
ಮುಂಬೈ: ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಬಿಷ್ಣೋಯ್ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಕೂಡಲೇ ಆ ಸಮುದಾಯದ ಕ್ಷಮೆ ಕೇಳಿ ವಿವಾದಕ್ಕೆ ಅಂತ್ಯ ಹಾಡಬೇಕು ಎಂದು ಬಿಜೆಪಿ ನಾಯಕರೊಬ್ಬರು ಸಲಹೆ ನೀಡಿದ್ದಾರೆ.
ಎನ್ ಸಿಪಿ ಮುಖಂಡ ಹಾಗೂ ಬಾಲಿವುಡ್ ನ ಹಿರಿಯ ನಿರ್ಮಾಪಕ ಬಾಬಾ ಸಿದ್ದಿಕಿ ಹತ್ಯೆ ಬೆನ್ನಲ್ಲೇ ನಟ ಸಲ್ಮಾನ್ ಖಾನ್ ಗೆ ಹೆಚ್ಚುವರಿ ಭದ್ರತೆ ನೀಡಲಾಗುತ್ತಿದ್ದು, ಇದರ ನಡುವೆ ಬಿಜೆಪಿ ನಾಯಕ ಹಾಗೂ ಮಾಜಿ ಸಂಸದ ಹರ್ನಾಥ್ ಸಿಂಗ್ ಯಾದವ್ ಸಲ್ಮಾನ್ ಖಾನ್ ಗೆ ಹೊಸದೊಂದು ಸಲಹೆ ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, 'ಪ್ರೀತಿಯ ಸಲ್ಮಾನ್ ಖಾನ್, ಬಿಷ್ಣೋಯ್ ಸಮುದಾಯವು ಕೃಷ್ಣಮೃಗ ಪ್ರಾಣಿಯನ್ನು ದೇವತೆಗಳೆಂದು ಪೂಜಿಸುತ್ತದೆ ಮತ್ತು ನೀವು ಅದೇ ಜಿಂಕೆಯನ್ನು ಬೇಟೆಯಾಡಿ, ಅದನ್ನು ಬೇಯಿಸಿ ತಿಂದಿದ್ದೀರಿ, ಇದು ಬಿಷ್ಣೋಯ್ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದೆ. ಇದರಿಂದಾಗಿ ಬಿಷ್ಣೋಯ್ ಸಮುದಾಯವು ನಿಮ್ಮ ಮೇಲೆ ಬಹಳ ದಿನಗಳಿಂದ ಕೋಪಗೊಂಡಿದ್ದು ಧ್ವೇಷ ಸಾಧಿಸುತ್ತಿದೆ ಎಂದಿದ್ದಾರೆ.
ಅಲ್ಲದೆ, 'ಮನುಷ್ಯರು ತಪ್ಪುಗಳನ್ನು ಮಾಡುತ್ತಾರೆ. ಅದು ಸಹಜ. ಆದರೆ ನೀವು ದೊಡ್ಡ ನಟ; ದೇಶದ ಜನರು ನಿಮ್ಮನ್ನು ತುಂಬಾ ಪ್ರೀತಿಸುತ್ತಾರೆ. ಬಿಷ್ಣೋಯ್ ಸಮುದಾಯದ ಭಾವನೆಗಳನ್ನು ಗೌರವಿಸಿ ಮತ್ತು ನಿಮ್ಮ ದೊಡ್ಡ ತಪ್ಪಿಗೆ ಕ್ಷಮೆಯಾಚಿಸಬೇಕೆಂಬುದು ನನ್ನ ಸಲಹೆಯಾಗಿದೆ ಎಂದು ಯಾದವ್ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
'ಕ್ಷಮೆ ಕೇಳು ಬಿಟ್ಟುಬಿಡುತ್ತೇನೆ': Lawrence Bishnoi ಹಳೇ ವಿಡಿಯೋ ವೈರಲ್
ಬಿಜೆಪಿ ನಾಯಕನ ಈ ಸುದೀರ್ಘ ಟ್ವೀಟ್ ಇದೀಗ ವೈರಲ್ ಆಗುತ್ತಿರುವಂತೆಯೇ 'ಕ್ಷಮೆ ಕೇಳು ಬಿಟ್ಟುಬಿಡುತ್ತೇನೆ' ಎಂದು ಗ್ಯಾಂಗ್ ಸ್ಟರ್ Lawrence Bishnoi ಹೇಳಿದ್ದ ಹಳೇ ವಿಡಿಯೋ ಇದೀಗ ಮತ್ತೆ ವೈರೈಲ್ ಆಗುತ್ತಿದೆ.
ಎಬಿಪಿ ನ್ಯೂಸ್ ನೊಂದಿಗೆ ವಿಡಿಯೋ ಕರೆ ಮಾಡಿ ಮಾತನಾಡಿದ್ದ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್, 'ನಮ್ಮ ಗುರಿ ಒಂದೇ.. ಅದು ಸಲ್ಮಾನ್ ಖಾನ್ ನನ್ನು ಹೊಡೆಯುವುದು. ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದು ತನ್ನ ಏಕೈಕ ಗುರಿ. ಆದರೆ ಒಂದು ವೇಳೆ ಆತ ನಮ್ಮ ಸಮುದಾಯದ ದೇಗುಲಕ್ಕೆ ಭೇಟಿ ನೀಡಿ ದೇವರ ಮುಂದೆ ಕ್ಷಮೆಯಾಚಿಸಿದರೆ ಆತನನ್ನು ಕ್ಷಮಿಸುತ್ತೇವೆ ಎಂದು ಹೇಳಿದ್ದ. ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ಆತ ವಿಡಿಯೋ ಕಾಲಿಂಗ್ ನಲ್ಲಿ ಹೇಳಿರುವಂತೆ, 'ಸಲ್ಮಾನ್ ಖಾನ್ ಮೊದಲು ಕ್ಷಮೆಯಾಚಿಸುವ ಕುರಿತು ಬಿಷ್ಣೋಯ್ ಸಮಾಜಕ್ಕೆ ಪ್ರಸ್ತಾಪಿಸಬೇಕು. ಅಲ್ಲದೆ ಬಿಕಾನೇರ್ ಬಳಿ ಇರುವ ನಮ್ಮ ಸಮಾಜದ ದೇವಸ್ಥಾನಕ್ಕೆ ಬಂದು ಕ್ಷಮೆ ಕೇಳಬೇಕು. ಮುಂದೆ ಇಂತಹ ತಪ್ಪನ್ನು ಮಾಡುವುದಿಲ್ಲ ಮತ್ತು ವನ್ಯಜೀವಿಗಳ ರಕ್ಷಣೆ ಹಾಗೂ ಪರಿಸರ ಸಂರಕ್ಷಣೆಗೆ ಸದಾ ಶ್ರಮಿಸುವುದಾಗಿ ಪ್ರಮಾಣ ವಚನ ಸ್ವೀಕರಿಸಬೇಕು. ಅವನು ಹಾಗೆ ಮಾಡಿದರೆ, ಅವನನ್ನು ಕ್ಷಮಿಸಲು ಸಮಾಜದ ನಿರ್ಧಾರವನ್ನು ಪರಿಗಣಿಸಲಾಗುವುದು ಎಂದು ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ ಹೇಳಿದ್ದ ಹೇಳಿಕೆ ಇದೀಗ ವೈರಲ್ ಆಗುತ್ತಿದೆ.
Advertisement