ಈ ಬಂಡಾಯ ಹೈಕಮಾಂಡ್ ಪ್ರಾಯೋಜಿತವೆ? ಅಥವಾ ಇಬ್ಭಾಗಕ್ಕೆ ಮುನ್ನುಡಿಯೆ?
ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದರೆ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಹಿರಿಯ ಮುಖಂಡ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಆರಂಭಿಸಿರುವ ಬಂಡಾಯ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಇದರ ಹಿನ್ನಲೆಯಲ್ಲೇ ಎದ್ದಿರುವ ಮತ್ತೊಂದು ಪ್ರಶ್ನೆ ಎಂದರೆ ಇದು ರಾಜ್ಯದಲ್ಲಿ ಪಕ್ಷ ಇಬ್ಭಾಗಕ್ಕೆ ಮುನ್ನುಡಿಯಾಗಲಿದೆಯೆ? ಎಂಬುದು.
ಬಿಜೆಪಿಯಲ್ಲಿ ಕಳೆದ ಒಂದು ವರ್ಷಕ್ಕೂ ಹಿಂದಿನಿಂದ ಹಿರಿಯ ನಾಯಕ ಯಡಿಯೂರಪ್ಪ ಅವರ ವಿರುದ್ಧ ಬಸವನಗೌಡ ಪಾಟೀಲ್ ಯತ್ನಾಳ್ ನಡೆಸುತ್ತಿದ್ದ ಬಂಡಾಯ ಈಗ ನಿರ್ಣಾಯಕ ಹಂತಕ್ಕೆ ಬಂದು ಮುಟ್ಟಿದೆ. ಎರಡನೇ ಬಾರಿಗೆ ಯಡಿಯೂರಪ್ಪ ಮುಖ್ಯಮಂತ್ರಿಯಾದಾಗ ಸಚಿವ ಸ್ಥಾನ ಕೈ ತಪ್ಪಿದ ಹಿನ್ನಲೆಯಲ್ಲಿ ಆರಂಭಗೊಂಡಿದ್ದ ಈ ಬಂಡಾಯ ಈಗ ಹಾದಿ ರಂಪ ಬೀದಿ ರಂಪವಾಗಿ ಪರಿಣಮಿಸಿದ್ದು ಪಕ್ಷದ ವರಿಷ್ಠ ಮಂಡಳಿ ಈ ಎಲ್ಲ ವಿದ್ಯಮಾನಗಳ ಅರಿವಿದ್ದರೂ ಬಂಡಾಯದ ಬೆಂಕಿಯನ್ನು ಆರಿಸುವ ಕುರಿತು ಯಾವುದೇ ತೀರ್ಮಾನ ಕೈಗೊಳ್ಳದ ಪರಿಣಾಮ ಇದು ಹೈಕಮಾಂಡ್ ಪ್ರಾಯೋಜಿತ ಬಂಡಾಯ ಇದ್ದರೂ ಇರಬಹುದು ಎಂದು ಮೂಡಿದ್ದ ಸಂಶಯ ಈಗ ನಿಜವಾಗುವ ಸನ್ನಿವೇಶ ಎದುರಾಗಿದೆ.
ಅದರಲ್ಲೂ ವಿಜಯೇಂದ್ರ ರಾಜ್ಯ ಬಿಜೆಪಿ ಅಧ್ಯಕ್ಷರಾದ ನಂತರ ಅವರ ವಿರುದ್ಧ ನೇರ ಸಮರಕ್ಕಿಳಿದ ಯತ್ನಾಳ್ ಜತೆ ಪಕ್ಷದ ಇತರ ಅತೃಪ್ತ ಮುಖಂಡರೂ ಸೇರಿಕೊಂಡಿದ್ದಾರೆ. ಹೀಗೆ ಜೊತೆಯಾಗಿರುವವರ ಪೈಕಿ ಅನೇಕರದ್ದು ವೈಯಕ್ತಿಕ ಅಜೆಂಡಾಗಳೇ. ಈ ಹಿನ್ನೆಲೆಯಲ್ಲಿ ಅವರೇ ಹೇಳುತ್ತಿರುವ ಪಕ್ಷದ ಶುದ್ಧೀಕರಣ ಅಥವಾ ಭ್ರಷ್ಟಾಚಾರದ ಕಳಂಕದಿಂದ ಮುಕ್ತಗೊಳಿಸುವ ಉದ್ದೇಶದ ಕುರಿತಾಗೇ ಅನೇಕ ಪ್ರಶ್ನೆಗಳು ತಲೆ ಎತ್ತಿವೆ.
ಮತ್ತೊಂದು ಕಡೆ ರಾಜ್ಯಾಧ್ಯಕ್ಷರ ವಿರುದ್ಧ ಬಂಡಾಯದ ಕಹಳೆ ಮೊಳಗಿಸಿರುವ ಭಿನ್ನಮತೀಯರ ವಿರುದ್ಧ ಇದೀಗ ಒಟ್ಟಾಗಿರುವ ಯಡಿಯೂರಪ್ಪ ವಿಜಯೇಂದ್ರ ನಿಷ್ಠರು, ದಾವಣಗೆರೆಯಲ್ಲಿ ಬೃಹತ್ ಸಮಾವೇಶವೊಂದನ್ನು ನಡೆಸಿ ಬಲಾ ಬಲ ಪ್ರದರ್ಶನಕ್ಕೆ ಸಿದ್ಧತೆ ನಡೆಸಿರುವುದು ಕುತೂಹಲಕಾರಿ ಸಂಗತಿ. ಬಿಜೆಪಿಯಲ್ಲಿರುವ ಒಂದಷ್ಟು ಶಾಸಕರು, ಮಾಜಿ ಸಚಿವರು,ಆಯಕಟ್ಟಿನ ಅಧಿಕಾರದ ಸ್ಥಾನಗಳಲ್ಲಿರುವ ಕೆಲವು ಮುಖಂಡರು ಭಿನ್ನಮತೀಯರ ಬಣದ ಜತೆಗಿದ್ದಾರಾದರೂ ಬಹಿರಂಗವಾಗಿ ಗುರುತಿಸಿಕೊಳ್ಳುವ ಧೈರ್ಯ ಪ್ರದರ್ಶಿಸುತ್ತಿಲ್ಲ. ಈ ಬಣ ಗುದ್ದಾಟಗಳ ನಡುವೆ ಉಳಿದ ಶಾಸಕರು, ಮುಖಂಡರು ಯಾವುದೇ ಗುಂಪಿನ ಜತೆ ತಮ್ಮನ್ನು ಗುರುತಿಸಿಕೊಳ್ಳದೇ ತಮ್ಮ ಪಾಡಿಗೆ ಮೌನವಾಗಿ ತಾವಿದ್ದು ತಟಸ್ಥ ನಿಲುವು ಅನುಸರಿಸುತ್ತಿದ್ದಾರೆ.
ಈ ಎಲ್ಲ ಬೆಳವಣಿಗೆಗಳು ಏನೇ ಇರಲಿ. ದಕ್ಷಿಣ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಅಧಿಕಾರಕ್ಕೆ ಬಂದ ಬಿಜೆಪಿಯ ಘಟಕ ಎಂಬ ಹೆಗ್ಗಳಿಕೆಗೆ ಪಾತ್ರವಾದ ರಾಜ್ಯ ಬಿಜೆಪಿಯಲ್ಲಿ ಇಷ್ಟೆಲ್ಲ ರಂಪಾಟ ನಡೆಯುತ್ತಿದ್ದರೂ ಹೈಕಮಾಂಡ್ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ. ಹಾಗೆ ಮುಂದಾದರೂ ಒಳಜಗಳಕ್ಕೆ ಶಾಶ್ವತ ಮದ್ದರೆಯುವ ಕೆಲಸವನ್ನೂ ಮಾಡುತ್ತಿಲ್ಲ. ಒಂದು ರೀತಿಯಲ್ಲಿ ಮಗುವನ್ನೂ ಚಿವುಟಿ, ತೊಟ್ಟಿಲನ್ನೂ ತೂಗುವ ಕೆಲಸ ಪಕ್ಷದ ವರಿಷ್ಠರಿಂದ ನಡೆದಿದೆ. ಇಷ್ಟೆಲ್ಲ ಬೆಳವಣಿಗೆಗಳ ಮಾಹಿತಿಯೇ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಪಕ್ಷಕ್ಕೆ ಇಲ್ಲವೆ? ಎಂಬ ಸಂಶಯಗಳೂ ತಲೆ ಎತ್ತಿವೆ.
ಪಕ್ಷದಲ್ಲಿ ತನ್ನ ವಿರುದ್ಧ ಬಂಡಾಯ ಎದ್ದಿರುವ ಗುಂಪಿನ ಚಟುವಟಿಕೆಗಳ ಬಗ್ಗೆ ಕಳೆದ ಒಂದು ವರ್ಷದ ಅವಧಿಯಲ್ಲಿ ವಿಜಯೇಂದ್ರ ಹಲವಾರು ಬಾರಿ ದಿಲ್ಲಿ ಯಾತ್ರೆ ಕೈಗೊಂಡು ವರಿಷ್ಠರನ್ನು ಭೇಟಿಯಾಗಿ ಕ್ರಮಕ್ಕೆ ಒತ್ತಾಯಿಸುತ್ತಲೇ ಬಂದಿದ್ದಾರೆ. ಆದರೆ ಅದರಿಂದ ಯಾವುದೇ ಫಲ ಸಿಕ್ಕಿಲ್ಲ. ವರಿಷ್ಠ ಮಂಡಳಿಯಲ್ಲಿರುವ ಕೆಲವರ ಬೆಂಬಲ ಭಿನ್ನಮತೀಯ ಮುಖಂಡರಿಗೆ ಇದ್ದು ಅವರು ಯಾವುದೇ ಕ್ರಮ ಕೈಗೊಳ್ಳಲು ರಾಷ್ಟ್ರೀಯ ಅಧ್ಯಕ್ಷರಿಗೆ ಬಿಡುತ್ತಿಲ್ಲ ಎಂಬ ಅನುಮಾನಗಳಿಗೆ ಈಗ ಪುಷ್ಠಿ ದೊರೆತಿದೆ.
ಹೈಕಮಾಂಡ್ ನ ಈ ಕಣ್ಣಾ ಮುಚ್ಚಾಲೆ ಆಟದ ವಿರುದ್ಧ ಸಿಡಿದೆದ್ದಿರುವ ವಿಜಯೇಂದ್ರ ನಿಷ್ಠರು ಭಿನ್ನಮತೀಯ ಮುಖಂಡರ ವಿರುದ್ಧ ಮಧ್ಯ ಕರ್ನಾಟಕದ ಕೇಂದ್ರ ವಾದ ದಾವಣಗೆರೆಯಲ್ಲಿ ಇದೀಗ ಬೃಹತ್ ಸಮಾವೇಶ ನಡೆಸಲು ನಿರ್ಧರಿಸುವ ಮೂಲಕ ಬಲ ಪ್ರದರ್ಶನಕ್ಕೆ ಸಿದ್ಧರಾಗುತ್ತಿದ್ದಾರೆ.
ಈಗಾಗಲೇ ಯಡಿಯೂರಪ್ಪ ನಿಷ್ಠ ಮುಖಂಡ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮನೆಯಲ್ಲಿ ಸಿದ್ಧತೆಗಳ ಕುರಿತು ಚರ್ಚೆಗಳು ನಡೆದಿದ್ದು ಡಿಸೆಂಬರ್ ತಿಂಗಳಲ್ಲಿ ಬೃಹತ್ ಸಮಾವೇಶ ನಡೆಸುವ ಮೂಲಕ ಬಲ ಪ್ರದರ್ಶನ ನಡೆಸಲೂ ತೀರ್ಮಾನಿಸಲಾಗಿದೆ. ಮೇಲ್ನೋಟಕ್ಕೆ ಇದು ಭಿನ್ನಮತೀಯರ ವಿರುದ್ಧದ ಸಮರ ಎಂದು ಹೇಳಲಾಗುತ್ತಿದೆಯಾದರೂ ಇಂಥದೊಂದು ಸಮಾವೇಶ ನಡೆಸುವ ಮೂಲಕ ಹೈಕಮಾಂಡ್ ಗೆ ತಮ್ಮ ಶಕ್ತಿ ಪ್ರದರ್ಶಿಸುವುದು ಯಡಿಯೂರಪ್ಪ ಅವರ ಗುರಿ. ಆದರೆ ಈ ಬೆಳವಣಿಗೆಯ ಹಿನ್ನಲೆಯಲ್ಲಿ ಇಕ್ಕಟ್ಟಿಗೆ ಸಿಕ್ಕಿರುವುದು ಮಾತ್ರ ಪ್ರತ್ಯಕ್ಷವಾಗಿ ಎರಡೂ ಬಣಗಳಿಗೆ ಸೇರದೇ ಬಹಿರಂಗವಾಗಿ ಅಂತರ ಕಾಯ್ದುಕೊಂಡಿರುವ ಶಾಸಕರು ಮತ್ತು ಮುಖಂಡರು ಹಾಗೂ ಪಕ್ಷದ ನಾಯಕತ್ವ ಮತ್ತು ಸಿದ್ಧಾಂತಕ್ಕೆ ಮಾತ್ರ ಬದ್ಧರಾಗಿರುವ ಶಾಸಕರು ಮುಖಂಡರು ಮಾತ್ರ.
ಯಡಿಯೂರಪ್ಪ, ವಿಜಯೇಂದ್ರ ಪರ ನಡೆಯುವ ಸಮಾವೇಶಕ್ಕೆ ಹೋದರೂ ಕಷ್ಟ, ಹೋಗದಿದ್ದರೆ ಇನ್ನೂ ಕಷ್ಟ ಎಂಬ ತೊಳಲಾಟದಲ್ಲಿ ಇವರಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ಪಕ್ಷದ ಒಳ ಜಗಳದ ವಿಚಾರದಲ್ಲಿ ವರಿಷ್ಠರು ತತ್ ಕ್ಷಚಣವೇ ಯಾವುದೇ ತೀರ್ಮಾನ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಸಂಘಟನೆ ದಿಕ್ಕಾಪಾಲಾಗುವುದು ಖಚಿತ ಎಂಬ ಆತಂಕ ಇವರೆಲ್ಲರನ್ನು ಕಾಡುತ್ತಿದೆ.
ವಕ್ಫ್ ಹಗರಣದ ವಿರುದ್ಧ ರಾಜ್ಯ ಬಿಜೆಪಿ ಡಿಸೆಂಬರ್ ನಲ್ಲಿ ರಾಜ್ಯದಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದೆ. ಅದಕ್ಕೂ ಮುನ್ನ ಸದ್ಯದಲ್ಲೇ ಬೆಳಗಾವಿಯಲ್ಲಿ ಆರಂಭವಾಗಲಿರುವ ವಿಧಾನ ಮಂಡಲದ ಅಧಿವೇಶನದಲ್ಲಿ ಇದೇ ವಿಷಯವನ್ನು ಪ್ರಮುಖವಾಗಿ ಇಟ್ಟುಕೊಂಡು ಉಭಯ ಸದನಗಳಲ್ಲಿ ಪ್ರತಿಭಟನೆ ನಡೆಸುವ ಮೂಲಕ ಸರ್ಕಾರರದ ವಿರುದ್ಧ ಸಮರ ಸಾರುವ ತಯಾರಿಯೂ ನಡೆದಿದೆ. ಒಂದು ಮಾಹಿತಿ ಪ್ರಕಾರ ಬಿಜೆಪಿಯ ಪ್ರತಿಭಟನೆ ಗಂಭೀರ ಸ್ವರೂಪಕ್ಕೆ ಮುಟ್ಟಿ ಸದನದ ಕಲಾಪವೇ ನಡೆಯುವುದು ಅಸಾಧ್ಯ ಎಂಬ ಪರಿಸ್ಥಿತಿ ನಿರ್ಮಾಣವಾದರೆ ಪ್ರತಿಪಕ್ಷದ ಸದಸ್ಯರ ವಿರುದ್ಧ ಸದನದ ನಿಯಮಾಳಿಗಳನ್ನು ಬಳಸಿ ಕ್ರಮ ಕೈಗೊಳ್ಳಲೂ ವಿಧಾನಸಭಾಧ್ಯಕ್ಷರನ್ನು ಒತ್ತಾಯಿಸುವ ಬಗ್ಗೆ ಆಡಳಿತ ಪಕ್ಷದಲ್ಲಿ ಚರ್ಚೆಗಳು ನಡೆದಿವೆ. ಅಂತಹ ಸನ್ನಿವೇಶ ಎದುರಾದರೆ ವಿಷಯವನ್ನು ಜೀವಂತವಾಗಿಟ್ಟು ಹೋರಾಟ ಮುಂದುವರಿಸುವ ಮೂಲಕ ಹಿಂದೂಗಳ ವಿಚಾರದಲ್ಲಿ ತನ್ನ ನಿಲುವು ಗಟ್ಟಿಯಾಗಿದೆ ಎಂಬ ಮೆಚ್ಚುಗೆ , ಅನುಕಂಪ ಪಡೆಯುವ ತಂತ್ರ ಬಿಜೆಪಿಯದ್ದು. ಮತ್ತು ಇದೇ ವಿಚಾರದ ಬಗ್ಗೆ ಚರ್ಚೆ ನಡೆಸಲು ಅವಕಾಶ ನೀಡದೇ ಇರುವ ಮೂಲಕ ಸರ್ಕಾರ ಹಿಂದೂ ವಿರೋಧಿ ನೀತಿಯನ್ನು ಅನುಸರಿಸಿ ಅಲ್ಪ ಸಂಖ್ಯಾತರ ತುಷ್ಟೀಕರಣಕ್ಕೆ ಮುಂದಾಗಿದೆ ಎಂದೂ ಬಿಂಬಿಸುವುದು ವಿಜಯೇಂದ್ರ ಬಣದ ಉದ್ದೇಶ.
ಈ ಮೂಲಕ ಭಿನ್ನಮತೀಯರನ್ನೂ ಬಗ್ಗು ಬಡಿಯುವ, ಕಾಂಗ್ರೆಸ್ ವಿರುದ್ಧವೂ ಪ್ರತಿಭಟಿಸುವ ತನ್ಮೂಲಕ ರಾಜಕೀಯ ಲಾಭ ಪಡೆಯುವ ಉದ್ದೇಶ ಈ ಬಣದ್ದು. ಈ ವಿಚಾರದಲ್ಲಿ ವಿಜಯೇಂದ್ರ ಜತೆ ಎಷ್ಟೇ ಬಿನ್ನಾಭಿಪ್ರಾಯಗಳಿದ್ದರೂ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಕೈಜೋಡಿಸುತ್ತಾರೆ ಎಂಬುದು ಪಕ್ಷದ ಮೂಲಗಳು ನೀಡುವ ವಿವರಣೆ.
ಒಂದಂತೂ ಸತ್ಯ. ಇತ್ತೀಚೆಗೆ ನಡೆದ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದು ಬೀಗಿದೆ. ಇದೇ ಹುಮ್ಮಸ್ಸಿನಲ್ಲಿ ಸದನದಲ್ಲಿ ಪ್ರತಿಪಕ್ಷಗಳನ್ನು ಎದುರಿಸಲು ಸಜ್ಜಾಗಿದೆ. ಇದೇ ವೇಳೆ ವಕ್ಫ ವಿಚಾರ ಉಪ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚಿನ ಮತಗಳನ್ನೇನೂ ತಂದಿಲ್ಲ. ಇಂದಿಗೂ ಅಹಿಂದ ವರ್ಗ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಯಕತ್ವದಲ್ಲೇ ವಿಶ್ವಾಸ ಇರಿಸಿಕೊಂಡಿದೆ. ಹೀಗಾಗಿ ಈ ವರ್ಗಗಳ ನಿಷ್ಠೆ ಬಿಜೆಪಿ ಅಥವಾ ಅದರ ಜತೆ ಈಗ ಸೇರಿರುವ ಜೆಡಿಎಸ್ ಪರ ಬದಲಾಗುವ ಸಾಧ್ಯತೆಗಳು ಸದ್ಯಕ್ಕಿಲ್ಲ. ಇನ್ನುಳಿದಂತೆ ಪ್ರಬಲ ಜಾತಿಗಳಾದ ಲಿಂಗಾಯಿತರು ಮತ್ತು ಒಕ್ಕಲಿಗರ ಬೆಂಬಲವನ್ನು ಬಿಜೆಪಿ ನೆಚ್ಚಿಕೊಂಡಿದೆ. ಜೆಡಿಎಸ್ ಜತೆಗಿದ್ದ ಒಕ್ಕಲಿಗರು ನಿಧಾನವಾಗಿ ತಮ್ಮ ನಿಷ್ಠೆಯನ್ನು ಕಾಂಗ್ರೆಸ್ ನತ್ತ ಬದಲಾಯಿಸುತ್ತಿದ್ದಾರೆ ಎಂಬುದು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೀಶ್ವರ್ ಗೆಲುವೇ ದೊಡ್ಡ ಉದಾಹರಣೆ.
ರಾಜ್ಯದಲ್ಲಿ ಜೆಡಿಎಸ್ ತನ್ನ ಗೊಂದಲಕಾರಿ ನೀತಿಗಳಿಂದಾಗಿ ದಿನೇ ದಿನೇ ದುರ್ಬಲವಾಗುತ್ತಿರುವ ಈಗಿನ ಸನ್ನಿವೇಶದಲ್ಲಿ ತನ್ನ ಅಸ್ತಿತ್ವವನ್ನೂ ಉಳಿಸಿಕೊಂಡು ಬಿಜೆಪಿ ಜತೆಗಿನ ಮೈತ್ರಿಯನ್ನೂ ಮುಂದುವರಿಸಿಕೊಂಡು ಹೋಗುವುದು ಆಪಕ್ಷದ ನಾಯಕತ್ವಕ್ಕೆ ಸದ್ಯಕ್ಕೆ ಅನಿವಾರ್ಯ. ಹಾಗೆ ನೋಡಿದರೆ ಮುಂದಿನ ದಿನಗಳಲ್ಲಿ ಜೆಡಿಎಸ್ ನಿಂದ ಒಂದಷ್ಟು ಶಾಸಕರು ಕಾಂಗ್ರೆಸ್ ಗೆ ಸೇರುವ ಸಾಧ್ಯತೆಗಳೂ ಕಂಡು ಬರುತ್ತಿವೆ. ಅದೇನಾದರೂ ಆದರೆ ಜೆಡಿಎಸ್ ಮತ್ತಷ್ಟು ದುರ್ಬಲವಾಗುತ್ತದೆ.
ಇದರಿಂದ ಬಿಜೆಪಿಗೇ ಲಾಭ. ಬೀದರ್ ನಿಂದ ಚಾಮರಾಜನಗರದ ವರೆಗೂ ಇರುವ ಲಿಂಗಾಯಿತ ಸಮುದಾಯ ಬಿಜೆಪಿಗೇ ತನ್ನ ನಿಷ್ಠೆಯನ್ನು ಕಾಪಾಡಿಕೊಂಡು ಬಂದಿದೆ. ಇನ್ನು ನಾಯಕತ್ವದ ವಿಚಾರಕ್ಕೆ ಬಂದರೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನವರ ನಾಯಕತ್ವದ ಬಗ್ಗೆ ಅಪಾರ ವಿಶ್ವಾಸ ಇರಿಸಿದೆ. ರಾಜ್ಯಾಧ್ಯಕ್ಷರಾದ ನಂತರ ವಿಜಯೇಂದ್ರ ಸಮುದಾಯದಲ್ಲಿ ನಾಯಕತ್ವವನ್ನು ಗಟ್ಟಿಕೊಳಿಸಿಕೊಳ್ಳುವ ಪ್ರಯತ್ನ ನಡೆಸಿದ್ದು ಅದರಲ್ಲಿ ಯಶಸ್ವಿಯೂ ಆಗಿದ್ದಾರೆ. ಇವತ್ತು ಬಸವನಗೌಡ ಪಾಟೀಲ್ ಯತ್ನಾಳ್ ,ಹರೀಶ್, ಸಿದ್ದೇಶ್ವರ್ ಮೊದಲಾದವರು ಏನೇ ಬಂಡಾಯ ಸಾರಲಿ, ನಾಯಕತ್ವದ ವಿಚಾರ ಬಂದರೆ ಸಮುದಾಯ ಯಡಿಯೂರಪ್ಪ ಕುಟುಂಬದ ಪರ ನಿಲ್ಲುತ್ತದೆ. ಇದೇ ಆತ್ಮ ವಿಶ್ವಾಸದ ಮೇಲೆ ವಿಜಯೇಂದ್ರ ಬೆಂಬಲಿಗರು ದಾವಣಗೆರೆಯಲ್ಲಿ ಬೃಹತ್ ಬಲ ಪ್ರದರ್ಶನ ನಡೆಸಲು ಸಿದ್ಧತೆ ನಡೆಸಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ವಿದ್ಯಮಾನಗಳಿಂದಾಗಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ನಲ್ಲೂ ಅಲ್ಲೋಲ ಕಲ್ಲೋಲ ನಿರ್ಮಾಣವಾಗುವ ಪರಿಸ್ಥಿತಿ ಬಂದರೂ ಅಚ್ಚರಿ ಇಲ್ಲ. ಮೂಡಾ ಹಗರಣದ ಬಗ್ಗೆ ಕೇಂದ್ರ ಸರ್ಕಾರದ ಸಂಸ್ಥೆ ನಡೆಸುತ್ತಿರುವ ತನಿಖೆಯ ದಿಕ್ಕನ್ನು ಗಮನಿಸಿದರೆ ಸಿದ್ದರಾಮಯ್ಯ ಸುತ್ತ ಹಗರಣದ ಕುಣಿಕೆ ಬಿಗಿಯಾಗುವ ( ಅಥವಾ ಬಿಗಿಯಾಗಿಸುವ) ಸೂಚನೆಗಳು ಕಂಡು ಬರುತ್ತಿವೆ. ಬಹುತೇಕ ಬೆಳಗಾವಿಯ ವಿಧಾನ ಮಂಡಲದ ಅಧಿವೇಶನ ಹಾಗೂ ಬೆಳಗಾವಿಯಲ್ಲೇ ನಡೆಯಲಿರುವ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧಿವೇಶನದ ನಂತರ ಪಕ್ಷದಲ್ಲಿ ಮಹತ್ವದ ಬೆಳವಣಿಗೆಗಳಾಗುವ ಸಂಭವ ಇದ್ದು ಈ ಬಾರಿಯ ಬಜೆಟ್ ಮಂಡನೆ ನಂತರ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಡಗಳು ಹೆಚ್ಚಾದರೂ ಆಶ್ಚರ್ಯ ಇಲ್ಲ. ಈ ಸನ್ನಿವೇಶವನ್ನೇ ಮುಂದಾಗಿ ಆಲೋಚಿಸಿರುವ ಅವರು ಹಾಸನ ಮತ್ತು ತುಮಕೂರಿನಲ್ಲಿ ಬೃಹತ್ ಸಾಧನಾ ಸಮಾವೇಶ ನಡೆಸಲು ಮುಂದಾಗುವ ಮೂಲಕ ತಮ್ಮ ವಿರೋಧಿಗಳಿಗೆ ಸೆಡ್ಡು ಹೊಡೆಯಲು ನಿರ್ಧರಿಸಿದ್ದಾರೆ.
ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದರೆ ಮುಂದಿನ ದಿನಗಳಲ್ಲಿ ಮಹತ್ವದ ರಾಜಕೀಯ ಬದಲಾವಣೆಗಳಿಗೆ ಕರ್ನಾಟಕ ಸಾಕ್ಷಿಯಾಗಲಿದೆ. ಆ ಬೆಳವಣಿಗೆಗಳ ಲಾಭ ಪಡೆಯಲು ಬಿಜೆಪಿಯಲ್ಲಿರುವ ವಿಜಯೇಂದ್ರ ಗುಂಪು ತಯಾರಿ ನಡೆಸಿದೆ. ಒಂದಂತೂ ಸ್ಪಷ್ಟ. ವಿಜಯೇಂದ್ರ ವಿರೋಧಿ ಬಣದಲ್ಲಿರುವವರು ಮತ್ತು ವಿಜಯೇಂದ್ರ ಜತೆಗಿದ್ದುಕೊಂಡೇ ಗುಟ್ಟಾಗಿ ಭಿನ್ನಮತೀಯರನ್ನು ಬೆಂಬಲಿಸುತ್ತಿರುವ ಕೆಲವು ಮಾಜಿ ಸಚಿವರಿಗೆ ಯಡಿಯೂರಪ್ಪ ಹೊರತಾಗಿ ಸ್ವಂತ ರಾಜಕೀಯ ವರ್ಚಸ್ಸು, ಪ್ರಭಾವ ಇಲ್ಲ. ಕಳೆದ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಗಳಲ್ಲೇ ಇದು ಸ್ಪಷ್ಟವಾಗಿದೆ.ಹಾಗಾಗೇ ಕೆಲವರು ಹಗ್ಗದ ಮೇಲಿನ ನಡಿಗೆ ಆರಂಭಿಸಿದ್ದಾರೆ. ಮುಂದಿನದು ಕಾದು ನೋಡಬೇಕು.
Advertisement