
ಬಾಂಗ್ಲಾದೇಶದಲ್ಲಾಗಿರುವ ವಿದ್ಯಮಾನಗಳ ಬಗ್ಗೆ ಅದಾಗಲೇ ಹಲವು ಸೀಳುನೋಟಗಳು ಬಂದಿದ್ದಾಗಿವೆ. ಬಹುತೇಕ ವಿಶ್ಲೇಷಣೆಗಳಲ್ಲಿ ಸಾರ್ವತ್ರಿಕವಾಗಿರುವ ಒಂದು ಧ್ವನಿ ಎಂದರೆ, ಹಸೀನಾರನ್ನು ದೇಶಭ್ರಷ್ಟವಾಗಿಸಿರುವ ಈ ವಿದ್ಯಮಾನವು ಭಾರತದ ಪಾಲಿಗೆ ದೊಡ್ಡ ಹಿನ್ನೆಡೆ ಅನ್ನೋದು. ಭಾರತಕ್ಕೆ ಬುದ್ಧಿ ಕಲಿಸಲೆಂದೇ ಅಮೆರಿಕ ಈ ವಿದ್ಯಮಾನವನ್ನು ಪ್ರಾಯೋಜಿಸಿದೆ ಎಂಬ ತರ್ಕಗಳೂ ಮುನ್ನೆಲೆಗೆ ಬಂದಿವೆ. ಕೆಲವು ವಿಶ್ಲೇಷಣೆಗಳು ಇದರಲ್ಲಿ ಚೀನಾ ನೆರಳನ್ನು ಕಂಡಿವೆ. ಬಾಂಗ್ಲಾದೇಶದ ವಿಚಾರದಲ್ಲಿ ಚೀನಾ-ಅಮೆರಿಕಗಳೆರಡರಿಂದಲೂ ಭಾರತಕ್ಕೆ ಪ್ರಹಾರವಾಗಿದೆ ಎಂಬ ವಾದವೂ ಇದೆ.
ಇವೆಲ್ಲವೂ ಸರಿ ಎನ್ನುವುದಕ್ಕೆ ಭಾಗಶಃ ಅಂಶಗಳು ಸಿಗುತ್ತವಾದರೂ ಇದು ಒಟ್ಟಾರೆಯಾಗಿ ಭಾರತಕೇಂದ್ರವನ್ನು ಮೀರಿದ ಜಾಗತಿಕ ಸೆಣೆಸಾಟ ಎಂಬಂಶವನ್ನು ಮನದಟ್ಟು ಮಾಡಿಸುವ ಹಲವು ಅಂಶಗಳು ಈ ವಿದ್ಯಮಾನದಲ್ಲಿವೆ. ಬಾಂಗ್ಲಾದೇಶದ ರಾಜಕಾರಣದಲ್ಲಿ ಶೇಖ್ ಹಸೀನಾ ಭಾರತಕ್ಕೆ ಇದ್ದಿದ್ದರಲ್ಲೇ ಒಂದು ಉತ್ತಮ ಆಯ್ಕೆ ಎಂಬುದು ನಿಜ.
1971ರಲ್ಲಿ ಹಸೀನಾ ಕುಟುಂಬವನ್ನು ಅವತ್ತಿನ ಪಾಕಿಸ್ತಾನ ಸೇನೆಯಿಂದ ಉಳಿಸಿದ್ದೇ ಭಾರತ. ಹೀಗಾಗಿ ಕೃತಜ್ಞತೆ-ಭಾವನಾತ್ಮಕತೆಗಳ ಆಧಾರದಲ್ಲಿ ಹಸೀನಾ ಆಡಳಿತವು ಭಾರತದೊಂದಿಗೆ ಹೆಚ್ಚಾಗಿ ಬೆಸಗೊಂಡಿತ್ತು ಎಂಬುದು ನಿಜ. ಹಸೀನಾ ಅವಧಿಯಲ್ಲಿ ಈ ಹಿಂದೆ ವಿಮೋಚನೆ ಸಂದರ್ಭದಲ್ಲಿ ಅಲ್ಲಿನ ಹಿಂದುಗಳ ಮೇಲೆ ಅತ್ಯಾಚಾರ ನಡೆಸಿದ ಕೆಲವು ಕಟ್ಟರವಾದಿಗಳು ಗಲ್ಲು ಕಂಡಿದ್ದರೆಂಬುದೂ ನಿಜ. ಹಾಗೆಂದು ಶೇಖ್ ಹಸೀನಾ ಭಾರತದ ಅಪ್ಪಟ ಸ್ನೇಹಿತೆ ಎಂಬ ಭಾವೋತ್ಕರ್ಷಕ್ಕೆ ಒಳಗಾಗುವುದಕ್ಕೆ ಮುಂಚೆ ಕೆಲವು ವಾಸ್ತವಗಳನ್ನು ಗಮನಿಸಬೇಕು.
ದಕ್ಷಿಣ ಏಷ್ಯ ಪ್ರಾಂತ್ಯದಲ್ಲಿ ಭಾರತದ ಹಿತಾಸಕ್ತಿಗಳಿಗೆ ಯಾವತ್ತೂ ಸವಾಲಾಗಿರುವ ಚೀನಾವನ್ನು ಹಸೀನಾ ಆಡಳಿತವು ವಿಪರೀತವಾಗಿ ಒಳಗೆ ಬಿಟ್ಟುಕೊಂಡಾಗಲೇ ಅಲ್ಲಿ ಭಾರತದ ಹಿತಾಸಕ್ತಿ ಮಕಾಡೆ ಮಲಗಿತ್ತು. ಹೀಗಾಗಿ, ಬಾಂಗ್ಲಾದೇಶದಲ್ಲಿ ಅಮೆರಿಕ ಪ್ರಾಯೋಜಿತ ಕ್ರಾಂತಿಯಿಂದ ಭಾರತಕ್ಕೆ ಈವರೆಗೆ ಆಗದಿದ್ದ ಹಾನಿಯೇನೋ ಆಗಿಬಿಡುತ್ತದೆ ಎಂಬಂತೇನೂ ಇಲ್ಲ. ಬಂಗಾಳಕೊಲ್ಲಿ ಪ್ರದೇಶದಲ್ಲಿ ಭಾರತದ ಎಲ್ಲ ನೌಕಾನಡೆಗಳನ್ನು ಇನ್ನು ಕೆಲವೇ ವರ್ಷಗಳಲ್ಲಿ ಅಮೆರಿಕವು ಅತಿಯಾಗಿ ನಿಯಂತ್ರಣದಲ್ಲಿರಿಸಲಿದೆ ಎಂಬುದು ಖರೆ. ಹಾಗಂತ, ಅಮೆರಿಕ ಪ್ರಾಯೋಜಿತ ಅಧಿಕಾರ ಬದಲಾವಣೆ ಬಾಂಗ್ಲಾದೇಶದಲ್ಲಿ ನಡೆಯದೇ ಹೋಗಿದ್ದರೆ ಭಾರತದ ಸ್ಥಿತಿ ಉತ್ತಮವಾಗಿರುತ್ತಿತ್ತು ಎಂದೇನೂ ಇಲ್ಲ. ಏಕೆಂದರೆ, ಇದೇ ಹಸೀನಾ ಬಂಗಾಳಕೊಲ್ಲಿ ಪ್ರಾಂತ್ಯವನ್ನು ಚೀನಾ ಪಾರಮ್ಯಕ್ಕೆ ಬಿಟ್ಟಿರುತ್ತಿದ್ದರು ಎಂಬ ಬಗ್ಗೆ ಅನುಮಾನಗಳೇ ಉಳಿಯದ ರೀತಿ ಅಲ್ಲಿ ಬೆಳವಣಿಗೆಗಳಾಗಿವೆ.
ಈಗ ಕೆಲವು ತಿಂಗಳುಗಳ ಹಿಂದೆ ಶೇಖ್ ಹಸೀನಾರು ತಮ್ಮ ಚೀನಾ ಭೇಟಿಯನ್ನು ಮೊಟಕುಗೊಳಿಸಿರುವುದು ಸುದ್ದಿಯಾಗಿತ್ತು. ಚೀನಾವು ತಾನು ಒಪ್ಪಿಕೊಂಡಿದ್ದ 5 ಬಿಲಿಯನ್ ಡಾಲರ್ ಸಾಲಕ್ಕೆ ಬದಲಾಗಿ ಕೆಲವೇ ಮಿಲಿಯನ್ ಡಾಲರುಗಳ ಸಾಲ ಕೊಡುವುದಕ್ಕೆ ಮಾತ್ರವೇ ಮುಂದಾಗಿದ್ದು ಹಸೀನಾ ಸಿಟ್ಟಿಗೆ ಕಾರಣ ಎಂದು ವರದಿಗಳಾದವು. ಅದಾಗಿ ಕೆಲದಿನಗಳಲ್ಲೇ ಬಾಂಗ್ಲಾದೇಶದಲ್ಲಿ ಅಧಿಕಾರ ಬದಲಾವಣೆಯ ಕ್ರಾಂತಿ ನಡೆದಿದ್ದರಿಂದ, ಇಲ್ಲೇನೋ ಚೀನಾ ನಡೆಯೂ ಇದ್ದಿರಬಹುದೆಂದು ತರ್ಕಿಸುವವರೂ ಇದ್ದಾರೆ. ಆದರೆ, ಹಸೀನಾರನ್ನು ತೊಲಗಿಸಿದ ನಂತರ ಅಲ್ಲಿನ ಮಧ್ಯಾವಧಿ ಸರ್ಕಾರದ ಮುಖ್ಯಸ್ಥ ಸ್ಥಾನಕ್ಕೆ ಪಾಶ್ಚಾತ್ಯ ಚಿಂತಕಕೂಟದ ಅಚ್ಚುಮೆಚ್ಚಿನ ವ್ಯಕ್ತಿ ಮೊಹಮ್ಮದ್ ಯೂನಸ್ ಬಂದು ಕುಳಿತಿರುವುದರಿಂದ, ಈ ಅಧಿಕಾರ ಬದಲಾವಣೆಯಲ್ಲಿ ಎಲ್ಲ ಕಡೆ ಅಮೆರಿಕದ ಸಹಿಯೇ ಅತ್ಯಂತ ಸ್ಪಷ್ಟವಾಗಿದೆ.
ಅದಿರಲಿ, ಶೇಖ್ ಹಸೀನಾ ಬಾಂಗ್ಲಾದೇಶದೊಳಗೆ ಇತ್ತೀಚಿನ ವರ್ಷಗಳಲ್ಲಿ ಚೀನಾ ಇರುವಿಕೆಯನ್ನು ಅದೆಷ್ಟರಮಟ್ಟಿಗೆ ಬಿಟ್ಟುಕೊಂಡಿದ್ದರೆಂದರೆ ಅಲ್ಲಿನ ಇಡೀ ರಕ್ಷಣಾ ವ್ಯವಸ್ಥೆ ಚೀನಾದ ಮಾರುಕಟ್ಟೆಯಾಗಿ ಬದಲಾಗಿತ್ತು. 2006ರ ಹೊತ್ತಿಗೆಲ್ಲ ಬಾಂಗ್ಲಾದೇಶವು ಚೀನಾ ಶಸ್ತ್ರಾಸ್ತ್ರಗಳ ಮುಖ್ಯ ಖರೀದಿದಾರನಾಯಿತು. ಇವತ್ತಿಗೆ ಬಾಂಗ್ಲಾದೇಶದ ಮಿಲಿಟರ್ ಸಲಕರಣೆಗಳ ಪೈಕಿ ಶೇಕಡ 86ರಷ್ಟು ಚೀನಾದಿಂದ ಬಂದದ್ದು.
ಬಾಂಗ್ಲಾದೇಶದ ಮಿಲಿಟರಿ ಬಳಿ ಇರುವ ಆರ್ಟಿಲರಿ ಸುಡುಮದ್ದುಗಳು, ಸಮರ ಟ್ಯಾಂಕ್, ಫೈಟರ್ ಜೆಟ್, ನೌಕೆಗಳು, ಕೊನೆಗೆ ಜಲಾಂತರ್ಗಾಮಿ ಎಲ್ಲವೂ ಚೀನಿ ನಿರ್ಮಿತ.
2008ರಲ್ಲಿ ಚಿತ್ತಗಾಂವ್ ಬಂದರಿನ ಬಳಿ ಬಾಂಗ್ಲಾದೇಶವು ಚೀನಾದ ನೆರವಿನೊಂದಿಗೆ ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ಸ್ಥಾಪಿಸಿತು. 2014ರಲ್ಲಿ ಬಾಂಗ್ಲಾದೇಶ ಮತ್ತು ಚೀನಾಗಳು ಪರಸ್ಪರ ಮಿಲಿಟರಿ ತರಬೇತಿ ಕೇಂದ್ರಗಳನ್ನು ಹೊಂದುವುದಕ್ಕೆ ಒಪ್ಪಂದ ಮಾಡಿಕೊಂಡವು. 2016ರಲ್ಲಿ ಚೀನಾ ನಿರ್ಮಿತ ಎರಡು ಸಣ್ಣಗಾತ್ರದ ಯುದ್ಧನೌಕೆಗಳು ಬಾಂಗ್ಲಾದೇಶದ ಬತ್ತಳಿಕೆ ಸೇರಿದರೆ, 2018ರಲ್ಲಿ ಚೀನಾವು ವೈಮಾನಿಕ ಯುದ್ಧ ತರಬೇತಿಗೆಂದು ಬಾಂಗ್ಲಾದೇಶಕ್ಕೆ 23 ತರಬೇತು ವಿಮಾನಗಳನ್ನು ನೀಡುವ ಒಪ್ಪಂದಕ್ಕೆ ಅಸ್ತು ಎಂದಿತು. 2012ರಲ್ಲಿ ಚೀನಾದ F-7BGI ಯುದ್ಧವಿಮಾನಗಳು 36ರ ಸಂಖ್ಯೆಯಲ್ಲಿ ಬಾಂಗ್ಲಾದೇಶದ ಸೇನಾಬಲವನ್ನು ಸೇರಿಕೊಂಡವು.
ದೇಶವೆಂದಮೇಲೆ ರಕ್ಷಣಾ ಪರಿಕರಗಳು ಬೇಕಲ್ಲ…ಅವನ್ನು ಚೀನಾದಿಂದ ಕೊಂಡರೇಕೆ ಆಕ್ಷೇಪ ಎಂದು ಪ್ರಶ್ನಿಸಬಹುದೇನೋ. ಆದರೆ, ಕೇವಲ ಚೀನಾದಿಂದ ಮಾತ್ರವೇ ಏಕೆಂಬುದು ಇಲ್ಲಿರುವ ಪ್ರಶ್ನೆ. ಏಕೆಂದರೆ, ಬಾಂಗ್ಲಾದೇಶಕ್ಕೆ ಮಿಲಿಟರಿ ಆತಂಕ ಎಂದಿರುವುದು ಯಾರಿಂದ? ಹಿಂದೊಮ್ಮೆ ಯಾರ ಅಧೀನವಾಗಿತ್ತೋ ಅಂತಹ ಪಾಕಿಸ್ತಾನದಿಂದ. ಆದರೆ ಇದೇ ಚೀನಾವು ಪಾಕಿಸ್ತಾನದ ಪರಮಮಿತ್ರ. ಹೀಗಿರುವಾಗ ಈ ಚೀನೀ ನಿರ್ಮಿತ ಶಸ್ತ್ರಗಳು ಗುರಿಯಾಗಿಸುತ್ತಿರುವುದು ಯಾರನ್ನು? 1971ರಲ್ಲಿ ತನ್ನ ಹುಟ್ಟಿಗೆ ಕಾರಣವಾದ ಭಾರತದ ಹಿತಾಸಕ್ತಿಗಳಿಗೆ ತನ್ನ ನಡೆಗಳು ಎಂಥ ಆತಂಕ ಸೃಷ್ಟಿಸಿಯಾವು ಎಂಬ ಬಗ್ಗೆ ಬಾಂಗ್ಲಾದ ರಾಜಕಾರಣ, ಅಧಿಕಾರದಲ್ಲಿದ್ದ ಶೇಖ್ ಹಸೀನಾ ಒಮ್ಮೆಯಾದರೂ ಪ್ರಾಮಾಣಿಕವಾಗಿ ಯೋಚಿಸಿದ್ದಿದೆಯಾ?
ಇವಕ್ಕೆಲ್ಲ ಕಳಶವಿಟ್ಟಂತೆ ಬಂಗಾಳ ಕೊಲ್ಲಿಯ ಕಾಕ್ಸ್ ಬಜಾರ್ ಬಂದರಿನ ಬಳಿ ಜಲಾಂತರ್ಗಾಮಿ ಹಾಗೂ ಯುದ್ಧನೌಕೆಗಳು ತಂಗುವಂತೆ ದೊಡ್ಡಮಟ್ಟದಲ್ಲಿ ಚೀನಿಯರ ಸಹಾಯದಿಂದ ಬಂದರು ಪ್ರದೇಶ ಅಭಿವೃದ್ಧಿಯಾಗುವುದಕ್ಕೆ ಶೇಖ್ ಹಸೀನಾ ಸರ್ಕಾರ ಮುಂಚೂಣಿಯಲ್ಲಿ ನಿಂತು ಸಹಾಯ ಮಾಡಿತು. ಬಂಗಾಳ ಕೊಲ್ಲಿಯಲ್ಲಿ ಚೀನಾ ಪ್ರೇರಿತ ಜಲಾಂತರ್ಗಾಮಿಗಳ ಸಂಚಾರ ಭಾರತದ ಮಟ್ಟಿಗಂತೂ ಬಹುದೊಡ್ಡ ರಕ್ಷಣಾ ಸವಾಲು. ಆದರೇನಂತೆ, 2023ರಲ್ಲಿ 1.21 ಬಿಲಿಯನ್ ಡಾಲರುಗಳ ವೆಚ್ಚದಲ್ಲಿ ತಲೆಎತ್ತಿದ ಈ ಸಬ್ಮರೀನ್ ತಂಗುದಾಣವನ್ನು ಅದ್ಧೂರಿಯಾಗಿ ಉದ್ಘಾಟಿಸಿದ ಶೇಖ್ ಹಸೀನಾ ಅದನ್ನು ಬಿಎನ್ಎಸ್ ಶೇಖ್ ಹಸೀನಾ ಅಂತಲೇ ನಾಮಕರಣ ಮಾಡಿಕೊಂಡರು.
ಚೀನಾವು ಪಾಕಿಸ್ತಾನಕ್ಕೆ ನಿರ್ಮಿಸಿಕೊಟ್ಟಿರುವ ಯುದ್ಧನೌಕೆಯ ಹೆಸರು ಐ ಎನ್ ಎಸ್ ತೈಮೂರ್. ಬೀಜಿಂಗಿನಿಂದ ಕರಾಚಿಗೆ ತೆರಳುತ್ತಿದ್ದ ಇದಕ್ಕೆ ತನ್ನ ಬಂದರಿನಲ್ಲಿ ತಂಗುವ ಅವಕಾಶ ಕೊಟ್ಟುಬಿಟ್ಟಿತ್ತು ಹಸೀನಾರ ಬಾಂಗ್ಲಾದೇಶ. ಯಾವಾಗ ಭಾರತವು ಈ ಬಗ್ಗೆ ಒತ್ತಡವನ್ನು ಹೇರಿತೋ ಆಗಲ್ಲಿನ ಸರ್ಕಾರವು ರಾಗ ಬದಲಿಸಿ, ಆಗಸ್ಟ್ ತಿಂಗಳು ಬಾಂಗ್ಲಾದ ಸ್ಥಾಪಕ ಮುಜಿಬುರ್ ರೆಹ್ಮಾನ್ ಅವರ ಶ್ರದ್ಧಾಂಜಲಿ ಮಾಸವಾಗಿರುವುದರಿಂದ ಅನುಮತಿ ಹಿಂದಕ್ಕೆ ಪಡೆಯುವುದಾಗಿ ಹೇಳಿತು.
ಚಿತ್ತಗಾಂಗ್ ಪ್ರಾಂತ್ಯದಲ್ಲಿ ಬರುವ ಸೊನದಿಯಾ ದ್ವೀಪದಲ್ಲಿ ಚೀನಾಕ್ಕೆ ಮಿಲಿಟರಿ ನೆಲೆಗೆ ಅವಕಾಶ ಕಲ್ಪಿಸುವುದಕ್ಕೂ ಬಾಂಗ್ಲಾದೇಶ ಮುಂದಾಗಿತ್ತಾದರೂ ಭಾರತ ಮತ್ತು ಪಾಶ್ಚಾತ್ಯ ಶಕ್ತಿಗಳು ಅದರ ಮೇಲೆ ಒತ್ತಡ ಹೇರಿ 2020ರಲ್ಲಿ ಹಿಂದಕ್ಕೆ ಸರಿಯುವಂತೆ ಮಾಡಿದವು.
ಬಾಂಗ್ಲಾದೇಶದ ಮೂರನೇ ಅತಿದೊಡ್ಡ ಬಂದರೆಂಬ ಖ್ಯಾತಿಗೆ ಪಾತ್ರವಾಗಿರುವ ಪೆರಾ ಬಂದರಿನ ನವನಿರ್ಮಾಣಕ್ಕೆ ಪ್ರಾರಂಭದಲ್ಲಿ ಚೀನಾದ ಕಂಪನಿಗಳಿಗೇ ಬಾಂಗ್ಲಾದೇಶವು ಮಣೆ ಹಾಕಿತ್ತು. ಆದರೆ, ಭಾರತ, ಜಪಾನ್, ಮತ್ತು ಅಮೆರಿಕಗಳ ಒತ್ತಡಕ್ಕೆ ಮಣಿದು ನಂತರ ಬೆಲ್ಜಿಯಂ ಕಂಪನಿಗೆ ಆ ನಿರ್ಮಾಣ ಗುತ್ತಿಗೆಯನ್ನು ನೀಡಿತು.
ಹೀಗೆಲ್ಲ ಬಾಂಗ್ಲಾದೇಶವು ಅಡಿಗಡಿಗೇ ಚೀನಾಕ್ಕೆ ಮಣೆ ಹಾಕುತ್ತಿರುವ ವಿದ್ಯಮಾನವನ್ನು ಪ್ರಸ್ತುತ ಸೂಪರ್ ಪವರ್ ಅಮೆರಿಕ ಏಕಾದರೂ ಸಹಿಸಿಕೊಳ್ಳುತ್ತದೆ ಹೇಳಿ? ಅಮೆರಿಕದ ಆಡಳಿತ ಚುಕ್ಕಾಣಿ ಡೆಮಾಕ್ರಾಟರ ಬಳಿ ಇರಲಿ, ರಿಪಬ್ಲಿಕನ್ನರ ಬಳಿ ಇದ್ದಿರಲಿ ಅಲ್ಲಿನ ಅಧಿಕಾರ ಹಿತಾಸಕ್ತರ ಕೂಟವು ತೀರ ಚೀನಾದ ಕೈ ಮೇಲಾಗುವುದನ್ನು ಸಹಿಸುವುದಿಲ್ಲ. ಏಕೆಂದರೆ, ಇಂಡೋ-ಫೆಸಿಫಿಕ್ ಪ್ರಾಂತ್ಯದಲ್ಲಿ ಚೀನಾ ಗಟ್ಟಿಯಾದಷ್ಟೂ ಅದು ಅಮೆರಿಕಪ್ರಣೀತ ಸಮುದ್ರ ವ್ಯಾಪಾರಕ್ಕೆ ಅಂಕುಶ ಹಾಕುತ್ತದೆ. ಹಾಗೆಂದೇ ಅಮೆರಿಕವು ಈ ಹಿಂದಿನ ಬಾಂಗ್ಲಾದೇಶದ ಚುನಾವಣೆಯಲ್ಲೇ ಎಲ್ಲರಿಗೂ ಗೊತ್ತಾಗುವ ರೀತಿಯಲ್ಲೇ ಹಸೀನಾ ರಾಜ್ಯಭಾರವನ್ನು ಕೊನೆಗೊಳಿಸುವುದಕ್ಕೆ ಮೈದಾನಕ್ಕೆ ಇಳಿಯಿತು.
ಇಲ್ಲೆಲ್ಲ ಭಾರತವು ಕಿರುಪಾತ್ರಧಾರಿ ಮಾತ್ರ. ನಾವು ಭಾರತೀಯರು ವಿಶ್ಲೇಷಿಸುವಾಗ ಸಹಜವಾಗಿಯೇ ನಮ್ಮನ್ನು ಕೇಂದ್ರದಲ್ಲಿರಿಸಿಕೊಳ್ಳುತ್ತೇವಾದ್ದರಿಂದ ಬಾಂಗ್ಲಾದೇಶದಲ್ಲಿ ಅಮೆರಿಕವು ಮಾಡುತ್ತಿರುವ ಅಧಿಕಾರ ಬದಲಾವಣೆಯು ಭಾರತವನ್ನು ಹತ್ತಿಕ್ಕುವುದಕ್ಕೆ ಮಾಡುತ್ತಿರುವ ಯತ್ನ ಎಂದೆಲ್ಲ ವ್ಯಾಖ್ಯಾನಿಸುತ್ತೇವೆ. ಆದರೆ, ಅಮೆರಿಕದ ಮುಖ್ಯ ಗಮನವು ಬಾಂಗ್ಲಾದೇಶದಲ್ಲಿ ಚೀನಾದ ಪ್ರಭಾವವನ್ನು ನಿಯಂತ್ರಿಸುವುದು ಎಂಬುದು ಮೇಲಿನ ಎಲ್ಲ ಅಂಶಗಳನ್ನು ಓದಿಕೊಂಡಾಗ ಸ್ಪಷ್ಟವಾಗುತ್ತದೆ.
ಹಾಗೆ ನೋಡಿದರೆ, ಅಮೆರಿಕವು ಬಾಂಗ್ಲಾದೇಶದ ವಿಚಾರದಲ್ಲಿ ಹಲವೆಡೆ ಭಾರತವನ್ನು ವಿಶ್ವಾಸಕ್ಕೆ ತೆಗೆದುಕೊಂಡಿರಲಿಕ್ಕೆ ಸಾಕು. ಏಕೆಂದರೆ, ಚುನಾವಣೆಗಳು ಆಗುತ್ತಿರುವ ಸಮಯದಲ್ಲೇ ಅಮೆರಿಕವು ತನ್ನ ರಾಯಭಾರಿಗಳ ಮೂಲಕ ಅಲ್ಲಿನ ಪ್ರತಿಪಕ್ಷ ನೇತಾರೆ ಖಲೀದಾ ಜಿಯಾರನ್ನು ಭೇಟಿಯಾಗಿ ಹಸೀನಾ ಆಡಳಿತಕ್ಕೆ ಇರಿಸುಮುರಿಸು ಉಂಟುಮಾಡಿದ್ದಲ್ಲದೇ, ಚುನಾವಣೆಗಳಲ್ಲಿ ಪ್ರತಿಪಕ್ಷಗಳಿಗೆ ಮುಕ್ತ ಅವಕಾಶವಿರಬೇಕೆಂದು ಒಂದರ್ಥದಲ್ಲಿ ಹಸೀನಾ ವಿರುದ್ಧದ ಪ್ರಚಾರಾಂದೋಲನಗಳಿಗೆ ಬಲ ತುಂಬಿತ್ತು. ಆಗಲೂ ಶೇಖ್ ಹಸೀನಾರನ್ನು ಖಲೀದಾರ ಮೂಲಕ ಬದಲಿಸುವುದು ತನಗೆ ಪೂರಕವಲ್ಲ ಎಂಬರ್ಥದ ಸಂದೇಶಗಳನ್ನು ಭಾರತ ನೀಡಿತ್ತು. ಅದಕ್ಕೆ ಅಮೆರಿಕದ ಕಡೆಯಿಂದ ಒಳಗೊಳಗೇ ತಕ್ಕಮಟ್ಟಿಗಿನ ಸಮ್ಮತಿಯೂ ಸಿಕ್ಕಿರಲಿಕ್ಕೆ ಸಾಕು. ಈಗದು ಜಿಯಾ, ಹಸೀನಾ ಇಬ್ಬರನ್ನೂ ಬಿಟ್ಟು ಮೊಹಮ್ಮದ್ ಯೂನಸ್ ಮುಖಾಂತರ ಬಾಂಗ್ಲಾದೇಶದ ರಾಜಕಾರಣವನ್ನು ರೂಪಿಸುವುದಕ್ಕೆ ಹೊರಟಿದೆ.
ನಿಜ. ಅಮೆರಿಕದ ಅತಿಯಾದ ಉಪಸ್ಥಿತಿ ಸಹ ಬಂಗಾಳಕೊಲ್ಲಿಯಲ್ಲಿ ಭಾರತದ ಪ್ರಾಮುಖ್ಯಕ್ಕೆ ಹೊಡೆತವೇ. ಆದರೆ, ಇನ್ನು ಮುಂದಿನ ಮುಖ್ಯ ಆಟವಿರುವುದು ಅಮೆರಿಕ ವರ್ಸಸ್ ಚೀನಾ. ಹೀಗಾಗಿ ಭಾರತವು ಬಾಂಗ್ಲಾದಲ್ಲಿ ಹೊಸದಾಗಿ ಅಧಿಕಾರದಲ್ಲಿರುವವರೊಂದಿಗೆ ತನ್ನ ಹಿತಾಸಕ್ತಿ ಮರುರೂಪಿಸಿಕೊಳ್ಳುವುದು ಹೇಗೆ ಎಂದು ಯೋಚಿಸಿ ಕಾರ್ಯಪ್ರವೃತ್ತವಾಗುತ್ತದೆಯೇ ಹೊರತು ಶೇಖ್ ಹಸೀನಾರ ಕೈಯಲ್ಲಿ ಅಧಿಕಾರವಿಲ್ಲವಲ್ಲ ಎಂದೇನೂ ಆಂತರ್ಯದಲ್ಲಿ ಗೋಳಾಡುವುದಿಲ್ಲ. ಬಾಂಗ್ಲಾದೇಶದ ವಿದ್ಯಮಾನವನ್ನು ಉತ್ರ್ಪೇಕ್ಷಿತ ಆತಂಕದೊಂದಿಗೆ ಗಮನಿಸುತ್ತಿರುವ ಸಾಮಾನ್ಯ ಭಾರತೀಯನಿಗೆ ಸಹ ಈ ದೃಷ್ಟಿ ಸಿಕ್ಕಬೇಕು.
ಸದ್ಯಕ್ಕೆ ಭಾರತದಲ್ಲಿ ಆಶ್ರಯ ಪಡೆದಿರುವ ಶೇಖ್ ಹಸೀನಾ ಆಗಲೀ, ಈಗ ಅಮೆರಿಕವು ನೇಪಥ್ಯದಲ್ಲಿ ನಿಂತು ಅಧಿಕಾರದಲ್ಲಿ ಪ್ರತಿಷ್ಠಾಪಿಸಿರುವ ಮೊಹಮ್ಮದ್ ಯೂನಸ್ ಆಗಲಿ, ಅಲ್ಲದೇ ಭಾರತಕ್ಕೇನೂ ಆಪ್ತರಲ್ಲದ ಬಾಂಗ್ಲಾದೇಶದ ಪ್ರತಿಪಕ್ಷ ನೇತಾರೆ ಖಲೀದಾ ಜಿಯಾ ಆಗಲಿ ಎಲ್ಲರೂ ಸರಿದುಹೋಗಲಿರುವ ಚಿತ್ರಗಳು ಮಾತ್ರ. ಏಕೆಂದರೆ, ಎಲ್ಲರ ಪ್ರಾಯವೂ 75ರ ವಯೋಮಾನವನ್ನು ದಾಟಿದೆ.
ಈ ಹಂತದಲ್ಲಿ ಬಾಂಗ್ಲಾದೇಶದಲ್ಲಿ ಹೊಸ ರಾಜಕೀಯ ವಾತಾವರಣ ರೂಪಿಸಲು ಕಣದಲ್ಲಿರುವ ಅಮೆರಿಕಕ್ಕೆ ಒಂದಿಲ್ಲೊಂದು ವಿಭಾಗದಲ್ಲಿ ಭಾರತದ ಸಹಕಾರ ಬೇಕೇಬೇಕು. ಹೀಗಿರುವಾಗ, ಶೇಖ್ ಹಸೀನಾ ಸೇರಿದಂತೆ ಎಲ್ಲ ಆಯಾಮಗಳೂ ನಮಗೆ ಜಾಗತಿಕ ರಾಜಕಾರಣದ ಚೌಕಾಶಿ (leverage) ಸಾಧನಗಳಷ್ಟೆ. ಉದ್ದೇಶಸಾಧನೆಯ ತಾರ್ಕಿಕ ಮಾರ್ಗಗಳನ್ನೇ ಮುಸುಕಾಗಿಸುವ ಭಾವನಾತ್ಮಕತೆಯನ್ನು ಈ ಹಂತದಲ್ಲಿ ನಮ್ಮೆಲ್ಲರ ವಿಚಾರಪ್ರಕ್ರಿಯೆಗೆ ಸೋಕಿಸಿಕೊಳ್ಳುವ ಅಗತ್ಯ ಇಲ್ಲ.
- ಚೈತನ್ಯ ಹೆಗಡೆ
cchegde@gmail.com
Advertisement