ಒಂದು ಕಡೆ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ, ಮತ್ತೊಂದು ಕಡೆ ಸರ್ಕಾರಕ್ಕೆ ತಲೆ ನೋವಾದ ವಕ್ಫ್ ಆಸ್ತಿ ವಿವಾದ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನ ಮುಂಚೂಣಿ ನಾಯಕರು ಕಂಗೆಟ್ಟಿದ್ದಾರೆ.
ಬಹು ಮುಖ್ಯವಾಗಿ ಇಡೀ ವಿವಾದ ಈಗ ವಸತಿ ಸಚಿವ ಜಮೀರ್ ಅಹಮದ್ ಅವರನ್ನು ಗುರಿಯಾಗಿಸಿಕೊಂಡಿರುವುದು, ಜತೆಗೇ ಕಾಂಗ್ರೆಸ್ ನ ಹಿರಿಯ ಸಚಿವರು, ಮುಖಂಡರು ಅವರ ವಿರುದ್ಧ ಹೈಕಮಾಂಡ್ ಗೆ ದೂರು ನೀಡಿರುವುದು ವಿಷಯದ ಗಂಭೀರತೆ ಸೃಷ್ಟಿಸಿದೆ.
ಈ ವಿಚಾರವನ್ನು ಗಂಭಿರವಾಗಿ ಪರಿಗಣಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ರಾಜ್ಯದಲ್ಲಿ ಉಪ ಚುನಾವಣೆ ನಡೆಯುತ್ತಿರುವ ಹೊತ್ತಿನಲ್ಲಿ ಬಿಗಡಾಯಿಸಿರುವ ಈ ವಿವಾದ ಮುಂದಿನ ದಿನಗಳಲ್ಲಿ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಮೇಲೂ ಪರಿಣಾಮ ಬೀರಬಹುದಲ್ಲದೇ ಕಾಂಗ್ರೆಸ್ ಪಕ್ಷ ಸಮಸ್ಯೆ ಎದುರಿಸಬೇಕಾಗಿ ಬರಬಹುದು ಎಂಬ ಅಸಮಾಧಾನ ವ್ಯಕ್ತಪಡಿಸಿರುವುದು ಪ್ರಮುಖ ಬೆಳವಣಿಗೆ.
ಬಹುಮುಖ್ಯವಾಗಿ ಈ ವಿವಾದವನ್ನು ಈಗ ಉಪ ಚುನಾವಣೆಯ ಅಸ್ತ್ರ ಮಾಡಿಕೊಂಡಿರುವ ರಾಜ್ಯ ಬಿಜೆಪಿ ಕಾಂಗ್ರೆಸ್ ವಿರುದ್ಧ ರಾಜ್ಯದಾದ್ಯಂತ ಪ್ರತಿಭಟನೆಗಿಳಿದಿದೆ. ಆದರೆ ಆ ಪಕ್ಷದಲ್ಲೂ ಹೋರಾಟ ರೂಪಿಸುವ ವಿಚಾರದಲ್ಲಿ ಒಮ್ಮತ ಮೂಡಿಲ್ಲ. ಹಿರಿಯ ಮುಖಂಡ ,ಶಾಸಕ ಬಸನವಗೌಡ ಪಾಟೀಲ ಯತ್ನಾಳ್ ತನ್ನದೇ ಪ್ರತ್ಯೇಕ ಹೋರಾಟದ ಹಾದಿ ಹಿಡಿಯುವ ಮೂಲಕ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ ವಿಜಯೇಂದ್ರ ವಿರುದ್ಧ ಬಹಿರಂಗ ಯುದ್ಧ ಘೋಷಿಸಿದ್ದಾರೆ. ವಿಜಾಪುರದಲ್ಲಿ ಅವರು ನಡೆಸಿದ ಎರಡು ದಿನಗಳ ಅಹೋರಾತ್ರಿ ಧರಣಿಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪಾಲ್ಗೊಂಡಿರುವುದು ಬಿಜೆಪಿ ವಲಯಗಳಲ್ಲಿ ಆಶ್ಚರ್ಯಕ್ಕೆ ಕಾರಣವಾಗಿದೆಯಷ್ಟೇ ಅಲ್ಲ, ಹಲವು ಊಹಾಪೋಹಗಳನ್ನು ಹುಟ್ಟುಹಾಕಿದೆ.
ಈ ಮೊದಲು ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕಟ್ಟಾ ಬೆಂಬಲಿಗರೆಂದೇ ಗುರುತಿಸಿಕೊಂಡಿದ್ದ ಶೋಭಾ ಇದೀಗ ಯಡಿಯೂರಪ್ಪ ಹಾಗೂ ಅವರ ಕುಟುಂಬದ ವಿರುದ್ಧ ಬಹಿರಂಗವಾಗಿ ಬಂಡಾಯ ಸಾರಿರುವ ಯತ್ನಾಳ್ ಅವರ ಹೋರಾಟಕ್ಕೆ ಬೆಂಬಲ ಸೂಚಿಸಿ ಧರಣಿಯಲ್ಲಿ ಪಾಲ್ಗೊಂಡಿದ್ದು ಯಾಕೆ? ಎಂಬ ಪ್ರಶ್ನೆ ಸದ್ಯ ಬಿಜೆಪಿ ವಲಯಗಳಲ್ಲಿ ತಲೆ ಎತ್ತಿದೆ.
ಇಡೀ ವಕ್ಫ್ ವಿವಾದವನ್ನು ಬಳಸಿಕೊಂಡು ಅದರ ಪೂರ್ಣ ರಾಜಕೀಯ ಲಾಭ ಪಡೆಯಲು ಯೋಜಿಸಿದ್ದ ರಾಜ್ಯ ಬಿಜೆಪಿಗೆ ಯತ್ನಾಳ್ ಬಂಡಾಯ, ಪ್ರತ್ಯೇಕ ಧರಣಿಯೇ ದೊಡ್ಡ ಸುದ್ದಿಯಾಗಿ ರಾಜ್ಯದ ಗಮನ ಸೆಳೆದಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ವಿಜಾಪುರದಲ್ಲಿ ನಡೆದ ಅಹೋರಾತ್ರಿ ಧರಣಿಯಲ್ಲಿ ರಾಜ್ಯ ಬಿಜೆಪಿಯ ಇನ್ನಿತರೆ ನಾಯಕರು ಪಾಲ್ಗೊಳ್ಳಲಿಲ್ಲ ಎಂಬುದೇನೋ ನಿಜ. ಆದರೆ ಅದರ ಹೊರತಾಗಿಯೂ ಸಂಸತ್ತಿನ ಜಂಟಿ ಸದನ ಸಮಿತಿಯ ಅಧ್ಯಕ್ಷರೇ ಭೇಟಿ ನೀಡಿರುವುದು ಬಿಜೆಪಿಯಲ್ಲಿ ಮುಂದೆ ನಡೆಯಬಹುದಾದ ಬೆಳವಣಿಗೆಗಳ ಬಗ್ಗೆ ಕುತೂಹಲಕ್ಕೆ ಕಾರಣವಾಗಿದೆ.
ವಿಜಾಪುರ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ರೈತರ ಬೆಲೆ ಬಾಳುವ, ಫಸಲು ಕೊಡುವ ಬೃಹತ್ ಪ್ರಮಾಣದ ಕೃಷಿ ಜಮೀನನ್ನು ವಕ್ಫ್ ಆಸ್ತಿ ಎಂದು ಪರಿಗಣಿಸುವ ಮೂಲಕ ರೈತರಿಗೆ ನೋಟಿಸ್ ನೀಡಿರುವುದು ಇದೀಗ ವಿವಾದದ ಮೂಲ, ಇದಷ್ಟೇ ಅಲ್ಲದೇ ಉತ್ತರ ಕರ್ನಾಟಕದ ಹಲವು ಮಠ ಮಂದಿರಗಳಿಗೆ ಸೇರಿದ ಆಸ್ತಿಗಳ ಮೇಲೂ ತನ್ನ ಪ್ರಭುತ್ವ ಸಾಧಿಸಲು ವಕ್ಫ್ ಹೊರಟಿರುವುದು ಆ ಭಾಗದ ಜನರನ್ನು ಕೆರಳಿಸಿದೆ. ಇಲ್ಲಿ ವಕ್ಫ್ ಸರ್ಕಾರಿ ಅಧೀನ ಸಂಸ್ಥೆಯಾದರೂ ಅದು ರೈತರಿಗೆ ನೀಡಿರುವ ನೋಟಿಸ್ ನಿಂದಾಗಿ ಹಲವು ವಿವಾದಗಳು ಸಂಘರ್ಷಗಳು ಉಂಟಾಗುವ ಸಾಧ್ಯತೆಗಳನ್ನು ಸೃಷ್ಟಿ ಮಾಡಿದೆ. ಆರಂಭದ ದಿನಗಳಲ್ಲಿ ಈ ನೋಟೀಸ್ ನೀಡಿಕೆ ಪ್ರಕ್ರಿಯೆಯನ್ನು ಸಮರ್ಥಿಸಿಕೊಂಡಿದ್ದ ಸಚಿವ ಜಮೀರ್ ನಡೆ ಕಾಂಗ್ರೆಸ್ ನಲ್ಲಿನ ಅವರ ವಿರೋಧಿ ಗುಂಪಿಗೆ ಅವರ ವಿರುದ್ಧ ದೂರು ನೀಡಲು ಅವಕಾಶ ಒದಗಿಸಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಂದಿನಿಂದಲೂ ಜಮೀರ್ ಮುಖ್ಯಮಂತ್ರಿ ಪದವಿಯ ಅಧಿಕಾರ ಹಂಚಿಕೆ ಕುರಿತಂತೆ ಸಿದ್ದರಾಮಯ್ಯ ಪರ ಹೇಳಿಕೆಗಳನ್ನು ನೀಡುವ ಮೂಲಕ ತಮ್ಮ ಸ್ವಾಮಿ ನಿಷ್ಠೆ ಪ್ರದರ್ಶಿಸುತ್ತಿರುವುದೇನೋ ನಿಜ. ಇದು ಕಾಂಗ್ರೆಸ್ ನಲ್ಲಿ ವಿವಾದಗಳಿಗೆ ಕಾರಣವಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಕೂಗು ಹಿಂದೆಯೇ ಎದ್ದಿತ್ತು. ಆಗ ಮುಖ್ಯಂತ್ರಿ ಸಿದ್ದರಾಮಯ್ಯ ಅವರೇ ಮುಂದಾಗಿ ವಿವಾದವನ್ನು ತಣ್ಣಗಾಗಿಸುವ ಮೂಲಕ ತಮ್ಮ ಶಿಷ್ಯನನ್ನು ಪಾರು ಮಾಡಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಮೂರು ಕ್ಷೇತ್ರಗಳ ಉಪ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲೇ ಜಮೀರ್ ಈ ವಿವಾದವನ್ನು ಸಮರ್ಥಿಸಿಕೊಂಡಿದ್ದು ಅವಕಾಶಕ್ಕಾಗಿ ಕಾಯುತ್ತಿದ್ದ ಅವರ ವಿರೋಧಿ ಪಡೆ ಚುರುಕಾಗಲು ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಫಲಿತಾಂಶ ನಿರೀಕ್ಷೆಯ ಮಟ್ಟಕ್ಕೆ ಬಾರದಿದ್ದರೆ ಅದಕ್ಕೆ ಜಮೀರ್ ಅವರನ್ನೇ ಹೊಣೆ ಮಾಡಲು ಕಾಂಗ್ರೆಸ್ ನ ಇನ್ನೊಂದು ಗುಂಪು ಈಗಲೇ ತಯಾರಿ ನಡೆಸಿದೆ.
ಈ ಹಿನ್ನಲೆಯಲ್ಲೇ ಇತ್ತಿಚೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಸಂಪರ್ಕಿಸಿದ ಕಾಂಗ್ರೆಸ್ ನ ಹಲವು ನಾಯಕರು ಜಮೀರ್ ಅವರನ್ನು ಸುಮ್ಮನಿರಿಸಿ ಇಲ್ಲದಿದ್ದರೆ ಚುನಾವಣೆ ಮುಗಿದ ನಂತರ ಸಂಪುಟದಿಂದ ಕೈಬಿಡುವಂತೆ ಮುಖ್ಯಮಂತ್ರಿಯವರಿಗೆ ಸೂಚಿಸಿ ಎಂದು ಒತ್ತಢ ಹೇರಿದ್ದಾರೆ. ಸ್ವಂತ ರಾಜ್ಯದಲ್ಲೇ ಪಕ್ಷದಲ್ಲಿ ಬಿಕ್ಕಟ್ಟು ವಿಕೋಪಕ್ಕೆ ತಿರುಗುತ್ತಿರುವುದನ್ನು ಕಂಡ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಂಪರ್ಕಿಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರಿಂದ ಅತಂಕಗೊಂಡ ಅವರು ಕೂಡಲೇ ಅಧಿಕಾರಿಗಳಿಗೆ ಆದೇಶ ನೀಡಿ ರೈತರಿಗೆ ನೀಡಿದ ನೋಟೀಸ್ ನ್ನು ಕೂಡಲೇ ಹಿಂದೆ ಪಡೆಯುವಂತೆ ಸೂಚಿಸಿದ್ದಲ್ಲದೇ ಯಾವುದೇ ಕೃಷಿ ಭೂಮಿಯನ್ನು ವಕ್ಫ್ ಮಂಡಳಿ ವಶಪಡಿಸಿಕೊಳ್ಳುವುದಿಲ್ಲ ಎಂದು ಖಚಿತ ಪಡಿಸಿದ್ದಾರೆ. ಮೇಲ್ನೋಟಕ್ಕೆ ವಿವಾದ ತಣ್ಣಗಾದಂತೆ ಕಂಡು ಬಂದರೂ ಮುಂದಿನ ದಿನಗಳಲ್ಲಿ ಇದು ಮತ್ತೊಂದು ರಾಜಕೀಯ ಸಮಸ್ಯೆಯನ್ನು ಕಾಂಗ್ರೆಸ್ ನಲ್ಲಿ ಹುಟ್ಟುಹಾಕುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ಜಮೀರ್ ಅವರನ್ನು ಕೈಬಿಡುವಂತೆ ಒತ್ತಡ ಹೇರುವ ಮೂಲಕ ಮುಖ್ಯಮಂತ್ರಿ ಕೈ ಕಟ್ಟಿಹಾಕಲು ಕಾಂಗ್ರೆಸ್ ನ ಇನ್ನೊಂದು ಗುಂಪು ತಯಾರಿ ನಡೆಸಿರುವುದನ್ನು ಆ ಪಕ್ಷದ ಮೂಲಗಳೇ ಒಪ್ಪಿಕೊಳ್ಳುತ್ತವೆ.
ವಕ್ಫ್ ಆಸ್ತಿ ವಿವಾದ ಭುಗಿಲೆದ್ದಿರುವ ಹಂತದಲ್ಲೇ ಇದನ್ನು ಕಾಂಗ್ರೆಸ್ ವಿರುದ್ಧದ ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳಲು ಹೊರಟಿದ್ದ ಬಿಜೆಪಿ ಆರಂಭದಲ್ಲೇ ಎಡವಿದ್ದು ಮತ್ತೊಂದು ವಿಪರ್ಯಾಸ. ಒಂದು ಪ್ರಮುಖ ಪ್ರತಿಪಕ್ಷವಾಗಿ ಈ ವಿಷಯವನ್ನು ಕೈಗೆತ್ತಿಕೊಂಡು ರೈತರಿಗೆ ನ್ಯಾಯ ಕೊಡಿಸಬೇಕಿದ್ದ ಆ ಪಕ್ಷ ವಿವಾದದ ಅಧ್ಯಯನಕ್ಕಾಗಿ ಸಮಿತಿ ರಚನೆ ಸಂದರ್ಭದಲ್ಲೇ ಎಡವಿದ್ದು ಮತ್ತೊಂದು ದುರಂತ. ಪ್ರಮುಖವಾಗಿ ವಿಜಾಪುರದ ಸಂಸದ ರಮೇಶ ಜಿಗಜಿಣಗಿ, ಶಾಸಕ ಯತ್ನಾಳ್ ಅವರನ್ನು ಹೊರಗಿಟ್ಟು ಸಮಿತಿ ರಚಿಸಿದ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಕಡೆಗೆ ಹೈಕಮಾಂಡ್ ಚಾಟಿ ಬೀಸಿದಾಗ ಎಚ್ಚೆತ್ತು ಅವರಿಬ್ಬರನ್ನೂ ಸಮಿತಿಯಲ್ಲಿ ಸೇರಿಸಿದರಾದರೂ ಯತ್ನಾಳ್ ಸಮಿತಿ ಸೇರದೇ ತಮ್ಮದೇ ಪ್ರತ್ಯೇಕ ಹೋರಾಟವನ್ನು ಕೈಗೊಳ್ಳುವ ಮೂಲಕ ಪಕ್ಷದ ರಾಜ್ಯಾಧ್ಯಕ್ಷರ ವಿರುದ್ಧ ತಮ್ಮ ಸಮರವನ್ನು ಮುಂದುವರಿಸಿದ್ದಾರೆ.
ಇದಕ್ಕೆ ರಾಜ್ಯ ಬಿಜೆಪಿಯಲ್ಲಿನ ಕೆಲವು ಪ್ರಮುಖ ಮುಖಂಡರು ಪರೋಕ್ಷವಾಗೇ ಬೆಂಬಲಿಸಿದ್ದಾರೆ ಎಂಬುದು ಇಲ್ಲಿ ಗಮನಿಸಬೇಕಾದ ಅಂಶ. ಯತ್ನಾಳ್ ಬಂಡಾಯ ಆರಂಭವಾದಂದಿನಿಂದ ಇಲ್ಲಿಯವರೆಗೆ ಅದನ್ನು ಬಗೆಹರಿಸಲು ಬಿಜೆಪಿಯ ದಿಲ್ಲಿ ಮುಖಂಡರೂ ಪ್ರಯತ್ನ ನಡೆದೇ ಇರುವುದರ ಹಿಂದೆ ಅನೇಕ ನಿಗೂಢಗಳಿವೆ. ಇಂಥದೊಂದು ಬೆಳವಣಿಗೆಯ ಮಾಹಿತಿ ಇದ್ದರೂ ವರಿಷ್ಠರು ಮೌನ ವಹಿಸಿರುವುದರ ಅರ್ಥವಾದರೂ ಏನು? ಎಂಬುದೇ ಇನ್ನೂ ಚಿದಂಬರ ರಹಸ್ಯವಾಗಿ ಉಳಿದಿದೆ. ವರಿಷ್ಠ ಮಂಡಳಿಯಲ್ಲಿರುವವರ ಬೆಂಬಲ ಇಲ್ಲದೇ ಯತ್ನಾಳ್ ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತು ಹಿರಿಯ ನಾಯಕ ಯಡಿಯೂರಪ್ಪ ನವರ ವಿರುದ್ಧ ಬಹಿರಂಗ ಹೇಳಿಕೆಗಳನ್ನು ನೀಡಲು ಸಾಧ್ಯವೆ ಎಂಬ ಪ್ರಶ್ನೆಯೂ ಈಗ ತಲೆ ಎತ್ತಿದೆ.
ಈ ಬೆಳವಣಿಗೆಗಳು ಒಂದು ಕಡೆಯಾದರೆ, ಯಡಿಯೂರಪ್ಪನವರ ಪಾಳೇಯದಲ್ಲಿ ಗುರುತಿಸಿಕೊಂಡಿರುವ ಮಾಜಿ ಸಚಿವ ರೇಣುಕಾಚಾರ್ಯ,ಶಾಸಕ ಮಾಡಾಳು ಮಲ್ಲಿಕಾರ್ಜುನ ಮೊದಲಾದವರು ಯತ್ನಾಳ್ ಹೇಳಿಕೆಗಳ ವಿರುದ್ಧ ಸಿಡಿದೆದ್ದು ತೊಡೆ ತಟ್ಟಿರುವುದು ಮುಂದಿನ ದಿನಗಳಲ್ಲಿ ಬಿಜೆಪಿಯಲ್ಲಿ ಬಹಿರಂಗ ಸಮರ ನಡೆಯುವ ಸಾಧ್ಯತೆಗಳನ್ನು ಹುಟ್ಟುಹಾಕಿದೆ. ಹೀಗಾಗಿ ರಾಜ್ಯ ಬಿಜೆಪಿಯೂ ಗೊಂದಲಗಳಿಂದ ದೂರವಾಗಿಲ್ಲ. ಸರ್ಕಾರದ ವಿರುದ್ಧ ಆ ಪಕ್ಷದ ನಾಯಕರು ನಡೆಸುತ್ತಿರುವ ಹೋರಾಟ ನಿರೀಕ್ಷಿತ ಮಟ್ಟದಲ್ಲಿ ಪರಿಣಾಮಕಾರಿ ಫಲಿತಾಂಶ ನೀಡುತ್ತಿಲ್ಲ. ಇದು ಸದ್ಯದ ಸ್ಥಿತಿ.
ಉಪ ಚುನಾವಣೆ ನಡಡೆಯುತ್ತಿರುವ ಚೆನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ದೇವೇಗೌಡರು ತಮ್ಮ ಅನಾರೋಗ್ಯವನ್ನೂ ಬದಿಗಿಟ್ಟು ಮೊಮ್ಮ ನಿಖಿಲ್ ಪರ ಚುನಾವಣಾ ಪ್ರಚಾರಕ್ಕಿಳಿದಿದ್ದಾರೆ. ಗೌಡರ ಬಗ್ಗೆ ಇರುವ ಅನುಕಂಪ, ಗೌರವ ನಿಖಿಲ್ ಪರ ಮತಗಳಾಗಿ ಪರಿವರ್ತನೆ ಅದಿತೆ ಎಂಬುದು ಇನ್ನಷ್ಟೇ ಕಾದು ನೋಡಬೇಕು. ಅದೇನೇ ಇರಲಿ ಕಾಂಗ್ರೆಸ್ ನ ಸ್ಥಳೀಯ ನಾಯಕರು ಇದರಿಂದ ಸ್ವಲ್ಪ ಮಟ್ಟಿಗೆ ಕಂಗೆಟ್ಟಿರುವುದಂತೂ ಸತ್ಯ.
ಶಿಗ್ಗಾವಿಯ ಉಪ ಚುನಾವಣೆಯನ್ನು ಮುಖ್ಯಂತ್ರಿ ಸಿದ್ದರಾಮಯ್ಯ ಪ್ರತಿಷ್ಠೆಯ ಸವಾಲಾಗಿ ಸ್ವೀಕರಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಪಠಾಣ್ ಅವರನ್ನು ಗೆಲ್ಲಿಸಿಕೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಈ ಕ್ಷೇತ್ರದಲ್ಲಿ ಅವರದೇ ಸಮುದಾಯದ ಮತದಾರರು ಗಣನೀಯ ಸಂಖ್ಯೆಯಲ್ಲಿರುವುದೂ ಇದಕ್ಕೆ ಕಾರಣ. ಜತೆಗೇ ಸಚಿವ ಜಮೀರ್ ಅಹಮದ್ ಈ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರದ ಉಸ್ತುವಾರಿ , ಜವಾಬ್ದಾರಿ ಹೊತ್ತಿದ್ದಾರೆ. ಚುನಾವಣೆಯ ಫಲಿತಾಂಶದ ಮೇಲೆ ಅವರ ಸಚಿವ ಸ್ಥಾನದ ಅಸ್ತಿತ್ವ ನಿಂತಿದೆ. ಇತ್ತೀಚೆಗೆ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಕೈಗೊಂಡ ಸಿದ್ದರಾಮಯ್ಯ ತಾನು ಮುಖ್ಯಮಂತ್ರಿಯಾಗಿ ಮುಂದುವರಿಯಬೇಕಾದರೆ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿ ಎಂದು ಕರೆ ಕೊಟ್ಟಿರುವುದರ ಹಿನ್ನಲೆಯೂ ಇದೇ ಆಗಿದೆ.
ಸಂಡೂರಿನಲ್ಲಿ ಬಿಜೆಪಿ ಅಭ್ಯರ್ಥಿ ಪರ ಜನಾರ್ದನ ರೆಡ್ಡಿ, ಶ್ರೀರಾಮುಲು ಜೋಡಿ ಮತ್ತೆ ಒಟ್ಟಾಗಿದ್ದು ಪರಿಣಾಮಗಳನ್ನು ಕಾದು ನೋಡಬೇಕಿದೆ.ಒಂದಂತೂ ಸ್ಪಷ್ಟ ಉಪ ಚುನಾವಣೆ ಫಲಿತಾಂಶ ಹಲವು ರಾಜಕೀಯ ಬೆಳವಣಿಗೆಗಳಿಗೆ ಕಾರಣವಾಗಲಿದೆ. ಇದೇ ವೇಳೆ ರಾಜ್ಯ ಸಚಿವ ಸಂಪುಟದಲ್ಲಿರುವ ಅಬ್ಕಾರಿ ಸಚಿವ ತಿಮ್ಮಾಪುರ್ ವಿರುದ್ಧ ಮದ್ಯದಂಗಡಿಗಳ ಮಾಲೀಕರು ಸಿಡಿದೆದ್ದಿರುವುದು ಹೊಸ ಬೆಳವಣಿಗೆ. ಸಚಿವರ ವಿರುದ್ಧ ಲಂಚದ ಆರೋಪಗಳನ್ನು ಮಾಡಲಾಗಿದೆ. ಹಾಗೆ ನೋಡಿದರೆ ಇದುವರೆಗಿನ ಎಲ್ಲ ಚುನಾವಣೆಗಳಲ್ಲೂ ಮದ್ಯದ ಲಾಬಿ ವಿವಿಧ ರಾಜಕೀಯ ಪಕ್ಷಗಳಿಗೆ ಯೋಗ್ಯತಾನುಸಾರ ಅಗತ್ಯವಾದ ಎಲ್ಲ ಬೆಂಬಲಗಳನ್ನು ನೀಡುತ್ತಾ ಬಂದಿರುವುದು ಗುಟ್ಟೇನಲ್ಲ.ಒಂದು ಕಾಲಕ್ಕೆ ಇಡೀ ಲಾಬಿ ಸರ್ಕಾರವನ್ನು ನಿಯಂತ್ರಿಸುತ್ತಿತ್ತು. ಈಗ ಪರಿಸ್ಥಿತಿ ಬದಲಾಗಿದೆ. ಆ ಜಾಗವನ್ನು ರಿಯಲ್ ಎಸ್ಟೇಟ್ ಲಾಬಿ ಅವರಿಸಿಕೊಂಡಿದೆ.
Advertisement