ಅಧಿಕಾರ ಹಂಚಿಕೆ ಕಗ್ಗಂಟು: ಮುಂದಿನ ಯುದ್ಧಕ್ಕೆ ಶಿವಕುಮಾರ್ ಪೂರ್ವ ತಯಾರಿ! (ಸುದ್ದಿ ವಿಶ್ಲೇಷಣೆ)
ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ದಿಗ್ವಿಜಯವೊ? ಅಥವಾ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಂದಿನ ದಿನಗಳಲ್ಲಿ ನಡೆಸಲು ಉದ್ದೇಶಿಸಿರುವ ಯುದ್ಧಕ್ಕೆ ಮುನ್ನುಡಿಯೊ...?
ಮಾಜಿ ಪ್ರಧಾನಿ ದೇವೇಗೌಡರ ತವರು ಜಿಲ್ಲೆ ಹಾಸನದಲ್ಲಿ ನಡೆದ ಕಾಂಗ್ರೆಸ್ ನ ಬೃಹತ್ ಜನ ಕಲ್ಯಾಣ ಸಮಾವೇಶ, ಅದರ ಬೆನ್ನ ಹಿಂದೆಯೇ ಆರಂಭವಾಗಿರುವ ಮುಖ್ಯಮಂತ್ರಿ ಪದವಿಯ ಒಪ್ಪಂದದ ಪ್ರಕ್ರಿಯೆಯ ಕುರಿತಾದ ಪ್ರಹಸನವನ್ನು ಆಳಕ್ಕಿಳಿದು ಗಮನಿಸಿದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಂಥದೊಂದು ರಾಜಕೀಯ ವಿಪ್ಲವಕ್ಕೆ ಸಜ್ಜಾಗುತ್ತಿರುವುದು ಕಂಡುಬರುತ್ತದೆ.
ಹಾಸನದ ಸಮಾವೇಶದ ಹಿನ್ನಲೆ ಅದಕ್ಕೂ ಮುನ್ನ ಮತ್ತು ನಂತರ ನಡೆದಿರುವ ವಿದ್ಯಮಾನಗಳು ಕಾಂಗ್ರೆಸ್ ನಲ್ಲಿ ಹೊಸ ಬೆಳವಣಿಗೆಗಳು ನಡೆಯುವ ಮುನ್ಸೂಚನೆಯನ್ನು ನೀಡಿವೆ. ಇದೇ ವೇಳೆ ಪಕ್ಷದ ಹೊರತಾಗಿಯೂ ತಮ್ಮ ಜನಪ್ರಿಯತೆಯ ಶಕ್ತಿ ಪ್ರದರ್ಶನಕ್ಕೆ ಸಿದ್ಧತೆ ನಡೆಸಿದ್ದ ಸಿದ್ಧರಾಮಯ್ಯ ಅವರಿಗೆ ಕಾಂಗ್ರೆಸ್ ವರಿಷ್ಠ ಮಂಡಳಿ ಕಡಿವಾಣ ಹಾಕುವ ಮೂಲಕ ಹಾಗೆಯೇ ಇಡೀ ಸಮಾವೇಶವನ್ನು ಕಾಂಗ್ರೆಸ್ ಜನ ಕಲ್ಯಾಣ ಸಮಾವೇಶವಾಗಿ ಮಾರ್ಪಡಿಸುವ ಮೂಲಕ ಹೊಡೆತ ನೀಡಿದೆ.
ಇದನ್ನು ಸಿದ್ದರಾಮಯ್ಯ ಬಳಗಕ್ಕೆ ಆದ ದೊಡ್ಡ ರಾಜಕೀಯ ಆಘಾತ ಎಂದು ಪರಿಗಣಿಸುವ ಅಗತ್ಯವಿಲ್ಲವಾದರೂ ಇಂತಹ ವೈಯಕ್ತಿಕ ಶಕ್ತಿ ಪ್ರದರ್ಶನಗಳೆಲ್ಲ ಕಾಂಗ್ರೆಸ್ ನಲ್ಲಿ ನಡೆಯುವುದಿಲ್ಲ , ನೀವು ಎಷ್ಟೇ ಜನಪ್ರಿಯ ನಾಯಕರಾದರೂ ಪಕ್ಷದ ಚೌಕಟ್ಟನ್ನು ಮೀರುವಂತಿಲ್ಲ ಹಾಗೆಯೇ ಪಕ್ಷದ ವ್ಯವಸ್ಥೆಗಿಂತ ದೊಡ್ಡವರಲ್ಲ ಎಂಬ ಸಂಗತಿಯನ್ನು ಮನವರಿಕೆ ಮಾಡಿಕೊಡುವಲ್ಲಿ ಕಾಂಗ್ರೆಸ್ ವರಿಷ್ಠರು ಯಶಸ್ವಿಯಾಗಿದ್ದಾರೆ. ಹಾಗಾಗಿ ಹಿಂದುಳಿದವರ ಸಮಾವೇಶದ ಮೂಲಕ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದ ಸಿದ್ದರಾಮಯ್ಯ ಅವರನ್ನು ತಡೆದು ಯಾವುದೇ ಸಮಾವೇಶವಾದರೂ ಸರಿ ಅದನ್ನು ಪಕ್ಷದ ವೇದಿಕೆಯಡಿಯೇ ನಡೆಸಿ ಎಂಬ ಸೂಚನೆ ನೀಡುವ ಮೂಲಕ ಕಾಂಗ್ರೆಸ್ ಹೈಕಮಾಂಡ್ ಗಟ್ಟಿತನ ಪ್ರದರ್ಶಿಸಿದೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅವಲೋಕಿಸಿದರೆ ಇದು ಸಿದ್ದರಾಮಯ್ಯ ಮತ್ತು ಅವರ ಗುಂಪಿಗೆ ಆದ ಹಿನ್ನಡೆ ಎಂದು ಹೇಳಬಹುದು.
ಬಹುಮುಖ್ಯವಾಗಿ ಈ ವಿಚಾರದಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಎಲ್ಲೂ ಸಂಘರ್ಷಕ್ಕೆ ಅವಕಾಶ ಕೊಡದೇ ಉಪಾಯವಾಗಿ ಹೈಕಮಾಂಡ್ ಮಟ್ಟದಲ್ಲೇ ಇಂಥದೊಂದು ಸೂಚನೆ ಕೊಡಿಸಿದ್ದಲ್ಲದೇ ಇಡೀ ಸಮಾವೇಶವನ್ನು ಕಾಂಗ್ರೆಸ್ ಕಾರ್ಯಕ್ರಮದ ಜನಕಲ್ಯಾಣ ಕಾರ್ಯಕ್ರಮವಾಗಿ ರೂಪುಗೊಳ್ಳುವಂತೆ ಮಾಡಿದ್ದಲ್ಲದೇ ಹಿಡಿತ ತಪ್ಪದಂತೆ ನೋಡಿಕೊಂಡದ್ದು ವಿಶೇಷವೇ ಎಂದು ಹೇಳಬಹುದು.
ಸಮಾವೇಶ ನಡೆಯುವ ಕೆಲವೇ ದಿನಗಳ ಮುಂಚೆ ರಾಷ್ಟ್ರೀಯ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಎರಡು ವರ್ಷಗಳ ನಂತರ ಮುಖ್ಯಮಂತ್ರಿ ಪದವಿಯ ಅಧಿಕಾರ ಹಸ್ತಾಂತರದ ಒಪ್ಪಂದ ಆಗಿರುವುದು ನಿಜ ಎಂಬ ಸಂಗತಿಯನ್ನು ಮೊದಲ ಬಾರಿಗೆ ಅಧಿಕೃತವಾಗಿ ಬಹಿರಂಗಪಡಿಸುವ ಮೂಲಕ ಪಕ್ಷದಲ್ಲಿ ಅಲ್ಲೊಲ ಕಲ್ಲೋಲದ ವಾತಾವರಣಕ್ಕೆ ಕಾರಣವಾಗಿದ್ದು ಮಾತ್ರ ಕುತೂಹಲದ ಸಂಗತಿ. ಈ ವಿಚಾರದಲ್ಲಿ ಕಳೆದ ಒಂದೂವರೆ ವರ್ಷದಿಂದ ಸಾರ್ವಜನಿಕ ಚರ್ಚೆ ನಡೆಯುತ್ತಿದ್ದರೂ ಯಾವುದೇ ಪ್ರತಿಕ್ರಿಯೆ ನೀಡದೇ ಗೌಪ್ಯತೆ ಕಾಪಾಡಿಕೊಂಡಿದ್ದ ಅವರು ಇದೀಗ ಸರ್ಕಾರದ ಆಡಳಿತ ಎರಡು ವರ್ಷ ಪೂರೈಸಲು ಕೆಲವೇ ತಿಂಗಳಿರುವ ಸಂದರ್ಭದಲ್ಲಿ ಮತ್ತು ಹಾಸನದಲ್ಲಿ ಬೃಹತ್ ಸಮಾವೇಶ ವ್ಯವಸ್ಥೆ ಆಗಿರುವ ಸಂದರ್ಭದಲ್ಲೇ ಈ ಹೇಳಿಕೆ ನೀಡಿದ್ದು ಏಕೆ? ಅದರ ಪರಿಣಾಮಗಳ ಬಗ್ಗೆ ಅವರಿಗೆ ಅಂದಾಜಿರಲಿಲ್ಲವೆ? ಎಂಬ ಪ್ರಶ್ನೆಗೆ ಎಲ್ಲವೂ ಗೊತ್ತಿದ್ದೇ ಅವರು ಈ ವಿಷಯವನ್ನು ಬೇಕಾಗೇ ಪ್ರಸ್ತಾಪಿಸಿದರು ಎಂಬ ಉತ್ತರ ಸಿಗುತ್ತದೆ.
ಸಿದ್ದರಾಮಯ್ಯ ಹಿಂದೆ ವಿಪಕ್ಷ ನಾಯಕ, ಮುಖ್ಯಮಂತ್ರಿ ಅಗಿದ್ದ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಾ. ಜಿ.ಪರಮೇಶ್ವರ್, ದಿನೇಶ್ ಗುಂಡೂರಾವ್ ಅವರುಗಳಿಗೆ ಹೋಲಿಸಿದರೆ ಶಿವಕುಮಾರ್ ತೀರಾ ತದ್ವಿರುದ್ದ ಸ್ವಭಾವದವರು. ಹಿಂದಿನ ಅಧ್ಯಕ್ಷರುಗಳ ಅವಧಿಯಲ್ಲಿ ಸಿದ್ದರಾಮಯ್ಯ ಪ್ರಶ್ನಾತೀತರಾಗಿದ್ದರು. ಅವರು ಹೇಳಿದ್ದೇ ಅಂತಿಮವಾಗುತ್ತಿತ್ತು. ಆದರೆ ಬದಲಾದ ಪರಿಸ್ಥಿತಿಯಲ್ಲಿ ಹಾಗಿಲ್ಲ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿರುವುದರ ಜತೆಗೇ ಸಂಪುಟದಲ್ಲಿ ಉಪಮುಖ್ಯಮಂತ್ರಿಯೂ ಆಗಿ ಕೆಲವೊಂದು ವಿಚಾರಗಳಲ್ಲಿ ಮುಖ್ಯಮಂತ್ರಿಗೆ ಸಮನಾದ ಅಧಿಕಾರ ಹೊಂದಿರುವುದರಿಂದ ಸಹಜವಾಗೇ ಪರ್ಯಾಯ ಅಧಿಕಾರ ಕೇಂದ್ರವಾಗಿ ರೂಪುಗೊಂಡಿದ್ದಾರೆ.
ಇತ್ತೀಚೆಗೆ ನಡೆದ ಮೂರು ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ ನಂತರ ನಾಯಕತ್ವದ ವಿಚಾರದಲ್ಲಿ ಅವರು ಇನ್ನಷ್ಟು ಗಟ್ಟಿಯಾಗಿದ್ದಾರೆ. ಅದರಲ್ಲೂ ಚೆನ್ನಪಟ್ಟಣದಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಯನ್ನು ಸೋಲಿಸಿ ಕಾಂಗ್ರೆಸ್ ನ ಸಿ.ಪಿ ಯೋಗೀಶ್ವರ್ ರನ್ನು ಗೆಲ್ಲಿಸಿಕೊಳ್ಳುವಲ್ಲಿ ಶಿವಕುಮಾರ್ ನಡೆಸಿದ ತಂತ್ರಗಾರಿಕೆ ಫಲಕೊಟ್ಟಿದೆ. ಈ ಮೂಲಕ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ಹಿಡಿತದಿಂದ ಈ ಕ್ಷೇತ್ರವನ್ನು ಕಿತ್ತುಕೊಳ್ಳುವ ಮೂಲಕ ಪ್ರಮುಖ ನಾಯಕರಾಗಿ ಹೊರಹೊಮ್ಮಿದ್ದಾರೆ ಎಂಬದು ನಿರ್ವಿವಾದ.
ಮೂರೂ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಗಳಿಸಲು ಸಿದ್ದರಾಮಯ್ಯ ಪ್ರಭಾವವಷ್ಟೇ ಮಾತ್ರ ಕಾರಣವಲ್ಲ, ಕೆಪಿಸಿಸಿ ಅಧ್ಯಕ್ಷರಾಗಿ ರೂಪಿಸಿದ ರಣತಂತ್ರವೂ ಕಾರಣ ಎಂಬುದು ಶಿವಕುಮಾರ್ ಬೆಂಬಲಿಗರ ಪ್ರತಿಪಾದನೆ. ಹೀಗಾಗಿ ಆಗಾಗ್ಗೆ ಸದ್ದು ಮಾಡುತ್ತಿದ್ದ ಅಧಿಕಾರ ಹಸ್ತಾಂತರದ ವಿಚಾರ ಬಯಲಿಗೆ ಬರಲು ಇದೂ ಮುಖ್ಯಕಾರಣ. ಆದರೆ ಇಂಥ ಯಾವುದೇ ಒಪ್ಪದ ಆಗಿಲ್ಲ ಎಂದು ಸಿದ್ದರಾಮಯ್ಯ ನಿರಾಕರಿಸಿದ್ದಾರೆ. ಅದು ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತ ಯಾವುದೇ ವ್ಯಕ್ತಿ ನೀಡುವ ಸಹಜ ಪ್ರತಿಕ್ರಿಯೆ. ಯಾಕೆಂದರೆ ಅಂತಹ ಯಾವುದೇ ಒಪ್ಪಂದ ಆಗಿದೆ ಎಂಬುದನ್ನು ಬಹಿರಂಗವಾಗಿ ಒಪ್ಪಿಕೊಂಡ ಮರು ಕ್ಷಣವೇ ಪಕ್ಷದಲ್ಲಿ ಆಂತರಿಕವಾಗಿ ಹಲವು ಬೆಳವಣಿಗೆಗಳು ಹುಟ್ಟಿಕೊಳ್ಳುತ್ತವೆ. ಆಡಳಿತ ಯಂತ್ರದ ಮೇಲೂ ಅದು ಪರಿಣಾಮ ಬೀರುತ್ತವೆ. ಅಂತಹ ಸನ್ನಿವೇಶದಲ್ಲಿ ಅಧಿಕಾರದ ಕೇಂದ್ರವಾಗಿದ್ದರೂ ಮುಖ್ಯಮಂತ್ರಿ ನಗಣ್ಯನಾಗಿ ಉಳಿದುಬಿಡುವ ಆಡಳಿತಾತ್ಮಕ ಅಪಾಯಗಳು ಜಾಸ್ತಿ. ಹೀಗಾಗಿ ಐದು ವರ್ಷವೂ ನಾನೇ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿರುತ್ತೇನೆ ಎಂದು ಸಿದ್ದರಾಮಯ್ಯ ನೀಡಿರುವ ಪ್ರತಿಕ್ರಿಯೆ ಸಹಜವಾದದ್ದೇ.
ಹಾಸನದಲ್ಲಿ ಈ ಮೊದಲು ಸಮಾವೇಶ ನಡೆಸುವ ಕುರಿತು ಸಿದ್ದರಾಮಯ್ಯ ಬೆಂಬಲಿಗರು ನಡೆಸುತ್ತಿದ್ದ ತಯಾರಿಯನ್ನು ಮೌನವಾಗೇ ಗಮನಿಸುತ್ತಿದ್ದ ಶಿವಕುಮಾರ್ ಕಡೇ ಘಳಿಗೆಯಲ್ಲಿ ಅದನ್ನು ಪಕ್ಷದ ಸಮಾವೇಶವವಾಗಿ ಪರಿವರ್ತಿಸಿದ್ದಲ್ಲದೇ ಇಡೀ ಸಮಾವೇಶಧ ನೇತೃತ್ವವನ್ನೂ ತಾನೇ ವಹಿಸುವ ಮೂಲಕ ಹಾಗೆಯೇ ಸಮಾವೇಶದಲ್ಲಿ ಸಿದ್ದರಾಮಯ್ಯ ನಾಯಕತ್ವವನ್ನು ಹಾಡಿಹೊಗಳಿದ್ದಲ್ಲದೇ ಅವರ ಬೆಂಬಲಕ್ಕೆ ಬಂಡೆಯಂತೆ ತಾನು ನಿಲ್ಲುತ್ತೇನೆ ಎಂದು ನೀಡಿರುವ ಹೇಳಿಕೆಯ ಹಿಂದೆಯೂ ದೂರ ದೃಷ್ಟಿ ಇದೆ.
ಮುಖ್ಯಮಂತ್ರಿ ಹುದ್ದೆಯ ಮಹತ್ವಾಕಾಂಕ್ಷಿಯಾಗಿರುವ ಅವರು ಪಕ್ಷದೊಗಳಗೆ ತನ್ನ ವೈಯಕ್ತಿಕ ಸಂಖ್ಯಾಬಲವನ್ನು ಹೆಚ್ಚಿಸಿಕೊಳ್ಳುವುದರ ಜತೆಗೇ ಸಿದ್ದರಾಮಯ್ಯ ಬೆಂಬಲಕ್ಕೂನಿಂತಿರುವುದರ ಹಿಂದೆ ರಾಜಕೀಯ ಕಾರ್ಯತಂತ್ರವೂ ಇದೆ. ಅಧಿಕಾರ ಹಸ್ತಾಂತರ ಪ್ರಕಿಯೆ ಸುಗಮವಾಗಿ ವಿಶ್ವಾಸಾತ್ವಕ ರೀತಿಯಲ್ಲಿ ನಡೆಯಬೇಕು. ಈ ವಿಚಾರದಲ್ಲಿ ಸಂಘರ್ಷದ ಹಾದಿಗಿಂತ ನಿಧಾನವಾದರೂ ಸಂಧಾನದ ಮಾರ್ಗವೇ ಸೂಕ್ತ.
ಸಿದ್ದರಾಮಯ್ಯ ಜತೆಗೆ ಅಹಿಂದ ವರ್ಗ ಬಲವಾಗಿ ನಿಂತಿದೆ. ಆ ವಿಚಾರದಲ್ಲಿ ಅವರನ್ನು ಸರಿಗಟ್ಟುವ ಇನ್ನೊಬ್ಬ ನಾಯಕ ಇನ್ನುಳಿದ ಎರಡೂ ಪಕ್ಷಗಳಲ್ಲಿ ಇಲ್ಲ. ಚೆನ್ನಪಟ್ಟಣ ಸೋಲಿನ ನಂತರ ಜೆಡಿಎಸ್ ನ ಬುಡವೇ ಅಲುಗಾಡುತ್ತಿದೆ. ಆ ಪಕ್ಷದ ನಾಯಕ ಕುಮಾರಸ್ವಾಮಿ ಕೈಗೊಳ್ಳುತ್ತಿರುವ ರಾಜಕೀಯ ನಿರ್ಣಯಗಳು ಪಕ್ಷದ ಅಧಿಕ ಸಂಖ್ಯೆಯ ಶಾಸಕರು, ಮುಖಂಡರನ್ನು ಗೊಂದಲಕ್ಕೆ ಸಿಕ್ಕಿಸಿದೆ. ಭವಿಷ್ಯದಲ್ಲಿ ಇದೇ ಪಕ್ಷದಲ್ಲಿ ಮಂದುವರಿದರೆ ಮುಂದೆ ಶಾಸಕರಾಗಿ ಮತ್ತೆ ಆರಿಸಿ ಬರುವುದೂ ಕಷ್ಟವಾಗಬಹುದು ಎಂಬ ಅಳುಕೂ ಶಾಸಕರನ್ನು ಕಾಡುತ್ತಿದೆ. ಹೀಗಾಗಿ ಬಿಜೆಪಿಗಿಂತ ಕಾಂಗ್ರೆಸ್ ಜತೆ ಹೋಗುವುದು ಸುಲಭದ ಹಾದಿ ಎಂಬ ಲೆಕ್ಕಾಚಾರದಲ್ಲಿ ಈ ಶಾಸಕರಿದ್ದು ಅವರೆಲ್ಲ ಶಿವಕುಮಾರ್ ಸಂಪರ್ಕದಲ್ಲಿದ್ದಾರೆ. ಇನ್ನು ಬಿಜೆಪಿಯಲ್ಲೂ ಗೊಂದಲಗಳಿವೆ. ಅಧ್ಯಕ್ಷ ವಿಜಯೇಂದ್ರ ಮತ್ತು ಶಾಸಕ, ಹಿರಿಯ ಮುಖಮಡ ಬಸವನಗೌಡ ಪಾಟೀಲ್ ಯತ್ನಾಳ್ ನಡುವಿನ ಕದನದ ವಿಚಾರದಲ್ಲಿ ಪಕ್ಷದ ಹೈಕಮಾಂಡ್ ಅನುಸರಿಸುತ್ತಿರುವ ವಿಳಂಬ ನೀತಿಯಿಂದ ಬಹತೇಕ ಶಾಸಕರು ಬೇಸತ್ತಿದ್ದಾರೆ. ಯಡಿಯೂರಪ್ಪನವರು ಅಧಿಕಾರ ರಾಜಕಾರಣದಿಂದ ದೂರ ಸರಿದ ನಂತರ ವಿಜಯೇಂದ್ರ ಪಕ್ಷದ ಅಧ್ಯಕ್ಷರಾದರೂ ಪರಿಣಾಮಕಾರಿಯಾಗಿ ಸಂಘಟನೆ ಬೆಳೆಸುವಲ್ಲಿ ಸೋಲುತ್ತಿರುವುದು ಶಾಸಕರನ್ನು ಆತಂಕಕ್ಕೆ ದೂಡಿದೆ. ಹೀಗಾಗಿ ರಾಜಕಾರಣದ ಭವಿಷ್ಯ ಅವರನ್ನೂ ಕಾಡುತ್ತಿದೆ. ಈ ಪಕ್ಷದ ಶಾಸಕರಲ್ಲೂ ಕೆಲವರು ಶಿವಕುಮಾರ್ ಸಂಪರ್ಕದಲ್ಲಿದ್ದಾರೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮುಂದಿನ ಮೇ ಗೆ ಎರಡು ವರ್ಷ ತುಂಬಲಿದ್ದು ಇದುವರೆಗೆ ಶಾಸಕರ ಕ್ಷೇತ್ರಗಳ ಅಭಿವೃದ್ಧಿಗೆ ಹಣ ಬಿಡುಗಡೆ ಆಗದೇ ಗೊಂದಲ ಉಂಟಾಗಿದೆ. ಚುನಾವಣೆಯಲ್ಲಿ ಗೆದ್ದರೂ ಯಾವುದೇ ಕೆಲಸ ಮಾಡದ ಸ್ಥಿತಿ ಶಾಸಕರದ್ದು ಇದು ಅಲ್ಲಲ್ಲಿ ಸಿದ್ದರಾಮಯ್ಯ ವಿರುದ್ಧದ ಅಸಮಾಧಾನವಾಗಿ ಕುದಿಯುತ್ತಿದೆ. ಗ್ಯಾರಂಟಿ ಯೋಜನೆಗಳ ಜಾರಿಯೂ ಸಮರ್ಪಕವಾಗಿಲ್ಲ. ಈಗಾಗಲೇ ಕೆಲವು ಕಾಂಗ್ರೆಸ್ ಶಾಸಕರು ಬಹಿರಂಗವಾಗೇ ಮುಖ್ಯಮಂತ್ರಿ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ಮುಂದಿನ ದಿನಗಳಲ್ಲಿ ಈ ಶಾಸಕರ ಸಂಖ್ಯೆ ಹೆಚ್ಚಾಗಲೂ ಬಹುದು. ಈ ಬೆಳವಣಿಗೆಗಳ ಮೇಲೆಯೂ ಶಿವಕುಮಾರ್ ಕಣ್ಣಿಟ್ಟಿದ್ದಾರೆ. ಶಾಸಕರ ಅಸಮಾಧಾನ ಗಟ್ಟಿಯಾಗುವುದು ಅವರಿಗೂ ಬೇಕಾಗಿದೆ. ಈ ಹಿನ್ನಲೆಯಲ್ಲೇ ಅವರು ಈ ಮೊದಲು ಸಿದ್ದರಾಮಯ್ಯ ವಿರುದ್ಧ ಸಂಘರ್ಷಕ್ಕೆ ಯೋಚಿಸಿದ್ದರಾದರೂ ತಂತ್ರ ಬದಲಿಸಿ ನಿಷ್ಠೆ ಪ್ರದರ್ಶಿಸುವ ಮೂಲಕ ಬೇರೆಯದೇ ಸಂದೇಶ ರವಾನಿಸಿದ್ದಾರೆ ದೇವೇಗೌಡರ ತವರಿನಲ್ಲಿ ನಡೆದ ಕಾಂಗ್ರೆಸ್ ಸಮಾವೇಶದ ಸಂಪೂರ್ಣ ಜವಾಬ್ದಾರಿಯನ್ನು ತಾನೇ ಹೊರುವ ಮೂಲಕ ಏಕ ವ್ಯಕ್ತಿ ಶಕ್ತಿ ಪ್ರದರ್ಶನಕ್ಕೆ ಲಾಗಮು ಹಾಕಿದ್ದಲ್ಲದೇ ಗೌಡರ ಕುಟುಂಬದ ಹೊರತಾಗಿ ತಾನೊಬ್ಬ ಪರ್ಯಾಯ ಒಕ್ಕಲಿಗ ನಾಯಕ ಎಂಬ ಸಂದೇಶವನ್ನು ಆ ಸಮುದಾಯಕ್ಕೆ ಯಶಸ್ವಿಯಾಗಿ ಮುಟ್ಟಿಸಿದ್ದಾರೆ. ಇದೇ ಸಮಾವೇಶದಲ್ಲಿ ಸಿದ್ದರಾಮಯ್ಯ ಅವರ ಗುಣಗಾನ ಮಾಡಿದ್ದರ ಉದ್ದೇಶವೂ ಅದೇ ಆಗಿತ್ತು.
ಎದುರಾಳಿಯ ಬಲವನ್ನು ಸಮರ್ಪಕವಾಗಿ ತಿಳಿಯದೆ ಯುದ್ಧಕ್ಕೆ ಹೋದರೆ ಅದರಿಂದ ಸೋಲು ಖಚಿತ ಎಂಬ ಯುದ್ಧ ತಂತ್ರವನ್ನು ಅರಿತಿರುವ ಶಿವಕುಮಾರ್ ಅಧಿಕಾರ ಒಪ್ಪಂದದ ಹೇಳಿಕೆಯನ್ನುಮೊದಲು ನೀಡಿ ಅದರ ಪರಿಣಾಮವನ್ನು ಅವಲೋಕಿಸಿ ಸಿದ್ದರಾಮಯ್ಯ ನಾಯಕತ್ವಕ್ಕೆ ತಾನು ಅಜೀವ ಪರ್ಯಂತ ನಿಷ್ಠೆ ಹೊಂದಿರುವುದಾಗಿ ಘೋಷಿಸುವ ಮೂಲಕ ಸಮಾನಾಂತರ ಕಾಯ್ದುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಅಲ್ಲಿಗೆ ತನ್ನ ಮೊದಲ ಹೇಳಿಕೆಯಿಂದ ಸಿದ್ದರಾಮಯ್ಯ ಬೆಂಬಲಿಗರಾದ ಒಂದಿಬ್ಬರು ಸಚಿವರ ಬಾಯಿಗೆ ಅಹಾರವಾಗಿ ಪಕ್ಷದೊಳಗೆ ಗೊಂದಲ ಹುಟ್ಟುಹಾಕುವುದಕ್ಕಿಂತ ಬಹಿರಂಗ ನಿಷ್ಠೆ ಘೋಷಿಸಿ ವಿರೋಧಿಗಳನ್ನು ಕಟ್ಟಿಹಾಕುವ ತಂತ್ರದಲ್ಲಿ ಅವರು ಯಶಸ್ವಿಯೂ ಆಗಿದ್ದಾರೆ. ಶಿವಕುಮಾರ್ ಹೇಳಿಕೆಯಿಂದ ಅಧಿಕಾರ ಹಂಚಿಕೆಯ ಈ ಸಮರ ಕೊನೆಗೊಂಡಿತೆಂದೇನೂ ಅಲ್ಲ. ಅದು ಈಗಷ್ಟೆ ಶುರುವಾಗಿದೆ. ಈ ಹೇಳಿಕೆಗಳ ಬೆನ್ನಲ್ಲೇ ಗೃಹ ಸಚಿವ ಡಾ. ಜಿ.ಪರಮೇಶ್ವರ್, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ನೀಡಿರುವ ಹೇಳಿಕೆಗಳ ಹಿಂದೆ ಸಿದ್ದರಾಮಯ್ಯ ಬೆಂಬಲ ಇದೆ ಎಂದು ಹೇಳಲಾಗುತ್ತಿದೆ.
ವಿಧಾನಮಂಡಲದ ಬಜೆಟ್ ಅಧಿವೇಶನದ ನಂತರ ರಾಜ್ಯದಲ್ಲಿ ನಡೆಯುವ ರಾಜಕೀಯ ಬೆಳವಣಿಗೆಗಳು ಕಾಂಗ್ರೆಸ್ ಜತೆಗೇ ಬಿಜೆಪಿ , ಜೆಡಿಎಸ್ ಪಕ್ಷಗಳ ಭವಿಷ್ಯವನ್ನೂ ನಿರ್ಧರಿಸಲಿವೆ.