
ಶತ್ರು-ಮಿತ್ರ, ಒಳ್ಳೆಯದ್ದು-ಕೆಟ್ಟದ್ದು ಇವೆಲ್ಲ ಒಂದು ದೃಷ್ಟಿಕೋನದಲ್ಲಿ ಸುಲಭವಾಗಿ ಗುರುತಿಸಬಲ್ಲ ಸಂಗತಿಗಳೆನಿಸಿದರೂ ಆಡಳಿತ ಸೂತ್ರ ಹಿಡಿದವರಿಗೆ ಇವನ್ನೆಲ್ಲ ಕಪ್ಪು-ಬಿಳುಪುಗಳಲ್ಲಿ ವರ್ಗೀಕರಿಸುವುದಕ್ಕಾಗುವುದಿಲ್ಲ.
ಹಾಗೆಂದೇ ಅಲ್ಲಿ ಕಾಲಕ್ಕೆ ತಕ್ಕ ಕಾರ್ಯತಂತ್ರಗಳನ್ನು ಅನುಸರಿಸಬೇಕಾಗುತ್ತದೆ. ಇಸ್ರೇಲ್-ಇರಾನ್ ನಡುವಿನ ಸಂಘರ್ಷ ಬಿಸಿಯಾಡುತ್ತಿರುವ ಈ ಗಳಿಗೆಯಲ್ಲಿ ಸಹ ಇದೇ ಮಾತು ಅನ್ವಯವಾಗುತ್ತದೆ. ಇಸ್ರೇಲನ್ನು ಸ್ನೇಹಿತ ಎಂದು ಹೇಳಿಬಿಡಬಹುದಾದರೂ ಇರಾನನ್ನು ಒಂದು ನಿರ್ದಿಷ್ಟ ಬ್ರಾಕೆಟ್ಟಿನಲ್ಲಿ ಇಟ್ಟುಬಿಡುವುದು ಕಷ್ಟ.
ಈ ಹಿಂದಿನ ಅಂಕಣದಲ್ಲಿ ಭಾರತವು ಇಸ್ಲಾಂಪೂರ್ವದ ಪರ್ಶಿಯಾ ಎಂಬ ನಾಗರಿಕ ಶಕ್ತಿಯೊಂದಿಗೆ ಹೊಂದಿದ್ದ ಸಂಬಂಧವನ್ನು ಐತಿಹಾಸಿಕ ಪರಿಪ್ರೇಕ್ಷದಲ್ಲಿಟ್ಟು ನೋಡುವ ಪ್ರಯತ್ನ ಮಾಡಲಾಗಿತ್ತು. ಅಂತೆಯೇ, ಇರಾನ್ ಎಂಬ ಇಸ್ಲಾಮಿ ದೇಶವು ಸಹ ಇತ್ತೀಚಿನ ವರ್ಷಗಳಲ್ಲಿ ಭಾರತದೊಂದಿಗೆ ಹೊಂದಿರುವ ವ್ಯಾವಹಾರಿಕ ಬಾಂಧವ್ಯ ಹಾಗೂ ಅದಕ್ಕೆ ಕಾರಣವಾಗಿರುವ ಜಾಗತಿಕ ರಾಜಕಾರಣದ ಅಂಶಗಳನ್ನು ಸಹ ಚರ್ಚಿಸಲಾಗಿತ್ತು.
ಈ ಕೊನೆಯ ಕಂತಿನಲ್ಲಿ, ಇರಾನ್-ಇಂಡಿಯಾದ ಚರಿತ್ರೆಯ ಸ್ಮೃತಿಯಲ್ಲಿ ದಾಖಲಾಗಿರುವ ಸಂಘರ್ಷದ ಅಧ್ಯಾಯವೊಂದನ್ನು ಗಮನಿಸೋಣ. ಇದು ಇರಾನಿನ ಜತೆ ವ್ಯಾವಹಾರಿಕ ಸಂಬಂಧ ಇರಿಸಿಕೊಳ್ಳುತ್ತಲೇ ಅನವರತ ಇರಿಸಿಕೊಳ್ಳಲೇಬೇಕಾದ ಎಚ್ಚರಿಕೆಯೊಂದನ್ನು ಹೇಳುವಂತಿದೆ.
ಭಾರತದಲ್ಲೂ ಇಸ್ಲಾಂ ಆಳ್ವಿಕೆ ಪ್ರಬಲವಾಗಿ ಇದ್ದಾಗ, ಅತ್ತ ಪರ್ಶಿಯಾದಲ್ಲಿ ಆ ಕಾಲಕ್ಕಿದ್ದ ಇಸ್ಲಾಂ ಆಳ್ವಿಕೆ ಇದರೊಂದಿಗೆ ಹೇಗೆ ವ್ಯವಹರಿಸಿತ್ತು ಎಂಬುದು ಆಸಕ್ತಿಕರ ಅಂಶ. ಇಲ್ಲೂ ಏಕಮುಖದ ಉತ್ತರ, ಇಲ್ಲವೇ ಮಾದರಿಗಳು ಸಿಗುವುದಿಲ್ಲ.
ಭಾರತದ ಇತಿಹಾಸದಲ್ಲಿ ಬಾಬರ್ ಎಂಬ ಅತಿಕ್ರೂರ ಮೊಘಲ ರಾಜ ತೀರಿಕೊಂಡ ನಂತರ ಪಟ್ಟಕ್ಕೆ ಬಂದವನು ಹುಮಾಯೂನ. 1530ರಲ್ಲಿ ಪಟ್ಟಕ್ಕೆ ಬಂದ ಹುಮಾಯೂನ 1540ರ ವೇಳೆಗೆ ಶೇರ್ ಶಾ ಸೂರಿಗೆ ತನ್ನ ಸಂಪೂರ್ಣ ರಾಜ್ಯವನ್ನೇ ಕಳೆದುಕೊಳ್ಳುತ್ತಾನೆ. ಕತೆ ಅಲ್ಲಿಗೇ ನಿಂತಿದ್ದರೆ ಮೊಘಲರ ಇತಿಹಾಸವು ಮುಂದಕ್ಕೆ ಅಕ್ಬರ್ ಸೇರಿದಂತೆ ಇತರರಲ್ಲಿ ವಿಸ್ತರಿಸಿಕೊಳ್ಳುತ್ತಿರಲಿಲ್ಲ. ದೇಶಭ್ರಷ್ಟ ಹುಮಾಯೂನ್ ತನ್ನ ಹೆಂಡತಿ-ಮಕ್ಕಳು, ಆಪ್ತರು ಸೇರಿದಂತೆ 40 ಮಂದಿಯೊಂದಿಗೆ ಅಫಘಾನಿಸ್ತಾನವನ್ನು ದಾಟಿಕೊಂಡು, ಅತಿ ಕಷ್ಟದ ಪ್ರಯಾಣ ಮಾಡುತ್ತ ಇರಾನಿಗೆ ತಲುಪಿಕೊಳ್ಳುತ್ತಾನೆ. ಅಲ್ಲಿ ಅವತ್ತಿಗಿದ್ದ ಇರಾನಿನ ಸಫಾವಿದ್ ವಂಶಾವಳಿಯ ಸಾಮ್ರಾಜ್ಯವು ಹುಮಾಯೂನ ಮತ್ತವರ ವ್ಯಕ್ತಿಗಳಿಗೆ ಗೌರವಯುತ ಆಶ್ರಯ ಕೊಡುತ್ತದೆ. ಅದಾಗಿ 15 ವರ್ಷಗಳ ನಂತರ ಮತ್ತೆ ಭಾರತಕ್ಕೆ ಮರಳಿ ಹುಮಾಯೂನ್ ತಾನು ಸೋತ ಪ್ರದೇಶಗಳನ್ನು ವಶಪಡಿಸಿಕೊಳ್ಳುತ್ತಾನೆ. ಇದರಲ್ಲಿ ಇರಾನಿನ ಸಫಾವಿದ್ ರಾಜಮನೆತನದ ಕೊಡುಗೆ ಗಣನೀಯ.
ಇದೇ ಮೊಘಲರ ವಂಶಾವಳಿಯಲ್ಲಿ ಹುಮಾಯೂನ್, ಅಕ್ಬರ್ ಇವರೆಲ್ಲರ ಕಾಲ ಮುಗಿದು, ದೆಹಲಿ ಗದ್ದುಗೆಯನ್ನು ಮೊಹಮ್ಮದ್ ಶಾ ಆಳುತ್ತಿದ್ದ ಸಂದರ್ಭದಲ್ಲಿ, ಈ ಹಿಂದೆ ಯಾವ ಇರಾನ್ ದೇಶಭ್ರಷ್ಟ ಮುಸ್ಲಿಂ ದೊರೆಯೊಬ್ಬಗೆ ಆಶ್ರಯ ಕೊಟ್ಟು ಆತ ತನ್ನ ಸಾಮ್ರಾಜ್ಯವನ್ನು ಮರುಗಳಿಸಿಕೊಳ್ಳುವುದಕ್ಕೆ ಸಹಕರಿಸಿತ್ತೋ, ಅದೇ ನೆಲ ಮುಸ್ಲಿಂ ದೊರೆಯನ್ನು ಮಣಿಸಿ ದೆಹಲಿಯಲ್ಲಿ ಹಲವು ದಿನಗಳ ಕಾಲ ರಕ್ತದ ಹೊಳೆ ಹರಿಯುವಂತೆ ಮಾಡುತ್ತದೆ. ಹದಿನೆಂಟನೇ ಶತಮಾನದ ಪ್ರಾರಂಭಭಾಗದಲ್ಲಿ ನಡೆದ ಈ ವಿದ್ಯಮಾನವೇ ಮೊಘಲರು ಬಲಹೀನರಾಗಿದ್ದಾರೆಂದು ಜಾಹೀರಾಗಿಸಿ, ಅವತ್ತಿನ ಇನ್ನೊಂದು ವಸಾಹತುಶಾಹಿ ಆಕ್ರಮಕ ಬಲವಾದ ಬ್ರಿಟಿಷರಿಗೆ ಭಾರತದ ಮೇಲೆ ತಮ್ಮ ಯೋಜನೆ ಜಾರಿಗೊಳಿಸುವುದಕ್ಕೆ ಪ್ರೇರೇಪಿಸಿತು ಅಂತ ಕೆಲವು ಇತಿಹಾಸಕಾರರು ಇದನ್ನು ವಿಶ್ಲೇಷಿಸುತ್ತಾರೆ. ಯಾವುದು ಆ ವಿದ್ಯಮಾನ? ಏನದರ ತಿರುಳು?
1739ರ ಮಾರ್ಚ್ ತಿಂಗಳು. ಅವತ್ತು ದೆಹಲಿಯಲ್ಲಿ ಹೆಂಗಸರು-ಮಕ್ಕಳು ಸೇರಿದಂತೆ 30,000 ಮಂದಿಯನ್ನು ಕೊಚ್ಚಿಹಾಕಲಾಯಿತು.
ಸುಮಾರು 10,000 ಮಂದಿಯನ್ನು ಗುಲಾಮರನ್ನಾಗಿಸಿ ಒಯ್ಯಲಾಯಿತು. ವಾರಗಳವರೆಗೆ ದೆಹಲಿಯ ಮನೆ-ಅಂಗಡಿಗಳನ್ನೆಲ್ಲ ನುಗ್ಗಿ ನಗನಾಣ್ಯಗಳನ್ನು ದೋಚಿದ್ದಕ್ಕೆ ಲೆಕ್ಕವೇ ಇಲ್ಲ. ಹಿಂದು-ಮುಸ್ಲಿಮರೆನ್ನದೇ ಅವತ್ತು ದೆಹಲಿಯ ಜನರೆಲ್ಲ ಅಕ್ಷರಶಃ ಎಲ್ಲವನ್ನೂ ಕಳೆದುಕೊಂಡು ಬೆತ್ತಲಾಗಿದ್ದರೆಂದರೆ ಸರಿಹೋದೀತು.
ಕೊಹಿನೂರ್ ಮತ್ತು ಮಯೂರ ಸಿಂಹಾಸನಗಳು ಭಾರತದಿಂದ ಆಚೆ ಹೋಗಿದ್ದು ಅವತ್ತೇ ಎಂದರೆ ಲೂಟಿಯ ಪರಾಕಾಷ್ಠೆ ನಿಮಗೆ ಅರ್ಥವಾಗಿಬಿಡುತ್ತದೆ.
ಈಗಿನ ಇರಾನ್, ಅವತ್ತಿನ ಪರ್ಶಿಯಾದ ನಾದೆರ್ ಶಾ ಎಂಬುವವನ ಆಕ್ರಮಣವು ಭಾರತದಲ್ಲಿ ಸೃಷ್ಟಿಸಿದ ವಿಧ್ವಂಸದ ವಿವರಗಳಿವು. ಅಧಿಕಾರ ಕೇಂದ್ರವಾಗಿದ್ದ ದೆಹಲಿಯನ್ನು ನಾದೆರ್ ಶಾ ಸೇನೆ ಎಷ್ಟರಮಟ್ಟಿಗೆ ಕೊಳ್ಳೆ ಹೊಡೆದು ಹೋಯಿತೆಂಬುದಕ್ಕೆ, ಮೇ 1739ರಲ್ಲಿ ಆತ ತನ್ನ ದೇಶಕ್ಕೆ ಹಿಂತಿರುಗಿದ ನಂತರ ಮುಂದಿನ ಮೂರು ವರ್ಷಗಳವರೆಗೆ ಪರ್ಶಿಯಾದಲ್ಲಿ ತೆರಿಗೆಯನ್ನೇ ವಿಧಿಸಲಿಲ್ಲ!
ಮೊಘಲರನ್ನು ಗುರಿಯಾಗಿರಿಸಿಕೊಂಡು ನಾದೆರ್ ಶಾ ಸೇನೆ ನಡೆಸಿದ ಆಕ್ರಮಣವು ಅವತ್ತಿನ ಭಾರತದ ಹಲವು ಪರಿಸ್ಥಿತಿಗಳನ್ನು ಬಿಚ್ಚಿಡುತ್ತದೆ. ಅಂತೆಯೇ ಅವತ್ತಿನ ಪರ್ಶಿಯಾದ ಆಕಾಂಕ್ಷೆ ಸಹ ಏನಿತ್ತೆಂಬುದು ಗೊತ್ತಾಗುತ್ತದೆ. ಮೊಘಲರ ಕ್ರೂರ ದೊರೆ ಔರಂಗಜೇಬನು 1707ರಲ್ಲಿ ಸತ್ತ ನಂತರ ಹಲವರು ಅದಾಗಲೇ ತಮ್ಮ ಸ್ವಾತಂತ್ರ್ಯ ಘೋಷಿಸಿಕೊಂಡಿದ್ದರು. ಮೊಘಲರ ಸತ್ತೆಗೆ ಹೆಸರಿಗಷ್ಟೇ ಹೆಚ್ಚಿನವರು ಬೆಂಬಲ ಕೊಟ್ಟಿದ್ದರಾದರೂ ಆಡಳಿತ, ತೆರಿಗೆ ಸಂಗ್ರಹಗಳಲ್ಲೆಲ್ಲ ಸ್ಥಳೀಯ ಆಡಳಿತಗಾರರೇ ಹಿಡಿತ ಸಾಧಿಸಿದ್ದರಿಂದ ಉತ್ತರ ಭಾರತವಂತೂ ಚಿಕ್ಕ ಚಿಕ್ಕ ರಾಜರುಗಳ ಆಡುಂಬೊಲವಾಗಿದ್ದಿತ್ತು. ಅತ್ತ, ಮರಾಠಾ ಬಲವನ್ನು ಪ್ರಖರವಾಗಿ ಮುನ್ನಡೆಸುತ್ತಿದ್ದ ಮೊದಲನೇ ಬಾಜಿರಾವ್ ಮೊಘಲರ ಭವಿಷ್ಯಕ್ಕೆ ದುಃಸ್ವಪ್ನವಾಗಿದ್ದರು.
ಇಂಥ ಸಂದರ್ಭದಲ್ಲಿ ನಾದೆರ್ ಶಾ ಭಾರತದ ಮೇಲೆ ಕಣ್ಣು ಹಾಕಿದ್ದಾದರೂ ಏಕೆ? ವಾಸ್ತವದಲ್ಲಿ ಆತನಿಗಿದ್ದದ್ದು ತನ್ನ ಪಕ್ಕದ ಬಾಗ್ದಾದ್ ಮತ್ತು ಮೊಸುಲ್ (ಈಗಿನ ಇರಾಕ್) ಕೇಂದ್ರವಾಗಿರಿಸಿಕೊಂಡು ಬೆಳೆದುನಿಂತಿದ್ದ ಒಟ್ಟೊಮಾನ್ ತುರ್ಕ್ ಸಾಮ್ರಾಜ್ಯವನ್ನು ಸೋಲಿಸುವುದು. ಪರ್ಶಿಯಾವು ಶಿಯಾ ಮುಸ್ಲಿಂ ರಾಜಸತ್ತೆ ಆಗಿದ್ದರೆ, ಒಟ್ಟೊಮಾನರದ್ದು ಸುನ್ನಿ ಮುಸ್ಲಿಂ ಸಾಮ್ರಾಜ್ಯ. 1730ರಿಂದ 1736ರವರೆಗೆ ಒಟ್ಟೊಮಾನ್ ಪಡೆ ವಿರುದ್ಧ ನಾದೆರ್ ಶಾ ಹಲವು ಯುದ್ಧಗಳನ್ನು ನಡೆಸಿದರೂ ನಿರ್ಣಾಯಕ ಜಯ ಸಾಧ್ಯವಾಗಲಿಲ್ಲ. ಸೇನೆಯನ್ನು ಇನ್ನಷ್ಟು ಗಟ್ಟಿಗೊಳಿಸಿ ಒಟ್ಟೊಮಾನರ ವಿರುದ್ಧ ಮುಗಿಬೀಳುವುದಕ್ಕೆ ಆತನಿಗೆ ಬೇಕಿದ್ದದ್ದು ಅಪಾರ ಸಂಪನ್ಮೂಲ. ಚರಿತ್ರೆಯುದ್ದಕ್ಕೂ ಜಗತ್ತಿನ ಯಾವುದೇ ಶಕ್ತಿಗೆ ಸಂಪನ್ಮೂಲ ಕ್ರೋಢೀಕರಣದ ಪ್ರಶ್ನೆ ಬಂದಾಗಲೆಲ್ಲ ದೃಷ್ಟಿ ತಾಗಿದ್ದು ಭಾರತದ ಮೇಲೆಯೇ. ನಾದೆರ್ ಶಾ ವಿಷಯದಲ್ಲೂ ಹಾಗೆ ಆಯಿತು. ಅಲ್ಲದೇ, ಇಲ್ಲಿ ಮೊಘಲರ ಮೊಹಮ್ಮದ್ ಶಾನ ಅಧೀನದಲ್ಲಿದ್ದ ಸಾದತ್ ಖಾನ್ ಮತ್ತು ದಕ್ಷಿಣದ ನಿಜಾಮ ಇಬ್ಬರೂ ಒಳಗೊಳಗೇ ನಾದೆರ್ ಶಾನಿಗೆ ಆಮಂತ್ರಣ ಕೊಟ್ಟಿದ್ದರು ಎಂಬ ವಿಶ್ಲೇಷಣೆಗಳಿವೆ.
1738ರ ನವೆಂಬರ್ ಹೊತ್ತಿಗೆ ಕಾಬೂಲಿನಲ್ಲಿ ಅವತ್ತಿಗೆ ಮೊಘಲ್ ಪ್ರತಿನಿಧಿಯಾಗಿದ್ದ ನಾಸಿರ್ ಖಾನನ ಬುಡಕಟ್ಟು ಸೇನೆಯನ್ನು ಸುಲಭಕ್ಕೆ ಸೋಲಿಸಿದ ನಾದೆರ್ ಶಾ 1739ರ ಜನವರಿ ವೇಳೆಗೆಲ್ಲ ಸಿಂಧು ಮತ್ತು ಚೆನಾಬ್ ನದಿಗಳನ್ನು ದಾಟಿ ಭಾರತದ ಅವತ್ತಿನ ಅಧಿಕಾರ ಕೇಂದ್ರದತ್ತ ದೌಡಾಯಿಸಿದ. ಫೆಬ್ರವರಿ 24ಕ್ಕೆ ಕರ್ನಾಲ್’ನಲ್ಲಿ ನಡೆದ ಕದನದಲ್ಲಿ ಮೊಘಲರ ಸೇನೆ ಸೋತಿತು. ಶರಣಾದ ಮೊಹಮ್ಮದ್ ಶಾನನ್ನು ಸಣ್ಣ ಅರಮನೆಯೊಂದರಲ್ಲಿರಿಸಿ ದೆಹಲಿಯ ಪ್ರಮುಖ ಸಿಂಹಾಸನದಲ್ಲಿ ತಾನು ಕುಳಿತ ನಾದೆರ್ ಶಾ, ಖಜಾನೆಯ ಕೀಲಿಕೈ ತನ್ನ ಸೊಂಟದಲ್ಲಿರಿಸಿಕೊಂಡ. ಅದಾಗಿ ಕೆಲದಿನಗಳಲ್ಲಿ ದೆಹಲಿಯ ಮಾರುಕಟ್ಟೆಯಲ್ಲಿ ನಾದೆರ್ ಶಾ ಪರವಾಗಿ ಹೆಚ್ಚಿನ ಸುಂಕ ವಸೂಲು ಮಾಡುವ ಕಾರ್ಯಕ್ಕೆ ಆತನ ಯೋಧರು ಇಳಿದರು. ಇದನ್ನು ವಿರೋಧಿಸಿ ಅಲ್ಲಿನ ಸ್ಥಳೀಯರು ಹೀಗೆ ವಸೂಲಿಗೆ ಬಂದವರ ಮೇಲೆ ದಾಳಿ ಮಾಡಿದರು. ಅದಕ್ಕೆ ಪ್ರತಿಯಾಗಿ ತೆರೆದುಕೊಂಡಿದ್ದೇ ಈ ಉಪಶೀರ್ಷಿಕೆಯ ಪ್ರಾರಂಭದಲ್ಲಿ ವಿವರಿಸಿರುವ ಮಹಾಲೂಟಿ ಮತ್ತು ಹಿಂಸೆ. ಖತಲ್ ಅಂದರೆ ಕೊಲ್ಲೋದು, ಆಮ್ ಎಂದರೆ ಸಾಮಾನ್ಯರು. ಖತಲ್ -ಎ- ಆಮ್ ಅಂದರೆ ಸಾಮಾನ್ಯರನ್ನು ಮಾರಣಹೋಮ ಮಾಡುವ ನಾದೆರ್ ಶಾ ಆದೇಶದ ಪರಿಣಾಮವಾಗಿ ಅವತ್ತಿನ ದೆಹಲಿಯ ಚಾಂದಿನಿ ಚೌಕ, ಪಹಾಡ್ಗಂಜ್, ಫತೇಪುರಿ, ಹೌಜ್ ಖಾಸ್, ಜೊಹ್ರಿ ಬಜಾರ್ ಇಲ್ಲೆಲ್ಲ ಹೆಣಗಳ ರಾಶಿಯೇ ಬಿದ್ದಿತು.
ಇಷ್ಟೆಲ್ಲ ಆಗಿ, ಮೇ 16, 1739ಕ್ಕೆ ಸಕಲ ಸಂಪತ್ತನ್ನೆಲ್ಲ ಮೂಟೆ ಕಟ್ಟಿಕೊಂಡು ತನ್ನ ಸೇನಾಸಹಾಯದಿಂದ ತಿರುಗಿ ಇರಾನಿಗೆ ಹೊರಡುತ್ತಾನೆ ನಾದೆರ್ ಶಾ. ಸೋತು ಸುಣ್ಣವಾಗಿದ್ದ ಮೊಹಮ್ಮದ್ ಶಾಗೆ ಕೊಳ್ಳೆ ಹೊಡೆದ ಪಟ್ಟಣದ ಕೀಲಿಕೈ ಮತ್ತೆ ಕೊಟ್ಟು, ಆತನ ಮಗಳನ್ನು ತನ್ನ ಮಗನಿಗೆ ವಿವಾಹವಾಗಿಸಿಕೊಂಡು ಹಿಂತಿರುಗುತ್ತಾನೆ. ಹಿಂತಿರುಗುವ ದಾರಿಯಲ್ಲಿ ಸಿಖ್ ಪಡೆಗಳು ಈತನ ಸೇನೆಯ ಕೆಲವು ಭಾಗದ ಮೇಲೆ ದಾಳಿ ಮಾಡಿ ಸ್ವಲ್ಪ ಪ್ರಮಾಣದ ಲೂಟಿ ಸಂಪತ್ತನ್ನು ತಮ್ಮದಾಗಿಸಿಕೊಳ್ಳುತ್ತವಲ್ಲದೇ ಹಲವಾರು ಗುಲಾಮರನ್ನೂ ಬಿಡಿಸಿ ಸ್ವಾತಂತ್ರ್ಯ ಕೊಡುತ್ತವೆ. ಈ ಸುದ್ದಿ ನಾದೆರ್ ಶಾಗೆ ತಲುಪುತ್ತದಾದರೂ ಆತ ಮೇನ ಬೇಸಿಗೆಯಲ್ಲಿ ಇಲ್ಲಿ ಸಿಕ್ಕಿಹಾಕಿಕೊಳ್ಳಲು ಬಯಸದೇ ತನ್ನ ಮರುಪ್ರಯಾಣ ಮುಂದುವರಿಸುತ್ತಾನೆ. ಮುಂದೊಮ್ಮೆ, 1745ರಲ್ಲಿ ನಾದೆರ್ ಶಾ ತಾನಂದುಕೊಂಡಂತೆ ಒಟ್ಟೊಮಾನ್ ಸಾಮ್ರಾಜ್ಯವನ್ನು ಸೋಲಿಸಿ ಅವರು ಶಾಂತಿ ಒಪ್ಪಂದಕ್ಕೆ ಸಹಿ ಹಾಕುವಂತೆ ಮಾಡುತ್ತಾನೆ. ಆ ಯುದ್ಧ ಸಾಧ್ಯವಾಗಿದ್ದು ಭಾರತದಿಂದ ದೋಚಿದ್ದ ಸಂಪನ್ಮೂಲದಿಂದ. ಅಷ್ಟರಲ್ಲಾಗಲೇ ಆಂತರಿಕವಾಗಿಯೇ ನಾದೆರ್ ಶಾ ವಿರುದ್ಧ ಬಂಡಾಯ ಶುರುವಾಗಿತ್ತಾದ್ದರಿಂದ, ಕೊನೆಗೊಮ್ಮೆ ಆತ 1746ರ ಹೊತ್ತಿಗೆ ತನ್ನವರಿಂದಲೇ ಹತ್ಯೆಯಾಗುತ್ತಾನೆ.
ಇತಿಹಾಸ ಇನ್ನೊಂದಿಷ್ಟು ಕಾಲದ ಓಟವನ್ನು ಸವೆಸುವಷ್ಟರಹೊತ್ತಿಗೆ ಭಾರತ ಮತ್ತು ಇರಾನುಗಳೆರಡೂ ಬ್ರಿಟಿಷ್ ವಸಾಹತುಶಾಹಿ ಅಧೀನಕ್ಕೆ ಬಂದಿರುತ್ತವೆ. ಸ್ವಾತಂತ್ರ್ಯಾನಂತರ ಭಾರತವು ಅಲಿಪ್ತ ನೀತಿ ಹೆಸರಲ್ಲಿ ಯಾರೊಂದಿಗೂ ಸೇರದಿದ್ದರೂ ಅದನ್ನು ಸೋವಿಯತ್ ಜತೆಗೆಂದೇ ಗುರುತಿಸಲಾಯ್ತು. ಆದರೆ ಇರಾನ್ ಸ್ವಾತಂತ್ರ್ಯದ ನಂತರವೂ ಪಾಶ್ಚಾತ್ಯರ ಮುಷ್ಟಿಯಲ್ಲೇ ಇತ್ತು. ತೈಲ ಪತ್ತೆಯಾದ ನಂತರ ಬ್ರಿಟಿಷ್ ಪೆಟ್ರೊಲಿಯಂ ಕಂಪನಿಯೇ (ಅವತ್ತಿಗೆ ಆಂಗ್ಲೋ ಇರಾನಿಯನ್ ಆಯಿಲ್ ಕಂಪನಿ) ಇರಾನ್ ಮೇಲೆ ಹಿಡಿತ ಹೊಂದಿತ್ತು. ಇರಾನಿಯರು ತಮ್ಮದೇ ಪ್ರಜಾಪ್ರಭುತ್ವ ಸರ್ಕಾರ ಹೊಂದುವ ಪ್ರಯತ್ನ ಮಾಡಿದಾಗಲೂ ಅಮೆರಿಕವು ಸಿಐಎ ಕಾರ್ಯಾಚರಣೆ ಮೂಲಕ ಆ ಸರ್ಕಾರವನ್ನು ಅಸ್ಥಿರಗೊಳಿಸಿ ತನ್ನದೇ ಮಾತು ಕೇಳುವ ರಾಜಾಡಳಿತವನ್ನಲ್ಲಿ ಪ್ರತಿಷ್ಠಾಪಿಸಿತು.
ಹೀಗಿರುವಾಗ, 1979ರಲ್ಲಿ ರಂಗಪ್ರವೇಶಿಸಿ, ಇಸ್ಲಾಮಿಕ್ ಕ್ರಾಂತಿಯ ಮೂಲಕ ಇರಾನಿನ ಚಹರೆಯನ್ನೇ ಬದಲಿಸಿ, ಪಾಶ್ಚಾತ್ಯರನ್ನು ಓಡಿಸಿ, ಅಲ್ಲಿ ಇಸ್ಲಾಮಿನ ಶಿಯಾ ಮತೋಪದೇಶಕರದ್ದೇ ಪರಮಾಧಿಕಾರವಿರುವಂಥ ಇವತ್ತಿನ ವ್ಯವಸ್ಥೆಯನ್ನು ಸ್ಥಾಪಿಸಿದ್ದು ಅಯತೊಲ್ಲ ಖೊಮೇನಿ. ಈಗಿನ ಅಲಿ ಖಮೇನಿ ಅದೇ ಪರಂಪರೆಯ ಮುಂದುವರಿಕೆ. ಇಸ್ಲಾಮಿಕ್ ಕ್ರಾಂತಿಯ ಖೊಮೇನಿಯ ಪೂರ್ವಜರು ಶತಮಾನಗಳ ಹಿಂದೆ ಭಾರತದ ಔಧ್ ಪ್ರಾಂತ್ಯದಿಂದಲೇ ಇರಾನಿಗೆ ತೆರಳಿದ್ದರು ಎಂಬಲ್ಲಿಗೆ ಇರಾನಿನ ಚರಿತ್ರೆಯ ಸ್ವಾರಸ್ಯವು ಬೇಕೋಬೇಡವೋ ಮತ್ತೆ ಮತ್ತೆ ಭಾರತವನ್ನು ತಾಗುತ್ತದೆ!
ಪಶ್ಚಿಮ ಏಷ್ಯದ ಯುದ್ಧಸಂಘರ್ಷದಲ್ಲಿ ಇರಾನ್ ತನ್ನನ್ನು ತೊಡಗಿಸಿಕೊಂಡಿರುವ ಈ ಹೊತ್ತಿನಲ್ಲಿ ಅಲ್ಲಿ ಆಗಬಹುದಾದ ಯುದ್ಧೋತ್ಕರ್ಷವು ಜಗತ್ತಿಗೇ ಕಂಪನಗಳನ್ನು ರವಾನಿಸುತ್ತದೆ. ಅಂಥ ಸಂದರ್ಭದಲ್ಲಿ, ಭವಿಷ್ಯದಲ್ಲಿ ರೂಪುಗೊಳ್ಳಲಿರುವ ಇತಿಹಾಸದಲ್ಲಿ ಭಾರತವು ಹೇಗೆಲ್ಲ ಎಳೆಯಲ್ಪಡುತ್ತದೋ ಎಂಬುದನ್ನು ಎಚ್ಚರಿಕೆಯಿಂದ ಗಮನಿಸುವುದಕ್ಕೆ ಈ ಎಲ್ಲ ಇತಿಹಾಸ ಬಿಂದುಗಳು ಪ್ರೇರೇಪಿಸಬೇಕಿದೆ.
- ಚೈತನ್ಯ ಹೆಗಡೆ
cchegde@gmail.com
Advertisement