
ಅನಾಮಧೇಯ ಹಮಾಸ್ ಅಧಿಕಾರಿಯೊಬ್ಬರ ಪ್ರಕಾರ, ಕಳೆದ ವರ್ಷ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ದಾಳಿ ನಡೆಸುವ ವರ್ಷಗಳಿಗೂ ಮುನ್ನ, ಹಮಾಸ್ ಮುಖಂಡ ಯಾಹ್ಯಾ ಸಿನ್ವರ್ ಸಂಘಟನೆ ಹೆಚ್ಚು ಸ್ವಾವಲಂಬಿ ಆಗಬೇಕು ಎಂದು ಅಭಿಪ್ರಾಯಪಟ್ಟಿದ್ದ.
ಇಸ್ರೇಲ್ ಮೇಲೆ ಅಕ್ಟೋಬರ್ 7ರಂದು ನಡೆಸಿದ ದಾಳಿಯ ಸಿದ್ಧತೆ ನಡೆಸುವಲ್ಲಿ ಗಾಜಾದ ನೆಲದಾಳದಲ್ಲಿರುವ ಸುರಂಗ ಜಾಲವೂ ಒಂದು ಮುಖ್ಯ ಭಾಗವಾಗಿತ್ತು. ಯಾಹ್ಯಾ ಸಿನ್ವರ್ ನೇತೃತ್ವದಲ್ಲಿ ನಡೆದ ಸಭೆಗಳಲ್ಲಿ ಭಾಗವಹಿಸಿದ ಜನರ ಪ್ರಕಾರ, ಹಮಾಸ್ ಈ ದಾಳಿಗೆ ಆರು ತಿಂಗಳ ಹಿಂದೆಯೇ ಸಿದ್ಧತೆ ನಡೆಸತೊಡಗಿತ್ತು. ಸಭೆಯಲ್ಲಿ ಭಾಗವಹಿಸಿದ್ದವರು ಈ ವಿಚಾರವನ್ನು ಜೆರುಸಲೇಂ ಪೋಸ್ಟ್ ಜೊತೆ ಹಂಚಿಕೊಂಡಿದ್ದು, ಇದೇ ಮೊದಲ ಬಾರಿಗೆ ಇಂತಹ ಮಾಹಿತಿ ದೃಢಪಟ್ಟಿದೆ.
ಜೆರುಸಲೇಂ ಪೋಸ್ಟ್ ಪ್ರಕಾರ, ಭೂಮಿಯಾಳದಲ್ಲಿರುವ ಹಮಾಸ್‌ನ ಸುರಂಗ ವ್ಯವಸ್ಥೆಯನ್ನು ನೂರಾರು ಮಿಲಿಯನ್ ಡಾಲರ್ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಅಂದಾಜು 300 ಮೈಲಿ (480 ಕಿಲೋಮೀಟರ್) ವ್ಯಾಪ್ತಿ ಹೊಂದಿದೆ ಎಂದು ಅಂದಾಜಿಸಲಾಗಿದೆ. ಇದು ನ್ಯೂಯಾರ್ಕ್ ನಗರದ ಸಬ್‌ವೇಗಿಂತಲೂ ಉದ್ದವಾಗಿದ್ದು, ಟೆಲ್ ಅವೀವ್‌ನಿಂದ ದಕ್ಷಿಣ ಟರ್ಕಿಗೆ ಇರುವಷ್ಟು ವ್ಯಾಪ್ತಿಯನ್ನು ಹೊಂದಿದೆ.
ಸಿನ್ವರ್ ಸಭೆಯಲ್ಲಿ ಭಾಗವಹಿಸಿದ ವ್ಯಕ್ತಿಯೊಬ್ಬನ ಪ್ರಕಾರ, ಸಿನ್ವರ್ ಸಭೆಯಲ್ಲಿ "ಮುಂದೆ ಒಂದು ಅಚ್ಚರಿಯಿದೆ" ಎಂದಿದ್ದನಂತೆ.
ಇಸ್ರೇಲ್ ಮೇಲೆ ಆರಂಭಿಕ ದಾಳಿ ನಡೆಸಿದ ಬಳಿಕ ಎದುರಾಗುವ ಇಸ್ರೇಲಿ ಪ್ರತಿರೋಧದ ಅವಧಿಯನ್ನು ಎದುರಿಸಲು (ಅಂದರೆ, ಅಕ್ಟೋಬರ್ 7, 2023ರ ದಾಳಿಯ ಬಳಿಕ ಇಸ್ರೇಲಿನ ಪ್ರತಿದಾಳಿಯನ್ನು ಎದುರಿಸುವುದು ಮತ್ತು ಮರು ಹೋರಾಟ ನಡೆಸುವುದು) ಹಮಾಸ್ ಮುಖಂಡರು ತಮ್ಮ ಸಂಘಟನೆ ಅವಶ್ಯಕ ಆಯುಧಗಳನ್ನು ತಾವೇ ಉತ್ಪಾದಿಸಿ, ಕಾರ್ಯಾಚರಣೆ ಮುಂದುವರಿಸಲು ಸಂಪನ್ಮೂಲಗಳು ಇರುವಂತೆ ನೋಡಿಕೊಳ್ಳಬೇಕೆಂದು ನಿರ್ಧರಿಸಿದ್ದರು. ಈ ಸಿದ್ಧತೆಯ ಕಾರಣದಿಂದ ಹಮಾಸ್ ಮುಖಂಡರು ಇಸ್ರೇಲ್ ವಿರುದ್ಧದ ಸುದೀರ್ಘ ಒಂದು ವರ್ಷದ ಅವಧಿಯ ಯುದ್ಧದಲ್ಲಿ ಉಳಿಯಲು ಸಾಧ್ಯವಾಯಿತು. ಅವರ ದೂರದೃಷ್ಟಿ ಹಮಾಸ್‌ಗೆ ಚಕಮಕಿಯ ಅವಧಿಯಾದ್ಯಂತ ಇಸ್ರೇಲ್ ವಿರುದ್ಧ ಹೋರಾಡಲು ಅನುವು ಮಾಡಿಕೊಟ್ಟಿತು.
ಹಮಾಸ್ ಸಂಘಟನೆಯ ರಾಜಕೀಯ ವಿಭಾಗದ ಸದಸ್ಯ ಘಾಜಿ಼ ಅಹ್ಮದ್ ಎಂಬಾತ "ನಾವು ಭೂಮಿಯಾಳದಲ್ಲಿ ಯಶಸ್ವಿಯಾಗಿ ಆಯುಧ ಕಾರ್ಖಾನೆಗಳನ್ನು ನಿರ್ಮಿಸಿಕೊಂಡಿದ್ದೇವೆ" ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದ. ಒಂದು ದಿನ ಗಾಜಾಗೆ ಎಲ್ಲ ಪೂರೈಕೆ ಮಾರ್ಗಗಳೂ ಮುಚ್ಚಿಕೊಳ್ಳಬಹುದು ಎಂದು ಊಹಿಸಿದ್ದರಿಂದ ನಾವು ಈ ಕ್ರಮ ಕೈಗೊಂಡೆವು ಎಂದು ಆತ ವಿವರಿಸಿದ್ದ.
ಆಯುಧ ಉತ್ಪಾದನೆ ಮತ್ತು ಸಂಗ್ರಹಣೆಯ ಜೊತೆಗೆ, ಈ ನೆಲದಾಳದ ಸುರಂಗಗಳು ಸಂವಹನ ಜಾಲ, ಪೂರೈಕೆಗಳ ಸಂಗ್ರಹಣಾ ಕೇಂದ್ರ, ಸಾಗಾಣಿಕಾ ಮಾರ್ಗ, ಲಾಜಿಸ್ಟಿಕ್ ಕೇಂದ್ರ, ಬಾಂಬ್ ದಾಳಿ ರಕ್ಷಣಾ ತಾಣ, ಮತ್ತು ಯುದ್ಧಭೂಮಿಯ ಆಸ್ಪತ್ರೆಗಳಾಗಿಯೂ ಬಳಕೆಯಾಗಿವೆ. ಈ ಸುರಂಗಗಳು ಇಸ್ರೇಲಿ ಯೋಧರಿಗೆ ಬಲೆಯಂತೆಯೂ, ಅಕ್ಟೋಬರ್ 7ರಂದು ಒತ್ತೆಯಾಳುಗಳಾಗಿ ಒಯ್ದ ಒಂದಷ್ಟು ಇಸ್ರೇಲಿಗರನ್ನು ಇಡುವ ಜಾಗವಾಗಿಯೂ ಬಳಕೆಯಾಗಿವೆ.
ಐಡಿಎಫ್ ತನಿಖೆಯ ಸಂದರ್ಭದಲ್ಲಿ, ಇರಾನ್ ನಿರ್ಮಿತ ಕೆಲವು ಆಯುಧಗಳು ಮಾತ್ರವೇ ಲಭಿಸಿದ್ದವು. ಅದರೊಡನೆ, ಸುರಂಗಗಳಲ್ಲಿ ವಿವಿಧ ಮೂಲಗಳಿಂದ ಸಂಗ್ರಹಿಸಿದ ಪೈಪ್‌ಗಳು ಮತ್ತು ಕೃಷಿ ಬಳಕೆಯ ರಾಸಾಯನಿಕಗಳನ್ನು ಆಯುಧಗಳನ್ನಾಗಿಸುವ ಸಣ್ಣ ಪುಟ್ಟ ಗ್ಯಾರೇಜುಗಳು ಪತ್ತೆಯಾಗಿದ್ದವು.
ಅಮೆರಿಕಾ ಮತ್ತು ಇಸ್ರೇಲಿ ಅಧಿಕಾರಿಗಳು ಹಮಾಸ್‌ನ ನೂತನ ಸುರಂಗದ ಪ್ರಮಾಣವನ್ನು ನೋಡಿ ಆಶ್ಚರ್ಯಚಕಿತರಾಗಿದ್ದರು. ಹಮಾಸ್ ಸುರಂಗ ಜಾಲಕ್ಕೆ 'ಗಾಜಾದ ಮೆಟ್ರೋ' ಎಂಬ ಅಡ್ಡ ಹೆಸರೂ ಲಭಿಸಿದೆ!
ಆರಂಭದಲ್ಲಿ, ಐಡಿಎಫ್ ಅಧಿಕಾರಿಗಳು ಹಮಾಸ್ ಬಂಕರ್‌ಗಳು ಅಂದಾಜು 30 ಅಡಿ (ಅಂದಾಜು 9 ಮೀಟರ್) ಆಳದಲ್ಲಿ ಇರಬಹುದು ಎಂದು ಅಂದಾಜಿಸಿದ್ದರು.
ಆದರೆ ನಂತರದ ಶೋಧಗಳಲ್ಲಿ, ಕೆಲವೊಂದು ಕಡೆ ಸುರಂಗಗಳು 120 ಅಡಿಗಳಷ್ಟು (ಅಂದಾಜು 37 ಮೀಟರ್) ಆಳದಲ್ಲಿ ಸಾಗುವುದು ಕಂಡುಬಂದಿದ್ದು, ಹಮಾಸ್ ಸಂಘಟನೆಯ ಸುರಂಗ ಜಾಲವನ್ನು ಸಂಪೂರ್ಣವಾಗಿ ನಾಶಪಡಿಸಲು ಇಸ್ರೇಲಿ ಪಡೆಗಳು ಎದುರಿಸಬಹುದಾದ ಸವಾಲಿನ ಪ್ರಮಾಣಕ್ಕೆ ಸಾಕ್ಷಿಯಾಗಿದ್ದವು.
ಹಮಾಸ್ ಸುರಂಗ ಮಾರ್ಗದಲ್ಲಿ ಐಡಿಎಫ್ ಅತಿಥಿಯಾಗಿ ತೆರಳಿದ್ದ ಅಮೆರಿಕಾದ ಉಗ್ರ ನಿಗ್ರಹ ಪಡೆಯ ಮಾಜಿ ಅಧಿಕಾರಿಯೊಬ್ಬರು ಹಮಾಸ್ ಸಂಘಟನೆಯ ಸುರಂಗ ಜಾಲವನ್ನು ನೋಡಿಯೇ ನಾವ ಆಶ್ಚರ್ಯಗೊಂಡಿದ್ದೆವು ಎಂದಿದ್ದಾರೆ. "ಆರಂಭದಲ್ಲಿ ಐಡಿಎಫ್ ಅಧಿಕಾರಿಗಳಿಗೂ ಈ ಸುರಂಗ ಜಾಲ ಯಾವ ರೀತಿಯಲ್ಲಿದೆ ಎಂಬ ಅರಿವಿರಲಿಲ್ಲ. ಆದರೆ ಈ ಸುರಂಗಗಳು 150 ಕಿಲೋಮೀಟರ್ ವ್ಯಾಪ್ತಿ ಹೊಂದಿದ್ದವು. ನಾವು ನಿರೀಕ್ಷಿಸಿದ್ದಕ್ಕಿಂತ ಈ ಸುರಂಗಗಳು ಅದೆಷ್ಟೋ ದೊಡ್ಡದಾಗಿದ್ದವು!" ಎಂದು ಅವರು ಹೇಳಿದ್ದಾರೆ.
"ನಾವು ಗಾಜಾದಲ್ಲಿ ನಿರಂತರವಾಗಿ, ದಿನದ 24 ಗಂಟೆಗಳ ಕಾಲವೂ ಕೆಲಸ ಮಾಡಿದ್ದೇವೆ. ನಾವು ಹಲವಾರು ವರ್ಷಗಳ ಕಾಲ ಸಿದ್ಧತೆ ನಡೆಸಿದ್ದೇವೆ. ಇದು ಕೇವಲ ಒಂದು ಅಥವಾ ಎರಡು ವರ್ಷಗಳ ಸಿದ್ಧತೆಯಿಂದ ಸಾಧಿತವಾಗುವುದಲ್ಲ" ಎಂದು ಹಮಾಸ್ ಸಂಘಟನೆಯ ಹಮದ್ ಎಂಬಾತ ಹೇಳಿದ್ದಾನೆ.
"ಗಾಜಾದ ಸುರಂಗಗಳು ಎಷ್ಟು ವಿಶಾಲವಾಗಿವೆ, ಅಥವಾ ಅವುಗಳಲ್ಲಿ ಎಷ್ಟೊಂದು ವಿಧಗಳಿವೆ ಎಂಬ ಕುರಿತು ಯಾರಿಗೂ ಅರಿವಿರಲಿಲ್ಲ" ಎಂದು ಬಿಡೆನ್ ಆಡಳಿತದ ಮೊದಲ ಮೂರು ವರ್ಷ ಮಧ್ಯ ಪೂರ್ವದಲ್ಲಿ ರಕ್ಷಣಾ ಉಪ ಸಹಾಯಕ ಕಾರ್ಯದರ್ಶಿಯಾಗಿದ್ದ ಡಾನಾ ಸ್ಟ್ರೌಲ್ ಹೇಳಿದ್ದಾರೆ.
ಹಿಂದಿನ ಕದನಗಳಲ್ಲಿ, ಹಮಾಸ್ ಆಯುಧಗಳನ್ನು ಸುರಂಗಗಳ ಮೂಲಕ ಈಜಿಪ್ಟ್‌ಗೆ ಕಳ್ಳಸಾಗಣೆ ನಡೆಸುತ್ತಿತ್ತು. ಐಡಿಎಫ್ ಮುಚ್ಚಿದ್ದ ಸುರಂಗಗಳನ್ನು ಅದು ಕೊರೆಯುವ ಮೂಲಕ ಮರಳಿ ತೆರೆಯುತ್ತಿತ್ತು.
ಆದರೆ ಹಿಂದಿನ ಕದನಗಳ ರೀತಿಯಲ್ಲದೆ, ಅಕ್ಟೋಬರ್ 7ರ ದಾಳಿಗೂ ಮುನ್ನ, ಆಯುಧಗಳನ್ನು ಭೂಮಾರ್ಗದಲ್ಲಿ ಗಾಜಾದೊಳಗೆ ತರಲಾಗಿತ್ತು. ಈಜಿಪ್ಟ್ ಮತ್ತು ಇಸ್ರೇಲ್‌ಗಳು ಕಾಯುತ್ತಿರುವ ಗಡಿಯ ಮೂಲಕವೇ ಆಯುಧ ಸಾಗಿಸಲಾಗಿತ್ತು.
ಹಮಾಸ್ ತನ್ನ ಆಯುಧವನ್ನು ತಾನೇ ಉತ್ಪಾದಿಸಿ, ಸ್ವಾವಲಂಬಿ ಆಗುವ ಗುರಿ ಹೊಂದಿದ್ದರೂ, ಅದಕ್ಕೆ ಬಾಹ್ಯ ಮೂಲಗಳಿಂದ ಆರ್ಥಿಕ ನೆರವು ಇಂದಿಗೂ ಲಭಿಸುತ್ತಿದೆ.
ಅನಾಮಧೇಯ ಅಧಿಕಾರಿಗಳ ಪ್ರಕಾರ, ಹಮಾಸ್ ಸಂಘಟನೆಗೆ ನೂರಾರು ಮಿಲಿಯನ್ ಡಾಲರ್ ಮೊತ್ತ ಲಭಿಸಿದ್ದು, ಅದರಲ್ಲಿ ಕೇವಲ ಒಂದು ಭಾಗವಷ್ಟೇ ಇರಾನಿನಿಂದ ಬಂದಿದೆ.
ಹೆಸರು ಹೇಳಲಿಚ್ಛಿಸದ ಅಧಿಕಾರಿಗಳ ಪ್ರಕಾರ, ಹಮಾಸ್ ಸಹಾಯ ದೇಣಿಗೆ, ಚಾರಿಟಿ ಹಣ, ತೆರಿಗೆ ಆದಾಯ, ಗಾಜಾದ ಬ್ಯಾಂಕುಗಳಿಂದ ಕದ್ದ ಹೂಡಿಕೆ ಹಣವನ್ನೂ ತನ್ನ ಚಟುವಟಿಕೆಗಳಿಗೆ ಬಳಸಿಕೊಂಡಿದೆ.
ಟೆಹರಾನ್ ಹಮಾಸ್ ಸಂಘಟನೆಯ ಸದಸ್ಯರಿಗೆ ಇರಾನ್ ಭೇಟಿಗೆ ಅವಕಾಶ ಕಲ್ಪಿಸಿ, ಅಲ್ಲಿ ಅವರಿಗೆ ತರಬೇತಿ ನೀಡಿದೆ ಎಂದು ಐಡಿಎಫ್ ಅಧಿಕಾರಿಗಳು ಆರೋಪಿಸಿದ್ದಾರೆ. ಹಮಾಸ್ ಸದಸ್ಯರು ಗಾಜಾದಿಂದ ಲೆಬನಾನ್‌ಗೂ ತೆರಳಿದ್ದು, ಅಲ್ಲಿ ಇರಾನ್ ಮಿಲಿಟರಿ ಕಾರ್ಯತಂತ್ರ ಮತ್ತು ತಾಂತ್ರಿಕ ಜ್ಞಾನ ಹಂಚಿಕೊಳ್ಳಲು ಕಮಾಂಡ್ ಸೆಂಟರ್ ಸ್ಥಾಪಿಸಿದೆ ಎನ್ನಲಾಗಿದೆ.
ಹಣ ಮತ್ತು ತರಬೇತಿಯ ಹೊರತಾಗಿ, ಒಂದಷ್ಟು ಆಯುಧ ಬಿಡಿಭಾಗಗಳನ್ನೂ ಬಾಹ್ಯ ಮೂಲಗಳಿಂದ ಗಾಜಾಗೆ ತರಲಾಗಿದೆ ಎಂದು ಹಮದ್ ಹೇಳಿದ್ದಾನೆ. ಯಂತ್ರೋಪಕರಣಗಳು, ಸ್ಫೋಟಕಗಳನ್ನು ನಿರ್ಮಿಸಲು ಬಳಸುವ ಕೃಷಿ ಬಳಕೆಯ ರಾಸಾಯನಿಕಗಳನ್ನು ನಾಗರಿಕ ಬಳಕೆಗೆ ಎಂದು ನಂಬಿಸಿ, ಅಥವಾ ಆಹಾರ ಮತ್ತು ಇತರ ದೈನಂದಿನ ಬಳಕೆಯ ವಸ್ತುಗಳ ನಡುವೆ ಜೋಡಿಸಿ ಗಾಜಾಗೆ ತರಲಾಗಿತ್ತು ಎಂದು ಹಮದ್ ವಿವರಿಸಿದ್ದಾನೆ.
"ನಾವು ನಮ್ಮಿಂದ ಮಾಡಬಹುದಾದುನ್ನೆಲ್ಲ ಮಾಡುವ, ನಮಗೆ ಬೇಕಾದುದನ್ನೆಲ್ಲ ಹೇಗಾದರೂ ಸಂಗ್ರಹಿಸುವ ಪರಿಸ್ಥಿತಿಯಲ್ಲಿ ಇದ್ದೇವೆ. ನಾವು ಆಧುನಿಕ ತಂತ್ರಜ್ಞಾನ, ಆಯುಧಗಳನ್ನು ಹೊಂದಿರುವ ಶಕ್ತಿಶಾಲಿ ರಾಷ್ಟ್ರವೊಂದರ ವಿರುದ್ಧ ಹೋರಾಡುತ್ತಿದ್ದೇವೆ. ಇಸ್ರೇಲ್ ವಿರುದ್ಧ ಹೋರಾಡುವುದು ಸುಲಭದ ವಿಚಾರವಲ್ಲ. ನಾವು ಈ ಸವಾಲನ್ನು ಸಂಪೂರ್ಣವಾಗಿ ಅರಿತಿದ್ದೇವೆ" ಎಂದು ಹಮದ್ ಹೇಳಿದ್ದಾನೆ.
ಐಡಿಎಫ್ ಅಧಿಕಾರಿಗಳ ಲೆಕ್ಕಾಚಾರದ ಪ್ರಕಾರ, ಹಮಾಸ್‌ನ 80% ಆಯುಧಗಳು ಈಗ ಗಾಜಾದಲ್ಲೇ ಉತ್ಪಾದನೆಗೊಳ್ಳುತ್ತಿವೆ. ಹಮಾಸ್ ಮಧ್ಯ ಪೂರ್ವದ ಇತರ ಉಗ್ರಗಾಮಿ ಸಂಘಟನೆಗಳಿಂದ ಸ್ಫೂರ್ತಿ ಪಡೆದು ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ.
ಹಮಾಸ್ ಮುಖ್ಯವಾಗಿ ಸಣ್ಣ ಮತ್ತು ಮಧ್ಯಮ ವ್ಯಾಪ್ತಿಯ, ಟೆಲ್ ಅವೀವ್ ತನಕ ತಲುಪಬಲ್ಲ ಎಂ-75ನಂತಹ ರಾಕೆಟ್‌ಗಳನ್ನು ಬಳಸುತ್ತದೆ. ಎಂ-75 ಇರಾನಿನ ಫಜರ್-5 ರಾಕೆಟ್ ಆಧಾರಿತವಾಗಿದೆ.
ಹಮಾಸ್ ಮುಖ್ಯವಾಗಿ ತಾನು 20ಕ್ಕೂ ಹೆಚ್ಚು ವರ್ಷಗಳ ಹಿಂದೆ ಅಭಿವೃದ್ಧಿ ಪಡಿಸಿದ ಕಸ್ಸಮ್ ರಾಕೆಟ್ ಅನ್ನು ಹೆಚ್ಚಾಗಿ ಬಳಸುತ್ತದೆ. ಕಸ್ಸಮ್ ರಾಕೆಟ್ ಅನ್ನು ಸ್ಟೀಲಿನ ನೀರಿನ ಪೈಪುಗಳಿಂದ ನಿರ್ಮಿಸಲಾಗಿದ್ದು, ಅದಕ್ಕೆ ಸಕ್ಕರೆ ಮತ್ತು ಪೊಟಾಷಿಯಂ ನೈಟ್ರೇಟ್‌ಗಳಿಂದ ನಿರ್ಮಿಸುವ ಸ್ಫೋಟಕಗಳನ್ನು ಅಳವಡಿಸಲಾಗುತ್ತದೆ.
ಕೆಲವೇ ಕೆಲವು ಕಸ್ಸಮ್ ರಾಕೆಟ್‌ಗಳು ಮಾತ್ರವೇ ಇಸ್ರೇಲ್ ತನಕ ತಲುಬಲ್ಲವಾದರೂ, ಇದರ ನಿರ್ಮಾಣಕ್ಕೆ ಕೆಲವು ನೂರು ಡಾಲರ್‌ಗಳಷ್ಟೇ ತಗಲುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಇಸ್ರೇಲಿನ ಐರನ್ ಡೋಮ್ ವ್ಯವಸ್ಥೆಗೆ ಪ್ರತಿ ರಾಕೆಟ್ ಅನ್ನು ತಡೆದು ನಾಶಪಡಿಸಲು ತಲಾ 50,000 ಡಾಲರ್ ವೆಚ್ಚ ತಗಲುತ್ತದೆ!
ಪ್ರಾದೇಶಿಕ ಗುಪ್ತಚರ ಅಧಿಕಾರಿಗಳ ಪ್ರಕಾರ, ಇಸ್ರೇಲ್ ಜೊತೆಗಿನ ಒಂದು ವರ್ಷದ ಯುದ್ಧದಲ್ಲಿ 15,000 ಹಮಾಸ್ ಯೋಧರು ಪ್ರಾಣ ಕಳೆದುಕೊಂಡಿದ್ದಾರೆ. ಅದರೊಡನೆ, ಸಂಘಟನೆ ಅಂದಾಜು 5,700 ಸುರಂಗಳನ್ನು ನಾಶಪಡಿಸಲಾಗಿದೆ.
ಹಮಾಸ್‌ನ ಈಗಿನ ದುಸ್ಥಿತಿಯ ಹೊರತಾಗಿಯೂ, ಅದನ್ನು ಮರಳಿ ನಿರ್ಮಿಸುವ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಮಾಸನ್ನು ಮೂಲೋತ್ಪಾಟನೆಗೊಳಿಸಬೇಕು ಎಂದು ಯೋಜನೆ ರೂಪಿಸುವಾಗಲೇ, ಹಮಾಸ್ ಮೈಕೊಡವಿ ಮೇಲೇಳಲು ಯೋಚಿಸುತ್ತಿದೆ!
ಅಕ್ಟೋಬರ್ 7ರಂದು ಹಮಾಸ್ ನಡೆಸುವ ದಾಳಿಗೆ ಇಸ್ರೇಲ್ ಭಾರೀ ಪ್ರತಿಕ್ರಿಯೆ ನೀಡಬಹುದು ಎಂದು ಸಿನ್ವರ್ ಮೊದಲೇ ಆಲೋಚಿಸಿದ್ದ. ಆದ್ದರಿಂದ, ಇಸ್ರೇಲ್ ಪ್ರತಿದಾಳಿಯ ಬಳಿಕವೂ ಸಂಘಟನೆ ಚೇತರಿಸಿಕೊಳ್ಳುವಂತೆ ಮಾಡಲು ಆತ ಬಹಳಷ್ಟು ಆಲೋಚನೆ ಮಾಡಿದ್ದ.
ಮಿಲಿಯನ್‌ಗಟ್ಟಲೆ ಡಾಲರ್ ಮೌಲ್ಯದ ಹಣವನ್ನು ನಗದು ಮತ್ತು ಕ್ರಿಪ್ಟೋಕರೆನ್ಸಿಯ ರೂಪದಲ್ಲಿ ಹಮಾಸಿನ ಮರು ನಿರ್ಮಾಣಕ್ಕೆ ಬಳಸಿಕೊಳ್ಳಲಾಗುತ್ತಿದೆ. ಇಸ್ರೇಲಿನ ಎಲ್ಲ ಪ್ರಯತ್ನಗಳ ಹೊರತಾಗಿಯೂ, ಹಮಾಸ್‌ಗೆ ಹಣ ಸ್ವೀಕರಿಸಲು ವ್ಯವಸ್ಥೆಗಳಿವೆ ಎಂದು ಹಮದ್ ಹೇಳಿದ್ದಾನೆ.
ಹಮಾಸ್ ಬಳಿ ಇಂದು ಅಪಾರ ಪ್ರಮಾಣದ ಹಣವಿದ್ದರೂ, ಗಾಜಾದಲ್ಲಿನ 50,000ಕ್ಕೂ ಹೆಚ್ಚು ನಾಗರಿಕ ಉದ್ಯೋಗಿಗಳಿಗೆ ಕೇವಲ ಅರ್ಧ ಸಂಬಳ ಮಾತ್ರವೇ ನೀಡಲಾಗುತ್ತಿದೆ. ಒಂದಷ್ಟು ಉದ್ಯೋಗಿಗಳು ತಮಗೆ ಸಂಬಳ ನೀಡಲೇ ಇಲ್ಲ ಎಂದು ಆರೋಪಿಸುತ್ತಿದ್ದಾರೆ.
ಈ ಯುದ್ಧದ ಪರಿಣಾಮವಾಗಿ, ಗಾಜಾದಲ್ಲಿರುವ ಪ್ಯಾಲೆಸ್ತೀನಿಯನ್ ನಾಗರಿಕರು ಪರದಾಡುವಂತಾಗಿದೆ. ಸಾಕಷ್ಟು ಜನರು ತಮ್ಮ ಮನೆಗಳನ್ನು ಕಳೆದುಕೊಂಡಿದ್ದರೆ, ಹಮಾಸ್ ಮೇಲೆ ನಡೆಸಿದ ವಾಯುದಾಳಿಯಲ್ಲಿ ಬಹಳಷ್ಟು ನಾಗರಿಕರೂ ಸಾವಿಗೀಡಾಗಿದ್ದಾರೆ. ಹಮಾಸ್ ಉಗ್ರರು ಜನರ ನಡುವೆಯೇ ಬೆರೆತು ಕಾರ್ಯಾಚರಿಸುವುದು ಇದಕ್ಕೆ ಮುಖ್ಯ ಕಾರಣವಾಗಿದೆ. ಇಂತಹ ನಷ್ಟಗಳು ಹಮಾಸ್‌ಗೆ ಮರಳಿ ನೇಮಕಾತಿ ಪ್ರಕ್ರಿಯೆ ನಡೆಸುವಾಗ ನೆರವಿಗೆ ಬರಲಿವೆ ಎಂದು ಅರಬ್ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
"ಹಮಾಸ್ ಸಂಘಟನೆ ಸೇರಲು ಬಯಸುವ ಸ್ವಯಂಸೇವಕರಿಗೇನೂ ಕೊರತೆಯಿಲ್ಲ. ಅವರಿಗೆ ಅಷ್ಟೊಂದು ಉತ್ತಮ ತರಬೇತಿ ಇಲ್ಲದಿರಬಹುದು. ಆದರೆ ಅವರು ಹಮಾಸ್ ಕಳೆದುಕೊಂಡಿರುವ ಸಂಖ್ಯೆಯನ್ನು ಮರಳಿ ತುಂಬಲು ನೆರವಾಗಲಿದ್ದಾರೆ. ಈ ಯುವಕರು ಯುದ್ಧದಲ್ಲಿ ತಮ್ಮ ಕುಟುಂಬವನ್ನು ಕಳೆದುಕೊಂಡಿದ್ದು, ಅವರ ಮುಂದೆ ಈಗ ಸೇಡು ತೀರಿಸಿಕೊಳ್ಳುವ ಏಕೈಕ ಗುರಿ ಇದೆ" ಎಂದು ಅರಬ್ ವಿಶ್ಲೇಷಕರು ವಿವರಿಸುತ್ತಾರೆ.
ಈ ಪರಿಸ್ಥಿತಿಯ ಲಾಭ ಪಡೆದುಕೊಳ್ಳಲು ಹಮಾಸ್‌ನ ಮಿಲಿಟರಿ ವಿಭಾಗವಾದ ಅಲ್-ಕಸ್ಸಮ್ ಬ್ರಿಗೇಡ್ಸ್ ಪ್ರಯತ್ನ ನಡೆಸುತ್ತಿದೆ. ಇದಕ್ಕಾಗಿ ಅದು ನಾಗರಿಕರಲ್ಲಿ ಬಂಡಾಯದ ಭಾವನೆ ಮೂಡಿಸಲು ಅಲ್ ಕಸ್ಸಮ್ ಪ್ರಯತ್ನ ನಡೆಸುತ್ತಿದೆ.
ಸಿನ್ವರ್ ಸಾರ್ವಜನಿಕ ಭಾಷಣಗಳಲ್ಲಿ ಮತ್ತು ಖಾಸಗಿ ಸಂವಹನಗಳಲ್ಲಿ ಮುಂಬರುವ ಕದನ ಮತ್ತು ಹಮಾಸ್ ಸಂಘಟನೆ ನಡೆಸುವ ದೊಡ್ಡ ಪ್ರಮಾಣದ ದಾಳಿಗಳ ಕುರಿತು ಮಾತನಾಡಿದ್ದ ಎನ್ನಲಾಗಿದೆ.
ಡಿಸೆಂಬರ್ 14, 2022ರಂದು, ಗಾಜಾದಲ್ಲಿ ತನ್ನ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ್ದ ಸಿನ್ವರ್, "ದೇವರ ದಯೆಯಿದ್ದರೆ, ನಾವು ನಿಮ್ಮೆಡೆಗೆ ಪ್ರವಾಹದಂತೆ ಬರುತ್ತೇವೆ. ಕೊನೆಯಿಲ್ಲದ ರಾಕೆಟ್ ದಾಳಿಯೊಡನೆ, ಅಸಂಖ್ಯಾತ ಯೋಧರೊಡನೆ ನಾವು ನಿಮ್ಮ ಮೇಲೆ ಮುಗಿಬೀಳುತ್ತೇವೆ. ಸಮುದ್ರದ ಅಲೆಗಳು ನಿರಂತರವಾಗಿ ಅಪ್ಪಳಿಸುವಂತೆ, ನಮ್ಮ ಲಕ್ಷಾಂತರ ಜನರೊಡನೆ ನಾವು ನಿಮ್ಮಡೆಗೆ ಅಪ್ಪಳಿಸುತ್ತೇವೆ" ಎಂದು ಇಸ್ರೇಲ್‌ಗೆ ಎಚ್ಚರಿಕೆ ನೀಡಿದ್ದ.
ಸಿನ್ವರ್ ಇಸ್ರೇಲಿನ ವ್ಯವಸ್ಥೆಯನ್ನೇ ನಾಶಪಡಿಸುವ ಗುರಿ ಹೊಂದಿದ್ದು, ಇದಕ್ಕಾಗಿ ಹಲವಾರು ವರ್ಷಗಳ ಕಾಲ ಹಮಾಸ್‌ಗೆ ಹಣ ಮತ್ತು ಸಂಪನ್ಮೂಲಗಳು ಪೂರೈಕೆಯಾಗುವಂತೆ ಮಾಡಿದ್ದ ಎಂದು ವೆಸ್ಟ್ ಬ್ಯಾಂಕ್‌ನ ಜೆನಿನ್‌ನಲ್ಲಿ ಹಮಾಸ್ ಕಮಾಂಡರ್ ಆಗಿರುವ 33 ವರ್ಷದ ಅಬು ಹಂಜಾ ಹೇಳಿದ್ದ.
"ಈ ಯುದ್ಧಕ್ಕಾಗಿ ಹಮಾಸ್ ಅತ್ಯಂತ ವ್ಯಾಪಕವಾದ ಸಿದ್ಧತೆ ನಡೆಸಿಕೊಂಡಿತ್ತು" ಎಂದು ಹಂಜಾ ಹೇಳಿದ್ದಾನೆ. ಹಮಾಸ್ ತನ್ನ ಸುರಂಗ ಜಾಲದ ಒಳಗೆ ಆಯುಧಗಳನ್ನು ಸಂಗ್ರಹಿಸಿ ಇಟ್ಟಿತ್ತು, ಮತ್ತು ಹೊಸ ಆಯುಧಗಳನ್ನು ಉತ್ಪಾದಿಸುತ್ತಲೂ ಇತ್ತು ಎಂದು ಅವನು ವಿವರಿಸಿದ್ದಾನೆ.
- ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
Advertisement