
ಇಸ್ರೇಲ್ ಇರಾನ್ ಮೇಲೆ ಮಾಡಿರುವ ದಾಳಿಗೆ ಪ್ರತಿಯಾಗಿ, ತಕ್ಷಣವೇ ಆಕ್ರಮಣ ನಡೆಸುವ ಬದಲು, ಜಾಗರೂಕವಾಗಿ ಪರಿಶೀಲಿಸಿ ನಡೆಸಲಾಗುತ್ತದೆ ಎಂದು ಇರಾನಿನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹೇಳಿದ್ದಾರೆ. ಇರಾನ್ ಮಧ್ಯ ಪೂರ್ವದಲ್ಲಿ ಪರಿಸ್ಥಿತಿ ಇನ್ನಷ್ಟು ತೀವ್ರವಾಗದಂತೆ ತಡೆಯುತ್ತಾ, ತನ್ನ ಜನರಿಗೂ ಸಮಸ್ಯೆಗಳು ಉಂಟಾಗದಂತೆ ನೋಡಿಕೊಂಡು ಕ್ರಮ ಕೈಗೊಳ್ಳಬೇಕಾದ ಪರಿಸ್ಥಿತಿ ಇರುವುದು ಇದಕ್ಕೆ ಕಾರಣವಾಗಿದೆ.
ಇಸ್ರೇಲ್ ಇರಾನಿನ ಮೇಲೆ ಮೂರು ದಾಳಿಗಳನ್ನು ನಡೆಸಿದ ದಿನ, ಇರಾನ್ ಸರ್ವೋಚ್ಚ ನಾಯಕ ಖಮೇನಿ ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ್ದರು. ತನ್ನ ಭಾಷಣದಲ್ಲಿ ಇರಾನಿನ ಜನರನ್ನು ಪ್ರತೀಕಾರಕ್ಕೆ ಈಗಲೇ ಆಗ್ರಹಿಸಬೇಡಿ ಎಂದು ಖಮೇನಿ ಕರೆ ನೀಡಿದ್ದು, ಇರಾನಿನ ಪ್ರತಿಕ್ರಿಯೆ ಇನ್ನಷ್ಟು ಸಮಯ ತೆಗೆದುಕೊಳ್ಳಬಹುದು ಎಂಬ ಸಂದೇಶ ನೀಡಿದೆ.
ಯಹೂದಿ ಆಡಳಿತದ ಪರಿಣಾಮವಾಗಿ ತಲೆದೋರಿರುವ ಅಪಾಯವನ್ನು ಯಾವುದೇ ಕಾರಣಕ್ಕೂ ಕಡಿಮೆಯಾಗಿ ಪರಿಗಣಿಸಬಾರದು ಎಂದು ಖಮೇನಿ ಹೇಳಿದ್ದಾರೆ. ಇಸ್ರೇಲ್ ನಡೆಸಿರುವ ಆಕ್ರಮಣವನ್ನು 'ಕಾರ್ಯತಂತ್ರದ ತಪ್ಪು' ಎಂದು ಕರೆದಿರುವ ಖಮೇನಿ, ಅದಕ್ಕೆ ಸವಾಲೊಡ್ಡಲೇಬೇಕು ಎಂದು ಹೇಳಿದ್ದಾರೆ.
ಇರಾನಿನ ಅತ್ಯುನ್ನತ ನಾಯಕನಾಗಿರುವ ಖಮೇನಿ, ಇರಾನಿನ ಎಲ್ಲ ನಿರ್ಧಾರಗಳನ್ನೂ ತೆಗೆದುಕೊಳ್ಳುವ ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ಆದರೆ ತನ್ನ ಭಾಷಣದಲ್ಲಿ ಖಮೇನಿ ಇಸ್ರೇಲ್‌ಗೆ ನೇರ ಪ್ರತೀಕಾರದ ಎಚ್ಚರಿಕೆಯನ್ನೇನೂ ನೀಡಿಲ್ಲ. ಅದರ ಬದಲು, ಟೆಹರಾನ್ ಇಸ್ರೇಲ್ ಆಕ್ರಮಣಕ್ಕೆ ಹೇಗೆ ಪ್ರತಿಕ್ರಿಯೆ ನೀಡಬೇಕು ಎನ್ನುವುದನ್ನು ಇರಾನಿನ ಹಿರಿಯ ನಾಯಕರು ನಿರ್ಧರಿಸಲಿದ್ದಾರೆ ಎಂದು ಖಮೇನಿ ಹೇಳಿದ್ದಾರೆ. "ನಮ್ಮ ಅಧಿಕಾರಿಗಳು ಯಹೂದಿ ಆಡಳಿತದ ವಿರುದ್ಧ ಇರಾನಿಯನ್ ಜನರ ಸಾಮರ್ಥ್ಯ ಮತ್ತು ದೃಢ ನಿಶ್ಚಯಗಳನ್ನು ಪ್ರದರ್ಶಿಸುವಂತಹ ತೀರ್ಮಾನ ಕೈಗೊಳ್ಳಲಿದ್ದಾರೆ. ದೇಶದ ಹಿತಾಸಕ್ತಿಗೆ ಪೂರಕವಾದ ಎಂತಹ ನಿರ್ಧಾರವನ್ನಾದರೂ ಅವರು ತೆಗೆದುಕೊಳ್ಳುತ್ತಾರೆ" ಎಂದು ಖಮೇನಿ ಹೇಳಿದ್ದಾರೆ.
ಇಸ್ರೇಲ್, ಇರಾನ್ ಮತ್ತು ಇರಾನ್ ಬೆಂಬಲಿತ ಸಶಸ್ತ್ರ ಗುಂಪುಗಳ ನಡುವಿನ ಉದ್ವಿಗ್ನತೆ ಪೂರ್ಣ ಪ್ರಮಾಣದ ಯುದ್ಧದ ಸ್ವರೂಪ ಪಡೆದುಕೊಳ್ಳಬಹುದೇ ಎಂಬ ಆತಂಕ ಮೂಡಿರುವ ಸಂದರ್ಭದಲ್ಲಿ, ಖಮೇನಿ ಈಗ ಇರಾನಿನ ಜನರಿಗೆ ಭರವಸೆ ನೀಡಿದ್ದಾರೆ. ಖಮೇನಿಯ ಹೇಳಿಕೆಯನ್ನು ಗಮನಿಸಿದರೆ, ಇಸ್ರೇಲ್ ದಾಳಿಯಿಂದ ಮೊದಲು ಊಹಿಸಿದ ಪ್ರಮಾಣದಲ್ಲಿ ಯಾವುದೇ ಹಾನಿ ತಲೆದೋರಿಲ್ಲ ಎಂದು ಆತ ಬಿಂಬಿಸಲು ಪ್ರಯತ್ನ ನಡೆಸಿರುವಂತೆ ತೋರುತ್ತಿದೆ.
ಅಕ್ಟೋಬರ್ 26ರ ಮುಂಜಾನೆಯ ವೇಳೆ, ಇಸ್ರೇಲಿ ಯುದ್ಧ ವಿಮಾನಗಳು ಟೆಹರಾನ್ ಸೇರಿದಂತೆ, ಇರಾನಿನ ಮೂರು ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಿದವು. ಇರಾನಿನ ಪ್ರಕಾರ, ಇಸ್ರೇಲಿ ಯುದ್ಧ ವಿಮಾನಗಳು ಇರಾನಿನ ವಾಯು ಪ್ರದೇಶವನ್ನು ಪ್ರವೇಶಿಸದೆ, ಇರಾಕಿನ ಆಕಾಶದಿಂದ ಕ್ಷಿಪಣಿಗಳನ್ನು ಪ್ರಯೋಗಿಸಿವೆ. ಈ ದಾಳಿಯ ಕುರಿತು ವಿವರಣೆ ನೀಡಿದ ಇಸ್ರೇಲಿ ಮಿಲಿಟರಿ, ಮೂರು ವಾರಗಳ ಹಿಂದೆ ಇಸ್ರೇಲ್ ಮೇಲೆ ಇರಾನ್ ನಡೆಸಿದ್ದ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಗಳಿಗೆ ಪ್ರತಿಕ್ರಿಯೆಯ ರೂಪದಲ್ಲಿ ಈ ಪ್ರತಿದಾಳಿ ನಡೆಸಲಾಗಿದೆ ಎಂದಿದೆ. ಇಸ್ರೇಲ್ ತನ್ನ ದಾಳಿಯಲ್ಲಿ ನಿಖರವಾಗಿ ಇರಾನಿನ ಕ್ಷಿಪಣಿ ಉತ್ಪಾದನಾ ಘಟಕಗಳು ಮತ್ತು ವಾಯು ರಕ್ಷಣಾ ವ್ಯವಸ್ಥೆಗಳನ್ನು ಗುರಿಯಾಗಿಸಿದೆ ಎಂದು ಮಿಲಿಟರಿ ಮೂಲಗಳು ವಿವರಿಸಿವೆ.
ಇಸ್ರೇಲಿ ದಾಳಿಯಲ್ಲಿ, ಇರಾನಿನ ನಾಲ್ವರು ಯೋಧರು ಪ್ರಾಣ ಕಳೆದುಕೊಂಡಿದ್ದಾರೆ ಎನ್ನಲಾಗಿದೆ.
ಅಕ್ಟೋಬರ್ 27ರ ಭಾನುವಾರದಂದು, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಇಸ್ರೇಲಿ ವಾಯು ಸೇನೆ ಇರಾನಿನಾದ್ಯಂತ ವಾಯುದಾಳಿ ನಡೆಸಿದ್ದು, ಆ ಮೂಲಕ ಇರಾನಿನ ರಕ್ಷಣಾ ವ್ಯವಸ್ಥೆಗಳು ಮತ್ತು ಕ್ಷಿಪಣಿ ಉತ್ಪಾದನಾ ಸಾಮರ್ಥ್ಯವನ್ನು ಬಹುಮಟ್ಟಿಗೆ ಕಡಿಮೆಯಾಗಿಸಿದೆ ಎಂದು ಘೋಷಿಸಿದ್ದಾರೆ.
ಇಸ್ರೇಲಿನ ದಾಳಿಯ ನಿಖರತೆ ಮತ್ತು ತೀವ್ರತೆಗಳ ಕಾರಣದಿಂದ, ಈ ದಾಳಿ ತನ್ನ ಗುರಿಗಳು, ಉದ್ದೇಶಗಳನ್ನು ಈಡೇರಿಸಿದೆ. ಅಕ್ಟೋಬರ್ 7, 2023ರಂದು ಹಮಾಸ್ ಉಗ್ರರು ಇಸ್ರೇಲ್ ಒಳಗೆ ನುಗ್ಗಿ, ಸಾವಿರಾರು ಜನರನ್ನು ಕೊಂದು, ಈ ಕದನವನ್ನು ಆರಂಭಿಸಿದ್ದರು. ಅಂದು ಸಾವಿಗೀಡಾದ ಇಸ್ರೇಲಿಗರನ್ನು ಸ್ಮರಿಸುವ ಸಮಾರಂಭದಲ್ಲಿ ಮಾತನಾಡಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, "ಜನರು ಒಂದು ಸರಳ ನಿಯಮವನ್ನು ಅರ್ಥ ಮಾಡಿಕೊಳ್ಳಬೇಕು. ಅದೇನೆಂದರೆ, ನಮಗೆ ಯಾರಾದರೂ ನೋವುಂಟು ಮಾಡಿದರೆ, ನಾವು ಅವರಿಗೂ ನೋವನ್ನೇ ನೀಡುತ್ತೇವೆ. ಈ ನೀತಿ ನಮ್ಮನ್ನು ಇಲ್ಲಿಯತನಕ ಕರೆದುಕೊಂಡು ಬಂದಿದೆ. ಮುಂದಿನ ದಿನಗಳಲ್ಲೂ ಇದೇ ನಿಯಮ ನಮ್ಮನ್ನು ಮುಂದಕ್ಕೆ ಒಯ್ಯಲಿದೆ" ಎಂದಿದ್ದರು.
ಇಸ್ರೇಲ್ ದಾಳಿ ನಡೆಸಿದ ಬಳಿಕ, ಇರಾನಿನ ಮೊದಲ ಪ್ರತಿಕ್ರಿಯೆ ಆ ದಾಳಿಯಿಂದ ಹೇಳಿಕೊಳ್ಳುವ ಯಾವುದೇ ಪರಿಣಾಮ ಉಂಟಾಗಿಲ್ಲ ಎನ್ನುವುದಾಗಿತ್ತು. ಅಕ್ಟೋಬರ್ 26, ಶನಿವಾರದಂದು ಮಾತನಾಡಿದ ಇರಾನಿ ಸೇನೆಯ ಜನರಲ್ ಸ್ಟಾಫ್ ಆಫ್ ಆರ್ಮ್ಡ್ ಫೋರ್ಸಸ್, "ಇರಾನ್ ಸೂಕ್ತವಾದ ಸಮಯದಲ್ಲಿ, ಸೂಕ್ತವಾದ ರೀತಿಯಲ್ಲಿ ಈ ದಾಳಿಗೆ ಪ್ರತಿಕ್ರಿಯೆ ನೀಡುವ ಎಲ್ಲ ಕಾನೂನುಬದ್ಧ ಹಕ್ಕನ್ನು ಹೊಂದಿದೆ" ಎಂದು ಹೇಳಿಕೆ ನೀಡಿದ್ದರು.
ಇರಾನ್ ಒಂದು ಹೇಳಿಕೆಯನ್ನು ಬಿಡುಗಡೆಗೊಳಿಸಿದ್ದು, ಅದರಲ್ಲಿ ತನ್ನ ಮುಖ್ಯ ಗುರಿ ಗಾಜಾ ಮತ್ತು ಲೆಬನಾನ್‌ನಲ್ಲಿ ಕದನ ವಿರಾಮ ಜಾರಿಗೆ ತರುವುದಾಗಿದೆ ಎಂದಿದೆ. ಗಾಜಾದಲ್ಲಿ ಇಸ್ರೇಲ್ ಹಮಾಸ್ ವಿರುದ್ಧ ಸೆಣಸುತ್ತಿದ್ದರೆ, ಲೆಬನಾನ್‌ನಲ್ಲಿ ಹೆಜ್ಬೊಲ್ಲಾ ಸಂಘಟನೆಯ ವಿರುದ್ಧ ಹೋರಾಡುತ್ತಿದೆ. ಇವೆರಡೂ ಸಂಘಟನೆಗಳಿಗೂ ಇರಾನಿನ ಬೆಂಬಲವಿದೆ.
ಅಕ್ಟೋಬರ್ 1ರಂದು ಇರಾನ್ ಇಸ್ರೇಲ್ ಮೇಲೆ 180ಕ್ಕೂ ಹೆಚ್ಚು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಪ್ರಯೋಗಿಸಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ ಇಸ್ರೇಲ್ ಇರಾನ್ ಮೇಲೆ ವಾಯುದಾಳಿ ನಡೆಸಿದೆ. ಇರಾನಿಗೆ ಅತ್ಯಂತ ಆಪ್ತವಾಗಿರುವ ಲೆಬಾನೀಸ್ ಸಂಘಟನೆ ಹೆಜ್ಬೊಲ್ಲಾದ ಮುಖಂಡ ಹಸನ್ ನಸ್ರಲ್ಲಾನನ್ನು ಇಸ್ರೇಲ್ ಹತ್ಯೆಗೈದುದಕ್ಕೆ ಪ್ರತೀಕಾರದ ಕ್ರಮವಾಗಿ ಇರಾನ್ ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ನಡೆಸಿತ್ತು.
ಆದರೆ, ಈಗ ಇರಾನ್ ಮತ್ತು ಇಸ್ರೇಲ್ ಎರಡೂ ದೇಶಗಳು ಪೂರ್ಣ ಪ್ರಮಾಣದ ಯುದ್ಧವನ್ನು ತಪ್ಪಿಸುವ ಪ್ರಯತ್ನ ನಡೆಸುತ್ತಿರುವಂತೆ ಕಂಡುಬರುತ್ತಿದೆ.
ಬೆಂಜಮಿನ್ ನೆತನ್ಯಾಹು ಅವರು ಅಕ್ಟೋಬರ್ 26ರ ಬಳಿಕ ತನ್ನ ಸಚಿವರಿಗೆ ಯಾವುದೇ ಸಂದರ್ಶನ ನೀಡದಂತೆ ನಿಷೇಧಿಸಿದ್ದಾರೆ. ಆ ಬಳಿಕ, ಇಸ್ರೇಲ್ ಸರ್ಕಾರವೂ ಇರಾನಿನ ದಾಳಿಯ ಕುರಿತಂತೆ ಬಹುತೇಕ ಮೌನವಾಗಿಯೇ ಉಳಿದಿದೆ. ಇದರ ಪರಿಣಾಮವಾಗಿ, ಇಸ್ರೇಲಿ ಮಿಲಿಟರಿ ಇರಾನಿನ ಕ್ಷಿಪಣಿ ಮತ್ತು ವಾಯು ರಕ್ಷಣಾ ವ್ಯವಸ್ಥೆಗಳ ಉತ್ಪಾದನಾ ಘಟಕದ ಮೇಲೆ ನಡೆಸಿರುವ ನಿಖರ ದಾಳಿಗಳ ಕುರಿತು ಸಣ್ಣ ಪ್ರಮಾಣದ ಮಾಹಿತಿ ನೀಡಿದೆ. ಒಂದು ವೇಳೆ ಇರಾನ್ ಏನಾದರೂ ಪ್ರತಿದಾಳಿ ನಡೆಸಿದರೆ, ತಾನು ಇನ್ನಷ್ಟು ದಾಳಿ ನಡೆಸುವ ಎಚ್ಚರಿಕೆಯನ್ನೂ ಇಸ್ರೇಲ್ ಸೇನೆ ನೀಡಿದೆ.
ಮೂರು ವಾರಗಳ ಹಿಂದೆ ಇರಾನ್ ನಡೆಸಿದ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಗೆ ಪ್ರತಿಯಾಗಿ, ನೆತನ್ಯಾಹು ಸರ್ಕಾರ ಇರಾನ್ ಮೇಲೆ ದಾಳಿ ನಡೆಸಲು ಆಲೋಚಿಸುತ್ತಿತ್ತು. ಒಂದು ವೇಳೆ ದಾಳಿ ನಡೆಸುವುದಾದರೆ, ಇರಾನಿನ ಪರಮಾಣು ಅಥವಾ ಇಂಧನ ಘಟಕಗಳ ಮೇಲೆ ದಾಳಿ ನಡೆಸದಂತೆ ಅಮೆರಿಕಾ ಇಸ್ರೇಲ್‌ಗೆ ಆಗ್ರಹಿಸಿತ್ತು.
ವಾಯುದಾಳಿ ನಡೆಸಿದ ಬಳಿಕ ಇಸ್ರೇಲ್ ತನ್ನ ಮಿಲಿಟರಿ ಕ್ರಮ ಇಲ್ಲಿಗೆ ಪೂರ್ಣಗೊಂಡಿದೆ ಎಂದು ಘೋಷಿಸಿದೆ. ಇದರ ಬೆನ್ನಲ್ಲೇ, ಬೈಡನ್ ಆಡಳಿತ ಇಸ್ರೇಲಿನ ಮಿಲಿಟರಿ ಕ್ರಮ ಇಸ್ರೇಲ್ ಮತ್ತು ಇರಾನ್ ನಡುವೆ ಇತ್ತೀಚೆಗೆ ಹೊಗೆಯಾಡುತ್ತಿರುವ ಹಲವು ಸುತ್ತುಗಳ ಹಿಂಸಾತ್ಮಕ ದಾಳಿಗಳಿಗೆ ಕೊನೆಯಾಗಬಹುದು ಎಂಬ ಆಶಾಭಾವ ವ್ಯಕ್ತಪಡಿಸಿದೆ. ಅಮೆರಿಕಾ ಈ ಸಂದೇಶವನ್ನು ಪ್ರತ್ಯಕ್ಷ ಮತ್ತು ಪರೋಕ್ಷವಾಗಿಯೂ ಇರಾನ್‌ಗೆ ತಲುಪಿಸಿದೆ ಎಂದು ಅಮೆರಿಕನ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಒಂದು ವೇಳೆ ಇರಾನ್ ಏನಾದರೂ ಈಗ ಮತ್ತೊಮ್ಮೆ ದಾಳಿ ನಡೆಸಿದರೆ, ಅದರಿಂದ ದುಷ್ಪರಿಣಾಮಗಳು ಉಂಟಾಗಬಹುದು ಎಂದು ಅಮೆರಿಕನ್ ಅಧಿಕಾರಿ ಹೇಳಿದ್ದು, ಅಂತಹ ಪರಿಸ್ಥಿತಿ ತಲೆದೋರಿದರೆ, ಅಮೆರಿಕಾ ಇಸ್ರೇಲ್ ಬೆಂಬಲಕ್ಕೆ ನಿಲ್ಲಲಿದೆ ಎಂದಿದ್ದಾರೆ.
ಈಜಿಪ್ಟ್ ಮತ್ತು ಕತಾರ್‌ಗಳ ವಿದೇಶಾಂಗ ಸಚಿವರೊಡನೆ ದೂರವಾಣಿ ಸಂಭಾಷಣೆ ನಡೆಸಿದ ಇರಾನಿನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ, "ತನ್ನ ಪ್ರಾದೇಶಿಕ ಸಮಗ್ರತೆಗೆ ಧಕ್ಕೆ ಉಂಟುಮಾಡುವ ಯಾವುದೇ ಪ್ರಯತ್ನದ ವಿರುದ್ಧ ಇರಾನ್ ಅತ್ಯಂತ ಗಂಭೀರವಾದ ಕ್ರಮ ಕೈಗೊಳ್ಳಲು ಹಿಂದೇಟು ಹಾಕುವುದಿಲ್ಲ" ಎಂದಿದ್ದಾರೆ. ಆದರೆ, ಇರಾನ್ ತನ್ನ ಪ್ರತಿಕ್ರಿಯೆಯನ್ನು 'ಸೂಕ್ತ ಸಮಯದಲ್ಲಿ' ನೀಡಲಿದೆ ಎಂದೂ ಅವರು ಹೇಳಿದ್ದಾರೆ.
ಇಸ್ರೇಲ್ ಆಕ್ರಮಣದ ಕುರಿತು ಹೇಳಿಕೆ ನೀಡಿರುವ ಇರಾನ್ ಮಿಲಿಟರಿ, ತಾನು ಬಹಳಷ್ಟು ಸಂಖ್ಯೆಯ ಇಸ್ರೇಲಿ ಕ್ಷಿಪಣಿಗಳನ್ನು ಹೊಡೆದುರುಳಿಸಿರುವುದಾಗಿ ತಿಳಿಸಿದೆ. ಇನ್ನು ಕೆಲವು ಕ್ಷಿಪಣಿಗಳು ತಮ್ಮ ಗುರಿ ತಲುಪಲು ಯಶಸ್ವಿಯಾದರೂ, ಅವುಗಳಿಂದ ಕೆಲವು ರೇಡಾರ್ ವ್ಯವಸ್ಥೆಗಳಿಗೆ ಸಣ್ಣಪುಟ್ಟ ಹಾನಿಯಾಗಿದೆ. ಅಂತಹ ಬಹುತೇಕ ರೇಡಾರ್ ವ್ಯವಸ್ಥೆಗಳನ್ನು ಈಗಾಗಲೇ ದುರಸ್ತಿಗೊಳಿಸಲಾಗಿದೆ ಎಂದು ಇರಾನಿ ಸೇನೆ ತಿಳಿಸಿದೆ.
ಇರಾನಿನ ವಾಯು ರಕ್ಷಣಾ ಕೇಂದ್ರ ಕಚೇರಿಯ ಪ್ರಕಾರ, ಇಸ್ರೇಲ್ ಟೆಹರಾನ್, ಇರಾನಿನ ಪಶ್ಚಿಮದ ಇಲಾಮ್ ಮತ್ತು ನೈಋತ್ಯ ಭಾಗದ ಖುಜೆಸ್ತಾನ್‌ಗಳಲ್ಲಿರುವ ಮಿಲಿಟರಿ ನೆಲೆಗಳ ಮೇಲೆ ಇಸ್ರೇಲ್ ವಾಯುದಾಳಿ ನಡೆಸಿದೆ.
ಇರಾನಿನ ಸರ್ಕಾರಿ ಮಾಧ್ಯಮ ಸಂಸ್ಥೆ, ಇಸ್ರೇಲ್ ದಾಳಿಯಿಂದ ಇರಾನಿನ ಜನಜೀವನದ ಮೇಲೆ ಅತ್ಯಂತ ಕನಿಷ್ಠ ಪ್ರಮಾಣದ ಪರಿಣಾಮ ಉಂಟಾಗಿದೆ ಎಂದಿತ್ತು. ರಸ್ತೆಗಳಲ್ಲಿ ನಡೆಸಿದ ಸಂದರ್ಶನಗಳಲ್ಲಿ, ಜನರು ತಮಗೆ ಯಾವುದೇ ಸ್ಫೋಟದ ಸದ್ದು ಕೇಳಿಲ್ಲ ಎಂದೋ, ಈ ಘಟನೆಗೆ ಅಂತಹ ಮಹತ್ವ ಇಲ್ಲವೆಂದೋ ಹೇಳಿಕೆ ನೀಡಿದ್ದರು.
ಇರಾನಿನ ಸುದ್ದಿ ಸಂಸ್ಥೆಗಳು ಇಸ್ಲಾಮಿಕ್ ರಿಪಬ್ಲಿಕ್‌ನ ಕಾರ್ಯತಂತ್ರದ ಗುರಿಗಳು ಮತ್ತು ಸಂದೇಶಗಳ ಪ್ರತಿಬಿಂಬದಂತೆ ಪರಿಗಣಿಸಲ್ಪಟ್ಟಿದ್ದು, ಅವು ಇರಾನಿನ ವಾಯು ರಕ್ಷಣಾ ವ್ಯವಸ್ಥೆಗಳು ಅತ್ಯಂತ ಸಮರ್ಥವಾಗಿವೆ ಎಂದು ಶ್ಲಾಘಿಸಿವೆ. ಈ ದಾಳಿಯಲ್ಲಿ ಇರಾನ್ ತನ್ನ ರಕ್ಷಣಾ ಸಾಮರ್ಥ್ಯ ಪ್ರದರ್ಶಿಸಿದ್ದು, ಇದರಲ್ಲಿ ಇಸ್ರೇಲ್‌ಗೇ ಹಿನ್ನಡೆಯಾಗಿದೆ ಎಂದಿವೆ.
ಇಸ್ರೇಲ್ ನಡೆಸಿರುವ ದಾಳಿಯನ್ನು ರಿಯಾದ್ 'ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆ' ಎಂದಿದೆ. ಇರಾನಿನ ಪ್ರಾದೇಶಿಕ ಎದುರಾಳಿಗಳಾದ ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಸೌದಿ ಅರೇಬಿಯಾದಂತಹ ಅರಬ್ ರಾಷ್ಟ್ರಗಳೂ ಇಸ್ರೇಲ್ ನಡೆಸಿರುವ ದಾಳಿಯನ್ನು ಖಂಡಿಸಿ, ಪ್ರಾದೇಶಿಕ ಉದ್ವಿಗ್ನತೆ ಹೆಚ್ಚಾಗುವ ಸಾಧ್ಯತೆಗಳ ಕುರಿತು ಕಳವಳ ವ್ಯಕ್ತಪಡಿಸಿವೆ.
- ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
Advertisement