
ಇತ್ತೀಚಿನ ಬೆಳವಣಿಗೆಯೊಂದರಲ್ಲಿ, ಪ್ರತೀಕಾರದ ಕ್ರಮ ಎನ್ನುವಂತೆ ಭಾರತ ಮತ್ತು ಕೆನಡಾಗಳು ಪರಸ್ಪರರ ಆರು ಜನ ರಾಜತಾಂತ್ರಿಕರನ್ನು ದೇಶದಿಂದ ಹೊರಹಾಕಿದವು. ಕೆನಡಾದ ವಾಂಕೋವರ್ ಬಳಿ 2023ರಲ್ಲಿ ನಡೆದ ಸಿಖ್ ಪ್ರತ್ಯೇಕತಾವಾದಿಯೊಬ್ಬನ ಹತ್ಯೆಯ ಹಿಂದೆ ಭಾರತ ಸರ್ಕಾರದ ಏಜೆಂಟರ ಪಾತ್ರವಿದೆ ಎಂದು ಕೆನಡಾ ಆರೋಪಿಸಿದ ಬಳಿಕ ಈ ಉದ್ವಿಗ್ನತೆಗಳು ಆರಂಭಗೊಂಡವು. ಈ ಪರಿಸ್ಥಿತಿ ಭಾರತ ಮತ್ತು ಕೆನಡಾ ನಡುವಿನ ಸಂಬಂಧವನ್ನು ಹಾಳುಮಾಡಿದ್ದು, ಇಂತಹ ರಾಜತಾಂತ್ರಿಕ ಕ್ರಮಗಳಿಗೆ ಹಾದಿಮಾಡಿಕೊಟ್ಟಿದೆ.
ಇತ್ತೀಚೆಗೆ ತಲೆದೋರಿದ ರಾಜತಾಂತ್ರಿಕ ಸಮಸ್ಯೆಗಳನ್ನು ಕುರಿತು ವಿಚಾರಣೆ ನಡೆಸುತ್ತಿರುವ ಕೆನಡಾದ ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸ್ (ಆರ್‌ಸಿಎಂಪಿ) ಇಲಾಖೆ, ಭಾರತ ಸರ್ಕಾರದ ಏಜೆಂಟರು ಸಂಘಟಿತ ಅಪರಾಧಗಳನ್ನು ನಡೆಸುತ್ತಿರುವ 'ಬಿಷ್ಣೋಯಿ ಗ್ರೂಪ್' ಎಂಬ ಒಂದು ಅಪರಾಧಿ ಗುಂಪಿನೊಡನೆ ಸಂಪರ್ಕ ಹೊಂದಿದ್ದಾರೆ ಎಂದು ಆರೋಪಿಸಿದೆ.
ಭಾರತದ ಪ್ರಮುಖ ವಿಚಾರಣಾ ಸಂಸ್ಥೆಯಾದ ನ್ಯಾಷನಲ್ ಇನ್ವೆಸ್ಟಿಗೇಟಿವ್ ಏಜೆನ್ಸಿ (ಎನ್ಐಎ) ಈ ಅಪರಾಧಿ ಗುಂಪನ್ನು ಲಾರೆನ್ಸ್ ಬಿಷ್ಣೋಯಿ ನೇತೃತ್ವದ ಗುಂಪು ಎಂದು ಗುರುತಿಸಿದೆ. ಲಾರೆನ್ಸ್ ಬಿಷ್ಣೋಯಿ ಪರ ವಕೀಲರ ಪ್ರಕಾರ, ಬಿಷ್ಣೋಯಿ ಈಗಾಗಲೇ ಕೊಲೆ, ಸುಲಿಗೆ ಸೇರಿದಂತೆ 40ಕ್ಕೂ ಹೆಚ್ಚು ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾನೆ. ಅವುಗಳಲ್ಲಿ ಹಲವಾರು ಪ್ರಕರಣಗಳ ವಿಚಾರಣೆ ಇನ್ನೂ ನಡೆಯಬೇಕಿದೆ.
ತನ್ನ ಅಧಿಕಾರಿಗಳು ಮತ್ತು ಬಿಷ್ಣೋಯಿ ಗುಂಪಿನ ನಡುವೆ ಸಂಪರ್ಕ ಇದೆ ಎಂಬ ಕೆನಡಾದ ಆರೋಪಕ್ಕೆ ಭಾರತ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಭಾರತದ ವಿದೇಶಾಂಗ ಸಚಿವಾಲಯವೂ ಸಹ ಇದಕ್ಕೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ.
ಆದರೆ ಈ ಹಿಂದೆ ಕೆನಡಾದಲ್ಲಿನ ಹತ್ಯೆಯ ಹಿಂದೆ ಭಾರತದ ಕೈವಾಡವಿದೆ ಎಂಬ ಕೆನಡಾದ ಆರೋಪಗಳನ್ನು ಭಾರತ ಹಾಸ್ಯಾಸ್ಪದ ಮತ್ತು ಆಧಾರ ರಹಿತ ಆರೋಪ ಎಂದು ಕರೆದು ತಳ್ಳಿಹಾಕಿತ್ತು.
ಲಾರೆನ್ಸ್ ಬಿಷ್ಣೋಯಿ ಮತ್ತು ಆತನ ಸಹಚರರ ಕುರಿತ ಒಂದಷ್ಟು ಮಾಹಿತಿ ಇಲ್ಲಿದೆ.
31 ವರ್ಷ ವಯಸ್ಸಿನ, ಕಾನೂನು ಪದವೀಧರ ಲಾರೆನ್ಸ್ ಬಿಷ್ಣೋಯಿ 2015ರಿಂದಲೂ ಸೆರೆಮನೆಯಲ್ಲಿದ್ದಾನೆ. ಆತನ ವಿರುದ್ಧ ಎನ್ಐಎ ಒಂದು ಅಂತರಾಷ್ಟ್ರೀಯ ಅಪರಾಧ ಜಾಲವನ್ನು ಕಾರ್ಯಾಚರಿಸುವ ಆರೋಪ ಹೊರಿಸಿದೆ.
ಪಂಜಾಬಿನಲ್ಲಿ ಜನಿಸಿದ ಲಾರೆನ್ಸ್ ಬಿಷ್ಣೋಯಿ ಅಷ್ಟೇನೂ ಎತ್ತರವಿಲ್ಲದ, ತೆಳ್ಳಗಿನ ವ್ಯಕ್ತಿಯಾಗಿದ್ದಾನೆ. ಆತ ನ್ಯಾಯಾಲಯದಲ್ಲಿ ಹಾಜರಾಗುವ ಗಡ್ಡ ಮೀಸೆಗಳನ್ನು ಬಿಟ್ಟು ಕಾಣಿಸಿಕೊಳ್ಳುತ್ತಾನೆ.
ಬಿಷ್ಣೋಯಿ ತನ್ನ ಅಪರಾಧ ಜಾಲವನ್ನು ದೇಶದ ವಿವಿಧ ರಾಜ್ಯಗಳ ಜೈಲಿನಿಂದ, ಅಷ್ಟೇ ಏಕೆ, ಕೆನಡಾದಂತಹ ವಿದೇಶಗಳಿಂದಲೂ ನಿರ್ವಹಿಸುತ್ತಾನೆ ಎಂದು ಎನ್ಐಎ ತಿಳಿಸಿದೆ. ಆತ ಖಲಿಸ್ತಾನಿ ಪರ ಸಂಪರ್ಕಗಳನ್ನು ಹೊಂದಿರುವ, ನೇಪಾಳ ಮತ್ತು ಇತರ ಪ್ರದೇಶಗಳ ಗುಂಪುಗಳ ಮೂಲಕ ಕಾರ್ಯಾಚರಣೆ ನಡೆಸುತ್ತಾನೆ.
ಕಳೆದ ವರ್ಷ ಖಾಸಗಿ ಸುದ್ದಿ ವಾಹಿನಿ ಒಂದಕ್ಕೆ ಸಂದರ್ಶನ ನೀಡಿದ್ದ ಲಾರೆನ್ಸ್ ಬಿಷ್ಣೋಯಿ, ತಾನು ಪ್ರತ್ಯೇಕ ಸಿಖ್ ರಾಷ್ಟ್ರ ಸ್ಥಾಪನೆಯ ಉದ್ದೇಶ ಹೊಂದಿರುವ ಖಲಿಸ್ತಾನ್ ಚಳುವಳಿಯ ವಿರುದ್ಧವಿದ್ದೇನೆ ಎಂದಿದ್ದ. ತಾನು ದೇಶದ್ರೋಹಿ ಅಲ್ಲ ಎಂದು ಲಾರೆನ್ಸ್ ಒತ್ತಿ ಹೇಳಿದ್ದ.
ಆತನ ಸಂದರ್ಶನದ ವೀಡಿಯೋವನ್ನು ಈಗ ತೆಗೆದುಹಾಕಲಾಗಿದ್ದು, ಆ ಸಂದರ್ಶನವನ್ನು ಹೇಗೆ ಚಿತ್ರಿಸಿ ಬಿಡುಗಡೆಗೊಳಿಸಲಾಯಿತು ಎಂಬ ಕುರಿತು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ಲಾರೆನ್ಸ್ ಬಿಷ್ಣೋಯಿ ಪ್ರಸ್ತುತ ಗುಜರಾತಿನ ಔದ್ಯಮಿಕ ನಗರವಾದ ಅಹಮದಾಬಾದ್‌ನ ಸಾಬರಮತಿ ಕೇಂದ್ರೀಯ ಕಾರಾಗೃಹದಲ್ಲಿದ್ದಾನೆ. ಮಾಧ್ಯಮ ವರದಿಗಳ ಪ್ರಕಾರ, ಆತನ ಸುರಕ್ಷತೆಯ ದೃಷ್ಟಿಯಿಂದ, ಮತ್ತು ಆತ ಜೈಲಿನ ನಿಯಮಾವಳಿಗಳನ್ನು ಮುರಿಯುವುದನ್ನು ತಪ್ಪಿಸುವ ಸಲುವಾಗಿ ಬಿಷ್ಣೋಯಿಯನ್ನು ಬೇರೆ ಬೇರೆ ಜೈಲುಗಳಿಗೆ ಸ್ಥಳಾಂತರಿಸಲಾಗುತ್ತದೆ.
ಕೆನಡಾ ಲಾರೆನ್ಸ್ ಬಿಷ್ಣೋಯಿ ವಿರುದ್ಧ ಯಾವುದೇ ಗುರುತರ ಆರೋಪಗಳನ್ನು ಹೊರಿಸಿಲ್ಲ. ಆದರೆ, ಕೆನಡಾದಲ್ಲಿ ನೆಲೆಸಿರುವ ಖಲಿಸ್ತಾನ್ ಬೆಂಬಲಿಗರನ್ನು ಉದ್ದೇಶಪೂರ್ವಕವಾಗಿ, ವೈಯಕ್ತಿಕವಾಗಿ ಗುರಿಯಾಗಿಸಲಾಗುತ್ತಿದೆ ಎಂದು ಆರ್‌ಸಿಎಂಪಿ ಹೇಳಿದೆ.
ಬಿಷ್ಣೋಯಿ ನೇತೃತ್ವದ ಅಪರಾಧಿ ಪಡೆ ಈ ಹಿಂದೆ ಇಂತಹ ಚಟುವಟಿಕೆಗಳ ಜವಾಬ್ದಾರಿ ಹೊತ್ತುಕೊಂಡಿತ್ತು ಎಂದಿರುವ ಆರ್‌ಸಿಎಂಪಿ, ಲಾರೆನ್ಸ್ ಬಿಷ್ಣೋಯಿ ಗುಂಪು ಭಾರತದ ಏಜೆಂಟರೊಡನೆ ಸಂಪರ್ಕ ಹೊಂದಿದೆ ಎಂದು ಆರೋಪಿಸಿದೆ.
ಬಿಷ್ಣೋಯಿ ಮತ್ತು ಆತನ ಗುಂಪಿನ ವಿರುದ್ಧ ಕೊಲೆ, ಸುಲಿಗೆ, ಮತ್ತು ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿರುವ ಆರೋಪಗಳಿವೆ.
ಎನ್ಐಎ ಪ್ರಕಾರ, ಬಿಷ್ಣೋಯಿ ಮತ್ತು ಆತನ ಗುಂಪು ಪ್ರಮುಖ ಸಾಮಾಜಿಕ ಮತ್ತು ಧಾರ್ಮಿಕ ವ್ಯಕ್ತಿಗಳು, ಸೆಲೆಬ್ರಿಟಿಗಳು, ಹಾಡುಗಾರರು ಮತ್ತು ಉದ್ಯಮ ಮುಖಂಡರನ್ನು ಗುರಿಯಾಗಿಸಿ ದಾಳಿ ನಡೆಸುವ ಉದ್ದೇಶ ಹೊಂದಿದೆ.
ಬಿಷ್ಣೋಯಿ ಗುಂಪು ಎದುರಿಸುತ್ತಿರುವ ಒಂದು ಪ್ರಮುಖ ಆರೋಪವೆಂದರೆ, ಖ್ಯಾತ ಪಂಜಾಬಿ ರ‌್ಯಾಪರ್, ಹಾಡುಗಾರ ಸಿಧು ಮೂಸೇ ವಾಲಾ ಹತ್ಯೆ.
ಮಾಧ್ಯಮ ವರದಿಗಳ ಪ್ರಕಾರ, ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 20ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದು, ಲಾರೆನ್ಸ್ ಬಿಷ್ಣೋಯಿಯನ್ನು ಈ ಪ್ರಕರಣದಲ್ಲಿ ಪ್ರಮುಖ ಆರೋಪಿ ಎಂದಿದ್ದಾರೆ.
2018ರಲ್ಲಿ ಬಿಡುಗಡೆಯಾದ ವೀಡಿಯೋ ಒಂದರಲ್ಲಿ, ಲಾರೆನ್ಸ್ ಬಿಷ್ಣೋಯಿ ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್‌ನನ್ನು ಕೊಲ್ಲುವುದಾಗಿ ಬೆದರಿಕೆ ಒಡ್ಡಿದ್ದ. ಈ ವರ್ಷ, ಮುಂಬೈನಲ್ಲಿ ಸಲ್ಮಾನ್ ಖಾನ್ ನಿವಾಸದ ಹೊರಗಡೆ ಗುಂಡಿನ ಸದ್ದು ಕೇಳಿತ್ತು. ಆದರೆ ಈ ಘಟನೆಯ ಕುರಿತಂತೆ ಲಾರೆನ್ಸ್ ಬಿಷ್ಣೋಯಿ ಯಾವುದೇ ಸಾರ್ವಜನಿಕ ಹೇಳಿಕೆ ನೀಡಿಲ್ಲ.
ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಬಂದೂಕುಧಾರಿಗಳನ್ನು ವಶಕ್ಕೆ ತೆಗೆದುಕೊಂಡರು. ಅವರು ತಾವು ಬಿಷ್ಣೋಯಿ ಗುಂಪಿನ ಆದೇಶದ ಅನುಸಾರ ಈ ಕೃತ್ಯ ನಡೆಸಿರುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.
ಶನಿವಾರ, ಅಕ್ಟೋಬರ್ 12ರಂದು, ಬಂದೂಕುಧಾರಿಗಳು ಭಾರತದ ಔದ್ಯಮಿಕ ಕೇಂದ್ರವಾದ ಮುಂಬೈ ನಗರಿಯಲ್ಲಿ ಶಾಸಕ ಬಾಬಾ ಸಿದ್ದಿಕಿಯ ಮೇಲೆ ಗುಂಡಿನ ದಾಳಿ ನಡೆಸಿ, ಅವರನ್ನು ಹತ್ಯೆಗೈದು ಅಲ್ಲಿಂದ ಪರಾರಿಯಾಗಿದ್ದರು.
ಬಿಷ್ಣೋಯಿ ಗುಂಪಿನ ಸದಸ್ಯ ಎಂದು ಹೇಳಿಕೊಳ್ಳುತ್ತಿದ್ದ ಓರ್ವ ವ್ಯಕ್ತಿ ಫೇಸ್‌ಬುಕ್ ಮೂಲಕ ಬಾಬಾ ಸಿದ್ದಿಕಿ ಹತ್ಯೆಯ ಜವಾಬ್ದಾರಿ ಹೊತ್ತುಕೊಂಡಿದ್ದಾನೆ. ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಪೊಲೀಸರು, ಈ ದಾಳಿಯ ಯೋಜನೆಯಲ್ಲಿ ಲಾರೆನ್ಸ್ ಬಿಷ್ಣೋಯಿ ಪಾಲ್ಗೊಂಡಿದ್ದಾನೆ ಎಂದಿದ್ದಾರೆ. ಆದರೆ ಅದನ್ನು ಬೆಂಬಲಿಸುವ ಯಾವುದೇ ಪೂರಕ ಸಾಕ್ಷಿಗಳನ್ನು ಅವರು ಒದಗಿಸಿಲ್ಲ.
ಲಾರೆನ್ಸ್ ಬಿಷ್ಣೋಯಿ ಪರ ವಕೀಲ ರಾಜಾನಿ ಎಂಬಾತನ ಪ್ರಕಾರ, ಲಾರೆನ್ಸ್ 2012ರಿಂದಲೂ ಭಾರತದಾದ್ಯಂತ ಕೊಲೆ, ಸುಲಿಗೆ, ಹಾಗೂ ಭಯೋತ್ಪಾದನೆಗೆ ಸಂಬಂಧಿಸಿದಂತೆ 40ಕ್ಕೂ ಹೆಚ್ಚು ಪ್ರಕರಣಗಳನ್ನು ಎದುರಿಸುತ್ತಿದ್ದಾನೆ. ಬಿಷ್ಣೋಯಿ ಇವುಗಳಲ್ಲಿ ಬಹಳಷ್ಟು ಆರೋಪಗಳಲ್ಲಿ ಹುರುಳಿಲ್ಲ ಎಂದಿದ್ದು, ಅವುಗಳಲ್ಲಿ ಹಲವಾರು ಪ್ರಕರಣಗಳ ವಿಚಾರಣೆ ಇನ್ನೂ ಆರಂಭಗೊಂಡಿಲ್ಲ.
- ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
Advertisement