ಅಮೆರಿಕಾ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶಗಳು ಪ್ರಕಟವಾಗಲು ಆರಂಭವಾಗುತ್ತಿದ್ದಂತೆ, ಡೊನಾಲ್ಡ್ ಟ್ರಂಪ್ ತಾನು 'ಭರ್ಜರಿ ಗೆಲುವು' ದಾಖಲಿಸಿರುವುದಾಗಿ ಘೋಷಿಸಿಕೊಂಡರು. ಡೊನಾಲ್ಡ್ ಟ್ರಂಪ್ ತಾನು ಎರಡನೇ ಬಾರಿಗೆ ಅಮೆರಿಕಾ ಅಧ್ಯಕ್ಷನಾಗುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದ ಓರ್ವ ವ್ಯಕ್ತಿಗೆ ಪ್ರತ್ಯೇಕವಾಗಿ ಧನ್ಯವಾದಗಳನ್ನು ಅರ್ಪಿಸಿದರು.
ಫ್ಲೋರಿಡಾದ ವೆಸ್ಟ್ ಪಾಮ್ ಬೀಚ್‌ನಲ್ಲಿ ಭಾಷಣ ಮಾಡಿದ ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್ ಅವರನ್ನು ಮನಸಾರೆ ಹೊಗಳಿದರು. ಮಸ್ಕ್ ಅವರನ್ನು ಅಧ್ಯಕ್ಷೀಯ ಚುನಾವಣಾ ಕಣದಲ್ಲಿ ತನ್ನ ಅತಿದೊಡ್ಡ ಬೆಂಬಲಿಗ ಎಂದು ಟ್ರಂಪ್ ಬಣ್ಣಿಸಿದರು. ಮಸ್ಕ್ ಅವರನ್ನು ಓರ್ವ 'ಸ್ಟಾರ್' ಎಂದು ಕರೆದ ಟ್ರಂಪ್, ಟೆಸ್ಲಾ, ಸ್ಪೇಸ್ ಎಕ್ಸ್ ಮತ್ತು ಎಕ್ಸ್ (ಹಿಂದೆ ಟ್ವಿಟರ್) ಸಂಸ್ಥೆಗಳ ಹಿಂದಿನ ಬಿಲಿಯನೇರ್ ಮಸ್ಕ್ ಚುನಾವಣೆಯಲ್ಲಿ ನಿರ್ವಹಿಸಿದ ಪಾತ್ರವನ್ನು ಸ್ಮರಿಸಿದರು.
ಟ್ರಂಪ್ ಅವರ ಶ್ವೇತ ಭವನದ ಪುನರಾಗಮನದಲ್ಲಿ ಎಲಾನ್ ಮಸ್ಕ್ ಅವರ ಕೊಡುಗೆ ಗಣನೀಯವಾಗಿತ್ತು. ಎಲಾನ್ ಮಸ್ಕ್ ಅವರು ಟ್ರಂಪ್ ಚುನಾವಣಾ ಪ್ರಚಾರಕ್ಕೆ ಮಿಲಿಯಾಂತರ ಡಾಲರ್ ಹೂಡಿಕೆ ಮಾಡಿದ್ದು ಮಾತ್ರವಲ್ಲದೆ, ಆಡಳಿತ ನೀತಿಗಳ ಕುರಿತು ಸಲಹೆ ನೀಡಿ, ಮಸ್ಕ್ ಆಲೋಚನೆಗಳನ್ನು ಜನರಿಗೆ ತಲುಪಿಸಲು ನೆರವಾದರು. ಅದರೊಡನೆ, ಮಸ್ಕ್ ತನ್ನ ಮಾಲಿಕತ್ವದ ಸಾಮಾಜಿಕ ಜಾಲತಾಣ ಎಕ್ಸ್ ಅನ್ನು 'ಮೇಕ್ ಅಮೆರಿಕಾ ಗ್ರೇಟ್ ಅಗೇನ್' (ಎಂಎಜಿಎ) ಚಳುವಳಿಯ ಪ್ರಮುಖ ಬೆಂಬಲಿಗನನ್ನಾಗಿಸಿದ್ದರು.
ಎಲಾನ್ ಮಸ್ಕ್ ಅವರು ಡೊನಾಲ್ಡ್ ಟ್ರಂಪ್ ಅವರು ಗೆಲುವು ಸಾಧಿಸುವುದು ಖಚಿತವಾಗುತ್ತಿದ್ದಂತೆ, ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸಂದೇಶ ಹಂಚಿಕೊಂಡಿದ್ದು, ಮುಂದಿನ ಭವಿಷ್ಯ 'ಅದ್ಭುತವಾಗಿರಲಿದೆ' ಎಂದಿದ್ದರು. ಟ್ರಂಪ್ ಪುನರಾಗಮನದ ಬಳಿಕ, ಅಮೆರಿಕಾ ಯಾವ ದಿಕ್ಕಿನತ್ತ ಚಲಿಸಲಿದೆ ಎಂಬ ಕುರಿತು ಮಸ್ಕ್ ಆಶಾಭಾವನೆ ಹೊಂದಿರುವಂತೆ ತೋರುತ್ತಿದ್ದು, ಮುಂದಿನ ಬದಲಾವಣೆಗಳು ಧನಾತ್ಮಕವಾಗಿರಲಿವೆ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ.
ಟ್ರಂಪ್ ಅಧ್ಯಕ್ಷರಾಗಿ ಮರಳಿ ಅಧಿಕಾರ ವಹಿಸಿಕೊಂಡ ಬಳಿಕ, ಎಲಾನ್ ಮಸ್ಕ್ ಅವರ ಪ್ರಭಾವ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ. ಯಾಕೆಂದರೆ, ಈ ಹಿಂದೆ ಟ್ರಂಪ್ ತನ್ನ ಬೆಂಬಲಿಗರು ತನ್ನ ಸಂಪುಟದಲ್ಲಿ 'ಖರ್ಚು ಕಡಿತದ ಕಾರ್ಯದರ್ಶಿ'ಯಂತಹ ಹುದ್ದೆಗಳನ್ನು ಹೊಂದಬಹುದು ಎಂದಿದ್ದರು. ಇದು ಸರ್ಕಾರದ ವೆಚ್ಚವನ್ನು ಕಡಿತಗೊಳಿಸುವಲ್ಲಿ ಎಲಾನ್ ಮಸ್ಕ್ ಕೌಶಲಗಳ ಕುರಿತು ಟ್ರಂಪ್ ಹೊಂದಿರುವ ಭರವಸೆಯನ್ನು ತೋರಿದೆ.
ಎಲಾನ್ ಮಸ್ಕ್ ನೇತೃತ್ವದ ಸ್ಪೇಸ್ ಎಕ್ಸ್ ಸಂಸ್ಥೆ ಈಗಾಗಲೇ ಅಮೆರಿಕಾ ಸರ್ಕಾರದ ಮುಖ್ಯ ರಕ್ಷಣಾ ಗುತ್ತಿಗೆದಾರನಾಗಿದ್ದು, ಅವರು ಇನ್ನಷ್ಟು ಪ್ರಭಾವಿಯಾಗಿ ಕಾನೂನುಗಳನ್ನು ರೂಪಿಸುವವರನ್ನೇ ಮೇಲ್ವಿಚಾರಣೆ ನಡೆಸುವ ಸಾಮರ್ಥ್ಯ ಗಳಿಸಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಸಾಮಾನ್ಯವಾಗಿ ವ್ಯವಹಾರಗಳನ್ನು ನಿಯಂತ್ರಿಸುವ ಅಧಿಕಾರಿಗಳ ಮೇಲೆಯೇ ಮಸ್ಕ್ ಅಸಹಜ ಮಟ್ಟದ ನಿಯಂತ್ರಣ ಹೊಂದುವ ಅಪಾಯಗಳಿವೆ ಎಂದು ಇದು ಸಂದೇಶ ನೀಡುತ್ತಿದೆ.
ಈಗ ಪರಿಸ್ಥಿತಿ ಬಹುತೇಕ ಶಾಂತವಾಗಿದ್ದು, ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಯಾದ ಎಲಾನ್ ಮಸ್ಕ್ ಅವರು ಡೊನಾಲ್ಡ್ ಟ್ರಂಪ್ ಅವರ ಐತಿಹಾಸಿಕ ಪುನರಾಗಮನದ ಹಿಂದೆ ಹೇಗೆ ಕಾರ್ಯ ನಿರ್ವಹಿಸಿದ್ದಾರೆ ಎಂದು ಅವಲೋಕಿಸಲು ಸೂಕ್ತ ಸಮಯವಾಗಿದೆ.
ಎಲಾನ್ ಮಸ್ಕ್ ಹೇಗೆ ತನ್ನ ಶ್ರೀಮಂತಿಕೆ ಮತ್ತು ಪ್ರಭಾವವನ್ನು ಬಳಸಿ ಟ್ರಂಪ್ ಅವರನ್ನು ಮರಳಿ ಅಧಿಕಾರಕ್ಕೆ ಏರಿಸಿದರು? ಅವರು ಹೀಗೆ ಮಾಡುವುದಕ್ಕೆ ಅವರಿಗಿದ್ದ ಸ್ಫೂರ್ತಿ ಏನು?
ಡೆಮಾಕ್ರಟಿಕ್ ಮತ್ತು ರಿಪಬ್ಲಿಕನ್ ಪಕ್ಷಗಳ ಇತಿಹಾಸದಲ್ಲಿ ಬಹಳ ಹಿಂದಿನಿಂದಲೂ ಚುನಾವಣಾ ಪ್ರಚಾರದಲ್ಲಿ ಬಿಲಿಯನೇರ್‌ಗಳು ಹೆಚ್ಚಿನ ಪ್ರಭಾವ ಬೀರುತ್ತಾ ಬಂದಿದ್ದಾರೆ.
ಮೈಕ್ರೋಸಾಫ್ಟ್ ಮುಖ್ಯಸ್ಥ ಬಿಲ್ ಗೇಟ್ಸ್ ಮತ್ತು ನ್ಯೂಯಾರ್ಕ್ ಮಾಜಿ ಮೇಯರ್ ಮೈಕೇಲ್ ಬ್ಲೂಮ್‌ಬರ್ಗ್ ಅವರು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ಬೆಂಬಲಿಸಿದ್ದರು. ಆದರೆ, ನಿಜಕ್ಕೂ ಈ ಚುನಾವಣೆಯ ಮೇಲೆ ಪ್ರಭಾವ ಬೀರಿದ ಅಂಶವೆಂದರೆ ಟ್ರಂಪ್ ಮರಳಿ ಅಧಿಕಾರ ಗಳಿಸಲು ಮಸ್ಕ್ ನೀಡಿದ ಬೆಂಬಲ.
ಫೆಡರಲ್ ಇಲೆಕ್ಷನ್ ಕಮಿಷನ್ನಿನ ಅಂತಿಮ ಮಾಹಿತಿಯ ಪ್ರಕಾರ, ಕಳೆದ ತಿಂಗಳು ಚುನಾವಣಾ ದಿನಕ್ಕೂ ಮುನ್ನ, 2024ರ ಅಧ್ಯಕ್ಷೀಯ ಚುನಾವಣೆಗೆ ಪೂರ್ವಭಾವಿಯಾಗಿ ಮಸ್ಕ್, ಟ್ರಂಪ್ ಮತ್ತು ಇತರ ರಿಪಬ್ಲಿಕನ್ ಪಕ್ಷದ ಸದಸ್ಯರ ಪ್ರಚಾರಕ್ಕೆ ಅಂದಾಜು 132 ಮಿಲಿಯನ್ ಡಾಲರ್ ಕೊಡುಗೆ ನೀಡಿದ್ದಾರೆ.
ಫೆಡರಲ್ ಇಲೆಕ್ಷನ್ ಕಮಿಷನ್ (ಎಫ್ಇಸಿ) ಒಂದು ಸರ್ಕಾರಿ ಸಂಸ್ಥೆಯಾಗಿದ್ದು, ಅಮೆರಿಕಾದ ಚುನಾವಣಾ ಹೂಡಿಕೆಯ ಕುರಿತು ನಿಯಮಗಳನ್ನು ರೂಪಿಸಿ, ನಿಯಮ ಪಾಲನೆಯನ್ನು ನಿರ್ವಹಿಸುತ್ತದೆ. ಆ ಮೂಲಕ ದೇಣಿಗೆಗಳು ಮತ್ತು ಖರ್ಚು ಪಾರದರ್ಶಕವೂ, ನಿಯಮಾನುಸಾರವೂ ಆಗಿರುವಂತೆ ನೋಡಿಕೊಳ್ಳುತ್ತದೆ.
43.6 ಮಿಲಿಯನ್ ಡಾಲರ್ ಮತ್ತು 75 ಮಿಲಿಯನ್ ಡಾಲರ್‌ಗಳ ಎರಡು ಹೂಡಿಕೆಗಳನ್ನು ನೇರವಾಗಿ ಟ್ರಂಪ್ ಅವರ ಚುನಾವಣಾ ಪ್ರಚಾರಕ್ಕೆ ನೇರವಾಗಿ ಒದಗಿಸಲಾಗಿದ್ದು, ಅದರಲ್ಲೂ ಮಸ್ಕ್ ಸ್ಥಾಪಿಸಿರುವ ಅಮೆರಿಕಾ ಪಿಎಸಿಗೆ ಪ್ರಯೋಜನಕಾರಿಯಾಗಿದೆ.
ಅಮೆರಿಕಾ ಪಿಎಸಿ (ಪೊಲಿಟಿಕಲ್ ಆ್ಯಕ್ಷನ್ ಕಮಿಟಿ) ಒಂದು ನಿಧಿ ಸಂಗ್ರಹಣಾ ಸಂಸ್ಥೆಯಾಗಿದ್ದು, ಟ್ರಂಪ್ ಅವರದೂ ಸೇರಿದಂತೆ, ಚುನಾವಣಾ ಪ್ರಚಾರಗಳಿಗೆ ಹಣ ಸಂಗ್ರಹಿಸಿ ಒದಗಿಸುವ ಮೂಲಕ ನೆರವು ನೀಡುತ್ತದೆ. ಪಿಎಸಿ ನಿರ್ದಿಷ್ಟ ಅಭ್ಯರ್ಥಿಗಳು ಮತ್ತು ರಾಜಕೀಯ ಉದ್ದೇಶಗಳನ್ನು ಬೆಂಬಲಿಸಲು ಹಣ ಒದಗಿಸಿ ನೆರವಾಗುತ್ತದೆ.
ಒಂದು ವಿವಾದಾತ್ಮಕ ನಡೆಯಲ್ಲಿ, ಎಲಾನ್ ಮಸ್ಕ್ ಅಮೆರಿಕಾದ ಸ್ವಿಂಗ್ ರಾಜ್ಯಗಳಲ್ಲಿ ನಗದು ಹಣ ನೀಡಲು ಆರಂಭಿಸಿದರು. ಮೊದಲ ಮತ್ತು ಎರಡನೇ ತಿದ್ದುಪಡಿಗಳನ್ನು ಬೆಂಬಲಿಸುವುದಾಗಿ ಅರ್ಜಿ ಸಲ್ಲಿಸಿರುವ ನೋಂದಾಯಿತ ಮತದಾರರಿಗೆ ಈ ಯೋಜನೆ ಪ್ರತಿದಿನವೂ ಒಂದು ಮಿಲಿಯನ್ ಡಾಲರ್ ಗೆಲ್ಲುವ ಅವಕಾಶ ಕಲ್ಪಿಸಿತ್ತು. ಈ ತಿದ್ದುಪಡಿಗಳು ಅಮೆರಿಕಾದಲ್ಲಿ ವಾಕ್ ಸ್ವಾತಂತ್ರ್ಯ ಮತ್ತು ಆಯುಧ ಹೊಂದುವ ಹಕ್ಕನ್ನು ರಕ್ಷಿಸುತ್ತವೆ.
ಅಕ್ಟೋಬರ್ 19ರಂದು ನಡೆದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಮಸ್ಕ್, "ಇಂದಿನಿಂದ, ಚುನಾವಣೆ ಮುಗಿಯುವ ತನಕ, ಪ್ರತಿದಿನವೂ ನಾವು ಮನವಿಗೆ ಸಹಿ ಹಾಕುವ ಅದೃಷ್ಟಶಾಲಿಗಳಿಗೆ ಒಂದು ಮಿಲಿಯನ್ ಡಾಲರ್ ನೀಡಲಿದ್ದೇವೆ" ಎಂದು ಘೋಷಿಸಿದರು.
ಈ ಕ್ರಮದ ವಿರುದ್ಧ, ಪಿಎಸಿ ಚುನಾವಣಾ ಕಾನೂನುಗಳನ್ನು ಮುರಿಯುತ್ತಿದೆ ಎಂದು ಪೆನ್ಸಿಲ್ವೇನಿಯಾ ರಾಜ್ಯದಲ್ಲಿ ಅಮೆರಿಕಾದ ನ್ಯಾಯಾಂಗ ಇಲಾಖೆ ಎಚ್ಚರಿಕೆ ನೀಡಿತ್ತು. ಚುನಾವಣಾ ನಿಯಮಗಳು ಜನರನ್ನು ಮತದಾನಕ್ಕೆ ನೋಂದಾಯಿಸಲು ಹಣ ನೀಡುವುದನ್ನು ಪ್ರತಿಬಂಧಿಸುತ್ತವೆ.
ನವೆಂಬರ್ 4, ಸೋಮವಾರದಂದು ಎಲಾನ್ ಮಸ್ಕ್ ಅವರ ವಕೀಲರು ವಿಜೇತರನ್ನು ಹೇಗೆ ಆರಿಸಲಾಗುತ್ತದೆ ಎಂದು ವಿವರಿಸಿದ ಬಳಿಕ, ನ್ಯಾಯಾಧೀಶರು ಮಸ್ಕ್ ಅವರ ನಗದು ಬಹುಮಾನ ಯೋಜನೆ ಮುಂದುವರಿಯಲು ಅನುಮತಿ ನೀಡಿದರು. ಅದೃಷ್ಟ ಚೀಟಿಯಂತೆ ಯಾರನ್ನೋ ಆರಿಸುವ ಬದಲು, ನಗದು ಬಹುಮಾನಕ್ಕೆ ವಿಜೇತರನ್ನು ಒಂದು ನಿರ್ದಿಷ್ಟ ಮಾನದಂಡದ ಆಧಾರದಲ್ಲಿ ಆರಿಸಲಾಗುತ್ತದೆ. ಈ ವಿಧಾನದ ಮೂಲಕ ಸಹಿ ಹಾಕಿದವರಿಗೆಲ್ಲ ಹಣ ಕೊಡುವ ಬದಲು, ಈ ಯೋಜನೆಯನ್ನು ನಿಯಂತ್ರಿತ ಮತ್ತು ಧನಾತ್ಮಕ ರೀತಿಯಲ್ಲಿ ನಡೆಸಲಾಗುತ್ತದೆ ಎಂದು ಮಸ್ಕ್ ವಕೀಲರು ವಿವರಿಸಿದ್ದರು. ಈ ವಿಧಾನವನ್ನು ನ್ಯಾಯಾಲಯ ಒಪ್ಪಿಕೊಂಡು, ಮಸ್ಕ್ ನೇತೃತ್ವದ ನಗದು ಬಹುಮಾನ ಯೋಜನೆ ಮುಂದುವರಿಸಲು ಹಸಿರು ನಿಶಾನೆ ನೀಡಿತು.
ಆದರೆ ನ್ಯಾಯಾಲಯದ ಈ ತೀರ್ಮಾನದ ಬಳಿಕ, ಮಸ್ಕ್ ಈಗ ಒಂದು ಕ್ಲಾಸ್ ಆ್ಯಕ್ಷನ್ ಲಾಸುಟ್ (ಒಂದೇ ರೀತಿಯ ದೂರು ಹೊಂದಿರುವ ಗುಂಪು ದಾಖಲಿಸಿರುವ ಪ್ರಕರಣ) ಅನ್ನು ಎದುರಿಸುತ್ತಿದ್ದಾರೆ. ಒಂದಷ್ಟು ಮತದಾರರು, ನಾವು ನಿಜವಾಗಿಯೂ 1 ಮಿಲಿಯನ್ ಡಾಲರ್ ಗೆಲ್ಲುವ ಅವಕಾಶವಿದೆ ಎಂದು ಭಾವಿಸುವಂತೆ ಮಸ್ಕ್ ನಮ್ಮನ್ನು ತಪ್ಪು ದಾರಿಗೆಳೆದು ಸಹಿ ಹಾಕಿಸಿದ್ದಾರೆ ಎಂದು ಪ್ರಕರಣ ದಾಖಲಿಸಿದ್ದಾರೆ.
ಅಲ್ ಜಜೀರಾ ವರದಿಯ ಪ್ರಕಾರ, ಮಸ್ಕ್ ವಿರುದ್ಧ ಮಂಗಳವಾರ ಅರಿಜೋನಾ ನಿವಾಸಿ ಜಾಕೆಲಿನ್ ಮೆಕ್ಅಫರ್ಟಿ ಎಂಬವರು ಪ್ರಕರಣ ದಾಖಲಿಸಿದ್ದು, ಮಸ್ಕ್ ನಗದು ಬಹುಮಾನ ಯೋಜನೆಯನ್ನು ಜನರ ವೈಯಕ್ತಿಕ ಮಾಹಿತಿ ಕಲೆಹಾಕಲು ಮತ್ತು ಎಕ್ಸ್‌ನ ಬಳಕೆ ಹೆಚ್ಚಿಸಲು ಕೈಗೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಬಹುಶಃ ಈ ಯೋಜನೆಗೆ ಸಹಿ ಹಾಕಿದವರು ಅವರ ವೈಯಕ್ತಿಕ ಮಾಹಿತಿ, ಸಾಮಾಜಿಕ ಜಾಲತಾಣ ಖಾತೆಗಳ ಮಾಹಿತಿ ಒದಗಿಸಬೇಕಾಗಿದ್ದುದೂ ಇದಕ್ಕೆ ಕಾರಣವಾಗಿರಬಹುದು. ಈ ಮಾಹಿತಿಗಳನ್ನು ಕಲೆಹಾಕಿದ ಮಸ್ಕ್ ತಂಡ, ಅವುಗಳನ್ನು ಬಳಸಿ ಎಕ್ಸ್‌ನಲ್ಲಿ ಹೆಚ್ಚು ಜನರನ್ನು ತಲುಪಲು ಬಳಸಿ, ಜಾಲತಾಣದ ಬಳಕೆ ಮತ್ತು ವ್ಯಾಪ್ತಿಯನ್ನು ಹೆಚ್ಚಿಸಲು ಬಳಸಿರುವ ಸಾಧ್ಯತೆಗಳಿವೆ. ಭಾಗವಹಿಸುವವರ ಮಾಹಿತಿ ಕಲೆಹಾಕುವುದರ ಜೊತೆಗೆ, ಈ ಕಾರ್ಯತಂತ್ರ ಎಕ್ಸ್ ಅನ್ನು ಪ್ರಚುರಪಡಿಸಲೂ ನೆರವಾಗಲಿದೆ.
ಫೆಡರಲ್ ಇಲೆಕ್ಷನ್ ಕಮಿಷನ್ (ಎಫ್ಇಸಿ) ದಾಖಲೆಗಳ ಪ್ರಕಾರ, ಮಸ್ಕ್ 10 ಮಿಲಿಯನ್ ಡಾಲರ್ ಮೊತ್ತವನ್ನು ಸೆನೇಟ್ ಲೀಡರ್ಶಿಪ್ ಫಂಡ್ ಎಂಬ ಪೊಲಿಟಿಕಲ್ ಆ್ಯಕ್ಷನ್ ಕಮಿಟಿಗೆ (ಪಿಎಸಿ) ಒದಗಿಸಿದ್ದಾರೆ. ಈ ಪಿಎಸಿ ಸೆನೇಟ್‌ನಲ್ಲಿ ರಿಪಬ್ಲಿಕನ್ ಪಕ್ಷದ ಬಹುಮತವನ್ನು ರಕ್ಷಿಸುವ ಗುರಿ ಹೊಂದಿದೆ. ಎಫ್ಇಸಿ ದಾಖಲೆಗಳು ರಾಜಕೀಯ ಪಕ್ಷಗಳು ಮತ್ತು ಸಮಿತಿಗಳಿಗೆ ನೀಡಲಾಗಿರುವ ದೇಣಿಗೆಯ ಮಾಹಿತಿ ಒದಗಿಸಿ, ರಾಜಕೀಯ ಚಟುವಟಿಕೆಗಳಿಗೆ ಯಾರು ಹಣ ಒದಗಿಸುತ್ತಿದ್ದಾರೆ, ಎಷ್ಟು ಒದಗಿಸುತ್ತಿದ್ದಾರೆ ಎಂದು ತಿಳಿಸುತ್ತವೆ.
ಎಲಾನ್ ಮಸ್ಕ್ ರಿಪಬ್ಲಿಕನ್ ಅಭ್ಯರ್ಥಿಗಳಿಗೆ ಇನ್ನೂ ಹೆಚ್ಚುವರಿ ದೇಣಿಗೆ ನೀಡಿದ್ದಾರೆ ಎನ್ನಲಾಗಿದೆ.
ಈಗ ಅಸಹಜ ಎಂಬಂತೆ ಭಾಸವಾದರೂ, ಒಂದು ಕಾಲದಲ್ಲಿ ಎಲಾನ್ ಮಸ್ಕ್ ಅವರನ್ನು ಉದಾರವಾದಿ, ಮತ್ತು ಮರುಬಳಕೆ ಮಾಡಬಲ್ಲ ಇಂಧನದ ಬೆಂಬಲಿಗ ಎಂದು ಗುರುತಿಸಲ್ಪಟ್ಟಿದ್ದರು! 2020ರ ಚುನಾವಣೆಯಲ್ಲಿ ತಾನು ಡೆಮಾಕ್ರಟಿಕ್ ಪಕ್ಷದ ಜೋ ಬೈಡನ್ ಅವರಿಗೆ ಮತ ಚಲಾಯಿಸಿದ್ದಾಗಿಯೂ ಮಸ್ಕ್ ಹೇಳಿದ್ದರು.
2022ರಲ್ಲಿ ಟ್ವಿಟರ್ ಅನ್ನು ಮಸ್ಕ್ ಖರೀದಿಸಿದ ಬಳಿಕ, ಅದರ ಹೆಸರು ಎಕ್ಸ್ ಎಂದು ಬದಲಾಗಿ, ಅದರ ಚಿತ್ರಣವೂ ಬದಲಾಯಿತು.
ಟ್ವಿಟರ್ ಅನ್ನು 'ರಾಜಕೀಯವಾಗಿ ತಟಸ್ಥ' ವೇದಿಕೆಯಾಗಿ ಮಾಡುತ್ತೇನೆ ಎಂದು ಮಸ್ಕ್ ಭರವಸೆ ನೀಡಿದ್ದರು. ಬಳಿಕ ಸುಳ್ಳು ಮಾಹಿತಿಗಳನ್ನು ಪತ್ತೆಹಚ್ಚಲು ನೇಮಕಗೊಂಡಿದ್ದ ಸಿಬ್ಬಂದಿಗಳನ್ನು ಮಸ್ಕ್ ಬಿಡುಗಡೆಗೊಳಿಸಿದ್ದರು.
ಬಿಳಿಯ ರಾಷ್ಟ್ರೀಯವಾದ (ವೈಟ್ ನ್ಯಾಷನಲಿಸ್ಟ್), ಮತ್ತು ನವ ನಾಜಿಸಂಗೆ ಸಂಬಂಧಿಸಿದ ಟ್ವಿಟರ್ ಖಾತೆಗಳೂ ಸೇರಿದಂತೆ, ವಜಾಗೊಂಡಿದ್ದ 62,000ಕ್ಕೂ ಹೆಚ್ಚು ಖಾತೆಗಳನ್ನು ಮಸ್ಕ್ ಮರಳಿ ಚಾಲ್ತಿಗೊಳಿಸಿದ್ದರು.
ವೈಟ್ ನ್ಯಾಷನಲಿಸ್ಟ್ ಅಥವಾ ನವ ನಾಜಿಸಂ ಎನ್ನುವುದು ವರ್ಣ ಮತ್ತು ಸಮುದಾಯದ ಆಧಾರದಲ್ಲಿ ಯಹೂದಿಗಳು ಮತ್ತು ಇತರ ಅಲ್ಪಸಂಖ್ಯಾತ ಜನಾಂಗಗಳ ವಿರುದ್ಧ ದ್ವೇಷ, ಜನಾಂಗೀಯವಾದವನ್ನು ಪ್ರಚುರಪಡಿಸುವುದಾಗಿದೆ.
ಮುಖ್ಯವಾಗಿ, ಮಸ್ಕ್ ಟ್ರಂಪ್ ಟ್ವಿಟರ್ ಖಾತೆಯ ಮೇಲಿದ್ದ ನಿರ್ಬಂಧವನ್ನು ತೆಗೆದುಹಾಕಿದರು. 2021ರಲ್ಲಿ ಯುಎಸ್ ಕ್ಯಾಪಿಟಲ್ ಮೇಲೆ ನಡೆದ ದಾಳಿಯ ಮೇಲೆ ಟ್ರಂಪ್ ಪ್ರಭಾವ ಬೀರಿದ್ದರು ಎಂಬ ಆರೋಪದಡಿ ಅವರ ಖಾತೆಯನ್ನು ನಿರ್ಬಂಧಿಸಲಾಗಿತ್ತು.
ಚುನಾವಣೆಗಳು ಸಮೀಪಿಸಿದಂತೆ, ಟೀಕಾಕಾರರು ಎಕ್ಸ್ ಈಗ ಬಹುತೇಕ ರಿಪಬ್ಲಿಕನ್ ಪಕ್ಷದ ಎಂಎಜಿಎ ಧ್ಯೇಯವನ್ನು ಪ್ರಚುರಪಡಿಸುವ ತಾಣವಾಗಿದೆ ಎಂದು ಆರೋಪಿಸಿದ್ದರು.
ಎಕ್ಸ್ ಮಾಲೀಕರಾದ ಮಸ್ಕ್ ವಿರುದ್ಧ ಬಹಿರಂಗವಾಗಿ ಟ್ರಂಪ್ ಅವರನ್ನು ಬೆಂಬಲಿಸುತ್ತಿದ್ದಾರೆ, ತನ್ನ ಎಕ್ಸ್ ಖಾತೆ ಹೊಂದಿರುವ 200 ಮಿಲಿಯನ್ ಹಿಂಬಾಲಕರನ್ನು ತಪ್ಪುದಾರಿಗೆಳೆಯುತ್ತಿದ್ದಾರೆ ಎಂದು ಆರೋಪಗಳು ಕೇಳಿಬಂದವು.
ಇದಕ್ಕೆ ಒಂದು ಉದಾಹರಣೆಯಾಗಿ, ಮಸ್ಕ್ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರ ನಕಲಿ ವೀಡಿಯೋ ಒಂದನ್ನು ಹಂಚಿಕೊಂಡಿದ್ದು, ಅದರಲ್ಲಿ "ನಾನು ಇಲ್ಲಿರುವ ಅತ್ಯುನ್ನತ ಡೈವರ್ಸಿಟಿ ಹೈರ್ ಆಗಿರುವುದರಿಂದಲೇ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದೇನೆ" ಎಂದು ಹೇಳಿರುವಂತೆ ಎಡಿಟ್ ಮಾಡಲಾಗಿತ್ತು. ಮಸ್ಕ್ ಜುಲೈ ತಿಂಗಳಲ್ಲಿ ಆ ವೀಡಿಯೋವನ್ನು ನಗುವ ಎಮೋಜಿಯೊಡನೆ ಹಂಚಿಕೊಂಡಿದ್ದರು. ಈ ವೀಡಿಯೋ 136 ಮಿಲಿಯನ್ ವೀಕ್ಷಣೆ ಕಂಡಿದ್ದು, ಅದು ಸುಳ್ಳು ವೀಡಿಯೋ ಎಂದೂ ದಾಖಲಿಸಲ್ಪಟ್ಟಿಲ್ಲ.
'ಡೈವರ್ಸಿಟಿ ಹೈರ್' ಎಂದರೆ, ಹಿಂದಿನಿಂದ ವೈವಿಧ್ಯತೆ ಹೆಚ್ಚಿಸುವ ಸಲುವಾಗಿ ಯಾರನ್ನಾದರೂ ಆರಿಸುವುದಾಗಿದೆ.
ಅಕ್ರಮ ವಲಸಿಗರು ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಮತ ಚಲಾಯಿಸಿದ್ದಾರೆ ಎಂಬ ಸುಳ್ಳು ಸುದ್ದಿಗಳು ಎಕ್ಸ್ ಆದ್ಯಂತ ಹರಿದಾಡಿದ್ದವು. ಈ ವಿಚಾರ ವ್ಯಾಪಕವಾಗಿ ಹಂಚಲ್ಪಟ್ಟಿತಾದರೂ, ಅದು ನಿಜವಾಗಿರಲಿಲ್ಲ. ಅಮೆರಿಕಾದಲ್ಲಿ ಕೇವಲ ಅಮೆರಿಕನ್ ಪ್ರಜೆಗಳು ಮಾತ್ರವೇ ಮತದಾನ ಮಾಡಬಹುದು. ಅಮೆರಿಕಾದ ನಾಗರಿಕರಲ್ಲದವರು, ಅವರ ವಲಸೆಯ ಸ್ಥಿತಿಗತಿ ಏನೇ ಆಗಿದ್ದರೂ, ಅವರಿಗೆ ಮತದಾನ ಮಾಡುವ ಹಕ್ಕಿಲ್ಲ.
ಸಂಪ್ರದಾಯವಾದಿ ಮತ್ತು ಉದಾರವಾದಿ ಗುಂಪುಗಳೆರಡೂ ನಡೆಸಿರುವ ಅಧ್ಯಯನಗಳು ಇಂತಹ ಅಪರಾದ ಬಹಳ ಅಪರೂಪ ಎಂದು ತೋರಿಸಿವೆ. ಈ ನಿಯಮದ ಉಲ್ಲಂಘನೆಗೆ ಒಂದು ವರ್ಷ ಜೈಲು ಶಿಕ್ಷೆ, ದಂಡ ಅಥವಾ ದೇಶದಿಂದ ಗಡೀಪಾರಿನಂತಹ ಶಿಕ್ಷೆ ವಿಧಿಸಬಹುದು.
ಎಕ್ಸ್‌ನಲ್ಲಿ ಒಂದು ಪಿತೂರಿ ಸಿದ್ಧಾಂತ ಹಂಚಲ್ಪಟ್ಟಿದೆ. ಅದನ್ನು ಸ್ವತಃ ಮಸ್ಕ್ ಪ್ರಚುರಪಡಿಸಿದ್ದು, ಡೆಮಾಕ್ರಟಿಕ್ ಸದಸ್ಯರು ದಾಖಲಾತಿ ಹೊಂದಿಲ್ಲದ ವಲಸಿಗರನ್ನು ಕರೆತಂದು, ಅವರಿಗೆ ಆಶ್ರಯ ನೀಡಿ, ಭವಿಷ್ಯದ ಚುನಾವಣೆಗಳಲ್ಲಿ ಮತಗಳನ್ನು ಹೆಚ್ಚಿಸಿಕೊಳ್ಳುವ ಗುರಿ ಹೊಂದಿದೆ ಎಂದು ಆ ವಾದ ಪ್ರತಿಪಾದಿಸಿದೆ. ಹಾಗೇನಾದರೂ ಆದರೆ, ಅಮೆರಿಕಾ ಭವಿಷ್ಯದಲ್ಲಿ ಸಂಪೂರ್ಣವಾಗಿ ಏಕಪಕ್ಷೀಯವಾದ, ಸಮಾಜವಾದಿ ರಾಷ್ಟ್ರವಾದೀತು ಎಂದು ಬರೆದುಕೊಂಡಿದ್ದರು.
ಸೆಪ್ಟೆಂಬರ್ ತಿಂಗಳಲ್ಲಿ ಟ್ರಂಪ್ ಮತ್ತು ಕಮಲಾ ಹ್ಯಾರಿಸ್ ನಡುವಿನ ಚರ್ಚೆಯ ವೇಳೆ, ಟ್ರಂಪ್ ಹೈಟಿಯಿಂದ ಬಂದು, ಓಹಿಯೋದಲ್ಲಿ ನೆಲೆಸಿರುವ ವಲಸಿಗರು (ಹೈಟಿ ಎನ್ನುವುದು ಕೆರಿಬಿಯನ್ ದ್ವೀಪಗಳ ಒಂದು ದೇಶ) ಬೆಕ್ಕು ಮತ್ತು ನಾಯಿಗಳನ್ನೂ ತಿನ್ನುತ್ತಾರೆ ಎಂದು ತಪ್ಪಾಗಿ ಹೇಳಿದ್ದರು. ಆ ಬಳಿಕ ಮಸ್ಕ್ ಬೆಕ್ಕು ಒಂದು ಭಿತ್ತಿಪತ್ರವನ್ನು ಹಿಡಿದಿರುವ ಚಿತ್ರವನ್ನು ಹಂಚಿಕೊಂಡಿದ್ದು, ಅದರಲ್ಲಿ 'ಕಮಲಾ ನನ್ನನ್ನು ದ್ವೇಷಿಸುತ್ತಾರೆ' ಎಂದು ಬರೆದಿತ್ತು.
ಮಸ್ಕ್ ತಾನು ವಾಕ್ ಸ್ವಾತಂತ್ರ್ಯದ ಬೆಂಬಲಿಗ ಎಂದಿದ್ದರೂ, ಅವರು ಪತ್ರಕರ್ತ ಕೆನ್ ಕ್ಲಿಪ್ಪನ್‌ಸ್ಟೀನ್ ಅವರ ಲೇಖನದ ಆಧಾರದಲ್ಲಿ ಅವರ ಖಾತೆ, ಒಂದಷ್ಟು ಇತರ ಖಾತೆಗಳನ್ನು ನಿರ್ಬಂಧಿಸಿದ್ದಾರೆ ಎನ್ನಲಾಗಿದೆ. ಕ್ಲಿಪ್ಪನ್‌ಸ್ಟೀನ್ ಲೇಖನ, ಸೋರಿಕೆಯಾದ ದಾಖಲೆಗಳ ಆಧಾರದಲ್ಲಿ, ರಿಪಬ್ಲಿಕನ್ ಪಕ್ಷದ ಉಪಾಧ್ಯಕ್ಷ ಅಭ್ಯರ್ಥಿ ಜೆಡಿ ವ್ಯಾನ್ಸ್ ಅವರ ದೌರ್ಬಲ್ಯದ ಕುರಿತು ಚರ್ಚಿಸಿತ್ತು ಎನ್ನಲಾಗಿದೆ.
ಪತ್ರಕರ್ತರ ಖಾತೆಗಳನ್ನು ಬಳಿಕ ಮರುಸ್ಥಾಪಿಸಲಾಯಿತಾದರೂ, ಅವರ ಲೇಖನಗಳ ಕೊಂಡಿಗಳನ್ನು ಇನ್ನೂ ನಿರ್ಬಂಧಿಸಲಾಗಿದೆ.
ಪ್ಯೂ ರಿಸರ್ಚ್ ಸೆಂಟರ್ ಮಾರ್ಚ್ ತಿಂಗಳಲ್ಲಿ ನಡೆಸಿರುವ ಸಮೀಕ್ಷೆಯೊಂದರ ಪ್ರಕಾರ, ರಿಪಬ್ಲಿಕನ್ ಬೆಂಬಲಿಗರ ನಡುವೆ ಟ್ವಿಟರ್ ಹೆಚ್ಚು ಜನಪ್ರಿಯವಾಗಿದೆ. 53% ಜನರು ಟ್ವಿಟರ್ ಪ್ರಜಾಪ್ರಭುತ್ವಕ್ಕೆ ಪೂರಕ ಎಂದು ಭಾವಿಸಿದ್ದು, ಅದು 2021ರಲ್ಲಿ ಇದ್ದ 17%ಗೆ ಹೋಲಿಸಿದರೆ ಬಹುತೇಕ ಮೂರು ಪಟ್ಟು ಹೆಚ್ಚಳ ಕಂಡಿದೆ.
ಟ್ರಂಪ್ ಮತ್ತು ಮಸ್ಕ್ ಇಬ್ಬರ ಅಭಿಮಾನಿಗಳ ಬೆಂಬಲ ಅವರಿಬ್ಬರ ಸಹಯೋಗವನ್ನು ಬಲಪಡಿಸಲು ನೆರವಾಗಿದೆ.
ತೀರಾ ಇತ್ತೀಚಿನ ತನಕವೂ ಟ್ರಂಪ್ ಮತ್ತು ಮಸ್ಕ್ ಮಧ್ಯೆ ಏನೂ ಸರಿ ಇರಲಿಲ್ಲ. 2016ರ ಚುನಾವಣೆಯಲ್ಲಿ ಮಾಸ್ಕ್ ತನ್ನನ್ನು ಬೆಂಬಲಿಸಿರುವುದಾಗಿ ಸುಳ್ಳು ಹೇಳಿದ್ದಾರೆ ಎಂದು 2022ರ ಭಾಷಣವೊಂದರಲ್ಲಿ ಪ್ರಸ್ತಾಪಿಸಿದ ಟ್ರಂಪ್, ಆತನನ್ನು ಬೈದುಕೊಂಡಿದ್ದರು. ಇದಕ್ಕೆ ಟ್ವಿಟರ್ ಮೂಲಕ ಪ್ರತಿಕ್ರಿಯೆ ನೀಡಿದ ಮಸ್ಕ್, "ಈಗ ಟ್ರಂಪ್ ಅವರಿಗೆ ಸಾರ್ವಜನಿಕ ಜೀವನದಿಂದ ನಿವೃತ್ತರಾಗಿ, ಶಾಂತಿಯುತ ಜೀವನ ನಡೆಸುವ ಸಮಯ ಬಂದಿದೆ" ಎಂದಿದ್ದರು.
ಅದಾದ ಕೇವಲ ಎರಡು ವರ್ಷಗಳ ಬಳಿಕ, ಎಲಾನ್ ಮಸ್ಕ್ ಕಪ್ಪು ಎಂಎಜಿಎ ಟೋಪಿ ಧರಿಸಿ, ಪೆನ್ಸಿಲ್ವೇನಿಯಾದ ಬಟ್ಲರ್‌ನಲ್ಲಿ ನಡೆದ ಸಮಾವೇಶದಲ್ಲಿ ಟ್ರಂಪ್ ಹಿಂದೆ ನಿಂತಿದ್ದರು.
ಎಲಾನ್ ಮಸ್ಕ್ ಅವರು ಹೆಚ್ಚು ಹೆಚ್ಚು ಸಂಪ್ರದಾಯವಾದಿ ಧೋರಣೆಯತ್ತ ಹೊರಳಿದ್ದಕ್ಕೆ (ಸರ್ಕಾರಿ ಮಧ್ಯಪ್ರವೇಶವನ್ನು ಕಡಿಮೆಗೊಳಿಸುವ ಧೋರಣೆ), ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ ಟೆಸ್ಲಾ ಕಾರ್ಖಾನೆಗಳನ್ನು ಬಲವಂತವಾಗಿ ಮುಚ್ಚಿಸಿದ್ದೂ ಕಾರಣ ಎನ್ನಲಾಗಿದೆ. 2020ರಲ್ಲಿ ಮಸ್ಕ್ ಸರ್ಕಾರಿ ಆದೇಶವನ್ನು ಬದಿಗೊತ್ತಿ, ಕ್ಯಾಲಿಫೋರ್ನಿಯಾದ ಫ್ರಿಮೊಂಟ್‌ನಲ್ಲಿದ್ದ ಕಾರ್ಖಾನೆಯನ್ನು ಪುನರಾರಂಭಿಸಲು ನಿರ್ಧರಿಸಿದರು. ಇದಕ್ಕಾಗಿ ನಾನು ಬಂಧನಕ್ಕೊಳಗಾಗಲೂ ಸಿದ್ಧ ಎಂದು ಮಸ್ಕ್ ಹೇಳಿದ್ದರು. ಈ ನಡೆಯನ್ನು ಅತಿಯಾದ ಸರ್ಕಾರಿ ನಿಯಂತ್ರಣದ ವಿರೋಧಿ ನಿಲುವು ಎಂದು ಪರಿಗಣಿಸಲಾಗಿದೆ.
ಮಸ್ಕ್ ಅವರು ಸಂಪ್ರದಾಯವಾದಿ ಧೋರಣೆ ಹೊಂದುತ್ತಿರುವುದಕ್ಕೆ ಅವರು ಅರ್ಜೆಂಟೀನಾ ಅಧ್ಯಕ್ಷ ಜಾವೀರ್ ಮಿಲೇ ಅವರಂತಹ ನಿಯಂತ್ರಣಗಳ ವಿರೋಧಿ ನಾಯಕರೊಡನೆ ಒಡನಾಟ ಇಟ್ಟುಕೊಂಡಿರುವುದು ಸಾಕ್ಷಿಯಾಗಿದೆ. ಮಸ್ಕ್ ಈಗಾಗಲೇ ಜಗತ್ತಿನ ಸಂಪ್ರದಾಯವಾದಿ ನಾಯಕರುಗಳಲ್ಲಿ ಮುಖ್ಯರಾದ ಇಟಲಿಯ ಜಾರ್ಜಿಯಾ ಮೆಲೊನಿ, ಭಾರತದ ನರೇಂದ್ರ ಮೋದಿ, ಹಾಗೂ ಇಸ್ರೇಲಿನ ಬೆಂಜಮಿನ್ ನೆತನ್ಯಾಹು ಅವರೊಡನೆ ಸಂಪರ್ಕ ಹೊಂದಿದ್ದಾರೆ. ಇದು ಜಾಗತಿಕ ಮಟ್ಟದಲ್ಲಿ ಮಸ್ಕ್ ಬಲಪಂಥೀಯ ಧೋರಣೆಯೊಡನೆ ಬಾಂಧವ್ಯ ಹೊಂದುತ್ತಿರುವುದನ್ನು ತೋರುತ್ತಿದೆ.
ಕೆಲವು ಮಾಧ್ಯಮ ವರದಿಗಳು, ಮಸ್ಕ್ ನಿಲುವಿನಲ್ಲಿ ಇಂತಹ ಬದಲಾವಣೆ ಬರಲು ಆತನ ಓರ್ವ ಮಗ ತೃತೀಯ ಲಿಂಗಿಯಾಗಿ ಪರಿವರ್ತನೆ ಹೊಂದಿದ್ದೇ ಕಾರಣವಾಗಿರಬಹುದು ಎಂದಿವೆ. ಮಸ್ಕ್ ಮಗ ತನ್ನನ್ನು ಸ್ತ್ರೀ ಎಂದು ಘೋಷಿಸಿಕೊಂಡಿದ್ದು, ತಂದೆಯಿಂದ ದೂರಾಗಿ, ತನ್ನ ಕೊನೆಯ ಹೆಸರನ್ನು ಮಸ್ಕ್ ಬದಲು ವಿಲ್ಸನ್ ಎಂದು ಬದಲಾಯಿಸಿದ್ದ.
ಸಂದರ್ಶನವೊಂದರಲ್ಲಿ ಮಾತನಾಡಿದ್ದ ಎಲಾನ್ ಮಸ್ಕ್, ಆತನ ಚಿಕಿತ್ಸೆಗೆ ತನ್ನಿಂದ ಮೋಸದಿಂದ ಸಹಿ ಹಾಕಿಸಲಾಯಿತು ಎಂದಿದ್ದರು. ಈ ಘಟನೆಯ ಬಳಿಕ, ಮಸ್ಕ್ 'ವೋಕ್ ಮೈಂಡ್ ವೈರಸ್' ವಿರುದ್ಧ ಸಂಸ್ಥೆಯೊಂದನ್ನು ಸ್ಥಾಪಿಸಿದ್ದರು.
ಮಸ್ಕ್ ವಿವರಿಸಿದ್ದ ವೈದ್ಯಕೀಯ ಚಿಕಿತ್ಸೆ ಆತನ ತೃತೀಯ ಲಿಂಗಿ ಮಗ ಮಹಿಳೆಯಾಗಿ ಗುರುತಿಸಿಕೊಳ್ಳಲು ನೆರವಾಗುವಂತಹ ಬದಲಾವಣೆಗಳನ್ನು ತರುವಂತದ್ದಾಗಿತ್ತು. ಇಂತಹ ಚಿಕಿತ್ಸೆ ಆಪ್ತ ಸಮಾಲೋಚನೆ, ಹಾರ್ಮೋನ್ ಚಿಕಿತ್ಸೆ, ಮತ್ತು ಲಿಂಗ ಗುರುತಿಸುವಿಕೆಗೆ ನೆರವಾಗುವ ಇತರ ಹಂತಗಳನ್ನು ಹೊಂದಿರುತ್ತದೆ. ಮಸ್ಕ್ ಹೇಳಿಕೆಯ ಪ್ರಕಾರ, ಅವರಿಗೆ ಈ ಚಿಕಿತ್ಸೆಯ ಕುರಿತು ಸಂಪೂರ್ಣ ಅರಿವಿರದೆ ಅಥವಾ ಮನಸ್ಸಿಲ್ಲದೆ ಸಹಿ ಹಾಕುವಂತಾಗಿತ್ತು.
ಜೋರ್ಡಾನ್ ಪೀಟರ್ಸನ್ ಎಂಬ ಕೆನಡಿಯನ್ ಮನಶ್ಶಾಸ್ತ್ರಜ್ಞ, ಉಪನ್ಯಾಸಕ ಮತ್ತು ಲೇಖಕ ಸಂಸ್ಕೃತಿ, ರಾಜಕೀಯ, ಮತ್ತು ವೈಯಕ್ತಿಕ ಜವಾಬ್ದಾರಿಗಳ ಕುರಿತ ತನ್ನ ದೃಷ್ಟಿಕೋನದಿಂದ ಹೆಸರಾಗಿದ್ದಾರೆ. ಅವರು ಕೆನಡಾದಲ್ಲಿರುವ ಕೆಲವು ನಿರ್ದಿಷ್ಟ ಲಿಂಗ ಗುರುತಿಸುವಿಕೆ ನೀತಿಗಳ ವಿರುದ್ಧ ಧ್ವನಿ ಎತ್ತಿ ಹೆಚ್ಚಿನ ಗಮನ ಸೆಳೆದಿದ್ದಾರೆ. ಅವರು ಇಂತಹ ನೀತಿಗಳು ವಾಕ್ ಸ್ವಾತಂತ್ರ್ಯ ವಿರೋಧಿ ಎಂದಿದ್ದಾರೆ.
2021ರಲ್ಲಿ, ಮಸ್ಕ್ ಕ್ಯಾಲಿಫೋರ್ನಿಯಾದ ಸಿಲಿಕಾನ್ ವ್ಯಾಲಿಯ ಪಾಲೋ ಆಲ್ಟೋದಲ್ಲಿದ್ದ ಟೆಸ್ಲಾ ಮುಖ್ಯ ಕಚೇರಿಯನ್ನು ಟೆಕ್ಸಾಸ್ ರಾಜ್ಯದ ಆಸ್ಟಿನ್‌ಗೆ ಸ್ಥಳಾಂತರಿಸಿದರು. ಇದೇ ವೇಳೆ, ಮಸ್ಕ್ ತನ್ನ ಸ್ವಂತ ನಿವಾಸವನ್ನೂ ಕ್ಯಾಲಿಫೋರ್ನಿಯಾದಿಂದ ಟೆಕ್ಸಾಸ್‌ಗೆ ಬದಲಾಯಿಸಿದರು.
ಜುಲೈ ತಿಂಗಳಲ್ಲಿ ಮಸ್ಕ್ ತನ್ನ ಸಂಸ್ಥೆಗಳಾದ ಎಕ್ಸ್ ಮತ್ತು ಸ್ಪೇಸ್ ಎಕ್ಸ್‌ಗಳನ್ನೂ ಕ್ಯಾಲಿಫೋರ್ನಿಯಾದಿಂದ ಟೆಕ್ಸಾಸ್‌ಗೆ ಸ್ಥಳಾಂತರಿಸುವ ಆಲೋಚನೆಗಳನ್ನು ಘೋಷಿಸಿದ್ದರು. ಕ್ಯಾಲಿಫೋರ್ನಿಯಾದ ಇತ್ತೀಚಿನ ಒಂದು ಕಾನೂನು ವಿದ್ಯಾರ್ಥಿಗಳು ತಮ್ಮ ಲಿಂಗ ಗುರುತನ್ನು ಬದಲಾವಣೆ ಮಾಡಿಕೊಂಡರೆ ಶಿಕ್ಷಕರು ಅದನ್ನು ಪೋಷಕರ ಗಮನಕ್ಕೆ ತರುವ ಅಗತ್ಯವಿಲ್ಲ ಎಂದಿತ್ತು. ಮಸ್ಕ್ ನಿರ್ಧಾರ ಈ ನೀತಿಯ ಕುರಿತು ತನಗೆ ಸಹಮತವಿಲ್ಲ ಎಂದು ತೋರಿಸಿದೆ. ಇಂತಹ ಸೂಕ್ಷ್ಮ ವಿಚಾರಗಳ ಬಗ್ಗೆ ಪೋಷಕರಿಗೆ ಮಾಹಿತಿ ನೀಡಲೇಬೇಕು ಎನ್ನುವುದು ಮಸ್ಕ್ ನಿಲುವಾಗಿದೆ. ಕ್ಯಾಲಿಫೋರ್ನಿಯಾದಿಂದ ಸ್ಥಳಾಂತರಗೊಳ್ಳುವ ಮೂಲಕ ಮಸ್ಕ್ ಇಂತಹ ವಿಚಾರಗಳಲ್ಲಿ ಪೋಷಕರ ಒಳಗೊಳ್ಳುವಿಕೆ ಬಹಳ ಮುಖ್ಯ ಎಂಬ ತನ್ನ ನಿಲುವನ್ನು ಪ್ರದರ್ಶಿಸಿದ್ದಾರೆ.
ಮೇಲ್ನೋಟಕ್ಕೆ ಬಹಳ ಧೈರ್ಯಶಾಲಿಗಳು ಎನಿಸುವ, ಇತರರಿಗಿಂತ ಭಿನ್ನವಾಗಿ ತೋರುವ ಎಲಾನ್ ಮಸ್ಕ್ ಮತ್ತು ಡೊನಾಲ್ಡ್ ಟ್ರಂಪ್ ತಾವು ಹೊರಗುಳಿದಿದ್ದೇವೆ ಅಥವಾ ತಪ್ಪು ತಿಳಿಯಲ್ಪಟ್ಟಿದ್ದೇವೆ ಎಂಬ ಭಾವನೆ ಹೊಂದಿರುವ ಅಮೆರಿಕನ್ ಪುರುಷರೊಡನೆ ಸಂಪರ್ಕ ಹೊಂದಿದ್ದಾರೆ ಎನ್ನಲಾಗಿದೆ. ಮೀಟೂ, ಟಾಕ್ಸಿಕ್ ಮಸ್ಕ್ಯುಲಿನಿಟಿ (ಗಂಡಸರ ಕೆಲವು ವರ್ತನೆಗಳು ಅಪಾಯಕಾರಿ ಎಂಬ ಪರಿಕಲ್ಪನೆ) ಹಲವು ಗಂಡಸರಿಗೆ ತಮ್ಮನ್ನು ಜಡ್ಜ್ ಮಾಡಲಾಗುತ್ತಿದೆ ಅಥವಾ ಕಡೆಗಣಿಸಲಾಗುತ್ತಿದೆ ಎಂಬ ಭಾವನೆ ಮೂಡಿಸಿದೆ. ಮಸ್ಕ್ ಮತ್ತು ಟ್ರಂಪ್ ಅವರ ನಿಯಮಗಳನ್ನು ಮೀರುವಂತಹ ವ್ಯಕ್ತಿತ್ವ ಇಂತಹ ಪುರುಷರಿಗೆ ಆಪ್ಯಾಯಮಾನವಾಗಿ ಕಂಡಿದೆ. ಅವರಿಬ್ಬರೂ ತಮ್ಮ ಕಾಳಜಿ ಮತ್ತು ಹತಾಶೆಗಳಿಗೆ ಧ್ವನಿಯಾಗಿದ್ದಾರೆ ಎಂದು ಪುರುಷರು ಭಾವಿಸಿದ್ದಾರೆ.
ಯುವ ಪುರುಷ ಮತದಾರರನ್ನು ಸೆಳೆಯಲು ಟ್ರಂಪ್ ನಡೆಸಿರುವ ಪ್ರಯತ್ನಗಳನ್ನು ಹಾರ್ವರ್ಡ್ ಇನ್ಸ್ಟಿಟ್ಯೂಟ್ ಆಫ್ ಪಾಲಿಟಿಕ್ಸ್‌ನ ಜಾನ್ ಡೆಲ್ಲಾ ವೊಲ್ಪೆ ಅವರು 'ಪುರುಷರೊಡನೆ ಸಂಪರ್ಕ ಸಾಧಿಸುವ ನಿಟ್ಟಿನಲ್ಲಿ ಅತ್ಯದ್ಭುತ ಪ್ರಯತ್ನ' ಎಂದು ಬಣ್ಣಿಸಿದ್ದಾರೆ. ಯುವ ಪುರುಷ ಮತದಾರರನ್ನು ಸೆಳೆಯುವಲ್ಲಿ ಟ್ರಂಪ್ ಅವರ ಕಾರ್ಯತಂತ್ರ ಯಶಸ್ವಿಯಾಗಿರುವಂತೆ ತೋರುತ್ತಿದೆ. ಇತ್ತೀಚಿನ ಹಾರ್ವರ್ಡ್ ಯೂತ್ ಪೋಲ್ ಪ್ರಕಾರ, 18ರಿಂದ 24 ವರ್ಷ ವಯಸ್ಸಿನ 35% ಯುವಕರು ಟ್ರಂಪ್‌ಗೆ ತಮ್ಮ ಬೆಂಬಲ ಸೂಚಿಸಿದ್ದರು. ಇದು 2020ರ ಸಮೀಕ್ಷೆಗೆ ಹೋಲಿಸಿದರೆ 5% ಹೆಚ್ಚಳವಾಗಿದೆ.
ಇಂತಹ ವಿಚಾರಗಳು ಜೋ ರೋಗಾನ್ ಎಕ್ಸ್‌ಪೀರಿಯನ್ಸ್‌ನಂತಹ ಪಾಡ್‌ಕಾಸ್ಟ್‌ಗಳಲ್ಲಿ ಹೆಚ್ಚಾಗಿ ಕಂಡುಬಂದಿವೆ. ಎಲಾನ್ ಮಸ್ಕ್ ಅವರ ಸಂದರ್ಶನ ನಡೆಸಿದ ಬಳಿಕ, ಜೋ ರೋಗಾನ್ ನವೆಂಬರ್ 4ರಂದು ಟ್ರಂಪ್‌ಗೆ ತನ್ನ ಬೆಂಬಲ ನೀಡಿದ್ದರು.
ಜೋ ರೋಗಾನ್ ಅಮೆರಿಕಾದ ಪ್ರಸಿದ್ಧ ಪಾಡ್‌ಕಾಸ್ಟ್ ಆಯೋಜಕ, ಹಾಸ್ಯಗಾರ ಮತ್ತು ಮಾಜಿ ಟಿವಿ ನಿರೂಪಕರಾಗಿದ್ದು, ತನ್ನ 'ದ ಜೋ ರೋಗಾನ್ ಪಾಡ್‌ಕಾಸ್ಟ್'ನಿಂದ ಹೆಸರಾಗಿದ್ದಾರೆ. ತನ್ನ ಪಾಡ್‌ಕಾಸ್ಟ್‌ನಲ್ಲಿ ಜೋ ರೋಗಾನ್ ಸೆಲೆಬ್ರಿಟಿಗಳು, ವಿಜ್ಞಾನಿಗಳು, ರಾಜಕೀಯ ಮುಖಂಡರು ಸೇರಿದಂತೆ, ವಿವಿಧ ಹಿನ್ನೆಲೆಯ ಅತಿಥಿಗಳೊಡನೆ ಪ್ರಸ್ತುತ ವಿಚಾರಗಳು, ವಿಜ್ಞಾನ, ಆರೋಗ್ಯ, ಸಂಸ್ಕೃತಿಯಂತಹ ವಿಚಾರಗಳ ಕುರಿತು ಚರ್ಚೆ ನಡೆಸುತ್ತಾರೆ. ಜೋ ರೋಗಾನ್ ತನ್ನ ವಿಶಿಷ್ಟ ಶೈಲಿಯಿಂದಾಗಿ ಯುವಕರ ನಡುವೆ ಜನಪ್ರಿಯರಾಗಿದ್ದಾರೆ.
ಜೋ ರೋಗಾನ್ ಎಕ್ಸ್‌ನಲ್ಲಿ ಎಲಾನ್ ಮಸ್ಕ್ ಕುರಿತು ಶ್ಲಾಘನೆ ನೀಡಿದ್ದು, "ಎಲಾನ್ ಮಸ್ಕ್ ನಿಜಕ್ಕೂ ಅಸಾಧಾರಣ ವ್ಯಕ್ತಿ. ಅವರಿಲ್ಲದಿದ್ದರೆ ನಾವು ಸಮಸ್ಯೆಗೆ ಸಿಲುಕುತ್ತೇವೆ. ಡೊನಾಲ್ಡ್ ಟ್ರಂಪ್ ಅವರಿಗೆ ಬೆಂಬಲ ನೀಡುವ ಕುರಿತು ಎಲಾನ್ ಮಸ್ಕ್ ಅತ್ಯಂತ ಬಲವಾಗಿ ವಾದ ಮಂಡಿಸಿದ್ದು, ನಾನು ಅದನ್ನು ಸಂಪೂರ್ಣವಾಗಿ ಒಪ್ಪುತ್ತೇನೆ" ಎಂದು ಬರೆದಿದ್ದರು.
ಈ ಸಂದೇಶ ಬಹಳಷ್ಟು ಜನರಿಗೆ ಸೂಕ್ತ ಎನಿಸಿತ್ತು. ಅದಾದ ಕೇವಲ ಎರಡು ದಿನಗಳ ಬಳಿಕ, ಡೊನಾಲ್ಡ್ ಟ್ರಂಪ್ ಅಮೆರಿಕಾದ 47ನೇ ಅಧ್ಯಕ್ಷರಾಗಿ ಚುನಾಯಿತರಾದರು!
- ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
Advertisement