
ಸಿರಿಯಾದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಇಂತಿವೆ: ಕಳೆದ ವಾರ, ಸಿರಿಯಾದ ವಾಯುವ್ಯ ಭಾಗದಲ್ಲಿ ಇಸ್ಲಾಮಿಕ್ ಉಗ್ರಗಾಮಿಗಳು ಇದ್ದಕ್ಕಿದ್ದಂತೆ ಸಿರಿಯಾ ಅಧ್ಯಕ್ಷ ಬಶರ್ ಅಲ್ ಅಸ್ಸಾದ್ ಅವರಿಗೆ ನಿಷ್ಠರಾಗಿರುವ ಪಡೆಗಳ ಮೇಲೆ ದಾಳಿ ನಡೆಸಿ, ಬಹಳಷ್ಟು ಭೂಭಾಗಗಳನ್ನು ತಮ್ಮ ವಶಕ್ಕೆ ಪಡೆದುಕೊಂಡರು.
ವಾಸ್ತವವಾಗಿ, ಸಿರಿಯಾದ ಅಂತರ್ಯುದ್ಧ ಅರಬ್ ವಸಂತದಿಂದ (ಅರಬ್ ಸ್ಪ್ರಿಂಗ್) ಸ್ಫೂರ್ತಿ ಪಡೆದು, ಬಳಿಕ ನಡೆದ ಸರ್ಕಾರ ವಿರೋಧಿ ಪ್ರತಿಭಟನೆಗಳ ಮೂಲಕ ಆರಂಭವಾಯಿತು. ಆದರೆ, 2016ರ ವೇಳೆಗೆ, ಸಿರಿಯನ್ ಸರ್ಕಾರ ತಾನು ಕಳೆದುಕೊಂಡಿದ್ದ ಬಹುಪಾಲು ಭೂ ಪ್ರದೇಶಗಳನ್ನು ಮರಳಿ ವಶಪಡಿಸಿಕೊಂಡಿತು. ಆ ಬಳಿಕ, ಸಿರಿಯಾದ ಕದನ ಕಡಿಮೆಯಾಗತೊಡಗಿತು.
ಅರಬ್ ವಸಂತ: ಅರಬ್ ವಸಂತ (ಅರಬ್ ಸ್ಪ್ರಿಂಗ್) ಎನ್ನುವುದು ಒಂದು ಸರಣಿ ಪ್ರತಿಭಟನೆಗಳು, ದಂಗೆಗಳಾಗಿದ್ದು, ಅದು 2010ರ ದಶಕದಲ್ಲಿ ಆರಂಭಗೊಂಡು, ಅರಬ್ ಜಗತ್ತಿನ ಬಹಳಷ್ಟು ರಾಷ್ಟ್ರಗಳಿಗೆ ವ್ಯಾಪಿಸಿತು. ಆರಂಭದಲ್ಲಿ, ಟ್ಯುನೀಷಿಯಾ, ಈಜಿಪ್ಟ್, ಲಿಬಿಯಾ, ಸಿರಿಯಾ, ಮತ್ತು ಯೆಮೆನ್ ರಾಷ್ಟ್ರಗಳ ನಾಗರಿಕರು ದಂಗೆ ಎದ್ದು, ರಾಜಕೀಯ ಸುಧಾರಣೆಗಳು, ಹೆಚ್ಚಿನ ಸ್ವಾತಂತ್ರ್ಯ, ಮತ್ತು ಭ್ರಷ್ಟ ಹಾಗೂ ಸರ್ವಾಧಿಕಾರಿ ಆಡಳಿತಕ್ಕೆ ಕೊನೆ ಹಾಡಬೇಕು ಎಂದು ಆಗ್ರಹಿಸತೊಡಗಿದರು. ಇಂತಹ ಪ್ರತಿಭಟನೆಗಳಿಗೆ ಅಪ್ರಯೋಜಕ ಆಡಳಿತ, ಉದ್ಯೋಗಗಳ ಕೊರತೆ, ಮತ್ತು ಮಾನವ ಹಕ್ಕುಗಳ ದಮನ ಮೂಲ ಕಾರಣವಾಗಿದ್ದವು. ಈ ಪ್ರತಿಭಟನೆಗಳ ಪರಿಣಾಮವಾಗಿ, ಟ್ಯುನೀಷಿಯಾ ಮತ್ತು ಈಜಿಪ್ಟ್‌ನ ಆಡಳಿತಗಾರರನ್ನು ಕೆಳಗಿಳಿಸಲಾಯಿತು. ಇನ್ನು ಸಿರಿಯಾ ಮತ್ತು ಯೆಮೆನ್‌ನಂತಹ ದೇಶಗಳಲ್ಲಿ ಸುದೀರ್ಘ ಚಕಮಕಿಗಳು ಮುಂದುವರಿದವು.
ಅರಬ್ ಗಣರಾಜ್ಯದಲ್ಲಿ ಪರಿಸ್ಥಿತಿ ಬಹುತೇಕ ಮೌನವಾಗಿತ್ತಾದರೂ, ನೈಜ ಶಾಂತಿಯನ್ನು ಸಾಧಿಸಲು ಸಾಧ್ಯವಾಗಿರಲಿಲ್ಲ. ಇತ್ತೀಚೆಗೆ, ಇದ್ದ ಶಾಂತಿಯನ್ನೂ ಕೊನೆಗೊಳಿಸುವಂತೆ ಹೊಸ ಚಕಮಕಿಗಳು ಆರಂಭಗೊಂಡವು.
2015ರಲ್ಲಿ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಸಿರಿಯಾಗೆ ಸೇನಾಪಡೆಗಳನ್ನು ಕಳುಹಿಸುವ ಮುನ್ನ, ಅಸ್ಸಾದ್ ಸರ್ಕಾರ ಪತನವಾಗುವ ಹಂತದಲ್ಲಿತ್ತು.
ಆ ಸಮಯದಲ್ಲಿ, ಅಸ್ಸಾದ್ ಬಹುತೇಕ ಮುಖ್ಯ ನಗರಗಳ ಮೇಲಿನ ನಿಯಂತ್ರಣ ಕಳೆದುಕೊಂಡಿದ್ದರು. ಕೇವಲ ರಾಜಧಾನಿ ಡಮಾಸ್ಕಸ್ ಮತ್ತು ಅಲಾವಿಟ್ ಸಮುದಾಯ (ಸರ್ಕಾರವನ್ನು ಬೆಂಬಲಿಸುವ ಪ್ರಮುಖ ಸಮುದಾಯ) ಪ್ರಾಬಲ್ಯ ಹೊಂದಿದ್ದ ಒಂದಷ್ಟು ಕರಾವಳಿ ನಗರಗಳು ಮಾತ್ರ ಅಸ್ಸಾದ್ ನಿಯಂತ್ರಣದಲ್ಲಿದ್ದವು.
ಈ ದಾಳಿಗಳಲ್ಲಿ ಹಲವಾರು ಬಂಡುಕೋರ ಮತ್ತು ತೀವ್ರವಾದಿ ಗುಂಪುಗಳು ಭಾಗಿಯಾಗಿದ್ದವು. ಅವುಗಳಲ್ಲಿ ಫ್ರೀ ಸಿರಿಯನ್ ಆರ್ಮಿ (ಎಫ್ಎಸ್ಎ), ಜಭಾತ್ ಅಲ್ ನುಸ್ರಾ (ಅಲ್ ಖೈದಾದ ಸಿರಿಯನ್ ಅಂಗಸಂಸ್ಥೆ), ಹಾಗೂ ಇಸ್ಲಾಮಿಕ್ ಸ್ಟೇಟ್ (ಐಎಸ್) ಗಳು ಮುಖ್ಯವಾಗಿದ್ದವು.
ಫ್ರೀ ಸಿರಿಯನ್ ಆರ್ಮಿ (ಎಫ್ಎಸ್ಎ): ಫ್ರೀ ಸಿರಿಯನ್ ಆರ್ಮಿ ಎನ್ನುವುದು ಅಸ್ಸಾದ್ ಸರ್ಕಾರದ ವಿರುದ್ಧ ಹೋರಾಡಲು 2011ರಲ್ಲಿ ಸ್ಥಾಪನೆಯಾದ ಸಿರಿಯನ್ ಬಂಡುಕೋರರ ಗುಂಪಾಗಿದೆ. ಇದು ಸಿರಿಯಾದಲ್ಲಿ ಸರ್ವಾಧಿಕಾರಿ ಆಡಳಿತವನ್ನು ಕೊನೆಗೊಳಿಸಿ, ಪ್ರಜಾಪ್ರಭುತ್ವವನ್ನು ಸ್ಥಾಪಿಸುವ ಗುರಿ ಹೊಂದಿದೆ.
ಇಸ್ಲಾಮಿಕ್ ಸ್ಟೇಟ್ (ಐಎಸ್) ಸಿರಿಯಾದ ಪೂರ್ವದ ನಗರಗಳಾದ ರಾಕ್ಕಾ, ದೀರ್ ಎಜ್ಜಾರ್ ಮತ್ತು ಐತಿಹಾಸಿಕ ಪಾಲ್ಮಿರ ನಗರಗಳ ಮೇಲೆ ನಿಯಂತ್ರಣ ಹೊಂದಿತ್ತು.
ಜಭಾತ್ ಅಲ್ ನುಸ್ರಾ ಮತ್ತು ಫ್ರೀ ಸಿರಿಯನ್ ಆರ್ಮಿಗಳು ವಾಯುವ್ಯ ಸಿರಿಯಾದ ಇದ್ಲಿಬ್ ಪ್ರಾಂತ್ಯದ ಮೇಲೆ ನಿಯಂತ್ರಣ ಹೊಂದಿದ್ದವು.
ಇತರ ಸಶಸ್ತ್ರ ಗುಂಪುಗಳು ಹಾಮಾ, ಹಾಮ್ಸ್, ಮತ್ತು ರಾಜಧಾನಿ ಡಮಾಸ್ಕಸ್‌ನ ವಿವಿಧ ಪ್ರದೇಶಗಳ ಮೇಲೆ ನಿಯಂತ್ರಣ ಹೊಂದಿದ್ದವು. ದಕ್ಷಿಣದಲ್ಲಿ, ದಾರಾ ಮತ್ತು ಕುನೇಟಿರ ಪ್ರದೇಶಗಳೂ ಅಸ್ಥಿರವಾಗಿ, ಉದ್ವಿಗ್ನತೆ ಹೊಂದಿದ್ದವು.
ಸಿರಿಯಾದ ಅಂತರ್ಯುದ್ಧದ ಚಿತ್ರಣವನ್ನು ಬದಲಾಯಿಸುವಲ್ಲಿ ರಷ್ಯಾದ ಮಧ್ಯಪ್ರವೇಶ ಮಹತ್ವದ ಪಾತ್ರ ವಹಿಸಿತ್ತು. ಅಮೆರಿಕಾ ಬೆಂಬಲಿತ ಕುರ್ದಿಷ್ ಸಶಸ್ತ್ರ ಗುಂಪುಗಳು ಸಿರಿಯಾದ ಪೂರ್ವದಲ್ಲಿ ಮತ್ತು ಕುರ್ದಿಶ್ ಗಡಿ ಪ್ರದೇಶಗಳಲ್ಲಿ ಇಸ್ಲಾಮಿಕ್ ಸ್ಟೇಟ್ (ಐಎಸ್) ವಿರುದ್ಧ ಹೋರಾಡಿದರೆ, ರಷ್ಯಾ, ಇರಾನ್ ಮತ್ತು ಹೆಜ್ಬೊಲ್ಲಾ ಬೆಂಬಲ ಹೊಂದಿದ್ದ ಸಿರಿಯನ್ ಸೇನೆ, ಇತರ ಬಂಡುಕೋರ ಗುಂಪುಗಳ ವಿರುದ್ಧ ಹೋರಾಡಿ, ಕಳೆದುಕೊಂಡಿದ್ದ ಪ್ರದೇಶಗಳನ್ನು ಮರಳಿ ವಶಪಡಿಸಿಕೊಂಡಿತು.
ಡಿಸೆಂಬರ್ 2016ರ ವೇಳೆಗೆ, ಅಂದರೆ, ರಷ್ಯಾ ಈ ಯುದ್ಧದಲ್ಲಿ ಮಧ್ಯ ಪ್ರವೇಶಿಸಿದ ಒಂದು ವರ್ಷದ ಬಳಿಕ, ಸಿರಿಯನ್ ಸರ್ಕಾರ ದೇಶದ ಎರಡನೇ ಅತಿದೊಡ್ಡ ನಗರ ಮತ್ತು ಮಾಜಿ ಆರ್ಥಿಕ ಕೇಂದ್ರವಾದ ಅಲೆಪ್ಪೊ ನಗರವನ್ನು ವಶಪಡಿಸಿಕೊಂಡಿತು. ಇದೇ ವೇಳೆ, ಉಗ್ರಗಾಮಿ ಗುಂಪುಗಳು ಇದ್ಲಿಬ್ ಪ್ರದೇಶದ ಮೇಲೆ ನಿಯಂತ್ರಣ ಸಾಧಿಸಿದ್ದವು.
ಕುರ್ದಿಶ್ ಪಡೆಗಳೆಂದರೆ, ಮಧ್ಯ ಪೂರ್ವದ ಜನಾಂಗೀಯ ಗುಂಪಾದ ಕುರ್ದಿಶ್ ಜನರನ್ನು ಒಳಗೊಂಡ ಪಡೆಗಳಾಗಿವೆ. ಸಿರಿಯಾದಲ್ಲಿ ವೈಪಿಜಿ (ಪೀಪಲ್ಸ್ ಲಿಬರೇಶನ್ ಯುನಿಟ್ಸ್) ಅತ್ಯಂತ ಜನಪ್ರಿಯ ಕುರ್ದಿಶ್ ಪಡೆಯಾಗಿದೆ. ಈ ಗುಂಪುಗಳು ಕುರ್ದಿಶ್ ಪ್ರಾಂತ್ಯಗಳನ್ನು ರಕ್ಷಿಸಲು ಹೋರಾಡಿ, ಅಮೆರಿಕಾದ ಜೊತೆ ಕೈಜೋಡಿಸಿ ಇಸ್ಲಾಮಿಕ್ ಸ್ಟೇಟ್ (ಐಎಸ್) ವಿರುದ್ಧವೂ ಸೆಣಸಿದ್ದವು.
ವೈಪಿಜಿಯಂತಹ ಕುರ್ದಿಶ್ ಮಿಲಿಟರಿ ಪಡೆಗಳು ಸಿರಿಯನ್ ಅಧ್ಯಕ್ಷ ಬಶರ್ ಅಲ್ ಅಸ್ಸಾದ್ ಅವರಿಗೆ ಪೂರ್ಣವಾಗಿ ಬೆಂಬಲವೂ ನೀಡಿರಲಿಲ್ಲ, ಅವರಿಗೆ ಸಂಪೂರ್ಣ ವಿರುದ್ಧವಾಗಿಯೂ ಇರಲಿಲ್ಲ. ಅವರ ಮೂಲ ಉದ್ದೇಶ ಕುರ್ದಿಶ್ ಪ್ರಾಂತ್ಯಗಳನ್ನು ರಕ್ಷಿಸುವುದು, ಮತ್ತು ಈಶಾನ್ಯ ಸಿರಿಯಾದಲ್ಲಿ ಸ್ವಾಯತ್ತತೆ ಸ್ಥಾಪಿಸುವುದಾಗಿತ್ತು. ಈ ಪಡೆಗಳು ಅಸ್ಸಾದ್ ಸೇನೆಯೊಡನೆಯೂ ಆಗೊಮ್ಮೆ ಈಗೊಮ್ಮೆ ನಿಯಂತ್ರಣಕ್ಕಾಗಿ ಹೋರಾಟ ನಡೆಸಿದ್ದರೂ, ಕುರ್ದಿಶ್ ಪಡೆಗಳ ಮುಖ್ಯ ಉದ್ದೇಶ ಅಸ್ಸಾದ್ ಸರ್ಕಾರವನ್ನು ಉರುಳಿಸದೆಯೂ ಸ್ವಾಯತ್ತತೆ ಸಾಧಿಸುವುದಾಗಿತ್ತು. ಸರ್ಕಾರದ ಜೊತೆಗೆ ಕುರ್ದಿಶ್ ಗುಂಪುಗಳ ಸಂಬಂಧ ಸಂಕೀರ್ಣವಾಗಿದ್ದು, ಅದು ಯುದ್ಧದ ಸನ್ನಿವೇಶಗಳ ಅನುಗುಣವಾಗಿ ಬದಲಾಗುತ್ತಿತ್ತು.
ಸಿರಿಯಾದಲ್ಲಿ ಕುರ್ದಿಶ್ ಪ್ರದೇಶಗಳು ಪ್ರಮುಖವಾಗಿ ದೇಶದ ಈಶಾನ್ಯ ಭಾಗದಲ್ಲಿವೆ. ಇದರಲ್ಲಿ ಹಸಾಕಾ, ರಾಕ್ಕಾ ಮತ್ತು ದೀರ್ ಎಜ್ಜಾರ್‌ಗಳ ಭಾಗಗಳು, ಕೊಬಾನಿ ಮತ್ತು ಕಾಮಿಶ್ಲಿಯಂತಹ ಗಡಿ ಪ್ರದೇಶಗಳು ಸೇರಿವೆ. ಈ ಪ್ರದೇಶವನ್ನು ಸಾಮಾನ್ಯವಾಗಿ ರೊಜಾವಾ (ಪಶ್ಚಿಮ ಕುರ್ದಿಸ್ತಾನ್) ಎಂದೂ ಕರೆಯಲಾಗಿದ್ದು, ಇಲ್ಲಿ ಸಿರಿಯನ್ ಯುದ್ಧದ ಸಂದರ್ಭದಲ್ಲಿ ಕುರ್ದಿಶ್ ಸಮುದಾಯಗಳು ಸ್ವಾಯತ್ತತೆಗಾಗಿ ಆಗ್ರಹಿಸಿದ್ದವು.
ಕಳೆದ ವಾರ (48ನೇ ವಾರ), ಬಂಡುಕೋರರು ಇದ್ಲಿಬ್‌ನಿಂದ ಆಕ್ರಮಣ ನಡೆಸಲು ಆರಂಭಿಸಿದರು. ಅಲೆಪ್ಪೊ ನಗರದ ಪಶ್ಚಿಮ ಭಾಗಗಳನ್ನು ವಶಪಡಿಸಿಕೊಳ್ಳುವುದು ಅವರ ಪ್ರಮುಖ ಗುರಿಯಾಗಿತ್ತು. ಆದರೆ, ಸರ್ಕಾರಿ ಪಡೆಗಳನ್ನು ಅಲೆಪ್ಪೊದ ಉಪನಗರಗಳಿಂದ ಬಹಳ ಬೇಗನೆ ಓಡಿಸಿದ ಬಳಿಕ, ಭಯೋತ್ಪಾದಕರು ತಮ್ಮ ದಾಳಿಯನ್ನು ಅಲೆಪ್ಪೊ ನಗರವನ್ನು ಕೇಂದ್ರೀಕರಿಸಿ ಮುಂದುವರಿಸಲು ನಿರ್ಧರಿಸಿದರು.
ಅದಾದ ಕೆಲವೇ ದಿನಗಳಲ್ಲಿ, ಬಂಡುಕೋರರು ಅಲೆಪ್ಪೊ ನಗರದ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿ, ಸರ್ಕಾರದ ಪಾಲಿಗೆ ಪ್ರಮುಖ ಪ್ರದೇಶವಾಗಿದ್ದ ಹಾಮಾ ಕಡೆ ಸಾಗತೊಡಗಿದರು. ಅಲೆಪ್ಪೊದ ಈಶಾನ್ಯ ಭಾಗದಲ್ಲಿ ಬಂಡುಕೋರರು ಕುರ್ದಿಶ್ ಹೋರಾಟಗಾರರಿಂದಲೂ ಭೂ ಪ್ರದೇಶಗಳನ್ನು ವಶಪಡಿಸಿಕೊಂಡರು.
ಸಿರಿಯಾದಲ್ಲಿ ಇಂದು ಮೂರು ಮುಖ್ಯ ಗುಂಪುಗಳಿವೆ.
ಸಿರಿಯನ್ ಆಡಳಿತ ಗುಂಪು: ಇದು ಸಿರಿಯಾದ ಅತ್ಯಂತ ಪ್ರಭಾವಿ, ಶಕ್ತಿಶಾಲಿ ಗುಂಪಾಗಿದ್ದು, ಇದಕ್ಕೆ ಇರಾಕ್‌ನ ಶಿಯಾ ಸಶಸ್ತ್ರ ಗುಂಪುಗಳು, ಇರಾನ್ ಮತ್ತು ರಷ್ಯಾದ ಬೆಂಬಲವಿದೆ.ಸಿರಿಯನ್ ಆಡಳಿತ ಎನ್ನುವುದು ಸಿರಿಯಾ ಅಧ್ಯಕ್ಷ ಬಶರ್ ಅಲ್ ಅಸ್ಸಾದ್ ನೇತೃತ್ವದ ಸರ್ಕಾರವನ್ನು ಸೂಚಿಸುತ್ತದೆ. ಇದು ಸಿರಿಯಾದ ಆಡಳಿತ ನಿರ್ವಹಿಸುತ್ತಿದ್ದು, ಇದಕ್ಕೆ ರಷ್ಯಾದ ಬೆಂಬಲ, ಇರಾಕ್ ಮತ್ತು ಇರಾನ್‌ಗಳ ಶಿಯಾ ಗುಂಪುಗಳ ಬೆಂಬಲವಿತ್ತು. ಇದು ಪ್ರಸ್ತುತ ಯುದ್ಧದಲ್ಲಿ ಹಲವಾರು ಬಂಡುಕೋರ ಗುಂಪುಗಳು ಮತ್ತು ಭಯೋತ್ಪಾದಕ ಸಂಘಟನೆಗಳ ವಿರುದ್ಧವಿತ್ತು.
ಸಿರಿಯನ್ ಡೆಮಾಕ್ರಟಿಕ್ ಫೋರ್ಸಸ್ (ಎಸ್‌ಡಿಎಫ್): ಇದು ಕುರ್ದಿಶ್ ಪೀಪಲ್ಸ್ ಪ್ರೊಟೆಕ್ಷನ್ (ವೈಪಿಜಿ) ನೇತೃತ್ವದಲ್ಲಿ ವಿವಿಧ ಬಂಡಾಯ ಗುಂಪುಗಳ ಮೈತ್ರಿಕೂಟವಾಗಿದೆ. ಈ ಮೈತ್ರಿಕೂಟ, ರೊಜಾವಾ ಎಂದು ಹೆಸರಾಗಿರುವ ಕುರ್ದಿಶ್ ಪ್ರಾಂತ್ಯಗಳ ಮೇಲೆ ನಿಯಂತ್ರಣ ಹೊಂದಿತ್ತು. ಅಂತರ್ಯುದ್ಧ ಆರಂಭವಾದ ಸಮಯದಿಂದಲೂ, ಸಿರಿಯನ್ ಆಡಳಿತ ಮತ್ತು ವೈಪಿಜಿ ಒಂದು ಒಪ್ಪಂದಕ್ಕೆ ಬಂದಿದ್ದವು. ಇದರ ಪರಿಣಾಮವಾಗಿ, ಕುರ್ದ್‌ಗಳಿಗೆ ಒಂದಷ್ಟು ಸ್ವಾಯತ್ತತೆ ಲಭಿಸಿ, ಎರಡೂ ಬದಿಗಳು ಒಂದರ ಮೇಲೊಂದು ಆಕ್ರಮಣ ನಡೆಸುವುದನ್ನು ತಪ್ಪಿಸಿದ್ದವು.
ಹಯಾತ್ ತಹ್ರೀರ್ ಅಲ್ ಶಮ್ (ಎಚ್‌ಟಿಎಸ್): ಇದು ಸಿರಿಯಾದ ಮೂರನೇ ಮುಖ್ಯ ಗುಂಪಾಗಿದ್ದು, ಇದು ಇದ್ಲಿಬ್ ಪ್ರಾಂತ್ಯವನ್ನು ನಿಯಂತ್ರಿಸುವ ಮುಖ್ಯ ಸರ್ಕಾರ ವಿರೋಧಿ ಪಡೆಯಾಗಿತ್ತು. ಎಚ್‌ಟಿಎಸ್ ಒಂದು ಶಕ್ತಿಶಾಲಿ ಜಿಹಾದಿ ಗುಂಪಾಗಿದ್ದು, ಸಿರಿಯನ್ ಆಡಳಿತದ ವಿರುದ್ಧ ಹೋರಾಟದ ನೇತೃತ್ವ ವಹಿಸಿತ್ತು.
ಇದು ಟರ್ಕಿಯ ಬೆಂಬಲ ಹೊಂದಿರುವ, ಹಿಂದೆ ಫ್ರೀ ಸಿರಿಯನ್ ಆರ್ಮಿ ಎಂದು ಗುರುತಿಸಲ್ಪಟ್ಟಿದ್ದ, ಸಿರಿಯನ್ ನ್ಯಾಷನಲ್ ಆರ್ಮಿ (ಎಸ್ಎನ್ಎ) ಜೊತೆ ನಿಕಟವಾಗಿ ಕಾರ್ಯಾಚರಿಸುತ್ತಿತ್ತು. ಎಸ್ಎನ್ಎಯನ್ನು ಎಚ್‌ಟಿಎಸ್‌ನ ಬೆಂಬಲಿಗ ಅಥವಾ ಸಹಯೋಗಿ ಎಂದೇ ಪರಿಗಣಿಸಲಾಗಿತ್ತು. ಎಚ್‌ಟಿಎಸ್ ಮತ್ತು ಎಸ್ಎನ್ಎ ಜೊತೆಯಾಗಿ, ಸಿರಿಯಾದಲ್ಲಿನ ಮಿಲಿಟರಿ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದವು.
ಹಯಾತ್ ತಹ್ರಿರ್ ಅಲ್ ಶಮ್ (ಎಚ್‌ಟಿಎಸ್) ಸಂಘಟನೆಯ ನೇತೃತ್ವವನ್ನು 42 ವರ್ಷದ ಸಿರಿಯನ್ ಬಂಡುಕೋರ ಅಬು ಮೊಹಮ್ಮದ್ ಅಲ್ ಜೌಲಾನಿ ವಹಿಸಿದ್ದ. ತನ್ನ 20ರ ಹರೆಯದಲ್ಲಿ ಜೌಲಾನಿ ಅಮೆರಿಕಾದ ಅತಿಕ್ರಮಣದ ವಿರುದ್ಧ ಹೋರಾಡಲು ಇರಾಕ್‌ಗೆ ತೆರಳಿದ್ದ. 2003ರಲ್ಲಿ ಆತ ಅಲ್ ಖೈದಾ ಸಂಘಟನೆಯ ಸದಸ್ಯನಾದ.
ಇರಾಕ್‌ನಲ್ಲಿ ಅಬು ಬಕರ್ ಅಲ್ ಬಗ್ದಾದಿ ಅಲ್ ಖೈದಾದ ನೇತೃತ್ವ ವಹಿಸಿದ್ದಾಗ, ಜೌಲಾನಿ ಆತನ ನಂಬಿಕಸ್ಥ ಬಂಟರಲ್ಲಿ ಒಬ್ಬನಾಗಿದ್ದ. ಬಳಿಕ ಸಿರಿಯಾದಲ್ಲಿ ಅಂತರ್ಯುದ್ಧ ಆರಂಭಗೊಂಡಾಗ, ಬಗ್ದಾದಿ ಸಿರಿಯನ್ ಅಧ್ಯಕ್ಷ ಅಸ್ಸಾದ್ ವಿರುದ್ಧ ಹೋರಾಡಲು ಭಯೋತ್ಪಾದಕರನ್ನು ಕಳುಹಿಸಿ, ಜೌಲಾನಿಗೆ ಅವರ ನೇತೃತ್ವ ವಹಿಸಲು ಆದೇಶಿಸಿದ.
ಜೌಲಾನಿ ಜಭಾತ್ ಅಲ್ ನುಸ್ರಾ ಎಂಬ ಗುಂಪನ್ನು ಸ್ಥಾಪಿಸಿದ. ಆದರೆ, ಬಳಿಕ ಆತನಿಗೆ ಬಗ್ದಾದಿಯೊಡನೆ ಭಿನ್ನಾಭಿಪ್ರಾಯ ಮೂಡಿತು. ಬಗ್ದಾದಿ ಅಲ್ ನುಸ್ರಾ ಗುಂಪು ಇಸ್ಲಾಮಿಕ್ ಸ್ಟೇಟ್ ಜೊತೆ ವಿಲೀನವಾಗಬೇಕು ಎಂದು ಬಯಸಿದರೆ, ಜೌಲಾನಿಗೆ ಈ ಗುಂಪು ಸಿರಿಯಾದಲ್ಲಿ ಅಲ್ ಖೈದಾದ ಸ್ವತಂತ್ರ ವಿಭಾಗವಾಗಿರಬೇಕು ಎಂಬ ಅಪೇಕ್ಷೆಯಿತ್ತು.
ಸಂಪೂರ್ಣ ಜಗತ್ತಿನ ಗಮನ ಇಸ್ಲಾಮಿಕ್ ಸ್ಟೇಟ್ ಗುಂಪಿನ ಮೇಲಿದ್ದರೆ, ಜೌಲಾನಿ ಮೌನವಾಗಿಯೇ ಇದ್ಲಿಬ್ ಮೇಲಿನ ತನ್ನ ನಿಯಂತ್ರಣವನ್ನು ಬಲಪಡಿಸಿಕೊಂಡಿದ್ದ. ಕಾಲಕ್ರಮೇಣ ಇಸ್ಲಾಮಿಕ್ ಸ್ಟೇಟ್ ಸೋಲನುಭವಿಸಿ, ಅಲ್ ಬಗ್ದಾದಿ ಹತ್ಯೆಗೀಡಾದ. ಆದರೆ ಜೌಲಾನಿ ಸಿರಿಯನ್ ಸರ್ಕಾರದ ವಿರುದ್ಧದ ಹೋರಾಟದಲ್ಲಿ ಪ್ರಮುಖ ನಾಯಕನಾಗಿ ಹೊರಹೊಮ್ಮಿದ.
ಅವನು ಮೊದಲಿಗೆ ಅಲ್ ನುಸ್ರಾ ಫ್ರಂಟ್ ಸಂಘಟನೆಯ ಹೆಸರನ್ನು ಜಭಾತ್ ಅಲ್ ಶಮ್ ಎಂದು ಬದಲಾಯಿಸಿದ. ಬಳಿಕ ಗುಂಪಿನ ಹೆಸರು ಮತ್ತೆ ಹಯಾತ್ ತಹ್ರಿರ್ ಅಲ್ ಶಮ್ (ಎಚ್‌ಟಿಎಸ್) ಎಂದು ಬದಲಾಯಿಸಲಾಯಿತು. ಇದು ಸಂಘಟನೆಯನ್ನು ಅಲ್ ಖೈದಾದಿಂದ ದೂರವಿಡಲು ನಡೆಸಿದ ಪ್ರಯತ್ನವಾಗಿತ್ತಾದರೂ, ಎಚ್‌ಟಿಎಸ್ ಇಸ್ಲಾಮಿಸ್ಟ್ ನಂಬಿಕೆಗಳನ್ನೇ ಹೊಂದಿತ್ತು.
ಇತರ ಪ್ರದೇಶಗಳ ಮೇಲೆ ನಿಯಂತ್ರಣ ಕಳೆದುಕೊಂಡ ಜಿಹಾದಿಗಳು ಮತ್ತು ಬಂಡುಕೋರರು ತಮ್ಮ ಪಾಲಿನ ಸುರಕ್ಷಿತ ಪ್ರದೇಶವಾಗಿದ್ದ ಇದ್ಲಿಬ್ ಕಡೆ ತೆರಳತೊಡಗಿದರು.
ಕ್ರಮೇಣ ಜೌಲಾನಿ ಮತ್ತು ಆತನ ಗುಂಪು ಇದ್ಲಿಬ್‌ಗಾಗಿ ಪ್ರತ್ಯೇಕ ಆಡಳಿತ ವ್ಯವಸ್ಥೆಯನ್ನು ಜಾರಿಗೆ ತಂದಿತು. ಅಮೆರಿಕಾ ಜೌಲಾನಿಯನ್ನು ಭಯೋತ್ಪಾದಕ ಎಂದು ಪರಿಗಣಿಸಿದರೂ, ಆತ ಇದ್ಲಿಬ್ ಪ್ರಾಂತ್ಯವನ್ನು ವಶಪಡಿಸಿಕೊಂಡ ಬಳಿಕ ತನ್ನ ಗಮನವನ್ನು ಬೇರೆಡೆಗೆ ಕೇಂದ್ರೀಕರಿಸಿದ. ತನ್ನ ಹೋರಾಟ ಅಧ್ಯಕ್ಷ ಅಸ್ಸಾದ್ ವಿರುದ್ಧವೇ ಹೊರತು, ಅಮೆರಿಕಾ ವಿರುದ್ಧವಲ್ಲ ಎಂದಿದ್ದ. ಕುತೂಹಲಕಾರಿ ಅಂಶವೆಂದರೆ, ಅಮೆರಿಕಾ ಪೂರ್ವ ಸಿರಿಯಾದಲ್ಲಿ ಮಿಲಿಟರಿ ಉಪಸ್ಥಿತಿ ಹೊಂದಿದ್ದರೂ, ಅದು ಜೌಲಾನಿ ವಿರುದ್ಧ ಯಾವುದೇ ಮಹತ್ವದ ದಾಳಿ ನಡೆಸಿಲ್ಲ.
ಜೌಲಾನಿ ಬಹಳಷ್ಟು ಬಾರಿ ತನ್ನ ಗುರಿ ಅಸ್ಸಾದ್ ಸರ್ಕಾರವನ್ನು ಉರುಳಿಸುವುದು ಎಂದು ಹೇಳುತ್ತಾ ಬಂದಿದ್ದ. ಇನ್ನೊಂದೆಡೆ, ಸಿರಿಯನ್ ಆಡಳಿತ ಇದ್ಲಿಬ್ ಮೇಲೆ ದಾಳಿ ನಡೆಸಿ, ಆ ಪ್ರದೇಶದ ಮೇಲೆ ಮರಳಿ ನಿಯಂತ್ರಣ ಸಾಧಿಸುವ ಗುರಿ ಹೊಂದಿತ್ತು. ಆದರೆ, 30 ಲಕ್ಷ ಜನಸಂಖ್ಯೆ ಹೊಂದಿರುವ ದೊಡ್ಡ ಪ್ರದೇಶವಾದ ಇದ್ಲಿಬ್ ಮೇಲೆ ರಷ್ಯಾದ ಬೆಂಬಲವಿರದೆ ಬೃಹತ್ ಪ್ರಮಾಣದ ದಾಳಿ ನಡೆಸುವುದು ಸಿರಿಯನ್ ಸರ್ಕಾರಕ್ಕೆ ಸುಲಭವಾಗಿರಲಿಲ್ಲ.
ಟರ್ಕಿಯ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೋಗನ್ ಇದ್ಲಿಬ್ ಮೇಲೆ ದಾಳಿ ನಡೆಸುವುದನ್ನು ಬಲವಾಗಿ ವಿರೋಧಿಸಿದ್ದರು. ಇಂತಹ ಆಕ್ರಮಣ ನಡೆದರೆ, ಅದರ ಪರಿಣಾಮವಾಗಿ ಟರ್ಕಿಗೆ ಹೆಚ್ಚಿನ ಸಂಖ್ಯೆಯಲ್ಲಿ ನಿರಾಶ್ರಿತರು ವಲಸೆ ಬರಬಹುದು ಎಂದು ಎರ್ದೋಗನ್ ಆತಂಕ ಹೊಂದಿದ್ದರು.
ಈ ಅವಧಿಯಲ್ಲಿ ರಷ್ಯನ್ ಅಧ್ಯಕ್ಷ ಪುಟಿನ್ ಮತ್ತು ಟರ್ಕಿ ಅಧ್ಯಕ್ಷ ಎರ್ದೋಗನ್ ಒಂದು ಒಪ್ಪಂದ ಮಾಡಿಕೊಂಡಿದ್ದರು. ಇದ್ಲಿಬ್ ಪ್ರಾಂತ್ಯ ಎಚ್‌ಟಿಎಸ್ ಮತ್ತು ಟರ್ಕಿಯ ಬೆಂಬಲಿತ ಗುಂಪಾದ ಎಸ್ಎನ್ಎ ನಿಯಂತ್ರಣದಲ್ಲಿ ಇರುವಂತೆಯೇ ಕದನ ವಿರಾಮಕ್ಕೆ ಒಪ್ಪಿಕೊಳ್ಳುವಂತೆ ಸಿರಿಯನ್ ಸರ್ಕಾರದ ಮೇಲೆ ರಷ್ಯಾ ಒತ್ತಡ ಹೇರಿತ್ತು. ಇದರ ಪರಿಣಾಮವಾಗಿ, ಈ ಪ್ರದೇಶದಲ್ಲಿ ತಕ್ಕಮಟ್ಟಿಗೆ ಶಾಂತಿ ಸ್ಥಾಪನೆಯಾಗಿತ್ತಾದರೂ, ಉದ್ವಿಗ್ನತೆಗಳು ಹಾಗೆಯೇ ಮುಂದುವರಿದಿದ್ದವು.
ಅಂದಿನಿಂದ ಜಾಗತಿಕ ರಾಜಕೀಯದ ಪರಿಸ್ಥಿತಿ ಗಣನೀಯವಾಗಿ ಬದಲಾಗಿದೆ. ಫೆಬ್ರವರಿ 24, 2022ರಂದು ರಷ್ಯಾ ಉಕ್ರೇನ್‌ನಲ್ಲಿ ಯುದ್ಧ ಆರಂಭಿಸಿತು. ಈಗ ರಷ್ಯಾದ ಗಮನ ಸಂಪೂರ್ಣವಾಗಿ ಉಕ್ರೇನ್ ಯುದ್ಧದ ಮೇಲೆಯೇ ಕೇಂದ್ರಿತವಾಗಿದ್ದು, ತನ್ನ ಸಾವಿರಾರು ಸೈನಿಕರನ್ನು ಸಿರಿಯಾದಿಂದ ಮರಳಿ ಕರೆತಂದಿತ್ತು.
ಸಿರಿಯನ್ ಅಂತರ್ಯುದ್ಧದ ಉಚ್ಛ್ರಾಯ ಸ್ಥಿತಿಯಲ್ಲಿ, ಕುದ್ಸ್ ಪಡೆಗಳ ಪ್ರಭಾವಿ ಇರಾನಿಯನ್ ಜನರಲ್ ಕಾಸಿಂ ಸೊಲೇಮಾನಿ ಸಿರಿಯನ್ ಸರ್ಕಾರದ ವಿರುದ್ಧ ಹೋರಾಡುತ್ತಿದ್ದ ಬಂಡುಕೋರರನ್ನು ನಿಯಂತ್ರಿಸಲು ಶಿಯಾ ಹೋರಾಟಗಾರರನ್ನು ಸಂಘಟಿಸಿ, ಸಿರಿಯಾಗೆ ಕಳುಹಿಸಲು ಪ್ರಯತ್ನ ನಡೆಸಿದ್ದರು.
ಆದರೆ, ಜನರಲ್ ಸೊಲೇಮಾನಿಯನ್ನು 2020ರಲ್ಲಿ ಅಮೆರಿಕಾ ವಾಯುದಾಳಿ ನಡೆಸಿ ಹತ್ಯೆಗೈದಿತ್ತು.
ಕುದ್ಸ್ ಫೋರ್ಸ್ ಎನ್ನುವುದು ಇರಾನಿನ ರೆವಲ್ಯೂಷನರಿ ಗಾರ್ಡ್ ಪಡೆಯ ಪ್ರಬಲ ಘಟಕವಾಗಿದ್ದು, ಇರಾನಿನ ಹೊರಗೆ ಮಿಲಿಟರಿ ಕಾರ್ಯಾಚರಣೆ ಮತ್ತು ಗುಪ್ತಚರ ಚಟುವಟಿಕೆಗಳನ್ನು ನಡೆಸುವ ಜವಾಬ್ದಾರಿ ಹೊಂದಿದೆ. ಇದು ಸಂಘರ್ಷ ವಲಯಗಳಲ್ಲಿ ಇರಾನಿನ ಸಹಯೋಗಿಗಳು ಮತ್ತು ಪ್ರಾಕ್ಸಿ ಪಡೆಗಳಿಗೆ ಬೆಂಬಲ ನೀಡುತ್ತದೆ.
ಕಳೆದ ಒಂದು ವರ್ಷದ ಅವಧಿಯಲ್ಲಿ, ಸಿರಿಯಾದಲ್ಲಿ ಇಸ್ರೇಲ್ ನಡೆಸಿರುವ ವಾಯುದಾಳಿಗಳಲ್ಲಿ ಸಾಕಷ್ಟು ಉನ್ನತ ಹಂತದ ಇರಾನಿಯನ್ ಜನರಲ್‌ಗಳು ಪ್ರಾಣ ಕಳೆದುಕೊಂಡಿದ್ದಾರೆ.
ಅಂತರ್ಯುದ್ಧದ ಆರಂಭಿಕ ಅವಧಿಯಲ್ಲಿ ಬಂಡುಕೋರರ ವಿರುದ್ಧ ಸಕ್ರಿಯವಾಗಿ ಹೋರಾಟ ನಡೆಸಿದ್ದ ಹೆಜ್ಬೊಲ್ಲಾ ಸಂಘಟನೆ, ಈಗ ಇಸ್ರೇಲ್ ಜೊತೆಗಿನ ಹಲವು ತಿಂಗಳುಗಳ ತೀವ್ರ ಯುದ್ಧದ ಬಳಿಕ ತನ್ನನ್ನು ತಾನು ಮರಳಿ ಸಂಘಟಿಸುವತ್ತ ಗಮನ ಹರಿಸಿದೆ.
ಸಿರಿಯಾ ಮೇಲೆ ಇಸ್ರೇಲ್ ವರ್ಷಗಳ ಕಾಲ ನಡೆಸಿದ ವಾಯುದಾಳಿಗಳ ಪರಿಣಾಮವಾಗಿ, ಸಿರಿಯಾದಲ್ಲಿ ಇರಾನ್, ಸಿರಿಯನ್ ಸರ್ಕಾರ, ಮತ್ತು ಹೆಜ್ಬೊಲ್ಲಾಗಳ ನಿಯಂತ್ರಣಗಳು ದುರ್ಬಲಗೊಂಡಿದ್ದವು.
ಇಂತಹ ಭೌಗೋಳಿಕ ರಾಜಕಾರಣದ ಬದಲಾವಣೆಗಳು ಬಂಡುಕೋರರು ಮತ್ತು ಉಗ್ರ ಸಂಘಟನೆಗಳಿಗೆ ಇನ್ನೊಂದು ಸುತ್ತಿನ ಆಕ್ರಮಣ ಆರಂಭಿಸಲು ಸೂಕ್ತ ಸನ್ನಿವೇಶವನ್ನು ನಿರ್ಮಿಸಿದ್ದವು. ಇರಾನ್, ಹೆಜ್ಬೊಲ್ಲಾ ಮತ್ತು ರಷ್ಯಾಗಳ ಪ್ರಬಲ ಬೆಂಬಲ ಲಭ್ಯವಿಲ್ಲದೆ, ಸಿರಿಯನ್ ಪಡೆಗಳು ದುರ್ಬಲಗೊಂಡಿದ್ದವು.
ಈ ದೌರ್ಬಲ್ಯದ ಪ್ರಯೋಜನ ಪಡೆದುಕೊಂಡ ಬಂಡುಕೋರ ಗುಂಪುಗಳು, ಟರ್ಕಿಯ ಬೆಂಬಲದೊಡನೆ ಕ್ಷಿಪ್ರವಾಗಿ ಮುನ್ನುಗ್ಗಿ, ಸಂಪೂರ್ಣವಾಗಿ ಅಲೆಪ್ಪೊ ನಗರವನ್ನು ವಶಪಡಿಸಿಕೊಂಡವು.
2016ರ ಬಳಿಕ, ಅಸ್ಸಾದ್ ಸರ್ಕಾರಕ್ಕೆ ಅಲೆಪ್ಪೊ ಮೇಲೆ ಮರಳಿ ನಿಯಂತ್ರಣ ಸಾಧಿಸಲು ನಾಲ್ಕು ವರ್ಷಗಳೇ ಬೇಕಾದವು. ಆದರೆ, ಆಶ್ಚರ್ಯಕರ ಬೆಳವಣಿಗೆಯಲ್ಲಿ, ಎಚ್‌ಟಿಎಸ್ (ಹಯಾತ್ ತಹ್ರಿರ್ ಅಲ್ ಶಮ್) ಸಂಘಟನೆಯ ಬಂಡುಕೋರರು ಕೇವಲ ನಾಲ್ಕು ದಿನಗಳ ಅವಧಿಯಲ್ಲಿ ಅಲೆಪ್ಪೊ ನಗರವನ್ನು ಮರಳಿ ವಶಪಡಿಸಿಕೊಂಡರು. ಇದು ಸಿರಿಯನ್ ಸರ್ಕಾರಕ್ಕೆ ಅತಿದೊಡ್ಡ ಹೊಡೆತವಾಗಿದ್ದು, ಅದರ ದೌರ್ಬಲ್ಯವನ್ನು ಜಗಜ್ಜಾಹೀರು ಮಾಡಿತು. ಡಿಸೆಂಬರ್ 5ರಂದು, ಬಂಡುಕೋರರು ಮಧ್ಯ ಸಿರಿಯಾದ ಪ್ರಮುಖ ನಗರವಾದ ಹಾಮಾ ಕಡೆ ನುಗ್ಗತೊಡಗಿದರು. ಅವರ ಮುಂದಿನ ಗುರಿ ಹಾಮ್ಸ್ ನಗರವಾಗಿದ್ದು, ಆ ಬಳಿಕ ಸರ್ಕಾರದ ನಿಯಂತ್ರಣ ಇನ್ನಷ್ಟು ಕುಸಿತ ಕಾಣಬಹುದು.
ಸಿರಿಯಾದ ಉತ್ತರ ಭಾಗದಲ್ಲಿ ಸರ್ಕಾರದ ಸೇನಾಪಡೆಗಳು ಇದ್ದಕ್ಕಿದ್ದಂತೆ ಪತನಗೊಂಡಿರುವುದು ದೇಶದ ವಿವಿಧ ಭಾಗಗಳ ಬಂಡುಕೋರ ಗುಂಪುಗಳಲ್ಲಿ ಹೊಸ ಉತ್ಸಾಹ ಮೂಡಿಸಿದೆ. ಈ ಗುಂಪುಗಳು ಸರ್ಕಾರಿ ಸ್ವಾಮ್ಯದ ಪ್ರದೇಶಗಳ ಮೇಲೆ, ಅದರಲ್ಲೂ ದಕ್ಷಿಣದ ಪ್ರಾಂತ್ಯಗಳ ಮೇಲೆ ದಾಳಿ ನಡೆಸಲಾರಂಭಿಸಿವೆ. ಇದರ ಪರಿಣಾಮವಾಗಿ, ಸರ್ಕಾರ ಹೊಸದಾದ, ಅತ್ಯಂತ ತೀಕ್ಷ್ಣವಾದ ಅಂತರ್ಯುದ್ಧವನ್ನು ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಹಲವಾರು ಪ್ರದೇಶಗಳಲ್ಲಿ ಏಕಕಾಲಕ್ಕೆ ಯುದ್ಧ ಆರಂಭಗೊಂಡಿದೆ.
ಸಿರಿಯನ್ ಸರ್ಕಾರ ಈಗ ಮತ್ತೊಂದು ಬಾರಿ ಪೂರ್ಣ ಪ್ರಮಾಣದ ಅಂತರ್ಯುದ್ಧವನ್ನು ಎದುರಿಸುತ್ತಿದೆ. ಆದರೆ, ಅಧ್ಯಕ್ಷ ಅಸ್ಸಾದ್ ಕುರಿತು ಏನೇ ಹೇಳ ಹೊರಟರೂ ಅದು ಬಹಳ ಅವಸರದ ನಿರ್ಣಯವಾದೀತು. ಅಸ್ಸಾದ್ ಹಿಂದೆಯೂ ಅತ್ಯಂತ ದೀರ್ಘವಾದ, ಕ್ರೂರವಾದ ಅಂತರ್ಯುದ್ಧವನ್ನು ಎದುರಿಸಿ ಅಧಿಕಾರದಲ್ಲಿ ಉಳಿದಿದ್ದಾರೆ. ಅವರ ಸರ್ಕಾರಕ್ಕೆ ಇನ್ನೂ ಕರಾವಳಿ ಪ್ರದೇಶಗಳಲ್ಲಿ ಪ್ರಬಲ ಬೆಂಬಲವಿದೆ. ದೇಶದ ಅಲ್ಪಸಂಖ್ಯಾತ ಸಮುದಾಯಗಳೂ ಅಸ್ಸಾದ್ ಅವರನ್ನು ಬೆಂಬಲಿಸಿವೆ. ಇದೆಲ್ಲ ಬೆಳವಣಿಗೆಗಳು ಅಧಿಕಾರದಲ್ಲಿ ಉಳಿಯಲು ಅಸ್ಸಾದ್‌ಗೆ ನೆರವಾಗಬಹುದು.
ಆರಂಭಿಕ ಹಿನ್ನಡೆ ಅನುಭವಿಸಿದ ಬಳಿಕ, ಸಿರಿಯನ್ ಆಡಳಿತ ಸೇನೆಯನ್ನು ಕರೆಸಿಕೊಳ್ಳಲು ಇರಾನ್ ಜೊತೆ ಕಾರ್ಯಾಚರಿಸುತ್ತಿದೆ. ಕತೈಬ್ ಹೆಜ್ಬೊಲ್ಲಾ, ಮತ್ತು ಬದ್ರ್ ಸಂಘಟನೆಗಳಂತಹ ಇರಾಕಿ ಸಶಸ್ತ್ರ ಪಡೆಗಳ ಸಾವಿರಾರು ಯೋಧರು ಈಗಾಗಲೇ ಯುದ್ಧದಲ್ಲಿ ಭಾಗಿಯಾಗಿದ್ದಾರೆ. ಆದರೆ, ಇಂದಿಗೂ ಸರ್ಕಾರಕ್ಕೆ ಭಯೋತ್ಪಾದಕರು ಹೆಚ್ಚಿನ ಪ್ರದೇಶಗಳನ್ನು ವಶಪಡಿಸಿಕೊಳ್ಳದಂತೆ ತಡೆಯಲು ಸಾಧ್ಯವಾಗದಿರುವುದು ಡಮಾಸ್ಕಸ್ ಪಾಲಿಗೆ ಚಿಂತೆಯ ವಿಚಾರವಾಗಿದೆ. ಇದು ಸಿರಿಯನ್ ಸರ್ಕಾರ ಎಷ್ಟು ದುರ್ಬಲವಾಗಿದೆ ಎನ್ನುವುದನ್ನು ಜಗತ್ತಿಗೆ ಸಾರಿದೆ.
ಉಗ್ರಗಾಮಿ ಸಂಘಟನೆಗಳಂತೂ ಹೆಚ್ಚಿನ ಪ್ರದೇಶಗಳನ್ನು ವಶಪಡಿಸಿಕೊಂಡು, ತಮ್ಮ ನಿಯಂತ್ರಣವನ್ನು ಹೆಚ್ಚಿಸಲು ಇದನ್ನು ಸುವರ್ಣಾವಕಾಶ ಎಂದೇ ಪರಿಗಣಿಸಿವೆ. ಸಿರಿಯಾ ಈಗ ಇನ್ನೊಂದು ಸುದೀರ್ಘ, ಹಿಂಸಾತ್ಮಕ ಯುದ್ಧವನ್ನು ಪ್ರವೇಶಿಸುವಂತೆ ಕಾಣುತ್ತಿದೆ.
ಇಸ್ಲಾಮಿಕ್ ಗುಂಪುಗಳ ನೇತೃತ್ವದಲ್ಲಿ ಹೋರಾಟ ನಡೆಸಿದ ಭಯೋತ್ಪಾದಕರು ತಾವು ಡಿಸೆಂಬರ್ 7ರ ಸಂಜೆಯ ವೇಳೆ ನಡೆಸಿದ ಕ್ಷಿಪ್ರ ದಾಳಿಯಲ್ಲಿ ಡಮಾಸ್ಕಸ್ ನಗರವನ್ನು ವಶಪಡಿಸಿಕೊಂಡಿರುವುದಾಗಿ ಘೋಷಿಸಿದರು. ಸಿರಿಯಾ ಅಧ್ಯಕ್ಷ ಬಶರ್ ಅಲ್ ಅಸ್ಸಾದ್ ಸಿರಿಯಾದಿಂದ ಪಲಾಯನ ನಡೆಸಿದ್ದು, ಈ ಮೂಲಕ ಸಿರಿಯಾದಲ್ಲಿ ಐದು ದಶಕಗಳ ಸುದೀರ್ಘ ಅವಧಿಯ ಬಾತ್ ಪಕ್ಷದ ಆಡಳಿತ ಅಂತ್ಯ ಕಂಡಿದೆ.
ಡಿಸೆಂಬರ್ 8ರ ಭಾನುವಾರ, ಸಿರಿಯಾದ ವಿರೋಧಿ ಪಡೆಗಳ ಮುಖ್ಯಸ್ಥರು ಅಧ್ಯಕ್ಷ ಬಶರ್ ಅಲ್ ಅಸ್ಸಾದ್ ಸಿರಿಯಾದಿಂದ ಪಲಾಯನ ಗೈದಿದ್ದು, ಅವರು ಎಲ್ಲಿದ್ದಾರೆ ಎಂದು ತಿಳಿದಿಲ್ಲ ಎಂದಿದ್ದಾರೆ. ಸಿರಿಯಾದಾದ್ಯಂತ ಮೇಲುಗೈ ಸಾಧಿಸಿ, ನಾವು ಈಗ ಡಮಾಸ್ಕಸ್ ಪ್ರವೇಶಿಸಿದ್ದೇವೆ ಎಂದು ಬಂಡುಕೋರರು ಘೋಷಿಸಿ, ಸಿರಿಯಾದಾದ್ಯಂತ ಮೇಲುಗೈ ಸಾಧಿಸಿರುವ ಸಮಯದಲ್ಲಿ ಈ ಬೆಳವಣಿಗೆ ನಡೆದಿದೆ.
ಸಿರಿಯನ್ ಪ್ರಧಾನಿ ಮೊಹಮ್ಮದ್ ಘಾಜಿ ಅಲ್ ಜಲಾಲಿ ತಾನು ತನ್ನ ಮನೆಯಲ್ಲೇ ಇದ್ದು, ಸರ್ಕಾರ ಸುಗಮವಾಗಿ ಮುಂದುವರಿಯಲು ನೆರವಾಗುವುದಾಗಿ ಘೋಷಿಸಿದ್ದಾರೆ.
ಇದೇ ವೇಳೆ, ರೆಬೆಲ್ ಮುಖಂಡ ಅಹ್ಮದ್ ಅಲ್ ಶರಾ ಅವರು ಸರ್ಕಾರಿ ಸಂಸ್ಥೆಗಳನ್ನು ಮುಟ್ಟಲು ಯಾರಿಗೂ ಅಧಿಕಾರ ಇಲ್ಲ ಎಂದು ಘೋಷಿಸಿದ್ದಾರೆ. ಇನ್ನು ಮುಂದಿನ ಹೊಸ ಆಡಳಿತಗಾರರಿಗೆ ಹಸ್ತಾಂತರವಾಗುವ ತನಕ, ಸರ್ಕಾರಿ ಸಂಸ್ಥೆಗಳು 'ಮಾಜಿ ಪ್ರಧಾನ ಮಂತ್ರಿಯ' ನಿಯಂತ್ರಣದಲ್ಲಿ ಇರಲಿವೆ ಎಂದು ಅವರು ಹೇಳಿದ್ದಾರೆ.
ಸಿರಿಯಾದಲ್ಲಿ ಪರಿಸ್ಥಿತಿ ತೀವ್ರವಾಗಿ ಹದಗೆಡುತ್ತಿರುವ ಸಂದರ್ಭದಲ್ಲಿ ಸರ್ಕಾರ ವಿರೋಧಿ ಪಡೆಗಳ ಹೋರಾಟಗಾರರು ರಾಜಧಾನಿ ಡಮಾಸ್ಕಸ್ ಪ್ರವೇಶಿಸಿದ್ದಾರೆ. ಸಿರಿಯನ್ ಸೇನೆ ಹೆಚ್ಚಿನ ಹೋರಾಟದ ಮನೋಭಾವ ಪ್ರದರ್ಶಿಸದೆ, ಬಲುಬೇಗನೆ ಪ್ರಮುಖ ನಗರಗಳಿಂದ ಪಲಾಯನ ನಡೆಸಿದೆ.
ನಾಲ್ಕು ವರ್ಷಗಳ ಕಾಲ ಸುದೀರ್ಘ ಹೋರಾಟ ನಡೆಸಿದ ಬಳಿಕ, ಸಿರಿಯನ್ ಪಡೆಗಳು 2018ರಲ್ಲಿ ರಾಜಧಾನಿ ಡಮಾಸ್ಕಸ್ ಸುತ್ತಲಿನ ಪ್ರದೇಶಗಳನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದವು. ಆ ಬಳಿಕ, ಇದೇ ಮೊದಲ ಬಾರಿಗೆ ವಿರೋಧಿ ಪಡೆಗಳು ರಾಜಧಾನಿ ಡಮಾಸ್ಕಸ್ ಅನ್ನು ಪ್ರವೇಶಿಸಿದಂತಾಗಿದೆ.
- ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
Advertisement