2016ರಲ್ಲಿ ಡೊನಾಲ್ಡ್ ಟ್ರಂಪ್ ಅವರು ಮೊದಲನೇ ಬಾರಿಗೆ ಅಮೆರಿಕಾ ಅಧ್ಯಕ್ಷರಾಗಿ ಗೆಲುವು ಸಾಧಿಸಿದಾಗ ಅವರೊಬ್ಬ ಪ್ರಸಿದ್ಧ ಟಿವಿ ವ್ಯಕ್ತಿಯಾಗಿದ್ದರು. ಆಗ ಅವರಿನ್ನೂ ಮಾಜಿ ಅಧ್ಯಕ್ಷರಾಗಿರಲಿಲ್ಲ. ಅವರು ಶ್ವೇತ ಭವನದ ಅಧಿಕಾರ ಹಸ್ತಾಂತರದ ವಿಚಾರದಲ್ಲಿ ಸರ್ಕಾರಿ ಪ್ರಕ್ರಿಯೆಯಂತೆ ನಡೆದುಕೊಳ್ಳುವ ಬದಲು, ತನ್ನ ಪ್ರಸಿದ್ಧ ರಿಯಾಲಿಟಿ ಶೋ ಆದ 'ದ ಅಪ್ರೆಂಟಿಸ್' ರೀತಿಯಲ್ಲೇ ನಿರ್ವಹಿಸಿದ್ದರು.
2016ರಲ್ಲಿ ಟ್ರಂಪ್ ಅವರ ಸಂಪುಟಕ್ಕೆ ಸೇರ್ಪಡೆಯಾಗಲು ಇಚ್ಛೆ ಹೊಂದಿದ್ದವರು ಟಿವಿ ಕ್ಯಾಮರಾಗಳನ್ನು ದಾಟಿ, ನ್ಯೂಯಾರ್ಕ್‌ನ ಟ್ರಂಪ್ ಟವರ್ ಪ್ರವೇಶಿಸಿದ್ದರು. ಈ ಆಯ್ಕೆ ಪ್ರಕ್ರಿಯೆ ಅತ್ಯಂತ ದೀರ್ಘವಾಗಿದ್ದು, ಕಾನ್ಯೆ ವೆಸ್ಟ್ ಅವರಂತಹ ಸೆಲೆಬ್ರಿಟಿಗಳೂ ಅಲ್ಲಿಗೆ ತೆರಳುವ ಮೂಲಕ ಇದೊಂದು ಪ್ರದರ್ಶನದಂತೆ ಕಂಡುಬಂದಿತ್ತು.
ಕಾನ್ಯೆ ವೆಸ್ಟ್ ಅಮೆರಿಕಾದ ಓರ್ವ ಪ್ರಸಿದ್ಧ ರಾಪರ್ ಮತ್ತು ಸಂಗೀತ ನಿರ್ಮಾಪಕನಾಗಿದ್ದು, 2000ನೇ ದಶಕದಲ್ಲಿ ಜನಪ್ರಿಯತೆ ಗಳಿಸಿದ್ದರು. ಅದರೊಡನೆ, ಫ್ಯಾಷನ್ ಮತ್ತು ನೇರ ಮಾತುಗಳಿಗೂ ಅವರು ಪ್ರಸಿದ್ಧರಾಗಿದ್ದರು. ಆತ 2016ರಲ್ಲಿ ಅಧ್ಯಕ್ಷ ಟ್ರಂಪ್ ಅವರನ್ನು ಭೇಟಿಯಾಗಿದ್ದರೂ, ಕಾನ್ಯೆ ವೆಸ್ಟ್ ಟ್ರಂಪ್ ಸಚಿವಾಲಯಕ್ಕೆ ಸೇರ್ಪಡೆಯಾಗಿರಲಿಲ್ಲ ಮತ್ತು ಯಾವುದೇ ಸರ್ಕಾರಿ ಸ್ಥಾನವನ್ನೂ ಹೊಂದಿರಲಿಲ್ಲ.
ಆದರೆ, ಈ ಬಾರಿ ಡೊನಾಲ್ಡ್ ಟ್ರಂಪ್ ಅವರು ಆಯ್ಕೆ ಪ್ರಕ್ರಿಯೆಯನ್ನು ಇನ್ನಷ್ಟು ನಿಯಂತ್ರಿತವಾಗಿ ನಡೆಸಿದ್ದು, ತನ್ನ ನಿರ್ಧಾರಗಳನ್ನು ಕ್ಯಾಮರಾಗಳಿಂದ ದೂರಾಗಿ, ತನ್ನ ಮರ್ ಅ ಲಾಗೋ ಎಸ್ಟೇಟ್‌ನಲ್ಲಿ ಕೈಗೊಂಡಿದ್ದರು. ಈ ಬಾರಿ ತನ್ನ ಆಯ್ಕೆಗಳನ್ನು ಟ್ರಂಪ್ ಕ್ಷಿಪ್ರವಾಗಿ ಘೋಷಿಸುತ್ತಿದ್ದು, ಹೆಚ್ಚಾಗಿ ಸಾಮಾಜಿಕ ಜಾಲತಾಣಗಳಲ್ಲೂ ಅದನ್ನು ಹೇಳುತ್ತಿದ್ದಾರೆ. ಆದರೆ, ಟ್ರಂಪ್ ನಿರ್ಧಾರಗಳ ಫಲಿತಾಂಶಗಳು ಹೆಚ್ಚು ಸ್ಥಿರವೂ, ಅಥವಾ ಸಮಂಜಸವೂ ಆಗಿರಬಹುದು ಎನ್ನಲು ಸಾಧ್ಯವಿಲ್ಲ.
ಮರ್ ಅ ಲಾಗೋ ಎನ್ನುವುದು ಫ್ಲೋರಿಡಾದ ಪಾಮ್ ಬೀಚ್ ಬಳಿ ಇರುವ ಒಂದು ಖಾಸಗಿ ಎಸ್ಟೇಟ್ ಆಗಿದ್ದು, ಡೊನಾಲ್ಡ್ ಟ್ರಂಪ್ ಇದರ ಮಾಲೀಕರಾಗಿದ್ದಾರೆ. ಮೂಲತಃ 1920ರ ದಶಕದಲ್ಲಿ ನಿರ್ಮಿತವಾಗಿರುವ ಮರ್ ಅ ಲಾಗೋ ಒಂದು ಐಷಾರಾಮಿ ರೆಸಾರ್ಟ್ ಆಗಿಯೂ, ಟ್ರಂಪ್ ಅವರ ಖಾಸಗಿ ನಿವಾಸವಾಗಿಯೂ ಬಳಕೆಯಾಗುತ್ತಿದೆ. ಡೊನಾಲ್ಡ್ ಟ್ರಂಪ್ ತನ್ನ ಹಲವು ರಾಜಕೀಯ ಸಭೆಗಳು ಮತ್ತು ಸಾರ್ವಜನಿಕ ಘೋಷಣೆಗಳನ್ನು ಇಲ್ಲೇ ಆಯೋಜಿಸುವುದಿದೆ.
ಹೆಗ್ಸೆತ್ ಕೇವಲ 24 ಗಂಟೆಗಳೊಳಗೆ ನಡೆದ ಅಚ್ಚರಿಯ ಆಯ್ಕೆಯಾಗಿದ್ದರು. ನವೆಂಬರ್ 12ರಂದು ಟ್ರಂಪ್ ಅವರು ನ್ಯಾಷನಲ್ ಗಾರ್ಡ್ ಆಗಿ ಸೇವೆ ಸಲ್ಲಿಸಿರುವ ಹಿನ್ನೆಲೆ ಹೊಂದಿರುವ, ಫಾಕ್ಸ್ ನ್ಯೂಸ್ ವಿಶ್ಲೇಷಕರಾದ ಪೀಟ್ ಹೆಗ್ಸೆತ್ ಅವರನ್ನು ರಕ್ಷಣಾ ಕಾರ್ಯದರ್ಶಿಯಾಗಿ ಆಯ್ಕೆ ಮಾಡಿಕೊಂಡರು.
ನ್ಯಾಷನಲ್ ಗಾರ್ಡ್ ಎನ್ನುವುದು ಅಮೆರಿಕಾದ ಮೀಸಲು ಸೇನಾ ಪಡೆಯಾಗಿದ್ದು, ರಾಜ್ಯ ಮತ್ತು ಫೆಡರಲ್ ಹಂತದಲ್ಲಿ ಕಾರ್ಯಾಚರಿಸುತ್ತದೆ. ಇದರ ಸದಸ್ಯರು ಅರೆಕಾಲಿಕವಾಗಿ ಕಾರ್ಯಾಚರಿಸುತ್ತಿದ್ದು, ತಿಂಗಳಿಗೆ ಒಂದು ವಾರಾಂತ್ಯದಲ್ಲಿ ತರಬೇತಿ ಹೊಂದಿ, ವರ್ಷಕ್ಕೆ ಎರಡು ವಾರ ಸೇವೆ ಸಲ್ಲಿಸುತ್ತಾರೆ. ನೈಸರ್ಗಿಕ ವಿಕೋಪ, ಅಥವಾ ಇನ್ನಾವುದೇ ತುರ್ತು ಪರಿಸ್ಥಿತಿಗಳು ಎದುರಾದಾಗ, ವಿದೇಶಗಳಲ್ಲಿ ಕಾರ್ಯಾಚರಣೆ ನಡೆಸಬೇಕಾದಾಗ ಅವರನ್ನು ಸೇವೆ ಸಲ್ಲಿಸಲು ಕರೆಯಲಾಗುತ್ತದೆ.
2017ರಲ್ಲಿ, ವರ್ಜೀನಿಯಾದ ಚಾರ್ಲೋಟ್ಸ್‌ವಿಲ್ಲೆಯಲ್ಲಿ ನಡೆದ ಶ್ವೇತ ವರ್ಣೀಯರ ಪರಮಾಧಿಕಾರದ ಕುರಿತು ನಡೆದ ಪ್ರತಿಭಟನೆಯ ಬಗ್ಗೆ ಟ್ರಂಪ್ ಅವರು "ಎರಡೂ ಬದಿಗಳಲ್ಲಿ ಒಳ್ಳೆಯ ವ್ಯಕ್ತಿಗಳಿದ್ದಾರೆ" ಎಂದಿದ್ದರು. ಈ ಸಂದರ್ಭದಲ್ಲೂ ಹೆಗ್ಸೆತ್ ಅವರು ಟ್ರಂಪ್ ಪರವಾಗಿ ನಿಂತಿದ್ದರು. 'ಯುನೈಟ್ ದ ರೈಟ್' ಎಂಬ ಹೆಸರಿನ ಈ ಮೆರವಣಿಗೆಯನ್ನು ಶ್ವೇತ ವರ್ಣೀಯ ರಾಷ್ಟ್ರೀಯವಾದಿ ಗುಂಪುಗಳು ಆಯೋಜಿಸಿದ್ದು, ಒಂದು ಪ್ರತಿಮೆಯ (ಅಮೆರಿಕಾದ ಅಂತರ್ಯುದ್ಧದ ಸಂದರ್ಭದಲ್ಲಿ, ಗುಲಾಮಗಿರಿಯನ್ನು ಉಳಿಸುವ ಸಲುವಾಗಿ ಹೋರಾಡಿದ ದಕ್ಷಿಣ ರಾಜ್ಯಗಳ ನಾಯಕರನ್ನು ಗೌರವಿಸುವ ಸ್ಮಾರಕ) ತೆರವನ್ನು ವಿರೋಧಿಸಲು ಆಯೋಜಿಸಲಾಗಿತ್ತು. ಈ ಮೆರವಣಿಗೆಯನ್ನು ಪ್ರತಿರೋಧಿಸಿ ಮರು ಪ್ರತಿಭಟನೆಗಳು ನಡೆದು, ಹಿಂಸಾಚಾರ ತಲೆದೋರಿ, ಓರ್ವ ವ್ಯಕ್ತಿ ಸಾವನ್ನಪ್ಪಿ, ಹಲವಾರು ಜನರು ಗಾಯಗೊಂಡಿದ್ದರು.
ಹೆಗ್ಸೆತ್ ಅವರು ಮಿಲಿಟರಿಯಲ್ಲಿರುವ 'ವೋಕ್‌ನೆಸ್' (ಅಸಮಾನತೆ ಮತ್ತು ತಾರತಮ್ಯದಂತಹ ಸಾಮಾಜಿಕ ವಿಚಾರಗಳ ಕುರಿತು ಜಾಗೃತಿ ಮೂಡಿಸುವ ಪ್ರಯತ್ನ) ವಿಚಾರಗಳ ಕುರಿತು ಗಮನ ಕೇಂದ್ರೀಕರಿಸಿದ್ದು, ಅವರಿಗೆ ಯಾವುದೇ ಸರ್ಕಾರದ ಭಾಗವಾಗಿರುವ ಅನುಭವಗಳಿಲ್ಲ.
ಮೂಲತಃ ಡೆಮಾಕ್ರಟಿಕ್ ಪಕ್ಷದವರಾಗಿದ್ದ ತುಳಸಿ ಗಬ್ಬಾರ್ಡ್ ಅವರು ಬಳಿಕ ರಿಪಬ್ಲಿಕನ್ ಪಕ್ಷಕ್ಕೆ ಸೇರ್ಪಡೆಯಾದರು. ಅವರನ್ನು ಟ್ರಂಪ್ ಅವರು ರಾಷ್ಟ್ರೀಯ ಗುಪ್ತಚರ ವಿಭಾಗದ ನಿರ್ದೇಶಕರಾಗಿ ಘೋಷಿಸಿದರು. ತುಳಸಿ ಗಬ್ಬಾರ್ಡ್ ಅವರು ತನ್ನ ಸ್ವತಂತ್ರ ದೃಷ್ಟಿಕೋನಕ್ಕೆ ಹೆಸರಾಗಿದ್ದು, ಅವರು ಸಿರಿಯಾದ ಸರ್ವಾಧಿಕಾರಿ ಬಷರ್ ಅಲ್ ಅಸ್ಸಾದ್ ಅವರನ್ನು ಭೇಟಿಯಾಗಿದ್ದು, ಆತ ಅಮೆರಿಕಾದ ಶತ್ರುವಲ್ಲ ಎಂದಿದ್ದರು.
43 ವರ್ಷ ವಯಸ್ಸಿನ ತುಳಸಿ ಗಬ್ಬಾರ್ಡ್ ಅವರು ತನ್ನ 21ರ ವಯಸ್ಸಿನಲ್ಲಿ ಹವಾಯಿಯ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಮೂಲಕ ತನ್ನ ರಾಜಕೀಯ ವೃತ್ತಿಜೀವನವನ್ನು ಆರಂಭಿಸಿದರು. ತುಳಸಿ ಹವಾಯಿಯ ಶಾಸಕಾಂಗಕ್ಕೆ ಸೇರ್ಪಡೆಯಾದ ಅತ್ಯಂತ ಸಣ್ಣ ವಯಸ್ಸಿನ ಮಹಿಳೆ ಮತ್ತು ಮೊದಲ ಹಿಂದೂ ಮಹಿಳೆಯಾಗಿದ್ದು, ಹಿಂದೂಗಳ ಪವಿತ್ರ ಗ್ರಂಥವಾದ ಭಗವದ್ಗೀತೆಯ ಮೇಲೆ ಪ್ರಮಾಣ ವಚನ ಸ್ವೀಕರಿಸಿದ್ದರು.
ಆಸಕ್ತಿಕರ ವಿಚಾರವೆಂದರೆ, ತುಳಸಿ ಗಬ್ಬಾರ್ಡ್ ಅವರು ಹಿಂದೂ ಅಮೆರಿಕನ್ ಆಗಿದ್ದರೂ, ಅವರು ಭಾರತೀಯ ಹಿನ್ನೆಲೆಯ ವ್ಯಕ್ತಿಯಲ್ಲ. ಅಮೆರಿಕನ್ ಸಮೋವಾದಲ್ಲಿ ಜನಿಸಿದ ತುಳಸಿ, ಹವಾಯಿಯಲ್ಲಿ ಜನಿಸಿದರು. ಅವರ ತಂದೆ ಮೈಕ್ ಗಬ್ಬಾರ್ಡ್ ಹವಾಯಿಯ ಸ್ಟೇಟ್ ಸೆನೇಟರ್ ಆಗಿದ್ದರು. ಅವರ ತಾಯಿ ಕ್ಯಾರಲ್ ಪೋರ್ಟರ್ ಗಬ್ಬಾರ್ಡ್ ಅವರು ಇಂಡಿಯಾನಾದಲ್ಲಿ ಜನಿಸಿ, ಮಿಷಿಗನ್‌ನಲ್ಲಿ ಬೆಳೆದಿದ್ದರು.
ತುಳಸಿಯವರ ತಾಯಿ ಕ್ಯಾರೊಲ್ ಪೋರ್ಟರ್ ಗಬ್ಬಾರ್ಡ್ ಅವರು ಓರ್ವ ಅಭ್ಯಾಸಿ ಹಿಂದೂ ಆಗಿದ್ದು, ಹವಾಯಿ ಸ್ಟೇಟ್ ಬೋರ್ಡ್ ಆಫ್ ಎಜುಕೇಶನ್ನಿನ ಸದಸ್ಯೆಯಾಗಿದ್ದರು. ತಾಯಿಯಿಂದ ಪ್ರೇರಿತರಾದ ತುಳಸಿ ತನ್ನ ಹದಿಹರೆಯದಲ್ಲಿ ಹಿಂದೂ ಧರ್ಮವನ್ನು ಅನುಸರಿಸಲು ಆರಂಭಿಸಿದರು. ತುಳಸಿಯ ತಂದೆ ಮೈಕ್ ಗಬ್ಬಾರ್ಡ್ ಅವರು ಮೂಲತಃ ರೋಮನ್ ಕ್ಯಾಥೋಲಿಕ್ ಆಗಿದ್ದು, ಬಳಿಕ ಹಿಂದುತ್ವವನ್ನು ಅನುಸರಿಸತೊಡಗಿದರು.
ಡೊನಾಲ್ಡ್ ಟ್ರಂಪ್ ಅವರು ಫ್ಲೋರಿಡಾದ ಗಮನ ಸೆಳೆಯುವ ಕಾಂಗ್ರೆಸ್ ಸದಸ್ಯ ಮ್ಯಾಟ್ ಗಾಯೆಟ್ಜ್ ಅವರನ್ನು ತನ್ನ ಅಟಾರ್ನಿ ಜನರಲ್ ಆಗಿ ಆಯ್ಕೆ ಮಾಡಿದ ಬಳಿಕ ಪರಿಸ್ಥಿತಿ ಹದಗೆಡತೊಡಗಿತು.
ಎಫ್‌ಬಿಐ ಸಹ ಅಟಾರ್ನಿ ಜನರಲ್ ಅವರ ಉಸ್ತುವಾರಿಯಲ್ಲಿದ್ದು, ಈ ಹಿಂದೆ ಮ್ಯಾಟ್ ಗಾಯೆಟ್ಜ್ ಅವರು ಅಪ್ರಾಪ್ತ ವಯಸ್ಕರ ಲೈಂಗಿಕ ಕಳ್ಳಸಾಗಣೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ವಿಚಾರಣೆ ನಡೆಸಿತ್ತು.
ಈ ವಿಚಾರದಲ್ಲಿ ಯಾವುದೇ ಪ್ರಕರಣ ದಾಖಲಾಗದಿದ್ದರೂ, ಬಳಿಕ ಅವರನ್ನು ಹೌಸ್ ಎಥಿಕ್ಸ್ ಕಮಿಟಿ ವಿಚಾರಣೆ ನಡೆಸಿತ್ತು. ಆದರೆ ಮ್ಯಾಟ್ ತಾನು ಯಾವುದೇ ತಪ್ಪು ಮಾಡಿಲ್ಲ ಎಂದೇ ಪ್ರತಿಪಾದಿಸಿದ್ದರು.
ಅವರು ಡೊನಾಲ್ಡ್ ಟ್ರಂಪ್ ಅವರ ಪ್ರಬಲ ಬೆಂಬಲಿಗರಾಗಿದ್ದು, ಎಫ್‌ಬಿಐ ಅಥವಾ ಯಾವುದೇ ಸಂಸ್ಥೆಗಳು ಆದೇಶಗಳನ್ನು ಪಾಲಿಸದಿದ್ದರೆ ಅವುಗಳನ್ನು ಸ್ಥಗಿತಗೊಳಿಸಿ, ಅವುಗಳಿಗೆ ನೀಡುವ ಹಣವನ್ನು ಮುಟ್ಟುಗೋಲು ಹಾಕಬೇಕು ಎಂದಿದ್ದರು.
ಇವೆಲ್ಲ ಪ್ರಮುಖ ಖಾತೆಗಳ ವಿಚಾರದಲ್ಲಿ ತಾನು ಅಂದುಕೊಂಡಂತೆ ಸಾಧಿಸಲಾಗಿಲ್ಲ ಎಂಬ ಭಾವನೆಯನ್ನು ಟ್ರಂಪ್ ಹೊಂದಿದ್ದಾರೆ. ಹಿಂದಿನ ಅಟಾರ್ನಿ - ಜನರಲ್‌ಗಳು ಟ್ರಂಪ್ ವೈಯಕ್ತಿಕ ಸಲಹೆಗಾರರಂತಲ್ಲದೆ, ಬಹಳ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಿದ್ದರು. ಪ್ರಮುಖ ಗುಪ್ತಚರ ಅಧಿಕಾರಿಗಳು ರಷ್ಯಾ ಜೊತೆ ಟ್ರಂಪ್ ಹೊಂದಿದ್ದ ಸಂಬಂಧದ ವಿಚಾರಣೆ ನಡೆಸಿ, ಟ್ರಂಪ್ ಕೋಪಕ್ಕೆ ಕಾರಣವಾಗಿದ್ದರು. ಇನ್ನು ಹಿಂದಿನ ಭದ್ರತಾ ಕಾರ್ಯದರ್ಶಿಗಳು ಮತ್ತು ಹಿರಿಯ ಜನರಲ್‌ಗಳು ಟ್ರಂಪ್ ಆಲೋಚನೆಗಳನ್ನು ತಳ್ಳಿ ಹಾಕಿದ್ದರು.
ಆದರೆ ಈ ಬಾರಿಯ ಆಯ್ಕೆಗಳ ಮೂಲಕ ತಾನು ಯಾವುದೇ ರೀತಿಯ ಭಿನ್ನಾಭಿಪ್ರಾಯಗಳನ್ನು ಸಹಿಸುವುದಿಲ್ಲ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ. ಟ್ರಂಪ್ ಅವರಿಗೆ ನಿಷ್ಠಾವಂತರಾಗಿದವರಿಗೆ, ಅಥವಾ ಟ್ರಂಪ್ ಅವರಿಗಿಂತ ಭಿನ್ನ ದೃಷ್ಟಿಕೋನ ಹೊಂದಿರುವವರಿಗೆ ಈ ಬಾರಿ ಸ್ಥಾನಗಳು ಸಿಗುವ ಸಾಧ್ಯತೆಗಳಿಲ್ಲ.
ಆದರೆ ರಿಪಬ್ಲಿಕನ್ ಪಕ್ಷ ಸೆನೆಟ್‌ನಲ್ಲಿ ಬಹುಮತ ಹೊಂದಿದ್ದರೂ, ಇಂತಹ ಅಸಹಜ ಆಯ್ಕೆಗಳು ಸೆನೆಟ್ ಒಪ್ಪಿಗೆ ಪಡೆಯುವುದು ಕಷ್ಟಕರವಾಗಲಿದೆ. ಬಹುಶಃ ಟ್ರಂಪ್‌ಗೂ ಅದೇ ಬೇಕಾಗಿದೆಯೋ ಏನೋ. ಈ ಆಯ್ಕೆಗಳನ್ನು ನಿರಾಕರಿಸಲು ಕೇವಲ ನಾಲ್ವರು ರಿಪಬ್ಲಿಕನ್ ಸೆನೆಟರ್‌ಗಳ ಅಗತ್ಯವಿದೆ. ಆದರೆ, ಟ್ರಂಪ್ ಆಯ್ಕೆಯ ಮೂವರನ್ನೂ ನಿರಾಕರಿಸುವುದು ವಿಪರೀತ ಧೈರ್ಯದ ನಡೆಯಾದೀತು.
ಅಮೆರಿಕಾದ ಸೆನೇಟ್ ಒಟ್ಟು ನೂರು ಸದಸ್ಯರನ್ನು ಹೊಂದಿದ್ದು, ಜನಸಂಖ್ಯೆಯ ಭೇದವಿಲ್ಲದೆ, ಪ್ರತಿಯೊಂದು ರಾಜ್ಯವೂ ಇಬ್ಬರು ಸೆನೇಟರ್‌ಗಳನ್ನು ಹೊಂದಿದೆ.
ಹಾಗೆ ನೋಡಿದರೆ, ತನಗೆ ಮೋಸವಾಗಲಾರದು ಎಂದು ಟ್ರಂಪ್ ಭಾವಿಸುವ ಇಲಾಖೆಗಳಿಗೆ ಅವರ ಆಯ್ಕೆಗಳು ಬಹುತೇಕ ಸಾಂಪ್ರದಾಯಿಕ ರೀತಿಯಲ್ಲೇ ಇವೆ.
ಫ್ಲೋರಿಡಾದ ಸೆನೇಟರ್ ಆಗಿರುವ ಮಾರ್ಕೋ ರುಬಿಯೋ ಅವರನ್ನು ಟ್ರಂಪ್ ಸೆಕ್ರೆಟರಿ ಆಫ್ ಸ್ಟೇಟ್ ಆಗಿ ಆಯ್ಕೆ ಮಾಡಿದ್ದಾರೆ. ಇದು ಅಮೆರಿಕಾದ ಸಹಯೋಗಿ ರಾಷ್ಟ್ರಗಳಿಗೆ (ಅಮೆರಿಕಾ ಸುಭದ್ರ ಸಹಯೋಗ ಮತ್ತು ಸಹಕಾರಿ ಸಂಬಂಧ ಹೊಂದಿರುವ ದೇಶಗಳು) ಮರು ಭರವಸೆ ನೀಡುವಂತಹ ಆಯ್ಕೆಯಾಗಿದೆ.
ಸೆಕ್ರೆಟರಿ ಆಫ್ ಸ್ಟೇಟ್ ಎನ್ನುವುದು ವಿದೇಶಾಂಗ ಸಂಬಂಧಗಳನ್ನು ನಿರ್ವಹಿಸುವ, ರಾಜತಾಂತ್ರಿಕ ವಿಚಾರಗಳ ಜವಾಬ್ದಾರಿ ವಹಿಸುವ, ಮತ್ತು ವಿದೇಶಗಳೊಡನೆ ವ್ಯವಹರಿಸುವ ಸಂದರ್ಭದಲ್ಲಿ ಅಮೆರಿಕಾವನ್ನು ಪ್ರತಿನಿಧಿಸುವ, ಅಮೆರಿಕಾ ಸರ್ಕಾರದ ಅತ್ಯುನ್ನತ ಹುದ್ದೆಯಾಗಿದೆ.
ಮಾರ್ಕೋ ರುಬಿಯೋ ಅವರು ಅಮೆರಿಕಾ ಅಧ್ಯಕ್ಷರಿಗೆ ದೇಶವನ್ನು ನ್ಯಾಟೋದಿಂದ ಹೊರತರಲು ಕಷ್ಟವಾಗುವಂತಹ ಮಸೂದೆಯೊಂದಕ್ಕೆ ಬೆಂಬಲ ಸೂಚಿಸಿದ್ದರು. ರಿಪಬ್ಲಿಕನ್ ಪಕ್ಷ ಬದಲಾದಂತೆ, ರುಬಿಯೋ ಸಹ ಬದಲಾಗಿ, ಟ್ರಂಪ್ ದೃಷ್ಟಿಕೋನವನ್ನು ಬೆಂಬಲಿಸಿದ್ದಾರೆ. ಹಾಗೆಂದು ತನ್ನ ಸ್ವತಂತ್ರ ಅಭಿಪ್ರಾಯಗಳನ್ನೂ ಉಳಿಸಿಕೊಂಡಿದ್ದಾರೆ.
ಉಕ್ರೇನ್‌ಗೆ ಆಯುಧ ಕಳುಹಿಸುವ ಕುರಿತ ಇತ್ತೀಚಿನ ಮಸೂದೆಯ ವಿರುದ್ಧ ರುಬಿಯೋ ಮತ ಚಲಾಯಿಸಿದ್ದು, ಗಡಿ ರಕ್ಷಣೆ ನಮ್ಮ ಆದ್ಯತೆಯಾಗಿರಬೇಕು ಎಂದಿದ್ದಾರೆ. ಆದರೆ ಅವರು ಉಕ್ರೇನ್ ಪರವಾಗಿ ಮಾತನಾಡಿದ್ದಾರೆ. ಕ್ಯೂಬಾದಿಂದ ವಲಸೆ ಬಂದಿರುವವರ ಮಗನಾಗಿರುವ ರುಬಿಯೋ ಪ್ರಬಲ ಕಮ್ಯುನಿಸ್ಟ್ ವಿರೋಧಿ ಧೋರಣೆ ಹೊಂದಿದ್ದು, ಈಗ ಚೀನಾವನ್ನೂ ಅದೇ ಕಂಗಳಿಂದ ನೋಡಲಿದ್ದಾರೆ.
ಕಮ್ಯುನಿಸ್ಟ್ ವಿರೋಧಿ ಧೋರಣೆ ಎಂದರೆ, ಎಲ್ಲವನ್ನೂ ಸರ್ಕಾರದ ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ಕಮ್ಯುನಿಸ್ಟ್ ರಾಜಕೀಯ ವ್ಯವಸ್ಥೆಯ ವಿರುದ್ದದ ನಿಲುವಾಗಿದೆ. ಈ ದೃಷ್ಟಿಕೋನ ಹೊಂದಿರುವ ಜನರು ಕಮ್ಯುನಿಸಂ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಆರ್ಥಿಕ ಪ್ರಗತಿಯನ್ನು ಕಸಿಯುತ್ತದೆ ಎಂಬ ಭಾವನೆ ಹೊಂದಿರುತ್ತಾರೆ.
ಇತರ ವಿದೇಶಾಂಗ ನೀತಿಯ ನೇಮಕಾತಿಗಳು ಸಮಾನ ದೃಷ್ಟಿಕೋನ ಮತ್ತು ಅರ್ಹತೆಗಳನ್ನು ಹೊಂದಿವೆ.
ಫ್ಲೋರಿಡಾದ ಮಾಜಿ ಕಾಂಗ್ರೆಸ್ ಸದಸ್ಯರಾದ ಮೈಕ್ ವಾಲ್ಟ್ಜ್ ಅಮೆರಿಕಾದ ಮುಂದಿನ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ನೇಮಕವಾಗುವ ಸಾಧ್ಯತೆಗಳಿವೆ. ಸೆನೇಟರ್ ಮಾರ್ಕೋ ರುಬಿಯೋ ಅವರಂತೆಯೇ, ವಾಲ್ಟ್ಜ್ ಸಹ ಮುಂದಿನ ಉಪಾಧ್ಯಕ್ಷರಾದ ಜೆ ಡಿ ವ್ಯಾನ್ಸ್ ಸೇರಿದಂತೆ, 'ಪ್ರಯೋರಿಟೈಜರ್'ಗಳಿಗೆ (ಅಮೆರಿಕಾ ಚೀನಾದಂತಹ ಪ್ರಮುಖ ಅಪಾಯಗಳೆಡೆಗೆ ಗಮನ ಹರಿಸಬೇಕೇ ಹೊರತು, ಇತರ ವಿಚಾರಗಳ ಕುರಿತು ಅಲ್ಲ ಎಂಬ ಭಾವನೆ ಹೊಂದಿರುವವರು), ಎಂಎಜಿಎ ಚಳುವಳಿಗೆ (ಡೊನಾಲ್ಡ್ ಟ್ರಂಪ್ ನೇತೃತ್ವದ ಮೇಕ್ ಅಮೆರಿಕಾ ಗ್ರೇಟ್ ಅಗೇನ್ ಎಂಬ ರಾಜಕೀಯ ಚಳುವಳಿ) ಬೆಂಬಲ ನೀಡುತ್ತಿದ್ದಾರೆ. ಈ ದೃಷ್ಟಿಕೋನ ಹೊಂದಿರುವವರು, ಅಮೆರಿಕಾ ಚೀನಾದಿಂದ ಬರುತ್ತಿರುವ ತುರ್ತಿನ ಅಪಾಯದೆಡೆಗೆ ಗಮನ ಹರಿಸಬೇಕು, ಯುರೋಪಿನ ಭದ್ರತೆಯ ಕುರಿತಾದ ಬದ್ಧತೆಯಿಂದ ಮತ್ತು ಉಕ್ರೇನ್‌ಗೆ ನೀಡುವ ಬೆಂಬಲದಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸುತ್ತಿದ್ದಾರೆ.
ನ್ಯೂಯಾರ್ಕ್‌ನ ಕಾಂಗ್ರೆಸ್ ಸದಸ್ಯೆಯಾದ ಎಲಿಸ್ ಸ್ಟೆಫಾನಿಕ್ ಅವರನ್ನು ವಿಶ್ವಸಂಸ್ಥೆಯ ಮುಂದಿನ ಅಮೆರಿಕಾದ ರಾಯಭಾರಿಯಾಗಿ ಆಯ್ಕೆ ಮಾಡಲಾಗಿದೆ. ಈ ಮೂಲಕ ಸತತ ಆರನೇ ಬಾರಿಗೆ ಮಹಿಳೆಯರು ಈ ಸ್ಥಾನಕ್ಕೆ ಬಂದಂತಾಗಿದೆ. ಸ್ಟೆಫಾನಿಕ್ ಅವರು ಕಾಂಗ್ರೆಸ್‌ನಲ್ಲಿ ಅತ್ಯಂತ ಪ್ರಬಲ ಟ್ರಂಪ್ ಬೆಂಬಲಿಗರಲ್ಲಿ ಒಬ್ಬರಾಗಿದ್ದಾರೆ. ವಿಶ್ವವಿದ್ಯಾಲಯಗಳಲ್ಲಿ ಯಹೂದಿ ವಿರೋಧಿ ನಿಲುವುಗಳ ಕುರಿತು ಕಾಲೇಜ್ ಅಧ್ಯಕ್ಷರುಗಳನ್ನು ಪ್ರಶ್ನಿಸುವ ಮೂಲಕ ಸ್ಟೆಫಾನಿಕ್ ಗಮನ ಸೆಳೆದಿದ್ದರು.
ವಿಶ್ವಸಂಸ್ಥೆಯಂತಹ ದೊಡ್ಡ ಅಂತಾರಾಷ್ಟ್ರೀಯ ಸಂಸ್ಥೆಯ ಮೂಲಕ ಇತರ ದೇಶಗಳೊಡನೆ ಕಾರ್ಯನಿರ್ವಹಿಸುವ ಕುರಿತು ಜಾಗರೂಕತೆ, ಅನುಮಾನಗಳನ್ನು ಹೊಂದಿರುವ ಸರ್ಕಾರಕ್ಕೆ ಎಲಿಸ್ ಸ್ಟೆಫಾನಿಕ್ ನಿಜಕ್ಕೂ ಸೂಕ್ತ ಆಯ್ಕೆಯಾಗಿದ್ದಾರೆ.
ಇನ್ನೂ ಸ್ಥಾಪನೆಯಾಗಿರದ, ನೂತನ ಇಲಾಖೆಗಳಿಗೂ ಟ್ರಂಪ್ ಒಂದಷ್ಟು ಅಸಹಜ ಎನಿಸುವಂತ ನೇಮಕಾತಿಗಳನ್ನು ಈಗಾಗಲೇ ನಡೆಸಿದ್ದಾರೆ.
ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಮತ್ತು ಮಾಜಿ ರಿಪಬ್ಲಿಕನ್ ಅಭ್ಯರ್ಥಿ ಮತ್ತು ಉದ್ಯಮಿ ವಿವೇಕ್ ರಾಮಸ್ವಾಮಿ ಅವರನ್ನು ಒಂದು ನೂತನ ಇಲಾಖೆಯ ನೇತೃತ್ವ ವಹಿಸುವಂತೆ ಟ್ರಂಪ್ ನೇಮಿಸಿದ್ದಾರೆ. ಈ ಇಲಾಖೆಯ ಗುರಿ ಸರ್ಕಾರದ ಅನವಶ್ಯಕ ವೆಚ್ಚವನ್ನು ಕಡಿಮೆಗೊಳಿಸಿ, ನಿಯಮಾವಳಿಗಳನ್ನು ಸರಳಗೊಳಿಸುವುದಾಗಿದೆ.
ಎಲಾನ್ ಮಸ್ಕ್ ಅವರೂ ತಾನು 'ಡಿಪಾರ್ಟ್‌ಮೆಂಟ್ ಆಫ್ ಗವರ್ನಮೆಂಟ್ ಎಫಿಶಿಯೆನ್ಸಿ' (ಡಿಒಜಿಇ) ಎಂದು ಕರೆಯುವ ಇಲಾಖೆಯ ಗುರಿಯನ್ನು ವಿವರಿಸಿದ್ದಾರೆ. ಈ ಇಲಾಖೆಗೆ ಡೋಜ್‌ಕಾಯಿನ್ ಎಂಬ ಕ್ರಿಪ್ಟೋ ಕರೆನ್ಸಿಯನ್ನು ಹೋಲುವ ಹೆಸರನ್ನು ಮಸ್ಕ್ ಇಟ್ಟಿದ್ದು, ಇದು ಒಂದು ಹಾಸ್ಯದ ರೀತಿಯಲ್ಲಿ ಆರಂಭಗೊಂಡಿತ್ತು. ಈಗ ಮಸ್ಕ್ ಅವರು ಇಲಾಖೆಯ ಕುರಿತು ಎಷ್ಟು ಗಂಭೀರವಾಗಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ.
ಈ ಇಲಾಖೆ ಫೆಡರಲ್ ವೆಚ್ಚವನ್ನು 2 ಟ್ರಿಲಿಯನ್ ಡಾಲರ್‌ಗಳಷ್ಟು ಕಡಿಮೆಗೊಳಿಸುವ ಉದ್ದೇಶ ಹೊಂದಿದೆ. ಈ ಮೊತ್ತ ಒಟ್ಟಾರೆ ಬಜೆಟ್‌ನ ಮೂರನೇ ಒಂದು ಪ್ರಮಾಣವಾಗಿದ್ದು, ಒಂದು ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಆದರೆ, ಈ ಯೋಜನೆ ಸಾಮಾಜಿಕ ಭದ್ರತೆ ಕಾಪಾಡುವ, ವೈದ್ಯಕೀಯ ನೆರವು ನೀಡುವ, ನಿವೃತ್ತಿ ವಯಸ್ಸನ್ನು ಹೆಚ್ಚಿಸುವುದನ್ನು ತಪ್ಪಿಸುವ ಡೊನಾಲ್ಡ್ ಟ್ರಂಪ್ ಅವರ ಯೋಜನೆಗೆ ವಿರುದ್ಧವಾಗಿದೆ. ಎಲಾನ್ ಮಸ್ಕ್ ಅವರು ಇಂತಹ ಭಾರೀ ಕಡಿತಕ್ಕೆ ಬೆಂಬಲ ವ್ಯಕ್ತಪಡಿಸಿದ್ದು, ಪ್ರಮುಖ ಯೋಜನೆಗಳನ್ನು ಬಾಧಿಸದಂತೆ ಅದನ್ನು ಜಾರಿಗೆ ತರುವುದು ಕಷ್ಟಕರವಾಗಿದೆ.
ಕಾಂಗ್ರೆಸ್ ತನ್ನ ಹಸ್ತಕ್ಷೇಪ ನಡೆಸುವ ಮುನ್ನವೇ, ಡೊನಾಲ್ಡ್ ಟ್ರಂಪ್ ಅವರ ನೂತನ ಸಚಿವ ಸಂಪುಟ ಅವರ ಮೊದಲ ಅವಧಿಯ ಸಂಪುಟಕ್ಕಿಂತ ಭಿನ್ನವಾಗಿರಲಿದೆ ಎನ್ನುವುದು ಸ್ಪಷ್ಟವಾಗಿದೆ. ಟ್ರಂಪ್ ಮೊದಲನೇ ಅವಧಿಯಲ್ಲಿ, ಉಪಾಧ್ಯಕ್ಷ ಮೈಕ್ ಪೆನ್ಸ್ ಅವರು ಸಂಪುಟ ಸದಸ್ಯರನ್ನು ಆಯ್ಕೆ ಮಾಡುವಲ್ಲಿ ಮುಖ್ಯ ಪಾತ್ರ ವಹಿಸಿದ್ದರು. ಅವರಲ್ಲಿ ಬಹುತೇಕರು ರೇಗನ್ ಕಾಲದ ಸಾಂಪ್ರದಾಯಿಕ ಆಯ್ಕೆಗಳಾಗಿದ್ದರು.
ಸಂಪ್ರದಾಯವಾದಿಗಳು ಸಣ್ಣ ಸರ್ಕಾರ, ಬಲವಾದ ಅಂತಾರಾಷ್ಟ್ರೀಯ ಸಹಕಾರ ಮತ್ತು ಮುಕ್ತ ವ್ಯಾಪಾರವನ್ನು ಪ್ರತಿಪಾದಿಸುತ್ತಿದ್ದು, ಇದನ್ನು ತಳ್ಳಿಹಾಕುವ ಟ್ರಂಪ್ ನಿಷ್ಠಾವಂತರೊಡನೆ ಅಧಿಕಾರಕ್ಕಾಗಿ ಸ್ಪರ್ಧಿಸಿದ್ದಾರೆ.
ಅಧಿಕಾರಕ್ಕಾಗಿನ ಕದನದ ಫಲಿತಾಂಶ ಯಾವಾಗಲೂ ಸ್ಪಷ್ಟವಾಗಿರಲಿಲ್ಲ. ಉಭಯ ಗುಂಪುಗಳೂ ಒಂದಷ್ಟು ಯಶಸ್ಸು ಕಂಡಿದ್ದವು. ಟ್ರಂಪ್ ಅವರ ಮಾಜಿ ಸಲಹೆಗಾರರೊಬ್ಬರು ಎಂಎಜಿಎ ಚಳುವಳಿಯಲ್ಲಿ ಟ್ರಂಪ್ ಅವರು ಬಹುತೇಕ ಮಧ್ಯಮ ಪಾತ್ರ ವಹಿಸಿದ್ದರು ಎಂದಿದ್ದಾರೆ. ಆದರೆ ಈಗ, ಟ್ರಂಪ್ ಅವರ ಪ್ರಬಲ ಬೆಂಬಲಿಗರು ಅಧಿಕಾರಕ್ಕೆ ಏರಿದ್ದಾರೆ.
- ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
Advertisement