ರಿಲಾಯನ್ಸ್ ಬೃಹತ್ ಉದ್ಯೋಗ ಕಡಿತ: ನಾವು ತಿಳಿದಿರಲೇಬೇಕಾದ ನೌಕರಿ ಭವಿಷ್ಯ! (ತೆರೆದ ಕಿಟಕಿ)

ಅದಾಗಲೇ ಉದ್ಯೋಗ ಮಾರುಕಟ್ಟೆಯಲ್ಲಿ ಇರುವವರು ಕೆಲವೊಮ್ಮೆ ತಮ್ಮ ಕೆಲಸದ ರೀತಿನೀತಿ ಬದಲಾಯಿಸಿಕೊಂಡು ಪ್ರಸ್ತುತರಾಗಬೇಕಾಗುತ್ತದೆ, ಮತ್ತೆ ಕೆಲವೊಮ್ಮೆ ತಮ್ಮ ಕಾರ್ಯಕ್ಷೇತ್ರವನ್ನೇ ಬದಲಿಸಬೇಕಾಗುತ್ತದೆ.
file pic
ಉದ್ಯೋಗ ಕಡಿತ, ರಿಲಾಯನ್ಸ್ ಮಾಲಿಕ ಮುಖೇಶ್ ಅಂಬಾನಿ (ಸಾಂಕೇತಿಕ ಚಿತ್ರ)online desk
Updated on

ಕೆಲ ವಾರಗಳ ಹಿಂದೆ ಉದ್ಯೋಗನಷ್ಟದ ಕುರಿತಾದ ಸುದ್ದಿಯೊಂದು ಹಲವು ಆಯಾಮಗಳ ಚರ್ಚೆಗೆ ಕಾರಣವಾಗಿತ್ತು. ದೇಶದ ದೈತ್ಯ ಉದ್ಯಮ ಸಮೂಹ ರಿಲಾಯನ್ಸ್ ಬರೋಬ್ಬರಿ 42,000 ನೌಕರರನ್ನು ಉದ್ಯೋಗದಿಂದ ತೆಗೆದುಹಾಕಿದೆ ಎಂಬುದೇ ಆ ಸುದ್ದಿ. ಶಾರ್ಕ್ ಟ್ಯಾಂಕ್ ಕಾರ್ಯಕ್ರಮದ ಮೂಲಕ ಜನಪ್ರಿಯರಾಗಿರುವ ಉದ್ಯಮಿ ಅನುಪಮ್ ಮಿತ್ತಲ್ ಅವರು ಈ ವರದಿಯನ್ನು ಉಲ್ಲೇಖಿಸುತ್ತ ಎಕ್ಸ್ ತಾಣದಲ್ಲಿ ತಮ್ಮ ಆತಂಕ ಹೊರಹಾಕಿದ್ದರು. “ಭಾರತವು ವಾರ್ಷಿಕವಾಗಿ 80 ಲಕ್ಷದಿಂದ 1 ಕೋಟಿವರೆಗೆ ಉದ್ಯೋಗ ಸೃಷ್ಟಿ ಮಾಡಬೇಕಿರುವ ಅಗತ್ಯವಿರುವಾಗ, ರಿಲಾಯನ್ಸ್ ಥರದ ಪ್ರಮುಖ ಕಂಪನಿಯಿಂದ ಹೊರಬೀಳುತ್ತಿರುವ ಸುದ್ದಿ ಪರಿಸ್ಥಿತಿ ಹದಗೆಡುತ್ತಿರುವುದನ್ನು ಸೂಚಿಸುವಂತಿದೆ” ಎಂಬುದವರ ಅಭಿಪ್ರಾಯವಾಗಿತ್ತು. 

ಇದೇ ಸುದ್ದಿಯ ಬೆಂಬತ್ತಿ ಹಲವರು ಹಲ ಬಗೆಯಲ್ಲಿ ವಿಶ್ಲೇಷಿಸಿದರು. ಭಾರತದ ಅರ್ಥವ್ಯವಸ್ಥೆಯಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನು ಇದು ಸಾರುತ್ತಿದೆ ಎಂದು ಕೆಲವರು ಹೇಳಿದರೆ, ಸಂಪತ್ತು ಏಕವ್ಯಕ್ತಿಯಲ್ಲಿ ಕೇಂದ್ರೀಕೃತವಾದಾಗ ಏನಾಗುತ್ತದೆ ಎಂಬುದಕ್ಕೆ ಇದು ಉದಾಹರಣೆ ಎಂದು ಮುಕೇಶ್ ಅಂಬಾನಿ ವಿರುದ್ಧ ಹಲವರು ಸಾಮಾಜಿಕ ಅಭಿವ್ಯಕ್ತಿಯ ತಾಣಗಳಲ್ಲಿ ಸಿಟ್ಟು ತೋರಿದರು. ಕಾರ್ಪೋರೇಟ್ ಕಂಪನಿಯೊಂದು ದೇಶದ ಮುಂಚೂಣಿ ಯೋಜನೆ-ವ್ಯವಹಾರಗಳಲ್ಲೆಲ್ಲ ತನ್ನ ಏಕಸ್ವಾಮ್ಯ ಸ್ಥಾಪಿಸಿಕೊಂಡಿದೆ ಎಂದಾದಾಗ ಅದು ಉದ್ಯೋಗಸೃಷ್ಟಿಯ ಮೂಲಕ ಆ ಸಂಪತ್ತಿನ ಹಂಚಿಕೆಗೂ ಕಾರಣವಾಗಬೇಕಲ್ಲದೇ ಬೆರಳೆಣಿಕೆ ಮಂದಿಯನ್ನಷ್ಟೇ ಶ್ರೀಮಂತರನ್ನಾಗಿಸುವುದಲ್ಲ ಎಂಬ ವಾದದಲ್ಲಿ ಹುರುಳಿಲ್ಲದೇ ಇಲ್ಲ. 

ಉದ್ಯೋಗ ನಷ್ಟವೆಂಬ ವಾಸ್ತವ

ರಿಲಾಯನ್ಸ್’ಗೆ ಹಾಗೂ ಮಾರುಕಟ್ಟೆ ಆರ್ಥಿಕತೆ ಹೆಸರಲ್ಲಿ ಇಂಥದೊಂದು ಉದಾರ ವ್ಯವಸ್ಥೆ ನಿರ್ಮಿಸಿರುವ ಆಡಳಿತ ವ್ಯವಸ್ಥೆಗೆ ಕಠಿಣ ಪ್ರಶ್ನೆಗಳನ್ನು ಕೇಳುವುದರಲ್ಲಿ ತಪ್ಪಿಲ್ಲ. ಆದರೆ, ಇದರಾಚೆಗೆ ಉದ್ಯೋಗ ನಷ್ಟ ಹಾಗೂ ಉದ್ಯೋಗ ಪರಿವರ್ತನೆಗಳೆಂಬ ಅಂಶಗಳು ಜಾಗತಿಕ ಉದ್ಯೋಗ ಮಾರುಕಟ್ಟೆಯ ವಾಸ್ತವಗಳಾಗುತ್ತಿವೆ. ಜನರೇಟಿವ್ ಎಐ ಎನ್ನುವುದು ವೈಟ್ ಕಾಲರ್ ಉದ್ಯೋಗಗಳೆಂದು ಪರಿಗಣಿತವಾಗಿರುವ ಕಚೇರಿಯೊಳಗಿನ ಕೆಲಸಗಳಲ್ಲಿ ಭಾರಿ ಪರಿವರ್ತನೆ ತಂದರೆ, ಅಟೊಮೇಷನ್ ಅರ್ಥಾತ್  ಯಾಂತ್ರಿಕರಣ ಎಂಬುದು ಬ್ಲೂ ಕಾಲರ್ ಎಂದು ಪರಿಗಣಿತವಾಗಿರುವ ದೈಹಿಕ ಶ್ರಮದ ಉದ್ಯೋಗಗಳಲ್ಲೂ ಭಾರಿಮಟ್ಟದ ಪರಿವರ್ತನೆ ತರುತ್ತಿದೆ.

ಅದಾಗಲೇ ಉದ್ಯೋಗ ಮಾರುಕಟ್ಟೆಯಲ್ಲಿ ಇರುವವರು ಕೆಲವೊಮ್ಮೆ ತಮ್ಮ ಕೆಲಸದ ರೀತಿನೀತಿ ಬದಲಾಯಿಸಿಕೊಂಡು ಪ್ರಸ್ತುತರಾಗಬೇಕಾಗುತ್ತದೆ, ಮತ್ತೆ ಕೆಲವೊಮ್ಮೆ ತಮ್ಮ ಕಾರ್ಯಕ್ಷೇತ್ರವನ್ನೇ ಬದಲಿಸಬೇಕಾಗುತ್ತದೆ. ಸಾಮಾನ್ಯರಿಗೆ ಇದು ಮಿಡ್ ಲೈಫ್ ಕ್ರೈಸಿಸ್. ಏಕೆಂದರೆ ತಮ್ಮನ್ನು ತಾವು ಮರುಕಲಿಕೆಗೆ ಒಡ್ಡಿಕೊಳ್ಳುವುದು ಹೊರಗಿನಿಂದ ನೋಡುವುದಕ್ಕೆ ಸರಳ ಎನಿಸಿದರೂ ತುಂಬ ಯಾತನಾಮಯ ಪ್ರಕ್ರಿಯೆ! ಈ ನೋವಿಗೆ ಒಡ್ಡಿಕೊಳ್ಳುವವರು ಮತ್ತೆ ಹೊಸದಾರಿ ಕಂಡುಕೊಳ್ಳುತ್ತಾರಾದರೂ ಹಾಗಲ್ಲದಿರುವವರಿಗೆ ಉದ್ಯೋಗ ಉಳಿಸಿಕೊಳ್ಳುವ ಸಾಧ್ಯತೆಗಳು ಕಡಿಮೆ ಇವೆ. 

file pic
ಚಂದ್ರನ ಗುಹೆ, ಮಂಗಳದ ಗರ್ಭಜಲ, ನಕ್ಷತ್ರ ಸ್ಫೋಟ, ಹಾಗೂ ಕುರುಡಾಗಲಿರುವ ಎಕ್ಸ್ ರೇ ಕಣ್ಣು! (ತೆರೆದ ಕಿಟಕಿ)

ರಿಲಾಯನ್ಸ್ ವಿಷಯದಲ್ಲಾಗಿರುವ ಉದ್ಯೋಗ ನಷ್ಟವನ್ನೇ ವಿಶ್ಲೇಷಿಸುವುದಾದರೆ, ಅದರ ಶೇಕಡ 60 ಪಾಲು ಉದ್ಯೋಗಗಳು ಸೃಷ್ಟಿಯಾಗಿರುವುದೇ ರಿಟೇಲ್ ವ್ಯವಹಾರದಲ್ಲಿ. ಈಗ ನಲ್ವತ್ತು ಸಾವಿರ ಚಿಲ್ಲರೆ ಉದ್ಯೋಗನಷ್ಟವಾಗಿರುವುದೂ ಬಹುತೇಕ ಅದೇ ವಿಭಾಗದಲ್ಲಿ. ದೇಶಾದ್ಯಂತ ಇರುವ ರಿಲಾಯನ್ಸ್ ಚಿಲ್ಲರೆ ಮಳಿಗೆಗಳ ಸಂಖ್ಯೆ 18,836. 2023ರ ವಿತ್ತೀಯ ವರ್ಷದಲ್ಲಿ 3,300 ಹೊಸ ಮಳಿಗೆಗಳನ್ನು ತೆರೆದಿದ್ದ ರಿಲಾಯನ್ಸ್, 2024ರ ವರ್ಷದಲ್ಲಿ 800 ಚಿಲ್ಲರೆ ಮಳಿಗೆಗಳನ್ನಷ್ಟೇ ಸೇರಿಸಿಕೊಂಡಿದೆ ಎಂಬುದರಲ್ಲೇ ಈ ವಿಭಾಗದಲ್ಲಿ ಶುರುವಾಗಿರುವ ಮಂದಗತಿ ತಿಳಿದುಬರುತ್ತದೆ.

ಒಟ್ಟಾರೆ ಮಳಿಗೆ ನಿರ್ವಹಿಸುವ ಸ್ಟೋರ್ ಮ್ಯಾನೇಜರ್; ಎಲೆಕ್ಟ್ರಾನಿಕ್ಸ್, ಬಟ್ಟೆ ಹೀಗೆ ಆಯಾ ವಿಭಾಗ ನಿರ್ವಹಿಸುವ ಡಿಪಾರ್ಟಮೆಂಟ್ ಮ್ಯಾನೇಜರ್; ಸ್ಟಾಕ್ ನಿರ್ವಹಿಸುವ ಸ್ಟಾಕ್ ಮ್ಯಾನೇಜರ್, ಕ್ಯಾಶಿಯರ್ ಹೀಗೆಲ್ಲ ಹಲವು ಬಗೆಯ ಉದ್ಯೋಗಗಳು ಚಿಲ್ಲರೆ ಮಳಿಗೆಗಳಲ್ಲಿರುತ್ತವಷ್ಟೆ. ದಾಸ್ತಾನುಗಳನ್ನು ನಿರ್ವಹಿಸುವುದು, ಕ್ಯಾಶ್ ಸಂಗ್ರಹಣೆ ಇಲ್ಲೆಲ್ಲ ತಂತ್ರಜ್ಞಾನ ಬಹಳವೇ ಅಭಿವೃದ್ಧಿ ಹೊಂದಿರುವುದರಿಂದ ಅಲ್ಲಿ ಬೇಕಿರುವ ಮಾನವ ಸಂಪನ್ಮೂಲ ಕಡಿಮೆ. ಎಲ್ಲವನ್ನೂ ತಂತ್ರಜ್ಞಾನವೇ ಮಾಡಲಾರದು ಎಂಬುದು ಹೌದಾದರೂ ಐದು ಜನ ಬೇಕಿರುವಲ್ಲಿ ಇಬ್ಬರು ಸಾಕು ಎಂಬಂತಹ ಸ್ಥಿತಿಯನ್ನಂತೂ ಅಟೊಮೇಶನ್ ತಂದಿಟ್ಟಿದೆ. ಭವಿಷ್ಯದಲ್ಲಂತೂ ಟಚ್ ಸ್ಕ್ರೀನ್ ಎದುರು ನಿಂತು ನಾವು ಖರೀದಿಸಿದ ವಸ್ತುಗಳನ್ನು ನಾವೇ ದಾಖಲಿಸಿ ಹಣ ಪಾವತಿಸಿದ ನಂತರವಷ್ಟೇ ಗೇಟ್ ತೆರೆದುಕೊಳ್ಳುವ ತಂತ್ರಜ್ಞಾನ ವ್ಯವಸ್ಥೆ ಹೆಚ್ಚು ಹೆಚ್ಚಾಗಿ ಅನುಷ್ಠಾನಕ್ಕೆ ಬರುವ ಸಾಧ್ಯತೆ ಇರುವುದರಿಂದ ಅಷ್ಟರಮಟ್ಟಿಗೆ ಅಲ್ಲಿನ ಮಾನವ ಉದ್ಯೋಗಗಳನ್ನು ಅದು ಇಲ್ಲವಾಗಿಸುತ್ತದೆ. 

ದುಡಿಮೆಯ ಅವಕಾಶಗಳೇ ಕ್ಷೀಣವಾಗುತ್ತವೆಯೇ?

ಅಂಥದ್ದೇನಿಲ್ಲ. ಆದರೆ ಉದ್ಯೋಗ ಪರಿವರ್ತನೆ ಎಂಬ ಪರಿಶ್ರಮ ಬೇಡುವ ಪ್ರಕ್ರಿಯೆಯಲ್ಲಿ ಹೆಚ್ಚಿನವರು ತಮ್ಮನ್ನು ಒಡ್ಡಿಕೊಳ್ಳಬೇಕಾಗುತ್ತದೆ. ಕೊರೋನಾ ಕಾಲಘಟ್ಟವು ಆಧುನಿಕ ಉದ್ಯೋಗ ಮಾರುಕಟ್ಟೆಯ ಬದಲಾವಣೆಯಲ್ಲಿ ಮುಖ್ಯ ಮೈಲುಗಲ್ಲು. ಏಕೆಂದರೆ ಡಿಜಿಟಲೀಕರಣ, ತಂತ್ರಜ್ಞಾನ ಬೆಳವಣಿಗೆಗಳು ಅದಾಗಲೇ ಆಗಿದ್ದರೂ ಅವನ್ನು ಇಡಿ ಇಡಿಯಾಗಿ ತನ್ನದಾಗಿಸಿಕೊಳ್ಳುವುದಕ್ಕೆ ಉದ್ಯಮ ಪ್ರಪಂಚವು ಸಿದ್ಧವಾಗಿರಲಿಲ್ಲ. ಉದಾಹರಣೆಗೆ, ಸಾಧ್ಯವಾದ್ದಲ್ಲೆಲ್ಲ ಕಚೇರಿ ಕೆಲಸವನ್ನು ಮನೆಯಿಂದಲೇ ಮಾಡುತ್ತೇವೆ ಎನ್ನುವುದು ಕೋವಿಡ್ ಗೆ ಮೊದಲು ಯಾವ ಬಾಸ್ ಸಹ ಒಪ್ಪದ ಸಂಗತಿಯೇ ಆಗಿತ್ತು. ಕೋವಿಡ್ ನಲ್ಲಿ ಮನೆಯಿಂದ ಕೆಲಸ ಎಂಬುದೇ ವ್ಯಾಪಕವಾಗಿ ನಡೆದು, ಆ ಕಾಲ ಸರಿದ ಮೂರು ವರ್ಷಗಳ ನಂತರ ಅದು ಹೈಬ್ರಿಡ್ ಮಾದರಿಗೆ, ಅಂದರೆ ವಾರದ ಕೆಲವು ದಿನ ಕಚೇರಿಯಲ್ಲಿ ಹಾಗೂ ಉಳಿದಂತೆ ಮನೆಯಿಂದಲೇ ಕೆಲಸ ಎಂಬ ಮಾದರಿಗೆ ಒಗ್ಗಿಕೊಂಡಿದೆ. ಇದು ವೈಟ್ ಕಾಲರ್ ಜಾಬಿನ ವಿಚಾರದಲ್ಲಾದರೆ ಬ್ಲೂ ಕಾಲರ್ ಎಂದು ಕರೆಯಬಹುದಾದ ಕೆಲಸಗಳಲ್ಲಿ ಸಹ ಡಿಜಟಲೀಕರಣ, ಸಿಸಿಟಿವಿ, ಆ್ಯಪ್ ಆಧರಿತ ಮಾರಾಟ ಇವೆಲ್ಲವೂ ಹಲವು ಉದ್ಯೋಗಗಳನ್ನು ಅಲ್ಲಾಡಿಸಿವೆ.

ಇದಕ್ಕೂ ಮೊದಲಿನ ಉದ್ಯೋಗ ಚರಿತೆಯನ್ನೂ ಎರಡೇ ಸಾಲಿನಲ್ಲಿ ಗಮನಿಸುವುದಾದರೆ- ಸುಮಾರು 1760ನೇ ಇಸ್ವಿಯಿಂದಾಚೆಗೆ ಯಂತ್ರಗಳನ್ನು ಉಪಯೋಗಿಸಿಕೊಂಡು ವಸ್ತುಗಳ ಉತ್ಪಾದನೆ ಎನ್ನುವುದು ಚುರುಕುಗೊಂಡು ದೊಡ್ಡಮಟ್ಟದ ಕಾರ್ಖಾನೆ ಉದ್ಯೋಗಗಳನ್ನು ಸೃಷ್ಟಿಸಿತು. 1960-70ರಲ್ಲಿ ಅರಳಿಕೊಂಡ ಮಾಹಿತಿ ತಂತ್ರಜ್ಞಾನ ಕ್ಷೇತ್ರವು 1990ರ ದಶಕದಲ್ಲಿ ದೊಡ್ಡಮಟ್ಟದ ಉದ್ಯೋಗದಾತನಾಗಿ ಹೊರಹೊಮ್ಮಿ ಆವರೆಗೆ ಉತ್ಪಾದನಾ ವಲಯವೇ ಉದ್ಯೋಗದ ಹಾದಿ ಎಂಬಂತಿದ್ದ ಜನಸಮೂಹ ತಮ್ಮ ಕೌಶಲಕ್ಕೆ ಸಾಣೆ ಹಿಡಿದು ವೈಟ್ ಕಾಲರ್ ಉದ್ಯೋಗದತ್ತ ಆಕರ್ಷಣೆ-ಆಕಾಂಕ್ಷೆಗಳನ್ನು ಬೆಳೆಸಿಕೊಂಡಿತು. 

ಜಾಗತಿಕ ಉದ್ಯೋಗ ಪರಿವರ್ತನೆ ಸವಾಲು
ಕೊರೋನೋತ್ತರ ಕಾಲ ಮತ್ತು ಕೃತಕ ಬುದ್ಧಿಮತ್ತೆಯ ಆರಂಭಕಾಲ ಇದೀಗ ಮತ್ತೊಂದು ಜಾಗತಿಕ ಉದ್ಯೋಗ ಪರಿವರ್ತನೆಯ ಸವಾಲನ್ನು ಎದುರಿಗೆ ತಂದು ನಿಲ್ಲಿಸಿದೆ. 

ಮತ್ತದೇ ಪ್ರಶ್ನೆ… ಉದ್ಯೋಗದ ಸಾಧ್ಯತೆಗಳೆಲ್ಲ ಕ್ಷೀಣವಾಗಿಬಿಟ್ಟವೇ? 

ಭಾರತವೂ ಸೇರಿದಂತೆ ಪ್ರಮುಖ ಆರ್ಥಿಕ ಶಕ್ತಿಗಳೆನಿಸಿಕೊಂಡಿರುವ 8 ರಾಷ್ಟ್ರಗಳ ಉದ್ಯೋಗ ಮಾರುಕಟ್ಟೆಯನ್ನು ಅಭ್ಯಸಿಸಿ ಮೆಕಿನ್ಸಿ ಎಂಬ ಜಾಗತಿಕ ಹಣಕಾಸು ಸಂಸ್ಥೆ 2023ರಲ್ಲಿ ‘ದ ಫ್ಯೂಚರ್ ಆಫ್ ವರ್ಕ್’ ಎಂಬ ವರದಿ ಹೊರತಂದಿತ್ತು. ಅಲ್ಲಿನ ಉದ್ಯೋಗ ಭವಿಷ್ಯದ ಕೆಲ ಅಂಶಗಳು ಹೀಗಿವೆ.

  • ಇ ಕಾಮರ್ಸ್ ವಿಭಾಗದಲ್ಲಾಗುತ್ತಿರುವ ಬೆಳವಣಿಗೆಗಳು ದಾಸ್ತಾನು ಮಳಿಗೆಗಳನ್ನು ನಿರ್ವಹಿಸುವ ಕಡೆಗಳಲ್ಲಿ ಕೆಲಸಗಾರರಿಗೆ ದೊಡ್ಡಮಟ್ಟದಲ್ಲಿ ಅವಕಾಶ ಮಾಡಿಕೊಡುತ್ತವೆ. ಮನೆಬಾಗಿಲಿಗೆ ವಸ್ತುಗಳನ್ನು ತರಿಸಿಕೊಳ್ಳುವವರ ಬೇಡಿಕೆಗಳನ್ನು ಈಡೇರಿಸುವಲ್ಲಿ ಡೆಲಿವರಿ ವ್ಯಕ್ತಿಗಳ ಉದ್ಯೋಗಳು ಪ್ರಗತಿಯಲ್ಲಿರುತ್ತವೆ. ಹಸಿರು ತಂತ್ರಜ್ಞಾನದ ಕಡೆ ಜಗತ್ತು ಹೆಚ್ಚು ವಾಲಿಕೊಳ್ಳುವುದರಿಂದ ಗಾಳಿಯಂತ್ರ ನಿರ್ವಹಿಸುವಂಥ ತಾಂತ್ರಿಕ ಪರಿಣತ ಉದ್ಯೋಗಾವಕಾಶಗಳು ಹೆಚ್ಚುತ್ತವೆ. ಪ್ರಮುಖ ಅರ್ಥವ್ಯವಸ್ಥೆಗಳಾಗಿರುವ ಹೆಚ್ಚಿನ ದೇಶಗಳಲ್ಲಿ ಅಲ್ಲಿನ ಜನಸಂಖ್ಯೆ ವಯೋವೃದ್ಧರಾಗುವುದರಿಂದ ದಾದಿಗಳು ಮತ್ತು ಆರೋಗ್ಯ ಸೇವೆ ವಿಭಾಗದ ಉದ್ಯೋಗಗಳಲ್ಲಿ ವ್ಯಾಪಕ ಅವಕಾಶಗಳು ತೆರೆದುಕೊಳ್ಳುತ್ತವೆ. ಶಿಕ್ಷಕರು ಮತ್ತು ಕೆಲವು ವಿದ್ಯೆಗಳ ಕಲಿಕಾ ಸೂಚಕರ ಉದ್ಯೋಗಗಳಿಗೂ ಮುಂದಿನ ಕೆಲವು ದಶಕಗಳವರೆಗೂ ಬೇಡಿಕೆ ಇದೆ. 

  • ಅತಿ ಕೌಶಲದ ಉದ್ಯೋಗಗಳಲ್ಲಿ ಪ್ರಗತಿ ಇದೆ. ಉದಾಹರಣೆಗೆ, ಆರೋಗ್ಯ ಸೇವೆ, ಎಂಜಿನಿಯರಿಂಗ್, ಗಣಿತ-ತಂತ್ರಜ್ಞಾನ ಅವಲಂಬಿಸಿದ ಕ್ಷೇತ್ರಗಳು

  • ಕಿರಾಣಿ ಅಂಗಡಿ, ಗುಮಾಸ್ತ ಕೆಲಸ ಇಂಥವನ್ನೆಲ್ಲ ರೊಬಾಟಿಕ್ ಮತ್ತು ತಂತ್ರಜ್ಞಾನ ಪರಿಕರಗಳೇ ನಿರ್ವಹಿಸಿಬಿಡುತ್ತಾವಾದ್ದರಿಂದ ಅಲ್ಲೆಲ್ಲ ಉದ್ಯೋಗನಷ್ಟವಾಗುತ್ತದೆ.

ಹೈಬ್ರಿಡ್ ಮಾದರಿಯ ಕೆಲಸ ಮಾಮೂಲಿಯಾದೀತೇ?

ಕಚೇರಿಯಲ್ಲಿ ಕುಳಿತು ಮಾಡುವ ಕೆಲಸಗಳಿಗೆ ಸಂಬಂಧಿಸಿದಂತೆ ಹೈಬ್ರಿಡ್ ಮಾದರಿ ಪ್ರಾಮುಖ್ಯ ಪಡೆಯಲಿರುವ ಹಾಗೂ ಹೈಟೆಕ್ ತಂತ್ರಜ್ಞಾನ ವಿಭಾಗಗಳಲ್ಲೂ ಗಿಗ್ ಮಾದರಿ ಅಂದರೆ, ಕೆಲವು ಪ್ರಾಜೆಕ್ಟಿಗೆ ಸಂಬಂಧಿಸಿದಂತೆ ತಮಗೆ ಬೇಕಾದ ಬೆಸ್ಟ್ ಪ್ರತಿಭೆಗಳನ್ನು ಆ ಅವಧಿಯಮಟ್ಟಿಗೆ ಅತ್ಯುತ್ತಮ ಸಂಭಾವನೆ ನೀಡಿ ಕೆಲಸಕ್ಕೆ ತೆಗೆದುಕೊಳ್ಳುವ ಟ್ರೆಂಡುಗಳು ತೆರೆದುಕೊಳ್ಳಲಿವೆ. ಈ ಬಗ್ಗೆ ಬಹಳ ಉತ್ಸುಕತೆಯಿಂದ ಮಾತನಾಡುವ ನವಲ್ ರವಿಕಾಂತ್ ಎಂಬ ವಿಶ್ವಮಾನ್ಯ ಹೂಡಿಕೆದಾರ ಇನ್ನೊಂದು ಭವಿಷ್ಯವನ್ನೂ ಹೇಳಿದ್ದಾರೆ. ಅದೆಂದರೆ, ಮುಂದಿನ ಬಿಲಿಯನ್ ಡಾಲರ್ ಸಂಪತ್ತು ಸೃಷ್ಟಿಗಳೆಲ್ಲ ನಾಲ್ಕೈದು ಮಂದಿ ಸೇರಿ ರೂಪಿಸಿದ ನವೋದ್ದಿಮೆಗಳಿಂದಲೇ ಬರುತ್ತವೆ ಹಾಗೂ ದೊಡ್ಡ ದೊಡ್ಡ ಕಾರ್ಪೋರೇಷನ್ನುಗಳಿಗೆ ಬದಲಾಗಿ ಇವೇ ಪ್ರತಿಭೆಗಳ ನೆಚ್ಚಿನ ಉದ್ಯೋಗತಾಣಗಳಾಗುತ್ತವೆ ಎನ್ನೋದು. 

ಒಂದು ಹಂತದಲ್ಲಿ ಬಹುತೇಕ ದೇಶಗಳು ಯುನಿವರ್ಸಲ್ ಬೇಸಿಕ್ ಇನ್ಕಂ ಮಾದರಿಯನ್ನು ತಮ್ಮದೇ ರೀತಿಯಲ್ಲಿ ಅನುಷ್ಠಾನಗೊಳಿಸುವ ಸಾಧ್ಯತೆ ಇದೆ. ಎಲ್ಲರಿಗೂ ಒಂದು ಹಂತದ ಆದಾಯವನ್ನು ಬ್ಯಾಂಕ್ ಖಾತೆಗೆ ಹಾಕಿಬಿಡುವ ಸಾರ್ವತ್ರಿಕ ಪದ್ಧತಿ ಅಲ್ಲದಿದ್ದರೂ ಆಯಾ ಜನಸಮೂಹಕ್ಕೆ ಸಾಮಾನ್ಯ ಬದುಕಿಗೆ ಬೇಕಾದ ಆದಾಯವೊಂದನ್ನು ತೆರಿಗೆ ಕಡಿತವೋ, ಸಬ್ಸಿಡಿಯೊ ಇನ್ಯಾವುದೋ ಮಾರ್ಗದ ಮೂಲಕ ಸರ್ಕಾರಗಳು ಪೂರೈಸಬೇಕಾಗುತ್ತದೆ. ಆಗ ದೊಡ್ಡದೊಂದು ಜನವರ್ಗವು ಉದ್ಯೋಗವನ್ನು ಹೊಟ್ಟೆಪಾಡಿಗೆ ಅಂತಲ್ಲದೇ ತಮ್ಮ ನಿಜ ಅಂತಃಸತ್ವದ ಅಭಿವ್ಯಕ್ತಿಗೆ ಮಾಧ್ಯಮವಾಗಿ ಬಳಸಿಕೊಳ್ಳುತ್ತದೆ. ಆ ಹಂತದಲ್ಲಿ ಈಗಿನ ವಿವರ್ಕ್, ಇಂಡಿಕ್ಯೂಬ್ ಇತ್ಯಾದಿ ಮಾದರಿಯ ಕೋ-ವರ್ಕಿಂಗ್ ತಾಣಗಳು ಮತ್ತಷ್ಟು ಪ್ರಾಮುಖ್ಯ ಪಡೆದುಕೊಳ್ಳುತ್ತವೆ. ಏಕೆಂದರೆ, ಯಾವುದೇ ಕಂಪನಿಗೆ ತನ್ನದೇ ಒಂದು ಕಚೇರಿ ಎಂದು ಸ್ಥಾಪಿಸಿಕೊಳ್ಳುವುದಕ್ಕಿಂತ ಎಂಜಿನಿಯರ್, ಡಿಸೈನ್ ಪರಿಣತ, ಲೆಕ್ಕಿಗ, ತಾರ್ಕಿಕ ಕಥಾನಕಗಳನ್ನು ಕಟ್ಟಬಲ್ಲ ಬರಹಗಾರ ಇಂಥ ಹತ್ತು ಹಲವು ಶಿಸ್ತುಗಳು ಕಲೆತುಕೊಂಡಿರುವ ಜಾಗದಲ್ಲಿ ತನ್ನ ಕೆಲಸಗಾರರನ್ನೂ ಇಡುವುದು ಲಾಭವೆಂದಾಗುತ್ತದೆ. 

file pic
ಬಾಂಗ್ಲಾದಿಂದ ಶೇಖ್ ಹಸೀನಾ ಹೊರಕ್ಕೆ: ಭಾರತೀಯರು ಗೋಳಾಡುವ ಅಗತ್ಯ ಇಲ್ಲ, ಏಕೆಂದರೆ… (ತೆರೆದ ಕಿಟಕಿ)

ಇಂಥ ಸಮೀಕರಣವನ್ನು ಪ್ರೇರೇಪಿಸುವ ಸನ್ನಿವೇಶ ಅದಾಗಲೇ ಹೇಗೆ ರೂಪುಗೊಂಡಿದೆ ಎಂಬುದನ್ನು ಗಮನಿಸೋಣ. ಸಾಂಪ್ರದಾಯಿಕ ಬ್ಯಾಂಕುಗಳು ಮೊನ್ನೆಯವರೆಗೆ ಹೇಗೆ ಕಾರ್ಯನಿರ್ವಹಿಸುತ್ತಿದ್ದವು ಗಮನಿಸಿ. ಅಲ್ಲಿಗೆ ಬೇಕಿದ್ದವರು ಲೆಕ್ಕಿಗರು ಮಾತ್ರ. ಡೆಪಾಸಿಟ್-ಸಾಲ ನೀಡುವಿಕೆಯ ಎರಡು ಅಂಶಗಳಲ್ಲಿ ಕೆಲಸ ಹಂಚಿತ್ತು. ಇವತ್ತಿಗೆ ಎಸ್ ಬಿಐ ಥರದ ಸಾಂಪ್ರದಾಯಿಕ ಬ್ಯಾಂಕುಗಳು ಸಹ ಇನ್ವೆಸ್ಟಮೆಂಟ್ ಬ್ಯಾಂಕ್ ರೀತಿಯಲ್ಲೇ ಕಾರ್ಯನಿರ್ವಹಿಸುವುದು ಅನಿವಾರ್ಯವಾಗಿದೆ. ಮುಂದುವರಿದು, ಇವತ್ತಿನ ವಿತ್ತೀಯ ಟೆಕ್ ಸಂಸ್ಥೆಗಳಾಗಿರುವ ಫೋನ್ ಪೇ, ಪೇಟಿಎಂ ಅಥವಾ ಇನ್ಯಾವುದನ್ನೇ ಆದರೂ ಅಲ್ಲಿಗೆ ಬೇಕಿರುವ ಪ್ರತಿಭೆಗಳ ಆಧಾರದಲ್ಲಿ ಗಮನಿಸಿ. ಲೆಕ್ಕದ ಶಿಸ್ತಿನವರು ಪ್ರಾಥಮಿಕವಾಗಿ ಬೇಕೆ ಬೇಕು, ಅಲ್ಲಿನ ಸಂಕೀರ್ಣತೆ ಸಹ ಹೆಚ್ಚು. ಇದಕ್ಕೆ ಮೀರಿ ಅವುಗಳ ವಿತ್ತೀಯ ಉತ್ಪನ್ನಗಳನ್ನು ಮಾರಬಲ್ಲ ಸೇಲ್ಸ್ ಕೌಶಲದವರು ಬೇಕು. ಅವುಗಳಿಗೆ ಜೀವಾಳವಾಗಿರುವ ಡಿಜಿಟಲ್ ಅವತಾರವನ್ನು ಗ್ರಾಹಕನನ್ನು ಸೆಳೆಯುವಂತೆ ಮತ್ತವನಿಗೆ ಸರಳವೆನಿಸುವಂತೆ ರೂಪಿಸುವ ಎಂಜಿನಿಯರುಗಳು ಅತಿಮುಖ್ಯವಾಗಿ ಬೇಕು, ಹೀಗೆ ಕಟ್ಟಿದ ಡಿಜಿಟಲ್ ಕೋಟೆಯನ್ನು ಕಾಪಿಡುವ ಸೈಬರ್ ಸೆಕ್ಯುರಿಟಿ ತಂತ್ರಜ್ಞರು ಬೇಕು. ಇಷ್ಟಾದರಾಯಿತೇ? ಈ ತಾಂತ್ರಿಕ ಉತ್ಪನ್ನಗಳನ್ನು ಜನರಿಗೆ ಅರ್ಥವಾಗುವ ಭಾಷೆಯಲ್ಲಿ ವಿವರಿಸುವ ಕಾಂಟೆಂಟ್ ಬರಹಗಾರರು, ಜಾಹೀರಾತು ಬರೆಯುವವರು, ವಿಡಿಯೊ-ಅಭಿನಯದವರು, ಆ ಸ್ಕ್ರಿಪ್ಟಿಗೆ ತಕ್ಕ ಸಂಗೀತ ಒದಗಿಸುವವರು ಹೀಗೆಲ್ಲ ಆರ್ಟ್ಸ್ ವಿಭಾಗಕ್ಕೆ ಸೇರಿದ ಹಲವು ಕೌಶಲಿಗರು ಬೇಕು. ಇಲ್ಲೆಲ್ಲ ಕೃತಕ ಬುದ್ಧಿಮತ್ತೆಯನ್ನು ಹಲವು ಬಗೆಯಲ್ಲಿ ಉಪಯೋಗಿಸಬಹುದಾದರೂ ಅದನ್ನು ಸೂಕ್ತವಾಗಿ ನಿರ್ದೇಶಿತಗೊಳಿಸುವುದಕ್ಕಾದರೂ ಈ ಎಲ್ಲ ವಿಭಾಗಗಳಲ್ಲಿ ಜನ ಬೇಕು. 

ಹಾಗೆಂದೇ ಈ ಎಲ್ಲ ಪ್ರತಿಭೆಗಳಿಗೆ ಸಲ್ಲುವ ಕೋವರ್ಕಿಂಗ್ ತಾಣಗಳು, ಅಲ್ಲಿ ಹುಟ್ಟಿಕೊಳ್ಳುವ ಪ್ರಾಜೆಕ್ಟ್ ಕೆಲಸಗಳು, ಕುಳಿತ ಕಡೆಯಿಂದಲೇ ಜಾಗತಿಕವಾಗಿ ಲಭ್ಯವಾಗುವ ಹಲವು ರೀಸರ್ಚ್ ಕೆಲಸಗಳು ಹೀಗೆಲ್ಲ ಉದ್ಯೋಗದ ಹರಹು ಹರಡಿಕೊಳ್ಳಬಲ್ಲದು. ಆದರೆ, ನಾನು ನಾಲ್ಕು ವರ್ಷದ ಹಿಂದೆ ಎಂಜಿನಿಯರಿಂಗನ್ನೋ, ಬಿಕಾಂ ಅನ್ನೋ, ಪಿಎಚ್ಡಿಯನ್ನೋ ಪಡೆದಿದ್ದೇನೆ; ನಾನು ಈ ಇಂಡಸ್ಟ್ರಿಯಲ್ಲಿ ಹತ್ತು ವರ್ಷಗಳಿಂದ ಇದ್ದೇನೆ ಎಂಬಂತಹ ಅಂಶಗಳನ್ನಷ್ಟೇ ಇಟ್ಟುಕೊಂಡು ಉದ್ಯೋಗ ಕಾಪಾಡಿಕೊಳ್ಳುವುದು ಕಷ್ಟ. ನಿರಂತರ ಕಲಿಕೆಯ ನೋವು-ನಲಿವುಗಳು ಉದ್ಯೋಗ ಜಗತ್ತಿನ ವಾಸ್ತವ.

- ಚೈತನ್ಯ ಹೆಗಡೆ

cchegde@gmail.com

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com