ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಅವರ ಡೆಲವೇರ್ ನಿವಾಸದಲ್ಲಿ ನಡೆದ ಕ್ವಾಡ್ ಸಮಾವೇಶದಲ್ಲಿ ಬೈಡನ್‌ರನ್ನು ಭೇಟಿಯಾದರು.
ಪ್ರಧಾನಿ ಮೋದಿ ಮತ್ತು ಬೈಡನ್ ಅವರು ಎಂಕ್ಯು-9ಬಿ ಪ್ರಿಡೇಟರ್ ಡ್ರೋನ್ ಒಪ್ಪಂದ, ಕೋಲ್ಕತ್ತಾದಲ್ಲಿ ಸೆಮಿಕಂಡಕ್ಟರ್ ತಯಾರಿಕಾ ಘಟಕ ಸ್ಥಾಪನೆ ಸೇರಿದಂತೆ ವಿವಿಧ ವಿಚಾರಗಳ ಕುರಿತು ಸಮಾಲೋಚನೆ ನಡೆಸಿದರು.
ಪ್ರಧಾನಿ ನರೇಂದ್ರ ಮೋದಿಯವರು ಭಾರತ ಮತ್ತು ಅಮೆರಿಕಾಗಳು ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಕಾರ್ಯತಂತ್ರದ ಸಹಯೋಗ ಹೊಂದಿದ್ದು, ಪರಸ್ಪರರಲ್ಲಿ ಸಾಮಾನ್ಯವಾದ ಪ್ರಜಾಪ್ರಭುತ್ವದ ಮೌಲ್ಯಗಳು, ಜನರ ನಡುವಿನ ಬಾಂಧವ್ಯಗಳ ಆಧಾರಿತವಾಗಿವೆ ಎಂದಿದ್ದಾರೆ.
ಶ್ವೇತ ಭವನವೂ ತನ್ನ ಹೇಳಿಕೆಯಲ್ಲಿ ಮೋದಿಯವರ ಭಾವನೆಗಳನ್ನು ಪುಷ್ಟೀಕರಿಸಿದೆ. ಉಭಯ ನಾಯಕರು ತಮ್ಮ ನಾಗರಿಕರು, ಉದ್ಯಮಗಳು ಮತ್ತು ಸರ್ಕಾರಗಳ ಮಟ್ಟದ ಸಹಯೋಗದಿಂದ ಭಾರತ ಮತ್ತು ಅಮೆರಿಕಾಗಳ ನಡುವಿನ ಸಂಬಂಧ ಇನ್ನಷ್ಟು ಗಟ್ಟಿಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ಶ್ವೇತ ಭವನ ತಿಳಿಸಿದೆ.
ಈ ವರ್ಷದ ಫೆಬ್ರವರಿ ತಿಂಗಳಲ್ಲಿ, ಅಮೆರಿಕಾ ಭಾರತೀಯ ಮಿಲಿಟರಿಗೆ 31 ಎಂಕ್ಯು-9ಬಿ ಡ್ರೋನ್‌ಗಳನ್ನು ಒದಗಿಸುವ, 3.99 ಬಿಲಿಯನ್ ಡಾಲರ್ (33,100 ಕೋಟಿ ರೂಪಾಯಿ) ಒಪ್ಪಂದವನ್ನು ಅಂಗೀಕರಿಸಿತು. ಈ ಒಪ್ಪಂದದಡಿ, ಭಾರತೀಯ ನೌಕಾ ಸೇನೆ 15 ಸೀ ಗಾರ್ಡಿಯನ್ ಡ್ರೋನ್‌ಗಳನ್ನು ಪಡೆದುಕೊಳ್ಳಲಿದೆ. ಭಾರತೀಯ ವಾಯು ಸೇನೆ ಮತ್ತು ಭೂಸೇನೆಗಳಿಗೆ ತಲಾ ಎಂಟು ಸ್ಕೈ ಗಾರ್ಡಿಯನ್ ಡ್ರೋನ್‌ಗಳು ಲಭಿಸಲಿವೆ.
ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಅವರು ಭಾರತದೊಡನೆ 31 ಜನರಲ್ ಅಟಾಮಿಕ್ಸ್ ಎಂಕ್ಯು-9ಬಿ ಡ್ರೋನ್‌ಗಳ (16 ಸ್ಕೈ ಗಾರ್ಡಿಯನ್ ಹಾಗೂ 15 ಸೀ ಗಾರ್ಡಿಯನ್) ಖರೀದಿ ಒಪ್ಪಂದದ ಹಾದಿಯನ್ನು ಶ್ಲಾಘಿಸಿದ್ದಾರೆ. ಈ ಒಪ್ಪಂದ ಭಾರತೀಯ ಸೇನಾ ವಿಭಾಗಗಳ ಗುಪ್ತಚರ, ವಿಚಕ್ಷಣೆ ಮತ್ತು ಕಣ್ಗಾವಲು (ಐಎಸ್ಆರ್) ಸಾಮರ್ಥ್ಯವನ್ನು ಅಭಿವೃದ್ಧಿ ಪಡಿಸಲಿದೆ.
ಎಂಕ್ಯು-9ಬಿ ಪ್ರಿಡೇಟರ್ ಡ್ರೋನ್ ತನ್ನ ಸ್ಟೆಲ್ತ್ ಸಾಮರ್ಥ್ಯಕ್ಕೆ ಹೆಸರಾಗಿದ್ದು, ಶತ್ರುಗಳ ಕಣ್ಣಿಗೆ ಬೀಳದಂತೆ ಭೂಮಿಯಿಂದ ಕೇವಲ 250 ಮೀಟರ್ (820 ಅಡಿ) ಎತ್ತರದಲ್ಲಿ ಹಾರಾಡುವ ಸಾಮರ್ಥ್ಯ ಹೊಂದಿದೆ. ಈ ಡ್ರೋನ್‌ಗಳು ಗರಿಷ್ಠ 50,000 ಅಡಿಗಳಷ್ಟು ಎತ್ತರ ತಲುಪಬಲ್ಲವಾಗಿದ್ದು, ಪ್ರತಿ ಗಂಟೆಗೆ 442 ಕಿಲೋಮೀಟರ್‌ಗಳ ಗರಿಷ್ಠ ವೇಗ ಹೊಂದಿವೆ.
11 ಮೀಟರ್‌ಗಳಷ್ಟು (36 ಅಡಿ) ಉದ್ದವಿರುವ ಡ್ರೋನ್‌ಗಳ ರೆಕ್ಕೆಗಳ ವ್ಯಾಪ್ತಿ 22 ಮೀಟರ್‌ಗಳಿಗೂ (72 ಅಡಿ) ಹೆಚ್ಚಿದೆ.
ಎಂಕ್ಯು-9ಬಿ ಡ್ರೋನ್ ಅಂದಾಜು 1,700 ಕೆಜಿ ಪೇಲೋಡ್‌ಗಳನ್ನು ಒಯ್ಯುವ ಸಾಮರ್ಥ್ಯ ಹೊಂದಿದ್ದು, ಇದರಲ್ಲಿ ನಾಲ್ಕು ಕ್ಷಿಪಣಿಗಳು, 450 ಕೆಜಿ ಬಾಂಬ್‌ಗಳು ಸೇರಿವೆ. ಇಂಧನ ಮರುಪೂರಣದ ಅಗತ್ಯವಿಲ್ಲದೆ ಡ್ರೋನ್ 2,000 ಮೈಲಿಗಳಷ್ಟು (ಅಂದಾಜು 3,220 ಕಿಲೋಮೀಟರ್) ಹಾರಾಟ ನಡೆಸಬಲ್ಲದು.
ಈ ಡ್ರೋನ್ ಸತತ 35 ಗಂಟೆಗಳ ಕಾಲ ಹಾರಾಟ ನಡೆಸಬಲ್ಲದು, ಅಥವಾ ಆಗಸದಲ್ಲಿ ಒಂದೇ ಸ್ಥಳದಲ್ಲಿ ನಿಂತಿರಬಲ್ಲದು ಎಂದು ಡ್ರೋನ್ ಉತ್ಪಾದಕ ಸಂಸ್ಥೆಯಾದ ಜನರಲ್ ಅಟಾಮಿಕ್ಸ್ ಏರೋನಾಟಿಕಲ್ ಸಿಸ್ಟಮ್ಸ್ ತಿಳಿಸಿದೆ.
ಎಂಕ್ಯು-9ಬಿ ಪ್ರಿಡೇಟರ್ ಡ್ರೋನ್ ತನ್ನ ಸ್ಟೆಲ್ತ್ ಸಾಮರ್ಥ್ಯಕ್ಕೆ ಹೆಸರಾಗಿದ್ದು, ಶತ್ರುಗಳ ಕಣ್ಣಿಗೆ ಬೀಳದಂತೆ ಭೂಮಿಯಿಂದ ಕೇವಲ 250 ಮೀಟರ್ (820 ಅಡಿ) ಎತ್ತರದಲ್ಲಿ ಹಾರಾಡುವ ಸಾಮರ್ಥ್ಯ ಹೊಂದಿದೆ. ಈ ಡ್ರೋನ್‌ಗಳು ಗರಿಷ್ಠ 50,000 ಅಡಿಗಳಷ್ಟು ಎತ್ತರ ತಲುಪಬಲ್ಲವಾಗಿದ್ದು, ಪ್ರತಿ ಗಂಟೆಗೆ 442 ಕಿಲೋಮೀಟರ್‌ಗಳ ಗರಿಷ್ಠ ವೇಗ ಹೊಂದಿವೆ.
11 ಮೀಟರ್‌ಗಳಷ್ಟು (36 ಅಡಿ) ಉದ್ದವಿರುವ ಡ್ರೋನ್‌ಗಳ ರೆಕ್ಕೆಗಳ ವ್ಯಾಪ್ತಿ 22 ಮೀಟರ್‌ಗಳಿಗೂ (72 ಅಡಿ) ಹೆಚ್ಚಿದೆ.
ಎಂಕ್ಯು-9ಬಿ ಡ್ರೋನ್ ಅಂದಾಜು 1,700 ಕೆಜಿ ಪೇಲೋಡ್‌ಗಳನ್ನು ಒಯ್ಯುವ ಸಾಮರ್ಥ್ಯ ಹೊಂದಿದ್ದು, ಇದರಲ್ಲಿ ನಾಲ್ಕು ಕ್ಷಿಪಣಿಗಳು, 450 ಕೆಜಿ ಬಾಂಬ್‌ಗಳು ಸೇರಿವೆ. ಇಂಧನ ಮರುಪೂರಣದ ಅಗತ್ಯವಿಲ್ಲದೆ ಡ್ರೋನ್ 2,000 ಮೈಲಿಗಳಷ್ಟು (ಅಂದಾಜು 3,220 ಕಿಲೋಮೀಟರ್) ಹಾರಾಟ ನಡೆಸಬಲ್ಲದು.
ಈ ಡ್ರೋನ್ ಸತತ 35 ಗಂಟೆಗಳ ಕಾಲ ಹಾರಾಟ ನಡೆಸಬಲ್ಲದು, ಅಥವಾ ಆಗಸದಲ್ಲಿ ಒಂದೇ ಸ್ಥಳದಲ್ಲಿ ನಿಂತಿರಬಲ್ಲದು ಎಂದು ಡ್ರೋನ್ ಉತ್ಪಾದಕ ಸಂಸ್ಥೆಯಾದ ಜನರಲ್ ಅಟಾಮಿಕ್ಸ್ ಏರೋನಾಟಿಕಲ್ ಸಿಸ್ಟಮ್ಸ್ ತಿಳಿಸಿದೆ.
ಪ್ರಧಾನಿ ಮೋದಿ ಹಾಗೂ ಅಮೆರಿಕಾ ಅಧ್ಯಕ್ಷರು ಲಾಕ್‌ಹೀಡ್ ಮಾರ್ಟಿನ್ ಮತ್ತು ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ ಸಂಸ್ಥೆಗಳ ನಡುವಿನ ಜಂಟಿ ಒಪ್ಪಂದದ ಕುರಿತೂ ಮಾತುಕತೆ ನಡೆಸಿದ್ದಾರೆ. ಇವೆರಡು ಸಂಸ್ಥೆಗಳು ಅಮೆರಿಕಾ - ಭಾರತ ಸಿಇಒ ಫೋರಂನ ಜಂಟಿ ನೇತೃತ್ವ ವಹಿಸಿದ್ದು, ಸಿ-130ಜೆ ಸೂಪರ್ ಹರ್ಕ್ಯುಲಸ್ ವಿಮಾನಗಳ ನಿರ್ಮಾಣದಲ್ಲಿ ಸಹಯೋಗ ಹೊಂದಿವೆ.
ರಕ್ಷಣಾ ಸಹಕಾರದಲ್ಲಿ ಪ್ರಗತಿ:
ಅಮೆರಿಕಾ - ಭಾರತ ರಕ್ಷಣಾ ಔದ್ಯಮಿಕ ಸಹಕಾರ ಮಾರ್ಗಸೂಚಿಯಡಿ ಸಾಧಿಸಿರುವ ಮಹತ್ವದ ಅಭಿವೃದ್ಧಿಗಳನ್ನು ಉಭಯ ನಾಯಕರು ಶ್ಲಾಘಿಸಿದ್ದಾರೆ. ಈ ಸಹಕಾರಗಳಲ್ಲಿ ಜೆಟ್ ಇಂಜಿನ್‌ಗಳ ಜಂಟಿ ಉತ್ಪಾದನಾ ಪ್ರಯತ್ನ, ಆಯುಧಗಳು, ಭೂ ಚಲನ ವ್ಯವಸ್ಥೆಗಳು ಸೇರಿವೆ ಎಂದು ಶ್ವೇತ ಭವನ ಹೇಳಿದೆ.
ಇಂಡಸ್ ಎಕ್ಸ್ ಯೋಜನೆಯ ಮುಖ್ಯಾಂಶಗಳು:
ಮೋದಿ ಮತ್ತು ಬೈಡನ್ ಇಂಡಿಯಾ - ಯುಎಸ್ ಡಿಫೆನ್ಸ್ ಆ್ಯಕ್ಸಿಲರೇಶನ್ ಎಕೋಸಿಸ್ಟಮ್ (ಇಂಡಸ್-ಎಕ್ಸ್) ಯೋಜನೆಯ ಮೂಲಕ ಭಾರತ - ಅಮೆರಿಕಾಗಳ ನಡುವೆ ಹೆಚ್ಚುತ್ತಿರುವ ಭದ್ರತಾ ಸಹಕಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸೆಪ್ಟೆಂಬರ್ ತಿಂಗಳಲ್ಲಿ ಸಿಲಿಕಾನ್ ವ್ಯಾಲಿಯಲ್ಲಿ ನಡೆದ ಮೂರನೇ ಇಂಡಸ್-ಎಕ್ಸ್ ಸಭೆಯ ಪ್ರಗತಿಯನ್ನೂ ಅವರು ಚರ್ಚಿಸಿದ್ದಾರೆ.
ರಕ್ಷಣಾ ಅಭ್ಯಾಸಗಳಲ್ಲಿ ಹೊಸ ತಂತ್ರಜ್ಞಾನ:
ಮೋದಿ ಮತ್ತು ಬೈಡನ್ ಅವರು ರಕ್ಷಣಾ ಅಭ್ಯಾಸಗಳ ಸಂದರ್ಭದಲ್ಲಿ ಹೊಸ ತಂತ್ರಜ್ಞಾನಗಳ ಬಳಕೆಯನ್ನು ಜಾರಿಗೆ ತಂದಿರುವುದನ್ನು ಪ್ರಶಂಸಿಸಿದ್ದಾರೆ. ಇವುಗಳಲ್ಲಿ ರಾಜಸ್ಥಾನದಲ್ಲಿ ನಡೆಯುತ್ತಿರುವ 'ಯುಧ್ ಅಭ್ಯಾಸ್' ರಕ್ಷಣಾ ಅಭ್ಯಾಸದಲ್ಲಿ ಜ್ಯಾವೆಲಿನ್ ಮತ್ತು ಸ್ಟ್ರೈಕರ್ ವ್ಯವಸ್ಥೆಗಳನ್ನು ಭಾರತದಲ್ಲಿ ಇದೇ ಮೊದಲ ಬಾರಿಗೆ ಪ್ರದರ್ಶಿಸಿರುವುದೂ ಸೇರಿದೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಬೈಡನ್ ಅವರು ಕೋಲ್ಕತ್ತಾದಲ್ಲಿ ಒಂದು ನೂತನ ಸೆಮಿಕಂಡಕ್ಟರ್ ಉತ್ಪಾದನಾ ಘಟಕವನ್ನು ಸ್ಥಾಪಿಸುವ ಕುರಿತು ಸಮಾಲೋಚನೆ ನಡೆಸಿದ್ದಾರೆ. ಈ ಘಟಕ ಆಧುನಿಕ ಸೆನ್ಸಿಂಗ್, ಸಂವಹನ, ರಾಷ್ಟ್ರೀಯ ಭದ್ರತೆಗೆ ಪವರ್ ಇಲೆಕ್ಟ್ರಾನಿಕ್ಸ್, ಮುಂದಿನ ತಲೆಮಾರಿನ ಟೆಲಿಕಮ್ಯುನಿಕೇಶನ್, ಮತ್ತು ಹಸಿರು ಇಂಧನ ಬಳಕೆಗಳೆಡೆಗೆ ಗಮನ ಹರಿಸಲಿದೆ ಎಂದು ಶ್ವೇತ ಭವನ ವಿವರಿಸಿದೆ.
ಈ ನೂತನ ಘಟಕಕ್ಕೆ ಇಂಡಿಯಾ ಸೆಮಿಕಂಡಕ್ಟರ್ ಮಿಷನ್ನಿನ ಬೆಂಬಲವಿದ್ದು, ಭಾರತ್ ಸೆಮಿ, 3ಡಿ ಟೆಕ್, ಮತ್ತು ಯುಎಸ್ ಸ್ಪೇಸ್ ಫೋರ್ಸ್‌ಗಳ ಕಾರ್ಯತಂತ್ರದ ತಂತ್ರಜ್ಞಾನ ಸಹಭಾಗಿತ್ವವಿದೆ. ಈ ಯೋಜನೆ ಇನ್‌ಫ್ರಾರೆಡ್, ಗ್ಯಾಲಿಯಂ ನೈಟ್ರೈಡ್, ಹಾಗೂ ಸಿಲಿಕಾನ್ ಕಾರ್ಬೈಡ್ ಸೆಮಿಕಂಡಕ್ಟರ್‌ಗಳ ಉತ್ಪಾದನೆಯೆಡೆಗೆ ಗಮನ ಹರಿಸಲಿದೆ.
ನೂತನ ಸೆಮಿಕಂಡಕ್ಟರ್ ಉತ್ಪಾದನಾ ಘಟಕ ಒಂದು ವೈಡ್ ಬ್ಯಾಂಡ್ ಗ್ಯಾಪ್ ಕಂಪೌಂಡ್ ಸೆಮಿಕಂಡಕ್ಟರ್ ಘಟಕವಾಗಿರಲಿದ್ದು, GaN (ಗ್ಯಾಲಿಯಮ್ ನೈಟ್ರೈಡ್) ಹಾಗೂ SiC (ಸಿಲಿಕಾನ್ ಕಾರ್ಬೈಡ್) ಚಿಪ್‌ಗಳನ್ನು ಉತ್ಪಾದಿಸಲಿದೆ.
'ವೈಡ್ ಬ್ಯಾಂಡ್ ಗ್ಯಾಪ್ ಕಾಂಪೌಂಡ್' ಎಂದರೆ, ಹೆಚ್ಚಿನ ತಾಪಮಾನ ಮತ್ತು ವೋಲ್ಟೇಜ್‌ಗಳಲ್ಲೂ ಸಮರ್ಥವಾಗಿ ಕಾರ್ಯ ನಿರ್ವಹಿಸಬಲ್ಲ ಉಪಕರಣಗಳಾದ ಗ್ಯಾಲಿಯಮ್ ನೈಟ್ರೈಡ್ ಹಾಗೂ ಸಿಲಿಕಾನ್ ಕಾರ್ಬೈಡ್‌ಗಳನ್ನು ಸೂಚಿಸುತ್ತದೆ.
ಸಿಲಿಕಾನ್‌ನಿಂದ ಆಚೆಗಿನ ಉತ್ಪನ್ನಗಳಲ್ಲಿ ಪರಿಣತಿ ಹೊಂದಿರುವುದರಿಂದ, ಈ ಸೆಮಿಕಂಡಕ್ಟರ್ ಘಟಕ ಭವಿಷ್ಯದ ಘಟಕವಾಗಿರಲಿದೆ. ಆ ಮೂಲಕ ಅಮೆರಿಕಾ ಮತ್ತು ಭಾರತ ಎರಡೂ ದೇಶಗಳ ರಕ್ಷಣಾ ಅವಶ್ಯಕತೆಗಳನ್ನು ಪೂರೈಸಲಿದೆ.
ಈ ಘಟಕದ ತಾಂತ್ರಿಕ ಸಹಯೋಗ ಅಮೆರಿಕನ್ ವಾಯುಪಡೆಯನ್ನೂ ಒಳಗೊಂಡಿರುವುದರಿಂದ, ಈ ಘಟಕ ಸೈಬರ್ ಭದ್ರತೆಯನ್ನೂ ಒಳಗೊಂಡ ಮಹತ್ವದ ಘಟಕವಾಗಲಿದ್ದು, ಭಾರತದ ಇತರ ಫ್ಯಾಬ್ರಿಕೇಶನ್ ಮತ್ತು ಜೋಡಣಾ ಘಟಕಗಳಿಂದ ಭಿನ್ನವಾಗಿದೆ.
"ಭಾರತ ಮತ್ತು ಅಮೆರಿಕಾಗಳು ಭಾಗವಾಗಿರುವ ಭವಿಷ್ಯದ ಸೆಮಿಕಂಡಕ್ಟರ್ ಪೂರೈಕೆ ಸರಪಳಿಗೆ ಇವೆಲ್ಲ ಬೆಳವಣಿಗೆಗಳು ಅತ್ಯಂತ ಮುಖ್ಯವಾಗಿವೆ" ಎಂದು ಫ್ಯಾಬ್ ಎಕನಾಮಿಕ್ಸ್ ಸಂಸ್ಥೆಯ ಸಿಇಒ ಆಗಿರುವ ಡಾನಿಶ್ ಫಾರುಕಿ ಅಭಿಪ್ರಾಯ ಪಟ್ಟಿದ್ದಾರೆ.
ಯೋಜಿತ ಫ್ಯಾಬ್ರಿಕೇಶನ್ ಘಟಕದ ಜೊತೆಗೆ, ಈ ಸಹಭಾಗಿತ್ವದ ಅಂಗವಾಗಿ ಗ್ಲೋಬಲ್ ಫೌಂಡ್ರೀಸ್ (ಜಿಎಫ್) ಜಿಎಫ್ ಕೋಲ್ಕತಾ ಪವರ್ ಸೆಂಟರ್ ಅನ್ನು ಸ್ಥಾಪಿಸಲಿದೆ. ಈ ಘಟಕ ಚಿಪ್ ಉತ್ಪಾದನಾ ತಂತ್ರಜ್ಞಾನವನ್ನು ಇನ್ನಷ್ಟು ಉತ್ತಮಪಡಿಸುವ ಸಲುವಾಗಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಗಮನ ಹರಿಸಲಿದೆ.
ಈ ಕ್ರಮಗಳು ಶೂನ್ಯ ಇಂಗಾಲ ಹೊರಸೂಸುವಿಕೆ ಹೊಂದಿರುವ ವಾಹನಗಳು, ಸಂಪರ್ಕಿತ ಉಪಕರಣಗಳು, ಕೃತಕ ಬುದ್ಧಿಮತ್ತೆ (ಎಐ), ಹಾಗೂ ಡೇಟಾ ಸೆಂಟರ್‌ಗಳಂತಹ ಪ್ರಮುಖ ಕ್ಷೇತ್ರಗಳಲ್ಲಿ ಸುಧಾರಣೆಗಳನ್ನು ತರಲಿದೆ.
ಈ ಉದ್ಯಮಗಳಲ್ಲಿ ನಾವೀನ್ಯತೆಗಳನ್ನು ಇನ್ನಷ್ಟು ವೇಗಗೊಳಿಸಲು ಜಿಎಫ್ ಕೋಲ್ಕತಾ ಪವರ್ ಸೆಂಟರ್ ಮುಖ್ಯ ಪಾತ್ರ ನಿರ್ವಹಿಸಲಿದೆ. ಅದರೊಡನೆ, ಜಿಎಫ್ ಸಂಸ್ಥೆ ಭಾರತದಲ್ಲಿ ದೀರ್ಘಾವಧಿಯ ಉತ್ಪಾದನಾ ಮತ್ತು ತಂತ್ರಜ್ಞಾನ ಸಹಯೋಗವನ್ನು ಎದುರು ನೋಡುತ್ತಿದೆ.
ಇಂತಹ ಘಟಕದ ಸ್ಥಾಪನೆಯಿಂದ ಭಾರತ ಮತ್ತು ಅಮೆರಿಕಾಗಳ ತಂತ್ರಜ್ಞಾನ ಸಹಯೋಗ ಉತ್ತಮಗೊಂಡು, ಎರಡು ದೇಶಗಳಲ್ಲಿ ಉತ್ತಮ ಗುಣಮಟ್ಟದ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಆ ಮೂಲಕ ಸೆಮಿಕಂಡಕ್ಟರ್ ಉದ್ಯಮಗಳಿಗೆ ಅವಶ್ಯಕ ನೆರವು ಲಭಿಸಲಿದೆ.
ಮೋದಿಯವರ ಜೊತೆಗಿನ ಮಾತುಕತೆಯಲ್ಲಿ, ಅಮೆರಿಕಾ ಜಾಗತಿಕ ಸಂಸ್ಥೆಗಳಲ್ಲಿ ಕಾಲಕ್ಕೆ ತಕ್ಕ ಬದಲಾವಣೆಗಳನ್ನು ಬೆಂಬಲಿಸುತ್ತದೆ ಎಂದು ಬೈಡನ್ ಹೇಳಿದ್ದಾರೆ. ಆ ಮೂಲಕ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯತ್ವ ಪಡೆಯುವ ಭಾರತದ ಗುರಿಗೆ ಬೆಂಬಲ ಲಭಿಸಿದಂತಾಗಿದೆ.
ಮೋದಿಯವರ ಇತ್ತೀಚಿನ ಪೋಲೆಂಡ್ ಮತ್ತು ಉಕ್ರೇನ್ ಭೇಟಿಯನ್ನು ಬೈಡನ್ ಶ್ಲಾಘಿಸಿದ್ದಾರೆ. ಉಕ್ರೇನ್‌ನಲ್ಲಿ ಶಾಂತಿ ಮತ್ತು ಇಂಧನ ವಲಯದಲ್ಲಿ ಮಾನವೀಯ ನೆರವಿಗೆ ಸಂಬಂಧಿಸಿದಂತೆ ಮೋದಿಯವರ ಸಂದೇಶವನ್ನು ಬೈಡನ್ ಪ್ರಶಂಸಿಸಿದ್ದಾರೆ ಎಂದು ಶ್ವೇತ ಭವನ ತಿಳಿಸಿದೆ.
ಇಬ್ಬರು ನಾಯಕರು ವಿಶೇಷವಾಗಿ ಮಧ್ಯ ಪೂರ್ವದ ಸಮುದ್ರ ಮಾರ್ಗಗಳಲ್ಲಿ ಮುಕ್ತ ಸಂಚಾರ ಮತ್ತು ಸುರಕ್ಷಿತ ವ್ಯಾಪಾರದ ಕುರಿತು ಮಾತುಕತೆ ನಡೆಸಿದ್ದಾರೆ. ಅರಬ್ಬೀ ಸಮುದ್ರದಲ್ಲಿ ಸಮುದ್ರ ಮಾರ್ಗಗಳನ್ನು ಸುರಕ್ಷಿತಗೊಳಿಸುವ ನಿಟ್ಟಿನಲ್ಲಿ ಭಾರತ 2025ರಲ್ಲಿ ಕಂಬೈನ್ಡ್ ಟಾಸ್ಕ್ ಫೋರ್ಸ್ 150ರ ನೇತೃತ್ವ ವಹಿಸುವ ನಿರೀಕ್ಷೆಗಳಿವೆ.
- ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
Advertisement