ಸಬ್‌ಮರೀನ್‌ಗಳು & ಕಣ್ಗಾವಲು: ಬಂಗಾಳ ಕೊಲ್ಲಿಯ ಪಾರಮ್ಯಕ್ಕಾಗಿ ಸಾಗರದಾಳದ ಸಮರ (ಜಾಗತಿಕ ಜಗಲಿ)

ಬಂಗಾಳ ಕೊಲ್ಲಿಯಲ್ಲಿರುವ ಸೈಂಟ್ ಮಾರ್ಟಿನ್ಸ್ ದ್ವೀಪವನ್ನು ಬಿಟ್ಟುಕೊಡಲು ಒಪ್ಪಿಕೊಂಡಿದ್ದರೆ ಅಮೆರಿಕಾ ತನ್ನನ್ನು ಬಾಂಗ್ಲಾದೇಶದ ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಲು ಪ್ರಯತ್ನ ನಡೆಸುತ್ತಿರಲಿಲ್ಲ ಎಂದು ಹಸೀನಾ ಪ್ರತಿಪಾದಿಸಿದ್ದಾರೆ.
ಸಬ್‌ಮರೀನ್‌ಗಳು & ಕಣ್ಗಾವಲು: ಬಂಗಾಳ ಕೊಲ್ಲಿಯ ಪಾರಮ್ಯಕ್ಕಾಗಿ ಸಾಗರದಾಳದ ಸಮರ (ಜಾಗತಿಕ ಜಗಲಿ)
Updated on

ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಅಮೆರಿಕಾದ ವಿರುದ್ಧ ಒಂದು ಗಂಭೀರ ಆರೋಪ ಹೊರಿಸಿದ್ದಾರೆ. ಒಂದು ವೇಳೆ, ತಾನು ಏನಾದರೂ ಬಂಗಾಳ ಕೊಲ್ಲಿಯಲ್ಲಿರುವ ಸೈಂಟ್ ಮಾರ್ಟಿನ್ಸ್ ದ್ವೀಪವನ್ನು ಬಿಟ್ಟುಕೊಡಲು ಒಪ್ಪಿಕೊಂಡಿದ್ದರೆ ಅಮೆರಿಕಾ ತನ್ನನ್ನು ಬಾಂಗ್ಲಾದೇಶದ ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಲು ಪ್ರಯತ್ನ ನಡೆಸುತ್ತಿರಲಿಲ್ಲ ಎಂದು ಹಸೀನಾ ಪ್ರತಿಪಾದಿಸಿದ್ದಾರೆ.

ಆರೋಪ ತಳ್ಳಿಹಾಕಿದ ಅಮೆರಿಕಾ

ಕುತೂಹಲಕಾರಿ ವಿಚಾರವೆಂದರೆ, ಹಿಂದೆ ಬಾಂಗ್ಲಾದೇಶ ಪಾಕಿಸ್ತಾನದ ಭಾಗವಾಗಿದ್ದ ಸಮಯದಲ್ಲಿ, ಪಾಕಿಸ್ತಾನಿ ಸರ್ಕಾರ ಇದೇ ದ್ವೀಪವನ್ನು ಅಮೆರಿಕಾಗೆ ಒದಗಿಸಲು ಮುಂದಾಗಿತ್ತು.

ಆದರೆ ಈಗ ಸೈಂಟ್ ಮಾರ್ಟಿನ್ಸ್ ದ್ವೀಪ ಬಾಂಗ್ಲಾದೇಶ ಮತ್ತು ಮಯನ್ಮಾರ್‌ಗಳ ನಡುವೆ ವಿವಾದದ ಬಿಂದುವಾಗಿದೆ.

ಅದೇನೇ ಇದ್ದರೂ, ಶೇಖ್ ಹಸೀನಾ ಪ್ರತಿಪಾದಿಸಿರುವ ವಿಚಾರ ಬಂಗಾಳ ಕೊಲ್ಲಿ ಅಮೆರಿಕಾ ಮತ್ತು ಭಾರತದಂತಹ ಅದರ ಸಹಯೋಗಿ ರಾಷ್ಟ್ರಗಳಿಗೆ ಬಂಗಾಳ ಕೊಲ್ಲಿ ಎಷ್ಟು ಮುಖ್ಯ ಎಂದು ವಿವರಿಸಿದೆ.

ಹಿಂದೂ ಮಹಾಸಾಗರ ಪೆಸಿಫಿಕ್ ಸಾಗರವನ್ನು ಸಂಧಿಸುವಲ್ಲಿ ಬಂಗಾಳ ಕೊಲ್ಲಿ ಇದೆ. ಆದ್ದರಿಂದ ಅಪಾರ ಪ್ರಮಾಣದ ಸಾಗರ ಸಂಚಾರಕ್ಕೆ ಇದು ಪ್ರಮುಖ ಮಾರ್ಗವಾಗಿದೆ.

ಬಂಗಾಳ ಕೊಲ್ಲಿಯಲ್ಲಿ ಯಾವುದೇ ಬೃಹತ್ ಪ್ರಮಾಣದ ಯುದ್ಧ ನಡೆಯುವ ಸಾಧ್ಯತೆಗಳಿಲ್ಲ. ಆದರೆ, ಒಂದು ಬದಿಯಲ್ಲಿ ಅಮೆರಿಕಾ ಮತ್ತು ಭಾರತ, ಇನ್ನೊಂದು ಬದಿಯಲ್ಲಿ ಚೀನಾ ಇರುವಂತೆ ಯುದ್ಧದ ರೂಪ ತಳೆಯದ ಸಣ್ಣ ಪ್ರಮಾಣದ ಮಿಲಿಟರಿ ಕ್ರಮಗಳು ಜರುಗಬಹುದಾದ 'ಬೂದು ವಲಯ' (ಗ್ರೇ ಜೋ಼ನ್) ಎಂದು ಇದನ್ನು ಗುರುತಿಸಲಾಗಿದೆ.

ಯುನಿವರ್ಸಿಟಿ ಆಫ್ ಟೆಕ್ಸಾಸ್‌ನ ಅಂತಾರಾಷ್ಟ್ರೀಯ ಸಾಗರ ಭದ್ರತಾ ತಜ್ಞರಾದ ಮೊಹಮ್ಮದ್ ರುಬಯ್ಯತ್ ರೆಹಮಾನ್ ಅವರು ಈ ಕುರಿತು ವಿವರವನ್ನು ಪ್ರಕಟಿಸಿದ್ದಾರೆ. ಅವರು ಒಂದು ಶ್ರೇಣಿಯ ಮಿಲಿಟರೇತರ ಕ್ರಮಗಳನ್ನು 'ಗ್ರೇ ಜೋನ್' ಚಟುವಟಿಕೆ ಎಂದು ಪರಿಗಣಿಸಬಹುದು ಎಂದಿದ್ದಾರೆ.

ಬಂಗಾಳ ಕೊಲ್ಲಿಯಾದ್ಯಂತ ಇರುವ ರಾಷ್ಟ್ರಗಳಾದ ಬಾಂಗ್ಲಾದೇಶ ಮತ್ತು ಶ್ರೀಲಂಕಾಗಳು ತಮ್ಮ ಆರ್ಥಿಕ ಪ್ರಗತಿ ಮತ್ತು ಮೂಲಭೂತ ಅಭಿವೃದ್ಧಿಗೆ ಚೀನಾದ ಮೇಲೆ ಅವಲಂಬಿತವಾಗಿವೆ. ಚೀನಾ ಈ ಕರಾವಳಿ ರಾಷ್ಟ್ರಗಳಲ್ಲಿ ಬಂದರುಗಳು, ಮಾರ್ಗಗಳು, ಪೈಪ್ ಲೈನ್‌ಗಳು, ಹಾಗೂ ರೈಲ್ವೇ ಹಳಿಗಳನ್ನು ನಿರ್ಮಿಸಿದೆ.

ಅಮೆರಿಕಾದ ದೃಷ್ಟಿಕೋನದಿಂದ ನೋಡುವುದಾದರೆ, ಈ ಅಭಿವೃದ್ಧಿ ಯೋಜನೆಗಳನ್ನು ಬಂಗಾಳ ಕೊಲ್ಲಿಯ ಪ್ರದೇಶದಲ್ಲಿ ಚೀನಾ ಕೈಗೊಂಡಿರುವ 'ಗ್ರೇ ಜೋನ್' ಚಟುವಟಿಕೆಗಳು ಎನ್ನಬಹುದು. ಈ ಚಟುವಟಿಕೆಗಳು ಅವಶ್ಯಕವಾಗಿ ಕಾರ್ಯತಂತ್ರದ ಮಹತ್ವ ಹೊಂದಿವೆ.

ಅಮೆರಿಕಾ ಈ ಯೋಜನೆಗಳು ಬಂಗಾಳ ಕೊಲ್ಲಿಯ ಪ್ರದೇಶದಲ್ಲಿ ಚೀನಾದ ಮಿಲಿಟರಿ ಹೊಕ್ಕುಬಳಕೆಯನ್ನು ಹೆಚ್ಚಿಸುತ್ತವೆ ಎಂದು ಭಾವಿಸಿದೆ. ಈ ದೇಶಗಳು ಕೈಗೊಳ್ಳುವ ನಿರ್ಧಾರಗಳ ಮೇಲೂ ಚೀನಾ ಹೆಚ್ಚಿನ ರಾಜಕೀಯ ಪ್ರಭಾವ ಬೀರುವ ಕುರಿತೂ ಅಮೆರಿಕಾ ಆತಂಕ ಹೊಂದಿದೆ. ಬಂಗಾಳ ಕೊಲ್ಲಿಯಾದ್ಯಂತ ಇರುವ ಹಲವಾರು ದೇಶಗಳಿಗೆ ಚೀನಾವೇ ಮುಖ್ಯ ಮಿಲಿಟರಿ ಉಪಕರಣಗಳ ಪೂರೈಕೆದಾರ ಎಂದು ರೆಹಮಾನ್ ವಿವರಿಸುತ್ತಾರೆ.

ಬಾಂಗ್ಲಾದೇಶದ ಬಳಿ ಇರುವ ಏಕೈಕ ಸಬ್‌ಮರೀನ್ ನೆಲೆಯಾದ ಬಿಎನ್ಎಸ್ ಶೇಖ್ ಹಸೀನಾವನ್ನು ಚೀನಾದ ಆರ್ಥಿಕ ಮತ್ತು ತಾಂತ್ರಿಕ ನೆರವಿನಿಂದ ನಿರ್ಮಿಸಲಾಗಿದೆ. ರೆಹಮಾನ್ ಅವರು ಚೀನಾ 2016ರಲ್ಲಿ ಎರಡು ಟೈಪ್ 035 ಜಿ ಮಿಂಗ್ ವರ್ಗದ ಸಬ್‌ಮರೀನ್‌ಗಳನ್ನು ಬಾಂಗ್ಲಾದೇಶಕ್ಕೆ, ಮತ್ತು 2021ರಲ್ಲಿ ಒಂದು ಬಿ ವೇರಿಯಂಟ್ ಮಿಂಗ್ ವರ್ಗದ ಸಬ್‌ಮರೀನನ್ನು ಮಯನ್ಮಾರ್‌ಗೆ ಮಾರಾಟ ಮಾಡಿತ್ತು ಎಂದಿದ್ದಾರೆ.

ಬಾಂಗ್ಲಾದೇಶ ಮತ್ತು ಮಯನ್ಮಾರ್‌ಗಳಿಗೆ ತರಬೇತಿ ಒದಗಿಸಲು ಚೀನಾದ ಸಬ್‌ಮರೀನ್ ಸಿಬ್ಬಂದಿಗಳು ಆಯಾ ದೇಶಗಳಿಗೆ ತೆರಳಿದ್ದರು. ಇಂತಹ ಒಪ್ಪಂದಗಳು ಬಂಗಾಳ ಕೊಲ್ಲಿಯ ಗ್ರೇ ಜೋನ್‌ಗಳಲ್ಲಿ ಚೀನಾದ ಉಪಸ್ಥಿತಿಯನ್ನು ಇನ್ನಷ್ಟು ಹೆಚ್ಚಿಸಿವೆ.

ಥೈಲ್ಯಾಂಡ್ ಸಹ ತನ್ನ ನೌಕಾಪಡೆಗೆ ಯುದ್ಧ ನೌಕೆಗಳು ಮತ್ತು ಸಬ್‌ಮರೀನ್‌ಗಳನ್ನು ಖರೀದಿಸಲು ಚೀನಾದೊಡನೆ ಒಪ್ಪಂದ ಮಾಡಿಕೊಂಡಿದೆ.

ಗ್ರೇಟ್ ಕೋಕೋ ದ್ವೀಪದಲ್ಲಿ ಏರ್ ಸ್ಟ್ರಿಪ್‌ಗಳ ವಿಸ್ತರಣೆ ಮತ್ತು ಏವಿಯೇಷನ್ ಹ್ಯಾಂಗರ್‌ಗಳ ನಿರ್ಮಾಣ ಚೀನಾದ ಪಾಲ್ಗೊಳ್ಳುವಿಕೆ ಮತ್ತು ಅದು ನಡೆಸಬಹುದಾದ ಸಂಭಾವ್ಯ ಸಾಗರ ವಿಚಕ್ಷಣೆಯ ಸಂಕೇತ ನೀಡಿವೆ ಎನ್ನುತ್ತಾರೆ ರೆಹಮಾನ್.

ಸಮುದ್ರಶಾಸ್ತ್ರೀಯ ಸಮೀಕ್ಷೆಗಳು ಮತ್ತು ಸಾಗರ ತಳದ ಕಾರ್ಯಾಚರಣೆಗಳನ್ನೂ ಗ್ರೇ ಜೋನ್ ಚಟುವಟಿಕೆಗಳು ಎಂದೇ ಪರಿಗಣಿಸಲಾಗುತ್ತದೆ.

  • ಸಮುದ್ರಶಾಸ್ತ್ರೀಯ (ಓಶನೋಗ್ರಫಿ) ನೌಕೆ ಎನ್ನುವುದು ಸಮುದ್ರ ಮತ್ತದರ ಲಕ್ಷಣಗಳನ್ನು ಅಧ್ಯಯನ ನಡೆಸಲು ನಿರ್ಮಿಸಿರುವ ವಿಶೇಷ ನೌಕೆಯಾಗಿದೆ. ಇದು ನೀರಿನ ತಾಪಮಾನ, ಸುಳಿಗಳು, ಸಾಗರ ಜೀವಿಗಳು, ಮತ್ತು ಸಾಗರ ತಳಗಳ ಕುರಿತು ಸಂಶೋಧನೆ ನಡೆಸುತ್ತದೆ. ಈ ನೌಕೆಗಳು ವೈಜ್ಞಾನಿಕ ಮತ್ತು ಪಾರಿಸರಿಕ ಉದ್ದೇಶಗಳಿಗಾಗಿ ಸಮುದ್ರ ವಾತಾವರಣದ ಅನ್ವೇಷಣೆ ನಡೆಸುತ್ತವೆ.

  • ಸಮುದ್ರಶಾಸ್ತ್ರೀಯ ನೌಕೆಗಳು ನೀರಿನ ಮೇಲ್ಭಾಗದಲ್ಲಿದ್ದು ಸಮುದ್ರದ ಅಧ್ಯಯನ ನಡೆಸುತ್ತವೆ. ಆದರೆ ಸಬ್‌ಮರೀನ್‌ಗಳು ನೀರಿನ ಆಳದಲ್ಲಿದ್ದು ಅನ್ವೇಷಣೆ, ಸಂಶೋಧನೆ ಮತ್ತು ಮಿಲಿಟರಿ ಕಾರ್ಯಾಚರಣೆ ನಡೆಸುವ ನಿಟ್ಟಿನಲ್ಲಿ ನಿರ್ಮಿಸಿರುವ ನೌಕೆಗಳಾಗಿವೆ.

ಚೀನಾದ ಸಮುದ್ರಶಾಸ್ತ್ರೀಯ ಸಮೀಕ್ಷೆಯ ನೌಕೆಗಳು ಪದೇ ಪದೇ ಬಂಗಾಳ ಕೊಲ್ಲಿಗೆ ಭೇಟಿ ನೀಡುವುದು ಚೀನಾ ಇಲ್ಲಿನ ನೀರಿನಾಳದ ವಾತಾವರಣವನ್ನು ಇನ್ನೂ ಚೆನ್ನಾಗಿ ಅರ್ಥೈಸಿಕೊಳ್ಳಲು ಪ್ರಯತ್ನ ನಡೆಸುತ್ತಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಇಂತಹ ಚಟುವಟಿಕೆಗಳು ಸಬ್‌ಮರೀನ್ ಚಟುವಟಿಕೆಗಳಿಗೆ ಹಾದಿ ಮಾಡಿಕೊಡುತ್ತವೆ.

ಚೀನಾದ ಶಿ ಯಾನ್ 1 ಎಂಬ ಸಮುದ್ರಶಾಸ್ತ್ರೀಯ ನೌಕೆ ಅಂಡಮಾನ್ ನಿಕೋಬಾರ್ ದ್ವೀಪ ಸಮುಚ್ಚಯದ ಸನಿಹದ ಭಾರತದ ಆರ್ಥಿಕ ವಲಯದಲ್ಲಿ ಕಾರ್ಯಾಚರಿಸಿತ್ತು. ರಹಮಾನ್‌ ಅವರ ಪ್ರಕಾರ, ಮಯನ್ಮಾರ್‌ಗೆ ಭೇಟಿ ನೀಡುವ ಮುನ್ನ, ಇದೇ ನೌಕೆ ಶ್ರೀಲಂಕಾದ ಆಡಳಿತದ ಸಮುದ್ರದಲ್ಲಿ ಸಾಗರ ತಳದ ಸಂಶೋಧನೆ ನಡೆಸಿತ್ತು.

ಫೆಬ್ರವರಿ 2020ರಲ್ಲಿ, ಕ್ಸಿಯಾಂಗ್ ಯಾಂಗ್ ಹಾಂಗ್ 06 ನೌಕೆ ಮಯನ್ಮಾರ್ ಸಾಗರದಲ್ಲಿ ಜಂಟಿ ವೈಜ್ಞಾನಿಕ ಸಮೀಕ್ಷೆ ನಡೆಸಿತ್ತು.

ಇಂತಹ ನೌಕೆಗಳು ಸಾಮಾನ್ಯವಾಗಿ ತಮ್ಮ ಆಟೋಮ್ಯಾಟಿಕ್ ಐಡೆಂಟಿಕೇಶನ್ ಸಿಸ್ಟಮ್ (ಎಐಎಸ್) ಉಪಕರಣಗಳನ್ನು ಸ್ಥಗಿತಗೊಳಿಸಿಬಿಡುತ್ತವೆ. ಅದರಿಂದ, ಅವುಗಳು ಎಲ್ಲಿವೆ, ಏನು ಮಾಡುತ್ತಿವೆ ಎನ್ನುವುದನ್ನು ಗುರುತಿಸಲು ಕಷ್ಟಕರವಾಗುತ್ತದೆ.

ಆಟೋಮ್ಯಾಟಿಕ್ ಐಡೆಂಟಿಫಿಕೇಶನ್ ಸಿಸ್ಟಮ್ (ಎಐಎಸ್) ಎನ್ನುವುದು ನೌಕೆಗಳಲ್ಲಿ ಬಳಸುವ ಒಂದು ವ್ಯವಸ್ಥೆಯಾಗಿದ್ದು, ತಮ್ಮ ಸ್ಥಾನ, ವೇಗ ಮತ್ತು ದಿಕ್ಕಿನ ಕುರಿತ ಮಾಹಿತಿಗಳನ್ನು ಪಡೆದುಕೊಳ್ಳುವುದು ಮತ್ತು ಹಂಚಿಕೊಳ್ಳುವುದು ಮಾಡಿ, ಸಮುದ್ರದಲ್ಲಿರುವ ಇತರ ನೌಕೆಗಳಿಗೆ ಮತ್ತು ಅಧಿಕಾರಿಗಳಿಗೆ ನೆರವಾಗುತ್ತದೆ.

ಸಬ್‌ಮರೀನ್‌ಗಳು & ಕಣ್ಗಾವಲು: ಬಂಗಾಳ ಕೊಲ್ಲಿಯ ಪಾರಮ್ಯಕ್ಕಾಗಿ ಸಾಗರದಾಳದ ಸಮರ (ಜಾಗತಿಕ ಜಗಲಿ)
INS ಅರಿಘಾತ್ ಮತ್ತು ಅಗ್ನಿ-4 ಸೇರ್ಪಡೆ: ಭಾರತದ ಪರಮಾಣು ಭದ್ರತೆಯ ನವಯುಗಕ್ಕೆ ನಾಂದಿ

ಭಾರತದ ಪ್ರತಿಕ್ರಿಯೆ

ಹಿಂದೂ ಮಹಾಸಾಗರ ಪ್ರಾಂತ್ಯದ ಭಾರತೀಯ ನೌಕಾಪಡೆಯ ಇನ್‌ಫರ್ಮೇಶನ್ ಫ್ಯೂಷನ್ ಸೆಂಟರ್ ಬಂಗಾಳ ಕೊಲ್ಲಿಯಲ್ಲಿರುವ ನಿರ್ದಿಷ್ಟ ಸಹಯೋಗಿಗಳೊಡನೆ ಮಾಹಿತಿಗಳನ್ನು ಹಂಚಿಕೊಳ್ಳುತ್ತದೆ. ಭಾರತದ ಈ ಭದ್ರತಾ ಸಹಕಾರ ವ್ಯವಸ್ಥೆಯಲ್ಲಿ ಕರಾವಳಿ ದೇಶಗಳಾದ ಬಾಂಗ್ಲಾದೇಶ, ಶ್ರೀಲಂಕಾ, ಮಯನ್ಮಾರ್‌ಗಳು ಪ್ರಮುಖ ಸಹಯೋಗಿಗಳಾಗಿವೆ.

ಭಾರತ ಈಗಾಗಲೇ ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಮಯನ್ಮಾರ್‌ಗಳಲ್ಲಿ ಕರಾವಳಿ ಕಣ್ಗಾವಲು ರೇಡಾರ್ ವ್ಯವಸ್ಥೆಗಳನ್ನು ಸ್ಥಾಪಿಸಿದೆ.

ಭಾರತ ಅಮೆರಿಕಾದಿಂದ 12 ಪಿ-8ಐ ಸಾಗರ ಗಸ್ತು ವಿಮಾನಗಳನ್ನು ಖರೀದಿಸಿದೆ. ಭಾರತದ ಜೊತೆಗಿನ ತನ್ನ ಭದ್ರತಾ ಸಂಬಂಧವನ್ನು ಇನ್ನಷ್ಟು ಉತ್ತಮಪಡಿಸುವ ನಿಟ್ಟಿನಲ್ಲಿ ಅಮೆರಿಕಾ ಈ ವ್ಯಾಪಾರಕ್ಕೆ ಬೆಂಬಲ ಒದಗಿಸಿತ್ತು.

ಪಿ-8ಐ ವಿಮಾನಗಳು ಅತ್ಯುತ್ತಮ ಕಣ್ಗಾವಲು ಮತ್ತು ವಿಚಕ್ಷಣಾ ಸಾಮರ್ಥ್ಯಗಳನ್ನು ಹೊಂದಿದ್ದು, ಹೆಚ್ಚಿನ ವೇಗವಾಗಿ ಚಲಿಸಿ, ದೀರ್ಘಾವಧಿಯ ಕಾರ್ಯಾಚರಣೆ ನಡೆಸಬಲ್ಲವು. ಆ ಮೂಲಕ ಆ್ಯಂಟಿ ಸಬ್‌ಮರೀನ್ ಯುದ್ಧಕ್ಕೆ ಇವು ಹೆಚ್ಚು ಸಮರ್ಥವಾಗಿವೆ.

ಭಾರತ ಗ್ರೇಟ್ ನಿಕೋಬಾರ್ ದ್ವೀಪದಲ್ಲಿ ಬಾಜ಼್ ನೌಕಾಪಡೆಯ ವಾಯು ಕೇಂದ್ರವನ್ನು ಸ್ಥಾಪಿಸಿದೆ. ಈ ಕೇಂದ್ರ ನಿಕೋಬಾರ್ ದ್ವೀಪಗಳ ದಕ್ಷಿಣ ತುದಿಯಲ್ಲಿದ್ದು, ಮಲಾಕಾ ಜಲಸಂಧಿಯಿಂದ ಕೇವಲ 450 ಕಿಲೋಮೀಟರ್ ದೂರದಲ್ಲಿದೆ.

ಮಲಾಕಾ ಜಲಸಂಧಿ ಮಲೇಷ್ಯಾ ಮತ್ತು ಇಂಡೋನೇಷ್ಯಾಗಳ ನಡುವಿನ ಕಿರಿದಾದ ಜಲಮಾರ್ಗವಾಗಿದೆ. ಇದು ಹಿಂದೂ ಮಹಾಸಾಗರವನ್ನು ದಕ್ಷಿಣ ಚೀನಾ ಸಮುದ್ರ ಮತ್ತು ಪೆಸಿಫಿಕ್ ಸಾಗರಗಳಿಗೆ ಸಂಪರ್ಕಿಸುವ ಕಾರಣದಿಂದ, ಮಹತ್ವದ ಜಲಮಾರ್ಗ ಎನಿಸಿಕೊಂಡಿದೆ.

ಭಾರತ ಆರಂಭದಿಂದಲೂ ಗ್ರೇಟ್ ನಿಕೋಬಾರ್ ಕೇಂದ್ರದ 3,500 ಅಡಿಗಳ ರನ್‌ವೇಯನ್ನು ವಿಸ್ತರಿಸಿ, ಪಿ-8ಐ ವಿಮಾನಕ್ಕೆ ಸರಿಹೊಂದುವಂತೆ ಅಭಿವೃದ್ಧಿ ಪಡಿಸುವ ಉದ್ದೇಶ ಹೊಂದಿತ್ತು. 2022ರ ವೇಳೆಗೆ, ರನ್‌ವೇಯನ್ನು 800 ಅಡಿಗಳಷ್ಟು ಹೆಚ್ಚಿಸಲಾಯಿತು. ಆದರೆ, ಪರಿಸರ ಸಂಬಂಧಿ ವಿಚಾರಗಳಿಂದ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯ ವಿಳಂಬಗೊಂಡಿತು ಎಂದು ರೆಹಮಾನ್ ವಿವರಿಸಿದ್ದಾರೆ.

2019ರಲ್ಲಿ, ಭಾರತ ನಾರ್ತ್ ಅಂಡಮಾನ್ ದ್ವೀಪದಲ್ಲಿ ಕೊಹಸ್ಸಾ ನೌಕಾ ವಾಯು ನೆಲೆಯನ್ನು ಸ್ಥಾಪಿಸಿತು. ಇದು ಚೀನಾದ ಗುಪ್ತಚರ ನೆಲೆ ಎಂದು ಶಂಕಿಸಲಾಗಿರುವ ಮಯನ್ಮಾರ್‌ನ ಕೋಕೋ ದ್ವೀಪಕ್ಕೆ ಸನಿಹದಲ್ಲಿದೆ. ರೆಹಮಾನ್, ಭಾರತ ಕೊಹಸ್ಸಾ ಕೇಂದ್ರದ ರನ್‌ವೇಯನ್ನೂ ಸಹ ಪಿ-8ಐ ವಿಮಾನಗಳಿಗೆ ಸೂಕ್ತವಾಗುವಂತೆ ವಿಸ್ತರಿಸುವ ಉದ್ದೇಶ ಹೊಂದಿದೆ ಎಂದಿದ್ದಾರೆ.

ಇನ್ನು ನಿಕೋಬಾರ್ ಮತ್ತು ಅಂಡಮಾನ್ ದ್ವೀಪಗಳಲ್ಲಿರುವ ಉತ್ಕ್ರೋಷ್ ನೌಕಾಪಡೆಯ ವಾಯು ಕೇಂದ್ರ ಹೊಂದಿರುವ ರನ್‌ವೇ ಹೊಸ ವಿಮಾನ ಕಾರ್ಯಾಚರಿಸಲು ಸೂಕ್ತವಾಗಿದೆ. ಈ ಕೇಂದ್ರ ಈಗಾಗಲೇ ಕಡಿಮೆ ವ್ಯಾಪ್ತಿಯ ಡಿಒ-228 ಸಾಗರ ಗಸ್ತು ವಿಮಾನದ ಒಂದು ಸ್ಕ್ವಾಡ್ರನ್ ಅನ್ನು ಹೊಂದಿದೆ.

2019ರಲ್ಲಿ, ಭಾರತ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಾದ್ಯಂತ ಹೊಸ ಯುದ್ಧ ವಿಮಾನಗಳು, ಯುದ್ಧ ನೌಕೆಗಳು, ಮತ್ತು ಆ್ಯಂಟಿ ಶಿಪ್ ಕ್ಷಿಪಣಿ ವ್ಯವಸ್ಥೆಗಳನ್ನು ಹೊಂದುವ ಮೂಲಕ ಮೂಲಭೂತ ಅಭಿವೃದ್ಧಿ ನಡೆಸುವ ಹತ್ತು ವರ್ಷಗಳ ಯೋಜನೆಯನ್ನು ಘೋಷಿಸಿತು. ಈ ಯೋಜನೆಯ ಕೆಲವು ಅಂಶಗಳನ್ನು ಈಗಾಗಲೇ ಜಾರಿಗೆ ತರಲಾಗಿದೆ.

ಭಾರತೀಯ ನೌಕಾಪಡೆ ಒಂದು ಕೋರಾ ವರ್ಗದ ಗೈಡೆಡ್ ಮಿಸೈಲ್ ಕಾರ್ವೆಟ್ ಅನ್ನು ಪೋರ್ಟ್ ಬ್ಲೇರ್‌ಗೆ ಕಳುಹಿಸಿದೆ. ಭಾರತೀಯ ವಾಯು ಸೇನೆ ಕಾರ್ ನಿಕೋಬಾರ್‌ನಲ್ಲಿ ತನ್ನ ಸು-30ಎಂಕೆಐ ಯುದ್ಧ ವಿಮಾನಗಳಿಗೆ ಒಂದು ನೆಲೆಯನ್ನು ಸ್ಥಾಪಿಸಿದೆ.

ಕಾರ್ವೆಟ್ ಎನ್ನುವುದು ಒಂದು ಸಣ್ಣ, ಆದರೆ ವೇಗದ ಮಿಲಿಟರಿ ಹಡಗಾಗಿದ್ದು, ಕರಾವಳಿ ಪ್ರದೇಶದಲ್ಲಿ ಗಸ್ತು ತಿರುಗಲು ಮತ್ತು ಆ್ಯಂಟಿ ಸಬ್‌ಮರೀನ್ ಯುದ್ಧದಲ್ಲಿ ತೊಡಗಲು ನಿರ್ಮಿತವಾಗಿದೆ. ಇದರಲ್ಲಿ ಕ್ಷಿಪಣಿಗಳು ಮತ್ತು ಇತರ ಆಯುಧಗಳನ್ನು ಅಳವಡಿಸಲಾಗಿರುತ್ತದೆ. ಅದರೊಡನೆ, ಭಾರತ ಬ್ರಹ್ಮೋಸ್ ಕ್ಷಿಪಣಿಗಳನ್ನೂ ಈ ದ್ವೀಪಗಳಿಂದ ಯಶಸ್ವಿಯಾಗಿ ಪ್ರಯೋಗಿಸಿದೆ.

ಭಾರತೀಯ ನೌಕಾಪಡೆ ಈಗ ಹೆಚ್ಚು ಹೆಚ್ಚು ಶಕ್ತಿಶಾಲಿಯಾಗುತ್ತಿದ್ದರೂ, ಅನಿಶ್ಚಿತ ಪರಿಸ್ಥಿತಿಗಳಲ್ಲಿ ಚೀನಾ ವಿರೋಧಿ ಕಾರ್ಯಾಚರಣೆಗಳನ್ನು ನಿರ್ವಹಿಸುವ ನೇತೃತ್ವವನ್ನು ಅಮೆರಿಕಾ ವಹಿಸಬೇಕು ಎಂದು ರೆಹಮಾನ್ ಸಲಹೆ ನೀಡುತ್ತಾರೆ.

ಅಮೆರಿಕನ್ ನೌಕಾ ಸೇನೆ ತನ್ನ ಜಾಯಿಂಟ್ ಕಂಬೈನ್ಡ್ ಎಕ್ಸಸೈಸ್ ಟ್ರೈನಿಂಗ್ (ಜೆಸಿಇಟಿ), ಕೋಆಪರೇಶನ್ ಅಫ್ಲೋಟ್ ರೆಡಿನೆಸ್ ಆ್ಯಂಡ್ ಟ್ರೈನಿಂಗ್ (ಸಿಎಆರ್‌ಎಟಿ) ಮತ್ತು ಮಲಬಾರ್ ಎಕ್ಸಸೈಸ್‌ನಂತಹ ವಿವಿಧ ಯೋಜನೆಗಳ ಮೂಲಕ ಬಂಗಾಳ ಕೊಲ್ಲಿಯಾದ್ಯಂತ ಪ್ರಾದೇಶಿಕ ನೌಕಾ ಸೇನೆಗಳಿಗೆ ಬೆಂಬಲ ಒದಗಿಸಿದೆ. ಅವುಗಳಲ್ಲಿ ಪರಿಸ್ಥಿತಿಯ ಅರಿವನ್ನೂ ಉಂಟುಮಾಡಿದೆ.

ಮಲಬಾರ್ ಎಕ್ಸಸೈಸ್‌ ಮೊಬೈಲ್ ಆ್ಯಂಟಿ ಸಬ್‌ಮರೀನ್ ಚಟುವಟಿಕೆಗಳು, ವಿವಿಧ ನೌಕೆಗಳಿಂದ ಹೆಲಿಕಾಪ್ಟರ್ ಕಾರ್ಯಾಚರಣೆಗಳು, ಮತ್ತು ಸರ್ಫೇಸ್ ಗನ್ನರಿ ತರಬೇತಿಗಳನ್ನು ಒಳಗೊಂಡಿದೆ.

ಸರ್ಫೇಸ್ ಗನ್ನರಿ ಎಂದರೆ, ನೌಕೆಗಳಲ್ಲಿರುವ ಗನ್‌ಗಳನ್ನು ಬಳಸಿ ಶತ್ರು ನೌಕೆಗಳೊಡನೆ ಸೆಣಸುವ ಪ್ರಕ್ರಿಯೆಯಾಗಿದೆ. ಇದು ನೌಕೆಯ ಡೆಕ್‌ನಿಂದ ಆಯುಧಗಳನ್ನು ಗುರಿಯಿಟ್ಟು ಶತ್ರುವಿನ ನೌಕೆಯ ಮೇಲೆ ದಾಳಿ ಮಾಡುವುದನ್ನು ಒಳಗೊಂಡಿದೆ.

ಅಂಡಮಾನ್ ದ್ವೀಪಗಳಲ್ಲಿರುವ ವ್ಯವಸ್ಥೆಗಳು

ಭಾರತಕ್ಕೆ ಸೇರಿದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ದೇಶದ ಭದ್ರತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಮಯನ್ಮಾರ್‌ನಿಂದ ಕೇವಲ 22 ಮೈಲಿ (35.4 ಕಿಲೋಮೀಟರ್) ದೂರದಲ್ಲಿವೆ.

ದ್ವೀಪ ಸಮುಚ್ಚಯದ ದಕ್ಷಿಣ ತುದಿಯಲ್ಲಿರುವ ಇಂದಿರಾ ಪಾಯಿಂಟ್ ಇಂಡೋನೇಷ್ಯಾದ ಅಸೆಹ್ ಪ್ರಾಂತ್ಯದಿಂದ ಕೇವಲ 90 ಮೈಲಿ (ಅಂದಾಜು 145 ಕಿಲೋಮೀಟರ್) ದೂರದಲ್ಲಿದೆ. ಇನ್ನು ಪೂರ್ವದಲ್ಲಿ ಥೈಲ್ಯಾಂಡ್ ಕರಾವಳಿಯಿಂದ ಕೇವಲ 270 ಮೈಲಿ (ಬಹುತೇಕ 435 ಕಿಲೋಮೀಟರ್) ದೂರದಲ್ಲಿದೆ.

  • ಇಂದಿರಾ ಪಾಯಿಂಟ್ ಎನ್ನುವುದು ಭಾರತದ ದಕ್ಷಿಣದ ತುತ್ತ ತುದಿಯಾಗಿದ್ದು, ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿದೆ. ಈ ಸ್ಥಳದಿಂದ ಅತ್ಯಂತ ಸುಂದರವಾದ ದೃಶ್ಯಾವಳಿಗಳನ್ನು ವೀಕ್ಷಿಸಬಹುದಾಗಿದ್ದು, ಇದು ಸಂಚರಣೆ (ನ್ಯಾವಿಗೇಶನ್) ಮತ್ತು ಸಾಗರ ಚಟುವಟಿಕೆಗಳಿಗೆ ಮುಖ್ಯವಾಗಿದೆ.

  • ಇಂಡೋನೇಷ್ಯಾದ ಅಸೆಹ್ ಪ್ರಾಂತ್ಯ ಸುಮಾತ್ರಾ ದ್ವೀಪದ (ಇಂಡೋನೇಷ್ಯಾದ ಒಂದು ದೊಡ್ಡ ದ್ವೀಪ) ಉತ್ತರ ತುದಿಯಲ್ಲಿರುವ ಪ್ರದೇಶವಾಗಿದೆ. ಈ ಪ್ರದೇಶ ತನ್ನ ವಿಶಿಷ್ಟ ಸಂಸ್ಕೃತಿ, ನೈಸರ್ಗಿಕ ಸೌಂದರ್ಯ, ಮತ್ತು ಐತಿಹಾಸಿಕ ಮಹತ್ವಗಳಿಗೆ ಹೆಸರಾಗಿದೆ.

ಇದಕ್ಕೆ ವ್ಯತಿರಿಕ್ತವಾಗಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ರಾಜಧಾನಿ ಪೋರ್ಟ್ ಬ್ಲೇರ್ (ಶ್ರೀ ವಿಜಯಪುರಂ) ಚೆನ್ನೈ ಮತ್ತು ಕೋಲ್ಕತ್ತಾಗಳಿಂದ ಅಂದಾಜು 850 ಮೈಲಿ ದೂರದಲ್ಲಿದೆ.

ಅಂಡಮಾನ್ ದ್ವೀಪ ಸಮೂಹದಲ್ಲಿರುವ 836 ದ್ವೀಪಗಳ ಪೈಕಿ ಕೇವಲ 31 ದ್ವೀಪಗಳು ಮಾತ್ರವೇ ಜನವಸತಿ ಹೊಂದಿವೆ. ಭಾರತೀಯ ನೌಕಾ ಸೇನೆಯ ಮಾಜಿ ಮುಖ್ಯಸ್ಥರಾದ ಅಡ್ಮಿರಲ್ ಅರುಣ್ ಪ್ರಕಾಶ್ ಅವರು ಇಂತಹ ಜನರಹಿತ ದ್ವೀಪಗಳನ್ನು ಯಾರಾದರೂ ರಹಸ್ಯವಾಗಿ ಸೇರಿಕೊಂಡು, ಭಾರತ ಮತ್ತು ಪಾಶ್ಚಾತ್ಯ ಹಡಗುಗಳ ವಿರುದ್ಧ ಬಳಸಿಕೊಳ್ಳುವ ಸಾಧ್ಯತೆಗಳಿವೆ ಎಂದು ಎಚ್ಚರಿಸಿದ್ದಾರೆ.

ಬಹಳ ಹಿಂದೆ, ಅಂದರೆ 1962ರಲ್ಲೇ ಒಂದು ಚೀನೀ ಸಬ್‌ಮರೀನ್ ಅಂಡಮಾನ್ ದ್ವೀಪಗಳ ಬಳಿ ಕಾಣಿಸಿಕೊಂಡಿತ್ತು ಎಂದು ಪ್ರಕಾಶ್ ನೆನಪಿಸುತ್ತಾರೆ.

ಸೆಪ್ಟೆಂಬರ್ 1965ರಲ್ಲಿ, ಭಾರತ - ಪಾಕಿಸ್ತಾನ ಯುದ್ಧ ಆರಂಭಗೊಂಡ ಬಳಿಕ, ಪಾಕಿಸ್ತಾನದ ಅಧ್ಯಕ್ಷ ಆಯುಬ್ ಖಾನ್ ನಿವೃತ್ತ ಏರ್ ಮಾರ್ಷಲ್ ಅಸ್ಘರ್ ಖಾನ್‌ರನ್ನು ಇಂಡೋನೇಷ್ಯಾದ ಬೆಂಬಲ ಯಾಚಿಸಲು ಕಳುಹಿಸಿದ್ದರು.

ಇಂಡೋನೇಷ್ಯಾದ ನೌಕಾ ಸೇನಾ ಮುಖ್ಯಸ್ಥರಾದ ಅಡ್ಮಿರಲ್ ಮರ್ತಾಡಿನಾಟ ಅವರು "ನಿಮಗೆ ಅಂಡಮಾನ್ ದ್ವೀಪದ ಮೇಲೆ ನಿಯಂತ್ರಣ ಬೇಡವೇ? ಅವುಗಳು ಸುಮಾತ್ರಾದ ಭಾಗ. ಆ ದ್ವೀಪಗಳು ಪೂರ್ವ ಪಾಕಿಸ್ತಾನ ಮತ್ತು ಇಂಡೋನೇಷ್ಯಾದ ನಡುವೆ ಇವೆ. ಅಲ್ಲಿರಲು ಭಾರತೀಯರಿಗೆ ಏನು ಹಕ್ಕಿದೆ?" ಎಂದು ಪ್ರಶ್ನಿಸಿದ್ದರಂತೆ. ಈ ಮಾತಿನಿಂದ ಏರ್ ಮಾರ್ಷಲ್ ಖಾನ್ ಸಹ ಆಶ್ಚರ್ಯಗೊಂಡಿದ್ದರಂತೆ.

ಈ ಬೆಳವಣಿಗೆಯ ಬಳಿಕ, ಭಾರತ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಅಂಡಮಾನ್ ನಿಕೋಬಾರ್ ಕಮಾಂಡ್ (ಎಎನ್‌ಸಿ) ಎಂಬ ಜಂಟಿ ಕಾರ್ಯಾಚರಣಾ ಕಮಾಂಡ್ ಸ್ಥಾಪಿಸಿ, ತನ್ನ ಉಪಸ್ಥಿತಿಯನ್ನು ಹೆಚ್ಚಿಸಿತು.

ಅಡ್ಮಿರಲ್ ಅರುಣ್ ಪ್ರಕಾಶ್ ಅವರು ಅಂಡಮಾನ್‌ನಲ್ಲಿರುವ ನೆಲೆ ರೇಡಾರ್‌ಗಳು, ವಿಮಾನಗಳು, ಉಪಗ್ರಹಗಳು ಮತ್ತು ಡ್ರೋನ್‌ಗಳನ್ನು ಸಮರ್ಪಕವಾಗಿ ಬಳಸಿ, ಸಮಗ್ರ ಸಾಗರ ಜಾಗೃತಿ ಹೊಂದಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಈ ಕಮಾಂಡ್ ಅಗತ್ಯವಿರುವ ರಕ್ಷಣಾತ್ಮಕ ಮತ್ತು ದಾಳಿಯ ಆಯುಧಗಳನ್ನು ಹೊಂದಿ, ಉಭಯಚರಿ ಕಾರ್ಯಾಚರಣೆ ಮತ್ತು ಏರ್‌ಲಿಫ್ಟಿಂಗ್ ಸಾಮರ್ಥ್ಯ ಹೊಂದಿರುವ ಕ್ಷಿಪ್ರ ಪ್ರತಿಕ್ರಿಯಾ ತಂಡವನ್ನು ಹೊಂದಬೇಕು.

ಅಮೆರಿಕಾದ ಮಿಲಿಟರಿ ನೆಲೆ?

ಭಾರತೀಯ ಮಾಧ್ಯಮಗಳು 'ವಿದೇಶಗಳಲ್ಲಿ ಅಮೆರಿಕಾದ ಮಿಲಿಟರಿ ನೆಲೆಗಳು' ಎಂಬ ಆರ್‌ಎಎನ್‌ಡಿ ಕಾರ್ಪೋರೇಷನ್ನಿನ ಅಧ್ಯಯನವನ್ನು ಪ್ರಸಾರ ಮಾಡಿವೆ. ಈ ಅಧ್ಯಯನ, ಅಮೆರಿಕಾ ಅಂಡಮಾನ್ ದ್ವೀಪಗಳ ಪೋರ್ಟ್ ಬ್ಲೇರ್ ವಿಮಾನ ನಿಲ್ದಾಣದಲ್ಲಿ ಡ್ರೋನ್‌ಗಳನ್ನು ಸ್ಥಾಪಿಸಿ, ಮಲಾಕಾ ಜಲಸಂಧಿಯ ಮೇಲೆ ಕಣ್ಣಿಡುವ ಉದ್ದೇಶ ಹೊಂದಿದೆ ಎಂದು ವರದಿ ಮಾಡಿತ್ತು.

ಆದರೆ ಅಮೆರಿಕಾ ಈ ವಾದವನ್ನು ತಳ್ಳಿಹಾಕಿದೆ. ಆರ್‌ಎಎನ್‌ಡಿ ಒಂದು ಸರ್ಕಾರಿ ಸಂಸ್ಥೆಯಲ್ಲ. ಅದು ಕೇವಲ ಸಲಹೆಗಳನ್ನು ಮಾತ್ರ ನೀಡಬಹುದಷ್ಟೇ ಎಂದು ಅಮೆರಿಕಾ ವಿವರಿಸಿದೆ.

1947ರಲ್ಲಿ, ಬ್ರಿಟಿಷರು ಭಾರತದಿಂದ ತೆರಳುವ ಸಂದರ್ಭದಲ್ಲಿ ಅವರು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ತಮ್ಮೊಡನೆ ಇರಿಸಿಕೊಳ್ಳುವ ಉದ್ದೇಶ ಹೊಂದಿದ್ದರು. ಆದರೆ ಈ ಪ್ರಸ್ತಾಪವನ್ನು ಆಗಿನ ಇಂಗ್ಲೆಂಡ್ ಪ್ರಧಾನಿ ಕ್ಲೆಮೆಂಟ್ ಆ್ಯಟ್ಲಿ ತಿರಸ್ಕರಿಸಿದ್ದರು.

- ಗಿರೀಶ್ ಲಿಂಗಣ್ಣ

(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com