ಉಪ ಚುನಾವಣೆ: ಕಾಂಗ್ರೆಸ್ ನಲ್ಲಿ ಆತ್ಮ ವಿಶ್ವಾಸ; ಮೈತ್ರಿಕೂಟಕ್ಕೆ ಅಪನಂಬಿಕೆಯೇ ಸಮಸ್ಯೆ (ಸುದ್ದಿ ವಿಶ್ಲೇಷಣೆ)

ಗೆಲ್ಲಲು ಹಲವು ರಾಜಕೀಯ ಕಾರ್ಯತಂತ್ರಗಳೂ ನಡೆದಿವೆ. ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಪಕ್ಷದೊಳಗೆ ಎದ್ದಿದ್ದ ಅಸಮಾಧಾನವನ್ನು ತಣ್ಣಗೆ ಮಾಡುವಲ್ಲಿ ಈ ಇಬ್ಬರು ನಾಯಕರು ಯಶಸ್ವಿಯಾಗಿದ್ದಾರೆ. ಉಪ ಚುನಾವಣೆಯನ್ನು ಗೆದ್ದೇ ಬಿಟ್ಟೆವೆಂಬ ಆತ್ಮ ವಿಶ್ವಾಸ ಸಹಜವಾಗೇ ಕಾಂಗ್ರೆಸ್ ಪಾಳೇಯದಲ್ಲಿದೆ.
Union Minister HD Kumaraswamy- Former CM BS Yeddiyurappa
ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ- ಮಾಜಿ ಸಿಎಂ ಬಿಎಸ್ ಯಡಿಯೂರಪ್ಪonline desk
Updated on

ಇದು ಪ್ರತಿಷ್ಠೆಯ ಹಣಾ ಹಣಿಯ ಹೋರಾಟ. ಗೆಲ್ಲವುದು ಎರಡೂ ಪಕ್ಷಗಳಿಗೆ ದೊಡ್ಡ ಸವಾಲು. ರಾಜಕೀಯ ಕಾರ್ಯ ತಂತ್ರಗಳಲ್ಲಿ ಎಲ್ಲರೂ ನಿಪುಣರೆ. ಈ ಹೋರಾಟದಲ್ಲಿ ಗೆಲ್ಲುವವರು ಯಾರು…?

ಸದ್ಯಕ್ಕೆ ಮೂಡಿರುವುದು ಅದೇ ಕುತೂಹಲ. ರಾಜ್ಯದಲ್ಲೀಗ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಭರಾಟೆ. ಮೂರೂ ಕ್ಷೇತ್ರಗಳನ್ನು ಗೆದ್ದು ಬೀಗುವ ತವಕ ಆಡಳಿತ ಪಕ್ಷ ಕಾಂಗ್ರೆಸ್ ಗೆ. ಅಂಥದೊಂದು ಪ್ರಬಲ ಆತ್ಮ ವಿಶ್ವಾಸದಿಂದಲೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುನ್ನುಗ್ಗುತ್ತಿದ್ದಾರೆ.

ಗೆಲ್ಲಲು ಹಲವು ರಾಜಕೀಯ ಕಾರ್ಯತಂತ್ರಗಳೂ ನಡೆದಿವೆ. ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಪಕ್ಷದೊಳಗೆ ಎದ್ದಿದ್ದ ಅಸಮಾಧಾನವನ್ನು ತಣ್ಣಗೆ ಮಾಡುವಲ್ಲಿ ಈ ಇಬ್ಬರು ನಾಯಕರು ಯಶಸ್ವಿಯಾಗಿದ್ದಾರೆ. ಉಪ ಚುನಾವಣೆಯನ್ನು ಗೆದ್ದೇ ಬಿಟ್ಟೆವೆಂಬ ಆತ್ಮ ವಿಶ್ವಾಸ ಸಹಜವಾಗೇ ಕಾಂಗ್ರೆಸ್ ಪಾಳೇಯದಲ್ಲಿದೆ. ಮತ್ತೊಂದು ಕಡೆ ಬಿಜೆಪಿ –ಜೆಡಿಎಸ್ ಮೈತ್ರಿಕೂಟದಲ್ಲಿ ಆಳುವ ಪಕ್ಷವನ್ನು ಸೋಲಿಸುವ ಮೂಲಕ ಅದರಿಂದ ಆ ಪಕ್ಷದಲ್ಲಿ ಉಂಟಾಗಬಹುದಾದ ಆಂತರಿಕ ವಿಪ್ಲವದ ಲಾಭ ಪಡೆದು ಅಧಿಕಾರಕ್ಕೆ ಏರುವ ಲೆಕ್ಕಚಾರವೂ ನಡೆದಿದೆ. ಮೂರೂ ಕ್ಷೇತ್ರಗಳಲ್ಲಿ ಹಣಾ ಹಣಿಯ ಹೋರಾಟವಂತೂ ನಡೆದಿದೆ. ಮಂದಿನ ದಿನಗಳಲ್ಲಿ ಇದರ ತೀವ್ರತೆ ಇನ್ನೂ ಹೆಚ್ಚಾಗಲಿದೆ.

ಇಡೀ ದೇಶದ ಗಮನ ಚೆನ್ನಪಟ್ಟಣದತ್ತ

ಈ ಪೈಕಿ ಚೆನ್ನ ಪಟ್ಟಣ ವಿಧಾನ ಸಭಾ ಕ್ಷೆತ್ರ ಇಡೀ ದೇಶದ ಗಮನ ಸೆಳೆದಿದೆ. ಇದನ್ನು ಉಪ ಚುನಾವಣೆ ಎನ್ನುವುದಕ್ಕಿಂತ ಹೆಚ್ಚಾಗಿ ಮಾಜಿ ಪ್ರಧಾನಿ ದೇವೇಗೌಡರು ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕುಟುಂಬಗಳ ನಡುವಿನ ಪ್ರಚ್ಛನ್ನ ಸಮರವಾಗಿ ಮಾರ್ಪಟ್ಟಿದೆ. ಹೀಗಾಗಿ ಇಲ್ಲಿ ಪಕ್ಷ, ಸಿದ್ಧಾಂತ, ಸರ್ಕಾರದ ಕಾರ್ಯಸೂಚಿ, ಅಭಿವೃದ್ಧಿ ಯೋಜನೆಗಳ ಜಾರಿಗಿಂತ ಹೆಚ್ಚಾಗಿ ವೈಯಕ್ತಿಕ ಪ್ರತಿಷ್ಠೆಯನ್ನೇ ಎರಡೂ ಕುಟುಂಬಗಳು ಪ್ರಧಾನವಾಗಿ ಪರಿಗಣಿಸಿರುವುದರಿಂದ ಮುಂದಿನ ದಿನಗಳಲ್ಲಿ ಈ ಕ್ಷೇತ್ರದಲ್ಲಿ ಚುನಾವಣೆ ಹೆಚ್ಚು ಕಾವೇರಿ ಪ್ರತಿಷ್ಠೆಯ ಸಮರ ನಿರ್ಣಾಯಕ ಘಟ್ಟ ಮುಟ್ಟಲೂ ಬಹುದು. ಒಂದು ವೇಳೆ ಅಂಥದೊಂದು ಪರಿಸ್ಥಿತಿ ಎದುರಾದರೆ ಇಡೀ ವ್ಯವಸ್ಥೆ ಹೇಗೆ ನಿಭಾಯಿಸುತ್ತದೆ ಎಂಬುದೇ ಸದ್ಯದ ಪ್ರಶ್ನೆ.

ಅಖಾಡಕ್ಕೆ ಗೌಡರು:

ದೀಪಾವಳಿ ಹಬ್ಬ ಕಳೆದ ನಂತರ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಚೆನ್ನಪಟ್ಟಣದಲ್ಲಿ ಸ್ಪರ್ಧಿಸಿರುವ ಮೊಮ್ಮಗನ ಪರವಾಗಿ ಚುನಾವಣಾ ಪ್ರಚಾರದ ಖಾಡಕ್ಕೆ ಇಳಿಯಲಿದ್ದಾರೆ. ಅವರಿಗೀಗ 92 ವರ್ಷ ವಯಸ್ಸು. ಆದರೂ ಚುನಾವಣೆ, ರಾಜಕಾರಣದ ಸ್ಥಿತ್ಯಂತರಗಳು ಉಂಟಾದಾಗ ಗೌಡರು ಉತ್ಸಾಹದಿಂದ ರಂಗಕ್ಕಿಳಿಯುತ್ತಾರೆ.

ಜೆಡಿಎಸ್ –ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ಸದ್ಯಕ್ಕೆ ಇರುವ ಪ್ರಬಲ ಆಸರೆ ಎಂದರೆ ಇದೊಂದೇ. ಚುನಾವಣೆ ಮುಗಿಯುವವರೆಗೆ ಚೆನ್ನಪಟ್ಟಣದಲ್ಲೇ ವಾಸ್ತವ್ಯ ಹೂಡಲು ನಿರ್ಧರಿಸಿರುವ ಗೌಡರು ಇದನ್ನೊಂದು ಪ್ರತಿಷ್ಠೆಯ ಸವಾಲಾಗಿ ತೆಗೆದುಕೊಂಡಿದ್ದಾರೆ. ಐದು ದಶಕಗಳ ರಾಜಕಾರಣದಲ್ಲಿ ಅವರಿಗೆ ಈ ಭಾಗದ ಮೂಲೆ ಮೂಲೆಯೂ ಗೊತ್ತಿದೆ. ಹೀಗಾಗಿ ಸ್ಥಳೀಯ ಮುಖಂಡರ ನಿಕಟ ಪರಿಚಯ ಇರುವ ಗೌಡರು ರಾಜಕೀಯವಾಗಿ ಉರುಳಿಸಲಿರುವ ದಾಳಗಳ ಕುರಿತು ಕುತೂಹಲ ಮನೆ ಮಾಡಿದೆ.

ಪ್ರಭಾವಿ ಒಕ್ಕಲಿಗ ಸಮುದಾಯದಲ್ಲಿ ಗೌಡರ ಬಗ್ಗೆ ಈಗಲೂ ಗೌರವ, ಭಕ್ತಿಯ ಭಾವನೆ ಇದೆ. ಆದರೆ ಇದು ಮತಗಳಾಗಿ ಈಗಿನ ರಾಜಕೀಯ ಸನ್ನಿವೇಶದಲ್ಲಿ ಪರಿವರ್ತನೆ ಆಗುತ್ತದೆಯೆ? ಎಂಬುದು ಸದ್ಯ ಮೂಡಿರುವ ಕುತೂಹಲ. ಗೌಡರ ಪ್ರವೇಶದ ಕಾರಣಕ್ಕೆ ಚುನಾವಣೆಗೆ ಮಹತ್ವ ಬಂದಿದೆ. ಮುಂದಿನ ದಿನಗಳಲ್ಲಿ ಈ ಕ್ಷೇತ್ರ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾಧ್ಯಮಗಳ ಗಮನ ಸೆಳೆದರೂ ಅದರಲ್ಲಿ ಆಶ್ಚರ್ಯ ಏನಿಲ್ಲ.

ಪುತ್ರನ ಗೆಲುವಿಗಾಗಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಳ್ಳಿ ಹಳ್ಳಿಗಳನ್ನು ಸುತ್ತುತ್ತಿದ್ದಾರೆ. ಚೆನ್ನಪಟ್ಟಣಕ್ಕೆ ಸಮೀಪದಲ್ಲೇ ಇರುವ ರಾಮನಗರ ಜಿಲ್ಲೆಯ ಬಿಡದಿಯ ತಮ್ಮ ತೋಟದ ಮನೆಯಲ್ಲಿ ಕುಳಿತು ರಾಜಕೀಯ ಕಾರ್ಯತಂತ್ರಗಳನ್ನು ಹೆಣೆಯುತ್ತಿದ್ದಾರೆ. ಕ್ಷೇತ್ರವನ್ನು ತಮ್ಮ ಕುಟುಂಬಕ್ಕೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅವರ ಹೋರಾಟ ಮುಂದುವರಿದಿದೆ.

Union Minister HD Kumaraswamy- Former CM BS Yeddiyurappa
ಉಪ ಚುನಾವಣೆ ನಂತರ ರಾಜ್ಯ ರಾಜಕಾರಣದಲ್ಲಿ ಬದಲಾವಣೆ? (ಸುದ್ದಿ ವಿಶ್ಲೇಷಣೆ)

ಇವೆಲ್ಲವೂ ಸರಿ, ಕ್ಷೇತ್ರದಲ್ಲಿ ಮೈತ್ರಿಕೂಟದಿಂದ ನಿಖಿಲ್ ಅಭ್ಯರ್ಥಿಯಾಗಿದ್ದರೂ ಮಿತ್ರ ಪಕ್ಷ ಬಿಜೆಪಿಯಲ್ಲಿ ಅವರ ಪರ ಇನ್ನೂಅಂತಹ ಉತ್ಸಾಹ ಕಾಣುತ್ತಿಲ್ಲ. ಕಾಂಗ್ರೆಸ್ ಸೇರಿ ಅಭ್ಯರ್ಥಿಯಾಗಿರುವ ಮಾಜಿ ಸಚಿವ ಸಿ.ಪಿ. ಯೋಗೀಶ್ವರ್ ರನ್ನು ಮೊದಲು ಬಿಜೆಪಿ ಅಭ್ಯರ್ಥಿಯಾಗಿ ಇಲ್ಲಿಂದ ಕಣಕ್ಕಿಳಿಸಲು ಪಕ್ಷದ ಒಂದು ವರ್ಗದ ನಾಯಕರು ನಡೆಸಿದ ಪ್ರಯತ್ನವನ್ನು ಕುಮಾರಸ್ವಾಮಿ ದಿಲ್ಲಿಯಲ್ಲಿ ಕುಳಿತು ವಿಫಲಗೊಳಿಸಿದ್ದರ ಬಗ್ಗೆ ಬಿಜೆಪಿಯ ಒಂದು ಗುಂಪಿನಲ್ಲಿ ತೀವ್ರ ಅಸಮಾಧಾನ ಇನ್ನೂ ಮಡುಗಟ್ಟಿದೆ. ಬಹಳಷ್ಟುನಾಯಕರು, ಪೂರ್ಣವಾಗಿ ಇನ್ನೂ ಚುನಾವಣೆಯಲ್ಲಿ ತೊಡಗಿಸಿಕೊಂಡಿಲ್ಲ.

ರಾಜ್ಯಾಧ್ಯಕ್ಷ ವಿಜಯೇಂದ್ರ,ಮಾಜಿ ಮುಖ್ಯಮಂತ್ರಿ, ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರಕ್ಕಿಳಿದಿದ್ದರೂ ಪಕ್ಷದೊಳಗಿನ ಗೊಂದಲಗಳು ಮುಗಿದಿಲ್ಲ. ಸ್ಥಳೀಯವಾಗಿ ಕೆಳ ಹಂತದ ಬಿಜೆಪಿ ಕಾರ್ಯಕರ್ತರು ಜೆಡಿಎಸ್ ಅಭ್ಯರ್ಥಿಯನ್ನು ಒಪ್ಪಿಕೊಳ್ಳುವ ಮನಸ್ಥಿತಿಯಲ್ಲಿ ಇಲ್ಲ. ಇದು ಮೈತ್ರಿ ಕೂಟ ಎದುರಿಸುತ್ತಿರುವ ಸಮಸ್ಯೆ.

ರಾಜಕಾರಣ ಎನ್ನುವುದು ಸಾಧ್ಯತೆಗಳ ಆಟ. ಕ್ಷೇತ್ರದಲ್ಲಿ ಸ್ವಂತ ವರ್ಚಸ್ಸು, ಪ್ರಭಾವ ಹೊಂದಿರುವ ಸಿ.ಪಿ ಯೋಗೀಶ್ವರ್ ರಾಜಕಾರಣದ ಅನಿವಾರ್ಯತೆಗಳಿಗಾಗಿ ಈಗ ಕಾಂಗ್ರೆಸ್ ಸೇರಿ ಅಭ್ಯರ್ಥಿಯಾಗಿದದ್ದಾರೆ. ಇದುವರೆಗಿನ ರಾಜಕಾರಣದಲ್ಲಿ ಯಾವುದೇ ಪಕ್ಷ, ಸಿದ್ಧಾಂತಕ್ಕೆ ಅವರು ಅಂಟಿಕೊಂಡಿಲ್ಲ.

ಸ್ವಂತ ರಾಜಕೀಯ ಅಸ್ತಿತ್ವಕ್ಕೆ ಧಕ್ಕೆ ಬಂದಾಗಲೆಲ್ಲ ಅವರು ತಾವಿದ್ದ ಪಕ್ಷದ ನಾಯಕತ್ವದ ವಿರುದ್ಧವೇ ಸಿಡಿದೆದ್ದು ಹೊರ ಬಂದಿದ್ದಾರೆ. ಭವಿಷ್ಯದಲ್ಲೂ ಅಷ್ಟೆ, ಕ್ಷೇತ್ರದಲ್ಲಿ ಶಿವಕುಮಾರ್ ಸೋದರರ ಪ್ರಾಬಲ್ಯವನ್ನು ಒಪ್ಪಿಕೊಂಡು ಅವರು ಹೇಳಿದ್ದಕ್ಕೆಲ್ಲ ತಲೆಯಾಡಿಸುತ್ತಾರೆಯೆ ಎಂಬುದರ ಬಗ್ಗೆ ಬಿಜೆಪಿ ಪಾಳೇಯದಲ್ಲಿ ಅನುಮಾನಗಳಿವೆ. ಪ್ರಬಲ ಅಸ್ತಿತ್ವ ಹೊಂದಿರುವ ನಾಯಕನನ್ನ ಚುನಾವಣೆ ಕಾರಣಕ್ಕೆ ಕಟುವಾಗಿ ವಿರೋಧಿಸಿದರೆ ಭವಿಷ್ಯದಲ್ಲಿ ಅದರಿಂದ ರಾಜಕೀಯ ನಷ್ಟಗಳೇ ಹೆಚ್ಚು ಎಂಬ ಲೆಕ್ಕಾಚಾರ ಬಿಜೆಪಿಯ ಒಂದು ವರ್ಗದ ನಾಯಕರಲ್ಲಿದೆ.

ಒಂಟಿ ಹೊರಾಟ

ಕುಮಾರಸ್ವಾಮಿಗೂ ಇದು ಗೊತ್ತು. ಆ ಕಾರಣಕ್ಕಾಗೇ ಅವರು ಬಿಜೆಪಿ ನಾಯಕರನ್ನು ದೂರ ಇಟ್ಟೇ ರಾಜಕೀಯ ಕಾರ್ಯ ತಂತ್ರಗಳನ್ನು ರೂಪಿಸುತ್ತಿದ್ದಾರೆ. ಚೆನ್ನಪಟ್ಟಣ ಕ್ಷೇತ್ರದಲ್ಲಿ ಮೈತ್ರಿಕೂಟದಲ್ಲಿ ಪರಸ್ಪರ ಅಪನಂಬಿಕೆಯ ವಾತಾವರಣ ಪೂರ್ಣವಾಗಿ ನಿರ್ಮೂಲವಾಗಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ಕೈ ಹಿಡಿದಿದ್ದ ಬಹುಸಂಖ್ಯಾತ ಮುಸ್ಲಿಮರು ಈ ಬಾರಿ ದೂರ ಸರಿದಿದ್ದಾರೆ. ಬಿಜೆಪಿ ಜತೆಗಿನ ಮೈತ್ರಿ ಇದಕ್ಕೆ ಕಾರಣ. ಇತ್ತೀಚೆಗೆ ಮೈತ್ರಿಯ ನಂತರ ಬಹಿರಂಗವಾಗೇ ಸಮುದಾಯದ ವಿರುದ್ಧ ಕುಮಾರಸ್ವಾಮಿ ಆಡಿದ ಕೆಲವೊಂದು ಮಾತುಗಳೂ ಅವರು ದೂರ ಸರಿಯುವಂತೆ ಮಾಡಿದೆ.

ಕೆಲ ದಿನಗಳ ಹಿಂದೆ ಬಿಡದಿಯ ತಮ್ಮ ತೋಟದ ಮನೆಯಲ್ಲಿ ಕರೆದಿದ್ದ ಅಲ್ಪ ಸಂಖ್ಯಾತ ಮುಖಂಡರ ಸಭೆಯಲ್ಲಿ ಮನವೊಲಿಸುವ ಪ್ರಯತ್ನಗಳನ್ನೂ ಅವರು ಮಾಡಿದ್ದಾರೆ.ಆದರೆ ಅದು ಅವರು ನಿರೀಕ್ಷಿಸಿದ ಪ್ರಮಾಣದಲ್ಲಿ ಫಲ ನೀಡಿದಂತೆ ಕಾಣುತ್ತಿಲ್ಲ. ಚುನಾವಣೆಯಲ್ಲಿ ಯೋಗೀಶ್ವರ್ ಗೆದ್ದರೆ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿರಾಗುತ್ತಾರೆ ಎಂಬ ಸುದ್ದಿಗಳು ಹರಡಿವೆ. ಡಿ.ಕೆ.ಶಿವಕುಮಾರ್ ಈ ಚುನಾವಣೆಯನ್ನು ಪ್ರತಿಷ್ಠೆಯ ಪ್ರಶ್ನೆಯಾಗಿ ತೆಗೆದುಕೊಂಡಿದ್ದು ಸ್ಥಳೀಯವಾಗಿ ಬಿಜೆಪಿ, ಜೆಡಿಎಸ್ ನ ನಗರಸಭೆ ಸದಸ್ಯರೂ ಸೇರಿದಂತೆ ಕೆಳ ಹಂತದ ಮುಖಂಡರುಗಳನ್ನು ಕಾಂಗ್ರೆಸ್ ಗೆ ಸೇರಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಈ ಪಕ್ಷಾಂತರ ಪರ್ವ ಮತ್ತೂ ಮುಂದುವರಿಯಲೂಬಹುದು ಎಂಬ ಸುದ್ದಿ ಕಾಂಗ್ರೆಸ್ ಪಾಳೇಯದಿಂದ ಬಂದಿದೆ. ಕಾಂ ಗ್ರೆಸ್ ನಿಂದಲೂ ಒಂದಷ್ಟು ಸ್ಥಳೀಯ ಪ್ರಭಾವಿ ಮುಖಂಡರು ಜೆಡಿಎಸ್ ಗೆ ಜಿಗಿದಿದ್ದಾರೆ.

ಟಿಕೆಟ್ ಸಿಗದ ಕಾರಣಕ್ಕೆ ಮುನಿಸಿಕೊಂಡಿದ್ದ ಕಾಂಗ್ರೆಸ್ ಮುಖಂಡ ರಘುನಂದನ್ ರಾಮಣ್ಣ ಡಿ.ಕೆ.ಶಿವಕುಮಾರ್ ಸಂಧಾನಕ್ಕೆ ಮಣಿದು ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡಲು ಒಪ್ಪಿದ್ದಾರೆ. ಯಾವುದೇ ದೃಷ್ಟಿಯಿಂದ ನೋಡಿದರೂ ಚೆನ್ನಪಟ್ಟಣ ಕ್ಷೇತ್ರದಲ್ಲ ಮುಂದಿನ ದಿನಗಳಲ್ಲಿ ಎರಡೂ ಕುಟುಂಬಗಳ ನಡುವಿನ ಹೋರಾಟ ನಿರ್ಣಾಯಕ ಘಟ್ಟಕ್ಕೆ ಮುಟ್ಟಲಿದೆ.

ಜೆಡಿಎಸ್ ಅಭ್ಯರ್ಥಿ ನಿಖಿಲ್ ಗೆ ಎರಡು ಚುನಾವಣೆಗಳಲ್ಲಿ ಸೋತ ಅನುಕಂಪವೂ ಇದೆ. ರಾಮನಗರದಲ್ಲಿ ಸೋತ ನಂತರ ಚೆನ್ನಪಟ್ಟಣದಲ್ಲಿ ನೆಲೆ ನಿಂತು ಒಂದು ವರ್ಷದಿಂದ ಕ್ಷೇತ್ರ ಸುತ್ತಿದ್ದಾರೆ. ಪಕ್ಷದ್ದೇ ಆದ ಒಂದಷ್ಟು ಗಟ್ಟಿ ಮತಗಳು ಇಲ್ಲಿವೆ.

Union Minister HD Kumaraswamy- Former CM BS Yeddiyurappa
ಕರ್ನಾಟಕ ಉಪ ಚುನಾವಣೆ | ಚೆನ್ನಪಟ್ಟಣ: DKS-HDK ಇಬ್ಬರಲ್ಲಿ ಗೆಲ್ಲುವವರು ಯಾರು? ಸಂಡೂರು, ಶಿಗ್ಗಾಂವಿ ಲೆಕ್ಕಾಚಾರಗಳೇನು? (ಸುದ್ದಿ ವಿಶ್ಲೇಷಣೆ)

ಶಿಗ್ಗಾವಿಯಲ್ಲಿ ಬಿಕ್ಕಟ್ಟು:

ಇನ್ನು ಹಾವೇರಿ ಜಿಲ್ಲೆಯ ಶಿಗ್ಗಾವಿಯ ಉಪ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಪುತ್ರ ಭರತ್ ನನ್ನು ಕಣಕ್ಕಿಳಿಸಿದ್ದಾರೆ. ಬಿಜೆಪಿಯಲ್ಲಿನ ಆಂತರಿಕ ಕಚ್ಚಾಟ ಅವರನ್ನು ಚುನಾವಣಾ ಕಣದಲ್ಲಿ ಸ್ವಲ್ಪ ಪರದಾಡುಂತೆ ಮಾಡಿದೆ. ಪ್ರಮುಖವಾಗಿ ಪಂಚಮಸಾಲಿ ಲಿಂಗಾಯಿತ ಸಮುದಾಯ ಅವರ ಪರ ಇಲ್ಲದಿರುವುದೇ ದೊಡ್ಡ ಸಮಸ್ಯೆಯಾಗಿದೆ. ಪುತ್ರನ ಗೆಲುವಿಗಾಗಿ ಅವರು ಬಿಜೆಪಿಯ ಹಿರಿಯ ನಾಯಕ ಯಡಿಯೂರಪ್ಪ ಅವರನ್ನೇ ಆಶ್ರಯಿಸಿದ್ದಾರೆ.

ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಖುದ್ದು ತಾನೇ ಹಾಜರಿದ್ದ ಯಡಿಯೂರಪ್ಪ ಬಿಜೆಪಿ ಪಾಳೇಯಕ್ಕೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಆದರೆ ಈ ಕ್ಷೇತ್ರದ ಜತೆ ನಿಕಟ ಸಂಪರ್ಕ ಹೊಂದಿರುವ ಬೆಳಗಾವಿ ಸಂಸದರೂ ಆಗಿರುವ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ನಾಯಕ ಜಗದೀಶ ಶೆಟ್ಟರ್, ಮಾಜಿ ಸಚಿವ ಮುರುಗೇಶ್ ನಿರಾಣಿ ಸೇರಿದಂತೆ ಕೆಲವು ಪ್ರಭಾವಿ ನಾಯಕರು ಬಸವರಾಜ ಬೊಮ್ಮಯಿ ಜತೆಗಿನ ಭಿನ್ನಾಭಿಪ್ರಾಯದ ಕಾರಣಕ್ಕೆ ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ಇನ್ನೂ ತೊಡಗಿಸಿಕೊಂಡಿಲ್ಲ.

ಕಾಂಗ್ರೆಸ್ ಕಳೆದ ಬಾರಿ ಸೋತ ಅಭ್ಯರ್ಥಿಗೇ ಉಪ ಚುನಾವಣೆಗೆ ಟಿಕೆಟ್ ನೀಡಿದೆ. ಟಿಕೆಟ್ ಸಿಗದೇ ಬಂಡಾಯ ಎದ್ದು ನಾಮಪತ್ರ ಸಲ್ಲಿಸಿದ್ದ ಮಾಜಿ ಶಾಸಕ ಅಜಂಪೀರ್ ಖಾದ್ರಿ ನಾಮಪತ್ರ ವಾಪಸು ಪಡೆದಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವ ಹೊಣೆಗಾರಿಕೆಯನ್ನು ಸಚಿವ ಜಮೀರ್ ಅಹಮದ್ ಖಾನ್ ಅವರಿಗೆ ನಾಯಕತ್ವ ವಹಿಸಿದೆ. ಶಿಗ್ಗಾವಿಯಲ್ಲಿ ಕಾಂಗ್ರೆಸ್ ಗೆಲ್ಲುವುದು ಸಿದ್ದರಾಮಯ್ಯಅವರ ಪ್ರತಿಷ್ಠೆಯ ಪ್ರಶ್ನೆಯೂ ಆಗಿದೆ.

ಸಂಡೂರು: ಮತ್ತೆ ಒಂದಾದ ಗೆಳೆಯರು

ಇನ್ನು ಬಳ್ಳಾರಿ ಜಿಲ್ಲೆಯ ಸಂಡೂರು ಕ್ಷೇತ್ರದಲ್ಲಿ ಈ ಹಿಂದೆ ಇಲ್ಲಿಂದ ಶಾಸಕರಾಗಿದ್ದು ನಂತರ ಇತ್ತೀಚೆಗೆ ಸಂಸದರಾದ ತುಕಾರಾಂ ಅವರ ಪತ್ನಿಗೇ ಕಾಂಗ್ರೆಸ್ ಟಿಕೆಟ್ ನೀಡಿ ಕಣಕ್ಕಿಳಿಸಿದೆ. ಪತ್ನಿಯನ್ನು ಗೆಲ್ಲಿಸಿಕೊಳ್ಳುವ ಸಲುವಾಗಿ ಅವರೇ ಅಖಾಡಕ್ಕಿಳಿದಿದ್ದಾರೆ. ಬಿಜೆಪಿ ಅಭ್ಯರ್ಥಿ ಪರ ಮಾಜಿ ಸಚಿವ ಜನಾರ್ದನ ರೆಡ್ಡಿ ಕಣಕ್ಕಿಳಿದಿದ್ದಾರೆ. ಮಾಜಿ ಸಚಿವ ರಾಮುಲು ಪ್ರಭಾವ ಇಲ್ಲಿರುವುದರಿಂದ ಅವರ ಜತೆಗಿನ ಹಳೆಯ ಭಿನ್ನಾಭಿಪ್ರಾಯ ಮರೆತು ಕೈಜೋಡಿಸಿದ್ದಾರೆ. ಹಳೆಯ ಗೆಳೆಯರು ಒಟ್ಟಾಗಿ ಚುನಾವಣಾ ಕಾರ್ಯತಂತ್ರ ರೂಪಿಸುತ್ತಿರುವುದರಿಂದ ಬಿಜೆಪಿ ಪಾಳೇಯದಲ್ಲಿ ಉತ್ಸಾಹ ಹೆಚ್ಚಿದೆ.

100%

-ಯಗಟಿ ಮೋಹನ್
yagatimohan@gmail.com

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com