ಬೆಂಜಮಿನ್ ನೆತನ್ಯಾಹು ವಿರುದ್ಧ ಐಸಿಸಿ ಘೋಷಿಸಿದ ಬಂಧನ ವಾರಂಟ್ ಮಹತ್ವವೇನು?
ಅಂತಾರಾಷ್ಟ್ರೀಯ ಅಪರಾಧ ನ್ಯಾಯಾಲಯ (ಇಂಟರ್ನ್ಯಾಷನಲ್ ಕ್ರಿಮಿನಲ್ ಕೋರ್ಟ್ - ಐಸಿಸಿ) ಗಾಜಾದಲ್ಲಿನ ಯುದ್ಧಾಪರಾಧಗಳಿಗೆ ಸಂಬಂಧಿಸಿದಂತೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಮಾಜಿ ರಕ್ಷಣಾ ಸಚಿವರಾದ ಯೊಆವ್ ಗ್ಯಾಲಂಟ್ ವಿರುದ್ಧ ಬಂಧನ ವಾರಂಟ್ ಹೊರಡಿಸಿದೆ. ಆದರೆ ಐಸಿಸಿ ಬಂಧನ ವಾರಂಟ್ ಎಂದರೇನು? ಇದರ ಪರಿಣಾಮ ಏನಾಗಲಿದೆ? ಇಸ್ರೇಲ್ ಪ್ರಧಾನ ಮಂತ್ರಿ ಮತ್ತು ಮಾಜಿ ರಕ್ಷಣಾ ಸಚಿವರನ್ನು ಈ ವಾರಂಟ್ ಎಷ್ಟರಮಟ್ಟಿಗೆ ನಿರ್ಬಂಧಿಸಲಿದೆ?
ನೆತನ್ಯಾಹು ಮತ್ತು ಯೊಆವ್ ಗ್ಯಾಲಂಟ್ ವಿದೇಶಗಳಿಗೆ ಪ್ರಯಾಣಿಸಲು ಸಾಧ್ಯವೇ?
ಅಂತಾರಾಷ್ಟ್ರೀಯ ಅಪರಾಧ ನ್ಯಾಯಾಲಯದ (ಐಸಿಸಿ) ಸ್ಥಾಪನೆಗೆ ಕಾರಣವಾದ ರೋಮ್ ಸ್ಟಾಚ್ಯುಟ್ ಎಂಬ ಒಪ್ಪಂದದ ಭಾಗವಾದ ದೇಶಗಳು ಈ ನ್ಯಾಯಾಲಯದೊಡನೆ ಸಹಕಾರ ನೀಡಬೇಕಾಗುತ್ತದೆ. ಆದ್ದರಿಂದ, ನೆತನ್ಯಾಹು ಮತ್ತು ಗ್ಯಾಲಂಟ್ ಅವರು ತಮ್ಮ ಅಂತಾರಾಷ್ಟ್ರೀಯ ಪ್ರಯಾಣಗಳ ಕುರಿತಂತೆ ಜಾಗರೂಕತೆ ವಹಿಸುವುದು ಅವಶ್ಯಕವಾಗಿದೆ.
ರೋಮ್ ಸ್ಟಾಚ್ಯುಟ್ ಎನ್ನುವುದು ಒಂದು ಒಪ್ಪಂದವಾಗಿದ್ದು, ಇದರಡಿಯಲ್ಲಿ ಅಂತಾರಾಷ್ಟ್ರೀಯ ಅಪರಾಧ ನ್ಯಾಯಾಲಯವನ್ನು (ಐಸಿಸಿ) ಸ್ಥಾಪಿಸಲಾಯಿತು. ಈ ನ್ಯಾಯಾಲಯ, ನರಮೇಧ, ಮಾನವರ ಮೇಲೆ ಎಸಗುವ ಯುದ್ಧಾಪರಾಧಗಳು ಮತ್ತು ಆಕ್ರಮಣಶೀಲತೆ ಪ್ರದರ್ಶಿಸುವ ವ್ಯಕ್ತಿಗಳನ್ನು ಶಿಕ್ಷಿಸುವ ಗುರಿ ಹೊಂದಿದೆ. 1998ರಲ್ಲಿ ಅನುಮೋದನೆ ಪಡೆದ ಈ ನ್ಯಾಯಾಲಯ, 2002ರಲ್ಲಿ ಚಾಲ್ತಿಗೆ ಬಂತು. ಈ ನ್ಯಾಯಾಲಯ ಅಪರಾಧಗಳಲ್ಲಿ ಬಲಿಪಶುಗಳಾದವರಿಗೆ ನ್ಯಾಯ ಒದಗಿಸುವ ಮತ್ತು ಗಂಭೀರ ಅಂತಾರಾಷ್ಟ್ರೀಯ ಅಪರಾಧಗಳಿಗೆ ಶಿಕ್ಷೆ ಒದಗಿಸುವ ಸಲುವಾಗಿ ಸ್ಥಾಪಿತವಾಗಿದೆ.
124 ದೇಶಗಳು ಈ ನ್ಯಾಯಾಲಯದೊಡನೆ ಸಹಿ ಹಾಕಿದ್ದು, ಆದರೆ ಬಂಧನದ ಆದೇಶವನ್ನು ಜಾರಿಗೆ ತರುವಲ್ಲಿ ಅವೆಲ್ಲವೂ ಸಮಾನ ರೀತಿಯಲ್ಲಿ ಕಾರ್ಯಾಚರಿಸುತ್ತವೆ ಎನ್ನಲು ಸಾಧ್ಯವಿಲ್ಲ. ಡಚ್ ವಿದೇಶಾಂಗ ಸಚಿವ ಕ್ಯಾಸ್ಪರ್ ವೆಲ್ಡ್‌ಕ್ಯಾಂಪ್ ಅವರು ಅಂತಾರಾಷ್ಟ್ರೀಯ ನ್ಯಾಯಾಲಯದ ವಾರಂಟ್ ಕುರಿತು ಪ್ರತಿಕ್ರಿಯೆ ನೀಡಿದ್ದು, ಒಂದು ವೇಳೆ ಬೆಂಜಮಿನ್ ನೆತನ್ಯಾಹು ಅವರು ನೆದರ್‌ಲ್ಯಾಂಡ್ಸ್ ಪ್ರವೇಶಿಸಿದರೆ, ಅವರನ್ನು ಬಂಧಿಸಲಾಗುತ್ತದೆ ಎಂದಿದ್ದಾರೆ. "ನಾವು ಅಂತಾರಾಷ್ಟ್ರೀಯ ನ್ಯಾಯಾಲಯ ಘೋಷಿಸಿರುವ ವಾರಂಟ್ ಅಡಿಯಲ್ಲಿ ಬಂಧನಕ್ಕೊಳಪಡಿಸುವುದರಿಂದ ಯಾರನ್ನೂ ಹೊರಗಿಡಲು ಬಯಸುವುದಿಲ್ಲ" ಎಂದು ಅವರು ವಿವರಿಸಿದ್ದಾರೆ.
ಇನ್ನು ಯುನೈಟೆಡ್ ಕಿಂಗ್‌ಡಮ್ ಸರ್ಕಾರವೂ ಅಂತಾರಾಷ್ಟ್ರೀಯ ಅಪರಾಧ ನ್ಯಾಯಾಲಯದ ಪ್ರಮುಖ ಸದಸ್ಯನಾಗಿದ್ದು, ಒಂದು ವೇಳೆ ನೆತನ್ಯಾಹು ಏನಾದರೂ ಯುಕೆಗೆ ಭೇಟಿ ನೀಡುವ ಇಚ್ಛೆ ವ್ಯಕ್ತಪಡಿಸಿದರೆ ಅದು ಬಿಕ್ಕಟ್ಟಿಗೆ ಸಿಲುಕಲಿದೆ. ಯುಕೆ ಪ್ರಧಾನ ಮಂತ್ರಿಗಳ ವಕ್ತಾರರು ನವೆಂಬರ್ 21, ಗುರುವಾರದಂದು ಹೇಳಿಕೆ ನೀಡಿದ್ದು, ಸರ್ಕಾರ ಅಂತಾರಾಷ್ಟ್ರೀಯ ಅಪರಾಧ ನ್ಯಾಯಾಲಯಕ್ಕೆ ಸಂಬಂಧಿಸಿದ ಕಾನೂನು ಕರ್ತವ್ಯಗಳಿಗೆ ಬದ್ಧವಾಗಿದೆ ಎಂದು ಕಳೆದ ತಿಂಗಳು ಅಟಾರ್ನಿ ಜನರಲ್ ರಿಚರ್ಡ್ ಹೆರ್ಮರ್ ಹೇಳಿದ್ದಕ್ಕೆ ಸರ್ಕಾರ ಇಂದಿಗೂ ಬದ್ಧವಾಗಿದೆ ಎಂದಿದ್ದಾರೆ.
ಆದರೆ ಅಮೆರಿಕಾ ಮತ್ತು ರಷ್ಯಾಗಳೆರಡೂ ಐಸಿಸಿ ಸದಸ್ಯ ರಾಷ್ಟ್ರಗಳಲ್ಲ. ಆದ್ದರಿಂದ ಇವೆರಡೂ ದೇಶಗಳಿಗೆ ನೆತನ್ಯಾಹು ಅವರು ಭೇಟಿ ನೀಡುವುದಕ್ಕೆ ಯಾವುದೇ ತೊಂದರೆ ಎದುರಾಗುವ ಸಾಧ್ಯತೆಗಳಿಲ್ಲ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ವಿರುದ್ಧ ಐಸಿಸಿ ಕಳೆದ ವರ್ಷವೇ ಬಂಧನ ವಾರಂಟ್ ಹೊರಡಿಸಿತ್ತು. ಆದರೂ ವ್ಲಾಡಿಮಿರ್ ಪುಟಿನ್ ಅವರು ಸೆಪ್ಟೆಂಬರ್ ತಿಂಗಳಲ್ಲಿ ಯಾವುದೇ ಅಡ್ಡಿ ಆತಂಕಗಳಿಲ್ಲದೆ ಮಂಗೋಲಿಯಾಗೆ ಭೇಟಿ ನೀಡಿದ್ದರು.
ಐಸಿಸಿ ರಷ್ಯಾ ಅಧ್ಯಕ್ಷ ಪುಟಿನ್ ಮತ್ತು ರಷ್ಯಾದ ಮಕ್ಕಳ ಹಕ್ಕುಗಳ ಆಯುಕ್ತರಾದ ಮರಿಯಾ ಲ್ವೋವಾ ಬೆಲೋವಾ ಅವರ ವಿರುದ್ಧ ಯುದ್ಧಾಪರಾಧ, ಮಾನವ ಜನಾಂಗದ ವಿರುದ್ಧದ ಅಪರಾಧ ಹಾಗೂ ನರಮೇಧಗಳಂತಹ ಗಂಭೀರ ಆರೋಪಗಳನ್ನು ಹೊರಿಸಿ, ಬಂಧನದ ವಾರಂಟ್ ಹೊರಡಿಸಿತ್ತು. ಆಶ್ಚರ್ಯಕರ ವಿಚಾರವೆಂದರೆ, ಐಸಿಸಿಯ ನ್ಯಾಯಾಧೀಶರಲ್ಲಿ ಒಬ್ಬರಾದ ಎರ್ಡನ್‌ಬಲ್ಸುರೆನ್ ದಾಮ್‌ದಿನ್ ಅವರು ಮಂಗೋಲಿಯಾದವರಾಗಿದ್ದರು.
ನೆದರ್ಲ್ಯಾಂಡ್ಸ್‌ನ ಹೇಗ್ ನಗರದಲ್ಲಿರುವ ಅಂತಾರಾಷ್ಟ್ರೀಯ ಅಪರಾಧಗಳ ನ್ಯಾಯಾಲಯವನ್ನು 1998ರ ರೋಮ್ ಸ್ಟಾಚ್ಯುಟ್ ಒಪ್ಪಂದದ ಮೂಲಕ ಸ್ಥಾಪಿಸಲಾಯಿತು. ಈ ಒಪ್ಪಂದ ರೂಪುಗೊಂಡ ನಾಲ್ಕು ವರ್ಷಗಳ ಬಳಿಕ ಐಸಿಸಿ ಕಾರ್ಯರೂಪಕ್ಕೆ ಬಂತು.
ಈ ನ್ಯಾಯಾಲಯ ವಿಶ್ವಸಂಸ್ಥೆಯಿಂದ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತಿದ್ದು, ರೋಮ್ ಸ್ಟಾಚ್ಯುಟ್‌ಗೆ ಸಹಿ ಹಾಕಿರುವ 124 ದೇಶಗಳು ಇದಕ್ಕೆ ಅವಶ್ಯಕ ಹಣಕಾಸು ಪೂರೈಸುತ್ತಿವೆ. ಯುಕೆ ಸೇರಿದಂತೆ, ಬಹುತೇಕ ಯುರೋಪಿನ ದೇಶಗಳು ರೋಮ್ ಸ್ಟಾಚ್ಯುಟ್‌ಗೆ ಸಹಿ ಹಾಕಿವೆ. ಆದರೆ ಅಮೆರಿಕಾ, ರಷ್ಯಾ ಮತ್ತು ಇಸ್ರೇಲ್‌ಗಳು ಈ ಒಪ್ಪಂದದ ಭಾಗವಾಗಿಲ್ಲ. ಆದರೆ, 2015ರಲ್ಲಿ ಪ್ಯಾಲೆಸ್ತೀನಿಯನ್ ಪ್ರದೇಶಗಳನ್ನು ಐಸಿಸಿ ತನ್ನ ಸದಸ್ಯ ರಾಷ್ಟ್ರ ಎಂದು ಗುರುತಿಸಿತು.
ಅಂತಾರಾಷ್ಟ್ರೀಯ ಅಪರಾಧಗಳ ನ್ಯಾಯಾಲಯ 18 ನ್ಯಾಯಾಧೀಶರನ್ನು ಹೊಂದಿದ್ದು, ಅವರು ನರಮೇಧ, ಮಾನವ ಜನಾಂಗದ ವಿರುದ್ಧದ ಅಪರಾಧ ಮತ್ತು ಯುದ್ಧಾಪರಾಧಗಳು ಸೇರಿದಂತೆ, ಸಮಸ್ತ ಮಾನವ ಜನಾಂಗವನ್ನು ಬಾಧಿಸುವ ಗಂಭೀರ ಅಪರಾಧಗಳೆಂದು ನ್ಯಾಯಾಲಯ ಪರಿಗಣಿಸುವ ತಪ್ಪುಗಳನ್ನು ಶಿಕ್ಷಿಸುವ ಅಧಿಕಾರ ಹೊಂದಿದ್ದಾರೆ. 2018ರಲ್ಲಿ, ನ್ಯಾಯಾಲಯ ನಿರ್ವಹಿಸುವ ಗಂಭೀರ ಅಪರಾಧಗಳ ಸಾಲಿಗೆ ಆಕ್ರಮಣಶೀಲ ಪ್ರವೃತ್ತಿಯನ್ನೂ ಸೇರಿಸಲಾಯಿತು. ಆದರೆ, ಇಂತಹ ಅಪರಾಧಗಳು ಸದಸ್ಯ ರಾಷ್ಟ್ರಗಳಲ್ಲಿ ನಡೆದರೆ, ಅಥವಾ ಸದಸ್ಯ ರಾಷ್ಟ್ರಗಳ ಪ್ರಜೆಗಳು ಅಪರಾಧ ನಡೆಸಿದರೆ ಮಾತ್ರವೇ ಐಸಿಸಿ ಕ್ರಮ ಕೈಗೊಳ್ಳಬಹುದು.
ಐಸಿಸಿಯಲ್ಲಿ ಯಾರು ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸುತ್ತಾರೆ?
ಅಂತಾರಾಷ್ಟ್ರೀಯ ಅಪರಾಧಗಳ ನ್ಯಾಯಾಲಯದ ನೇತೃತ್ವವನ್ನು ಅದರ ಅಧ್ಯಕ್ಷರು, ಜಪಾನಿನ ಟೊಮೊಕೊ ಅಕಾನೆ ಹೊಂದಿದ್ದಾರೆ. ಐಸಿಸಿಯ ಉಪಾಧ್ಯಕ್ಷರಾಗಿ ಇಟಲಿಯ ರೊಸಾರಿಯೊ ಸಾಲ್ವಟೋರ್ ಐಟಾಲ ಕಾರ್ಯಾಚರಿಸುತ್ತಿದ್ದು, ಬೆನಿನ್‌ನ ರೀನ್ ಅಲಾಪಿನಿ ಗಾನ್ಸೌ ಅವರು ಎರಡನೇ ಉಪಾಧ್ಯಕ್ಷರಾಗಿದ್ದಾರೆ.
ಬ್ರಿಟಿಷ್ ನ್ಯಾಯಾಧೀಶರಾದ, 73 ವರ್ಷ ವಯಸ್ಸಿನ ಜೊವಾನ್ನಾ ಕಾರ್ನರ್ ಅವರು ಈ ಹಿಂದೆ ಅಂತಾರಾಷ್ಟ್ರೀಯ ಅಪರಾಧಗಳ ನ್ಯಾಯಾಲಯದಲ್ಲಿ ನ್ಯಾಯವಾದಿಯಾಗಿದ್ದರು. ಇಂಟರ್ನ್ಯಾಷನಲ್ ಕ್ರಿಮಿನಲ್ ಟ್ರಿಬ್ಯುನಲ್ ಫಾರ್ ಯುಗೊಸ್ಲಾವಿಯದಲ್ಲಿ ಪ್ರಕರಣಗಳನ್ನು ದಾಖಲಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.
ಇಂಟರ್ನ್ಯಾಷನಲ್ ಕ್ರಿಮಿನಲ್ ಟ್ರಿಬ್ಯುನಲ್ ಫಾರ್ ದ ಫಾರ್ಮರ್ ಯುಗೊಸ್ಲಾವಿಯ (ಐಸಿಟಿವೈ) ಎನ್ನುವುದು 1990ರ ದಶಕದಲ್ಲಿ ಬಾಲ್ಕನ್ಸ್‌ನಲ್ಲಿ ನಡೆದ ಅಪರಾಧಗಳನ್ನು ನಿರ್ವಹಿಸಲು ವಿಶ್ವಸಂಸ್ಥೆ ಸ್ಥಾಪಿಸಿದ ವಿಶೇಷ ನ್ಯಾಯಾಲಯವಾಗಿತ್ತು. ಇದು ಯುದ್ಧಾಪರಾಧಗಳು, ನರಮೇಧ ಮತ್ತು ಇತರ ಗಂಭೀರ ಅಪರಾಧಗಳ ವಿಚಾರಣೆ ನಡೆಸಿತ್ತು.
ಐಸಿಸಿಯ ಪೀಠ ಫ್ರಾನ್ಸ್, ರೊಮಾನಿಯ, ಕೆನಡಾ ಮತ್ತು ದಕ್ಷಿಣ ಕೊರಿಯಾಗಳ ನ್ಯಾಯಾಧೀಶರನ್ನೂ ಒಳಗೊಂಡಿದೆ.
ಒಂದಷ್ಟು ಟೀಕಾಕಾರರು ಐಸಿಸಿ ಅಷ್ಟೊಂದು ಪರಿಣಾಮಕಾರಿ ನ್ಯಾಯಾಲಯವಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಯುನಿವರ್ಸಿಟಿ ಆಫ್ ಪೆನ್ಸಿಲ್ವೇನಿಯಾದ ಕಾನೂನು ಉಪನ್ಯಾಸಕರೊಬ್ಬರು ಎರಡು ವರ್ಷಗಳ ಹಿಂದೆ ಈ ಕುರಿತು ಬರೆದಿದ್ದು, ಐಸಿಸಿ ಸಾವಿರಾರು ಪ್ರಕರಣಗಳ ವಿಚಾರಣೆ ನಡೆಸಿದ್ದರೂ, ಇಲ್ಲಿಯತನಕ ಕೇವಲ 44 ಜನರ ವಿರುದ್ಧ ಮಾತ್ರ ಕ್ರಮ ಕೈಗೊಳ್ಳಲಾಗಿದೆ. 2022ರ ವೇಳೆಗೆ, ಕೇವಲ 14 ಪ್ರಕರಣಗಳು ಮಾತ್ರವೇ ಪೂರ್ಣ ಪ್ರಮಾಣದ ವಿಚಾರಣೆಗೆ ಒಳಗಾಗಿದ್ದು, ಕೇವಲ 9 ಅಪರಾಧಗಳಿಗೆ ಶಿಕ್ಷೆ ಘೋಷಿಸಲಾಗಿತ್ತು.
ಆದರೆ, ಐರೋಪ್ಯ ಒಕ್ಕೂಟದಂತಹ (ಇಯು) ಸದಸ್ಯರು ಐಸಿಸಿ ಕುರಿತು ಧನಾತ್ಮಕ ದೃಷ್ಟಿಕೋನ ಹೊಂದಿದ್ದಾರೆ. ಅಂತಾರಾಷ್ಟ್ರೀಯ ಅಪರಾಧಗಳ ನ್ಯಾಯಾಲಯದ 20 ವರ್ಷಗಳ ಅವಧಿಯಲ್ಲಿ, ಅದು ಲೈಂಗಿಕ ಹಿಂಸಾಚಾರ, ಸೇನೆಗೆ ಮಕ್ಕಳನ್ನು ಸೇರಿಸುವುದು ಮತ್ತು ಸಾಂಸ್ಕೃತಿಕ ಪರಂಪರೆಯನ್ನು ನಾಶಪಡಿಸುವಂತಹ ಅಪರಾಧಗಳಿಗೆ ಶಿಕ್ಷೆ ವಿಧಿಸಿದೆ ಎಂದು ಇಯು ವಿವರಿಸಿದೆ.
ಅಪರಾಧಿಗಳನ್ನು ಜವಾಬ್ದಾರರಾಗಿಸಿ, ನ್ಯಾಯಬದ್ಧ ವಿಚಾರಣೆ ನಡೆಸಿ, ತೊಂದರೆಗೊಳಗಾದವರಿಗೆ ನ್ಯಾಯ ಒದಗಿಸಿ, ಭವಿಷ್ಯದಲ್ಲಿ ಅಪರಾಧಗಳು ಘಟಿಸದಂತೆ ತಡೆಯುವಲ್ಲಿ ಐಸಿಸಿ ಪ್ರಮುಖ ಪಾತ್ರ ವಹಿಸಿದೆ ಎಂದು ಐರೋಪ್ಯ ಒಕ್ಕೂಟ ಶ್ಲಾಘಿಸಿದೆ.
- ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
Advertisement