ಸಿ.ಟಿ ರವಿ ಪ್ರಕರಣ: ಬಿಜೆಪಿಗೆ ಇಕ್ಕಟ್ಟು; ಕಾಂಗ್ರೆಸ್ ಕೈಗೆ ಹೊಸ ಅಸ್ತ್ರ (ಸುದ್ದಿ ವಿಶ್ಲೇಷಣೆ)

ಚಿಂತಕರ ಚಾವಡಿ ಎಂಬ ಪ್ರಶಂಸೆಗೆ ಪಾತ್ರವಾಗಿ ಸಂಸದೀಯ ವ್ಯವಸ್ಥೆಯಲ್ಲಿ ಹೆಸರು ಗಳಿಸಿದ್ದ ಕರ್ನಾಟಕ ವಿಧಾನ ಪರಿಷತ್ತು ಇತ್ತೀಚಿನ ವರ್ಷಗಳಲ್ಲಿ ಅದರ ಮೌಲ್ಯ ಕಳೆದುಕೊಳ್ಳುತ್ತಿದೆ ಎಂಬ ಟೀಕೆಗಳು ವ್ಯಕ್ತವಾಗುತ್ತಿವೆ.
Laxmi Hebbalkar, CT Ravi
ಲಕ್ಷ್ಮಿ ಹೆಬ್ಬಾಳ್ಕರ್, ಸಿ.ಟಿ.ರವಿ
Updated on

ರಾಜನನ್ನೂ ಮೀರಿಸುವ ನಿಷ್ಠೆ ಎಂಬ ಮಾತೊಂದು ಚಾಲ್ತಿಯಲ್ಲಿದೆ. ಸಂಸದೀಯ ವ್ಯವಸ್ಥೆಯಲ್ಲಿ ಹಿರಿಯರ ಸದನ , ಮೇಲ್ಮನೆ ಎಂಬೆಲ್ಲ ಗೌರವಕ್ಕೆ ಪಾತ್ರವಾದ ವಿಧಾನ ಪರಿಷತ್ತಿನಲ್ಲಿ ಗುರುವಾರ ಬಿಜೆಪಿಯ ಸದಸ್ಯ ಸಿ.ಟಿ.ರವಿ ಸಚಿವೆ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಕುರಿತು ಆಡಿದರೆನ್ನಲಾದ ಮಾತು ಈಗ ವಿವಾದದ ಕಿಚ್ಚೆಬ್ಬಿಸಿದೆ. ಸಹಜವಾಗೇ ಅದಕ್ಕೆ ರಾಜಕೀಯ ಬೆರೆತಿರುವುದರಿಂದ ಕಾಂಗ್ರೆಸ್- ಬಿಜೆಪಿ ನಡುವಣ ತಿಕ್ಕಾಟಕ್ಕೆ ವೇದಿಕೆ ಕಲ್ಪಿಸಿದೆ.

ಮಹಿಳೆಯೊಬ್ಬರ ಬಗ್ಗೆ ಸಭ್ಯವಲ್ಲದ ಭಾಷೆ ಬಳಸಿ ನಿಂದಿಸಿದ ಅವರ ವಿರುದ್ಧ ಕ್ರಿಮಿನಲ್ ಪ್ರಕರಣವೂ ದಾಖಲಾಗಿ ಅದು ಈಗ ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್ ಕಟಕಟೆ ಏರಿದೆ. ಪೊಲೀಸ್ ಬಂಧನದಲ್ಲಿರುವ ಸಿ.ಟಿ.ರವಿ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿ ಈ ಅಂಕಣ ಮುದ್ರಣಕ್ಕೆ ಹೋಗುವ ಹಂತದಲ್ಲಿ ಇನ್ನೂ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ.

ಅದೇನೆ ಇರಲಿ. ಹಿರಿಯರ ಸದನ ಇಂಥ ಒಂದು ಅಹಿತಕರ ಪ್ರಸಂಗಕ್ಕೆ ವೇದಿಕೆ ಆಗಬಾರದಿತ್ತು. ಪ್ರಕರಣದ ಕುರಿತಂತೆ ಸದನದಲ್ಲಿ ತಮ್ಮ ತೀರ್ಪು ಪ್ರಕಟಿಸಿದ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಪರಸ್ಪರ ಆತ್ಮಾವಲೋಕನಕ್ಕೆ ಕರೆ ನೀಡಿದ್ದಾರೆ. ಆದರೆ ಬಹುಮುಖ್ಯವಾಗಿ ರಾಜಕೀಯ ಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.

ಚಿಂತಕರ ಚಾವಡಿ ಎಂಬ ಪ್ರಶಂಸೆಗೆ ಪಾತ್ರವಾಗಿ ಸಂಸದೀಯ ವ್ಯವಸ್ಥೆಯಲ್ಲಿ ಹೆಸರು ಗಳಿಸಿದ್ದ ಕರ್ನಾಟಕ ವಿಧಾನ ಪರಿಷತ್ತು ಇತ್ತೀಚಿನ ವರ್ಷಗಳಲ್ಲಿ ಅದರ ಮೌಲ್ಯ ಕಳೆದುಕೊಳ್ಳುತ್ತಿದೆ ಎಂಬ ಟೀಕೆಗಳು ವ್ಯಕ್ತವಾಗುತ್ತಿವೆ.

ಶಿಕ್ಷಣ, ಕಲೆ ಸಂಸ್ಕೃತಿ, ಸಂಸದೀಯ ಪರಂಪರೆಯಲ್ಲಿ ಅನುಭವ ಹೊಂದಿರುವ ಹಿರಿಯ ರಾಜನೀತಿ ತಜ್ಞರ ಚಿಂತನೆಯ ಕೇಂದ್ರವಾಗಬೇಕಿದ್ದ ಪರಿಷತ್ತು ಇಂದು ರಾಜಕೀಯ ಪುನರ್ವಸತಿ ಕೇಂದ್ರವಾಗುತ್ತಿದೆ. ಇದರ ಬಗ್ಗೆ ಸ್ವತಹಾ ಸದನದ ಹಿರಿಯ ಸದಸ್ಯರೂ ಆಗಿರುವ ಸಭಾಪತಿ ಹೊರಟ್ಟಿಯವರೇ ಅನೇಕ ಸಂದರ್ಭಗಳಲ್ಲಿ ಬೇಸರ ಹೊರ ಹಾಕಿದ್ದಾರೆ. ಆದರೆ ರಾಜಕೀಯ ಪಕ್ಷಗಳ ಆದ್ಯತೆಗಳೇ ಬದಲಾಗಿರುವುದರಿಂದ ಈ ವಿಚಾರದಲ್ಲಿ ಬೆಕ್ಕಿನ ಕೊರಳಿಗೆ ಗಂಟ ಕಟ್ಟುವವರು ಯಾರು ಎಂಬ ಪ್ರಶ್ನೆ ಮೂಡಿದೆ.

ವಿಧಾನ ಪರಿಷತ್ತಿನಲ್ಲಿ ಗುರುವಾರ ನಡೆದ ಘಟನೆಗೆ ಮೂಲ ಕಾರಣ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಕುರಿತಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಂಸತ್ತಿನಲ್ಲಿ ಪ್ರತಿಪಕ್ಷದ ಸದಸ್ಯರನ್ನುದ್ದೇಶಿಸಿ ಆಡಿದ ಹಗುರ ಮಾತು. ಇದರ ವಿರುದ್ಧ ವಿಧಾನ ಪರಿಷತ್ತಿನಲ್ಲೂ ಆಡಳಿತ ಪಕ್ಷ ಪ್ರತಿಭಟನೆ ನಡೆಸಿತು.

ಪ್ರತಿಪಕ್ಷ ಬಿಜೆಪಿ ತನ್ನ ನಾಯಕನನ್ನು ಸಮರ್ಥಿಸಿಕೊಳ್ಳಲು ಹೋಗಿ ಎಡವಿತು. ಸದನದ ಕಲಾಪ ಮುಂದೂಡಿದ ನಂತರವೂ ಹಾಜರಿದ್ದ ಆಡಳಿತ- ಪ್ರತಿಪಕ್ಷಗಳ ಸದಸ್ಯರು ಚಕಮಕಿಗೆ ಇಳಿದಿದ್ದೇ ಇಷ್ಟೆಲ್ಲ ರಾದ್ಧಾಂತಕ್ಕೆ ಮೂಲ ಕಾರಣ. ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ಹಾಗೂ ಸಂಸತ್ ಸದಸ್ಯ ರಾಹುಲ್ ಗಾಂಧಿಯವರನ್ನು ಕುರಿತು ಸಿ.ಟಿ.ರವಿ ಆಡಿದ ಆಕ್ಷೇಪಾರ್ಹ ಮಾತು, ಅದಕ್ಕೆ ಪ್ರತಿಯಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆಡಿದ ಮಾತು ಪರಸ್ಪರ ವೈಯಕ್ತಿಕ ಟೀಕೆಗಳಾಗಿ ಪರಿವರ್ತನೆಗೊಂಡು ವಿವಾದ ಪರಾಕಾಷ್ಟೆಗೆ ಮುಟ್ಟಿತು.

ಸಾಮಾನ್ಯವಾಗಿ ಸದನದ ಕಲಾಪ ನಡೆಯುವ ಸಂದರ್ಭದಲ್ಲಿ ಪ್ರತಿಯೊಂದು ನಡವಳಿಕೆಗಳನ್ನು ಧ್ವನಿ ಮುದ್ರಣ, ಹಾಗೂ ವೀಡಿಯೋ ರೆಕಾರ್ಡಿಂಗ್ ಮಾಡಲಾಗುತ್ತದೆ. ಪರಿಷತ್ತಿನ ಸಚಿವಾಲಯದ ಸಿಬ್ಬಂದಿ ಸದನದಲ್ಲಿ ಸದಸ್ಯರು ಆಡುವ ಮಾತುಗಳನ್ನು ಲಿಖಿತವಾಗಿಯೂ ದಾಖಲಿಸಿಕೊಳ್ಳುತ್ತಾರೆ ಇದೊಂದು ಅಧಿಕೃತ ದಾಖಲೆ. ವಿಧಾನಸಭೆ ಹಾಗೂ ಸಂಸತ್ತಿನ ಉಭಯ ಸದನಗಳಲ್ಲೂ ಈ ವ್ಯವಸ್ಥೆ ಇದೆ.

ಗುರುವಾರ ಈ ಘಟನೆ ನಡೆದಾಗ ಸದನದ ಕಲಾಪ ನಡೆಯುತ್ತಿರಲಿಲ್ಲ. ಹೀಗಾಗಿ ಅಲ್ಲಿ ಪರಿಷತ್ತಿನ ಸಚಿವಾಲಯದ ಅಧಿಕಾರಿಗಳು, ಸಿಬ್ಬಂದಿಗಳು ಇರಲಿಲ್ಲ. ಆಡಳಿತ ಪಕ್ಷ ಮತ್ತು ಪ್ರತಿಪಕ್ಷದ ಸದಸ್ಯರು ಮಾತ್ರ ಹಾಜರಿದ್ದರು. ಹೀಗಾಗಿ ಅಲ್ಲಿ ನಡೆದ ಮಾತಿನ ಚಕಮಕಿ ವೇಳೆ ಎರಡೂ ಕಡೆಯಿಂದ ಸದಸ್ಯರು ಒಟ್ಟಾಗಿ ಮಾತನಾಡಿದ್ದರಿಂದ ನಿರ್ದಿಷ್ಟವಾಗಿ ಇಂಥವರೇ ಮಾತನಾಡಿದರು ಎಂಬುದು ಗೊತ್ತಾಗುವುದು ಕಷ್ಟ. ಹೀಗಾಗಿ ಅಧಿಕೃತವಾಗಿ ಕಲಾಪ ದಾಖಲಾಗಿಲ್ಲ. ತನ್ನ ವಿರುದ್ಧದ ಆರೋಪಕ್ಕೆ ಸ್ಪಷ್ಟೀಕರಣ ನೀಡಿರುವ ರವಿ ತಾನು ಆಕ್ಷೇಪಾರ್ಹ ಪದ ಬಳಸಿಲ್ಲ ಎಂದೂ ಹೇಳಿದ್ದಾರೆ.

Laxmi Hebbalkar, CT Ravi
ಅಧಿಕಾರ ಹಂಚಿಕೆ ಕಗ್ಗಂಟು: ಮುಂದಿನ ಯುದ್ಧಕ್ಕೆ ಶಿವಕುಮಾರ್ ಪೂರ್ವ ತಯಾರಿ! (ಸುದ್ದಿ ವಿಶ್ಲೇಷಣೆ)

ಸರ್ಕಾರದ ನಿಗೂಢ ಮೌನ:

ಆದರೆ ಈ ಪ್ರಸಂಗದ ಮರುಕ್ಷಣವೇ ವಿಧಾನ ಮಂಡಲದ ಕಲಾಪ ನಡೆಯುತ್ತಿದ್ದ ಬೆಳಗಾವಿಯ ಸುವರ್ಣ ಸೌಧದಲ್ಲಿ ಸಚಿವೆಯ ಬೆಂಬಲಿಗರು ನಡೆಸಿದ ದಾಂಧಲೆ ಬಗ್ಗೆ ಸರ್ಕಾರ ಮೌನ ವಹಿಸಿದ್ದು ಮಾತ್ರ ಆಶ್ಚರ್ಯಕರ ಸಂಗತಿ. ಸಿ.ಟಿ.ರವಿ ಮೇಲೆ ಹಲ್ಲೆ ಮಾಡಲು ಬಂದವರನ್ನು, ಸುವರ್ಣ ಸೌಧದ ಗೇಟುಗಳಿಗೆ ಹಾನಿ ಮಾಡಿದವರನ್ನು ಸರ್ಕಾರ ಅಷ್ಟೇ ಮುತುವರ್ಜಿ ಇಟ್ಟು ಬಂಧಿಸಿ ಕ್ರಮ ಕೈಗೊಳ್ಳಲಿಲ್ಲ ಎಂಬುದು ಆಶ್ಚರ್ಯಕರ ಸಂಗತಿ.

ಮಹಿಳೆ ಅದರಲ್ಲೂ ಆಡಳಿತದ ಚುಕ್ಕಾಣಿ ಹಿಡಿದ ಸಚಿವೆಯೊಬ್ಬಅಸಭ್ಯ ಪದ ಬಳಸಿ ನಿಂದಿಸುವುದು ಕ್ರಿಮಿನಲ್ ಅಪರಾಧ. ಪ್ರಕರಣದಲ್ಲಿ ದೂರು ಬಂದ ಹಿನ್ನೆಲೆಯಲ್ಲಿ ಪೊಲೀಸರು ರವಿಯವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಆದರೆ ಪ್ರಕರಣದ ತಾಂತ್ರಿಕ ಅಂಶಗಳನ್ನು ಗಮನಿಸಿದರೆ ಇಲ್ಲಿ ನಿಯಮಗಳ ಪಾಲನೆಯನ್ನು ಪೊಲೀಸರು ಮಾಡದೇ ಏಕಾಏಕಿ ದೂರು ಬಂದ ತಕ್ಷಣ ಪೂರ್ವಾಪರ ವಿಚಾರಣೆ ನಡೆಸದೇ ಆತುರ ಆತುರವಾಗಿ ಸಿ.ಟಿ.ರವಿಯವರನ್ನು ಬಂಧಿಸಿದ ಕ್ರಿಯೆಯೇ ಈಗ ಕಾನೂನು ರೀತ್ಯ ಪ್ರಶ್ನೆಗೆ ಒಳಗಾಗಿದೆ. ಸಾಮಾನ್ಯವಾಗಿ ಆಡಳಿತದಲ್ಲಿರುವ ಪಕ್ಷಗಳ ಆಣತೆಯಂತೆ ಪೊಲೀಸರು ವರ್ತಿಸುವುದು ಎಲ್ಲ ಸರ್ಕಾರಗಳ ಕಾಲದಲ್ಲೂ ನಡೆದಿದೆ. ಈ ಪ್ರಕರಣದಲ್ಲೂ ಅದೇ ಆಗಿದೆ.

ಕಾನೂನಿನ ದೃಷ್ಟಿಯಿಂದ ನೋಡಿದರೆ ಘಟನೆ ನಡೆದಿದ್ದು ಸದನ ಎಂದು ಸಂಸದೀಯ ಪರಿಭಾಷೆಯಲ್ಲಿ ಕರೆಯಲ್ಪಡುವ ವಿಧಾನ ಪರಿಷತ್ ಕಲಾಪ ನಡೆಯುವ ಸಭಾಂಗಣದಲ್ಲಿ.ವಿಧಾನ ಮಂಡಲದ ಸದನಗಳೂ ಸೇರಿದಂತೆ ಉಭಯ ಸದನಗಳಸಚಿವಾಲಯಗಳ ಕಚೇರಿ ಇರುವ ಪ್ರದೇಶ ಸಭಾಧ್ಯಕ್ಷರು ಮತ್ತು ಸಭಾಪತಿಗಳ ಆಡಳಿತ ವ್ಯಾಪ್ತಿಗೆ ಬರುತ್ತದೆ. ಹೀಗಾಗಿ ವಿಧಾನ ಪರಿಷತ್ತಿನ ಸಭಾಂಗಣದಲ್ಲಿ ನಡೆದಿರುವ ಈ ಘಟನೆ ಬಗ್ಗೆ ಸಭಾಪತಿಗಳಿಗೆ ದೂರು ನೀಡಲಾಗಿದೆಯಾದರೂ ಪ್ರಕರಣ ದಾಖಲಿಸುವ ಬದಲು ಮುಕ್ತಾಯಗೊಳಿಸಿದ್ದಾರೆ.

ಎಲ್ಲದಕ್ಕಿಂತ ಹೆಚ್ಚಾಗಿ ಸದನದ ಕಲಾಪ ನಡೆಯುವ ಪ್ರದೇಶಕ್ಕೆ ಪೊಲೀಸರು ಪ್ರವೇಶಿಸುವಂತಿಲ್ಲ. ಅದರ ಭದ್ತತೆಗೆಂದೇ ಬೇರೆ ಸಿಬ್ಬಂದಿ ನಿಯೋಜನೆಗೊಂಡಿರುತ್ತಾರೆ.ಘಟನೆ ಕುರಿತಂತೆ ಪೊಲೀಸರಿಗೆ ದೂರು ನೀಡುವ ಅಧಿಕಾರ ಇರುವುದು ಸಭಾಪತಿಗಳ ಕಾರ್ಯ ದರ್ಶಿ ಅಥವಾ ವಿಧಾನ ಪರಿಷತ್ತಿನ ಕಾರ್ಯದರ್ಶಿಗೆ ಮಾತ್ರ. ಪೊಲೀಸರಿಗೆ ದೂರು ನೀಡಿರುವ ಸಂತ್ರಸ್ತೆ ಸಚಿವೆಯಾಗಿರವುದರಿಂದ ದೂರು ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ.

ಈ ಪ್ರಕರಣದಲ್ಲಿ ದೂರು ದಾಖಲಿಸುವ ಹಂತದಲ್ಲಿ ಅಗತ್ಯ ನಿಯಮಗಳು ಪಾಲನೆ ಆಗಿಲ್ಲ. ಹೀಗಾಗಿ ಕಾನೂನಿನ ದೃಷ್ಟಿಯಿಂದ ನ್ಯಾಯಾಲಯದಲ್ಲಿ ಈ ಪ್ರಕರಣ ಯಾವ ರೀತಿ ಪರಿಗಣಿತವಾಗುತ್ತದೆ ಎಂಬುದನ್ನು ಕಾದು ನೋಡಬೇಕು.

ಕಾನೂನಿನ ಹೊರತಾಗಿ ಮಾನವೀಯ ಹಾಗೂ ಸಂಸದೀಯ ಪರಂಪರೆಯನ್ನು ಗಮನದಲ್ಲಿಟ್ಟುಕೊಂಡು ನೋಡಿದರೆ ಇಡೀ ಪ್ರಕರಣದಲ್ಲಿ ಪ್ರತಿಪಕ್ಷದ ಶಾಸಕರಾಗಿ ಟೀಕೆ ಮಾಡುವಾಗ ಸಂಯಮ ಕಾಯ್ದುಕೊಳ್ಳಬೇಕಿತ್ತು ಎಂಬುದು ನಿರ್ವಿವಾದ. ತಮ್ಮ ಪಕ್ಷದ ದಿಲ್ಲಿ ಧಣಿಗಳನ್ನು ಮೆಚ್ಚಿಸುವ ಆತುರದಲ್ಲಿ ಸಂಯಮ ಮರೆತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಮಾತನಾಡಿದರೆ ಅದಕ್ಕೆ ಪ್ರತಿಯಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಹಜವಾಗೇ ಅದೇ ಧಾಟಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

ಸದನದ ಸದಸ್ಯರಲ್ಲದವರ ಹೆಸರನ್ನು ಪ್ರಸ್ತಾಪಿಸಿ ಟೀಕೆ ಮಾಡಬಾರದೆಂಬ ನಿಯಮವ ಇದೆ. ಇದು ವಿಧಾನಸಭೆ ಸದಸ್ಯರಾಗಿ ಎರಡು ಸರ್ಕಾರಗಳಲ್ಲಿ ಸಚಿವರಾಗಿ ವಿಧಾನ ಪರಿಷತ್ ಸದಸ್ಯರಾಗಿ ಅನುಭವ ಪಡೆದಿರುವ ಸಿ.ಟಿ.ರವಿಗೆ ಗೊತ್ತಾಗಬೇಕಿತ್ತು. ಈ ವಿಚಾರದಲ್ಲಿ ಅವರದ್ದು ಜಾಣ ಮರೆವಿನ ಪ್ರದರ್ಶನ.

ರಾಜಕೀಯವಾಗಿ ಈ ಪ್ರಕರಣದ ಹಿನ್ನಲೆಯನ್ನು ಗಮನಿಸಿದರೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಸಿ.ಟಿ.ರವಿ ತಮ್ಮ ತಮ್ಮ ಪಕ್ಷಗಳಲ್ಲಿ ಮುಂಚೂಣಿ ನಾಯಕತ್ವಕ್ಕೆ ಪ್ರಯತ್ನಿಸುತ್ತಿರುವ ರಾಜಕಾರಣಿಗಳೇ ಆಗಿರುವುದಷ್ಟೇ ಅಲ್ಲ,. ವಿವಾದಗಳನ್ನೂ ಅಂಟಿಸಿಕೊಂಡಿದ್ದಾರೆ. ಈ ಪೈಕಿ ಸಿ.ಟಿ.ರವಿ ಬಿಜೆಪಿಯಲ್ಲಿ ಪ್ರಮುಖ ನಾಯಕತ್ವಕ್ಕೆ ಪೈಪೋಟಿಯಲ್ಲಿದ್ದಾರೆ. ಅವರನ್ನು ಇಷ್ಟ ಪಡದ ಗುಂಪೂ ಆ ಪಕ್ಷದಲ್ಲಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತ ನಂತರ ಅವರನ್ನು ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. ಸದನದ ಪ್ರತಿಪಕ್ಷದ ನಾಯಕನ ಸ್ಥಾನದ ಮೇಲೆ ಅವರ ಕಣ್ಣಿತ್ತು. ಆದರೆ ಬಿಜೆಪಿಯಲ್ಲಿನ ಆಂತರಿಕ ಗುಂಪುಗಾರಿಕೆ ರಾಜಕಾರಣದಿಂದಾಗಿ ಆ ಸ್ಥಾನ ಅವರ ಬದಲು ನಾರಾಯಣಸ್ವಾಮಿಯವರಿಗೆ ಸಿಕ್ಕಿತು. ಪಕ್ಷದ ರಾಜ್ಯಾಧ್ಯಕ್ಷ ಸ್ಥಾನವೂ ಲೈ ತಪ್ಪಿ ವಿಜಯೇಂದ್ರ ಅವರ ಪಾಲಾಯಿತು.

ಒಮ್ಮೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆಗಿದ್ದ ಅವರಿಗೆ ಈಗ ವಿಧಾನ ಪರಿಷತ್ ಸದಸ್ಯ ಸ್ಥಾನ ಬಿಟ್ಟರೆ ಪ್ರಮುಖವಾಗಿ ಯಾವುದೇ ರಾಜಕೀಯ ಸ್ಥಾನಮಾನಗಳು ಇಲ್ಲ.

ಆಗಾಗ ಪಕ್ಷದ ವರಿಷ್ಠರನ್ನು ಮೆಚ್ಚಿಸಲು ಅವರು ನೀಡುವ ಹೇಳಿಕೆಗಳೂ ಸಾರ್ವಜನಿಕವಾಗಿ ಅಂತಹ ಮನ್ನಣೆ ತಂದು ಕೊಟ್ಟಿಲ್ಲ. ಇದೆಲ್ಲದರ ಒಟ್ಟು ಪರಿಣಾಮವೇ ಗುರುವಾರದ ಘಟನೆ ಎಂಬ ಮಾತುಗಳೂ ಕೇಳಿ ಬರುತ್ತಿದೆ. ಪಕ್ಷದ ನಾಯಕರನ್ನು ಮೆಚ್ಚಿಸುವ ಆತುರದಲ್ಲಿ ಸಲ್ಲದ ಮಾತು ಬಳಸಿ ವಿವಾದಕ್ಕೆ ಕಾರಣರಾಗಿದ್ದಾರೆ. ಪೊಲೀಸರು ಬಂಧಿಸಿದಾಗಲೂ ಸಂಯಮ ಕಾಪಾಡಿಕೊಳ್ಳದೇ ಬೆದರಿಸುವ ಮಟ್ಟಕ್ಕೂ ಹೋಗಿದೆ.

ಘಟನೆಯ ಬೆನ್ನಲ್ಲೇ ಅವರ ಬೆಂಬಲಿಗರು ಪ್ರತಿಭಟನೆ ನಡೆಸಿ ಚಿಕ್ಕಮಗಳೂರು ನಗರ ಬಂದ್ ನಡೆಸಿದ್ದಾರೆ. ಇದರಿಂದ ಸಂಬಂಧವೇ ಇಲ್ಲದ ಪ್ರಕರಣಕ್ಕೆ ಅಮಾಯಕ ಸಾರ್ವಜನಿಕರಿಗೆ ವಾಣಿಜ್ಯವಹಿವಾಟು ಸಂಸ್ಥೆಗಳಿಗೆ ತೊಂದರೆ ಆಗಿದೆ. ಇದೂ ಬಿಜೆಪಿಗೆ ಮತ್ತೊಂದು ರಾಜಕೀಯ ಹಿನ್ನಡೆಯೆ.

ಮುಂದಿನ ದಿನಗಳಲ್ಲಿ ಈ ಪ್ರಕರಣ ಕಾಂಗ್ರೆಸ್ – ಬಿಜೆಪಿ ನಡುವೆ ಹೊಸ ರಾಜಕೀಯ ಸಮರಕ್ಕೂ ಮುನ್ನಡಿ ಆಗಬಹುದು. ಕಾನೂನು ಹೋರಾಟ ಫಲಿತಾಂಶಗಳು ಏನೇ ಇರಲಿ. ಇಡೀ ಪ್ರಕರಣ ಬಿಜೆಪಿ ವಿರುದ್ಧದ ಹೋರಾಟಕ್ಕೆ ಕಾಂಗ್ರೆಸ್ ಗೆ ಒಂದು ಹೊಸ ಅಸ್ತ್ರ ಒದಗಿಸಿದೆ.

100%

-ಯಗಟಿ ಮೋಹನ್
yagatimohan@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com