ಭಾರತೀಯ ನೌಕಾ ಸೇನೆ ತೆಲಂಗಾಣದ ವಿಕಾರಾಬಾದಿನಲ್ಲಿ ಸ್ಥಾಪಿಸಲು ಮುಂದಾಗಿರುವ ರೇಡಾರ್ ಕೇಂದ್ರವನ್ನು ವಿರೋಧಿಸಿ ಡಾಮಗುಂಡಂ ಗ್ರಾಮದ ಜನರು ನಡೆಸುತ್ತಿರುವ ಪ್ರತಿಭಟನೆಗಳು ಚರ್ಚೆಗೆ ಗ್ರಾಸವಾಗಿವೆ. ಸ್ಥಳೀಯ ಜನರ ಕಳವಳಗಳಿಗೆ ಯಾವತ್ತೂ ಬೆಲೆ ಕೊಡಲೇಬೇಕು. ಆದರೆ, ಪ್ರಸ್ತುತ ನಡೆಯುತ್ತಿರುವ ಪ್ರತಿಭಟನೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಈ ಪ್ರತಿಭಟನೆಗಳು ಜನ ಸಮುದಾಯದ ಸಮಸ್ಯೆಗಳ ಕೇಂದ್ರಿತವಾಗಿರುವ ಬದಲು, ವಾಸ್ತವವಾಗಿ ರಾಜಕೀಯ ಪ್ರೇರಿತವಾಗಿದ್ದು, ದೇಶದ ಭದ್ರತೆಯ ದೃಷ್ಟಿಯಿಂದ ಅತ್ಯಂತ ಮುಖ್ಯವಾದ ವಿಕಾರಾಬಾದ್ ರೇಡಾರ್ ಕೇಂದ್ರ ಯೋಜನೆಯನ್ನು ಬುಡಮೇಲುಗೊಳಿಸುವ ಉದ್ದೇಶ ಹೊಂದಿದೆ ಎನ್ನುವ ಮಾತುಗಳೂ ಕೇಳಿ ಬರುತ್ತಿವೆ.
2027ರ ವೇಳೆಗೆ ಪೂರ್ಣಗೊಳ್ಳಬೇಕೆಂದು ಉದ್ದೇಶಿಸಿರುವ ವೆರಿ ಲೋ ಫ್ರೀಕ್ವೆನ್ಸಿ (ವಿಎಲ್ಎಫ್) ರೇಡಾರ್ ಕೇಂದ್ರ ಭಾರತದ ಸಾಗರ ಭದ್ರತಾ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ. ಇದು ಭಾರತದ ಇಂತಹ ಕೇವಲ ಎರಡನೇ ರೇಡಾರ್ ಕೇಂದ್ರವಾಗಲಿದ್ದು, ನೌಕಾಪಡೆಯ ಸಬ್‌ಮರೀನ್ ಬಳಗದ ಸಂವಹನ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲು ನೆರವಾಗಲಿದೆ. ಈ ಮಹತ್ವದ ಯೋಜನೆಗೆ ಈಗಾಗಲೇ ಅವಶ್ಯಕ ಪಾರಿಸರಿಕ ಮತ್ತು ಕಾನೂನು ಅನುಮತಿಗಳು ಲಭಿಸಿದ್ದು, ವಿಕಾರಾಬಾದಿನ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ನೆರವಾಗಿ, ಸ್ಥಳೀಯ ಸಮುದಾಯಗಳಿಗೆ ಆರ್ಥಿಕ ಪ್ರಯೋಜನಗಳನ್ನು ಕಲ್ಪಿಸಲಿದೆ. ಆದರೆ, ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸ್ಥಳೀಯ ಜನರಲ್ಲಿರುವ ಭಯ, ಆತಂಕಗಳನ್ನು ಇನ್ನಷ್ಟು ಹೆಚ್ಚಿಸಲು ಪ್ರಯತ್ನ ನಡೆಸುತ್ತಿರುವಂತೆ ಕಂಡುಬರುತ್ತಿದೆ.
ಸುಳ್ಳು ನಿರೂಪಣೆ: ರಾಜಕೀಯ ಕಾರಣಗಳಿಗೆ ತೀವ್ರಗೊಂಡ ಪರಿಸರ ಕಾಳಜಿ
ಪ್ರತಿಭಟನಾಕಾರರು ರೇಡಾರ್ ಕೇಂದ್ರದ ಸ್ಥಾಪನೆಯಿಂದ ಪರಿಸರ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ಆರೋಪಿಸುತ್ತಿದ್ದಾರಾದರೂ, ಅವುಗಳಿಗೆ ಬಹುತೇಕ ಯಾವುದೇ ಆಧಾರಗಳಿಲ್ಲ. ಭಾರತೀಯ ನೌಕಾಪಡೆ ಈಗಾಗಲೇ ತಮಿಳು ನಾಡಿನಲ್ಲಿ ಐಎನ್ಎಸ್ ಕಟ್ಟಬೊಮ್ಮನ್ ಎಂಬ ಇದೇ ರೀತಿಯ ಕೇಂದ್ರವನ್ನು ಹೊಂದಿದ್ದು, ಅಲ್ಲಿ ಯಾವುದೇ ರೀತಿಯ ಆರೋಗ್ಯ ಅಥವಾ ಪರಿಸರ ಸಂಬಂಧಿತ ಸಮಸ್ಯೆಗಳು ಎದುರಾಗಿಲ್ಲ. 1990ರಿಂದಲೂ ಕಾರ್ಯಾಚರಿಸುತ್ತಿರುವ ಐಎನ್ಎಸ್ ಕಟ್ಟಬೊಮ್ಮನ್ ಅತ್ಯುತ್ತಮ ಪರಿಸರ ಉಸ್ತುವಾರಿಯನ್ನು ನಿರ್ವಹಿಸಿದೆ. ಆದರೆ ಇದರ ಕಾರ್ಯಾಚರಣೆಗಳಿಂದ ಯಾವುದೇ ಆರೋಗ್ಯ ಸಂಬಂಧಿ ದುಷ್ಪರಿಣಾಮಗಳು ನೌಕಾಪಡೆಯ ಸಿಬ್ಬಂದಿಗಳಲ್ಲಾಗಲಿ, ಸ್ಥಳೀಯ ಸಮುದಾಯದ ಜನರಲ್ಲಾಗಲಿ ಕಂಡುಬಂದಿಲ್ಲ.
ಪರಿಸರ ಸುಸ್ಥಿರತೆಗೆ ಸಂಬಂಧಿಸಿದಂತೆ ಭಾರತೀಯ ನೌಕಾಪಡೆ ಸದಾ ಕಟಿಬದ್ಧವಾಗಿ ಸಾಗಿ ಬಂದಿದೆ. ಐಎನ್ಎಸ್ ಕಟ್ಟಬೊಮ್ಮನ್ ವತಿಯಿಂದ ಎರಡು ಲಕ್ಷ ಸಸ್ಯಗಳ ಬೀಜವನ್ನು ಹೊಂದಿರುವ ಮಣ್ಣಿನ ಉಂಡೆಗಳನ್ನು ನೆಡಲಾಗಿದ್ದು, ಇದು ಪರಿಸರ ವ್ಯವಸ್ಥೆಯನ್ನು ಉತ್ತಮಪಡಿಸುವ ಗುರಿ ಹೊಂದಿದೆ. ಇದರಿಂದಾಗಿ ಬೆಂಗಾಲ್ ನರಿಗಳು ಮತ್ತು ವಲಸೆ ಪಕ್ಷಿಗಳ ಸಂಖ್ಯೆಯೂ ಹೆಚ್ಚಾಗಿದೆ. ವಿಕಾರಾಬಾದ್ ರೇಡಾರ್ ಕೇಂದ್ರ ಈಗಾಗಲೇ ತೀವ್ರ ಪರಿಶೀಲನೆಗೆ ಒಳಗಾಗಿದ್ದು, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ವಿಧಿಸಿರುವ ಎಲ್ಲ ಮಾರ್ಗಸೂಚಿಗಳನ್ನು ಇದು ಪಾಲಿಸಿದೆ. ಉದ್ದೇಶಿತ ಯೋಜನೆಯ 50% ಭೂಪ್ರದೇಶ ಸಂರಕ್ಷಿತ ಅರಣ್ಯ ಪ್ರದೇಶವಾಗಿದ್ದು, ಪರಿಸರದ ಮೇಲೆ ಕನಿಷ್ಠ ಪರಿಣಾಮ ಬೀರಲಿದೆ.
ಪರಿಸರದ ಕುರಿತ ಕಳವಳಗಳು ಈಗ ಕೇವಲ ರಾಜಕೀಯ ಪ್ರಯೋಜನಗಳಿಗಾಗಿ ರೇಡಾರ್ ಕೇಂದ್ರವನ್ನು ವಿರೋಧಿಸುವವರ ಕೈಗೆ ಸಿಕ್ಕಿದ ಆಯುಧದಂತಾಗಿದೆ. ಈ ಪ್ರತಿಭಟನೆಗಳ ಹಿಂದೆ ಯಾವುದೇ ವೈಜ್ಞಾನಿಕ ಸಾಕ್ಷಿಗಳು ಲಭ್ಯವಿಲ್ಲ. ಆದ್ದರಿಂದ ಸ್ಥಳೀಯ ಸಮುದಾಯದ ಕುರಿತು ನೈಜ ಕಾಳಜಿ ಇಲ್ಲದಿದ್ದರೂ, ರಾಜಕೀಯ ಕಾರಣಗಳಿಗಾಗಿ ಅವುಗಳ ಕುರಿತು ಭಯ ಮೂಡಿಸಲಾಗುತ್ತಿದೆ.
ರಾಜಕೀಯ ಉದ್ದೇಶಿತ ಪ್ರತಿಭಟನೆಗಳ ಹಿಂದೆ ಮರೆಯಾದ ಪ್ರಯೋಜನಗಳು
ಪ್ರತಿಭಟನೆಗಳ ಹಿಂದಿರುವ ಜನರು ರೇಡಾರ್ ಕೇಂದ್ರವನ್ನು ದೂರುತ್ತಿದ್ದರೂ, ಅದರಿಂದ ಸ್ಥಳೀಯ ಜನರಿಗೆ ಸಾಕಷ್ಟು ಅನುಕೂಲಗಳಿವೆ. ಭಾರತೀಯ ನೌಕಾಪಡೆ ಕೇವಲ ಕಾರ್ಯತಂತ್ರದ ರಕ್ಷಣಾ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸುತ್ತಿಲ್ಲ. ಬದಲಿಗೆ, ವಿಕಾರಾಬಾದಿನ ಭವಿಷ್ಯಕ್ಕೂ ಹಣದ ಹೂಡಿಕೆ ನಡೆಸುತ್ತಿದೆ. ಈ ಯೋಜನೆಯಲ್ಲಿ ಶತಮಾನಗಳ ಹಳೆಯ ಶ್ರೀ ರಾಮಲಿಂಗೇಶ್ವರ ದೇಗುಲಕ್ಕೆ ಹೊಸ ರಸ್ತೆ ವ್ಯವಸ್ಥೆ, ಶಾಲೆ, ಕಾಲೇಜು, ಆಸ್ಪತ್ರೆ, ಬ್ಯಾಂಕುಗಳು, ಮಾರುಕಟ್ಟೆಗಳನ್ನು ಒಳಗೊಂಡ ಹೊಸ ಉಪನಗರದ ನಿರ್ಮಾಣವೂ ಸೇರಿದೆ.
ಇಂತಹ ಅಭಿವೃದ್ಧಿಗಳು ಕೇವಲ ಉದ್ಯೋಗಾವಕಾಶಗಳನ್ನು ಕಲ್ಪಿಸುವುದು ಮಾತ್ರವಲ್ಲದೆ, ಸ್ಥಳೀಯ ಜನರಿಗೆ ಜಾಗತಿಕ ಗುಣಮಟ್ಟದ ಆರೋಗ್ಯ ಮತ್ತು ಶಿಕ್ಷಣ ಸೇವೆ ಒದಗಿಸಿ, ಈ ಪ್ರದೇಶದ ಜನರ ಜೀವನ ಮಟ್ಟವನ್ನು ಸುಧಾರಿಸಲಿದೆ. ಇಂತಹ ಪ್ರಗತಿಗೆ ಅಡ್ಡಗಾಲು ಹಾಕುವ ಮೂಲಕ, ರಾಜಕೀಯ ಪ್ರೇರಿತ ಪ್ರತಿಭಟನಾಕಾರರು ವಿಕಾರಾಬಾದಿನ ಸಾವಿರಾರು ಕುಟುಂಬಗಳಿಗೆ ನೆರವಾಗಬಲ್ಲ ಅತ್ಯಂತ ಅಗತ್ಯವಾದ ಅಭಿವೃದ್ಧಿಯನ್ನೇ ತಡೆಯುತ್ತಿದ್ದಾರೆ.
ಭಾರತೀಯ ನೌಕಾಪಡೆಯ ಪಾರದರ್ಶಕ ಪ್ರಯತ್ನ
ವಿಕಾರಾಬಾದ್ ಯೋಜನೆಗೆ ಸಂಬಂಧಿಸಿದಂತೆ, ಭಾರತೀಯ ನೌಕಾ ಸೇನೆ ನಿರಂತರವಾಗಿ ಪಾರದರ್ಶಕತೆಯನ್ನು ಪ್ರದರ್ಶಿಸುತ್ತಾ, ಸ್ಥಳೀಯ ಜನರನ್ನು ಒಳಗೊಳ್ಳುತ್ತಾ ಬಂದಿದೆ. ಅಭಿವೃದ್ಧಿ ಪ್ರಕ್ರಿಯೆಯ ಕುರಿತು ಸ್ಥಳೀಯರಿಗೆ ಮಾಹಿತಿ ನೀಡಲು ಮತ್ತು ಅವರನ್ನು ಒಳಗೊಳ್ಳಲು ನೌಕಾಪಡೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಶ್ರೀ ರಾಮಲಿಂಗೇಶ್ವರ ದೇವಾಲಯಕ್ಕೆ ಅನಿರ್ಬಂಧಿತ ಮಾರ್ಗ ನಿರ್ಮಿಸುವ ಮೂಲಕ, ನೌಕಾಪಡೆ ಸ್ಥಳೀಯ ಸಂಸ್ಕೃತಿಗೆ ಗೌರವ ಸೂಚಿಸುತ್ತಿದೆ.
ಪ್ರತಿಭಟನಾಕಾರರು ಕಳವಳಗಳನ್ನು ವ್ಯಕ್ತಪಡಿಸುತ್ತಿದ್ದಾರಾದರೂ, ಈ ಆರೋಪಗಳು ಒಟ್ಟಾರೆ ಸಮುದಾಯದ ಅಭಿಪ್ರಾಯಕ್ಕೆ ಧ್ವನಿಯಾಗಿಲ್ಲ. ಅವುಗಳು ಈ ಪ್ರದೇಶಕ್ಕೆ ದೀರ್ಘಾವಧಿಯ ಪ್ರಯೋಜನ ಒದಗಿಸುವ ಮಹತ್ವದ ಯೋಜನೆಯನ್ನು ವಿಳಂಬಗೊಳಿಸುವ ರಾಜಕೀಯ ಪ್ರೇರಿತ ಪ್ರಯತ್ನಗಳಂತೆಯೇ ಕಾಣುತ್ತಿವೆ. ಆದ್ದರಿಂದ, ಜನರ ಕುರಿತ ನೈಜ ಕಾಳಜಿ ಮತ್ತು ಜನರ ಮನಸ್ಥಿತಿಯನ್ನು ಹಾಳುಗೆಡವುವ ರಾಜಕೀಯ ಪ್ರೇರಿತ ದುರುದ್ದೇಶಗಳ ನಡುವಿನ ವ್ಯತ್ಯಾಸ ಗುರುತಿಸುವುದು ಅತ್ಯವಶ್ಯಕವಾಗಿದೆ.
ಅಭಿವೃದ್ಧಿಯ ದೂರದೃಷ್ಟಿಗೆ ಅಡ್ಡಗಾಲಾದ ರಾಜಕೀಯ ದುರಾಲೋಚನೆಗಳು
ವಿಕಾರಾಬಾದಿನ ವಿಎಲ್ಎಫ್ ರೇಡಾರ್ ಯೋಜನೆ ಮುಂದುವರಿಯುತ್ತಿದ್ದು, ಇದು ಅಭಿವೃದ್ಧಿಯ ದೂರದೃಷ್ಟಿ ಹೊಂದಿದೆ. ಈ ಯೋಜನೆ ದೇಶದ ಭದ್ರತೆ ಮತ್ತು ಪರಿಸರ ಜವಾಬ್ದಾರಿಯ ನಡುವೆ ಸಮತೋಲನ ಸಾಧಿಸಲಿದೆ. ಪ್ರತಿಭಟನೆಗಳಿಗೆ ಮಾಧ್ಯಮಗಳ ಗಮನ ಲಭಿಸುತ್ತಿದೆಯಾದರೂ, ಅವುಗಳ ಹಿಂದಿರುವ ರಾಜಕೀಯ ಧ್ವನಿಯನ್ನು ಗುರುತಿಸಿ, ಸೂಕ್ಷ್ಮವಾಗಿ ಗಮನಿಸಬೇಕಿದೆ.
ಐಎನ್ಎಸ್ ಕಟ್ಟಬೊಮ್ಮನ್ ಯೋಜನೆಯ ಮೂಲಕ ಭಾರತೀಯ ನೌಕಾ ಸೇನೆ ಕಾರ್ಯತಂತ್ರದ ವ್ಯವಸ್ಥೆಗಳು ಮತ್ತು ಪರಿಸರ ವ್ಯವಸ್ಥೆ ಜೊತೆಯಾಗಿ ಸಾಗಬಲ್ಲವು ಎನ್ನುವುದನ್ನು ಸಾಬೀತುಪಡಿಸಿದೆ. ಯೋಜನೆಯನ್ನು ಸ್ಥಗಿತಗೊಳಿಸುವ ರಾಜಕೀಯ ಪ್ರೇರಿತ ಪ್ರತಿಭಟನೆಗಳ ನಡುವೆಯೂ, ಭಾರತೀಯ ನೌಕಾಪಡೆ ವಿಕಾರಾಬಾದ್ ರೇಡಾರ್ ಕೇಂದ್ರದ ಮೂಲಕ ಈ ಪ್ರದೇಶಕ್ಕೆ ಉದ್ಯೋಗಾವಕಾಶ, ಮೂಲಭೂತ ವ್ಯವಸ್ಥೆ, ಮತ್ತು ಸುಸ್ಥಿರ ಭವಿಷ್ಯವನ್ನು ಕಲ್ಪಿಸಲಿದೆ.
- ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
Advertisement