2016ರ ಚುನಾವಣೆಯ ಸಂದರ್ಭದಲ್ಲಿ, ಡೊನಾಲ್ಡ್ ಟ್ರಂಪ್ ಅವರ ಅಧ್ಯಕ್ಷೀಯ ಪ್ರಚಾರದ ವಿದೇಶಾಂಗ ನೀತಿಯ ಸಲಹೆಗಾರರಾಗಿದ್ದ ಜಾರ್ಜ್ ಪ್ಯಾಪಡೊಪೊಲಸ್ ಅವರು ಒಂದು ಗಂಭೀರ ವಿಚಾರವನ್ನು ಹೇಳಿದ್ದಾರೆ. ಆಸ್ಟ್ರೇಲಿಯಾದ ರಾಜತಂತ್ರಜ್ಞ ಅಲೆಕ್ಸಾಂಡರ್ ಡೌನರ್ ಅವರೊಡನೆ ಮಾತನಾಡುವ ಸಂದರ್ಭದಲ್ಲಿ, ಜಾರ್ಜ್ ಅವರು ರಷ್ಯಾದ ಬಳಿ ಟ್ರಂಪ್ ಅವರ ರಾಜಕೀಯ ಎದುರಾಳಿ ಹಿಲರಿ ಕ್ಲಿಂಟನ್ ಅವರಿಗೆ ಸಂಬಂಧಿಸಿದ ಗಂಭೀರ ಮಾಹಿತಿಗಳಿವೆ ಎಂದಿದ್ದರು.
ಲಂಡನ್ನಿನ ಬಾರ್ ಒಂದರಲ್ಲಿ ನಡೆದ ಈ ಮಾತುಕತೆ, ಟ್ರಂಪ್ ಮತ್ತು ರಷ್ಯಾ ಸಂಬಂಧದ ಕುರಿತ ವಿಚಾರಣೆಗೆ ನಾಂದಿಯಾಯಿತು. 2016ರ ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಅವರ ಗೆಲುವಿಗಾಗಿ ರಷ್ಯಾ ತೆರೆಮರೆಯಲ್ಲಿ ನಡೆಸಿದ ಪ್ರಯತ್ನಗಳ ಕುರಿತು ಭಾರೀ ಗುಪ್ತಚರ ಮತ್ತು ಕ್ರಿಮಿನಲ್ ವಿಚಾರಣೆಗಳು ನಡೆದಿವೆ.
ರಷ್ಯಾ ತನ್ನ ರಹಸ್ಯ ಕಾರ್ಯಾಚರಣೆಯ ಅಂಗವಾಗಿ, ಹಿಲರಿ ಕ್ಲಿಂಟನ್ ಅವರ ಚುನಾವಣಾ ಪ್ರಚಾರ ಮತ್ತು ಡೆಮಾಕ್ರಟಿಕ್ ಪಕ್ಷದ ಇಮೇಲ್‌ಗಳು ಮತ್ತು ದಾಖಲೆಗಳನ್ನು ಹ್ಯಾಕ್ ಮಾಡಿತ್ತು. ಅದರೊಡನೆ, ಹಿಲರಿ ಕ್ಲಿಂಟನ್ ಅವರ ಕುರಿತು ಸುಳ್ಳು ಸುದ್ದಿಗಳನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚತೊಡಗಿತ್ತು.
ರಷ್ಯನ್ನರು 2016ರ ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಗೆಲ್ಲುವಂತೆ ಮಾಡಲು ಗಂಭೀರ ಪ್ರಯತ್ನಗಳನ್ನು ನಡೆಸಿದ್ದರು. ಈ ವಿಚಾರ ಟ್ರಂಪ್ ಮತ್ತವರ ಪ್ರಚಾರ ತಂಡದ ಗಮನಕ್ಕೂ ಬಂದಿತ್ತು. ಆದರೂ ಅವರು ಮೌನವಾಗಿ ರಷ್ಯಾದ ನೆರವು ಪಡೆದುಕೊಂಡರು. 2016ರ ಚುನಾವಣಾ ಪ್ರಚಾರದ ಒಂದು ಪ್ರಸಿದ್ಧ ಸನ್ನಿವೇಶದಲ್ಲಿ, ಟ್ರಂಪ್ ಬಹಿರಂಗವಾಗಿಯೇ ರಷ್ಯಾದ ಬಳಿ ಇನ್ನಷ್ಟು ನೆರವು ನೀಡುವಂತೆ ಕೋರಿದ್ದರು!
ಈಗ ಮತ್ತೊಮ್ಮೆ 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾ ಮತ್ತೊಮ್ಮೆ ಟ್ರಂಪ್ ಗೆಲುವು ಸಾಧಿಸುವಂತೆ ಮಾಡಲು ಬಯಸುತ್ತಿದೆ ಎಂದು ಅಮೆರಿಕಾದ ಗುಪ್ತಚರ ಸಂಸ್ಥೆಗಳು ಅಭಿಪ್ರಾಯ ಪಟ್ಟಿವೆ. ಇದರಿಂದಾಗಿ, ಟ್ರಂಪ್ - ರಷ್ಯಾದ ಪ್ರಕರಣವನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳುವುದು ಮತ್ತು ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವಿನ ಅಪಾಯಕಾರಿ ಸಂಪರ್ಕವನ್ನು ತಿಳಿದುಕೊಳ್ಳುವುದು ಅಮೆರಿಕನ್ನರಿಗೆ ಅತ್ಯವಶ್ಯಕವಾಗಿದೆ.
ಟ್ರಂಪ್ - ರಷ್ಯಾ ಪ್ರಕರಣಕ್ಕೆ ಸಂಬಂಧಿಸಿದ ವಾಸ್ತವ ವಿಚಾರಗಳು ಹಲವಾರು ಸರ್ಕಾರಿ ತನಿಖೆಗಳು ಮತ್ತು ನ್ಯಾಯಾಲಯದ ಪ್ರಕರಣಗಳಲ್ಲಿ ವಿವರಿಸಲ್ಪಟ್ಟಿವೆ. ಇವೆರಡರ ಮಾಹಿತಿಗಳ ಸಂಯೋಜನೆ, ಪುಟಿನ್ ಅವರ ನಿರ್ದೇಶನದಲ್ಲಿ, ರಷ್ಯನ್ ಗುಪ್ತಚರ ಸಂಸ್ಥೆಗಳು ಅಮೆರಿಕಾದ ಪ್ರಜಾಪ್ರಭುತ್ವದ ವಿರುದ್ಧ ಸೈಬರ್ ದಾಳಿಗಳನ್ನು ನಡೆಸಿವೆ ಎಂದು ಖಚಿತಪಡಿಸಿದೆ.
ಟ್ರಂಪ್ ಈ ಹಿಂದೆಯೂ ರಷ್ಯಾದಿಂದ ದೊಡ್ಡ ಉದ್ಯಮ ಒಪ್ಪಂದಗಳು ಮತ್ತು ಆರ್ಥಿಕ ಬೆಂಬಲವನ್ನು ಪಡೆಯಲು ಪ್ರಯತ್ನಿಸಿದ್ದು, ಚುನಾವಣೆಯ ಸಮಯದಲ್ಲಿ ರಷ್ಯಾದ ನೆರವನ್ನು ಟ್ರಂಪ್ ಕೈಚಾಚಿ ಸ್ವೀಕರಿಸಿದ್ದರು ಎನ್ನುವುದನ್ನು ಈ ತನಿಖೆಗಳು ಬಯಲುಗೊಳಿಸಿವೆ.
2016ರ ಚುನಾವಣಾ ಪ್ರಚಾರದ ಸಂದರ್ಭದಲ್ಲಿ, ಟ್ರಂಪ್ ಅವರು ಮೊದಲು ಪುಟಿನ್ ಪರವಾಗಿದ್ದ ಓರ್ವ ಉಕ್ರೇನಿಯನ್ ರಾಜಕಾರಣಿಯ ಜೊತೆ ಕಾರ್ಯಾಚರಿಸಿದ್ದ ವ್ಯಕ್ತಿಯನ್ನು ತನ್ನ ಪ್ರಚಾರದ ಮ್ಯಾನೇಜರ್ ಆಗಿ ಆರಿಸಿದ್ದರು. ಆ ಮ್ಯಾನೇಜರ್ ರಷ್ಯನ್ ಗುಪ್ತಚರ ಸಂಸ್ಥೆಗಳ ಏಜೆಂಟ್ ಒಬ್ಬನೊಡನೆ ಉತ್ತಮ ಬಾಂಧವ್ಯ ಹೊಂದಿದ್ದು, ಟ್ರಂಪ್ ಅವರ ಚುನಾವಣಾ ಪ್ರಚಾರದ ಕುರಿತ ಮಾಹಿತಿಗಳನ್ನು ಆತನೊಡನೆ ಹಂಚಿಕೊಂಡಿದ್ದ.
ಟ್ರಂಪ್ ಮತ್ತು ರಷ್ಯಾ ಸಂಬಂಧದ ಕುರಿತ ತನಿಖೆ ಆರಂಭಗೊಂಡ ಬಳಿಕ, ಅಮೆರಿಕಾದ ಚುನಾವಣೆಯಲ್ಲಿ ಮಧ್ಯ ಪ್ರವೇಶಿಸಿ, ಟ್ರಂಪ್‌ರನ್ನು ಬೆಂಬಲಿಸುವುದರ ಹಿಂದೆ ಪುಟಿನ್ ಅವರಿಗೆ ಇದ್ದ ಉದ್ದೇಶವೇನು ಎಂಬುದು ಸ್ಪಷ್ಟವಾಗತೊಡಗಿತು.
ಪುಟಿನ್ ಅವರು ರಷ್ಯನ್ ಸಾಮ್ರಾಜ್ಯವನ್ನು ಮರಳಿ ನಿರ್ಮಿಸುವತ್ತ ಗಮನ ಹರಿಸಿದ್ದು, ಸೋವಿಯತ್ ಒಕ್ಕೂಟದ ಗಾತ್ರದಲ್ಲಿ ರಷ್ಯಾವನ್ನು ಮರಳಿ ನಿರ್ಮಿಸಿ, ಶೀತಲ ಸಮರದ ಕಾಲದಲ್ಲಿದ್ದಂತೆಯೇ ಪೂರ್ವ ಯುರೋಪಿನ ಮೇಲೆ ಪ್ರಭಾವ ಬೀರುವ ಗುರಿ ಹೊಂದಿದ್ದಾರೆ.
2000ನೇ ದಶಕದ ಆರಂಭದಲ್ಲಿ, ಮಾಸ್ಕೋದಲ್ಲಿ ಅಧಿಕಾರ ಹಿಡಿದ ಪುಟಿನ್, ಆ ಬಳಿಕ ನಿರಂತರವಾಗಿ ರಷ್ಯನ್ ಸಾಮ್ರಾಜ್ಯವನ್ನು ಸ್ಥಾಪಿಸುವ ನಿಟ್ಟಿನಲ್ಲಿ ಕೆಲಸ ಮಾಡತೊಡಗಿದರು. ಬೆಲಾರಸ್‌ನಲ್ಲಿ ಪ್ರಜಾಪ್ರಭುತ್ವ ಸ್ಥಾಪಿಸುವ ಪ್ರಯತ್ನಗಳನ್ನು ದುರ್ಬಲಗೊಳಿಸಿದ ಪುಟಿನ್, ಅಲ್ಲಿ ಓರ್ವ ರಷ್ಯಾ ಪರ ಸರ್ವಾಧಿಕಾರಿಯನ್ನು ಅಧಿಕಾರಕ್ಕೇರಿಸಿದರು. ಪುಟಿನ್ ಜಾರ್ಜಿಯಾ ಮೇಲೂ ಇದೇ ರೀತಿಯ ನಿಯಂತ್ರಣ ಸಾಧಿಸಲು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ.
ಪ್ರಸ್ತುತ ಪುಟಿನ್ ಅವರ ಸಂಪೂರ್ಣ ಗಮನ ಐರೋಪ್ಯ ಒಕ್ಕೂಟ ಮತ್ತು ನ್ಯಾಟೋ ಗುಂಪುಗಳ ಸದಸ್ಯನಾಗಲು ಉತ್ಸುಕನಾಗಿರುವ, ಪ್ರಜಾಪ್ರಭುತ್ವ ರಾಷ್ಟ್ರವಾದ ಉಕ್ರೇನನ್ನು ತಡೆಯುವುದರ ಮೇಲಿದೆ.
2014ರಲ್ಲಿ, ಉಕ್ರೇನಿನ ಆಡಳಿತದಲ್ಲಿದ್ದ ಕ್ರಿಮಿಯಾವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡ ಪುಟಿನ್ ಪಾಶ್ಚಾತ್ಯ ಜಗತ್ತಿಗೆ ಆಘಾತ ಉಂಟುಮಾಡಿದ್ದರು. ಬಳಿಕ 2022ರಲ್ಲಿ ಪುಟಿನ್ ಉಕ್ರೇನ್ ಮೇಲೆ ಪೂರ್ಣ ಪ್ರಮಾಣದ ಆಕ್ರಮಣ ಆರಂಭಿಸಿದರು. ಈ ಹಿಂಸಾತ್ಮಕ ಯುದ್ಧದಲ್ಲಿ ಈಗಾಗಲೇ ಹತ್ತಾರು ಸಾವಿರ ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಶೀತಲ ಸಮರದಲ್ಲಿ ರಷ್ಯಾದ ಸೋಲನ್ನು ಪುಟಿನ್ ಎಂದಿಗೂ ಒಪ್ಪಿಕೊಂಡಿಲ್ಲ. ರಷ್ಯಾವನ್ನು ಮತ್ತೊಮ್ಮೆ ಜಗತ್ತಿನ ಪ್ರಮುಖ ಜಾಗತಿಕ ಶಕ್ತಿಯನ್ನಾಗಿ ರೂಪಿಸುವುದು ಪುಟಿನ್ ಮಹತ್ವಾಕಾಂಕ್ಷೆಯಾಗಿದೆ.
ಬೆಲಾರಸ್, ಜಾರ್ಜಿಯಾ, ಮತ್ತು ಉಕ್ರೇನ್‌ಗಳಂತಹ ಮಾಜಿ ಸೋವಿಯತ್ ಒಕ್ಕೂಟದ ಭಾಗಗಳನ್ನು ಮರಳಿ ಪಡೆಯುವುದು ಪುಟಿನ್ ಅವರ ಬಹುದೊಡ್ಡ ಯೋಜನೆಯ ಆರಂಭಿಕ ಹೆಜ್ಜೆಯಾಗಿದೆ.
ಅದರೊಡನೆ, ಪುಟಿನ್ ಅವರು ಒಂದು ಕಾಲದಲ್ಲಿ ಸೋವಿಯತ್ ಒಕ್ಕೂಟದ ಭಾಗವಾಗಿದ್ದ ಬಾಲ್ಟಿಕ್ ರಾಷ್ಟ್ರಗಳಾದ ಲಿಥುವೇನಿಯಾ, ಲ್ಯಾಟ್ವಿಯಾ, ಮತ್ತು ಈಸ್ಟೋನಿಯಾಗಳನ್ನು ಮರಳಿ ರಷ್ಯಾದ ನಿಯಂತ್ರಣಕ್ಕೆ ತರಬೇಕೆಂದು ಭಾವಿಸಿದ್ದಾರೆ. ದೀರ್ಘಾವಧಿಯಲ್ಲಿ ವಾರ್ಸಾ ಒಪ್ಪಂದದ ಭಾಗವಾಗಿದ್ದ ಪೂರ್ವ ಯುರೋಪಿಯನ್ ದೇಶಗಳಾದ ಪೋಲ್ಯಾಂಡ್, ಹಂಗರಿ, ಬಲ್ಗೇರಿಯಾ, ರೊಮಾನಿಯ, ಅಲ್ಬೇನಿಯಾ, ಜೆಕ್ ಗಣರಾಜ್ಯ, ಮತ್ತು ಸ್ಲೊವಾಕಿಯಾಗಳ ಮೇಲೂ ರಷ್ಯಾದ ಪ್ರಭಾವವನ್ನು ವಿಸ್ತರಿಸಲು ಸಾಧ್ಯವಾಗಬಹುದು ಎಂದು ಪುಟಿನ್ ಆಶಾ ಭಾವನೆ ಹೊಂದಿದ್ದಾರೆ.
ವಾರ್ಸಾ ಒಪ್ಪಂದ ಎನ್ನುವುದು ಶೀತಲ ಸಮರದ ಕಾಲದಲ್ಲಿ ಸೋವಿಯತ್ ಒಕ್ಕೂಟ ಮತ್ತು ಪೂರ್ವ ಯುರೋಪಿನ ದೇಶಗಳ ನಡುವೆ ಜಾರಿಗೆ ಬಂದ ಒಂದು ಮಿಲಿಟರಿ ಒಕ್ಕೂಟವಾಗಿತ್ತು. ಇದನ್ನು ಅಮೆರಿಕಾ ನೇತೃತ್ವದ ನ್ಯಾಟೋ ಒಕ್ಕೂಟವನ್ನು ಎದುರಿಸುವ ಸಲುವಾಗಿ ಸ್ಥಾಪಿಸಲಾಗಿತ್ತು.
ಒಂದು ವೇಳೆ ಪುಟಿನ್ ಏನಾದರೂ ಸಾಕಷ್ಟು ದೀರ್ಘಾವಧಿಗೆ ಅಧಿಕಾರದಲ್ಲಿ ಮುಂದುವರಿದರೆ, ಅವರು ಹಿಂದೆ ಪೂರ್ವ ಜರ್ಮನಿ ಎಂದು ಕರೆಯಲ್ಪಡುತ್ತಿದ್ದ, ಜರ್ಮನಿಯ ಭಾಗವನ್ನೂ ಮರಳಿ ಗಳಿಸುವ ಪ್ರಯತ್ನಕ್ಕೆ ಮುಂದಾಗಬಹುದು.
ಈಗ ಆ ಸಾಧ್ಯತೆ ಇಲ್ಲವೇನೋ ಎನಿಸಬಹುದು. ಆದರೆ, ಬರ್ಲಿನ್ ಗೋಡೆ ಪತನಗೊಂಡು ಕೇವಲ 35 ವರ್ಷಗಳಷ್ಟೇ ಆಗಿವೆ. ಆ ಸಮಯದಲ್ಲಿ ಕೆಜಿಬಿಯ ಯುವ ಅಧಿಕಾರಿಯಾಗಿದ್ದ ಪುಟಿನ್, ಸೋವಿಯತ್ ಸಾಮ್ರಾಜ್ಯದ ಪತನಕ್ಕೆ ಸಾಕ್ಷಿಯಾಗಿದ್ದರು.
ಪುಟಿನ್ ಅವರೇನಾದರೂ ತನ್ನ ಗುರಿಗಳನ್ನು ಸಾಧಿಸಬೇಕಾದರೆ, ರಷ್ಯನ್ ಸಾಮ್ರಾಜ್ಯವನ್ನು ಮರಳಿ ಸ್ಥಾಪಿಸುವ ತನ್ನ ಪ್ರಯತ್ನಕ್ಕೆ ಅಮೆರಿಕಾ ಅಡ್ಡಗಾಲು ಹಾಕುವುದಿಲ್ಲ ಎಂದು ಖಾತ್ರಿಪಡಿಸಲೇಬೇಕು. ಆದ್ದರಿಂದಲೇ ಪುಟಿನ್ ಅವರು ಅಮೆರಿಕಾದಲ್ಲಿ ಪ್ರಕ್ಷುಬ್ಧತೆ ಎಬ್ಬಿಸಿದ್ದ, ನ್ಯಾಟೋ ಮತ್ತು ಉಕ್ರೇನ್‌ನಲ್ಲಿ ಅಮೆರಿಕಾದ ಪಾಲ್ಗೊಳ್ಳುವಿಕೆಯನ್ನು ವಿರೋಧಿಸಿದ್ದ ಟ್ರಂಪ್ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದರು. ತನ್ನ ನಡೆಗಳ ಮೂಲಕವೇ ಟ್ರಂಪ್ ತಾನು ರಷ್ಯಾ ನಾಯಕರ ಪ್ರಭಾವಕ್ಕೆ ಒಳಗಾಗಬಲ್ಲೆ ಎಂದು ತೋರಿಸಿದ್ದರು. ಇದೇ ಸಮಯದಲ್ಲಿ ಪುಟಿನ್ ಅವರು ಪಶ್ಚಿಮ ಯುರೋಪಿನ ಚುನಾವಣೆಗಳಲ್ಲೂ ಮಧ್ಯ ಪ್ರವೇಶಿಸಿ, ಯುರೋಪ್ ಉಕ್ರೇನಿಗೆ ಬೆಂಬಲ ಸೂಚಿಸುವುದರ ವಿರುದ್ಧವಿರುವ ಬಲಪಂಥೀಯ ತೀವ್ರವಾದಿಗಳಿಗೆ ಬೆಂಬಲ ನೀಡಿದ್ದರು.
ಅಮೆರಿಕಾ ಮತ್ತು ಯುರೋಪಿನಲ್ಲಿ ಹೆಚ್ಚುತ್ತಿರುವ ಕ್ರೈಸ್ತ ರಾಷ್ಟ್ರೀಯವಾದ ಪುಟಿನ್‌ಗೆ ನೆರವಾಗಿದೆ. ಕ್ರೈಸ್ತ ಮೂಲಭೂತವಾದಿಗಳು ಜಗತ್ತಿನಾದ್ಯಂತ ತಮ್ಮ ಮೌಲ್ಯಗಳ ಮೇಲೆ ಆಗುತ್ತಿರುವ ದಾಳಿಯ ವಿರುದ್ಧ ಹೋರಾಡಲು ಪುಟಿನ್ ಸೂಕ್ತವಾದ ಜಾಗತಿಕ ನಾಯಕ ಎಂದು ಭಾವಿಸಿದ್ದಾರೆ. ಅವರು ಉಕ್ರೇನ್ ಐರೋಪ್ಯ ಒಕ್ಕೂಟದ ಉದಾರವಾದಿ ಮತ್ತು ಧಾರ್ಮಿಕ ಮೌಲ್ಯಗಳಿಲ್ಲದ ನೀತಿಗೆ ಹೆಚ್ಚು ಪೂರಕವಾಗಿದೆ ಎಂದು ಪರಿಗಣಿಸಿದ್ದು, ಅದಕ್ಕಾಗಿಯೇ ಕ್ರೈಸ್ತ ಮೂಲಭೂತವಾದಿಗಳು ಯುದ್ಧದಲ್ಲಿ ಪುಟಿನ್ ಅವರಿಗೆ ಬೆಂಬಲ ನೀಡುತ್ತಿದ್ದಾರೆ. ಯುದ್ಧದಲ್ಲಿ ರಷ್ಯಾ ಜಯಶಾಲಿಯಾಗಲಿದೆ ಎಂದು ಅವರು ನಿರೀಕ್ಷೆ ಹೊಂದಿದ್ದಾರೆ.
ಇಂತಹ ಕ್ರೈಸ್ತ ಮೂಲಭೂತವಾದಿಗಳು ಟ್ರಂಪ್ ಬೆಂಬಲಿಗರೂ ಆಗಿದ್ದಾರೆ. ಟ್ರಂಪ್ ಸಹ ಕ್ರೈಸ್ತ ಮೂಲಭೂತವಾದಿಗಳಿಗೆ ಬೆಂಬಲ ನೀಡುವ ಸಾಧ್ಯತೆಗಳಿವೆ. ಇದೆಲ್ಲವೂ ಅಂದುಕೊಂಡಂತೆ ನಡೆದರೆ, ಕಳೆದ ಕೆಲ ವರ್ಷಗಳಿಂದ ಟ್ರಂಪ್‌ರನ್ನು ಮರಳಿ ಶ್ವೇತ ಭವನಕ್ಕೆ ಕಳುಹಿಸುವ ಪುಟಿನ್‌ರ ಪ್ರಯತ್ನಗಳು ಫಲಪ್ರದವಾಗಬಹುದು.
ಟ್ರಂಪ್, ಅವರ ತಂಡ ಮತ್ತು ಬೆಂಬಲಿಗರು ತಾವು ಪುಟಿನ್ ನಿಯಂತ್ರಣದಲ್ಲಿಲ್ಲ ಮತ್ತು ರಷ್ಯಾದ ಜೊತೆ ಯಾವುದೇ ಸಂಬಂಧ ಹೊಂದಿಲ್ಲ ಎಂದು ಮತದಾರರ ಮನ ಒಲಿಸಲು ಪ್ರಯತ್ನ ನಡೆಸುತ್ತಿದ್ದಾರೆ. ಅವರು ಈ ಮೂಲಕ ಟ್ರಂಪ್ ಮತ್ತು ಪುಟಿನ್ ನಡುವಿನ ಸಂಬಂಧದ ಕುರಿತ ಸತ್ಯವನ್ನು ಮರೆಮಾಚಲು ಪ್ರಯತ್ನ ನಡೆಸುತ್ತಿದ್ದಾರೆ.
ಈ ಎಲ್ಲ ಪ್ರಯತ್ನಗಳ ಭಾಗವಾಗಿ, ಟ್ರಂಪ್ ತಂಡ ನಡೆಸುತ್ತಿರುವ ಪ್ರೊಪಗಾಂಡಾ ಪ್ರಚಾರ ರಷ್ಯಾದ ಜೊತೆಗಿನ ಟ್ರಂಪ್ ಸಂಬಂಧದ ಕುರಿತ ತನಿಖೆಯೇ ನಕಲಿ ಎಂದು ಜನರನ್ನು ನಂಬಿಸಲು ಪ್ರಯತ್ನ ನಡೆಸುತ್ತಿದೆ.
ಈ ಪ್ರಯತ್ನವನ್ನು ಬಳಸಿಕೊಂಡಿರುವ ಟ್ರಂಪ್, ತನ್ನ ವಿರುದ್ಧದ ಎರಡು ಮಹಾಭಿಯೋಗ ಪ್ರಕರಣಗಳು, ಮತ್ತು ನಾಲ್ಕು ಕ್ರಿಮಿನಲ್ ಆರೋಪಗಳನ್ನೂ ನಂಬಿಕಾರ್ಹವಲ್ಲ ಎನ್ನುತ್ತಿದ್ದಾರೆ.
ಜನರಲ್ಲಿ ಗೊಂದಲ ಮೂಡಿಸುವ ಸಲುವಾಗಿ, ಟ್ರಂಪ್ ತಂಡ 2016ರ ಅಧ್ಯಕ್ಷೀಯ ಚುನಾವಣೆಯ ಬಳಿಕ ಬಹಿರಂಗಪಡಿಸಲಾದ ಮಾಜಿ ಬ್ರಿಟಿಷ್ ಗುಪ್ತಚರ ಅಧಿಕಾರಿಯೊಬ್ಬರ ವರದಿಯಾದ 'ಸ್ಟೀಲ್ ಡಾಸಿಯರ್' ಅನ್ನು ಬಳಸಿಕೊಳ್ಳುತ್ತಿದೆ. ಸ್ಟೀಲ್ ಡಾಸಿಯರ್ ಹೊಂದಿರುವ ದೋಷಗಳನ್ನು ಎತ್ತಿ ತೋರಿಸುವ ಮೂಲಕ, ತನ್ನ - ರಷ್ಯಾ ಸಂಬಂಧದ ಕುರಿತ ಸಂಪೂರ್ಣ ವಿಚಾರಣೆಯೇ ಸುಳ್ಳು ಮಾಹಿತಿಗಳನ್ನು ಆಧರಿಸಿದೆ ಎಂದು ಟ್ರಂಪ್ ಆರೋಪಿಸುತ್ತಿದ್ದಾರೆ. ಆದರೆ, ಟ್ರಂಪ್ ಆರೋಪಗಳು ವಾಸ್ತವವಲ್ಲ. ಎಫ್‌ಬಿಐ ಟ್ರಂಪ್ ವಿರುದ್ಧ ತನಿಖೆ ಕೈಗೆತ್ತಿಕೊಳ್ಳುವಲ್ಲಿ ಸ್ಟೀಲ್ ಡಾಸಿಯರ್ ಮುಖ್ಯ ಪಾತ್ರ ವಹಿಸಿರಲಿಲ್ಲ. ತನಿಖೆಯಲ್ಲೂ ಅದರ ಹೇಳಿಕೊಳ್ಳುವಂತಹ ಉಲ್ಲೇಖಗಳಿಲ್ಲ. 2017ರಿಂದ ತನಿಖೆಯನ್ನು ಕೈಗೆತ್ತಿಕೊಂಡ ವಿಶೇಷ ತನಿಖಾಧಿಕಾರಿ ರಾಬರ್ಟ್ ಮ್ಯೂಲರ್ ಸ್ಟೀಲ್ ಡಾಸಿಯರ್ ಮಾಹಿತಿಗಳನ್ನು ಬಳಸಿಯೇ ಇಲ್ಲ.
ಟ್ರಂಪ್ - ರಷ್ಯಾ ಪ್ರಕರಣದ ತನಿಖೆಯನ್ನು ಹಳ್ಳ ಹಿಡಿಸಲು ಡೊನಾಲ್ಡ್ ಟ್ರಂಪ್ ನಡೆಸಿದ ಪ್ರಯತ್ನಗಳಿಗೆ ಅವರ ಅಟಾರ್ನಿ ಜನರಲ್ ವಿಲಿಯಂ ಬಾರ್ ಬೆಂಬಲವಾಗಿದ್ದರು. ಮ್ಯೂಲರ್ ವರದಿ ಬಿಡುಗಡೆಯಾಗುವ ಮುನ್ನವೇ, ಬಾರ್ ಅದರಲ್ಲಿರುವ ಅಂಶಗಳ ಕುರಿತು ಸುಳ್ಳು ಆರೋಪಗಳನ್ನು ಹೊರಿಸತೊಡಗಿದ್ದರು. ಬಳಿಕ ಅವರು ಟ್ರಂಪ್ - ರಷ್ಯಾ ಪ್ರಕರಣದ ತನಿಖೆ ನಡೆಸಲು ಟ್ರಂಪ್ ಪರ ಇರುವ ತನಿಖಾಧಿಕಾರಿಯನ್ನು ಆರಿಸಿದರು. ಆದರೆ ರಾಜಕೀಯ ಪ್ರೇರಿತವಾಗಿದ್ದ ಈ ಪ್ರಯತ್ನ ಸಂಪೂರ್ಣ ವೈಫಲ್ಯ ಕಂಡಿತು.
ಈಗ ಎಂತಹ ಸುಳ್ಳು ಮಾಹಿತಿಗಳನ್ನು ಹರಡಿದರೂ ಅದರಿಂದ ಟ್ರಂಪ್ - ರಷ್ಯಾ ಪ್ರಕರಣದಲ್ಲಿರುವ ವಾಸ್ತವ ಸಂಗತಿಗಳನ್ನು ಮರೆಮಾಚಲು ಸಾಧ್ಯವಿಲ್ಲ. ಸತ್ಯ ಸಂಗತಿಗಳು ಈಗ ಅತ್ಯಂತ ಸ್ಪಷ್ಟವಾಗಿದ್ದು, ಉಕ್ರೇನಿನಲ್ಲಿ ನಷ್ಟವಾಗಿರುವ ಜೀವಗಳು ಅದಕ್ಕೆ ಸಾಕ್ಷಿಯಾಗಿವೆ.
- ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
Advertisement