
ಸಂಘರ್ಷವೊ?..... ಸಂಧಾನವೊ…. ? ಎರಡರಲ್ಲಿ ಯಾವುದು ಉತ್ತಮ..?
ಚನ್ನಪಟ್ಟಣ ಸೇರಿದಂತೆ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶದ ಬೆನ್ನಲ್ಲೇ ಕಾಂಗ್ರೆಸ್ ನ ಮೂರು ಬಣಗಳಲ್ಲಿ ಈಗ ಆರಂಭವಾಗಿರುವ ಚರ್ಚೆ. ಸಂಡೂರು, ಶಿಗ್ಗಾವಿ ಕ್ಷೇತ್ರಗಳಿಗಿಂತ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ರಾಜ್ಯ ರಾಜಕಾರಣದ ದಿಕ್ಕನ್ನು ನಿರ್ಧರಿಸುವ ಸಾಧ್ಯತೆಗಳಿವೆ ಎಂದೇ ಈ ಮೊದಲು ಅಂದಾಜಿಸಲಾಗಿತ್ತು. ಈಗ ಫಲಿತಾಂಶದ ನಂತರವೂ ಪರಿಸ್ಥಿತಿ ಏನೂ ಬದಲಾಗುವ ಸಾಧ್ಯತೆಗಳಿಲ್ಲ.
ಚನ್ನಪಟ್ಟಣ ಕ್ಷೇತ್ರದಲ್ಲಿ ಗೆದ್ದೇ ಗೆಲ್ಲವು ಅಪರಿಮಿತ ಆತ್ಮ ವಿಶ್ವಾಸ ಇಟ್ಟುಕೊಂಡಿದ್ದ ಜೆಡಿಎಸ್ ನಾಯಕರು ಮತಗಳ ಎಣಿಕೆಗೆ ಮುನ್ನವೇ ಕ್ಷೇತ್ರದಲ್ಲಿ ಅಲ್ಲಲ್ಲಿ ವಿಜಯೋತ್ಸವ ಆಚರಿಸಿದ್ದೂ ಆಗಿತ್ತು. ಆದರೆ ಫಲಿತಾಂಶ ತಿರುವುಮರುವಾಗಿದೆ. ಇತ್ತೀಚೆಗಷ್ಟೇ ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಬಿಜೆಪಿಯಿಂದ ಕಾಂಗ್ರೆಸ್ ಗೆ ಜಿಗಿದಿದ್ದ ಮಾಜಿ ಸಚಿವ ಸಿ.ಪಿ.ಯೋಗೀಶ್ವರ್ ಈ ಬಾರಿ ಗೆದ್ದಿದ್ದಾರೆ.
ಫಲಿತಾಂಶದ ನಂತರ ಕಾಂಗ್ರೆಸ್ ನಾಯಕರು ಬಹಿರಂಗವಾಗಿ ಏನೇ ಹೇಳಲಿ ಆದರೆ ಆಂತರ್ಯದಲ್ಲಿ ಅವರಿಗೆ ಅಳುಕಿತ್ತು ಎಂಬುದಂತೂ ಸತ್ಯ. ಮಾಜಿ ಪ್ರಧಾನಿ ದೇವೇಗೌಡರಂಥ ದೈತ್ಯ ರಾಜಕೀಯ ಶಕ್ತಿಯ ಇದಿರು ಕಾಂಗ್ರೆಸ್ ಮಂಕಾಗಿದ್ದಂತೂ ಸತ್ಯ. ಆದರೆ ಈಗ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯ ಸಾಧಿಸಿರುವುದು ಪಕ್ಷಮತ್ತು ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಪ್ರಾಬಲ್ಯ ಹೆಚ್ಚಲು ಅವಕಾಶ ಸಿಕ್ಕಂತಾಗಿದೆ. ಈ ಹಿನ್ನಲೆಯಲ್ಲೇ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ನಲ್ಲಿ ನಡೆಯುವ ರಾಜಕೀಯ ವಿದ್ಯಮಾನಗಳತ್ತ ಈಗ ಎಲ್ಲರ ದೃಷ್ಟಿ ನೆಟ್ಟಿದೆ.
ಕೆಪಿಸಿಸಿ ಅಧ್ಯಕ್ಷರೂ ಅವರೇ ಆಗಿರುವುದರಿಂದ ಮೂರೂ ಕ್ಷೇತ್ರಗಳಲ್ಲಿನ ಕಾಂಗ್ರೆಸ್ ದಿಗ್ವಿಜಯದ ಯಶಸ್ಸಿನ ಪ್ರಶ್ನೆ ಬಂದಾಗ ಅದರ ಸಿಂಹಪಾಲು ತಮಗೇ ಸೇರಬೇಕೆಂದು ಅವರು ಬೇಡಿಕೆ ಇಟ್ಟರೆ ಆಶ್ಚರ್ಯ ಏನೂ ಇಲ್ಲ. ಸಾಮಾನ್ಯವಾಗಿ ವಿಧಾನಸಭೆ ಉಪ ಚುನಾವಣೆ ನಡೆದಾಗ ಆಡಳಿತದಲ್ಲಿರುವ ಪಕ್ಷದ ಪರ ಮತದಾರರು ಒಲವು ವ್ಯಕ್ತಪಡಿಸುವುದು ಹೊಸದೇನಲ್ಲ. ಸರ್ಕಾರದ ಜನಪ್ರಿಯತೆ, ಕಾರ್ಯಕ್ರಮಗಳು, ಅಭಿವೃದ್ಧಿ ಕೆಲಸಗಳಿಗೆ ಜನ ಮನ್ನಣೆ ನೀಡಿದ್ದಾರೆಂದೇ ಭಾವಿಸಲಾಗುತ್ತದೆ. ಹಾಗಾಗೇ ಉಪ ಚುನಾವಣೆ ಫಲಿತಾಂಶಗಳು ಸಾಮಾನ್ಯ ಸಂದರ್ಭಗಳಲ್ಲಿ ರಾಜಕೀಯವಾಗಿ ಅಂತಹ ಪರಿಣಾಮವನ್ನೇನೂ ಬೀರುವುದಿಲ್ಲ ಎಂಬುದು ಸತ್ಯ.
ಆದರೆ ಸದ್ಯದ ರಾಜಕೀಯ ಸ್ಥಿತಿ ಗಮನಿಸಿದರೆ ಗ್ಯಾರಂಟಿ ಕಾರ್ಯಕ್ರಮಗಳನ್ನು ಹೊರತುಪಡಿಸಿ ರಾಜ್ಯದಲ್ಲಿನ ಸರ್ಕಾರದಿಂದ ಯಾವುದೇ ಜನಪರ ಕೆಲಸಗಳಾಗಲೀ ಅಭಿವೃದ್ಧಿಯಾಗಲೀ ಕಳೆದ ಒಂದೂವರೆ ವರ್ಷದಿಂದ ನಡೆದಿಲ್ಲ. ಆಡಳಿತ ಪಕ್ಷದ ಶಾಸಕರಿಂದಲೇ ಇದೀಗ ಈ ಕುರಿತಾಗಿ ಬಹಿರಂಗ ಅಸಮಾಧಾನಗಳು ವ್ಯಕ್ತವಾಗುತ್ತಿವೆ. ಹಾಗೆಯೇ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಹೊರತು ಪಡಿಸಿದರೆ ಇನ್ನುಳಿದಂತೆ ಸರ್ಕಾರ ಜಾರಿಗೊಳಿಸಿರುವ ಬೇರೆ ಯೋಜನೆಗಳ ಪರಿಣಾಮಕಾರಿ ಜಾರಿ ಆಗಿಲ್ಲ. ಈ ಬಗ್ಗೆ ಜನಸಾಮಾನ್ಯರಲ್ಲೂ ಅಸಮಾಧಾನಗಳಿವೆ. ಹೀಗಿರುವಾಗ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಆಡಳಿತವನ್ನು ಮೆಚ್ಚಿ ಜನರು ಕೊಟ್ಟ ತೀರ್ಪೆಂದು ಭಾವಿಸಬೇಕಾಗಿಲ್ಲ. ಈ ಬಾರಿಯೂ ಸ್ಥಳೀಯ ವಿಚಾರಗಳ ಮೇಲೆಯೇ ಚುನಾವಣೆ ನಡೆದಿದ್ದು ಫಲಿತಾಂಶ ಪ್ರಕಟವಾಗಿದೆ.
ಹಾಗೆಯೇ ಈ ಚುನಾವಣೆ ಫಲಿತಾಂಶದಿಂದ ಪ್ರತಿಪಕ್ಷ ಬಿಜೆಪಿಗೆ ಅಂತಹ ನಷ್ಟವೇನೂ ಆಗಿಲ್ಲ. ಶಿಗ್ಗಾವಿ ಕ್ಷೇತ್ರದಿಂದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗೆದ್ದಿದ್ದರು. ಅದೇ ಉಪ ಚುನಾವಣೆಯಲ್ಲಿ ಅವರ ಪುತ್ರನನ್ನು ಗೆಲ್ಲಿಸಿಕೊಳ್ಳಲು ಅವರಿಗೆ ಆಗಿಲ್ಲ. ಕಳೆದ ಚುನಾವಣೆಯಲ್ಲಿ ಪರಾಭವ ಗೊಂಡಿದ್ದ ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಪಠಾಣ್ ಗೆದ್ದಿದ್ದಾರೆ. ಭರತ್ ಬೊಮ್ಮಾಯಿ ಸೋಲಿಗೆ ಸ್ಥಳೀಯ ಬಿಜೆಪಿಯಲ್ಲಿದ್ದ ಭಿನ್ನಮತವೂ ಒಂದು ಕಾರಣ. ಪುತ್ರನಿಗೆ ಟಿಕೆಟ್ ಕೊಡಿಸಿದ ಕಾರಣಕ್ಕೆ ಬಿಜೆಪಿಯಲ್ಲಿ ಸ್ಥಳೀಯವಾಗಿ ಭಿನ್ನಮತ ಉಂಟಾಗಿತ್ತು. ಜತೆಗೇ ಬಿಜೆಪಿಯ ಪ್ರಭಾವಿ ನಾಯಕರು ಚುನಾವಣೆಯಲ್ಲಿ ಇದ್ದೂ ಇಲ್ಲದಂತೆ ಕಾರ್ಯ ನಿರ್ವಹಿಸಿದರು. ಲಿಂಗಾಯಿತರ ಒಳ ಪಂಗಡಗಳ ರಾಜಕೀಯ ನಾನಾ ಕಾರಣಗಳಿಗೆ ಮುಳುವಾಯಿತು.
ಇದಕ್ಕಿಂತ ಹೆಚ್ಚಾಗಿ ಕ್ಷೇತ್ರದಲ್ಲಿ ಅಹಿಂದ ವರ್ಗದ ಮತಗಳು ಕಾಂಗ್ರೆಸ್ ಅಭ್ಯರ್ಥಿ ಪರ ಒಟ್ಟುಗೂಡಿದ್ದರಿಂದ ಬಿಜೆಪಿ ಅಭ್ಯರ್ಥಿ ಸೋಲಬೇಕಾಯಿತು. ಶಿಗ್ಗಾವಿಯಲ್ಲಿ ಪುತ್ರ ಗೆದ್ದಿದ್ದರೆ ದಿಲ್ಲಿ ಮಟ್ಟದಲ್ಲಿ ಬಸವರಾಜ ಬೊಮ್ಮಾಯಿ ಕೇಂದ್ರ ಸಚಿವರಾಗಿ ಪ್ರಭಾವಿ ನಾಯಕರಾಗಿ ಹೊರ ಹೊಮ್ಮುವ ಸಾಧ್ಯತೆಗಳಿತ್ತು. ಆದರೆ ಆ ಅವಕಾಶ ತಪ್ಪಿಹೋಗಿದೆ. ಅದರಲ್ಲೂ ಶಿಗ್ಗಾವಿ ಹಾಗೂ ಸಂಡೂರು ಕ್ಷೇತ್ರಗಳಲ್ಲಿ ಅಹಿಂದ ವರ್ಗಗಳನ್ನು ಕಾಂಗ್ರೆಸ್ ಅಭ್ಯರ್ಥಿಗಳ ಪರ ಒಟ್ಟುಗೂಡಿಸುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಸಿದ ಪ್ರಯತ್ನ ಯಶಸ್ವಿಯಾಯಿತು.
ಸಾರ್ವತ್ರಿಕ ಚುನಾವಣೆಯ ನಂತರವೂ ಈ ವರ್ಗದ ಮತಗಳು ಕಾಂಗ್ರೆಸ್ ನಲ್ಲೇ ಮುಂದುವರಿದಿವೆ ಎಂಬುದಕ್ಕೆ ಸಿದ್ದರಾಮಯ್ಯ ನಾಯಕತ್ವ ಕಾರಣ. ಯಾಕೆಂದರೆ ಬಿಜೆಪಿ ಅಥವಾ ಜೆಡಿಎಸ್ ಪಕ್ಗಗಳಲ್ಲಿ ಅಹಿಂದ ಸಮುದಾಯಗಳನ್ನು ಸೆಳೆಯಬಲ್ಲ ಪ್ರಭಾವಿ ನಾಯಕರು ಇಲ್ಲದಿರುವುದು ದೊಡ್ಡ ಕೊರತೆ. ಆ ಪಕ್ಷ ಲಿಂಗಾಯಿತರೂ ಸೇರಿದಂತೆ ಮುಂದುವರಿದ ಸಮುದಾಯಗಳ ಪಕ್ಷ ಎಂಬ ಹಣೆಪಟ್ಟಿಯನ್ನು ಇನ್ನೂ ಕಳಚಿಕೊಳ್ಳಲು ಸಾಧ್ಯವಾಗದಿರುವುದೂ ಸೋಲಿಗೆ ಮತ್ತೊಂದು ಪ್ರಬಲ ಕಾರಣ.
ಸಂಡೂರಿನಲ್ಲಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಬಿಜೆಪಿ ಪರ ಚುನಾವಣೆ ನೇತೃತ್ವ ವಹಿಸಿದ್ದರಾದರೂ ಅಭ್ಯರ್ಥಿ ಆಯ್ಕೆಯಲ್ಲಿನ ಗೊಂದಲ ಮತ್ತು ಅಸಮಾಧಾನಗಳನ್ನು ಬಗೆಹರಿಸುವಲ್ಲಿ ಆಪಕ್ಷದ ನಾಯಕರು ಮುಂದಾಗಲಿಲ್ಲ. ಆ ಮಟ್ಟಿಗೆ ಹೋಲಿಸಿದರೆ ಶಿಗ್ಗಾವಿಯಲ್ಲಿ ಮಾಜಿ ಶಾಸಕ ಅಜಂಪೀರ್ ಖಾದ್ರಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ನಿರ್ಧಾರ ಕೈಗೊಂಡು ನಾಮಪತ್ರ ಸಲ್ಲಿಸಿದಾಗ ಕೆಪಿಸಿಸಿ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಖುದ್ದು ಆಸ್ಥೆ ವಹಿಸಿ ಅವರ ನಾಮಪತ್ರ ವಾಪಸ್ ತೆಗೆಸಿದ್ದಲ್ಲದೇ ಬಂಡಾಯ ಶಮನಗೊಳಿಸಿದ್ದು ರಾಜಕೀಯ ಮುತ್ಸದ್ದಿತನಕ್ಕೆ ಒಂದು ಉದಾಹರಣೆ.
ಇಡೀ ರಾಜ್ಯದಲ್ಲೇ ಕುತೂಹಲಕ್ಕೆ ಕಾರಣವಾಗಿದ್ದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಪಕ್ಷದ ಗೆಲುವು ಎಂಬುದಕ್ಕಿಂತ ಹೆಚ್ಚಾಗಿ ವೈಯಕ್ತಿವಾಗಿ ಯೋಗೀಶ್ವರ್ ಅವರ ವಿಜಯ ಎಂದೇ ಹೇಳಬಹುದು ಈ ವರೆಗೆ ನಡೆದಿರುವ ಹಲವು ಚುನಾವಣೆಯಲ್ಲಿ ಗೆಲುವು- ಸೋಲು ಎರಡನ್ನೂ ಕಂಡಿರುವ ಯೋಗೀಶ್ವರ್ ಕ್ಷೇತ್ರದಲ್ಲಿ ತಮ್ಮದೇ ಆದ ಸುಮಾರು 50 ಸಾವಿರದಷ್ಟು ಮತಬ್ಯಾಂಕ್ ಹೊಂದಿದ್ದಾರೆ. ಅವರು ಪಕ್ಷಗಳನ್ನು ಬದಲಾಯಿಸಿದರೂ ಈ ಮತದಾರರ ನಿಷ್ಠೆ ಬೆರೆಯವರಿಗೆ ಬದಲಾಗಿಲ್ಲ. ಹೀಗಾಗಿ ಯೋಗೀಶ್ವರ್ ಅಲ್ಲಿ ಒಂದು ಪ್ರಬಲ ರಾಜಕೀಯ ಶಕ್ತಿ. ಇನ್ನುಳಿದಂತೆ ಕಾಂಗ್ರೆಸ್ ದೇ ಆದ ಒಂದಷ್ಟು ಮತಗಳು, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಪ್ರಯತ್ನದ ಫಲವಾಗಿ ಬಂದಿರುವ ಮತಗಳೂ ಸೇರಿ ಅವರು ಗೆದ್ದಿದ್ದಾರೆ.
ಆದರೆ ಇಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಸೋಲು ಮಾಜಿ ಪ್ರಧಾನಿ ದೇವೇಗೌಡರ ಕುಟುಂಬಕ್ಕೆ ದೊಡ್ಡ ಆಘಾತ. ಮೊಮ್ಮಗನ ಪರವಾಗಿ ಸ್ವತಹಾ ಮಾಜಿ ಪ್ರಧಾನಿಯೇ ಅನಾರೋಗ್ಯವನ್ನೂ ಲೆಕ್ಕಿಸದೇ ಪ್ರಚಾರದ ಕಣಕ್ಕಿಳಿದಿದ್ದರು. ಮಾಜಿ ಮುಖ್ಯಮಂತ್ರಿ ಹಾಲಿ ಕೇಂದ್ರ ಸಚಿವ ಎಚ್.ಡಿ.ಕುಮಾರ ಸ್ವಾಮಿಯವರಿಗೆ ಈ ಕ್ಷೇತ್ರದಲ್ಲಿ ತಮ್ಮ ಮಗನ ಗೆಲುವು ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಪ್ರಚಾರದ ಹಲವು ಸಂದರ್ಭಗಳಲ್ಲಿ ಅವರು ಡಿ.ಕೆ.ಶಿವಕುಮಾರ್ ಅವರನ್ನು ಗುರಿಯಾಗಿಟ್ಟುಕೊಂಡು ವೈಯಕ್ತಿಕವಾಗಿಯೂ ವಾಗ್ದಾಳಿ ನಡೆಸಿದ್ದರು. ಬಿಜೆಪಿ ಇಲ್ಲಿ ಅಂತಹ ಅಸ್ತಿತ್ವ ಇಲ್ಲದಿದ್ದರೂ ಅವರನ್ನು ಬೆಂಬಲಿಸಿತ್ತು. ಆದರೆ ಇದ್ಯಾವುದೂ ಪ್ರಯೋಜನಕ್ಕೆ ಬಂದಿಲ್ಲ. ತಳ ಹಂತದಲ್ಲಿ ಎರಡೂ ಪಕ್ಷಗಳ ಮೈತ್ರಿ ಫಲ ಕೊಟ್ಟಿಲ್ಲ. ಈ ಹಿಂದೆ ಯೋಗೀಶ್ವರ್ ಬಿಜೆಪಿಗೆ ಬಂದಾಗ ಜೊತೆಯಲ್ಲಿದ್ದ ಕಾರ್ಯಕರ್ತರು,ಕೆಳಹಂತದ ಮುಖಂಡರು ಪಕ್ಷಕ್ಕಿಂತ ಹೆಚ್ಚಾಗಿ ಯೋಗೀಶ್ವರ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂಬುದು ಫಲಿತಾಂಶದ ಮತಗಳಿಕೆಯ ವಿವರಗಳನ್ನು ನೋಡಿದರೆ ಗೊತ್ತಾಗುತ್ತದೆ.
ಅದೇನೇ ಇರಲಿ. ಒಕ್ಕಲಿಗರೇ ಪ್ರಬಲರಾಗಿರುವ ರಾಮನಗರ ಜಿಲ್ಲೆಯಿಂದ ದೇವೇಗೌಡರ ಪಕ್ಷವನ್ನು ದುರ್ಬಲಗೊಳಿಸುವ ಡಿ.ಕೆ.ಶಿವಕುಮಾರ್ ತಂತ್ರ ಫಲ ಕೊಟ್ಟಿದೆ. ತಾನು ಎರಡು ಬಾರಿ ಗೆದ್ದಿದ್ದ ಈ ಕ್ಷೇತ್ರದಿಂದ ತನ್ನ ಮಗನನ್ನು ಗೆಲ್ಲಿಸಿಕೊಳ್ಳಲು ಸಾಧ್ಯವಾಗದಿರುವುದಕ್ಕೆ ಕುಮಾರಸ್ವಾಮಿ ಕೂಡಾ ಹತಾಶರಾಗಿದ್ದಾರೆ.
ಈ ಸೋಲು ಜೆಡಿಎಸ್ ನ್ನು ಮುಂದಿನ ದಿನಗಳಲ್ಲಿ ದುರ್ಬಲಗೊಳಿಸುವ ಸಾಧ್ಯತೆಗಳನ್ನೂ ತಳ್ಳಿ ಹಾಕುವಂತಿಲ್ಲ. ಹಾಗೆಯೇ ಈ ಬೆಳವಣಿಗೆಯ ಲಾಭ ಪಡೆಯಲು ಮುಂದಿನ ದಿನಗಳಲ್ಲಿ ಡಿ.ಕೆ.ಶಿವಕುಮಾರ್ ಮುಂದಾಗಲಿದ್ದಾರೆ ಎಂಬುದೂ ಸತ್ಯ.
ಜೆಡಿಎಸ್ ಪಕ್ಷದ 10ಕ್ಕೂ ಹೆಚ್ಚು ಶಾಸಕರಿಗೆ ಗಾಳ ಹಾಕಿರುವ ಅವರು,ಆ ಪಕ್ಷವನ್ನು ಇನ್ನಷ್ಟು ದುರ್ಬಲಗೊ ಳಿಸುವ ಮೂಲಕ ಒಕ್ಕಲಿಗರ ಪ್ರಶ್ನಾತೀತ ನಾಯಕನಾಗುವ ಹವಣಿಕೆಯಲ್ಲಿದ್ದಾರೆ. ಉಪ ಚುನಾವಣೆಯಲ್ಲಿನ ಸೋಲು ಜೆಡಿಎಸ್ ನ ಶಾಸಕರಲ್ಲೂ ಆತಂಕ ಮೂಡಿಸಿದೆ.
ಹೀಗಾಗಿ ಮುಂದಿನ ದಿನಗಳಲ್ಲಿ ಏನು ಬೇಕಾದರೂ ಆಗಬಹುದು. ಒಮ್ಮೆ ಜೆಡಿಎಸ್ ಪೂರ್ಣ ದುರ್ಬಲಗೊಂಡಿದ್ದೇ ಆದರೆ ಮೈತ್ರಿಕೂಟದಲ್ಲೂ ಕುಮಾರಸ್ವಾಮಿ ನಗಣ್ಯರಾಗುವ ಅಪಾಯಗಳಿವೆ. ಹೀಗಾಗಿ ಮುಂದಿನ ದಿನಗಳಲ್ಲಿ ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಅವರು ಯಾವ ಪ್ರಯತ್ನ ನಡೆಸುತ್ತಾರೆ ಎಂಬುದೇ ಸದ್ಯದ ಪ್ರಶ್ನೆ.
ಈ ಫಲಿತಾಂಶದಿಂದ ಗೆದ್ದು ಬೀಗುತ್ತಿರುವ ಶಿವಕುಮಾರ್ ಮುಖ್ಯಮಂತ್ರಿ ಪಟ್ಟದ ಮೇಲೆ ಕಣ್ಣಿಟ್ಟಿರುವುದು ಗುಟ್ಟೇನಲ್ಲ. ಕಾಂಗ್ರೆಸ್ ನಲ್ಲಿ ಹೈಕಮಾಂಡ್ ಮಟ್ಟದಲ್ಲಿ ಆಗಿದೆ ಎಂದು ಹೇಳಲಾಗುತ್ತಿರುವ ಒಪ್ಪಂದದ ಪ್ರಕಾರ ಮಂದಿನ ಮೇ ತಿಂಗಳಲ್ಲಿ ಸರ್ಕಾರಕ್ಕೆ ಎರಡು ವರ್ಷ ಪೂರ್ಣಗೊಂಡ ನಂತರ ಮುಖ್ಯಮಂತ್ರಿ ಆಗುವ ಆಸೆ ಇಟ್ಟುಕೊಂಡಿದ್ದಾರೆ.
ಆದರೆ ಯಥಾ ಪ್ರಕಾರ ಸಿದ್ದರಾಮಯ್ಯ ಅಧಿಕಾರ ಬಿಡುವ ಸಾಧ್ಯತೆಗಳೇ ಇಲ್ಲ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಅವ್ಯವಹಾರ ಪ್ರಕರಣದ ತನಿಖೆ ನಡೆಸುತ್ತಿರುವ ಕೇಂದ್ರ ಸರ್ಕಾರದ ತನಿಖಾ ದಳ ಹಗರಣದ ಆಳಕ್ಕಿಳಿದು ಹಲವು ಸಂಗತಿಗಳನ್ನು ಬಯಲಿಗೆಳೆದಿದೆ. ಮೊದಲ ಹಂತವಾಗಿ ಸಿದ್ದರಾಮಯ್ಯ ಅವರ ಕುಟುಂಬದ ಸದಸ್ಯರು, ಆಪ್ತರ ವಿಚಾರಣೆಯನ್ನೂ ಮುಗಿಸಿದೆ. ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ ಅವರಿಗೇ ನೋಟೀಸ್ ನೀಡಿ ವಿಚಾರಣೆಗೆ ಕರೆದರೆ ಆಗ ಪರಿಸ್ಥಿತಿ ಬೇರೆಯದೇ ಸ್ವರೂಪ ಪಡೆಯಲಿದೆ.
ಈ ಎಲ್ಲ ಸಂಗತಿಗಳನ್ನು ಮನಗಂಡೇ ಅವರು ರಾಜ್ಯದ ತುಮಕೂರು ಹಾಗೂ ಹಾಸನಗಳಲ್ಲಿ ಅಹಿಂದ ಸಮಾವೇಶ ನಡೆಸಲು ನಿರ್ಧರಿಸುವ ಮೂಲಕ ತಮ್ಮ ಶಕ್ತಿ ಪ್ರದರ್ಶನಕ್ಕೆ ಸಿದ್ಧತೆ ನಡೆಸಿದ್ದಾರೆ. ಈ ಸಮಾವೇಶಗಳು ಪಕ್ಷದ ಹೊರತಾಗಿ ನಡೆದರೆ ಅಲ್ಲಿಂದ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಅಧಿಕಾರ ಹಸ್ತಾಂತರ ಸದ್ಯದ ಪರಿಸ್ಥಿತಿಯಲ್ಲಿ ನಾಜೂಕಾಗಿ ಇತ್ಯರ್ಥವಾಗುವುದಿಲ್ಲ ಹಾಗಾದಾಗ ಶಿವಕುಮಾರ್ ಸಂಘರ್ಷದ ಹಾದಿ ತುಳಿಯುತ್ತಾರೆಯೆ ಎಂಬುದನ್ನು ಕಾದು ನೋಡಬೇಕಾಗಿದೆ. ಉಪ ಚುನಾವಣೆ ಫಲಿತಾಂಶದಿಂದ ಕಾಂಗ್ರೆಸ್ ಸದ್ಯಕ್ಕೆ ಗೆದ್ದು ಬೀಗಿದರೂ ಮುಂದಿನ ದಿನಗಳಲ್ಲಿ ಆ ಪಕ್ಷದಲ್ಲಿ ಎಲ್ಲವೂ ಸುಗಮವಾಗಿ ನಡೆಯುತ್ತದೆಂಬ ಗ್ಯಾರಂಟಿಯೇನೂ ಇಲ್ಲ.
Advertisement