
2000ನೇ ಇಸವಿಯಲ್ಲಿ, ಬಶರ್ ಅಲ್ ಅಸ್ಸಾದ್ ಸಿರಿಯಾದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಾಗ, ಅವರ ಅಧಿಕಾರಕ್ಕೆ ಯಾವುದೇ ಮಿತಿ ಇರಲಿಲ್ಲ. ಬಶರ್ ಅಲ್ ಅಸ್ಸಾದ್ 1970ರಿಂದ ಸಿರಿಯಾವನ್ನು ಆಳಿದ ತನ್ನ ತಂದೆ ಹಫೀಜ್ ಅಲ್ ಅಸ್ಸಾದ್ ಅವರ ಬಳಿಕ ಅಧ್ಯಕ್ಷ ಸ್ಥಾನ ವಹಿಸಿದ್ದರು. ಹಫೀಜ್ ಬಾತ್ ಪಕ್ಷದ ಅಧಿಕಾರವನ್ನು ಕ್ರೋಢೀಕರಿಸಿ, ಅದು ಸೋವಿಯತ್ ಒಕ್ಕೂಟದ ಪರವಾಗಿ ಇರುವಂತೆ ಮಾಡಿದ್ದರು. ಬಳಿಕ, ಸಿರಿಯಾಗೆ ಒಂದು ಪ್ರಭಾವಿ, ದೃಢವಾದ ರಾಜಕೀಯ ಮತ್ತು ಮಿಲಿಟರಿ ನಾಯಕತ್ವ ಒದಗಿಸಿ, ತಾನೂ ಸದಸ್ಯನಾಗಿರುವ ಸಿರಿಯಾದ ಅಲ್ಪಸಂಖ್ಯಾತ ಅಲ್ವೈಟ್ ಸಮುದಾಯದ ಹೆಚ್ಚಿನ ಪ್ರಭಾವ ಇರುವಂತೆ ಮಾಡಿದ್ದರು.
ಹಾಗೆ ನೋಡಿದರೆ, ಲಂಡನಿನಲ್ಲಿ ವ್ಯಾಸಂಗ ಮಾಡಿ, ನೇತ್ರ ತಜ್ಞರಾಗಿದ್ದ ಬಶರ್ ಅಲ್ ಅಸ್ಸಾದ್ ಸಿರಿಯಾದ ಅಧ್ಯಕ್ಷರಾಗಲು ಮೂಲ ಆಯ್ಕೆ ಆಗಿರಲಿಲ್ಲ. ಅವರ ಅಣ್ಣ, ಬಸ್ಸೆಲ್ ಅವರನ್ನು ಸಿರಿಯಾದ ಮುಂದಿನ ಅಧ್ಯಕ್ಷರನ್ನಾಗಿಸಲು ಸೂಕ್ತ ತರಬೇತಿ ನೀಡಿ, ಸಿದ್ಧತೆ ನಡೆಸಲಾಗುತ್ತಿತ್ತು. ಆದರೆ, 1994ರಲ್ಲಿ ನಡೆದ ಕಾರ್ ಅಪಘಾತದಲ್ಲಿ ಬಸ್ಸೆಲ್ ಸಾವನ್ನಪ್ಪಿದರು. ಅದಾದ ಬಳಿಕ, ಸಿರಿಯನ್ ಸಂಸತ್ತು ಬೇಗನೆ ಅಧ್ಯಕ್ಷರಾಗಲು ಕನಿಷ್ಠ ವಯೋಮಾನವನ್ನು 34ಕ್ಕೆ ಇಳಿಸಿ, ಬಶರ್ ಅಲ್ ಅಸ್ಸಾದ್ ಯಾವುದೇ ಪ್ರತಿರೋಧವಿಲ್ಲದೆ ಸಿರಿಯಾದ ಅಧ್ಯಕ್ಷರಾಗುವಂತೆ ಮಾಡಿತು.
ಆರಂಭದಲ್ಲಿ, ಯುರೋಪ್ ಮತ್ತು ಅಮೆರಿಕಾಗಳು ಬಶರ್ ಅಲ್ ಅಸ್ಸಾದ್‌ರನ್ನು ಯುವ, ಆಧುನಿಕ ನಾಯಕ ಎಂದು ಪರಿಗಣಿಸಿ, ಸಿರಿಯಾದ ಅಧ್ಯಕ್ಷರಾಗಿ ಅವರ ನೇಮಕಾತಿಯನ್ನು ಸ್ವಾಗತಿಸಿದವು. ಈ ಆಶಾ ಭಾವನೆಗೆ ಅವರ ಪತ್ನಿ, ಲಂಡನ್ ಮೂಲದ ಹೂಡಿಕೆ ಬ್ಯಾಂಕರ್ ಆಗಿದ್ದ ಆಸ್ಮಾ ಅಲ್ ಅಸ್ಸಾದ್ ಅವರೂ ಪೂರಕವಾಗಿದ್ದರು. ಆದರೆ, ಸಿರಿಯಾದಲ್ಲಿ ಸುಧಾರಣೆಗಳು ನಡೆಯುತ್ತವೆ ಎಂಬ ಭಾವನೆಗಳು ಕೇವಲ ಕ್ಷಣಿಕವಷ್ಟೇ ಆಗಿದ್ದವು. ಬಶರ್ ಅಲ್ ಅಸ್ಸಾದ್ ಹಮಾಸ್ ಮತ್ತು ಹೆಜ್ಬೊಲ್ಲಾಗಳಂತಹ ಭಯೋತ್ಪಾದಕ ಸಂಘಟನೆಗಳೊಡನೆ ಬಾಂಧವ್ಯವನ್ನು ಬಲಪಡಿಸತೊಡಗಿದರು. ಅದರೊಡನೆ, 2011ರಲ್ಲಿ ಪ್ರಜಾಪ್ರಭುತ್ವವನ್ನು ಜಾರಿಗೆ ತರಲು ಆಗ್ರಹಿಸಿ ನಡೆಯುತ್ತಿದ್ದ ಪ್ರತಿಭಟನೆಯನ್ನು ಅತ್ಯಂತ ಹಿಂಸಾತ್ಮಕವಾಗಿ ಬಶರ್ ದಮನಗೊಳಿಸಿದರು. ಇದರ ಪರಿಣಾಮವಾಗಿ, ಅವರನ್ನು ಅಂತಾರಾಷ್ಟ್ರೀಯ ಸಮುದಾಯ ಏಕಾಂಗಿಯನ್ನಾಗಿಸಿತು.
ಮೇ 2011ರಲ್ಲಿ, ಅಮೆರಿಕಾದ ಆಗಿನ ಅಧ್ಯಕ್ಷ ಬರಾಕ್ ಒಬಾಮಾ ಅವರು ಪ್ರತಿಭಟನೆಗಳನ್ನು ಹಿಂಸಾತ್ಮಕವಾಗಿ ದಮನಿಸಿದ್ದಕ್ಕೆ ಅಸ್ಸಾದ್ ಸರ್ಕಾರವನ್ನು ಖಂಡಿಸಿದ್ದರು. ಸಾಧ್ಯವಾದರೆ ಸಿರಿಯಾದಲ್ಲಿ ಪ್ರಜಾಪ್ರಭುತ್ವವಾದಿ ಸುಧಾರಣೆಗಳನ್ನು ಜಾರಿಗೆ ತನ್ನಿ, ಇಲ್ಲವಾದರೆ ಅಧಿಕಾರದಿಂದ ಕೆಳಗಿಳಿಯಿರಿ ಎಂದು ಒಬಾಮಾ ಹೇಳಿದ್ದರು. ಇದೆಲ್ಲದರ ಹೊರತಾಗಿಯೂ, ಅಸ್ಸಾದ್ ಅಧಿಕಾರದಲ್ಲಿ ಮುಂದುವರಿದಿದ್ದು, ಪ್ರತೀ ಏಳು ವರ್ಷಗಳಿಗೊಮ್ಮೆ ನಡೆಯುವ ಚುನಾವಣೆಯಲ್ಲಿ ಭಾರೀ ಬಹುಮತದಿಂದ ಮರು ಚುನಾಯಿತರಾಗುತ್ತಿದ್ದರು. ಪಾಶ್ಚಾತ್ಯ ದೇಶಗಳು ಈ ಚುನಾವಣೆಗಳನ್ನು ವಂಚನೆ ಎಂದೇ ತಳ್ಳಿಹಾಕುತ್ತಿದ್ದವು. ಸಿರಿಯಾದಲ್ಲಿ ತೀರಾ ಇತ್ತೀಚಿನ ಚುನಾವಣೆ 2021ರಲ್ಲಿ ನಡೆದಿತ್ತು.
2011ರ ಪ್ರತಿಭಟನೆಗಳ ಬಳಿಕ ಆರಂಭವಾದ ಸಿರಿಯಾದ ಅಂತರ್ಯುದ್ಧ ಅಸ್ಸಾದ್ ಅಧ್ಯಕ್ಷತೆಯನ್ನು ನಿರ್ಣಯಿಸುವಂತಹ ವಿಚಾರವೇ ಆಗಿತ್ತು. ಆಗಸ್ಟ್ 21, 2013ರಂದು, ಅಧ್ಯಕ್ಷ ಅಸ್ಸಾದ್ ಅವರಿಗೆ ನಿಷ್ಠರಾಗಿರುವ ಪಡೆಗಳು ಘೌಟಾ ರಾಸಾಯನಿಕ ದಾಳಿ ಎಂದು ಹೆಸರಾಗಿರುವ ದಾಳಿಯಲ್ಲಿ ಸರಿನ್ ಅನಿಲ ತುಂಬಿದ್ದ ರಾಕೆಟ್‌ಗಳನ್ನು ರಾಜಧಾನಿ ಡಮಾಸ್ಕಸ್ ಬಳಿ ವಿರೋಧಿಗಳ ನಿಯಂತ್ರಣದಲ್ಲಿದ್ದ ಪ್ರದೇಶಗಳ ಮೇಲೆ ಪ್ರಯೋಗಿಸಿದ್ದವು. ಈ ದಾಳಿಯಲ್ಲಿ 281ರಿಂದ 1,729 ಜನರು ಪ್ರಾಣ ಕಳೆದುಕೊಂಡಿದ್ದು, ಇರಾನ್ - ಇರಾಕ್ ಯುದ್ಧದ ಬಳಿಕ ಜಗತ್ತು ಕಂಡ ಅತ್ಯಂತ ಕ್ರೂರ ರಾಸಾಯನಿಕ ದಾಳಿ ಎನ್ನಲಾಗಿದೆ. ನರಮಂಡಲದ ವ್ಯವಸ್ಥೆಯನ್ನೇ ಹಾಳುಗೆಡವಿ, ಜನರಲ್ಲಿ ಪಾರ್ಶ್ವವಾಯು, ಉಸಿರಾಟ ವ್ಯವಸ್ಥೆಯ ವೈಫಲ್ಯ ಹಾಗೂ ಸಾವಿಗೆ ಕಾರಣವಾಗುವ ಅಪಾಯಕಾರಿ ನರ ಅನಿಲವನ್ನು ಈ ದಾಳಿಯಲ್ಲಿ ಪ್ರಯೋಗಿಸಲಾಗಿತ್ತು.
ಘೌಟಾ ದಾಳಿ ಅಸ್ಸಾಸ್ ಪಡೆಗಳು ಹೊಂದಿದ್ದ ಅಪಾರ ಪ್ರಮಾಣದ ರಾಸಾಯನಿಕ ಆಯುಧಗಳಲ್ಲಿ ಕೇವಲ ಒಂದು ಭಾಗ ಎನ್ನಲಾಗಿತ್ತು. 2012ರಿಂದ 2019ರ ನಡುವೆ, ಸಿರಿಯಾದಲ್ಲಿ ಇಂತಹ 300ಕ್ಕೂ ಹೆಚ್ಚು ಘಟನೆಗಳು ನಡೆದಿವೆ ಎಂದು ಗ್ಲೋಬಲ್ ಪಬ್ಲಿಕ್ ಪಾಲಿಸಿ ಇನ್ಸ್ಟಿಟ್ಯೂಟ್ (ಜಿಪಿಪಿಐ) ಹಾಗೂ ಹ್ಯುಮನ್ ರೈಟ್ಸ್ ವಾಚ್ ಸಂಸ್ಥೆಗಳು ದಾಖಲಿಸಿವೆ. ಇವುಗಳಲ್ಲಿ ಗಮನಾರ್ಹ ದಾಳಿಗಳೆಂದರೆ:
ಖಾನ್ ಶೇಖೌನ್ (2017): ಈ ಸರಿನ್ ಅನಿಲ ದಾಳಿಯಲ್ಲಿ ಬಹುತೇಕ 100 ಮಂದಿ ಸಾವಿಗೀಡಾಗಿ, ನೂರಾರು ಮಂದಿ ಗಾಯಗೊಂಡಿದ್ದರು.
ಡೌಮಾ (2018): ಇಲ್ಲಿ ನಡೆದ ಕ್ಲೋರಿನ್ ಅನಿಲ ದಾಳಿಯಲ್ಲಿ ಕನಿಷ್ಠ ಒಂದು ಡಜನ್ ಜನ ಸಾವಿಗೀಡಾಗಿದ್ದರು.
ರಾಸಾಯನಿಕ ಆಯುಧಗಳನ್ನು ವ್ಯಾಪಕವಾಗಿ ಬಳಸಿರುವುದನ್ನು ಯುದ್ಧಾಪರಾಧ ಎಂದು ಪರಿಗಣಿಸಿ ಖಂಡನೆಗೆ ಗುರಿಪಡಿಸಲಾಯಿತು. ಆದರೆ ಅಸ್ಸಾದ್ ಸರ್ಕಾರ ತಾನು ಅಂತಹ ಯಾವುದೇ ರಾಸಾಯನಿಕ ದಾಳಿ ನಡೆಸಿಲ್ಲ ಎಂದೇ ವಾದಿಸುತ್ತಾ ಬಂದಿತ್ತು. 2013ರಲ್ಲಿ, ವಿಶ್ವಸಂಸ್ಥೆಯ ವೀಕ್ಷಕರು ಸಿರಿಯಾದಲ್ಲಿ ಸರಿನ್ ಅನಿಲದ ಬಳಕೆಯನ್ನು ಖಚಿತಪಡಿಸಿ, ಇದು ಅತ್ಯಂತ ಸ್ಪಷ್ಟವಾಗಿದ್ದು, ಅಲ್ಲಗಳೆಯಲು ಸಾಧ್ಯವೇ ಇಲ್ಲ ಎಂದಿದ್ದರು. ಇದರ ಪರಿಣಾಮವಾಗಿ, ಸಿರಿಯಾದ ರಾಸಾಯನಿಕ ಆಯುಧಗಳ ಸಂಗ್ರಹವನ್ನು ಇಲ್ಲವಾಗಿಸಲು ಅಂತಾರಾಷ್ಟ್ರೀಯ ಪ್ರಯತ್ನಗಳು ಆರಂಭಗೊಂಡವು. ಅಮೆರಿಕಾ ಸಿರಿಯಾದ ಸರ್ಕಾರ ವಿರೋಧಿ ಗುಂಪುಗಳಿಗೆ ಹೆಚ್ಚಿನ ಬೆಂಬಲ ನೀಡತೊಡಗಿತು.
ಅಪಾರ ಪ್ರಮಾಣದಲ್ಲಿ ಸಾಕ್ಷಿಗಳು ಲಭ್ಯವಾಗಿ, ಅಂತಾರಾಷ್ಟ್ರೀಯ ಆಕ್ರೋಶಗಳು ವ್ಯಕ್ತವಾಗತೊಡಗಿದರೂ, ಅಧಿಕಾರದ ಗದ್ದುಗೆಯ ಮೇಲೆ ಅಸ್ಸಾದ್ ಹಿಡಿತವೂ ಅಷ್ಟೇ ಭದ್ರವಾಗಿತ್ತು. 2015ರಲ್ಲಿ, ಅಸ್ಸಾದ್ ಸಿರಿಯಾದ ದೊಡ್ಡ ಪ್ರದೇಶಗಳನ್ನು ವಶಪಡಿಸಿಕೊಂಡಿದ್ದ ಐಎಸ್ಐಎಸ್ ಭಯೋತ್ಪಾದಕ ಸಂಘಟನೆಯ ವಿರುದ್ಧ ಅಮೆರಿಕಾ ನೇತೃತ್ವದ ಪಡೆಗಳೊಡನೆ ಸೇರಿ ಹೋರಾಡುವುದನ್ನು ತಿರಸ್ಕರಿಸಿದ್ದರು. ಇದೇ ವೇಳೆ, ಯುದ್ಧ ಸಿರಿಯಾದ ಮೇಲೆ ಅಸಾಧಾರಣ ಪರಿಣಾಮವನ್ನು ಉಂಟುಮಾಡಿತ್ತು. ವಿಶ್ವಸಂಸ್ಥೆಯ ಪ್ರಕಾರ, 70 ಲಕ್ಷಕ್ಕೂ ಹೆಚ್ಚು ಜನರು ತಮ್ಮ ಮನೆಗಳನ್ನು ಕಳೆದುಕೊಂಡಿದ್ದಾರೆ. 60 ಲಕ್ಷಕ್ಕೂ ಹೆಚ್ಚು ಜನರು ವಿದೇಶಗಳಲ್ಲಿ ಆಶ್ರಯ ಕೋರಿದ್ದಾರೆ.
ಅಸ್ಸಾದ್ ಆಡಳಿತದಲ್ಲಿ ನೀಡಿದ್ದ ಭರವಸೆಗಳು ಯಾವುದೂ ಪೂರ್ಣಗೊಳ್ಳದೆ, ಜನರಿಗೆ ಕೇವಲ ಹಿಂಸಾಚಾರವಷ್ಟೇ ಲಭಿಸಿತ್ತು. ಆ ಮೂಲಕ, 21ನೇ ಶತಮಾನದ ಅತ್ಯಂತ ಕ್ರೂರ ನಾಯಕ ಎಂಬ ಅಸ್ಸಾದ್ ಕುಖ್ಯಾತಿ ಇನ್ನಷ್ಟು ಭದ್ರವಾಯಿತು. ಅವರ ಅಧ್ಯಕ್ಷೀಯ ಅವಧಿ ಸರ್ವಾಧಿಕಾರದ ಮುಂದುವರಿಕೆ ಮಾತ್ರವಲ್ಲದೆ, ಯುದ್ಧದಲ್ಲಿ ಮಾನವರ ಬಲಿದಾನದ ಪ್ರತೀಕವಾಗಿತ್ತು.
ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
Advertisement