ಕರ್ನಾಟಕ ಉಪ ಚುನಾವಣೆ | ಚೆನ್ನಪಟ್ಟಣ: DKS-HDK ಇಬ್ಬರಲ್ಲಿ ಗೆಲ್ಲುವವರು ಯಾರು? ಸಂಡೂರು, ಶಿಗ್ಗಾಂವಿ ಲೆಕ್ಕಾಚಾರಗಳೇನು? (ಸುದ್ದಿ ವಿಶ್ಲೇಷಣೆ)

ಕುಮಾರಸ್ವಾಮಿ ಮೈತ್ರಿಕೂಟದ ಸರ್ಕಾರದಲ್ಲಿ ಕೇಂದ್ರ ಮಂತ್ರಿ ಆಗಿದ್ದರೂ ರಾಜ್ಯದಲ್ಲಿ ಬಿಜೆಪಿ ನಾಯಕರ ಜತೆ ಅವರ ಸಂಬಂಧಗಳೇನೂ ಉತ್ತಮವಾಗಿಲ್ಲ. ತಮ್ಮನ್ನು ಕಡೆಗಣಿಸಿ ಕೇಂದ್ರ ಮಟ್ಟದಲ್ಲೇ ಎಲ್ಲ ರಾಜಕೀಯ ವ್ಯವಹಾರಗಳನ್ನು ನಡೆಸುತ್ತಿರುವ ಅವರ ಬಗ್ಗೆ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಸೇರಿದಂತೆ ಎಲ್ಲ ನಾಯಕರಿಗೆ ಅಸಮಾಧಾನಗಳಿವೆ.
HD Kumaraswamy- CP Yogeshwar- DK Shivakumar
ಹೆಚ್ ಡಿ ಕುಮಾರಸ್ವಾಮಿ- ಸಿಪಿ ಯೋಗೇಶ್ವರ್, ಡಿಕೆ ಶಿವಕುಮಾರ್ online desk
Updated on

ಹಣಾಹಣಿ ಕಾಳಗಕ್ಕೆ ವೇದಿಕೆ ಸಜ್ಜಾಗಿದೆ. ಮುಂದಿನದು ಎರಡು ಕುಟುಂಬಗಳ ನಡುವಿನ ಜಿದ್ದಾಜಿದ್ದಿಯ ಮಹಾ ಸಮರ.

ನವೆಂಬರ್ 13 ರಂದು ರಾಜ್ಯದ ಸಂಡೂರು, ಶಿಗ್ಗಾವಿ, ಹಾಗೂ ಚೆನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಘೋಷಣೆಯಾಗಿದ್ದು ಈಗಾಗಲೇ ಅಗತ್ಯ ಪ್ರಕ್ರಿಯೆಗಳೂ ಶುರುವಾಗಿದೆ. ಉಳಿದೆರಡು ಕ್ಷೇತ್ರಗಳು ಹಾಗಿರಲಿ ಬೆಂಗಳೂರು ಸರಹದ್ದಿನಲ್ಲೇ ಬರುವ ಚೆನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಮಾತ್ರ ಇಡೀ ರಾಜ್ಯ ರಾಜಕಾರಣಕ್ಕೆ ಹೊಸ ತಿರುವು ನೀಡುವ ನಿರೀಕ್ಷೆಯಿದೆ. ಅಷ್ಟೇ ಅಲ್ಲ, ಅದೊಂದು ಮಹಾ ಸಮರವಾಗಿ ರೂಪುಗೊಳ್ಳುವ ಎಲ್ಲ ಸಾಧ್ಯತೆಗಳನ್ನು ಹುಟ್ಟುಹಾಕಿದೆ.

ಶಾಸಕರಾಗಿದ್ದ ತುಕಾರಾಂ (ಸಂಡೂರು), ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (ಶಿಗ್ಗಾವಿ) ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ(ಚೆನ್ನಪಟ್ಟಣ) ಲೋಕಸಭೆಗೆ ಆಯ್ಕೆಯಾದ ಹಿನ್ನಲೆಯಲ್ಲಿ ಅವರ ರಾಜೀನಾಮೆಯಿಂದ ಈ ಕ್ಷೇತ್ರಗಳು ತೆರವಾಗಿವೆ. ಈಗ ಉಪ ಚುನಾವಣೆ ಪ್ರಕ್ರಿಯೆ ಆರಂಭಗೊಂಡಿದೆ.

ಲೋಕಸಭಾ ಚುನಾವಣೆಯಿಂದೀಚೆಗೆ ರಾಜ್ಯ ರಾಜಕಾರಣದಲ್ಲಿ ಒಂದಷ್ಟು ಬದಲಾವಣೆಗಳಾಗಿವೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಪ್ರಭಾವಿಯಾಗಿದ್ದು ಸಚಿವರೂ ಆಗಿದ್ದ, ನಂತರ ದಿನಗಳಲ್ಲಿ ಗಣಿ ಅಕ್ರಮ ಹಗರಣಗಳ ಆರೋಪಗಳ ಹಿನ್ನಲೆಯಲ್ಲಿ ಜೈಲು ಸೇರಿದ್ದ ಗಾಲಿ ಜನಾರ್ದನ ರೆಡ್ಡಿ ಹೊರ ಬಂದ ನಂತರ ಬಳ್ಳಾರಿ ಪ್ರವೇಶದ ನಿರ್ಬಂಧದಿಂದ ಮುಕ್ತರಾಗಿದ್ದಾರೆ.

ಸಹಜವಾಗೇ ಇದು ಬಳ್ಳಾರಿ ರಾಜಕಾರಣದ ಮೇಲೆ ಉಪ ಚುನಾವಣೆ ಮೇಲೆ ಪ್ರಭಾವ ಬೀರಲಿದೆ. ಶಿಗ್ಗಾವಿಯಲ್ಲಿ ಬಸವರಾಜ ಬೊಮ್ಮಾಯಿ ತಮ್ಮ ಪುತ್ರನ್ನು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಪ್ರಯತ್ನಿಸುತ್ತಿದ್ದು ಇದಕ್ಕೆ ಅವರ ಪಕ್ಷದಲ್ಲೇ ವಿರೋಧ ವ್ಯಕ್ತವಾಗುತ್ತಿದೆ. ಒಂದು ರೀತಿಯಿಂದ ನೋಡಿದರೆ ಬಿಜೆಪಿಯಲ್ಲಿ ಸದ್ಯದ ಮಟ್ಟಿಗೆ ಅವರು ಅಂತಹ ಪ್ರಭಾವಿ ಏನೂ ಅಲ್ಲ. ಅವರನ್ನು ಒಂದು ಕಾಲದಲ್ಲಿ ಬೆಂಬಲಿಸಿದ್ದ ಹಿರಿಯ ನಾಯಕ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರೂ ಈಗ ಮೊದಲಿನಂತೆ ಅವರ ಬಗ್ಗೆ ವಿಶ್ವಾಸದಿಂದ ಇಲ್ಲ. ಇನ್ನುಳಿದ ಪಕ್ಷದ ಹಿರಿಯ ನಾಯಕರುಗಳಿಗೆ ಬೊಮ್ಮಾಯಿ ಅನಿವಾರ್ಯ ಎಂದೇನೂ ಅನಿಸಿಲ್ಲ. ಹೀಗಾಗಿ ಪುತ್ರನಿಗೆ ರಾಜಕೀಯ ಕಲ್ಪಿಸುವ ವಿಚಾರದಲ್ಲಿ ಅವರದ್ದು ಬೆಂಬಲಿಗರಿಲ್ಲದ ಒಂಟಿ ಹೊರಾಟ.

ಎಲ್ಲದಕ್ಕಿಂತ ವಿಶೇಷವಾಗಿ ಇಡೀ ರಾಜ್ಯದ ಗಮನ ಸೆಳೆದಿರುವುದು ಚೆನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ. ಇದು ಕಾಂಗ್ರೆಸ್- ಹಾಗೂ ಬಿಜೆಪಿ ಮೈತ್ರಿಕೂಟದ ನಡುವಿನ ಹೋರಾಟ ಎನ್ನುವುದಕ್ಕಿಂತ ಹೆಚ್ಚಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬ ಮತ್ತು ಕೆಪಿಸಿಸಿ ಅಧ್ಯಕ್ಷ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವಿನ ನೇರ ಸಂಘರ್ಷವಾಗಿ ರೂಪುಗೊಳ್ಳಲಿದೆ. ಬಿಜೆಪಿಯ ಸ್ಥಳೀಯ ನಾಯಕ ವಿಧಾನ ಪರಿಷತ್ ಸದಸ್ಯ ಸಿ.ಪಿ .ಯೋಗೀಶ್ವರ್ ವಿರೋಧದ ನಡುವೆಯೂ ಜೆಡಿಎಸ್ –ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಕುಮಾರಸ್ವಾಮಿಯವರ ಪುತ್ರ ನಿಖಿಲ್ ಇಲ್ಲಿ ಕಣಕ್ಕಿಳಿಯುವುದು ಬಹುತೇಕ ಖಚಿತ.

ಜೆಡಿಎಸ್ ನಿಂದ ಇನ್ನೂ ಒಂದಿಬ್ಬರ ಹೆಸರು ಕೇಳಿ ಬರುತ್ತಿದೆಯಾದರೂ ಮಗನಿಗೆ ರಾಜಕೀಯ ಭವಿಷ್ಯ ಕಲ್ಪಿಸುವ ಸಲುವಾಗಿ ಈ ಕ್ಷೇತ್ರವನ್ನು ಅವರು ಆಯ್ಕೆ ಮಾಡಿಕೊಂಡಿದ್ದಾರೆ. ನಿಖಿಲ್ ಗೆ ಇದು ಮೂರನೇ ಚುನಾವಣೆ. ಈ ಹಿಂದೆ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮತ್ತು ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಂಡಿದ್ದಾರೆ. ದೇವೇಗೌಡರ ಕುಟುಂಬಕ್ಕೆ ಇದು ಪ್ರತಿಷ್ಠೆಯ ಪ್ರಶ್ನೆ. ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಗೌಡರ ಅಳಿಯ ಹೆಸರಾಂತ ಹೃದ್ರೋಗ ತಜ್ಞ ಡಾ. ಸಿ.ಎನ್. ಮಂಜುನಾಥ್ ಬಿಜೆಪಿಯಿಂದ ಮೈತ್ರಿಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಭಾರೀ ಮತಗಳ ಅಂತರದಿಂದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸೋದರ ಡಿ.ಕೆ.ಸುರೇಶ್ ಅವರನ್ನು ಸೋಲಿಸಿ ಆಯ್ಕಯಾಗಿದ್ದಾರೆ.ಇದೇ ಸೂತ್ರ ಚೆನ್ನ ಪಟ್ಟಣ ವಿಧಾನಸಭಾ ಕ್ಷೇತ್ರದಲ್ಲೂ ಫಲ ನೀಡಲಿದೆ ಎಂಬುದು ಕೇಂದ್ರ ಸಚಿವರೂ ಆಗಿರುವ ಕುಮಾರಸ್ವಾಮಿ ನಿರೀಕ್ಷೆ.

ಚೆನ್ನಪಟ್ಟಣ ವಿಧಾನಸಭಾ ಕ್ಷೇತ್ರ ತೆರವಾದ ದಿನದಿಂದ ಡಿ.ಕೆ.ಶಿವಕುಮಾರ್ ಆ ಕ್ಷೇತ್ರದ ಮೇಲೆ ವಿಶೇಷ ಗಮನ ಕೇಂದ್ರೀಕರಿಸಿದ್ದಾರೆ. ಉಪ ಚುನಾವಣೆ ಘೋಷಣೆಗೂ ಮೊದಲೇ ಕ್ಷೇತ್ರದಾದ್ಯಂತ ಹಲವಾರು ಬಾರಿ ಪ್ರವಾಸ ನಡೆಸಿ ಅಗತ್ಯ ಸಿದ್ಧತೆಗಳನ್ನು ನಡೆಸಿದ್ದಾರೆ. ಅವರಿಗೆ ಇದು ವೈಯಕ್ತಿಕ ಪ್ರತಿಷ್ಠೆ. ಇಲ್ಲೂ ಕಾಂಗ್ರೆಸ್ಸಿನಿಂದ ಹಲವಾರು ಹೆಸರುಗಳು ಕೇಳಿ ಬರುತ್ತಿದ್ದರೂ ಮಾಜಿ ಸಂಸದ ಡಿ.ಕೆ. ಸುರೇಶ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಖಚಿತ. ಲೋಕಸಭಾ ಚುನಾವಣೆಯ ಸೋಲಿನೀಂದಾದ ರಾಜಕೀಯ ನಷ್ಟವನ್ನು ಈ ಚುನಾವಣೆಯಲ್ಲಿ ಮರಳಿ ಪಡೆದುಕೊಳ್ಳುವುದು ಆ ಮೂಲಕ ತಮ್ಮ ಪರಂಪರಾನುಗತ ರಾಜಕೀಯ ವೈರಿ ಕುಮಾರಸ್ವಾಮಿ ಮತ್ತು ಅವರ ಕಟುಂಬವನ್ನು ಬದಿಗೆ ಸರಿಸಿ ಒಕ್ಕಲಿಗ ಸಮುದಾಯ ಪ್ರಶ್ನಾತೀತ ನಾಯಕನಾಗಿ ನಿಲ್ಲುವುದು ಶಿವಕುಮಾರ್ ಮಹತ್ವಾಕಾಂಕ್ಷೆ. ಅದೇ ಕಾರಣಕ್ಕೆ ಅವರಿಗೆ ಈ ಉಪ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ.

HD Kumaraswamy- CP Yogeshwar- DK Shivakumar
ಸಿದ್ದರಾಮಯ್ಯ ಪ್ರಾಯೋಜಿತ ನಾಟಕಕ್ಕೆ ಹೈಕಮಾಂಡ್ ಬ್ರೇಕ್…! (ಸುದ್ದಿ ವಿಶ್ಲೇಷಣೆ)

ಈ ಚುನಾವಣೆಯಲ್ಲಿ ಮೈತ್ರಿಕೂಟದ ಅಭ್ಯರ್ಥಿಯಾಗುವ ಸಿದ್ಧತೆ ನಡೆಸಿರುವ ಮಾಜಿ ಸಚಿವ ಸಿ.ಪಿ ಯೋಗೀಶ್ವರ್ ಪರ ಬಿಜೆಪಿ ರಾಜ್ಯ ನಾಯಕರು ನಿಂತಿದ್ದರೂ ಕುಮಾರಸ್ವಾಮಿ ಅಡ್ಡಿಯಾಗಿದ್ದಾರೆ. ಯೋಗೀಶ್ವರ್ ಒಂದು ವೇಳೆ ಇಲ್ಲಿಂದ ಗೆದ್ದರೆ ಭವಿಷ್ಯದಲ್ಲಿ ಈ ಭಾಗದಲ್ಲಿ ತಮ್ಮ ರಾಜಕೀಯ ಭವಿ ಮಸುಕಾಗುವುದೆಂಬ ಆತಂಕವೂ ಇದಕ್ಕೆ ಕಾರಣ. ಆದರೆ ರಾಜಕೀಯವಾಗಿ ಈ ಕ್ಷೆತ್ರದಲ್ಲಿ ಯೋಗೀಶ್ವರ್ ಒಬ್ಬ ಪ್ರಬಲ ಅಸ್ತಿತ್ವ ಇರುವ ನಾಯಕ ಎಂಬುದು 1999 ರಿಂದ ಇಲ್ಲಿಯವರೆಗೆ ನಡೆದಿರುವ ಎಲ್ಲ ಚುನಾವಣೆಗಳಲ್ಲೂ ಸಾಬೀತಾಗಿದೆ. ಹಿಂದೆ ನಡೆದ ಮೂರು ಚುನಾವಣೆಗಳಲ್ಲಿ ಬೇರೆ ಬೇರೆ ಪಕ್ಷಗಳಿಂದ ಗೆದ್ದಿರುವ ಅವರು ಎರಡು ಚುನಾವಣೆಗಳಲ್ಲಿ ಸೋತಿದ್ದರೂ ಗಳಿಸಿರುವ ಮತಗಳು ಗಮನಾರ್ಹ. ಹೀಗಾಗಿ ಅವರೊಬ್ಬ ಪ್ರಬಲ ರಾಜಕೀಯ ಶಕ್ತಿ ಎಂಬುದರಲ್ಲಿ ಅನುಮಾನವೇ ಇಲ್ಲ. ಕುಮಾರಸ್ವಾಮಿ ಭಯಕ್ಕೆ ಕಾರಣವಾಗಿರುವ ಅಂಶವೂ ಇದೇ ಆಗಿದೆ. ಹಾಗಾಗೇ ತಾವು ಪ್ರತಿನಿಧಿಸಿದ್ದ ಕ್ಷೇತ್ರವನ್ನು ತಮ್ಮ ಪಕ್ಷಕ್ಕೇ ಬಿಟ್ಟುಕೊಡುವಂತೆ ದಿಲ್ಲಿ ಬಿಜೆಪಿ ನಾಯಕರ ಮುಂದೆ ಒತ್ತಡ ಹೇರುತ್ತಿದ್ದಾರೆ. ಯೋಗೀಶ್ವರ್ ಮೈತ್ರಿಕೂಟದ ಅಭ್ಯರ್ಥಿಯಾಗದಿದ್ದರೆ ಬಂಡಾಯ ಎದ್ದು ಸ್ವತಂತ್ರವಾಗಿ ಸ್ಪರ್ಧಿಸುವುದು ಖಚಿತ. ಅದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನೂ ಮಾಡಿಕೊಂಡಿದ್ದಾರೆ.

ಸ್ಥಳೀಯವಾಗಿ ವಾತಾವರಣದ ಒಳ ಹೊಕ್ಕು ನೋಡಿದರೆ ಚೆನ್ನ ಪಟ್ಟಣ ಕ್ಷೆತ್ರ ನಿಧಾನವಾಗಿ ಕುಮಾರಸ್ವಾಮಿ ಕೈ ಜಾರುತ್ತಿರುವ ಅಂಶ ಗೋಚರವಾಗುತ್ತದೆ. ಇತ್ತೀಚೆಗೆ ನಗರಸಭೆಯಲ್ಲಿ ಅವರದೇ ಪಕ್ಷದ ಅಧಿಕ ಸಂಖ್ಯೆಯ ಸದಸ್ಯರು ಕಾಂಗ್ರೆಸ್ ಸೇರುವ ಮೂಲಕ ಜೆಡಿಎಸ್ ಗೆ ಆಘಾತ ನೀಡಿದ್ದಾರೆ. ಇಲ್ಲಿಂದ ಎರಡು ಬಾರಿ ಶಾಸಕರಾಗಿದ್ದರೂ ಕ್ಷೇತ್ರಕ್ಕೆ, ಕಾರ್ಯಕರ್ತರಿಗೆ ಏನೂ ಮಾಡಿಲ್ಲ , ಬರೀ ಕುಟುಂಬದ ಹಿತಾಸಕ್ತಿಯನ್ನು ಮಾತ್ರ ಗಮನಿಸಿದರು ಎಂಬ ಅಸಮಾಧಾನವೂ ಅವರ ಬಗ್ಗೆ ಇದೆ. ಆದರೆ ಇವೆಲ್ಲವನ್ನು ಮೀರಿ ಇರುವ ಅನುಕೂಲಕರ ಅಂಶ ಎಂದರೆ ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ಬಹ ಸಂಖ್ಯಾತ ಒಕ್ಕಲಿಗ ಸಮುದಾಯದಲ್ಲಿ ಈಗಲೂ ಗೌರವ ಭಾವನೆ ಇದೆ. ನಿಖಿಲ್ ಕುಮಾರಸ್ವಾಮಿ ಪರ ಚುನಾವಣೆಗೆ ಗೌಡರೇ ಪ್ರಚಾರಕ್ಕೆ ಬಂದರೆ ಒಂದಷ್ಟರ ಮಟ್ಟಿಗೆ ಅದು ಸಹಾಯ ಆಗಬಹುದು ಎಂಬ ಲೆಕ್ಕಾಚಾರವೂ ಇದೆ. ಆದರೆ ವಯೋ ಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಹಿರಿಯ ನಾಯಕರಾದ ಗೌಡರೂ ಹಿಂದಿನ ಚುನಾವಣೆಗಳಂತೆ ಎಲ್ಲೆಂದರಲ್ಲಿ ಪ್ರವಾಸ ಮಾಡುವುದು ಕಷ್ಟ. ಇದು ಜೆಡಿಎಸ್ ಗೆ ದೊಡ್ಡ ಸಮಸ್ಯೆ.

HD Kumaraswamy- CP Yogeshwar- DK Shivakumar
ಖಾಲಿಯೇ ಆಗದ ಸಿಎಂ ಕುರ್ಚಿಗೆ 'ಕೈ' ನಾಯಕರ ಕಸರತ್ತು! (ಸುದ್ದಿ ವಿಶ್ಲೇಷಣೆ)

ಮತ್ತೊಂದು ಕಡೆ ಕುಮಾರಸ್ವಾಮಿ ಮೈತ್ರಿಕೂಟದ ಸರ್ಕಾರದಲ್ಲಿ ಕೇಂದ್ರ ಮಂತ್ರಿ ಆಗಿದ್ದರೂ ರಾಜ್ಯದಲ್ಲಿ ಬಿಜೆಪಿ ನಾಯಕರ ಜತೆ ಅವರ ಸಂಬಂಧಗಳೇನೂ ಉತ್ತಮವಾಗಿಲ್ಲ. ತಮ್ಮನ್ನು ಕಡೆಗಣಿಸಿ ಕೇಂದ್ರ ಮಟ್ಟದಲ್ಲೇ ಎಲ್ಲ ರಾಜಕೀಯ ವ್ಯವಹಾರಗಳನ್ನು ನಡೆಸುತ್ತಿರುವ ಅವರ ಬಗ್ಗೆ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಸೇರಿದಂತೆ ಎಲ್ಲ ನಾಯಕರಿಗೆ ಅಸಮಾಧಾನಗಳಿವೆ. ಪ್ರಮುಖವಾಗಿ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ್, ಮಾಜಿ ಸಚಿವ ಡಾ. ಅಶ್ವತ್ಥನಾರಾಯಣ,ಸೇರಿದಂತೆ ಬಿಜೆಪಿಯಲ್ಲಿರುವ ಒಕ್ಕಲಿಗ ನಾಯಕರಿಗೆ ನಾನಾ ಕಾರಣಗಳಿಗೆ ಅಸಮಧಾನ ಇದ್ದೇ ಇದೆ. ಮೈತ್ರಿಕೂಟದಲ್ಲಿದ್ದರೂ ಸಾಕಷ್ಟು ಅಂತರ ಕಾಯ್ದುಕೊಳ್ಳುತ್ತಿರುವ ಕುಮಾರಸ್ವಾಮಿಯವರ ಜತೆ ಮೈತ್ರಿಯಿಂದ ರಾಜ್ಯ ಬಿಜೆಪಿಗೇನೂ ಲಾಭವಾಗಿಲ್ಲ. ಮೇಲಾಗಿ ಅವರ ಪಕ್ಷವೇ ಅಸ್ತಿತ್ವ ಉಳಿಸಿಕೊಳ್ಳುವ ವಿಚಾರದಲ್ಲಿ ಪರದಾಡುತ್ತಿದೆ. ಹಿರಿಯ ಪ್ರಭಾವಿ ನಾಯಕ ಜಿ.ಟಿ.ದೇವೇಗೌಡ ಇತ್ತೀಚೆಗೆ ಪಕ್ಷದಿಂದ ದೂರವಾಗಿ ಕಾಂಗ್ರೆಸ್ ಗೆ ಹತ್ತಿರವಾಗುತ್ತಿರುವುದು ಇದಕ್ಕೊಂದು ತಾಜಾ ನಿದರ್ಶನ. ಎಂಬ ಅಂಶಗಳನ್ನು ಹೈಕಮಾಂಡ್ ಮುಂದೆ ಇಟ್ಟಿದ್ದಾರೆ. ಆದರೆ ಇದನ್ನು ಬಿಜೆಪಿ ವರಿಷ್ಟರು ಸದ್ಯಕ್ಕೆ ಗಮನಕ್ಕೆ ತೆಗೆದುಕೊಂಡಂತಿಲ್ಲ. ಇದು ಕುಮಾರಸ್ವಾಮಿಗೆ ಅನುಕೂಲಕರವಾಗಿದೆ.

ಶಿವಕುಮಾರ್ ಗೆ ಉಪಚುನಾವಣೆ ಪ್ರತಿಷ್ಠೆಯ ಪ್ರಶ್ನೆ

ಶಿವಕುಮಾರ್ ಗೆ ಈ ಉಪ ಚುನಾವಣೆ ಪ್ರತಿಷ್ಠೆಯ ಪ್ರಶ್ನೆ. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಆಗುವ ಹಂಬಲದಲ್ಲಿರುವ ಅವರಿಗೆ ಚೆನ್ನ ಪಟ್ಟಣದಲ್ಲಿ ಸೋದರನೇ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದರೆ ಈಗಿನ ವ್ಯವಸ್ಥೆಯಲ್ಲಿ ಗೆಲ್ಲಿಸಿಕೊಳ್ಳುವುದು ಸುಲಭ. ಒಮ್ಮೆ ಸುರೇಶ್ ಗೆದ್ದರೆ ತಮ್ಮ ಪರವಾಗಿ ರಾಜಕೀಯ ಚಟುವಟಿಕೆಗಳನ್ನು ನೋಡಿಕೊಳ್ಳಲು ಬಲವಾದ ಆಸರೆ ಸಿಕ್ಕಂತಾಗುತ್ತದೆ. ಉಪ ಚುನಾವಣೆಯಲ್ಲಿ ಕುಮಾರಸ್ವಾಮಿ ಅಭ್ಯರ್ಥಿ ಸೋತರೆ ದಿಲ್ಲಿಯ ಮೈತ್ರಿಕೂಟದ ಸರ್ಕಾರದಲ್ಲಿ ಅವರ ಪ್ರಭಾವವೂ ಕಡಿಮೆ ಆಗುತ್ತದೆ. ಹಳೇ ಮೈಸೂರು ಪ್ರಾಂತ್ಯದಲ್ಲಿ ತಮ್ಮ ಪ್ರಾಬಲ್ಯ ಹೆಚ್ಚಲು ಕಾರಣವಾಗುತ್ತದೆ. ಎಂಬದು ಒಂದು ಲೆಕ್ಕಾಚಾರ. ಈ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಾ ಶಿವಕುಮಾರ್ ಜತೆ ಕೈ ಜೋಡಿಸಿದ್ದಾರೆ. ಪಕ್ಷದ ಉಳಿದ ನಾಯಕರಂತೆ ಡಿಕೆಶಿ ಮುಖ್ಯಮಂತ್ರಿ ಪಟ್ಟಕ್ಕೆ ಹಠ ತೊಟ್ಟು ಗುಂಪುಗಾರಿಕೆ, ಚಟುವಟಿಕೆ ನಡೆಸುತ್ತಿಲ್ಲ ಬಹಿರಂಗವಾಗೇ ತನ್ನ ನಾಯಕತ್ವಕ್ಕೆ ಬೆಂಬಲಿಸಿದ್ದಾರೆ. ಇಂತಹ ಸನ್ನಿವೇಶದಲ್ಲಿ ಹೆಚ್ಚು ಅಪಾಯಕಾರಿ ಎಂದರೆ ಕುಮಾರಸ್ವಾಮಿ ಒಮ್ಮೆ ಉಪ ಚುನಾವಣೆಯಲ್ಲಿ ಅವರ ಅಭ್ಯರ್ಥಿ ಸೋತರೆ ರಾಜಕೀಯವಾಗಿ ದುರ್ಬಲರಾಗುತ್ತಾರೆ. ಒಬ್ಬ ಎದುರಾಳಿ ಕಡಿಮೆ ಆದಂತಾಗುತ್ತದೆ. ಎಂಬುದು ಸಿದ್ದರಾಮಯ್ಯ ಲೆಕ್ಕಚಾರ. ಇನ್ನುಳಿದ ಎರಡು ಕ್ಷೇತ್ರಗಳ ಉಪ ಚುನಾವಣೆ ಎದುರಿಸಲು ಶಿವಕುಮಾರ್ ನೆರವೂ ಅವರಿಗೆ ಬೇಕು. ಕಾಂಗ್ರೆಸ್ ಮೂರೂ ಸ್ಥಾನಗಳನ್ನು ಗೆದ್ದರೆ ಅದೊಂದುಪ್ರತಿಷ್ಠಿತ ಗೆಲುವಾಗುತ್ತದೆ ಅದರಿಂದ ತನ್ನ ಪ್ರಭಾವವೂ ಹೆಚ್ಚುತ್ತದೆ ಎಂಬುದು ಈ ಲೆಕ್ಕಾಚಾರದ ಹಿಂದಿರುವ ಉದ್ದೇಶ.

ಸದ್ಯದಲ್ಲೇ ಮಹಾರಾಷ್ಟ್ರ ವಿಧಾನಸಭೆಗೂ ಚುನಾವಣೆ ನಡೆಯುತ್ತಿದ್ದು ಇಲ್ಲಿನ ಉಪ ಚುನಾವಣೆ ಫಲಿತಾಂಶ ನೇರವಾಗಿ ಅಲ್ಲದಿದ್ದರೂ ಅಲ್ಪ ಮಟ್ಟಿನ ಪ್ರಭಾವ ಬೀರಲಿದೆ. ಹೀಗಾಗಿ ರಾಷ್ಟ್ರೀಯ ಪಕ್ಷಗಳ ನಾಯಕರು ಮಹಾರಾಷ್ಟ್ರ ಕಡೆಗೇ ತಮ್ಮ ಹೆಚ್ಚಿನ ಗಮನ ನೀಡಲಿದ್ದು ರಾಜ್ಯಕ್ಕೆ ಬರುವುದು ಅನುಮಾನ. ಮೂರೂ ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆಯಾದರೆ ಕಾಂಗ್ರೆಸ್ಗೆ ಅನುಕೂಲಗಳು ಹೆಚ್ಚು. ಗೆಲುವಿನ ಹಾದಿಯೂ ಸುಗಮ.

100%

-ಯಗಟಿ ಮೋಹನ್
yagatimohan@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com