ಕ್ಯಾನ್ಸರ್, ಕ್ವಾಂಟಂ ವಿಜ್ಞಾನ, ಮತ್ತು ಮುದ್ದುನಾಯಿ! (ತೆರೆದ ಕಿಟಕಿ)

1989ರಲ್ಲಿಯೇ ಶ್ವಾನಗಳಿಗೆ ಕ್ಯಾನ್ಸರ್ ಗಡ್ಡೆಗಳ ಇರುವಿಕೆಯನ್ನು ವಾಸನೆಯಿಂದಲೇ ಅರಿಯುವ ಶಕ್ತಿ ಇದೆ ಎಂದು ಪ್ರಸ್ತಾಪವಾಗಿತ್ತು. ಕ್ಯಾನ್ಸರುಗಳ ವಿಷಯದಲ್ಲಿ ಯಾವುದೇ ಯಾಂತ್ರೀಕೃತ ಸಾಧನಗಳಿಗಿಂತ ಪರಿಣಾಮಕಾರಿಯಾಗಿ ನಾಯಿಗಳು ಪತ್ತೆ ಮಾಡಬಲ್ಲವೆಂಬುದನ್ನು ಪುರಾವೆಬದ್ಧವಾಗಿ ಮಂಡಿಸಿದವು.
file pic
ಸಾಂಕೇತಿಕ ಚಿತ್ರonline desk
Updated on

ವಿಶ್ವ ಆರೋಗ್ಯ ಸಂಸ್ಥೆ ಕೊಟ್ಟಿರುವ ಒಂದು ಅಂಕಿ-ಅಂಶ 2018 ರದ್ದು. ಆ ಪ್ರಕಾರ ಜಗತ್ತಿನಲ್ಲಿ ಆಗುವ ಪ್ರತಿ 6 ಸಾವುಗಳಲ್ಲಿ ಒಂದು ಕ್ಯಾನ್ಸರಿಗೆ (cancer) ಸಂಬಂಧಿಸಿದ್ದು. ಅಂದರೆ, ಎದೆ-ಶ್ವಾಸಕೋಶ-ಕರುಳು-ವೃಷಣ ಸೇರಿದಂತೆ ನಾನಾ ಬಗೆಯ ಕ್ಯಾನ್ಸರುಗಳೆಲ್ಲ ಸೇರಿಕೊಂಡು ಜಗತ್ತಿನ ಸಾವುಗಳ ಸುಮಾರು ಶೇ. ಹದಿನಾರೂವರೆ ಪಾಲು ಪಡೆದಿವೆ.

ಮತ್ತಿದು ವ್ಯಾಪಕವಾಗಿ ವಿಸ್ತರಿಸುತ್ತಲೇ ಇದೆ. ಈ ಅಂಕಿ-ಅಂಶಗಳನ್ನೆಲ್ಲ ಪಕ್ಕಕ್ಕಿಟ್ಟರೂ, ನಿಮ್ಮ ಅನುಭವದ ನೆಲೆಯಲ್ಲೇ ಯೋಚಿಸುವುದಾದರೂ ನಿಮ್ಮ ಅಕ್ಕಪಕ್ಕದ ಸಂಬಂಧಿಕರು-ನೆಂಟರು-ಸ್ನೇಹಿತರ ವಲಯದಲ್ಲಿ ಅನಾರೋಗ್ಯದ ಸಾವುಗಳಾದಾಗಲೆಲ್ಲ ಆ ಪೈಕಿ ಹಲವು ಮೃತ್ಯುಗಳಿಗೆ ನಿಮಿತ್ತವಾಗಿ ಬಂದಿದ್ದು ಕ್ಯಾನ್ಸರ್ ಎಂಬುದು ನಿಮ್ಮ ಕಿವಿಗೆ ಬಡಿದಿರುತ್ತದೆ.

ಕೇವಲ ಸಾವಿನ ಅಂಕಿ-ಅಂಶವಾಗಿಯಷ್ಟೇ ಕ್ಯಾನ್ಸರ್ ನಮ್ಮನ್ನು ಬೆದರಿಸುತ್ತಿಲ್ಲ. ಬದಲಿಗೆ, ಅದು ಇಂಚಿಂಚಾಗಿ ದೇಹವನ್ನು ವ್ಯಾಪಿಸುವಾಗ ವ್ಯಕ್ತಿಯು ಅದರ ವಿರುದ್ಧ ಮಾಡುವ ಯಾತನಾಮಯ ಹೋರಾಟ, ಅದಕ್ಕೆ ತಗಲುವ ವೈದ್ಯಕೀಯ ಖರ್ಚುಗಳು, ರೋಗಿಯ ಹತ್ತಿರದವರ ಮಾನಸಿಕ ತೊಳಲಾಟ ಇವೆಲ್ಲದರ ಬಿಡಿಚಿತ್ರಗಳೆಲ್ಲ ಸೇರಿಕೊಂಡು ಕ್ಯಾನ್ಸರ್ ಅನ್ನು ಭಯಾನಕವಾಗಿಸಿವೆ. 

ಅನಾರೋಗ್ಯದ ವಿಷಯದಲ್ಲಿ ಈವರೆಗಿನ ಹಂತಕರ ದೂತರ ಬಗ್ಗೆ ನಾವೊಂದಿಷ್ಟು ತರ್ಕಗಳನ್ನು ಕಟ್ಟಿಕೊಂಡು ಸಮಾಧಾನಪಟ್ಟುಕೊಳ್ಳುತ್ತಿದ್ದೆವು. ಒತ್ತಡದ ಜೀವನ ಹಾರ್ಟ್ ಅಟ್ಯಾಕ್ ತಂದಿತು ಎಂಬುದು ಅಂಥದೊಂದು ಸಮಾಧಾನದ ಮಾದರಿ. ಕ್ಯಾನ್ಸರಿಗೂ ಜೀವನಪದ್ಧತಿಯಲ್ಲಾದ ಬದಲಾವಣೆ ಅದೂ ಇದೂ ಅಂತೆಲ್ಲ ಕಾರಣಗಳಿವೆಯಾದರೂ ಬಹಳಷ್ಟು ಪ್ರಕರಣಗಳಲ್ಲಿ ಒಳ್ಳೆಯದೆಂದು ಕರೆಸಿಕೊಳ್ಳುವ ಆಹಾರ ಪದ್ಧತಿಯಲ್ಲಿ ಜೀವಿಸಿದವರನ್ನೂ ಕ್ಯಾನ್ಸರ್ ನುಂಗಿದೆ. ಹೀಗಾಗಿ ತಾರ್ಕಿಕ ನೆಲೆಯಲ್ಲೂ ವಿಧಿಯ ಜತೆಗೊಂದು ಸಮಾಧಾನ ಸಾಧಿಸಿಕೊಳ್ಳುವ ಬಗೆಯನ್ನು ಈ ರೋಗ ಅಷ್ಟಾಗಿ ಬಿಟ್ಟುಕೊಡುತ್ತಿಲ್ಲ. 

ಇಷ್ಟಕ್ಕೂ ಈ ಕ್ಯಾನ್ಸರ್ ಅಂದರೆ ಏನು ಅಂತ ಯಾವುದೇ ವೈದ್ಯಕೀಯ ಕ್ಲಿಷ್ಟ ಶಬ್ದಗಳಿಲ್ಲದೇ ವಿವರಿಸು ಗುರೂ ಅಂತ ನೀವೇನಾದರೂ ಇವತ್ತಿನ ಕೃತಕ ಬುದ್ಧಿಮತ್ತೆಯ (AI) ಯಂತ್ರನರಮಂಡಲವನ್ನು ಪ್ರಚೋದಿಸಿದ್ದೇ ಆದರೆ, ಅದೊಂದು ಸರಳ ಉತ್ತರವನ್ನು ಹೆಣೆದುಕೊಡುತ್ತದೆ. ನಿಮ್ಮ ದೇಹವೊಂದು ದೊಡ್ಡ ಅರಮನೆ ಎಂದುಕೊಂಡರೆ, ಅದರಲ್ಲಿ ಸಹಸ್ರ-ಸಹಸ್ರ ಇಟ್ಟಿಗೆಗಳಿವೆಯಲ್ಲ…ಅವೇ ಜೀವಕೋಶಗಳು, ಸೆಲ್ಸ್.

ದೇಹ ಬೆಳೆಯುವುದಕ್ಕೆ, ಗಾಯ ಮಾಗುವುದಕ್ಕೆ ಎಲ್ಲವಕ್ಕೂ ಇವುಗಳ ನಿರಂತರ ಕಾರ್ಯಚಟುವಟಿಕೆಯೇ ಆಧಾರ. ಈ ಕೋಶಗಳೆಂಬ ಕಾರ್ಯಕರ್ತರ ಪಡೆ ಕೆಲವೊಮ್ಮೆ ನಿಗದಿತ ಕೆಲಸ ಮಾಡುವುದನ್ನು ಬಿಟ್ಟು ಯದ್ವಾತದ್ವಾ ಬೆಳೆಯುವುದಕ್ಕೆ ಪ್ರಾರಂಭಿಸಿಬಿಡುತ್ತವೆ. ಅರಮನೆಯ ಗೋಡೆ ಸೀಳಿಕೊಂಡು ಗೋಪುರ ಕಟ್ಟಿಬಿಡುವ ಅಪದ್ಧ ಕೆಲಸದಲ್ಲಿ ತೊಡಗಿಬಿಡುತ್ತವೆ. ಹಾಗಾದಾಗ ಅರಮನೆ ಹೇಗೆ ಶಿಥಿಲವಾಗುತ್ತದೋ ಹಾಗೆಯೇ ನಮ್ಮ ದೇಹದೊಳಗಿನ ಅಂಗಗಳಲ್ಲಿ ಕೋಶಗಳು ಸಲ್ಲದ ಬೆಳವಣಿಗೆ ಕಂಡು ಗಡ್ಡೆಗಳಾಗುತ್ತವೆ. ಆಗ ದೇಹದ ವ್ಯವಸ್ಥೆ ಮುಗ್ಗರಿಸುತ್ತದೆ. ಇದು ನಿಧಾನಕ್ಕೆ ದೇಹದ ಎಲ್ಲ ಭಾಗಗಳನ್ನೂ ಆವರಿಸಿಕೊಳ್ಳುವುದಕ್ಕೆ ಶುರು ಮಾಡುತ್ತದೆ ಎಂಬಲ್ಲಿಗೆ ವ್ಯಕ್ತಿ ಉಳಿದುಕೊಳ್ಳಲಾರದ ಹಂತಕ್ಕೆ ಹೋಗುತ್ತಾನೆ.

ಬೇಕಿದ್ದಾನೊಬ್ಬ ಕ್ಯಾನ್ಸರ್ ಕಾವಲುಗಾರ

ವೈದ್ಯ ಪರಿಣತರ ಮಾತುಗಳನ್ನು ಕಿವಿಗೆ ಹಾಕಿಕೊಂಡರೆ ಅಲ್ಲಿ ಕ್ಯಾನ್ಸರ್ ಕುರಿತಾಗಿ ಪುನರಾವರ್ತಿತವಾಗುವ ನುಡಿ ಎಂದರೆ- ಕ್ಯಾನ್ಸರ್ ಬೆಳೆಯುತ್ತಿರುವುದು ಪ್ರಾರಂಭಿಕ ಹಂತದಲ್ಲೇ ಪತ್ತೆಯಾದರೆ ಗುಣಪಡಿಸುವ ಹಾದಿ ಸುಲಭ ಅನ್ನೋದು. ಗಡ್ಡೆ ಸಣ್ಣದಾಗಿರುವಾಗ ಅದನ್ನು ತೆಗೆದುಹಾಕುವುದು ಸುಲಭ. ಅದೇ ನಂತರದ ಹಂತಗಳಲ್ಲಿ ಕೆಮೊಥೆರಪಿ, ರೇಡಿಯೇಷನ್ ಥೆರಪಿಗಳಂಥವನ್ನು ಬಳಸಬೇಕಾಗುತ್ತದೆ. ಅವು ಕ್ಯಾನ್ಸರ್ ಕೋಶಗಳನ್ನೇನೋ ಕೊಲ್ಲುತ್ತವೆ. ಆದರೆ, ಅವುಗಳ ತೀವ್ರತೆಗೆ ದೇಹ ಹಲವು ಅಡ್ಡಪರಿಣಾಮಗಳಿಗೆ ಸಿಲುಕಿ ನಲುಗುತ್ತದೆ. ಹಾಗೆಂದೇ ಜೀವ ಉಳಿಸಿಕೊಳ್ಳುವ ಸಾಧ್ಯತೆ ಕಡಿಮೆಯಾಗುತ್ತದೆ.

ಆದರೆ ಹೀಗೆ ಪ್ರಾರಂಭಿಕ ಹಂತದಲ್ಲೇ ಪತ್ತೆಯಾಗುವುದಕ್ಕೆ ಹಲವು ಅಡ್ಡಿಗಳಿವೆ. ದೇಹದ ಅವಯವವೊಂದರಲ್ಲಿ ಕೋಶಗಳು ಪರಿಧಿ ಮೀರಿ ಬೆಳೆದು ಗಡ್ಡೆಯಾಗುವ ವಿದ್ಯಮಾನ ಪ್ರಾರಂಭಿಕವಾಗಿ ಸೂಕ್ಷ್ಮವಾದದ್ದು. ಹೊಟ್ಟೆ ಊದಿಕೊಂಡರೆ, ಆಹಾರ ಸೇವನೆ ಕಡಿಮೆಯಾಗಿ ನಿಃಶ್ಶಕ್ತಿ ಆದಾಗಲೆಲ್ಲ ಯಾರೂ ಏಕಾಏಕಿ ಜೀರ್ಣಾಂಗದಲ್ಲಿ ಕ್ಯಾನ್ಸರ್ ಇದ್ದಿರಬಹುದೆಂಬ ತೀರ್ಮಾನಕ್ಕೆ ಬರುವುದಿಲ್ಲ. ಹೀಗಾಗಿ ಸ್ಥಳೀಯ ವೈದ್ಯರ ವಿಶ್ಲೇಷಣೆ ಆಧರಿಸಿ ಅಜೀರ್ಣಕ್ಕೋ, ಹೊಟ್ಟೆನೋವಿಗೋ ಬೇಕಾದ ಏನೆಲ್ಲ ಔಷಧ ಪ್ರಯೋಗ ವರ್ಷಗಟ್ಟಲೇ ನಡೆಯುತ್ತದೆ. ಅದಾಗಿ, ಕ್ಯಾನ್ಸರ್ ಇರಬಹುದಾ ಎಂಬ ಪರೀಕ್ಷೆ ಮಾಡಿಸಿಕೊಳ್ಳುವುದೂ ಎಲ್ಲರಿಗೂ ಲಭ್ಯವಿರುವ ಆರೋಗ್ಯ ಸೇವೆ ಏನಲ್ಲ. ಅದರ ಲಭ್ಯತೆ ಮತ್ತು ವೆಚ್ಚಗಳೆರಡೂ ಹೆಚ್ಚಿನವೇ. ಮತ್ತೆ ಇಂಥ ಪರೀಕ್ಷೆಗಳಲ್ಲಿ ಕೆಲವೊಮ್ಮೆ ಸುಳ್ಳು ಎಚ್ಚರಿಕೆಯೂ ಧ್ವನಿಸುವುದಿದೆ..ಅಂದರೆ, ಮತ್ತೇನೋ ಚಿಕ್ಕ ವ್ಯತ್ಯಾಸವಾಗಿದ್ದರೂ ಕ್ಯಾನ್ಸರ್ ಗಡ್ಡೆಯೇ ರೂಪುಗೊಳ್ಳುತ್ತಿದೆ ಅಂತ ಫಲಿತಾಂಶ ಬಂದಿದ್ದಿದೆ. ತಂತ್ರಜ್ಞಾನ ಮತ್ತು ವೈದ್ಯ ವಿಜ್ಞಾನ ಸುಧಾರಿಸುತ್ತಿದೆ ಎಂಬ ಮಾತು ಹೌದಾದರೂ ಕ್ಯಾನ್ಸರ್ ಪ್ರಾರಂಭಿಕ ಪತ್ತೆಯ ಸಾಧನ ಲಭ್ಯತೆ ಸಾರ್ವತ್ರಿಕವಾಗಿಲ್ಲ ಎಂಬುದು ವಾಸ್ತವ. 

file pic
ರಿಲಾಯನ್ಸ್ ಬೃಹತ್ ಉದ್ಯೋಗ ಕಡಿತ: ನಾವು ತಿಳಿದಿರಲೇಬೇಕಾದ ನೌಕರಿ ಭವಿಷ್ಯ! (ತೆರೆದ ಕಿಟಕಿ)

ಕ್ವಾಂಟಂ ವಿಜ್ಞಾನ (quantum science) ಹಾಗೂ ಅದನ್ನಾಧರಿಸಿದ ಕ್ವಾಂಟಂ ಗಣಕವ್ಯವಸ್ಥೆ (Quantum computing) ಅಭಿವೃದ್ಧಿಯಾಗುತ್ತಲೇ ಕ್ಯಾನ್ಸರ್ ಥರದ ಸಮಸ್ಯೆಗೆ ಉತ್ತರ ಸುಲಭವಾಗಿಬಿಡುತ್ತದೆ ಎಂಬುದು ಒಂದು ನಿರೀಕ್ಷೆ. ಅಂದಹಾಗೆ, ಕ್ವಾಂಟಂ ಕಂಪ್ಯೂಟರ್ ಅಭಿವೃದ್ಧಿಗೆ ಚೀನಾ, ಅಮೆರಿಕದ ದೈತ್ಯ ಕಂಪನಿಗಳು, ರಷ್ಯ ಹೀಗೆ ಜಗತ್ತಿನ ಪ್ರಮುಖ ಶಕ್ತಿಗಳು ತೆರೆಮರೆಯಲ್ಲಿ ಪೈಪೋಟಿಯಲ್ಲಿವೆ. 2020ರಲ್ಲಿ ಭಾರತವು ಸಹ ಕ್ವಾಂಟಂ ಗಣಕ ವ್ಯವಸ್ಥೆ ಮತ್ತು ಸಾಧನಗಳ ಕುರಿತ ಸಂಶೋಧನೆಗೆಂದೇ 8,000 ಕೋಟಿ ರುಪಾಯಿಗಳ ಕಾರ್ಯಕ್ರಮ ರೂಪುರೇಷೆ ತಯಾರಿಸಿ ಐಐಟಿಗಳು, ಖಾಸಗಿ ತಂತ್ರಜ್ಞಾನ ಕಂಪನಿಗಳು, ವಿಜ್ಞಾನಿಗಳೆಲ್ಲರ ಸಹಯೋಗ-ಸಮನ್ವಯಗಳನ್ನು ರೂಪಿಸುತ್ತಿದೆ.

ಮತ್ತೆ ಈ ಕ್ವಾಂಟಂ ಅನ್ನು ಸರಳವಾಗಿಸಿ ಅರ್ಥಮಾಡಿಕೊಳ್ಳುವುದಾದರೆ, ಮೈಕ್ರೊಸ್ಕೋಪಿಗೂ ಸಿಗದ ಕಣದ ಹಂತಕ್ಕೆ ಇಳಿದು ಗಣಿತ-ಲೆಕ್ಕಾಚಾರಗಳನ್ನು ಮಾಡುವ ಸಾಮರ್ಥ್ಯ. ಅದಕ್ಕೆ ಇವತ್ತಿನ ಕಂಪ್ಯೂಟರ್ ವ್ಯವಸ್ಥೆ ನಿಂತಿರುವ ಜಿರೊ ಮತ್ತು ಒಂದರ ಬೈನರಿ ವ್ಯವಸ್ಥೆ ಸಾಕಾಗುವುದಿಲ್ಲ. ಹೀಗಾಗಿ ಕ್ವಾಂಟಂ ಗಣಕಕ್ಕೆ ಕ್ಯೂಬಿಟ್ ಎಂಬ ಪರಿಕಲ್ಪನೆ ಆಧಾರ. ಉದಾಹರಣೆಗೆ, ನೀವೊಂದು ನಾಣ್ಯ ಮೇಲಕ್ಕೆ ಚಿಮ್ಮಿದರೆ ಅದು ಹೆಡ್ಸ್ ಮೇಲಾಗಿ ಬೀಳುತ್ತದೆ, ಇಲ್ಲವೇ ಟೇಲ್ಸ್. ಜೀರೊ ಇಲ್ಲವೇ ಒಂದು. ಆದರೆ, ಹೆಡ್ಸ್, ಟೇಲ್ಸ್ ಇವೆರಡು ಸಾಧ್ಯತೆಗಳ ಜತೆಗೆ ಹೆಡ್ಸ್ ಮತ್ತು ಟೇಲ್ಸ್ ಎರಡೂ ಏಕಕಾಲದಲ್ಲಿ ಆಗಿದ್ದಿರಬಹುದಾದ ಸಾಧ್ಯತೆಯೊಂದನ್ನು ನೀವು ಕಲ್ಪಿಸಿಕೊಳ್ಳಬಲ್ಲಿರಾದರೆ ಅದುವೇ ಕ್ವಾಂಟಂ ಲೆಕ್ಕಾಚಾರ! ಥಿಯರಿ ಪ್ರಕಾರ ಕ್ವಾಂಟಂ ಪಾರ್ಟಿಕಲ್ಸ್ ಅನ್ನೋದು ಏಕಕಾಲದಲ್ಲಿ ಎರಡು ಕಡೆ ಕಾಣಿಸಿಕೊಳ್ಳಬಲ್ಲದು.

ಈ ಎಲ್ಲ ಬೆರಗುಗಳ ಕತೆ ಹಾಗಿರಲಿ. ನಾವಿಲ್ಲಿ ಅರ್ಥಮಾಡಿಕೊಳ್ಳಬೇಕಿರುವುದು ಕ್ವಾಂಟಂ ಗಣಕವು ಬಂದಿದ್ದೇ ಆದರೆ ಅದು ನಿಮ್ಮ ಮೂತ್ರವನ್ನೋ, ರಕ್ತದ ಹನಿಯನ್ನೋ ತೆಗೆದುಕೊಂಡು ಅದರಲ್ಲಾಗಿರುವ ಅತಿಸೂಕ್ಷ್ಮ ಬದಲಾವಣೆಗಳ ಮಾಹಿತಿಗಳನ್ನೆಲ್ಲ ಸಮನ್ವಯಿಸಿ ಗಣಿತಗಳನ್ನು ಮಾಡಿ, ಯಾವ ಭಾಗದಲ್ಲಿ ಕೋಶಗಳು ಅಗತ್ಯಕ್ಕಿಂತ ಬೆಳವಣಿಗೆ ಕಾಣುವುದಕ್ಕೆ ಶುರುವಾಗಿವೆ ಎಂಬುದನ್ನು ಖಚಿತವಾಗಿ ಹಾಗೂ ಅತಿ ಮುಂಚಿತವಾಗಿ ಹೇಳಿಬಿಡಬಲ್ಲದು. ಹೀಗಾಗಿ ಕ್ವಾಂಟಂ ಕಂಪ್ಯೂಟಿಂಗ್ ಬಂದ ಕಾಲಕ್ಕೆ ಕ್ಯಾನ್ಸರ್ ಎಂಬುದು ಸಹ ಜ್ವರ-ನೆಗಡಿಯಂತೆ ಆದೀತು ಎನ್ನುವುದು ನಿರೀಕ್ಷೆ. 

ಆದರೆ, ಕ್ವಾಂಟಂ ಎಂಬ ಬೆರಗಿನ ಕಾವಲುಗಾರನ ಅವತಾರ ಪ್ರಕಟೀಕರಣವಾಗುವುದಕ್ಕೆ ಎಷ್ಟು ಕಾಲ ಹಿಡಿವುದೋ ಗೊತ್ತಿಲ್ಲ. ಅದಕ್ಕೂ ಮುಂಚೆ ಕ್ಯಾನ್ಸರ್ ಬಗ್ಗೆ ಎಚ್ಚರಿಸುವ ಕಾವಲುನಾಯಿಯ ಪಾತ್ರ ಯಾರು ನಿರ್ವಹಿಸುತ್ತಾರೆ? ಹೀಗೊಂದು ಪ್ರಶ್ನೆಗೆ ನಿಸರ್ಗ ಹೇಳುತ್ತಿರುವ ಅಚ್ಚರಿಯ ಉತ್ತರ ಎಂದರೆ- ನೀವು ಮುದ್ದಿನಿಂದ ಸಾಕಿದ ಮನೆನಾಯಿಯೇ ಆ ಕೆಲಸ ಮಾಡೀತು!

ಮುದ್ದುನಾಯಿಯ ಮೌನ ಮತ್ತು ಕ್ಯಾನ್ಸರ್ ಆಗಮನ!

ಇಂಗ್ಲೆಂಡಿನ ಇಳಿವಯಸ್ಸಿನ ಹೆಂಗಸಿಗೆ ಮ್ಯಾಕ್ಸ್ ಎಂಬ ಬಾರ್ಡರ್ ಕಾಲಿ (Border Collie) ಕ್ರಾಸ್ ಬ್ರೀಡ್ ಗಂಡು ಶ್ವಾನದ ಸಂಗಾತ. ತುಂಬ ಲವಲವಿಕೆಯಿಂದಿರುತ್ತಿದ್ದ ಈತ ಒಮ್ಮೆಗೇ ಬಹಳ ಡಲ್ ಆದ. ಈಕೆಯ ಬಳಿಸಾರುವುದನ್ನೇ ಕಡಿಮೆ ಮಾಡಿದ. ಈಕೆಯನ್ನು ನೋಡಿದಾಗಲೆಲ್ಲ ಆತನ ಕಣ್ಣುಗಳಲ್ಲಿ ಕಡು ವಿಷಾದ! ಬಹುಶಃ ಈ ನಾಯಿಗೇನೋ ಅನಾರೋಗ್ಯವಾಗಿದೆ, ಸತ್ತುಹೋಗುತ್ತದೆ ಎಂದೇ ಆಕೆ ಅಂದುಕೊಳ್ಳುತ್ತಿದ್ದಳು.

ಆದರೆ, ಮ್ಯಾಕ್ಸ್ ಈಕೆಯ ಬಳಿ ಬಂದಾಗ ಆಕೆಯ ಎದೆಹತ್ತಿ ಸ್ತನಗಳನ್ನು ಮೂಸಿ ಮತ್ತೆ ಹಿಂದೆ ಹೋಗುತ್ತಿದ್ದದ್ದು ಆಕೆಗೆ ಇದ್ಯಾವುದೋ ಬೇರೆ ಸೂಚನೆ ಎನಿಸಿತು. ಸ್ತನದಲ್ಲಿ ಸಣ್ಣದೊಂದು ಗಡ್ಡೆಯ ಅನುಭವ ಅದಾಗಲೇ ಅವಳ ಅರಿವಿಗೆ ಬಂದಿತ್ತಾದರೂ ಪ್ರಾಥಮಿಕ ಹಂತದ ಪರೀಕ್ಷೆಗಳಿಂದ ಎಲ್ಲವೂ ಸರಿ ಇದೆ ಎಂದೇ ಬಂದಿತ್ತು. ಆದರೀಗ ಮ್ಯಾಕ್ಸ್ ವರ್ತನೆಯ ಕಾರಣಕ್ಕೆ ಆಕೆ ಮತ್ತೆ ಪರೀಕ್ಷೆಗಳನ್ನು ಮಾಡಿಸಿದಾಗ ಸ್ತನ ಕ್ಯಾನ್ಸರ್ ಇರುವುದು ದೃಢಗೊಂಡಿತು. ನಂತರ ಶಸ್ತ್ರಚಿಕಿತ್ಸೆ ಮೂಲಕ ಸ್ತನ ತೆಗೆದುಹಾಕಲಾಯಿತು. ಆಕೆ ಸುಧಾರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ಮರಳುತ್ತಲೇ ಅವಳನ್ನು ಮೂಸಿ ಸಂತೃಪ್ತನಾದ ಮ್ಯಾಕ್ಸ್ ಕುಣಿದು ಕುಪ್ಪಳಿಸಿದ! ಅಷ್ಟೇ ಅಲ್ಲ, ಮತ್ತೆ ತನ್ನ ಚಟುವಟಿಕೆಯ ದಿನಗಳಿಗೆ ಮರಳಿಯೇಬಿಟ್ಟ.

file pic
ಚಂದ್ರನ ಗುಹೆ, ಮಂಗಳದ ಗರ್ಭಜಲ, ನಕ್ಷತ್ರ ಸ್ಫೋಟ, ಹಾಗೂ ಕುರುಡಾಗಲಿರುವ ಎಕ್ಸ್ ರೇ ಕಣ್ಣು! (ತೆರೆದ ಕಿಟಕಿ)

ಇದು ಹತ್ತು ವರ್ಷಗಳ ಹಿಂದೆಯೇ ಬಿಬಿಸಿ ಅರ್ಥ್ ಪ್ರಸ್ತುತಪಡಿಸಿದ ‘ಸಿಕ್ರೇಟ್ ಲೈಫ್ ಆಫ್ ಡಾಗ್ಸ್’ ಸಾಕ್ಷ್ಯಚಿತ್ರದಿಂದ ಆಯ್ದ ಒಂದು ದೃಶ್ಯಕತೆ. ಹಾಗಂತ, ಇದು ಯಾವುದೋ ಒಂದು ನಾಯಿಗೆ ಇದ್ದ ಶಕ್ತಿ ಅಲ್ಲ. 1989ರಲ್ಲಿಯೇ ಶ್ವಾನಗಳಿಗೆ ಕ್ಯಾನ್ಸರ್ ಗಡ್ಡೆಗಳ ಇರುವಿಕೆಯನ್ನು ವಾಸನೆಯಿಂದಲೇ ಅರಿಯುವ ಶಕ್ತಿ ಇದೆ ಎಂದು ಪ್ರಸ್ತಾಪವಾಗಿತ್ತು. 2006ರಷ್ಟರ ಹೊತ್ತಿಗೆ ಮಂಡನೆಯಾದ ಅಧ್ಯಯನ ವರದಿಗಳು ಶ್ವಾಸಕೋಶ ಮತ್ತು ಸ್ತನ ಕ್ಯಾನ್ಸರುಗಳ ವಿಷಯದಲ್ಲಿ ಯಾವುದೇ ಯಾಂತ್ರೀಕೃತ ಸಾಧನಗಳಿಗಿಂತ ಪರಿಣಾಮಕಾರಿಯಾಗಿ ನಾಯಿಗಳು ಪತ್ತೆ ಮಾಡಬಲ್ಲವೆಂಬುದನ್ನು ಪುರಾವೆಬದ್ಧವಾಗಿ ಮಂಡಿಸಿದವು.

ಶ್ವಾಸಕೋಶ ಕ್ಯಾನ್ಸರಿಗೆ ತುತ್ತಾದ 55 ಮಂದಿಯ ಮಾದರಿ, ಸ್ತನ ಕ್ಯಾನ್ಸರಿಗೆ ತುತ್ತಾದ 31 ಮಂದಿಯಿಂದ ತೆಗೆದ ಮಾದರಿ, 83 ಆರೋಗ್ಯವಂತ ವ್ಯಕ್ತಿಗಳ ದೇಹದಿಂದ ತೆಗೆದು ಮಾದರಿಗಳು ಇವೆಲ್ಲವನ್ನೂ ಸುತ್ತಲೂ ಇಟ್ಟಾಗ, ನಾಯಿಗಳು ಸೋಂಕಿತ ಮಾದರಿ ಎದುರಿಗೆ ಹೋದಾಗ ಮಾತ್ರ ಬೇರೆಯದೇ ವರ್ತನೆ ತೋರಿ ಸೂಚಿಸಿದವು.

ಈ ಪರೀಕ್ಷೆಯನ್ನು ಡಬಲ್-ಬ್ಲೈಂಡ್ ವಿಧಾನದಲ್ಲೂ ಮಾಡಲಾಗಿತ್ತು. ಅಂದರೆ, ಪ್ರಯೋಗವೊಂದರಲ್ಲಿ ಭಾಗವಹಿಸುವವರಿಗೆ ಇಲ್ಲವೇ ಅದನ್ನು ನಡೆಸುವ ಸಂಶೋಧಕರಿಗೆ ಸಹ ಇಲ್ಲಿ ಪ್ಲಸಿಬೊ ಮಾದರಿ ಯಾರ ಮೇಲಾಗುತ್ತಿದೆ, ನಿಜ ಪ್ರಯೋಗಕ್ಕೆ ಒಳಪಡುತ್ತಿರುವವರು ಯಾರು ಅಥವಾ ಯಾವ ಗುಂಪು ಎಂಬುದೇನೂ ತಿಳಿದಿರುವುದಿಲ್ಲ. ಪ್ರಯೋಗಗಳಲ್ಲಿ ಮಾನವ ಪೂರ್ವಾಗ್ರಹಗಳು ಕಾಣಿಸಿಕೊಳ್ಳದಿರಲು ಬಳಸುವ ವೈಜ್ಞಾನಿಕ ವಿಧಾನವಿದು.

ಇಂಥವೆಲ್ಲದರ ಮೂಲಕ ಸಾಬೀತಾಗಿರುವುದೇನೆಂದರೆ, ದೇಹದಲ್ಲಿ ಬೇಡದ ಕೋಶವೊಂದು ಬೆಳವಣಿಗೆ ಹೊಂದುತ್ತಿರುವುದರ ಅತಿಸೂಕ್ಷ್ಮ ವಾಸನೆಯನ್ನು ಸಹ ಗುರುತಿಸುವ ಶಕ್ತಿ ಶ್ವಾನಗಳಿಗಿದೆ. ಬಾಂಬ್ ಪತ್ತೆಗೆ ಶ್ವಾನಪಡೆ ತಯಾರುಮಾಡಿದಂತೆ ಈಗ ವೈದ್ಯ ವಿಭಾಗದಲ್ಲಿ ಸಹ ಆಯ್ದ ತಳಿಯ ನಾಯಿಗಳನ್ನು ಇಂಥ ವೈದ್ಯಕೀಯ ವಾಸನೆ ಪತ್ತೆಯ ಪಡೆಗೆಂದೇ ತರಬೇತು ಮಾಡಲಾಗುತ್ತಿದೆ. 

ಬ್ರಹ್ಮಾಂಡ ಬೆರಗು

ಈ ವಿಶ್ವದ ರಹಸ್ಯಗಳ ರಸವತ್ತತೆ ಹೇಗಿದೆ ನೋಡಿ. ಅವುಗಳ ಬೃಹತ್ ವ್ಯಾಪ್ತಿ ಅರಿಯುವುದಕ್ಕೆ ಕ್ವಾಂಟಂ ಮೆಕಾನಿಕ್ಸ್ ಥರದ ಇನ್ನೂ ರೂಪುಗೊಳ್ಳುತ್ತಿರುವ ವಿಜ್ಞಾನದ ಬೆನ್ನೂ ಹತ್ತಬೇಕು. ಹಾಗಲ್ಲದೇ, ನಮ್ಮ ಹತ್ತಿರದ ಜೀವಿಯೊಂದರಲ್ಲೂ ಆ ರಹಸ್ಯದ ಆಯಾಮವೊಂದನ್ನು ಸ್ಪರ್ಶಿಸಬಹುದಾದ ತಾಕತ್ತಿದೆ!

ಜೀವ ವಿಕಾಸದಲ್ಲಿ ನಾಯಿಯು ಮಾನವನ ಸಾಕುವಿಕೆ ಸಾಂಗತ್ಯಕ್ಕೆ ಬಂದಿದ್ದು ಹೇಗಿದ್ದಿರಬಹುದೆಂಬುದರ ಕುರಿತು ಹೀಗೆ ವಿಶ್ಲೇಷಿಸಲಾಗುತ್ತದೆ- ಆಗಿನ್ನೂ ಮಾನವತೆಯು ನಾಗರಿಕತೆಗೆ ಕಾಲಿಟ್ಟಿರಲಿಲ್ಲ. ಗುಂಪಿನಲ್ಲಿದ್ದುಕೊಂಡು ಬೇಟೆ ಮಾಡಿ ಬದುಕುತ್ತಿತ್ತು. ಹೀಗೆ ಬೇಟೆ ಆಡಿದಾಗ ಮನುಷ್ಯರು ತಿಂದುಮುಗಿದ ನಂತರವೂ ಉಳಿಯುತ್ತಿದ್ದ ಮೂಳೆ ಮತ್ತು ಮಾಂಸದ ಅವಶೇಷಗಳಿಗಾಗಿ ತೋಳಗಳ ಒಂದು ವಿಭಾಗ ಮನುಷ್ಯರಿಗೆ ಹತ್ತಿರವಾಗತೊಡಗಿತು. ನಿಧಾನಕ್ಕೆ ಮನುಷ್ಯರಿಗೂ ಇವುಗಳನ್ನು ತಮ್ಮೊಂದಿಗೆ ಸಾಕಿಕೊಳ್ಳುವ ಪರಿಕಲ್ಪನೆ ಬಂತು. ಏಕೆಂದರೆ, ಅವತ್ತಿಗೆ ಸಾಧನಗಳನ್ನು ಉಪಯೋಗಿಸಿಕೊಂಡು ಬೇಟೆ ಆಡಿ ಆಹಾರ ದೊರಕಿಸಿಕೊಳ್ಳುವುದರಲ್ಲಿ ಮನುಷ್ಯರು ತೋಳಗಳ ಜಾತಿಗಳಿಗಿಂತ ಹಲವುಪಟ್ಟು ಕೌಶಲಭರಿತ ಸಮರ್ಥರಾಗಿದ್ದರು.

file pic
ಬಾಂಗ್ಲಾದಿಂದ ಶೇಖ್ ಹಸೀನಾ ಹೊರಕ್ಕೆ: ಭಾರತೀಯರು ಗೋಳಾಡುವ ಅಗತ್ಯ ಇಲ್ಲ, ಏಕೆಂದರೆ… (ತೆರೆದ ಕಿಟಕಿ)

ಆದರೆ, ಮೂಗಿನ ವಾಸನೆ ಹಿಡಿದು ಬೇಟೆ ಹುಡುಕುವುದರಲ್ಲಿ ತೋಳಗಳದ್ದೇ ಕೈಮೇಲು. ಹೀಗಾಗಿ ಮಾನವರಿಗೆ ಅವು ಬೇಟೆಯ ದಿಕ್ಸೂಚಿಗಳಾದವು. ತೋಳಗಳ ಪ್ರಬೇಧದ ಈ ಜೀವಿಗಳು ಸಾವಿರ-ಸಾವಿರ ವರ್ಷಗಳ ಪರಿವರ್ತನೆ ನಂತರ ನಾಯಿಗಳಾಗಿ, ಅದೇ ವಿಕಸನ ಪ್ರಕ್ರಿಯೆ ಭಾಗವಾಗಿ ಹಲವು ಜಾತಿಯ ನಾಯಿಗಳು ಈಗಿವೆ. 

ಕಾಲಕ್ರಮೇಣ ಈ ನಾಯಿಗಳು ಮನುಷ್ಯನ ಮೇಲೆ ಅವತ್ತಿಗೆ ಎರಗಬಹುದಾಗಿದ್ದ ಅಸಂಖ್ಯ ದಾಳಿ ಸಾಧ್ಯತೆಗಳ ಬಗ್ಗೆ ಎಚ್ಚರಿಕೆ ಕೊಡುತ್ತ ಕಾವಲುಗಾರರಾದವು. ಮನುಷ್ಯರು ಒಂದೆಡೆ ನೆಲೆ ನಿಂತು, ತಮ್ಮ ಬೇಟೆಗಾರ ಬದುಕಿನಿಂದ ಹೊರಬಂದು ಕೃಷಿ ಮಾಡುವುದಕ್ಕೆ ಹೊರಳಿಕೊಳ್ಳುವುದರಲ್ಲಿ ನಾಯಿಗಳ ಯೋಗದಾನ ದೊಡ್ಡದಿದೆ. ಹಾಗೆ ಕೃಷಿ ಪ್ರಾರಂಭವಾಗಿ ಎಷ್ಟೋ ನೂರು ವರ್ಷಗಳ ಬಳಿಕ ಮನುಷ್ಯನು ಎಮ್ಮೆ, ಆಕಳು, ಕುರಿ ಇತ್ಯಾದಿಗಳನ್ನು ಪಳಗಿಸಿ ಅವನ್ನು ಕೃಷಿಗೆ ಪೂರಕವಾಗಿ ಸಾಕುಪ್ರಾಣಿಗಳನ್ನಾಗಿಸಿದ್ದಿರಬೇಕು. ಹೀಗಾಗಿ, ನಾಯಿಗಳು ಮನುಷ್ಯನ ಸಹವಾಸಕ್ಕೆ ಬಂದು ಪಳಗಿದ ಪ್ರಾಣಿಗಳಲ್ಲಿ ಮೊದಲಿಗರು.

ಅವತ್ತು ವಾಸನೆ ಬೆಂಬತ್ತಿ ಬೇಟೆಗೆ ಸಹಕರಿಸಿದವು, ಇರುಳಲ್ಲಿ ಬೇರೆ ಪ್ರಾಣಿಗಳು ಮಾನವರ ಮೇಲೆ ದಾಳಿ ಮಾಡುವುದರ ವಿರುದ್ಧ ಎಚ್ಚರಿಸುವ ಕಾವಲುಗಾರರಾಗಿದ್ದ ಜೀವಿಗಳು, ಇವತ್ತಿಗೆ ಮನುಷ್ಯನನ್ನು ಒಳಗಿಂದಲೇ ಬೇಟೆಯಾಡುತ್ತಿರುವ ರೋಗಗಳ ವಿರುದ್ಧ ಕಾವಲುಗಾರರಾಗುವ ಸಾಮರ್ಥ್ಯ ಪಡೆದಿವೆ ಎಂಬ ಅಂಶದಲ್ಲೇ ಬ್ರಹ್ಮಾಂಡದ ಬೆರಗಿನ ಉದಾಹರಣೆಯೊಂದಿದೆ ಎಂದು ಅನಿಸುವುದಿಲ್ಲವಾ?

- ಚೈತನ್ಯ ಹೆಗಡೆ

cchegde@gmail.com

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com