೆಯೇ ಹೊರತು ಜನರ ವಿಚಾರ ಮತ್ತು ಪರಿಶ್ರಮ, ಅನ್ವೇಷಣೆಗಳಿಗಲ್ಲ.

ಅಮೆರಿಕದಂಥ ದೇಶಗಳೂ ಇದೇ ಬಗೆಯ ಯೋಚನೆಯನ್ನು ಅವರವರ ವಾಸ್ತವಗಳಿಗೆ ತಕ್ಕನಾಗಿ ಮಾಡುತ್ತಿವೆ. ಕೆಲವರ್ಷಗಳ ಹಿಂದೆ ಅಮೆರಿಕದ ಸಾಹಸಿ ಉದ್ಯಮಿ ಹಾಗೂ ಜಗತ್ತಿನ ಅತಿದೊಡ್ಡ ಶ್ರೀಮಂತರ ಸಾಲಿನಲ್ಲಿರುವ ಎಲಾನ್ ಮಸ್ಕ್ ಹೇಳಿದ್ದಿಷ್ಟು- “ನಾನೀಗ ಹೇಳುತ್ತಿರುವುದನ್ನು ಗುರುತು ಮಾಡಿಟ್ಟುಕೊಳ್ಳಿ… ಇನ್ನು 20 ವರ್ಷಗಳಲ್ಲಿ ಜಗತ್ತು ಎದುರಿಸಲಿರುವ ಅತಿದೊಡ್ಡ ಬಿಕ್ಕಟ್ಟು ಅಂದರೆ ಜನಸಂಖ್ಯೆಯ ಪತನದ್ದು. ಇದು ಹವಾಮಾನ ವೈಪರೀತ್ಯದ ವಿದ್ಯಮಾನಕ್ಕಿಂತ ಗಹನವಾದದ್ದು. ಇಲ್ಲಿರುವ ವಿಚಾರ ತುಂಬ ಸರಳ. ಜನರು ಮಕ್ಕಳನ್ನು ಮಾಡಿಕೊಳ್ಳದಿದ್ದರೆ ಹೊಸ ಪೀಳಿಗೆ ಬೆಳೆಯುವುದಿಲ್ಲ ಅಷ್ಟೆ.”

ಅಮೆಜಾನ್ ಎಂಬ ದೈತ್ಯ ಕಂಪನಿಯ ಪ್ರವರ್ತಕ, ಮತ್ತೀಗ ಬಾಹ್ಯಾಕಾಶ ಸಾಹಸಗಳಿಗೂ ಸಜ್ಜಾಗುತ್ತಿರುವ ಜೆಫ್ ಬೆಜೊಸ್, “ಟ್ರಿಲಿಯನ್ನುಗಟ್ಟಲೇ ಮನುಷ್ಯರ ನಡುವಿನಿಂದಲೇ ಸಾವಿರ ಮೊಜಾರ್ಟ್, ಸಾವಿರ ಐನಸ್ಟೈನ್ ಬರುವುದಕ್ಕೆ ಸಾಧ್ಯವಾಗುತ್ತದೆ” ಎನ್ನುವ ಮೂಲಕ ಜನಸಂಖ್ಯೆ ಬೆಳೆಯಲಿ ಎಂಬ ವಾದದ ಪರವಾಗಿಯೇ ಇದ್ದಾರೆ. 

ಜನಸಂಖ್ಯೆಯ ಕತೆ ನಮ್ಮ ಭವಿಷ್ಯ ರೂಪಿಸಲಿರುವ ಬಗೆ ಹೇಗೆ?

ಜಾಗತಿಕವಾಗಿ ಜನನ ಪ್ರಮಾಣದ ಗತಿ ಇಳಿಯುತ್ತಿದೆ, ವಿಶೇಷವಾಗಿ ಈ ಟ್ರೆಂಡ್ ಮುಂದುವರಿದ ದೇಶಗಳಲ್ಲಿ ದಟ್ಟವಾಗಿದೆ ಎಂಬುದು ವಾಸ್ತವ. ಜನಸಂಖ್ಯೆ ಹೆಚ್ಚಿಸಬೇಕೆ, ಬೇಡವೇ ಎಂಬುದೆಲ್ಲ ಕೊನೆಮೊದಲಿಲ್ಲದ ಚರ್ಚೆ. ಎರಡೂ ಬದಿಗಳಲ್ಲಿ ಅವರವರದ್ದೇ ನೆಲೆಯಲ್ಲಿ ತಾರ್ಕಿಕವಾಗಿ ವಾದಿಸುವವರಿದ್ದಾರೆ. ಕೊನೆಗೂ ಆ ವಾದವು ವೈಯಕ್ತಿಕ ಸ್ವಾತಂತ್ರ್ಯ ಎಂಬ ಪಾಯಿಂಟಿಗೆ ಬಂದು ನಿಲ್ಲುತ್ತದೆ.

ಹೀಗಾಗಿ ಅಂಥ ಚರ್ಚೆಗಳ ಕತೆ ಹಾಗಿರಲಿ. ಆದರೆ, ಬೇಕೋ ಬೇಡವೋ ಜನಸಂಖ್ಯೆಯ ಸಂರಚನೆಯಲ್ಲಾಗುತ್ತಿರುವ ಬದಲಾವಣೆ ಎಂಬುದು ಆರ್ಥಿಕ-ರಾಜಕೀಯ ವ್ಯವಸ್ಥೆಗಳನ್ನು ಬಹುವಾಗಿ ಪ್ರಭಾವಿಸಲಿಕ್ಕಿದೆ. ಅದು ಯಾವೆಲ್ಲ ಆಯಾಮಗಳಲ್ಲಿ ಪ್ರಭಾವಿಸಬಹುದು ಎಂಬುದನ್ನು ಊಹಿಸಿ ಅರ್ಥಮಾಡಿಕೊಂಡಾಗಲಷ್ಟೇ ಭವಿಷ್ಯದ ಜಗತ್ತಿನಲ್ಲಿ ವಾಸಿಸುವುದು ಸುಲಭವಾಗುತ್ತದೆ. 

ಉದಾಹರಣೆಗೆ, ಪೇ ಪಾಲ್ ಸಂಸ್ಥಾಪಕರಲ್ಲೊಬ್ಬರಾದ ಪೀಟರ್ ಥಾಯಿಲ್ ಅವರು ಜೊ ರೋಗನ್ ಜತೆಗಿನ ಮಾತುಕತೆಯಲ್ಲಿ ನಡೆಸಿದ್ದ ವಿಶ್ಲೇಷಣೆಯ ಒಂದಂಶ ಹೀಗಿತ್ತು- “ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಯಸ್ಸಾದವರ ಸಂಖ್ಯೆಯೇ ಹೆಚ್ಚಾದಾಗ ಸಹಜವಾಗಿ ಅವರ ಮತಗಳೇ ಪ್ರಾಮುಖ್ಯ ಪಡೆಯುತ್ತವೆ. ಸರ್ಕಾರಗಳು ಪಿಂಚಣಿ, ಹಿರಿಯರ ಆರೋಗ್ಯ ವ್ಯವಸ್ಥೆ ಇವಕ್ಕೆ ಮಾತ್ರವೇ ಹೆಚ್ಚಿನ ತೆರಿಗೆ ಹಣ ವ್ಯಯಿಸಬೇಕಾದ ಒತ್ತಡ ರೂಪುಗೊಳ್ಳುತ್ತದೆ. ಒಂದು ಹಂತದ ನಂತರ ಇದು ಮಕ್ಕಳನ್ನು ಮಾಡಿಕೊಳ್ಳುವ ಇಷ್ಟ ಇದ್ದವರಿಗೂ ನಿರುತ್ತೇಜನ ಉಂಟುಮಾಡುತ್ತದೆ. ಏಕೆಂದರೆ, ಹೆಚ್ಚಿನ ಆರ್ಥಿಕ ನೀತಿಗಳು ಹಿರಿಯ ನಾಗರಿಕರಿಗೆ ಮೀಸಲಾಗಿರುತ್ತವೇ ಹೊರತು ಯುವಕರ ಪರವಲ್ಲ.”

ಹತ್ತಿರದ ಭವಿಷ್ಯದಲ್ಲಿ ಭಾರತಕ್ಕೆ ಈ ಟ್ರೆಂಡ್ ಪೂರಕವೇ?

ಭಾರತದಲ್ಲಿ ಮುಂದಿನ ಎರಡು ದಶಕಗಳಲ್ಲಿ ಆರ್ಥಿಕ ಪ್ರಗತಿ ಪಕ್ಕಾ ಎಂದು ವಾದಿಸುವವರು ನೀಡುವ ಪ್ರಮುಖ ಕಾರಣಗಳಲ್ಲೊಂದು ಡೆಮಾಗ್ರಫಿಕ್ ಡಿವಿಡೆಂಡ್ ಅರ್ಥಾತ್ ಜನಸಂಖ್ಯಾ ರಚನೆಯಲ್ಲಿರುವ ಲಾಭ. ಚೀನಾ ಸಹ ದೊಡ್ಡಮಟ್ಟದ ಜನಸಂಖ್ಯೆಯನ್ನೇ ಹೊಂದಿದ್ದರೂ ಯುವಜನಸಂಖ್ಯೆ ಹೊಂದಿರುವಲ್ಲಿ ಭಾರತವೇ ಜಗತ್ತಿನ ಅಗ್ರಗಣ್ಯ ದೇಶವಾಗಿರುವುದರಿಂದ ದುಡಿಮೆ ಮತ್ತು ಹೊಸ ಅನ್ವೇಷಣೆಯ ಸಾಧ್ಯತೆಗಳು ಭಾರತದಲ್ಲೇ ಹೆಚ್ಚು ಎಂಬ ವಾದವಿದೆ. ಇದರ ಜಾಡಿನಲ್ಲೇ ಭಾರತದ ಮಾರುಕಟ್ಟೆಯಲ್ಲಿ ವಿದೇಶಿ ಬಂಡವಾಳ ಸಹ ಹರಿದುಬರುತ್ತಿದೆ. 

ಹಾಗಾದರೆ, ಭಾರತವೇ ಜಗತ್ತಿನ ಆರ್ಥಿಕ ಪ್ರಗತಿಯ ಕೇಂದ್ರವಾಗಲಿದೆಯೇ ಎಂಬ ಪ್ರಶ್ನೆಗೆ ಕೇವಲ ಅಭಿಮಾನದ ನೆಲೆಯಲ್ಲಿ ಮಾತ್ರವೇ ಯೋಚಿಸಿದರೆ ಹೌದ್ಹೌದು ಎಂದು ಉದ್ಗರಿಸಿಬಿಡಬಹುದೇನೋ. ಮುಂದಿನ ತಂತ್ರಜ್ಞಾನ, ಅನ್ವೇಷಣೆಗಳೆಲ್ಲ ಭಾರತದಲ್ಲೇ ಹುಟ್ಟಲಿವೆ ಎಂಬ ಪ್ರೋತ್ಸಾಹದ ಚಿತ್ರವನ್ನೂ ಇದು ಕೊಟ್ಟುಬಿಡಬಹುದೇನೋ. ಆದರೆ ಸಾಧ್ಯತೆಗಳು ಸ್ವಲ್ಪ ಆಚೀಚೆ ಆಗಬಹುದಾದ ನಿರೀಕ್ಷೆ ಇಟ್ಟುಕೊಳ್ಳಬೇಕಾದ ಸ್ಥಿತಿ ಇದೆ.

ನಿಜ…ಗುಣಮಟ್ಟದ ಮಾನವ ಸಂಪನ್ಮೂಲವು ಭಾರತದಲ್ಲೇ ಉದಯಿಸಲಿದೆ ಎಂಬುದರ ಬಗ್ಗೆ ಅಷ್ಟೇನೂ ಸಂಶಯವಿಲ್ಲ. ಆದರೆ ಈ ಪ್ರತಿಭೆಗಳು ಭಾರತವನ್ನೇ ಕರ್ಮಭೂಮಿ ಮಾಡಿಕೊಳ್ಳುತ್ತಾರೆ, ನವಅನ್ವೇಷಣೆಗಳ ಪೇಟೆಂಟುಗಳು ಭಾರತದಲ್ಲೇ ಇರುತ್ತವೆ, ದೈತ್ಯ ಜಾಗತಿಕ ಕಂಪನಿಗಳು ಇಲ್ಲಿಂದಲೇ ಹುಟ್ಟುತ್ತವೆ ಎಂದೆಲ್ಲ ಕನಸು ಹೊಂದುವುದಕ್ಕೆ ಪೂರಕ ಅಂಶಗಳು ಸದ್ಯಕ್ಕಿಲ್ಲ. ಏಕೆಂದರೆ, ಯಾವುದನ್ನು ವಯೋವೃದ್ಧ ಯುರೋಪ್ ಎಂದೆಣಿಸುತ್ತಿದ್ದೇವೆಯೋ ಅದು ಭಾರತದ ಅತ್ಯುನ್ನತ ಪ್ರತಿಭೆಗಳನ್ನು ತಾನು ದತ್ತು ತೆಗೆದುಕೊಳ್ಳುವುದಕ್ಕೆ ಬೇಕಾದ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತಿದೆ. 

file pic
ಮುಂದುವರಿದ ಈ ದೇಶಗಳೇಕೆ ಹಳ್ಳಿಗಳಿಗೆ ಹಿಂತಿರುಗುತ್ತಿವೆ? ಉಳುಮೆ ಮಾಡೋದಕ್ಕಂತೂ ಅಲ್ಲ! (ತೆರೆದ ಕಿಟಕಿ)

ಐತಿಹಾಸಿಕವಾಗಿ ಸಹ ಭಾರತದ ಜನಸಂಖ್ಯೆಯನ್ನು ಪಾಶ್ಚಾತ್ಯ ಜಗತ್ತು ಹೇಗೆ ದುಡಿಸಿಕೊಂಡಿತೆಂಬುದರ ಅರಿವಿದ್ದರೆ ಇದನ್ನು ಅರ್ಥಮಾಡಿಕೊಳ್ಳುವುದು ಸುಲಭ. ತನ್ನ ಬಹುಭಾಗಕ್ಕೆ ಸೂರ್ಯನ ಬೆಳಕನ್ನು ಯಥೇಚ್ಛವಾಗಿ ಪಡೆಯುವ ಭಾರತದಲ್ಲಿ ಜೈವಿಕವಾಗಿ ಜನಸಂಖ್ಯೆವೃದ್ಧಿಗೆ ಪೂರಕ ವಾತಾವರಣವಿರುವುದರಿಂದ ಮೊದಲಿನಿಂದಲೂ ಮಾನವ ಸಂಪನ್ಮೂಲ ಉಳಿದ ದೇಶಗಳಿಗೆ ಹೋಲಿಸಿದರೆ ಯಥೇಚ್ಛ. ಯುರೋಪಿಯನ್ನರು, ಮುಖ್ಯವಾಗಿ ಬ್ರಿಟಿಷರು ಈ ಮಾನವ ಸಂಪನ್ಮೂಲವನ್ನು ಸ್ಲೇವರಿ ಅಥವಾ ಗುಲಾಮಿ ಪದ್ಧತಿಯ ಮೂಲಕ ದುಡಿಸಿಕೊಂಡರು.

ಬ್ರಿಟಿಷ್ ಮಿತ್ರಪಡೆಗಳು ಎರಡನೇ ವಿಶ್ವಯುದ್ಧವನ್ನು ಗೆದ್ದವು ಎಂದು ಇತಿಹಾಸ ಬೀಗಿಬಿಡುತ್ತದೆ. ಆದರೆ ಇದಕ್ಕೆ ಪ್ರಾಣತೆತ್ತ ಮಾನವ ಸಂಪನ್ಮೂಲ ಎಲ್ಲಿಯದ್ದು? ಬರೋಬ್ಬರಿ 87,000 ಭಾರತೀಯ ಯೋಧರು ಬ್ರಿಟಿಷ್ ಸಾಮ್ರಾಜ್ಯಕ್ಕಾಗಿ ಸೆಣೆಸುತ್ತ, ತಾವು ಕಂಡುಕೇಳರಿಯದಿದ್ದ ಭೂಪ್ರದೇಶಗಳಲ್ಲಿ ಹೆಣವಾಗಿಹೋದರು. 

ಈ ನಡುವೆ ಬಂದಿದ್ದ ಕೈಗಾರಿಕಾ ಕ್ರಾಂತಿಯಲ್ಲಿ ಯಂತ್ರಗಳು ಬಹಳಷ್ಟು ಶ್ರಮದಾಯಕ ಕೆಲಸಗಳಿಗೆ ಉತ್ತರವಾಗಿ ಬಂದಿದ್ದರಿಂದ ಗುಲಾಮಿ ಪದ್ಧತಿಯೇನೋ ನಶಿಸಿತು. ಆದರೆ, ಈ ಹಂತದಲ್ಲಿ ತಮ್ಮ ಕಾರ್ಖಾನೆಗಳಲ್ಲಿ ಕೆಲಸ ಮಾಡುವುದಕ್ಕೆ ಪಾಶ್ಚಾತ್ಯರು ಭಾರತದ ಜನರನ್ನೇನೂ ಬಿಟ್ಟುಕೊಳ್ಳಲಿಲ್ಲ. ಕೃಷಿ ಕೂಲಿಗಿಂತ ಇದು ‘ಮೇಲ್ಮಟ್ಟದ’ ಕೌಶಲವಾಗಿದ್ದರಿಂದ, ಮತ್ತು ಆ ಉದ್ಯೋಗಗಳಿಗೆ ತನ್ನಲ್ಲಿನ ಜನಸಂಖ್ಯೆಯೇ ಸಾಕಾಗಿದ್ದರಿಂದ ಈ ಧೋರಣೆ.

ಆದರೆ, 80ರ ದಶಕದಲ್ಲಿ ನಿಧಾನಕ್ಕೆ ತೆರೆದುಕೊಂಡು, 90ರ ಹೊತ್ತಿಗೆಲ್ಲ ಉಚ್ಚ್ರಾಯಕ್ಕೇರಿದ ಮಾಹಿತಿ ತಂತ್ರಜ್ಞಾನ ಪ್ರಣೀತ ಸೇವಾಯುಗದಲ್ಲಿ ಭಾರತೀಯರ ಕೌಶಲಗಳನ್ನು ಪಕ್ಕಕ್ಕಿಟ್ಟು ಮುಂದೆ ಹೋಗುವುದಕ್ಕೆ ಜಗತ್ತಿಗಾಗಲಿಲ್ಲ. ವೆಚ್ಚದ ಲೆಕ್ಕಾಚಾರದಲ್ಲೂ ಭಾರತೀಯರಿಗೆ ಕೊಡಬೇಕಾದ ಸಂಬಳ ತನ್ನಲ್ಲಿದ್ದವರಿಗೆ ಹೋಲಿಸಿದರೆ ಕಡಿಮೆ ಎಂಬ ಅಂಶವೂ ಇತ್ತು. ಈ ಬಾರಿ ಪಾಶ್ಚಾತ್ಯ ಜಗತ್ತು ದೊಡ್ಡಮಟ್ಟದಲ್ಲಿ ಭಾರತೀಯ ಪ್ರತಿಭೆಗಳನ್ನು ತನ್ನಲ್ಲಿಗೂ ಕರೆಸಿಕೊಂಡಿತು ಅಲ್ಲದೇ ಭಾರತದಲ್ಲಿ ಹೊರಗುತ್ತಿಗೆ ಉದ್ಯೋಗಗಳ ದೊಡ್ಡ ಅವಕಾಶವೂ ಸೃಷ್ಟಿಯಾಯಿತು. ಕ್ವಾಲ್ಕಂ, ಇಂಟೆಲ್, ಗೂಗಲ್, ಮೈಕ್ರೊಸಾಫ್ಟ್ ಸೇರಿದಂತೆ ದೈತ್ಯ ಉದ್ದಿಮೆಗಳೆಲ್ಲ ಭಾರತೀಯ ಕೆಲಸಗಾರರ ಬಲದ ಮೇಲೆಯೇ ಹೆಚ್ಚಿನದಾಗಿ ಅರಳಿವೆ ಎಂಬುದರಲ್ಲಿ ವಿವಾದವೇನಿಲ್ಲ. ಆದರೆ ಇವುಗಳ ಒಡೆತನ, ವ್ಯಾಪಾರಿ ಭಾಷೆಯಲ್ಲಿ ಹೇಳುವುದಾದರೆ ಇಕ್ವಿಟಿ, ಅವರ ಬಳಿಯೇ ಉಳಿಯಿತು. 

ಇದೀಗ, ಕೃತಕ ಬುದ್ಧಿಮತ್ತೆ ಯುಗದಲ್ಲಿ ಕಾಲಕ್ರಮೇಣ ತಂತ್ರಜ್ಞಾನ ವಿಭಾಗದ ದೊಡ್ಡಸಂಖ್ಯೆಯ ಕೆಲಸಗಳು ಅಪ್ರಸ್ತುತವಾಗಲಿವೆ. ಹೀಗಾಗಿ ಜಗತ್ತಿಗೆ ಭಾರತದ ಮಾನವ ಸಂಪನ್ಮೂಲದ ಅವಶ್ಯವು ಇಲ್ಲೆಲ್ಲ ಕಡಿಮೆಯೇ ಆಗಲಿಕ್ಕಿದೆ. ಆದರೆ, ಭಾರತ ಮತ್ತು ವಿಶ್ವದ ಇವತ್ತಿನ ಜನಸಂಖ್ಯಾ ರಚನೆಗಳು ಬೇರೆ ತೆರನಾದ ಅವಕಾಶಗಳನ್ನು ಭಾರತದ ಮುಂದಿರಿಸಿವೆ.

ಇದು ಎಮೋಷನಲ್ ಇಂಟಲಿಜೆನ್ಸ್ ಕಾಲವೇ?

ಮಾಹಿತಿ ತಂತ್ರಜ್ಞಾನದ ಉದ್ಯೋಗಪರ್ವವು ಬಹುತೇಕ ಬುದ್ಧಿಪ್ರಧಾನವಾಗಿತ್ತು. ಈ ಮುಂದಿನ ಜಾಗತಿಕ ಉದ್ಯೋಗ ಮಾರುಕಟ್ಟೆ ಎಮೋಷನಲ್ ಇಂಟೆಲಿಜೆನ್ಸ್ ಅಂದರೆ ಭಾವ ಬುದ್ಧಿಮತ್ತೆಯನ್ನು ಅನುಸರಿಸಲಿಕ್ಕಿರುವಂತೆ ತೋರುತ್ತಿದೆ. ಇದರರ್ಥ ಬುದ್ಧಿ-ತರ್ಕಗಳಿಗೆ ಜಾಗವಿಲ್ಲ, ಪ್ರೀತಿ-ಪ್ರೇಮ ಮುಖ್ಯ ಎಂದೆಲ್ಲ ಅಂದುಕೊಳ್ಳಬಾರದು. ಭಾವವನ್ನುಪಯೋಗಿಸಿಕೊಂಡು ಕೆಲಸ ಮಾಡುವ ಬುದ್ಧಿಯೇ ಪ್ರಧಾನ ಭೂಮಿಕೆ ಪಡೆಯಬಹುದು ಎಂಬುದೊಂದು ಅಂದಾಜು.

ಇವತ್ತಿನ ಜಾಗತಿಕ ಜನಸಂಖ್ಯೆಯ ಲಕ್ಷಣ ಏನು ಹೇಳಿ? ವೈದ್ಯಕೀಯ ತಂತ್ರಜ್ಞಾನಗಳ ಕಾರಣದಿಂದ ಹಾಗೂ ಸಂಪರ್ಕ ವ್ಯವಸ್ಥೆಗಳು, ಉತ್ಪಾದನೆಯ ವಿಧಾನಗಳಲ್ಲಾಗಿರುವ ಬದಲಾವಣೆಗಳ ಕಾರಣದಿಂದ ಸರಾಸರಿ ಆಯಸ್ಸು ಹೆಚ್ಚಾಗಿದೆ. ಅಂದರೆ 78-80 ವರ್ಷಗಳವರೆಗೆ ಮನುಷ್ಯ ಜೀವಿಸುವ ಸಾಧ್ಯತೆ ಹೆಚ್ಚು. ನಮ್ಮ ಪೂರ್ವಜರ ಕಾಲಕ್ಕೆ ಆ ಸರಾಸರಿ 40-50 ವರ್ಷಗಳಷ್ಟೇ ಇತ್ತು. ಆಗಲೇ ಶತಾಯುಷಿಗಳು ಹೆಚ್ಚಿದ್ದರು ಎಂದೆಲ್ಲ ನಿಮಗೆ ಅನಿಸಬಹುದಾದರೂ ವಾಸ್ತವವೇನೆಂದರೆ ಆ ಶತಾಯುಷಿ ಅವೆಷ್ಟೋ ಬರಗಾಲ, ರೋಗ-ರುಜಿನಗಳನ್ನು ದಾಟಿ ಬಂದವರಾಗಿರುತ್ತಿದ್ದರು ಹಾಗೂ ಅವರದೇ ಸಹೋದರ-ಸಹೋದರಿಯರು 25-30-40 ವರ್ಷಕ್ಕೆಲ್ಲ ತೀರಿಕೊಂಡಿರುತ್ತಿದ್ದರು. ಏಕೆಂದರೆ ಆಗ ಪ್ರಾಣ ತೆಗೆಯುವುದಕ್ಕೆ ಯಾವುದೋ ಕಾಡುಪ್ರಾಣಿ, ಸೊಳ್ಳೆ, ಜ್ವರ, ಭೇದಿಯಂಥವುಗಳೇ ಸಾಕಾಗಿತ್ತು. ಇದನ್ನು ಓದುತ್ತಿರುವ ನಾವೆಲ್ಲ ಎಂಬತ್ತು ವಸಂತಗಳನ್ನು ಕಾಣುವ ಸಾಧ್ಯತೆಗಳು ಹೆಚ್ಚಾಗಿವೆ. ಹಾಗೆಂದು ಅದನ್ನು ವರವೆಂದುಕೊಳ್ಳಬೇಕಿಲ್ಲ. ಆಧುನಿಕ ವ್ಯವಸ್ಥೆ ನಮ್ಮನ್ನೆಲ್ಲ ಬದುಕಿಸಿರುತ್ತದೆ ಎಂದುಹೇಳಿದ ಮಾತ್ರಕ್ಕೆ, ‘ಚೆನ್ನಾಗಿ’ ಬದುಕಿಸಿರುತ್ತದೆ ಎಂದೇನಿಲ್ಲ.

ಹೀಗಾಗಿ ಭವಿಷ್ಯದಲ್ಲಿ ವಯಸ್ಸಾದವರಿಗೆ ಆಸರೆಯಾಗುವ ‘ಕೇರ್ ಇಂಡಸ್ಟ್ರಿ’ ಬೆಳೆಯುತ್ತದೆ ಎನ್ನುವುದು ಮಾರುಕಟ್ಟೆ ಅಧ್ಯಯನ ಸಂಸ್ಥೆಗಳು ನೀಡುತ್ತಿರುವ ಬಹುದೊಡ್ಡ ವಿಶ್ಲೇಷಣೆ. ಅದಾಗಲೇ ಭಾರತದ ದಾದಿಯರಿಗೆ ವಿಶ್ವದಾದ್ಯಂತ ಬೇಡಿಕೆ ಇದೆ. ಒಳ್ಳೆಯ ಹೆಸರೂ ಇದೆ. ಮುಂಬರುವ ದಿನಗಳಲ್ಲಿ ವಯೋವೃದ್ಧ ಯುರೋಪ್ ಈ ಸೇವೆಗಳಿಗೆ ಭಾರತೀಯ ಜನಸಂಖ್ಯೆಯನ್ನು ಆಸೆಯ ಕಣ್ಣುಗಳಿಂದ ನೋಡುತ್ತಿದೆ. ಪಾಶ್ಚಾತ್ಯರ ಕತೆ ಹಾಗಿರಲಿ, ಕುಟುಂಬ ವ್ಯವಸ್ಥೆ ಚದುರಿಹೋಗಿರುವ ಭಾರತೀಯ ಸಮಾಜದಲ್ಲೇ ನಗರಗಳಲ್ಲಿ ದಂಪತಿ ಜತೆಗಿದ್ದು ಬಾಣಂತನ ಮಾಡಿಕೊಡುವವರಿಗೆ ದೊಡ್ಡ ಬೇಡಿಕೆ ಇದೆ. ಆದರೆ ಇದು ಆಯಾ ಜಾತಿ ಮತ್ತು ಪರಿಚಿತ ವಲಯದಲ್ಲಿ ಹಬ್ಬುತ್ತಿರುವ ಅಸಾಂಪ್ರದಾಯಿಕ ಉದ್ಯೋಗ ವೈಖರಿಯಾಗಿರುವುದರಿಂದ ನಮಗದರ ವ್ಯಾಪ್ತಿಯ ಲೆಕ್ಕ ಸಿಗುತ್ತಿಲ್ಲ ಅಷ್ಟೆ. ಬದಲಾಗುತ್ತಿರುವ ಜಗತ್ತಿನ ಜನಸಂಖ್ಯಾ ರಚನೆಯಲ್ಲಿ ಮಕ್ಕಳು ಮತ್ತು ಹಿರಿಯ ನಾಗರಿಕರು ಈ ಎರಡೂ ಕಡೆಗಳಲ್ಲಿ ಕಾಳಜಿಯ ಅಗತ್ಯ ಬೀಳುವುದು ಸಹಜ. ಹೀಗಾಗಿ, ಕೇರ್ ಇಂಡಸ್ಟ್ರಿ ಎಂದಕೂಡಲೇ ಅನಾರೋಗ್ಯದಿಂದ ಹಾಸಿಗೆಯಲ್ಲಿ ಹೊರಳಾಡುತ್ತಿರುವವರಿಗೆ ಇಂಜೆಕ್ಷನ್ ಚುಚ್ಚಿ ಬರುವುದು ಎಂಬ ಸೀಮಿತಾರ್ಥವನ್ನು ಕಲ್ಪಿಸಿಕೊಳ್ಳಬೇಕಿಲ್ಲ.

file pic
ಕ್ಯಾನ್ಸರ್, ಕ್ವಾಂಟಂ ವಿಜ್ಞಾನ, ಮತ್ತು ಮುದ್ದುನಾಯಿ! (ತೆರೆದ ಕಿಟಕಿ)

ಜಗತ್ತಿನ ಪ್ರಮುಖ ಅರ್ಥವ್ಯವಸ್ಥೆಗಳಲ್ಲಿ ಸರ್ಕಾರಗಳೇ ಹೊಟ್ಟೆಪಾಡಿಗೆ ಬೇಕಾದ ಅಗತ್ಯಗಳನ್ನು ಖಾತ್ರಿಗೊಳಿಸುವ ಯುನಿವರ್ಸಲ್ ಬೇಸಿಕ್ ಇನ್ಕಂ ಮಾದರಿಗಳು ಬೇರೆ ಬೇರೆ ರೂಪದಲ್ಲಿ ಅಸ್ತಿತ್ವಕ್ಕೆ ಬಂದುಬಿಡುತ್ತವೆ. ಹೀಗಾಗಿ ಇನ್ನು ಕೆಲವೇ ವರ್ಷಗಳಲ್ಲಿ ಜಗತ್ತಿನ ಜನಸಂಖ್ಯೆಯ ಬಹುದೊಡ್ಡ ವರ್ಗವೊಂದಕ್ಕೆ ಕಾಡುವ ದೊಡ್ಡ ಸವಾಲು ಜೀವ ಉಳಿಸಿಕೊಳ್ಳುವುದೋ ಅಥವಾ ಹಣದ ಬಗ್ಗೆಯಷ್ಟೇ ಚಿಂತಿಸುವುದೋ ಆಗಿರುವುದಿಲ್ಲ. ಬದಲಿಗೆ, ಬದುಕಿಗೆ ಒಂದು ಉದ್ದೇಶವನ್ನು ಹುಡುಕಿಕೊಳ್ಳುವುದು, ಆ ಹುಡುಕಾಟ-ಜಿಜ್ಞಾಸೆಗಳಲ್ಲಿ ತಮ್ಮ ಅಂತಿಮ ದಿನಗಳನ್ನು ಕಳೆಯುವುದೇ ಆಗಿರುತ್ತದೆ. ಹೆಚ್ಚಿನವರ ಸರಾಸರಿ ಆಯಸ್ಸು 80 ವರ್ಷಗಳಿಗೆ ವಿಸ್ತರಿಸಿಕೊಂಡಾಗ,  ಐವತ್ತು-ಅರವತ್ತು ಮುಟ್ಟುತ್ತಲೇ ಸಂಬಳದ ಹೈಕು, ಪ್ರಮೋಷನ್, ಉದ್ದಿಮೆ ಕಟ್ಟುವುದು…ಹೀಗೆಲ್ಲ ಇವತ್ತಿಗೆ ನಮ್ಮ ಬದುಕನ್ನು ಬಹಳವಾಗಿ ಎಂಗೇಜ್ ಆಗಿಟ್ಟಿರುವ ಅಂಶಗಳು ಬಹುತೇಕರಿಗೆ ಕಿಕ್ ಕೊಡುವುದನ್ನು ನಿಲ್ಲಿಸಿರುತ್ತವೆ. ಇರುವ ಒಂದು ಸಂತಾನ ತನ್ನ ಬದುಕಿನ ಬೆರಗು ಹುಡುಕಿ ದೂರ ಹೋಗಿರುತ್ತದೆ. ಈ ಖಾಲಿತನವನ್ನು ತುಂಬುವುದು ಹೇಗೆ ಎಂಬ ಪ್ರಶ್ನೆಯ ಸುತ್ತಲೇ ಅನೇಕ ಹೊಸ ಉದ್ದಿಮೆಗಳು ಮತ್ತು ಉದ್ಯೋಗಾವಕಾಶಗಳು ಹುಟ್ಟಿಕೊಳ್ಳಲಿವೆ!

ಆದ್ದರಿಂದಲೇ, ಮೊದಲ ಹಂತದಲ್ಲಿ ಮನಸ್ಸನ್ನು ಪ್ರಫುಲ್ಲವಾಗಿರಿಸಿಕೊಳ್ಳಲುಬೇಕಾದ ಸೂಕ್ತ ಯೋಚನೆ, ಆಹಾರ-ವಿಹಾರಗಳ ಬಗ್ಗೆ ಸಹಜ ತುಡಿತ ಬಂದೀತು. ಈ ಹಂತವನ್ನು ಭಾರತೀಯ ವ್ಯಾಯಾಮ, ಧ್ಯಾನ, ಆಯುರ್ವೇದವೇ ಮೊದಲಾದ ಅಂಶಗಳು ಇನ್ನಷ್ಟು ಆವರಿಸಿಕೊಂಡಾವು. ಭಾರತದ ಪ್ರತಿಭೆಗಳು ಈ ಎಲ್ಲ ಮಾರ್ಗಗಳಲ್ಲಿ ಈವರೆಗೆ ಯೋಚಿಸಿರದ ಭಿನ್ನ ಉದ್ಯೋಗ ಮಾದರಿಗಳನ್ನು ಕಂಡುಕೊಳ್ಳುವ ಸಾಧ್ಯತೆ ಇದೆ.

ಮನುಷ್ಯನು ಬದುಕಿನ ‘ಪರ್ಪಸ್’ ಹುಡುಕುವುದಕ್ಕೆ ನಿಂತಾಗ ಈ ಜೀವನದಾಚೆಗೂ ನಮ್ಮ ಪ್ರಯಾಣವಿದೆ ಎಂಬ ತತ್ತ್ವಜ್ಞಾನ, ಆ ಪ್ರಯಾಣ ಹಸನಾಗಿರಬೇಕಾದರೆ ಈಗಿನ ಯಾನದಲ್ಲಿ ಮೆರೆಯಬೇಕಾದ ಧರ್ಮಪ್ರಜ್ಞೆ ಇವೆಲ್ಲವೂ ಮತ್ತಷ್ಟು ಗಟ್ಟಿಯಾಗುತ್ತವಾದ್ದರಿಂದ ಇನ್ನೆರಡು ದಶಕಗಳ ನಂತರದ ಶಿಕ್ಷಣ, ಕಥನಗಾರಿಕೆ, ಚಲನಚಿತ್ರಗಳು, ಪುಸ್ತಕಗಳು, ಪಾಡ್ಕಾಸ್ಟ್ ಗಳು ಇಲ್ಲೆಲ್ಲ ಈ ಆಯಾಮಗಳನ್ನು ಕಟ್ಟಿಕೊಡುವವರಿಗೆ ಜಾಗತಿಕ ಬೇಡಿಕೆ ಇರಲಿದೆ. ಈ ಕ್ಷಣಕ್ಕೆ ಸಿಲ್ಲಿ ಎನಿಸಬಹುದಾದರೂ, ಮಕ್ಕಳಿಗೆ ಪ್ರತಿರಾತ್ರಿ ಪುರಾಣ-ಮಹಾಕಾವ್ಯಗಳ ಕತೆಗಳನ್ನು ಆಕರ್ಷಕವಾಗಿ ಹೇಳುವುದೇ ಒಂದು ಉದ್ಯೋಗವಾದರೂ ಆದೀತು! ಆದರೆ, ಇದನ್ನು ಭಾರತೀಯರೇ ಬಳಸಿಕೊಳ್ಳುತ್ತಾರೆ ಎನ್ನಲಾಗದು, ಪೂರ್ವದ ಫಿಲಾಸಫಿಗಳನ್ನು ಅಂತರಂಗಕ್ಕಿಳಿಸಿಕೊಂಡು ಅಲ್ಲಿನವರೇ ಮುಂಚೂಣಿಗೆ ಬರುವ ಸಾಧ್ಯತೆಯೂ ಇದೆ. 

ಈ ಎಲ್ಲ ಸಾಧ್ಯತೆಗಳಲ್ಲಿ ತಾಂತ್ರಿಕತೆ-ಬುದ್ಧಿವಂತಿಕೆಗಳ ಪಾತ್ರವಿದೆ. ಆದರೆ ಮೂಲವಾಗಿ ಬೇಕಿರುವುದು ಇಲ್ಲೆಲ್ಲ ಇಮೋಷನಲ್ ಇಂಟಲಿಜೆನ್ಸ್. ಇದಕ್ಕೆ ಸಮಾನಾಂತರವಾಗಿ ತಾಂತ್ರಿಕ ಬುದ್ಧಿಮತ್ತೆಯೇ ಪ್ರಮುಖವೆನಿಸುವ ಬಯೊ ಟೆಕ್, ಜೀನ್ ಎಡಿಟಿಂಗ್, ಕ್ವಾಂಟಂ ಕಂಪ್ಯೂಟಿಂಗ್, ಗ್ರೀನ್ ಟೆಕ್ನಾಲಜಿ, ಮತ್ತು ಇವೆಲ್ಲದರ ಸುತ್ತಲಿನ ಹೊಸ ಫೈನಾನ್ಸಿಂಗ್ ಮಾದರಿಗಳು ಇವೆಲ್ಲವಕ್ಕೂ ಭಾರತೀಯ ಪ್ರತಿಭೆಗಳಿಗೆ ಅದಾಗಲೇ ಬೇಡಿಕೆ ಇದೆ. ಆದರೆ ಈ ಉದ್ಯೋಗವಲಯಗಳು ಆಯ್ದ ಅತಿಚಾಣಾಕ್ಷ್ಯ ಭಾರತೀಯರಿಗೆ ಮಾತ್ರವೇ ಊಹಿಸಲಾಗದ ಬೆಲೆಕೊಟ್ಟು ಬರಸೆಳೆದುಕೊಳ್ಳುತ್ತವೆಯಾದ್ದರಿಂದ, ‘ಕೇರ್ ಇಂಡಸ್ಟ್ರಿ’ ರೀತಿಯಲ್ಲಿ ವ್ಯಾಪಕ ಸಂಖ್ಯೆಯ ಉದ್ಯೋಗಗಳನ್ನು ಸೃಷ್ಟಿಸುವುದು ಅನುಮಾನ. 

file pic
ರಿಲಾಯನ್ಸ್ ಬೃಹತ್ ಉದ್ಯೋಗ ಕಡಿತ: ನಾವು ತಿಳಿದಿರಲೇಬೇಕಾದ ನೌಕರಿ ಭವಿಷ್ಯ! (ತೆರೆದ ಕಿಟಕಿ)

ಇಂಥ ಸಾಧ್ಯತೆಗಳನ್ನು ವಿಶ್ಲೇಷಿಸಿಕೊಳ್ಳುವ ಭಾರತೀಯ ಸಮಾಜದ ಒಂದು ವರ್ಗ ಮುಂದಿನ ದಶಕಗಳಲ್ಲಿ ಜಗತ್ತಿನ ಅರ್ಥ ವ್ಯವಸ್ಥೆಯಲ್ಲಿ ಬಹುಮುಖ್ಯ ಪಾತ್ರ ವಹಿಸಲಿಕ್ಕಿದೆ. ಈ ಪೈಕಿ ಕೆಲವರು ಭಾರತದಲ್ಲಿದ್ದುಕೊಂಡೇ ಕೆಲವು ಅವಕಾಶಗಳನ್ನು ದುಡಿಸಿಕೊಳ್ಳಲಿದ್ದಾರೆ. 

ಕಹಿ ವಾಸ್ತವವೆನಿಸುವ ಇನ್ನೊಂದು ಸಾಧ್ಯತೆ ಏನೆಂದರೆ, ಒಂದು ಸಣ್ಣ ಶೇಕಡಾದ ಭಾರತೀಯರು ಈ ಎಲ್ಲ ಸಾಧ್ಯತೆಗಳಿಗೆ ಮುಖಾಮುಖಿಯಾದರೆ ಉಳಿದ ಮುಕ್ಕಾಲು ಪಾಲು ಜನಸಂಖ್ಯೆ ಮಾತ್ರ ಹೀಗೆ ದಾರಿ ಹುಡುಕಿಕೊಂಡವರನ್ನು ದ್ವೇಷಿಸಿ ಅಸೂಯೆಪಡುತ್ತ, ಸೋಷಿಯಲಿಸ್ಟ್ ಆಡಳಿತ ಮಾದರಿಯೇ ತಮ್ಮನ್ನು ನೋಡಿಕೊಳ್ಳಬೇಕು ಎಂದು ಸರ್ಕಾರಗಳನ್ನು ಒತ್ತಾಯಿಸಿ ತಮ್ಮ ಮತಪ್ರಾಬಲ್ಯದ ಮೂಲಕ ವ್ಯವಸ್ಥೆಯನ್ನು ಮಣಿಸುತ್ತ, ಇದೇ ನೆಲದಲ್ಲಿದ್ದುಕೊಂಡು ಏನಾದರೂ ಮಾಡಬೇಕೆಂಬ ಪ್ರಯತ್ನದಲ್ಲಿರುವ ಸಜ್ಜನರನ್ನೆಲ್ಲ ಅವಮಾನಿಸುವ ತನ್ನ ವರ್ತಮಾನದ ಜಾಯಮಾನವನ್ನು ಮುಂದುವರಿಸಿಕೊಂಡಿರುತ್ತದೇನೋ…

- ಚೈತನ್ಯ ಹೆಗಡೆ

cchegde@gmail.com

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com