ಮುಂದುವರಿದ ಈ ದೇಶಗಳೇಕೆ ಹಳ್ಳಿಗಳಿಗೆ ಹಿಂತಿರುಗುತ್ತಿವೆ? ಉಳುಮೆ ಮಾಡೋದಕ್ಕಂತೂ ಅಲ್ಲ! (ತೆರೆದ ಕಿಟಕಿ)

ಇದೀಗ ಜಪಾನ್ ನೀತಿಗಳು ಟೊಕಿಯೊದಿಂದ ದೇಶದ ಇತರ ಭಾಗಗಳಿಗೆ ಹೋಗುವ ಜನರಿಗೆ ಹಣಕಾಸು ಪ್ರೋತ್ಸಾಹ ಕೊಡುವಂತೆ ರೂಪಿತವಾಗಿವೆ. ಟೊಕಿಯೊದಲ್ಲಿ ಹಲವು ವರ್ಷಗಳಿಂದ ವಾಸವಿದ್ದು, ಈಗ ಗ್ರಾಮೀಣ ಭಾಗಕ್ಕೆ ವಸತಿ ಬದಲಾಯಿಸುವ ಕುಟುಂಬಕ್ಕೆ 7,500 ಡಾಲರುಗಳ ಮೌಲ್ಯದ ಹೆಚ್ಚುವರಿ ಹಣ ಸಿಗುತ್ತದೆ.
remote working (file pic)
ಹಳ್ಳಿಗಳಿಂದ ಕೆಲಸ (ಸಂಗ್ರಹ ಚಿತ್ರ)online desk
Updated on

ಜಪಾನ್, ಪೋರ್ಚುಗಲ್, ಐರ್ಲೆಂಡ್, ಆಸ್ಟ್ರೇಲಿಯಾ…

ಈ ದೇಶಗಳಲ್ಲಿ ಒಂದು ಆಸಕ್ತಿಕರ ಟ್ರೆಂಡ್ ಇದೆ. ಇಂಥದೇ ಟ್ರೆಂಡ್ ಬೇರೆ ದೇಶಗಳಲ್ಲೂ ಇದ್ದಿರಬಹುದು. ಆದರೆ, ವರ್ಲ್ಡ್ ಎಕನಾಮಿಕ್ ಫೋರಂ ವೇದಿಕೆಯಲ್ಲಿ ಪ್ರಕಟವಾಗಿರುವ ಉದಾಹರಣೆಗಳು ಇವಾಗಿದ್ದರಿಂದ ಇವನ್ನೇ ಇಲ್ಲಿ ಉಪಯೋಗಿಸಿಕೊಳ್ಳಲಾಗಿದೆ. ಈ ಎಲ್ಲ ದೇಶಗಳೂ ತಮ್ಮ ಗ್ರಾಮೀಣ ಭಾಗಗಳಿಗೆ ತೆರಳಿ ನೆಲೆಸುವುದಕ್ಕೆ ಪ್ರಜೆಗಳಿಗೆ ಹಣಕಾಸು ಉತ್ತೇಜನಗಳನ್ನು ಕೊಡುತ್ತಿವೆ!

ಟೊಕಿಯೊ ಜಪಾನಿನ ಜನದಟ್ಟಣೆಯ ನಗರ. ಸುಮಾರು ಮೂರೂವರೆ ಕೋಟಿ ಜನರು ವಾಸಿಸುವ ಈ ನಗರ ಜಗತ್ತಿನ ಅತಿ ಜನಸಾಂದ್ರತೆಯ ನಗರಗಳಲ್ಲಿ ಮೊದಲಿಗನಾಗಿ ನಿಲ್ಲುತ್ತದೆ. ಹಾಗಂತ, ಖುದ್ದು ಟೊಕಿಯೊದಲ್ಲಿ ಹಾಗೂ ಒಟ್ಟಾರೆ ಜಪಾನಿನಲ್ಲಿ ಜನಸಂಖ್ಯೆ ಇಳಿಮುಖದಲ್ಲಿದೆ. ಅಂದರೆ, ಟೊಕಿಯೊಕ್ಕಿರುವ ಸಮಸ್ಯೆ ಜನಸಂಖ್ಯೆಯ ಸ್ಫೋಟದ್ದೇನಲ್ಲ, ಆದರೆ ಸಾಂದ್ರತೆಯದ್ದು. ಇದೀಗ ಜಪಾನ್ ನೀತಿಗಳು ಟೊಕಿಯೊದಿಂದ ದೇಶದ ಇತರ ಭಾಗಗಳಿಗೆ ಹೋಗುವ ಜನರಿಗೆ ಹಣಕಾಸು ಪ್ರೋತ್ಸಾಹ ಕೊಡುವಂತೆ ರೂಪಿತವಾಗಿವೆ. ಟೊಕಿಯೊದಲ್ಲಿ ಹಲವು ವರ್ಷಗಳಿಂದ ವಾಸವಿದ್ದು, ಈಗ ಗ್ರಾಮೀಣ ಭಾಗಕ್ಕೆ ವಸತಿ ಬದಲಾಯಿಸುವ ಕುಟುಂಬಕ್ಕೆ 7,500 ಡಾಲರುಗಳ ಮೌಲ್ಯದ ಹೆಚ್ಚುವರಿ ಹಣ ಸಿಗುತ್ತದೆ.

ಗ್ರಾಮೀಣ ಭಾಗಗಳಿಗೆ ವಸತಿ ಬದಲಾಯಿಸುವ ತನ್ನ ಪ್ರಜೆಗಳಿಗೆ, ಅಲ್ಲಿನ ಮನೆಯೊಂದರ ವಾರ್ಷಿಕ ಬಾಡಿಗೆ ಮೊತ್ತವಾಗಿರುವ 4,827 ಯೂರೊಗಳನ್ನು ಪಾವತಿಸುವ ಗ್ರಾಂಟ್ ಯೋಜನೆಯೊಂದನ್ನು 2020ರಲ್ಲಿ ಪೋರ್ಚುಗಲ್ ಜಾರಿಗೆ ತಂದಿತು. 

ದಕ್ಷಿಣ ಇಟಲಿಯ ಹಳ್ಳಿಯೊಂದರಲ್ಲಿ 115 ಮಂದಿ ಮಾತ್ರ ವಾಸ್ತವ್ಯ ಹೊಂದಿದವರು. ಈ ಪೈಕಿ ಇಪ್ಪತ್ತು ವರ್ಷದೊಳಗಿನ ವಯೋಮಾನದವರು 13 ಮಂದಿ ಮಾತ್ರ. ಇದನ್ನು ಬದಲಿಸುವುದಕ್ಕಾಗಿ 2020ರಲ್ಲಿ ಯೋಜನೆಯೊಂದು ಜಾರಿಯಾಯ್ತು. ಆ ಪ್ರಕಾರ, ದೂರವಿದ್ದುಕೊಂಡೇ ಕೆಲಸ ಮಾಡಬಲ್ಲ ಉದ್ಯೋಗಗಳಲ್ಲಿರುವವರು ಈ ಊರಿಗೆ ವಾಸ್ತವ್ಯ ಬದಲಿಸುವುದಕ್ಕೆ ವಾರ್ಷಿಕ 8,000 ಯೂರೊಗಳನ್ನು ಮೂರು ವರ್ಷಗಳವರೆಗೆ ನೀಡಲಾಗುತ್ತದೆ. ಅಲ್ಲದೇ, ಅಲ್ಲಿದ್ದುಕೊಂಡು ನವೋದ್ದಿಮೆ ನಿಭಾಯಿಸುತ್ತೇನೆನ್ನುವವರಿಗೆ ನಾಮಕೇವಾಸ್ತೆ ಬಾಡಿಗೆಯುಳ್ಳ ನಿವಾಸವನ್ನೂ ನೀಡಿ, 20,000 ಯೂರೊಗಳ ಗ್ರಾಂಟ್ ಅನ್ನೂ ನೀಡಲಾಗುತ್ತದೆ. 

ಐರ್ಲೆಂಡ್ ಅಂತೂ 2021-25ರ ನಡುವೆ ಹಳ್ಳಿಗಳ ಪುನರುಜ್ಜೀವನಕ್ಕೆ 1 ಬಿಲಿಯನ್ ಯೂರೊಗಳ ಹಣಕಾಸು ನಿಧಿಯನ್ನೇ ಸ್ಥಾಪಿಸಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸುಮಾರು 400 ರಿಮೋಟ್ ಕೆಲಸ ಕೇಂದ್ರಗಳನ್ನು ಸ್ಥಾಪಿಸುವುದು ಈ ಹಣಕಾಸು ನಿಧಿಯ ಮುಖ್ಯ ಉದ್ದೇಶಗಳಲ್ಲೊಂದು. ಹಾಗೆಂದೇ ಐರ್ಲೆಂಡ್ ತನ್ನ ಗ್ರಾಮೀಣ ಪ್ರದೇಶಗಳಿಗೆ ಹೈಸ್ಪೀಡ್ ಅಂತರ್ಜಾಲ ಸೇವೆ ಒದಗಿಸುವುದನ್ನು ಆದ್ಯತೆಯಾಗಿರಿಸಿಕೊಂಡಿದೆ. ಜನಸಾಂದ್ರತೆಯೇ ಕಡಿಮೆಯಾಗಿ ಪಾಳುಸುರಿಯುವಂತಿದ್ದ ಸಮುದಾಯ ಭವನಗಳು, ಥಿಯೇಟರುಗಳನ್ನೆಲ್ಲ ಕೂಡು ಕೆಲಸದ ಕೇಂದ್ರಗಳಾಗಿ ಪರಿವರ್ತಿಸಲಾಗುತ್ತಿದೆ. 

ಹೀಗೆ ಕಂಟ್ರಿಸೈಡ್ ಅರ್ಥಾತ್ ಗ್ರಾಮೀಣ ಭಾಗಗಳಲ್ಲಿ ವಾಸ್ತವ್ಯ ಕಂಡುಕೊಳ್ಳುವುದಕ್ಕೆ ಸ್ಪೇನ್, ಗ್ರೀಸ್, ಕ್ರೊವೇಷಿಯಾ, ಸ್ವಿಡ್ಜರ್ಲೆಂಡ್ ದೇಶಗಳೂ ಉತ್ತೇಜನ ನೀಡುತ್ತಿವೆ. ಈ ಎಲ್ಲ ಟ್ರೆಂಡುಗಳು ಬಲವಾಗುತ್ತಿರುವುದು ಕೊರೊನಾ ಕಾಲಘಟ್ಟದ ನಂತರ. ಏಕೆಂದರೆ, ಆಧುನಿಕ ಉದ್ಯೋಗ ಜಗತ್ತಿನ ಬಹಳಷ್ಟು ಕೆಲಸಗಳನ್ನು ನಗರಗಳ ಕೇಂದ್ರ ಕಚೇರಿ ಹೊರತಾದ ದೂರ ಪ್ರದೇಶಗಳಲ್ಲೇ ಮಾಡಬಹುದು ಎಂಬುದನ್ನು ಎರಡು ವರ್ಷಗಳ ಕೊರೊನಾ ಕಾಲಘಟ್ಟ ತೋರಿಸಿಕೊಟ್ಟಿತು. ಅತಿ ಜನದಟ್ಟಣೆಯ ನಗರಗಳಲ್ಲಿ ಸಂಚಾರದಟ್ಟಣೆ, ಮಾಲಿನ್ಯ, ಜಾಗದ ಸಮಸ್ಯೆಗಳಲ್ಲಿ ಬದುಕು ಬರಡಾಗಿಸಿಕೊಳ್ಳುವುದಕ್ಕಿಂತ ಎಷ್ಟೋ ಉತ್ತಮವಾದ ಜೀವನಮಟ್ಟವನ್ನು ನಗರೇತರ ಭಾಗಗಳಲ್ಲಿ ಕಂಡುಕೊಳ್ಳಬಹುದೆಂಬ ಸತ್ಯವೂ ಮನದಟ್ಟಾಯಿತು. 

ಗ್ಯಾಲಪ್ ಎಂಬುದು ಅಮೆರಿಕದಲ್ಲಿ ನೆಲೆಯಾಗಿದ್ದುಕೊಂಡು ಜಗತ್ತಿನಾದ್ಯಂತ ಹರವು ಹೊಂದಿರುವ ಮ್ಯಾನೇಜ್ಮೆಂಟ್ ಕನ್ಸಲ್ಟಿಂಗ್ ಕಂಪನಿ. ಅದು ಆಗಾಗ ಸಾರ್ವಜನಿಕ ಅಭಿಪ್ರಾಯ ಸಂಗ್ರಹದ ಸಮೀಕ್ಷೆಗಳನ್ನು ಮಾಡುವುದರಲ್ಲಿ ಹೆಸರುವಾಸಿ. ನೀವು ಸಣ್ಣಪಟ್ಟಣ ಇಲ್ಲವೇ ಹಳ್ಳಿಗಳಿಗೆ ವಾಸ್ತವ್ಯ ಬದಲಿಸುವುದಕ್ಕೆ ತಯಾರಿದ್ದೀರಾ ಎಂಬ ಪ್ರಶ್ನೆಯನ್ನು ಅದು ನಿರ್ದಿಷ್ಟ ಸಂಖ್ಯೆಯ ಅಮೆರಿಕನ್ ಮಧ್ಯವಯಸ್ಕರ ಮುಂದಿರಿಸಿದಾಗ 2018ರಲ್ಲಿ ಸಮೀಕ್ಷೆಗೊಳಗಾದವರ ಪೈಕಿ 39 ಶೇಕಡ ಜನ ಸಕಾರಾತ್ಮಕ ಉತ್ತರ ಕೊಟ್ಟಿದ್ದರೆ, 2020ರಲ್ಲಿ ಅದರ ಪ್ರಮಾಣ ಶೇ. 48ಕ್ಕೆ ಏರಿತ್ತು. 

ಭಾರತದ್ದೇನು ಕತೆ?

ಮೇಲೆ ಉದಾಹರಿಸಿದ ಹೆಚ್ಚಿನ ದೇಶಗಳಲ್ಲಿ ಜನಸಂಖ್ಯೆ ಇಳಿಮುಖದಲ್ಲಿದೆ, ಭಾರತದಲ್ಲಿ ಆ ಸಮಸ್ಯೆ ಏನಿಲ್ಲ. ಆದರೆ, ಜನಸಾಂದ್ರತೆ ಸಮಸ್ಯೆ ನಮ್ಮಲ್ಲೂ ಇದೆ. ಒಂದೆಡೆ ದೆಹಲಿ, ಮುಂಬೈ, ಬೆಂಗಳೂರಿನಂಥ ನಗರಗಳಲ್ಲೇ ದೊಡ್ಡಮಟ್ಟದ ಉದ್ಯೋಗಾವಕಾಶಗಳು ಕೇಂದ್ರೀಕೃತವಾಗಿ ಈ ಎಲ್ಲ ನಗರಗಳಲ್ಲಿ ಸಂಚಾರ ವ್ಯವಸ್ಥೆ, ನಾಗರಿಕ ಸೌಲಭ್ಯಗಳು, ವಾತಾವರಣ ಎಲ್ಲವೂ ಕುಸಿದಿವೆ. ಪ್ರತಿಭೆ-ಕೌಶಲ ಮತ್ತು ಬಂಡವಾಳಗಳನ್ನು ಒಂದೆಡೆ ಕೇಂದ್ರೀಕರಿಸಿ ಅಲ್ಲೊಂದು ಪೂರಕ ಸ್ಥಿತಿ ನಿರ್ಮಿಸಿ ವ್ಯವಹಾರ ಸಾಮ್ರಾಜ್ಯ ಬೆಳೆಯುವಂತೆ ಮಾಡುವುದಕ್ಕೆ ಮಹಾನಗರಗಳ ಪರಿಕಲ್ಪನೆ ಸಹಕರಿಸಿದ್ದನ್ನು ಅಲ್ಲಗಳೆಯುವಂತಿಲ್ಲ. ಆದರೆ ಈಗಲ್ಲಿ ಎಷ್ಟೇ ಮೊತ್ತದ ಹಣ ದುಡಿದರೂ ಅದಕ್ಕೆ ಪ್ರತಿಯಾಗಿ ಸಿಗುವ ಜೀವನಮಟ್ಟ ಅಷ್ಟರಲ್ಲೇ ಇದೆ ಎಂಬ ಭಾವನೆ ದಟ್ಟವಾಗುತ್ತಿದೆ. ಇನ್ನೊಂದೆಡೆ, ವಿಶಾಲ ಭಾರತದ ಎಷ್ಟೋ ಹಳ್ಳಿಗಳು ವೃದ್ಧಾಶ್ರಮಗಳಾಗಿ ಜೀವಂತಿಕೆ ಕಳೆದುಕೊಳ್ಳುತ್ತಿವೆ. 

ಈ ನಿಟ್ಟಿನಲ್ಲಿಯೇ ಭಾರತದಲ್ಲೂ ದೂರದಲ್ಲಿದ್ದುಕೊಂಡು ಮಾಡುವ ಮಾದರಿಯ ಕೆಲಸಗಳನ್ನು ಪ್ರೋತ್ಸಾಹಿಸುವ ಅವಶ್ಯವಿದೆ. ಇವತ್ತಿಗೆ ಅದಕ್ಕೆ ಪೂರಕ ವಾತಾವರಣವೂ ಹೆಚ್ಚಿನ ಕಡೆಗಳಲ್ಲಿದೆ. ಭಾರತದ ಹೆಚ್ಚಿನ ಸಣ್ಣಪಟ್ಟಣಗಳಲ್ಲಂತೂ ಇವತ್ತಿಗೆ ವಿದ್ಯುತ್, ರಸ್ತೆ, ಅಂತರ್ಜಾಲ ಮೂಲಸೌಕರ್ಯಗಳೆಲ್ಲವೂ ತಲುಪಿವೆ. ಹೀಗಿರುವಾಗ, ಯಾವೆಲ್ಲ ಕೆಲಸಗಳನ್ನು ಹೈಬ್ರಿಡ್-ರಿಮೋಟ್ ಮಾದರಿಯಲ್ಲಿ ಮಾಡಲು ಸಾಧ್ಯವಿದೆಯೋ ಅವಕ್ಕೆಲ್ಲ ಹಲವು ಇಂಡಸ್ಟ್ರಿಗಳು ಕಲೆತು ಕೆಲವು ಪ್ರದೇಶಗಳನ್ನು ಗುರುತು ಮಾಡಿ ಅಲ್ಲೆಲ್ಲ ಕೊ-ವರ್ಕಿಂಗ್ ಘಟಕಗಳು ತಲೆಎತ್ತುವಂತೆ ಪ್ರೋತ್ಸಾಹಿಸಿದರೆ, ಬೆಂಗಳೂರಿನಂಥ ನಗರಗಳ ಭಾರ ಬಹಳಷ್ಟುಮಟ್ಟಿಗೆ ಕಡಿಮೆಯಾಗುತ್ತದೆ. ನಿಜ..ಬೆಂಗಳೂರೆಂಬುದು ತಂಡಗಳು ಆಗೀಗ ಒಗ್ಗೂಡಿ ಕೆಲಸ ಮಾಡುವ, ಟೀಮ್ ಬಾಂಡ್ ಬಿಗಿಯಾಗಿಸುವ ಜಾಗವಾಗಿ ಕೇಂದ್ರ ಕಚೇರಿ ಹೊಂದಿರಲಿ. ಆದರೆ, ಫೈನಾನ್ಸ್, ತಂತ್ರಜ್ಞಾನ, ಬರವಣಿಗೆ, ಡಿಸೈನಿಂಗ್ ವಿಭಾಗದ ಬಹಳಷ್ಟು ನೌಕರಿಗಳನ್ನು ಎಲ್ಲಿದ್ದುಕೊಂಡು ಮಾಡಿದರೂ ಒಂದೇ ಎಂಬ ಸ್ಥಿತಿ ಇದೆ. 

ಉದಾಹರಣೆಗೆ, ಪತ್ರಿಕೋದ್ಯೋಗವನ್ನೇ ತೆಗೆದುಕೊಳ್ಳಿ. ವರದಿ, ಸಂದರ್ಶನ, ಕ್ಷೇತ್ರಕಾರ್ಯಗಳಿಗೆ ಆಯಾ ಕ್ಷೇತ್ರಗಳಲ್ಲಿದ್ದುಕೊಂಡು ಕೆಲಸ ಮಾಡುವವರು ಬೇಕು. ಆದರೆ ಅವೆಲ್ಲವನ್ನು ಸಂಸ್ಕರಿಸುವ, ಮಾಹಿತಿಗಳನ್ನು ಕಥಾನಕವಾಗಿ ಕಟ್ಟಿಕೊಡುವ ಡೆಸ್ಕ್ ಉದ್ಯೋಗಗಳನ್ನು ಇವತ್ತಿನ ತಂತ್ರಜ್ಞಾನ ಯುಗದಲ್ಲಿ ಎಲ್ಲಿಂದಲಾದರೂ ನಿರ್ವಹಿಸಬಹುದು. ಕೆಲವರಿದನ್ನು ಒಟ್ಟಿಗೆ ಕೆಲಸ ಮಾಡುವುದರ ಹಿಂದಿರುವ ಭಾವಕಂಪನ, ಕಲೆತು ವಿಚಾರ ಮಾಡುವ ಶಕ್ತಿ ಎಂಬೆಲ್ಲ ಅಂಶಗಳನ್ನಿಟ್ಟುಕೊಂಡು ವಾದಿಸುತ್ತಾರೆ. ಕಲೆತು ವಿಚಾರ ಮಾಡುವುದು ಮತ್ತು ಬಾಂಡಿಂಗ್ ಇವನ್ನು ದೂರಸಂವಹನದ ಮುಖಾಂತರವೂ ಬಹುಮಟ್ಟಿಗೆ ನಿಭಾಯಿಸಬಹುದು. ಅಲ್ಲದೇ, ನಿಗದಿತ ದಿನದಲ್ಲಿ ಎಲ್ಲರೂ ಕೇಂದ್ರ ಕಚೇರಿಯಲ್ಲಿ ಭೌತಿಕವಾಗಿ ಕಲೆಯುವ ಮಾದರಿಯನ್ನೂ ಇರಿಸಿಕೊಳ್ಳಬಹುದು. ಇವತ್ತಿನ ಸಂಚಾರ ಸಂಪರ್ಕಗಳು ಹೆಚ್ಚಿನ ಕಡೆ ಇದಕ್ಕೆ ಪೂರಕವಾಗಿ ಸುಧಾರಿಸಿವೆ. ಆದರೆ, ಕೇಂದ್ರ ಕಚೇರಿಯಲ್ಲಿ ಕೂರುವ ಭೌತಿಕ ಮಾದರಿಯೇ ಶ್ರೇಷ್ಠ ಎಂಬುದು ಎಲ್ಲ ಕೆಲಸಗಳಿಗೂ ಅನ್ವಯವಾಗುವುದಿಲ್ಲ. ಟ್ರಾಫಿಕ್, ಅತಿಯಾದ ಮನೆಬಾಡಿಗೆ, ವಸ್ತು-ಸೇವೆಗಳಿಗೆ ತೆರಬೇಕಿರುವ ಹೆಚ್ಚಿನ ಬೆಲೆ, ಮಕ್ಕಳ ಶಾಲಾ ಫೀಸು ಇವೆಲ್ಲವನ್ನೂ ಲೆಕ್ಕ ಹಾಕಿದಾಗ ಮೂವತ್ತೈದು-ನಲ್ವತ್ತು ಸಾವಿರಗಳ ಮಾಸಿಕ ಸಂಬಳದಲ್ಲಿ ಬೆಂಗಳೂರಿನಂಥ ಜಾಗದಲ್ಲಿ ಅಂಥ ಕೆಲಸಗಳನ್ನು ಮಾಡುವುದು ವ್ಯಾವಹಾರಿಕ ತರ್ಕಕ್ಕೆ ನಿಲುಕುವುದೇ ಇಲ್ಲ.

ಇಲ್ಲ…ಇಲ್ಲ..ನಾವು ಬೆಂಗಳೂರಿನಂಥ ಜಾಗಗಳಲ್ಲಿರದಿದ್ದರೆ ಮುಂದಿನ ಪೀಳಿಗೆಗೆ ಸ್ಪರ್ಧಾತ್ಮಕ ಶಿಕ್ಷಣ ಕೊಡಿಸುವುದಾದರೂ ಹೇಗೆ? ಉತ್ತಮ ಶಿಕ್ಷಕರು, ಕಲಿಕಾವಕಾಶಗಳು, ವಿಸ್ತಾರನೋಟಗಳೆಲ್ಲ ದೊಡ್ಡ ನಗರಗಳಲ್ಲೇ ಸಿಗುತ್ತವೆ ಎಂಬ ವಾದ ಸಹ ಇವತ್ತಿಗೆ ಪ್ರಸ್ತುತವಲ್ಲ. ಇವೆಲ್ಲವೂ ಆಯಾ ಲಾಬಿಗಳು ಹುಟ್ಟುಹಾಕಿರುವ ಫೊಮೊ (ಫಿಯರ್ ಆಫ್ ಮಿಸ್ಸಿಂಗ್ ಔಟ್) ಅಷ್ಟೇ. ಸರ್ಟಿಫಿಕೇಟ್ ತೋರಿಸುವುದಕ್ಕೆ ಬೇಕು ಎಂಬುದು ಬಿಟ್ಟರೆ ಇವತ್ತಿನ ಶಾಲಾ ಶಿಕ್ಷಣವೇ ಅಷ್ಟಾಗಿ ಪ್ರಸ್ತುತವೇನಲ್ಲ. ಹಾಗಂದಮೇಲೆ, ನೀವು ಹಳ್ಳಿಯಲ್ಲಿ ಕಲಿಯುತ್ತಿದ್ದೀರೋ, ದಿಲ್ಲಿಯಲ್ಲೋ ಎಂಬುದು ಫರಕ್ಕಾಗುವುದಿಲ್ಲ. ಮೊದಲೊಂದು ಕಾಲವಿತ್ತು. ಪಠ್ಯಪುಸ್ತಕಗಳು, ಗುಣಮಟ್ಟ ಹೊಂದಿರುವ ಶಿಕ್ಷಕರು ಇವರೆಲ್ಲ ಸಣ್ಣಪಟ್ಟಣಗಳಿಗೆ ಲಭ್ಯವಿರದಿದ್ದ ಕಾಲದಲ್ಲಿ ಆ ಕೊರತೆ ತುಂಬಿಸಿಕೊಳ್ಳುವುದಕ್ಕೆ ಬೇರೆ ಮಾರ್ಗಗಳೇ ಇರಲಿಲ್ಲ. ಈಗ ಜಗತ್ತಿನ ಅತ್ಯುತ್ತಮ ಶಿಕ್ಷಕ ಯಾವುದೋ ತುದಿಯಲ್ಲಿದ್ದುಕೊಂಡು ಮಾಡಿದ ಪಾಠವನ್ನು ಯೂಟ್ಯೂಬಿನಲ್ಲಿ ಹಳ್ಳಿಯಲ್ಲಿರುವ ಮಗು ಅರ್ಥಮಾಡಿಕೊಳ್ಳಬಲ್ಲದು. ಪಾಲಕರು ಸ್ವಲ್ಪ ಶ್ರಮಪಟ್ಟರೆ ಮಕ್ಕಳಿಗೆ ಮೂಲತಃ ಬೇಕಿರುವ ಸೃಜನಾತ್ಮಕತೆ, ಗಣಿತ, ತಾರ್ಕಿಕ ವಿಶ್ಲೇಷಣೆ, ಸಮಸ್ಯಾ ಸಮಾಧಾನ ಕೌಶಲಗಳನ್ನು ಯಾವ ಮೂಲೆಯಲ್ಲಿದ್ದುಕೊಂಡಾದರೂ ಕಲಿಸಬಹುದು. ಅಂಥ ಮೂಲಗಳು ಮತ್ತು ಗುರುಗಳಿಗೆ ಅಂತರ್ಜಾಲದ ಮೂಲಕ ಕೊಂಡಿ ಕಲ್ಪಿಸಿ ಮಕ್ಕಳನ್ನು ಬೆಸೆಯಬೇಕಷ್ಟೆ. ಪಠ್ಯವನ್ನಷ್ಟೇ ಪುನರಾವರ್ತಿಸುವ ಸಾಮರ್ಥ್ಯವಿರುವ ಬಹುತೇಕ ಶಿಕ್ಷಕರಿಗಿಂತ ಹೆಚ್ಚಿನದನ್ನು ಮಕ್ಕಳಿಗೆ ಇವತ್ತಿನ ಎಐ ಸಾಧನಗಳು ದಕ್ಕಿಸಿಕೊಡಬಲ್ಲವು. “ಸರ್..ಕಪ್ಪುಕುಳಿಗಳು ಬೆಳಕನ್ನೂ ಬಿಟ್ಟುಕೊಡೋದಿಲ್ಲ ಎಂದು ವ್ಯಾಖ್ಯಾನವಿದೆ. ಆದರೆ, ನಾವು ದೂರದ ನಕ್ಷತ್ರಗಳು ಮತ್ತು ಗ್ರಹಗಳ ಬಗೆಗೆಲ್ಲ ತಿಳಿದುಕೊಳ್ಳುತ್ತಿರುವುದೇ ಅವು ಹೊರಹೊಮ್ಮಿಸುವ ಬೆಳಕಿನಿಂದ.

remote working (file pic)
ಕ್ಯಾನ್ಸರ್, ಕ್ವಾಂಟಂ ವಿಜ್ಞಾನ, ಮತ್ತು ಮುದ್ದುನಾಯಿ! (ತೆರೆದ ಕಿಟಕಿ)

ಹೀಗಿರುವಾಗ, ಕಪ್ಪುಕುಳಿಗಳು ತಮ್ಮ ಮೇಲೆ ಬಿದ್ದ ಬೆಳಕನ್ನೂ ಮರಳಿಸುವುದಿಲ್ಲ ಎಂದಾದರೆ ಅವು ಇವೆ ಅಂತ ನಮಗೆ ತಿಳಿದಿರುವುದಾದರೂ ಹೇಗೆ?” ಅಂತ ವಿದ್ಯಾರ್ಥಿಯೊಬ್ಬ ಪ್ರಶ್ನೆ ಕೇಳಿದರೆ ಅದಕ್ಕೆ ಸಮರ್ಥ ಉತ್ತರ ಕೊಡುವ ಶಿಕ್ಷಕರು ಕಡಿಮೆ ಇದ್ದಾರು. ಆದರೆ, ಇವತ್ತಿನ ಜೆಮಿನಿ, ಕೊಪೈಲಟ್ ಥರದ ಎಐ ಸಾಧನಗಳು ಇಂಥ ಜ್ಞಾನತೃಷೆಗಳನ್ನು ಚೆನ್ನಾಗಿಯೇ ನೀಗಿಸುತ್ತವೆ. ಮತ್ತಿವನ್ನು ಪಡೆದುಕೊಳ್ಳುವುದಕ್ಕೆ ನೀವು ಬೆಂಗಳೂರು, ಮುಂಬೈನಲ್ಲೇ ಕುಳಿತಿರಬೇಕೆಂದೇನಿಲ್ಲ…ಅಂತರ್ಜಾಲ ಸಂಪರ್ಕವಿರುವ ಯಾವ ಹಳ್ಳಿಯಾದರೂ ನಡೆದೀತು. ಇವೆಲ್ಲ ಆದನಂತರದ ವೈದ್ಯ, ಎಂಜನಿಯರಿಂಗ್, ಅಥವಾ ಇನ್ಯಾವುದೇ ತಾಂತ್ರಿಕ ವಿದ್ಯೆಗಳಿಗೆ ಸಾಕ್ಷಾತ್ ಕಲಿಕೆಯ ಅನಿವಾರ್ಯತೆ ಇರುವುದರಿಂದ ದೊಡ್ಡನಗರಗಳಿಗೆ ಅಥವಾ ಅಂಥ ಸಂಸ್ಥೆಗಳಿದ್ದಲ್ಲಿ ಹೋಗಬೇಕಾಗುತ್ತದೆ. ಆದರೆ, ಎಲ್ಕೆಜಿಯಿಂದಲೇ ಮಕ್ಕಳಿಗೆ ‘ಉತ್ತಮ ಶಿಕ್ಷಣ’ ಕೊಡಿಸುವುದಕ್ಕಾಗಿ ಮಹಾನಗರಗಳಲ್ಲಿ ವಾಸ್ತವ್ಯದಲ್ಲಿದ್ದೆ ಎಂಬುದೆಲ್ಲ ವಾಸ್ತವದಲ್ಲಿ ಇವತ್ತಿನ ಅನಿವಾರ್ಯತೆ ಅಲ್ಲ, ಶಿಕ್ಷಣದ ವ್ಯಾಪಾರೋದ್ಯಮಿಗಳು ಕಟ್ಟಿರುವ ಆಟ ಅಷ್ಟೆ.

ರಿಮೋಟ್ ವರ್ಕ್ ವಿರುದ್ಧ ಲಾಬಿಗಳಿವೆಯೇ? - ಏನಿದರ ಜಾಗತಿಕ ಭವಿಷ್ಯ?

ಕೊರೊನಾ ತೀವ್ರತೆ ಕಡಿಮೆಯಾಗುತ್ತಲೇ ಬೆಂಗಳೂರಿನ ಕ್ಯಾಬ್ ಚಾಲಕರು-ಮಾಲಿಕರ ಸಂಘಟನೆಗಳಿಂದ ಬಂದ ಒತ್ತಾಯವನ್ನು ನೆನಪಿಸಿಕೊಳ್ಳಿ. ಕಂಪನಿಗಳೆಲ್ಲ ಮನೆಯಿಂದಲೇ ಕೆಲಸ ಮಾಡುತ್ತಿರುವ ತಮ್ಮ ಉದ್ಯೋಗಿಗಳನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು, ಏಕೆಂದರೆ ನಮ್ಮ ಕ್ಯಾಬ್ ವ್ಯವಹಾರ ಕಳೆಗುಂದಿದೆ ಎಂಬುದವರ ಬೇಡಿಕೆಯಾಗಿತ್ತು. ಇದೊಂದು ಸಣ್ಣ ವಿಷಯ. ಆದರೆ ಇದಕ್ಕೆ ಮೀರಿದ ರಿಯಲ್ ಎಸ್ಟೇಟ್ ಮತ್ತು ಶಿಕ್ಷಣದ ಲಾಬಿಗಳಿವೆ. ಮಹಾನಗರಗಳಲ್ಲಿ ಹುಲುಸಾಗಿ ಬೆಳೆದುಕೊಂಡು ಅಲ್ಲಿನ ಜನರಿಂದ ತಮ್ಮ ಮೌಲ್ಯಕ್ಕಿಂತ ಅವೆಷ್ಟೋ ಪಾಲು ಹೆಚ್ಚು ದುಡ್ಡನ್ನು ಸೆಳೆದುಕೊಳ್ಳುತ್ತಿರುವ ಈ ವಲಯಗಳು ರಾಜಕಾರಣಿಗಳೊಂದಿಗೂ ಬೆಸೆದುಕೊಂಡಿರುವುದರಿಂದ, ರಿಮೋಟ್ ವರ್ಕ್ ಸಂಸ್ಕೃತಿ ಇವುಗಳಿಗೇನೂ ಸಹ್ಯವಲ್ಲ. ಆದರೆ, ವಿ-ವರ್ಕ್ ಮಾದರಿಯ ಕೊವರ್ಕಿಂಗ್ ತಾಣಗಳು ಮಹಾನಗರಕ್ಕೆ ಹೊರತಾದ ಕೆಲವು ಸಣ್ಣಪಟ್ಟಣಗಳಲ್ಲಿ ಯಶಸ್ವಿಯಾಗುವುದು ಸಾಧ್ಯವಾದರೆ, ನಿಧಾನಕ್ಕೆ ಅಲ್ಲೊಂದು ಸಣ್ಣಮಟ್ಟದ ರಿಯಲ್ ಎಸ್ಟೇಟ್, ವ್ಯಾಪಾರ-ವಹಿವಾಟುಗಳು ಬೆಳೆದುಕೊಂಡು ಸ್ಥಳೀಯ ರಾಜಕಾರಣಿಗಳಿಗೆ ಆಕಾಂಕ್ಷೆ ಚಿಗುರಿಸಬಲ್ಲದು. 

ಸದ್ಯಕ್ಕೆ ರಿಮೋಟ್-ಹೈಬ್ರಿಡ್ ಕೆಲಸದ ಮಾದರಿಗೆ ಪೂರಕ ಎನ್ನಿಸುವ ವಾತಾವರಣ ಭಾರತದಲ್ಲಿ ದಟ್ಟವಾಗಬಹುದೆಂದು ವಿಪರೀತ ನಿರೀಕ್ಷೆ ಇಟ್ಟುಕೊಳ್ಳುವಂತಿಲ್ಲ. ಆದರೆ, ಒಬ್ಬ ನೌಕರನಿಗೆ ಇಂಥ ಅವಕಾಶಗಳು ಜೀವನಮಟ್ಟವನ್ನು ಎತ್ತರಿಸುವುದಕ್ಕೆ ವ್ಯಾಪಕ ಅವಕಾಶಗಳನ್ನು ಕೊಡುತ್ತವೆ. 

ಅಲ್ಲದೇ, ಬೃಹತ್ ಕಂಪನಿಗಳ ಮಟ್ಟದಲ್ಲೂ ರಿಮೋಟ್-ಹೈಬ್ರಿಡ್ ಮಾದರಿಯನ್ನು ವ್ಯಾಪಕವಾಗಿ ಪ್ರಚುರಪಡಿಸುವುದಕ್ಕೆ ಹಿಂದೇಟಿದೆ. ಏಕೆಂದರೆ ಅವೆಲ್ಲ ರಿಮೋಟ್-ಹೈಬ್ರಿಡ್ ಕಾಲಘಟ್ಟದಲ್ಲೇ ರೂಪುಗೊಂಡಿರುವ ಕಂಪನಿಗಳಲ್ಲ. ಕೊರೊನಾ ಅವರಿಗೆಲ್ಲ ಆ ಮಾದರಿ ಕಲಿಸಿತಷ್ಟೆ. ಹೀಗಾಗಿ, ದೂರದಲ್ಲಿದ್ದುಕೊಂಡು ಕೆಲಸ ಮಾಡುತ್ತಿರುವವರ ಕಾರ್ಯಕ್ಷಮತೆ, ಉತ್ಪಾದಕತೆಗಳ ನಿಖರ ನಿಗಾ ಇಡುವುದು ಹೇಗೆಂಬ ಆತಂಕ ಯಾವತ್ತೂ ಅವರಲ್ಲಿರುತ್ತದೆ. ಆದರೆ, ಕೊರೋನಾ ಕಾಲದ ಆಚೀಚೆ ಹುಟ್ಟಿಕೊಂಡಿರುವ ಹಾಗೂ ಇನ್ನುಮುಂದೆ ಹುಟ್ಟಿಕೊಳ್ಳಲಿರುವ ನವೋದ್ದಿಮೆಗಳು ರಿಮೋಟ್-ಹೈಬ್ರಿಡ್ ಕಾಲದಲ್ಲೇ ಹುಟ್ಟಿಕೊಂಡಂಥವು. ಅಲ್ಲದೇ ಹಲವು ಹೂಡಿಕೆದಾರ ದಿಗ್ಗಜರು ಭವಿಷ್ಯ ನುಡಿಯುತ್ತಿರುವ ಪ್ರಕಾರ, ಭವಿಷ್ಯದಲ್ಲಿ ಕೆಲವೇ ನೂರು ಮಂದಿಯ ಸಣ್ಣ ಸಣ್ಣ ಕಂಪನಿಗಳೇ ಬಹುಕೋಟಿ ಉದ್ಯಮಗಳನ್ನು ಕಟ್ಟಲಿವೆ. ಇವುಗಳ ಗಾತ್ರವೂ ರಿಮೋಟ್-ಹೈಬ್ರಿಡ್ ಕೆಲಸಕ್ಕೆ ಪೂರಕ. ಅಲ್ಲದೇ, ಇವು ತಮಗೆ ಬೇಕಾದ ಪ್ರತಿಭೆಗಳನ್ನು ಪ್ರಾಂತ್ಯ-ದೇಶಗಳ ಗಡಿಮೀರಿ ಆಯ್ದುಕೊಂಡರಷ್ಟೇ ತಂತ್ರಜ್ಞಾನಯುಗದಲ್ಲಿ ಯಶಸ್ಸು ಸಾಧಿಸಬಲ್ಲವು. 

remote working (file pic)
ರಿಲಾಯನ್ಸ್ ಬೃಹತ್ ಉದ್ಯೋಗ ಕಡಿತ: ನಾವು ತಿಳಿದಿರಲೇಬೇಕಾದ ನೌಕರಿ ಭವಿಷ್ಯ! (ತೆರೆದ ಕಿಟಕಿ)

ಮ್ಯಾನೇಜ್ಮೆಂಟ್ ಕನ್ಸಲ್ಟಿಂಗ್ ಕ್ಷೇತ್ರದಲ್ಲಿ ಜಗತ್ತಿನ ಮೂರು ಬಹುದೊಡ್ಡ ಕಂಪನಿಗಳಲ್ಲೊಂದಾದ ಬಿಸಿಜಿ (ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್) ಮಾರ್ಚ್ 2024ರಲ್ಲಿ ‘ಕೆಲಸ - ಮುಂದಿನ 50 ವರ್ಷಗಳ ಭವಿಷ್ಯ’ ಎಂಬ ಸುದೀರ್ಘ ಲೇಖನದಲ್ಲಿ ಮಾಡಿರುವ ಅಂದಾಜುಗಳ ಪೈಕಿ ಪ್ರಮುಖವಾದದ್ದು- ಪರಿಸರ ಸಮತೋಲನ ಮತ್ತು ಸುಸ್ಥಿರತೆಗಳ ಮೇಲೆ ಗಮನ ಹೆಚ್ಚಾಗುವುದರಿಂದ ಹಾಗೂ ಪೂರೈಕೆ ವ್ಯವಸ್ಥೆಯನ್ನು ಸರಳವಾಗಿಸುವ ಉದ್ದೇಶದಿಂದ ಕೆಲಸಗಳು ಸ್ಥಳೀಯ ಸಮುದಾಯ ಕೇಂದ್ರಿತವಾಗುತ್ತವೆ ಎನ್ನುವುದು. ಉದಾಹರಣೆಗೆ, ಯಾವುದೋ ಎಲೆಕ್ಟ್ರಾನಿಕ್ಸ್ ಉಪಕರಣ ಇಲ್ಲವೇ ಪೀಠೋಪಕರಣವು ಅಲ್ಲೆಲ್ಲೋ ಸಾಗರದಲೆಗಳ ಮೇಲೆ ಪ್ರಯಾಣಿಸಿ, ಗಿರಿಕಂದರಗಳನ್ನು ಹತ್ತಿಳಿದು ನಿಮ್ಮನ್ನು ಸೇರಿಕೊಳ್ಳುವ ಪ್ರಯಾಸ ತೆಗೆದುಕೊಳ್ಳುವುದಿಲ್ಲ. ಏಕೆಂದರೆ, ಇದನ್ನು ನಿಮಗೆ ಮಾರುವಾತ ಸಹ ಅದರ ಅವಯವಗಳನ್ನು ಎಲ್ಲೆಲ್ಲಿಂದಲೋ ತರಿಸಿಕೊಂಡು ಜೋಡಿಸಿ ಕಳಿಸಿರುತ್ತಾನೆ. ಭವಿಷ್ಯದಲ್ಲಿ ಹೀಗೆ ವಸ್ತುಗಳನ್ನು ಮಾರುವ ಕಂಪನಿಯು ಆ ವಸ್ತುಗಳ 3ಡಿ ಡಿಜಿಟಲ್ ನಕ್ಷೆಯನ್ನು ಸ್ಥಳೀಯ ಉದ್ದಿಮೆಗೆ ಕಳುಹಿಸುತ್ತದೆ. ಅದನ್ನು DIY, ಅಂದರೆ ಡೂ ಇಟ್ ಯುವರ್ ಸೆಲ್ಫ್ ಮಾದರಿಯಲ್ಲಿ ಆಯಾ ಸ್ಥಳೀಯ ಘಟಕಗಳೇ ರೂಪುಗೊಳಿಸುತ್ತವೆ. 3ಡಿ ಪ್ರಿಂಟಿಂಗ್ ತಂತ್ರಜ್ಞಾನವು ಸಂಕೀರ್ಣ ವಿನ್ಯಾಸದ ಭೌತಿಕ ವಸ್ತುಗಳನ್ನೆಲ್ಲ ಇರುವೆಡೆಯಲ್ಲೇ ಸಾಕಾರಗೊಳಿಸಿಕೊಳ್ಳುವುದಕ್ಕೆ ಸಹಕರಿಸುತ್ತದೆ. ಇದೊಂದು ಸಾಧ್ಯತೆ ಮಾತ್ರ. ಜಾಗತಿಕ ಪೂರೈಕೆ ಜಾಲದಲ್ಲಿ ಸರಳತೆ ತರುವುದಕ್ಕೆ ಹಾಗೂ ಪರಿಸರದ ಮೇಲಿನ ಒತ್ತಡ ತಗ್ಗಿಸುವುದಕ್ಕೆ ಇಂಥ ಹಲವು ಸ್ಥಳೀಯ ಮಾದರಿಗಳು ರೂಪುಗೊಳ್ಳಬಹುದೆಂದು ಬಿಸಿಜಿ ವರದಿ ಆಶಾಭಾವ ವ್ಯಕ್ತಪಡಿಸುತ್ತಿದೆ. 

ಹಳ್ಳಿಗಳಿಗೆ ಹಿಂತಿರುಗುವುದು ಎಂಬ ಪರಿಕಲ್ಪನೆ ಈವರೆಗೆ ಕೃಷಿಯಲ್ಲಿ ಸುಖ ಕಂಡುಕೊಳ್ಳುವ ಇಲ್ಲವೇ ಗುಡಿ ಕೈಗಾರಿಕೆಗಳಂಥ ಮಾರ್ಗಗಳ ಮೂಲಕ ಆದರ್ಶ ಮೆರೆಯುವ ಕಲ್ಪನೆ ಕೊಡುತ್ತಿತ್ತು. ಹಾಗೆಂದೇ ಹೊಸ ಪೀಳಿಗೆಯ ಮಹತ್ವಾಕಾಂಕ್ಷಿಗಳಿಗೆ ಅದು ಆಕರ್ಷಣೆಯ ಅಂಶವಾಗಿರಲೇ ಇಲ್ಲ. ಆದರೆ, ತಂತ್ರಜ್ಞಾನ ಮತ್ತು ರಿಮೋಟ್ ವರ್ಕ್ ಪರಿಕಲ್ಪನೆಗಳು ಮಿಳಿತಗೊಂಡು ಹಳ್ಳಿಗಳಿಗೆ ಜೀವ ತುಂಬುವ ಹೊಸ ಮಾರ್ಗವೊಂದು ಮುಂದುವರಿದ ದೇಶಗಳಲ್ಲಿ ಅದಾಗಲೇ ತೆರೆದುಕೊಳ್ಳುತ್ತಿದೆ. ಈ ಸ್ಫೂರ್ತಿ ಭಾರತವನ್ನೂ ತಟ್ಟಿ ನಮ್ಮಲ್ಲಿ ಕೆಲವರ ಜೀವನಮಟ್ಟವಾದರೂ ಹಸನಾಗಲಿ ಎಂಬುದು ಈ ಕ್ಷಣಕ್ಕೆ ಅರಳಿಕೊಳ್ಳುತ್ತಿರುವ ಆಶಯ. 

- ಚೈತನ್ಯ ಹೆಗಡೆ

cchegde@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com