ಸೆಪ್ಟೆಂಬರ್ 21, 2024ರಂದು ನಡೆದ ಶ್ರೀಲಂಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಅನೂರ ಕುಮಾರ ದಿಸ್ಸನಾಯಕೆ ಗೆಲುವು ಸಾಧಿಸಿದ್ದಾರೆ. ಚುನಾವಣೆಯಲ್ಲಿ ದಿಸ್ಸನಾಯಕೆ 42.3% ಮತ ಗಳಿಸಿದ್ದರೆ, ಅವರ ಸನಿಹದ ಪ್ರತಿಸ್ಪರ್ಧಿ ಸಜಿತ್ ಪ್ರೇಮದಾಸ 32.8% ಮತ ಪಡೆದುಕೊಂಡಿದ್ದರು.
ವಿಕ್ರಮಸಿಂಘೆ - ರಾಜಪಕ್ಸ ಸರ್ಕಾರ ಜನರ ವಿಶ್ವಾಸವನ್ನು ಬಹುತೇಕ ಕಳೆದುಕೊಂಡಿದ್ದರಿಂದ, ಚುನಾವಣೆಯಲ್ಲಿ ಈ ಫಲಿತಾಂಶ ಅನಿರೀಕ್ಷಿತವೇನೂ ಆಗಿರಲಿಲ್ಲ.
ಹೊಸದಾಗಿ ಅಧಿಕಾರಕ್ಕೆ ಏರಲಿರುವ ನ್ಯಾಷನಲ್ ಪೀಪಲ್ಸ್ ಪವರ್ ಮೈತ್ರಿಕೂಟದಲ್ಲಿ ದಿಸ್ಸನಾಯಕೆ ಅವರ ಜನತಾ ವಿಮುಕ್ತಿ ಪೆರಮುನ (ಜೆವಿಪಿ) ಪ್ರಮುಖ ಪಕ್ಷವಾಗಿದೆ.
ಮೂಲತಃ ಒಂದು ಕ್ರಾಂತಿಕಾರಿ ಗುಂಪಾಗಿ ಆರಂಭವಾದ ಜೆವಿಪಿ, 1971 ಮತ್ತು 1987ರ ನಡುವೆ ಶ್ರೀಲಂಕಾದಲ್ಲಿ ನಡೆದ ಎರಡು ಹಿಂಸಾತ್ಮಕ ಚಳುವಳಿಗಳಲ್ಲಿ ಭಾಗವಹಿಸಿತ್ತು. ಆದರೆ ಅವೆರಡೂ ಕ್ರಾಂತಿಗಳು ವಿಫಲವಾದವು.
ಆರಂಭಿಕ ಕ್ರಾಂತಿಯನ್ನು ತಣ್ಣಗಾಗಿಸಲು ಭಾರತವೂ ಮುಖ್ಯ ಪಾತ್ರ ವಹಿಸಿತ್ತು. ಇದರಿಂದಾಗಿ ಜೆವಿಪಿ ನವದೆಹಲಿ ಈ ಪ್ರದೇಶದಲ್ಲಿ ಅಧಿಕಾರ ನಿಯಂತ್ರಿಸುತ್ತಿದೆ ಎಂದು ಭಾವಿಸತೊಡಗಿತು.
1980ರ ದಶಕದ ಕೊನೆಯ ವೇಳೆಗೆ ಜೆವಿಪಿ ಸಿಂಹಳ ರಾಷ್ಟ್ರೀಯವಾದಿ ಪಕ್ಷವಾಗಿ ರೂಪುಗೊಂಡು, ಭಾರತ ಮತ್ತು ಹೆಚ್ಚಿನ ಸಂಖ್ಯೆಯಲ್ಲಿದ್ದ ತಮಿಳು ಅಲ್ಪಸಂಖ್ಯಾತರೊಡನೆ ಉದ್ವಿಗ್ನತೆ ಉಂಟುಮಾಡಿತು.
ಆದರೆ ದಿಸ್ಸನಾಯಕೆ ಅವರ ನಾಯಕತ್ವದಲ್ಲಿ ಜೆವಿಪಿ ಬದಲಾಗಿದ್ದು, ಹೆಚ್ಚು ಹೆಚ್ಚು ಮಧ್ಯ - ಎಡ ಪಕ್ಷವಾಗಿ ರೂಪುಗೊಂಡಿದೆ.
ಶ್ರೀಲಂಕಾದ ಜನತೆ ತಾವು ಇಲ್ಲಿಯತನಕ ಹೊಂದಿದ್ದ ಶಕ್ತಿಶಾಲಿ ರಾಜಕಾರಣಿಗಳಿಗೆ ಬದಲಿ ಆಯ್ಕೆ ಎದುರು ನೋಡುತ್ತಿದ್ದು, ತಮ್ಮ ಬದುಕನ್ನು ಕಷ್ಟಕರವಾಗಿಸಿದ ಐಎಂಎಫ್ ಬೆಂಬಲಿತ ವೆಚ್ಚ ನಿಯಂತ್ರಣವನ್ನು ತೆಗೆದು ಹಾಕಬೇಕು ಎಂಬ ಆಸೆ ಹೊಂದಿದ್ದಾರೆ. ಅವರು ಎದುರು ನೋಡುತ್ತಿರುವ ಬದಲಾವಣೆಗಳೆಲ್ಲವೂ ನೆರವೇರುವ ಕುರಿತು ಶ್ರೀಲಂಕಾದ ಜನರಲ್ಲೂ ಅನುಮಾನಗಳಿವೆ.
ಕಳೆದ ವರ್ಷಗಳಲ್ಲಿ ದಿಸ್ಸನಾಯಕೆ ಹಿಂದೆ ಭಾರತದ ಜೊತೆಗೆ ಹೊಂದಿದ್ದ ಭಿನ್ನಾಭಿಪ್ರಾಯಗಳನ್ನು ಬದಿಗೆ ಸರಿಸಿ, ಭಾರತದೊಡನೆ ಹೊಸದಾಗಿ ಸಂಬಂಧ ವೃದ್ಧಿಸುವ ಪ್ರಯತ್ನ ನಡೆಸಿದ್ದಾರೆ. ಅದರೊಡನೆ, ನವದೆಹಲಿಯ ಒಂದಷ್ಟು ಆರ್ಥಿಕ ಸಾಧನೆಗಳನ್ನೂ ಅವರು ಶ್ಲಾಘಿಸಿದ್ದಾರೆ.
ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರರಾದ ಅಜಿತ್ ದೋವಲ್ ಅವರು ತನ್ನ ಇತ್ತೀಚಿನ ಶ್ರೀಲಂಕಾ ಭೇಟಿಯಲ್ಲಿ ದಿಸ್ಸನಾಯಕೆ ಅವರನ್ನು ಭೇಟಿಯಾಗಿದ್ದರು.
ಈಗ ಜೆವಿಪಿಗೂ ತಾನು ನವದೆಹಲಿಯೊಡನೆ ಕೈಜೋಡಿಸಿ ಕಾರ್ಯಾಚರಿಸುವ ಅವಶ್ಯಕತೆ ಅರ್ಥವಾಗಿದ್ದು, ಭಾರತ ಶ್ರೀಲಂಕಾದ ನೂತನ ಅಧ್ಯಕ್ಷರನ್ನು ಓರ್ವ ಪ್ರಾಯೋಗಿಕ ಸಹಯೋಗಿಯಾಗಿ ಪರಿಗಣಿಸುವ ಸಾಧ್ಯತೆಗಳಿವೆ.
ಭಾರತದಲ್ಲಿನ, ಅದರಲ್ಲೂ 8 ಕೋಟಿಯಷ್ಟು ಭಾರೀ ತಮಿಳು ಜನಸಂಖ್ಯೆ ಹೊಂದಿರುವ ತಮಿಳುನಾಡಿನ ಕಳವಳಗಳ ಹೊರತಾಗಿಯೂ, ಶ್ರೀಲಂಕಾದಲ್ಲಿ ಜೆವಿಪಿಯ ಬೆಳವಣಿಗೆ ಹಲವು ಕಾರಣಗಳಿಂದಾಗಿ ಭಾರತ - ಶ್ರೀಲಂಕಾದ ಸಂಬಂಧದಲ್ಲಿ ಸದ್ಯದ ಮಟ್ಟಿಗೆ ಯಾವುದೇ ಬದಲಾವಣೆ ಉಂಟುಮಾಡುವ ಸಾಧ್ಯತೆಗಳಿಲ್ಲ.
ಮೊದಲನೆಯದಾಗಿ, ಶ್ರೀಲಂಕಾದ ನೂತನ ಸರ್ಕಾರ ಶ್ರೀಲಂಕನ್ ತಮಿಳರ ಕಳವಳಗಳನ್ನು ಕಡೆಗಣಿಸಿ, ಆ ಮೂಲಕ ಭಾರತವನ್ನು ಅಸಮಾಧಾನಗೊಳಿಸುವ ಅಪಾಯವನ್ನು ಮೈಗೆಳೆದುಕೊಳ್ಳಲಿಕ್ಕಿಲ್ಲ. ಒಂದು ವೇಳೆ ಭಾರತಕ್ಕೆ ಅಸಮಾಧಾನ ಮೂಡಿಸಿದರೆ, ಭಾರತದಿಂದ ಲಭಿಸುವ ಹಣಕಾಸಿನ ನೆರವು ನಿಲುಗಡೆಯಾಗಬಹುದು. ಶ್ರೀಲಂಕಾ ಇಂದಿಗೂ ಭಾರತದ ಆರ್ಥಿಕ ನೆರವಿನ ಮೇಲೆ ಅವಲಂಬಿತವಾಗಿದೆ.
ಚೀನಾದ ನಂತರ, ಭಾರತವೇ ಶ್ರೀಲಂಕಾದ ಎರಡನೇ ಅತಿದೊಡ್ಡ ವ್ಯಾಪಾರ ಸಹಯೋಗಿಯಾಗಿದೆ. ಶ್ರೀಲಂಕಾ ಅವಶ್ಯಕ ಸಂಸ್ಕರಿತ ಪೆಟ್ರೋಲಿಯಂ ಉತ್ಪನ್ನಗಳ ಪೂರೈಕೆಗಾಗಿ ಭಾರತದ ಮೇಲೆ ಅವಲಂಬಿತವಾಗಿದೆ. ನವದೆಹಲಿಯ ಕುರಿತು ಎಂತಹ ಭಾವನೆಯೇ ಇದ್ದರೂ, ಕೊಲಂಬೋ ಇದ್ದಕ್ಕಿದ್ದಂತೆ ಹೊಸ ಪೆಟ್ರೋಲಿಯಂ ಪೂರೈಕೆದಾರರ ಕಡೆಗೆ ತಿರುಗಲು ಸಾಧ್ಯವಿಲ್ಲ.
ಶ್ರೀಲಂಕನ್ ನಾಯಕರ ರಾಜಕೀಯ ನಿಲುವುಗಳು ಏನೇ ಇದ್ದರೂ, ಎರಡು ವರ್ಷಗಳ ಹಿಂದಿನ ಶ್ರೀಲಂಕಾದ ತೀವ್ರ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತ ನೀಡಿದ ಮಹತ್ತರ 4 ಬಿಲಿಯನ್ ಡಾಲರ್ ನೆರವನ್ನು ಕಡೆಗಣಿಸಲು ಸಾಧ್ಯವಿಲ್ಲ.
ಕಳೆದ ಒಂದು ದಶಕದ ಅವಧಿಯಲ್ಲಿ, ಚೀನಾ ಸಹ ಶ್ರೀಲಂಕಾದಲ್ಲಿ ತನ್ನ ಉಪಸ್ಥಿತಿಯನ್ನು ಹೆಚ್ಚಿಸಿದೆ. ಕೊಲಂಬೋ ತನ್ನ 51 ಬಿಲಿಯನ್ ಡಾಲರ್ ಮೌಲ್ಯದ ವಿದೇಶೀ ಸಾಲದಲ್ಲಿ ಅಂದಾಜು 11% ಚೀನಾದಿಂದಲೇ ಪಡೆದಿದೆ.
2019ರಲ್ಲಿ ಚೀನಾದ ಹೂಡಿಕೆ ಇರುವ ಹಂಬಂಟೋಟಾ ಬಂದರಿನ ಸಾಲದ ಮೇಲಿನ ಬಡ್ಡಿ ತೀರಿಸಲೂ ಸಾಧ್ಯವಾಗದೆ, ಶ್ರೀಲಂಕಾ ಆ ಬಂದರನ್ನು ಚೀನಾಗೆ 99 ವರ್ಷಗಳ ಅವಧಿಗೆ ಗುತ್ತಿಗೆಗೆ ನೀಡಿದೆ.
ಶ್ರೀಲಂಕಾದ ಮೇಲೆ ಪ್ರಭಾವ ಬೀರಲು ಭಾರತ ಮತ್ತು ಚೀನಾಗಳ ನಡುವೆ ಸಾಕಷ್ಟು ಸ್ಪರ್ಧೆಯಿದೆ. ಇದರಿಂದಾಗಿ, ಶ್ರೀಲಂಕಾದ ನೂತನ ಸರ್ಕಾರವೂ ಭಾರತದ ಜೊತೆ ಸಂಬಂಧ ವೃದ್ಧಿಸುತ್ತಾ, ಚೀನಾದ ಜೊತೆಗಿನ ಸಂಬಂಧವನ್ನೂ ಸಂಭಾಳಿಸಬೇಕು.
ದಿಸ್ಸನಾಯಕೆ ಚೀನಾದ ಜೊತೆಗೆ ಸಂಬಂಧ ಇನ್ನಷ್ಟು ವೃದ್ಧಿಸುತ್ತಾರೋ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಈಗ ಶ್ರೀಲಂಕಾಗೆ ಭಾರತದ ಜೊತೆಗಿನ ಸಂಬಂಧ ಅತ್ಯಂತ ಮುಖ್ಯವಾಗಿದೆ. ಅದಕ್ಕೆ ಪೂರಕವಾಗಿ, ಭಾರತವೂ ಅವಶ್ಯಕತೆ ಬಿದ್ದರೆ ತಾನು ಆರ್ಥಿಕ ನೆರವು ಒದಗಿಸಬಲ್ಲೆ ಎಂಬುದನ್ನು ಸ್ಪಷ್ಟಪಡಿಸಿದೆ.
ಹಾಗಾದರೆ, ಭಾರತ ಶ್ರೀಲಂಕಾದ ನೂತನ ಸರ್ಕಾರಕ್ಕೆ ಹೇಗೆ ಪ್ರತಿಕ್ರಿಯಿಸಬಹುದು? ನವದೆಹಲಿ ಮೂಲತಃ ಮೂರು ಮುಖ್ಯ ವಿಚಾರಗಳ ಕುರಿತು ಗಮನ ಹರಿಸುವ ಸಾಧ್ಯತೆಗಳಿವೆ.
i) ಮೊದಲನೆಯದಾಗಿ, ಜೆವಿಪಿಯ ಇತಿಹಾಸವನ್ನು ಗಮನಿಸಿದರೆ, ಶ್ರೀಲಂಕಾದಲ್ಲಿ ಸಿಂಹಳ ರಾಷ್ಟ್ರೀಯವಾದ ಮರಳಿ ಹೆಚ್ಚಾಗಬಹುದೇ ಎಂಬ ಕುರಿತು ಭಾರತ ಸೂಕ್ಷ್ಮವಾಗಿ ಗಮನಿಸಲಿದೆ.
ಭಾರತದಲ್ಲಿ ಅಧಿಕಾರದಲ್ಲಿರುವ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಈ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಒಂದಷ್ಟು ಹಿನ್ನಡೆ ಅನುಭವಿಸಿ, ಈಗ ಮೈತ್ರಿಕೂಟದಲ್ಲಿ ಆಡಳಿತ ನಡೆಸುತ್ತಿದೆ. ಆದ್ದರಿಂದ ಬಿಜೆಪಿ ತಮಿಳುನಾಡಿನ ಭಾವನೆಗಳ ಕುರಿತು ಜಾಗರೂಕವಾಗಿರಲಿದೆ. ತಮಿಳುನಾಡಿನಲ್ಲಿ ಆಡಳಿತ ನಡೆಸುತ್ತಿರುವ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷ ಹೆಚ್ಚಿನ ಪ್ರಭಾವ ಹೊಂದಿದೆ.
ii) ಎರಡನೆಯದಾಗಿ, ಶ್ರೀಲಂಕಾದ ನೂತನ ಸರ್ಕಾರ ಶ್ರೀಲಂಕನ್ ಸಂವಿಧಾನದ 13ನೇ ತಿದ್ದುಪಡಿಯನ್ನು ಜಾರಿಗೆ ತರುವ ಸಾಧ್ಯತೆಗಳಿವೆಯೇ ಎಂಬುದನ್ನು ಭಾರತ ಗಮನಿಸಲಿದೆ. ಈ ತಿದ್ದುಪಡಿ ತಮಿಳು ಅಲ್ಪಸಂಖ್ಯಾತರಿಗೆ ಹೆಚ್ಚಿನ ಅಧಿಕಾರ ನೀಡಲಿದ್ದು, ಇದನ್ನು ನವದೆಹಲಿ ಬೆಂಬಲಿಸಲಿದೆ.
ಮೂವರು ಪ್ರಮುಖ ಅಧ್ಯಕ್ಷೀಯ ಅಭ್ಯರ್ಥಿಗಳ ಪೈಕಿ, ಕೇವಲ ವಿಕ್ರಮಸಿಂಘೆ ಮಾತ್ರವೇ ಚುನಾವಣಾ ಪ್ರಚಾರದ ವೇಳೆ ಈ ತಿದ್ದುಪಡಿಯನ್ನು ಜಾರಿಗೆ ತರುವ ಭರವಸೆ ನೀಡಿದ್ದರು. ದಿಸ್ಸನಾಯಕೆ ಈ ವಿಚಾರದ ಕುರಿತು ಯಾವುದೇ ಮಾತನ್ನಾಡಿರಲಿಲ್ಲ.
iii) ಮೂರನೆಯದಾಗಿ, ನೂತನ ಜೆವಿಪಿ ಸರ್ಕಾರ ಹೇಗೆ ಚೀನಾದ ಜೊತೆಗಿನ ಸಂಬಂಧವನ್ನು ನಿರ್ವಹಿಸಲಿದೆ ಎಂದು ಭಾರತ ಸೂಕ್ಷ್ಮವಾಗಿ ಗಮನಿಸಲಿದೆ. ಚೀನಾ ಈಗ ದಕ್ಷಿಣ ಏಷ್ಯಾದಲ್ಲಿ, ಅದರಲ್ಲೂ ಶ್ರೀಲಂಕಾದಲ್ಲಿ ತನ್ನ ಪ್ರಭಾವ ಹೆಚ್ಚಿಸುತ್ತಿರುವುದರಿಂದ ಭಾರತ ಅದರ ಕುರಿತು ಹೆಚ್ಚು ಹೆಚ್ಚು ಕಳವಳ ಹೊಂದಿದೆ. ಭಾರತದ ಆರ್ಥಿಕ ಶಕ್ತಿ ಚೀನಾದಷ್ಟು ಪ್ರಬಲವಾಗಿಲ್ಲದಿರುವುದೂ ಭಾರತದ ಚಿಂತೆಯನ್ನು ಹೆಚ್ಚಿಸಿದೆ.
2022ರಲ್ಲಿ ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ ಚೀನಾ ಅತ್ಯಂತ ಕನಿಷ್ಠ ಪ್ರಮಾಣದ ನೆರವು ನೀಡಿತ್ತು ಎನ್ನುವುದನ್ನು ಭಾರತ ಮತ್ತೊಮ್ಮೆ ನೆನಪಿಸುವ ಸಾಧ್ಯತೆಗಳಿವೆ.
ಎಲ್ಲಕ್ಕಿಂತ ಮುಖ್ಯವಾಗಿ, ಶ್ರೀಲಂಕಾಗೆ ಭಾರತ ಯಾವತ್ತೂ ಸಾಲದ ಹೊರೆ ಹೊರಿಸಿಲ್ಲ. ಆದ್ದರಿಂದ ಶ್ರೀಲಂಕಾಗೂ ಭಾರತದ ಕುರಿತು ಕಾಳಜಿಯಿದೆ.
ಅದರೊಡನೆ, ಭಾರತಕ್ಕೂ ದಿಸ್ಸನಾಯಕೆ ಸರ್ಕಾರದ ಜೊತೆ ಉತ್ತಮ ಸಂಬಂಧ ನಿರ್ವಹಿಸುವ ಅಗತ್ಯವಿದೆ. ನೇಪಾಳದ ಜೊತೆಗಿನ ಭಾರತದ ಸಂಬಂಧ ಈಗ ಅಸ್ಥಿರವಾಗಿದೆ. ಬಾಂಗ್ಲಾದೇಶದ ಪ್ರಧಾನಿಯಾಗಿದ್ದ ಶೇಖ್ ಹಸೀನಾ ಅವರ ರಾಜೀನಾಮೆಯೊಡನೆ, ಭಾರತ ಇನ್ನೊಂದು ಪ್ರಮುಖ ಸಹಯೋಗಿಯನ್ನು ಕಳೆದುಕೊಂಡಿದೆ. ಪಾಕಿಸ್ತಾನದ ಜೊತೆಗಿನ ಭಾರತದ ಸಂಬಂಧವಂತೂ ಪಾತಾಳಕ್ಕೆ ಕುಸಿದಿದೆ.
ಇನ್ನು ನೆರೆಯ ದ್ವೀಪ ರಾಷ್ಟ್ರದ ಜೊತೆಗಿನ ಸಂಬಂಧದಲ್ಲೂ ಏರುಪೇರಾಗುವುದು ಭಾರತಕ್ಕೂ ಬೇಕಾಗಿಲ್ಲ. ಅದೃಷ್ಟವಶಾತ್, ದಿಸ್ಸನಾಯಕೆ ಜೊತೆಗೆ ಚುನಾವಣೆಗೂ ಮುನ್ನವೇ ಸಂಪರ್ಕ ಸಾಧಿಸಲು ಭಾರತ ಪ್ರಯತ್ನ ನಡೆಸಿದ್ದು ಉಭಯ ದೇಶಗಳ ಸಂಬಂಧ ವೃದ್ಧಿಗೆ ನೆರವಾಗಲಿದೆ.
ಶ್ರೀಲಂಕಾ 1948ರಲ್ಲಿ ಬ್ರಿಟಿಷ್ ಆಡಳಿತದಿಂದ ಸ್ವಾತಂತ್ರ್ಯ ಪಡೆದ ಬಳಿಕ ಭಾರತ - ಶ್ರೀಲಂಕಾಗಳ ಸಂಬಂಧ ಸಾಕಷ್ಟು ಏಳುಬೀಳುಗಳನ್ನು ಕಂಡಿದೆ.
ಭಾರತ ಮತ್ತು ಶ್ರೀಲಂಕಾಗಳು ತಾವು ಭೌಗೋಳಿಕವಾಗಿ ಅತ್ಯಂತ ಹತ್ತಿರದ ದೇಶಗಳು ಮತ್ತು ಪಾಕ್ ಜಲಸಂಧಿಯಾಚೆಗೆ ಅತ್ಯಂತ ಗಾಢವಾದ ಐತಿಹಾಸಿಕ, ಜನಾಂಗೀಯ ಬಾಂಧವ್ಯ ಹೊಂದಿರುವುದನ್ನು ಕಡೆಗಣಿಸಲು ಸಾಧ್ಯವಿಲ್ಲ. ಪಾಕ್ ಜಲಸಂಧಿ ಒಂದು ಸಣ್ಣ ಜಲ ಪ್ರದೇಶವಾಗಿದ್ದು, ಭಾರತದ ದಕ್ಷಿಣ ಭಾಗ ಮತ್ತು ಶ್ರೀಲಂಕಾದ ಉತ್ತರ ಭಾಗವನ್ನು ಪ್ರತ್ಯೇಕಿಸುತ್ತದೆ.
ಭಾರತ ಈಗ ಚೀನಾದ ಅಪಾರ ಸಂಪನ್ಮೂಲಗಳು ಮತ್ತು ಶ್ರೀಲಂಕಾದಲ್ಲಿ ಹೆಚ್ಚುತ್ತಿರುವ ಚೀನಾದ ಪ್ರಭಾವದೊಡನೆ ಸ್ಪರ್ಧಿಸಬೇಕಿದೆ.
ಆದ್ದರಿಂದ, ಭಾರತ ಮುಂದಿನ ವಾರಗಳಲ್ಲಿ, ತಿಂಗಳುಗಳಲ್ಲಿ ದಿಸ್ಸನಾಯಕೆ ಸರ್ಕಾರ ಕೈಗೊಳ್ಳುವ ರಾಜಕೀಯ ನಿರ್ಧಾರಗಳನ್ನು ಸೂಕ್ಷ್ಮವಾಗಿ ಗಮನಿಸಲಿದೆ. ಕೊಲಂಬೋದ ನೂತನ ಸರ್ಕಾರ ಬೆಳೆಯುತ್ತಿರುವ ಆರ್ಥಿಕ ಸಮಸ್ಯೆಗಳು, ಜನಾಂಗೀಯ ಸಂಘರ್ಷಗಳಂತಹ ಸವಾಲುಗಳನ್ನು ಎದುರಿಸಬೇಕಿದೆ. ಅದರೊಡನೆ, ಪ್ರಮುಖ ಜಾಗತಿಕ ಶಕ್ತಿಗಳಾದ ಚೀನಾ ಮತ್ತು ಭಾರತಗಳ ನಡುವೆ ಶ್ರೀಲಂಕಾ ಸಮತೋಲನದ ಹಾದಿ ಹುಡುಕಬೇಕಿದೆ.
- ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
Advertisement