
ಹಲವಾರು ವರ್ಷಗಳ ಕಾಲ ಮಾಧ್ಯಮಗಳ ಕಣ್ಣಿನಿಂದ ಮರೆಯಾಗಿದ್ದ, ಅಥವಾ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಸಿರಿಯಾದ ಬಿಕ್ಕಟ್ಟು ಈಗ ಮತ್ತೊಮ್ಮೆ ಮುನ್ನಲೆಗೆ ಬಂದಿದೆ. ಉತ್ತರ ಸಿರಿಯಾದಲ್ಲಿರುವ ಅಲೆಪ್ಪೊ ನಗರದ ಮೇಲೆ ಜಿಹಾದಿ ಪಡೆಗಳು ದಾಳಿ ನಡೆಸಿದ ಬಳಿಕ, ಈಗ ಸಿರಿಯಾದತ್ತ ಮತ್ತೊಮ್ಮೆ ಜಗತ್ತಿನ ದೃಷ್ಟಿ ನೆಟ್ಟಿದೆ. ಅಲೆಪ್ಪೊ ಇರುವ ಕಾರ್ಯತಂತ್ರದ ತಾಣ ಮತ್ತು ಅದು ಹೊಂದಿರುವ ಐತಿಹಾಸಿಕ ಮಹತ್ವಗಳ ಕಾರಣದಿಂದಾಗಿ ಅದು ವ್ಯಾಪಾರ, ಸಂಸ್ಕೃತಿ ಮತ್ತು ಈ ಪ್ರದೇಶದ ಮೇಲಿನ ನಿಯಂತ್ರಣಕ್ಕೆ ಮುಖ್ಯ ಸ್ಥಳವಾಗಿದೆ.
ನವೆಂಬರ್ 27ರಂದು, ಅಲ್ ಖೈದಾ ಜೊತೆ ಸಂಪರ್ಕ ಹೊಂದಿರುವ ಉಗ್ರಗಾಮಿ ಗುಂಪಾದ ತಹ್‌ರಿರ್ ಅಲ್ ಶಮ್ ಮತ್ತು ಸಿರಿಯನ್ ನ್ಯಾಷನಲ್ ಆರ್ಮಿಗಳು ಉಗ್ರರು ಅಲೆಪ್ಪೊ ನಗರವನ್ನು ಗುರಿಯಾಗಿಸಿ, ದಾಳಿ ನಡೆಸಲಾರಂಭಿಸಿದರು.
ತಹ್‌ರಿರ್ ಅಲ್ ಶಮ್: ಸಿರಿಯಾದ ಉಗ್ರಗಾಮಿ ಗುಂಪಾಗಿರುವ ತಹ್‌ರಿರ್ ಅಲ್ ಶಮ್, ತನ್ನ ತೀವ್ರವಾದಿ ಸಿದ್ಧಾಂತಗಳಿಗೆ ಹೆಸರಾದ ಭಯೋತ್ಪಾದಕ ಸಂಘಟನೆಯಾದ ಅಲ್ ಖೈದಾ ಜೊತೆ ಸಂಪರ್ಕ ಹೊಂದಿದೆ. ಈ ಸಂಘಟನೆ ಸಿರಿಯಾದ ಉತ್ತರ ಭಾಗಗಳ ಮೇಲೆ ನಿಯಂತ್ರಣ ಹೊಂದಿದ್ದು, ಇಸ್ಲಾಮಿಕ್ ರಾಜ್ಯವನ್ನು ಸ್ಥಾಪಿಸುವ ಗುರಿ ಹೊಂದಿದೆ.
ಸಿರಿಯನ್ ನ್ಯಾಷನಲ್ ಆರ್ಮಿ: ಸಿರಿಯನ್ ಸರ್ಕಾರದ ವಿರುದ್ಧ ಹೋರಾಡುವ ಎಲ್ಲ ವಿರೋಧಿ ಪಡೆಗಳ ಒಕ್ಕೂಟ ಸಿರಿಯನ್ ನ್ಯಾಷನಲ್ ಆರ್ಮಿ ಎಂಬ ಹೆಸರು ಇಟ್ಟುಕೊಂಡಿದೆ. ಇದಕ್ಕೆ ಟರ್ಕಿಯ ಬೆಂಬಲವಿದೆ. ಈ ಒಕ್ಕೂಟದಲ್ಲಿ ಹಲವಾರು ಗುಂಪುಗಳಿದ್ದು, ಇದು ಮುಖ್ಯವಾಗಿ ಉತ್ತರ ಮತ್ತು ವಾಯುವ್ಯ ಸಿರಿಯಾದಲ್ಲಿ ಕಾರ್ಯಾಚರಿಸುತ್ತದೆ.
ಜಿಹಾದಿ ಗುಂಪುಗಳು 2015ರಿಂದಲೂ ಸಿರಿಯನ್ ಸರ್ಕಾರದ ನಿಯಂತ್ರಣದಲ್ಲಿರದ, ಭಯೋತ್ಪಾದಕ ಸಂಘಟನೆಗಳ ಹಿಡಿತದಲ್ಲಿರುವ, ವಾಯುವ್ಯ ಸಿರಿಯಾದ ಇದ್ಲಿಬ್ ಪ್ರಾಂತ್ಯದ ಮೇಲೆ ದಾಳಿ ನಡೆಸಲು ಸಿದ್ಧತೆ ನಡೆಸಿದ್ದವು. ಇದ್ಲಿಬ್ ಪ್ರಾಂತ್ಯ ಟರ್ಕಿಯ ಗಡಿಯ ಸನಿಹದಲ್ಲಿ ಇರುವುದರಿಂದ, ಮತ್ತು ಈ ಪ್ರದೇಶದ ಪ್ರಮುಖ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವುದರಿಂದ, ಹೆಚ್ಚಿನ ಪ್ರಾಮುಖ್ಯತೆ ಹೊಂದಿದೆ.
ಸಶಸ್ತ್ರ ಉಗ್ರಗಾಮಿಗಳು ಅಲೆಪ್ಪೊದ ಪಶ್ಚಿಮದಲ್ಲಿರುವ ಹಳ್ಳಿಗಳ ಮೂಲಕ ಸಾಗಿ, ಪ್ರಮುಖ ಪ್ರದೇಶಗಳನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡರು. ವರದಿಗಳ ಪ್ರಕಾರ, ಉಗ್ರರು ಅಲೆಪ್ಪೊ ಮತ್ತು ಡಮಾಸ್ಕಸ್ ನಡುವೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾದ ಎಂ5 ಹೆದ್ದಾರಿಯನ್ನೂ ತಡೆಗಟ್ಟಿದ್ದಾರೆ.
ಸಿರಿಯನ್ ಸೇನೆ ಇದ್ಲಿಬ್ ಮತ್ತು ಅಲೆಪ್ಪೊ ಪ್ರಾಂತ್ಯಗಳ ಮೇಲೆ ವಾಯು ದಾಳಿ ಮತ್ತು ಆರ್ಟಿಲರಿ ದಾಳಿಗಳನ್ನು ಕೈಗೊಂಡಿತು. ಈ ದಾಳಿಗಳು ಇದ್ಲಿಬ್ ನಗರ ಮತ್ತು ಅರಿಹಾ ಹಾಗೂ ಸರ್ಮಾದದಂತಹ ಪಟ್ಟಣಗಳನ್ನು ಗುರಿಯಾಗಿಸಿಕೊಂಡಿದ್ದವು.
ಸಿರಿಯನ್ ಸರ್ಕಾರಕ್ಕೆ ಬೆಂಬಲ ನೀಡಿರುವ ರಷ್ಯನ್ ಯುದ್ಧ ವಿಮಾನಗಳು ಅತಾರಿಬ್, ದಾರತ್ ಇಜ್ಜ಼ಾ, ಹಾಗೂ ಮೇರ್‌ನಂತಹ ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ನಡೆಸಿದವು. ಇದೇ ಸಮಯದಲ್ಲಿ, ಸಿರಿಯನ್ ಸರ್ಕಾರದ ಜೊತೆ ಸಹಭಾಗಿತ್ವ ಹೊಂದಿರದ, ಹಿಂದೆ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದ ಕುರ್ದಿಷ್ ನೇತೃತ್ವದ ಸಿರಿಯನ್ ಡೆಮಾಕ್ರಟಿಕ್ ಫೋರ್ಸಸ್ (ಎಸ್‌ಡಿಎಫ್) ಸಹ ಭಯೋತ್ಪಾದಕ ದಾಳಿಗಳಿಂದ ಅಲೆಪ್ಪೊವನ್ನು ರಕ್ಷಿಸಲು ಮುಂದಾದವು.
ಈ ದಾಳಿಗಳ ಪರಿಣಾಮವಾಗಿ, ಇಬ್ಬರು ಉನ್ನತ ಮಟ್ಟದ ಜಿಹಾದಿ ಮುಖಂಡರು ಸಾವಿಗೀಡಾದರು ಎನ್ನಲಾಗಿದೆ.
ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ಹಿರಿಯ ಸದಸ್ಯ, ಮತ್ತು ಸಿರಿಯನ್ ಪಡೆಗಳ ಸಲಹೆಗಾರ ಬ್ರಿಗೇಡಿಯರ್ ಜನರಲ್ ಕಿಯೊಮಾರ್ ಪೌರ್‌ಹಾಶೆಮಿ ಮೊದಲ ದಿನದ ಭಯೋತ್ಪಾದಕ ದಾಳಿಯಲ್ಲಿ ಸಾವಿಗೀಡಾಗಿದ್ದಾರೆ ಎಂದು ಇರಾನ್ ಘೋಷಿಸಿದೆ. ಸಿರಿಯನ್ ಸರ್ಕಾರಕ್ಕೆ ಬೆಂಬಲ ನೀಡಿರುವ ಇರಾನ್, ಬಂಡುಕೋರರು ಮತ್ತು ಭಯೋತ್ಪಾದಕ ಗುಂಪುಗಳ ವಿರುದ್ಧದ ಹೋರಾಟದಲ್ಲಿ ಸಕ್ರಿಯವಾಗಿ ನೆರವು ನೀಡುತ್ತಿದೆ.
ಶುಕ್ರವಾರ, ನವೆಂಬರ್ 29ರಂದು, ಭಯೋತ್ಪಾದಕ ಪಡೆಗಳು ಅಲೆಪ್ಪೊ ನಗರದ ರಕ್ಷಣೆಯನ್ನು ಭೇದಿಸಿ, ಒಳಗೆ ಪ್ರವೇಶಿಸಿದವು. ಭಯೋತ್ಪಾದಕರು ಆತ್ಮಹತ್ಯಾ ದಾಳಿಗಳನ್ನು ನಡೆಸಿ, ನಗರ ರಕ್ಷಕರೊಡನೆ ಯುದ್ಧಕ್ಕೆ ಇಳಿದರು. ನವೆಂಬರ್ 30, ಶನಿವಾರ ಬೆಳಗ್ಗೆ ಭಯೋತ್ಪಾದಕರು ಅಲೆಪ್ಪೊದ ಪ್ರಸಿದ್ಧ ಕೋಟೆಯನ್ನು ವಶಪಡಿಸಿಕೊಂಡರು ಎನ್ನಲಾಗಿದೆ. ಅಲೆಪ್ಪೊದ ಕೋಟೆ ಅತ್ಯಂತ ಐತಿಹಾಸಿಕ ಕೋಟೆಯಾಗಿದ್ದು, ಜಗತ್ತಿನ ಅತ್ಯಂತ ಪುರಾತನ ಮತ್ತು ಅತ್ಯಂತ ದೊಡ್ಡ ಕೋಟೆಗಳಲ್ಲಿ ಒಂದಾಗಿದೆ. ಇದು ಅಲೆಪ್ಪೊದ ಸಾಂಸ್ಕ್ರತಿಕ ಮತ್ತು ಐತಿಹಾಸಿಕ ಮಹತ್ವವನ್ನು ಸಂಕೇತಿಸುತ್ತದೆ. ಈ ಕೋಟೆಯನ್ನು ವಶಪಡಿಸಿಕೊಳ್ಳುವುದು ಕಾರ್ಯತಂತ್ರದ ಮತ್ತು ಸಾಂಕೇತಿಕ ಮೌಲ್ಯ ಹೊಂದಿದೆ.
ಸಿರಿಯನ್ ಪಡೆಗಳು ನವೆಂಬರ್ 29ರ ಶುಕ್ರವಾರ ಪ್ರತಿದಾಳಿಯನ್ನು ಆರಂಭಿಸಿದವು. ಸಿರಿಯನ್ ಸೇನೆ ತಾನು ದಾಳಿ ನಡೆಸಿ, ಹತ್ತಾರು ಶಸ್ತ್ರಸಜ್ಜಿತ ವಾಹನಗಳನ್ನು ನಾಶಪಡಿಸಿ, ಇದ್ಲಿಬ್ ಹಾಗೂ ಅಲೆಪ್ಪೊಗಳಲ್ಲಿ ನೂರಾರು ಭಯೋತ್ಪಾದಕರನ್ನು ಹತ್ಯೆಗೈದಿರುವುದಾಗಿ ವರದಿ ಮಾಡಿವೆ. ಯುದ್ಧಕ್ಕೆ ಬಂದಿದ್ದ ಭಯೋತ್ಪಾದಕರಲ್ಲಿ ಹಲವರು ವಿದೇಶೀ ಬಾಡಿಗೆ ಯೋಧರು (ಭಯೋತ್ಪಾದಕರೊಂದಿಗೆ ಹೋರಾಡಲು ಹಣ ನೀಡಿ ವಿದೇಶಗಳಿಂದ ಕರೆಸಿಕೊಂಡಿರುವ ಯೋಧರು) ಎಂದು ಸಿರಿಯನ್ ಸೇನೆ ಹೇಳಿದೆ.
ನವೆಂಬರ್ 30, ಶನಿವಾರದಂದು ಭಯೋತ್ಪಾದಕರು ಅಲೆಪ್ಪೊದ ಹಲವು ಪ್ರದೇಶಗಳ ಒಳಗೆ ಪ್ರವೇಶಿಸಲು ಯಶಸ್ವಿಯಾಗಿದ್ದಾರೆ ಎಂದು ಸಿರಿಯನ್ ಸೇನೆ ಒಪ್ಪಿಕೊಂಡಿತು. ಆದರೆ, ಯುದ್ಧ ಇನ್ನೂ ಮುಂದುವರಿದಿದ್ದು, ಭಯೋತ್ಪಾದಕರು ಅಲೆಪ್ಪೊವನ್ನು ವಶಪಡಿಸಿಕೊಳ್ಳದಂತೆ ತಡೆಯಲು ತಾನು ಪ್ರಯತ್ನ ನಡೆಸುತ್ತಿರುವುದಾಗಿ ಸೇನೆ ಹೇಳಿಕೆ ನೀಡಿದೆ.
ಸಾವಿರಾರು ವಿದೇಶೀ ಭಯೋತ್ಪಾದಕರ ದಾಳಿಯನ್ನು ಎದುರಿಸಿ, ಹೋರಾಟ ನಡೆಸುವ ಸಂದರ್ಭದಲ್ಲಿ, ಹತ್ತಾರು ಸಿರಿಯನ್ ಯೋಧರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಸೇನೆ ತಿಳಿಸಿದೆ. ಈ ಭಯೋತ್ಪಾದಕರು ಅತ್ಯಂತ ಶಸ್ತ್ರಸಜ್ಜಿತರಾಗಿದ್ದು, ಭಾರೀ ಆಯುಧಗಳು ಮತ್ತು ಹಲವಾರು ಡ್ರೋನ್‌ಗಳನ್ನು ಹೊಂದಿದ್ದಾರೆ ಎನ್ನಲಾಗಿದೆ.
ಇಸ್ರೇಲ್ ಮತ್ತು ಲೆಬನಾನಿನ ಹೆಜ್ಬೊಲ್ಲಾ ಸಂಘಟನೆಗಳ ನಡುವೆ ಕದನ ವಿರಾಮ ಜಾರಿಗೆ ಬಂದ ದಿನವೇ ಅಲೆಪ್ಪೊ ಮೇಲೆ ಭಯೋತ್ಪಾದಕ ದಾಳಿ ಆರಂಭವಾಯಿತು. ಆದರೆ, ಭಯೋತ್ಪಾದಕರು ತಮ್ಮ ದಾಳಿಗೆ ಸಿರಿಯನ್ ವಾಯುದಾಳಿಗಳು ಇದ್ಲಿಬ್‌ನಲ್ಲಿನ ತಮ್ಮ ಮುಖಂಡರನ್ನು ಗುರಿಯಾಗಿಸಿದ್ದಕ್ಕೆ ಪ್ರತೀಕಾರದ ಕ್ರಮವಾಗಿದೆ ಎಂದು ಹೇಳಿಕೆ ನೀಡಿದ್ದರು. ಇದ್ಲಿಬ್‌ನಲ್ಲಿ 2020ರ ಬಳಿಕ ಒಂದು ದುರ್ಬಲ ಕದನ ವಿರಾಮ ಜಾರಿಯಲ್ಲಿತ್ತು. ಟರ್ಕಿ ಮತ್ತು ರಷ್ಯಾಗಳು ಈ ಕದನ ವಿರಾಮ ಘೋಷಣೆಗಾಗಿ ಸಂಧಾನ ನಡೆಸಿದ್ದವು. ಆದರೂ ಇಲ್ಲಿ ಉದ್ವಿಗ್ನತೆಗಳು ಸದಾ ತೀವ್ರವಾಗಿಯೇ ಮುಂದುವರಿದಿದ್ದವು.
ಇರಾನಿನ ವಿದೇಶಾಂಗ ಸಚಿವ, ಅಬ್ಬಾಸ್ ಅರಾಘ್ಚಿ ಅವರು ನವೆಂಬರ್ 29, ಶುಕ್ರವಾರದಂದು ಸಿರಿಯಾದ ವಿದೇಶಾಂಗ ಸಚಿವ ಬಸ್ಸಾಮ್ ಅಲ್ ಸಬ್ಬಾಘ್ ಅವರೊಡನೆ ಸಮಾಲೋಚನೆ ನಡೆಸಿ, ಭಯೋತ್ಪಾದಕ ಸಂಘಟನೆಗಳ ವಿರುದ್ಧದ ಸಿರಿಯಾದ ಯುದ್ಧದಲ್ಲಿ ಇರಾನ್ ಸದಾ ಬೆಂಬಲ ನೀಡಲಿದೆ ಎಂದಿದ್ದರು. ಜಿಹಾದಿ ಪಡೆಗಳ ವಿರುದ್ಧದ ಹೋರಾಟದಲ್ಲಿ ಸಿರಿಯಾಗೆ ಬೆಂಬಲ ನೀಡುವುದಕ್ಕೆ ಇರಾನ್ ಬದ್ಧವಾಗಿದೆ ಎಂದು ಅವರು ಸಿರಿಯಾಗೆ ಮತ್ತೊಮ್ಮೆ ಆಶ್ವಾಸನೆ ನೀಡಿದರು.
ಉತ್ತರ ಸಿರಿಯಾದಲ್ಲಿ ಭಯೋತ್ಪಾದನೆ ಹೀಗೆ ಹೆಚ್ಚಳವಾಗುತ್ತಿರುವುದಕ್ಕೆ ಪಶ್ಚಿಮ ಏಷ್ಯಾದಲ್ಲಿ ಅಸ್ಥಿರತೆ ಮತ್ತು ಅಶಾಂತಿ ಮೂಡಿಸುವ ಅಮೆರಿಕಾ ಮತ್ತು ಇಸ್ರೇಲ್‌ಗಳ ಯೋಜನೆಗಳೇ ಕಾರಣ ಎಂದು ಅರಾಘ್ಚಿ ಆರೋಪಿಸಿದ್ದಾರೆ. ಲೆಬನಾನ್‌ನಲ್ಲಿ ಹೆಜ್ಬೊಲ್ಲಾ ಪಡೆಗಳ ವಿರುದ್ಧದ ಹೋರಾಟದಲ್ಲಿ ಇಸ್ರೇಲಿ ಸೇನೆ ಕಷ್ಟಪಟ್ಟ ಬಳಿಕ ಈ ಬೆಳವಣಿಗೆ ನಡೆದಿದೆ ಎಂದು ಅವರು ಆರೋಪಿಸಿದ್ದಾರೆ. ಪ್ರಸಿದ್ಧ ಅಂತಾರಾಷ್ಟ್ರೀಯ ವಿಶ್ಲೇಷಕರಾದ ಸೈಯದ್ ಮೊಹಮ್ಮದ್ ಮರಾಂಡಿ ಅವರೂ ಸಹ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಅಲೆಪ್ಪೊ ಮೇಲೆ ನಡೆದಿರುವ ಭಯೋತ್ಪಾದಕ ದಾಳಿ, ಈಗಾಗಲೇ ಹಲವಾರು ಸಮಸ್ಯೆಗಳ ಸುಳಿಗೆ ಸಿಲುಕಿ ನಲುಗಿರುವ ಸಿರಿಯನ್ ಸರ್ಕಾರದ ಮೇಲಿನ ಸವಾಲುಗಳನ್ನು ಇನ್ನಷ್ಟು ಹೆಚ್ಚಿಸಿದೆ. ಸಿರಿಯಾ ಎದುರಿಸುತ್ತಿರುವ ಸವಾಲುಗಳಲ್ಲಿ, ಅಧ್ಯಕ್ಷ ಅಸ್ಸದ್‌ರನ್ನು ಕೆಳಗಿಳಿಸಲು ವಿದೇಶೀ ಶಕ್ತಿಗಳ ಬೆಂಬಲದೊಡನೆ ನಡೆಯುತ್ತಿರುವ ಸುದೀರ್ಘ ಯುದ್ಧ, ಸಿರಿಯಾದ ಪೂರ್ವ ಮತ್ತು ದಕ್ಷಿಣಗಳಲ್ಲಿ ಅಮೆರಿಕಾದ ಅಕ್ರಮ ಸೇನಾ ನೆಲೆಗಳು, ಮತ್ತು ಇಸ್ರೇಲ್ ಜೊತೆಗಿನ ದೀರ್ಘಾವಧಿಯ ಕದನಗಳು ಮುಖ್ಯವಾಗಿವೆ.
- ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
Advertisement