ಮುಗಿದ ಉಪ ಸಮರ; ಕಾಂಗ್ರೆಸ್- ಬಿಜೆಪಿಯಲ್ಲಿ ರಾಜಕೀಯ ಲೆಕ್ಕಾಚಾರ (ಸುದ್ದಿ ವಿಶ್ಲೇಷಣೆ)

ಚುನಾವಣೆಯಲ್ಲಿ ಮೊದಮೊದಲು ಮೈತ್ರಿ ಅಭ್ಯರ್ಥಿ ಪರವಾಗಿ ಪ್ರಚಾರಕ್ಕೆ ಅಷ್ಟಾಗಿ ಆಸಕ್ತಿಯನ್ನು ತೋರಿಸದ ಬಿಜೆಪಿಯ ಒಂದು ವರ್ಗದ ನಾಯಕರು ಕಡೆಗೆ ಹೈಕಮಾಂಡ್ ಎಚ್ಚರಿಕೆಯ ಚಾಟಿ ಬೀಸಿದ ನಂತರವಷ್ಟೇ ಬೆದರಿ ಪ್ರಚಾರದ ಕಣಕ್ಕಿಳಿದಿದ್ದು ವಿಶೇಷ.
File photo
ಬಿಜೆಪಿ-ಕಾಂಗ್ರೆಸ್ ಚಿಹ್ನೆ online desk
Updated on

ಏನಾಗಬಹುದು….? ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯ ಮತದಾನ ಮುಗಿದು ಅಭ್ಯರ್ಥಿಗಳ ಭವಿಷ್ಯ ಮತ ಯಂತ್ರಗಳಲ್ಲಿ ಭದ್ರವಾಗಿದೆ. ಇದರ ಹಿಂದೆಯೇ ಎದ್ದಿರುವ ಕುತೂಹಲದ ಪ್ರಶ್ನೆ ಎಂದರೆ ಚುನಾವಣಾ ಫಲಿತಾಂಶ ಏನಾಗಬಹುದು? ಫಲಿತಾಂಶದ ನಂತರ ರಾಜ್ಯ ರಾಜಕಾರಣದ ದಿಕ್ಕು ಬದಲಾಗುತ್ತದೆಯೆ? ಎಂಬುದು.

ಫಲಿತಾಂಶ ಪ್ರಕಟವಾಗಲು ಇನ್ನೂ ಒಂದುವಾರ ಬಾಕಿ ಇದೆಯಾದರೂ, ಚುನಾವಣಾ ರಾಜಕೀಯದ ಕಾವುಇನ್ನೂ ಇಳಿದಿಲ್ಲ. ಸಾಮಾನ್ಯವಾಗಿ ಉಪ ಚುನಾವಣೆ ಫಲಿತಾಂಶ ಆಳುವ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ರಾಜ್ಯ ರಾಜಕಾರಣದ ಮೇಲೆಯೂ ಮಹತ್ವದ ಪರಿಣಾಮ ಬೀರಿದ ಸಾಧ್ಯತೆಗಳು ತೀರಾ ಕಡಿಮೆ ಎಂಬುದೇನೋ ಸರಿ.

ಆದರೆ ಸದ್ಯದ ರಾಜಕೀಯ ಪರಿಸ್ಥಿತಿಯನ್ನುಹಾಗೂ ನಡೆಯುತ್ತಿರುವ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಉಪ ಚುನಾವಣೆ ಫಲಿತಾಂಶ ರಾಜ್ಯದಲ್ಲಿ ಹೊಸ ರಾಜಕೀಯ ಸಮೀಕರಣಕ್ಕೆ ಹಾಗೂ ಬದಲಾವಣೆಗೆ ಮುನ್ನುಡಿ ಆಗಬಹುದು ಎಂಬುದು ಗೋಚರಿಸುತ್ತದೆ.

ಆಡಳಿತ ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಪಟ್ಟಕ್ಕಾಗಿ ನಾಯಕರುಗಳ ನಡುವೆ ನಡೆಯುತ್ತಿರುವ ಶೀತಲ ಸಮರ, ಪ್ರತಿಪಕ್ಷ ಬಿಜೆಪಿಯಲ್ಲಿ ಹಾಲಿ ರಾಜ್ಯಾಧ್ಯಕ್ಷರ ವಿರುದ್ಧವೇ ಆರಂಭಗೊಂಡಿರುವ ಬಂಡಾಯ, ಬಿಜೆಪಿ ಜತೆಗಿನ ಮೈತ್ರಿಯ ನಡುವೆಯೂ ಸ್ವತಂತ್ರ ಅಸ್ತಿತ್ವ ಉಳಿಸಿಕೊಳ್ಳಲು ಜೆಡಿಎಸ್ ನಡೆಸುತ್ತಿರುವ ಪರದಾಟ ಇವೇ ಮೊದಲಾದ ಸಂಗತಿಗಳಿಗೆ ಈ ಉಪ ಚುನಾವಣೆ ಫಲಿತಾಂಶ ಸ್ಪಷ್ಟ ಉತ್ತರ ನೀಡುವ ನಿರೀಕ್ಷೆ ಇದೆ.

ರಾಜ್ಯದಲ್ಲಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮುಂದಿನ ಮೇ ತಿಂಗಳಿಗೆ ಎರಡು ವರ್ಷ ಪೂರ್ಣವಾಗಲಿದೆ. ಪಕ್ಷದಲ್ಲಿ ನಡೆದಿದೆ ಎಂದು ಹೇಳಲಾಗುತ್ತಿರುವ ಆಂತರಿಕ ಒಪ್ಪಂದದ ಪ್ರಕಾರ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನ ತ್ಯಜಿಸಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಅಧಿಕಾರ ಬಿಟ್ಟುಕೊಡಬೇಕಿದೆ. ಆದರೆ ಸದ್ಯದ ರಾಜಕೀಯ ಸ್ಥಿತಿಗತಿ ಗಮನಿಸಿದರೆ ಅಧಿಕಾರ ಹಸ್ತಾಂತರ ಆಗುವ ಯಾವುದೇ ಸೂಚನೆಗಳು ಇಲ್ಲ. ಉಪ ಚುನಾವಣೆ ನಡೆದಿರುವ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಫಲಿತಾಂಶ ಏನಾಗುತ್ತದೆ? ಎಂಬುದೂ ಕೂಡ ಆ ಪಕ್ಷದಲ್ಲಿನ ಮುಂದಿನ ಎಲ್ಲ ಬೆಳವಣಿಗೆಗಳನ್ನು ನಿರ್ಣಯಿಸುತ್ತದೆ.

File photo
ವಕ್ಫ್ ಆಸ್ತಿ ವಿವಾದ: ಕಾಂಗ್ರೆಸ್ ಗೆ ಇಕ್ಕಟ್ಟು, ಬಿಜೆಪಿಗೆ ಕಸಿವಿಸಿ (ಸುದ್ದಿ ವಿಶ್ಲೇಷಣೆ)

ಮೂರು ಕ್ಷೇತ್ರಗಳ ಪೈಕಿ ಚೆನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ತಮ್ಮ ಇಡೀ ಗಮನವನ್ನು ಅವರು ಈ ಕ್ಷೇತ್ರದ ಮೇಲೆಯೇ ಹೆಚ್ಚಾಗಿ ಕೇಂದ್ರೀಕರಿಸಿದ್ದಲ್ಲದೇ ಇದನ್ನೊಂದು ರಾಜಕೀಯ ಸವಾಲಾಗಿ ತೆಗೆದುಕೊಂಡಿರುವುದರಿಂದ ಸಹಜವಾಗೇ ಫಲಿತಾಂಶದತ್ತ ಗಮನ ಕೇಂದ್ರೀಕೃತವಾಗಿದೆ. ಒಕ್ಕಲಿಗರೇ ಪ್ರಧಾನವಾಗಿರುವ ಈ ಕ್ಷೆತ್ರ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೂ ಸೇರಿರುವುದರಿಂದ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಸೋದರ ಡಿ.ಕೆ.ಸುರೇಶ್ ಅವರ ಸೋಲಿನಿಂದಾದ ರಾಜಕೀಯ ನಷ್ಟವನ್ನು ತುಂಬಿಕೊಳ್ಳುವ ಮೂಲಕ ಈ ಭಾಗದಲ್ಲಿ ತಮ್ಮ ಪ್ರಾಬಲ್ಯ ಸ್ಥಾಪಿಸಲು ಶಿವಕುಮಾರ್ ಪ್ರಯತ್ನ ನಡೆಸಿದ್ದು ಅದಕ್ಕಾಗಿಯೇ ಈ ಚುನಾವಣೆಯನ್ನು ಪ್ರತಿಷ್ಠೆಯ ಸವಾಲಾಗಿ ಸ್ವೀಕರಿಸಿದ್ದೂ ಆಗಿದೆ.

ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಯೋಗೀಶ್ವರ್ ಗೆದ್ದರೆ ತಮ್ಮ ಪರಂಪರಾನುಗತ ರಾಜಕೀಯ ಎದುರಾಳಿ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ಪ್ರಾಬಲ್ಯದ ವಿರುದ್ಧ ಜಯ ಸಾಧಿಸಿದ ಕೀರ್ತಿ ಶಿವಕುಮಾರ್ ಅವರಿಗೆ ಸಂದಂತಾಗುತ್ತದೆ.

ಒಂದು ವೇಳೆ ಫಲಿತಾಂಶ ಏರುಪೇರಾದರೆ ಕಾಂಗ್ರೆಸ್ ನಲ್ಲೇ ಅವರ ಪ್ರಾಬಲ್ಯಕ್ಕೆ ಪೆಟ್ಟು ಬಿದ್ದಂತಾಗುತ್ತದೆ. ಉಪ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಕ್ಷೇತ್ರ ಕೆಲವು ಕಡೆಗಳಲ್ಲಿ ಶಿವಕುಮಾರ್ ಅವರನ್ನು ಮುಂದಿನ ಮುಖ್ಯಮಂತ್ರಿ ಎಂದು ಅವರ ಬೆಂಬಲಿಗರು ಬಿಂಬಿಸಿದ್ದರು. ಅದೇನೆ ಇರಲಿ ಫಲಿತಾಂಶ ಅವರ ರಾಜಕೀಯ ಅಸ್ತಿತ್ವಕ್ಕೆ ದೊಡ್ಡ ಸವಾಲಾಗುವ ಸಾಧ್ಯತೆಗಳನ್ನು ಸೃಷ್ಟಿ ಮಾಡುವುದಂತೂ ನಿಜ.

ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಇಲ್ಲಿ ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು ಅವರಿಗೆ ಇದು ಮೂರನೇ ಚುನಾವಣೆ. ಮೊಮ್ಮಗನ ಪರ ಪ್ರಚಾರಕ್ಕೆ ಅನಾರೋಗ್ಯದ ನಡುವೆಯೂ ಗೌಡರು ರಣಾಂಗಣಕ್ಕೆ ಇಳಿದು ಕಾಂಗ್ರೆಸ್ ವಿರುದ್ಧ ಅಬ್ಬರಿಸಿದ್ದು, ಅವರ ಅನಾರೋಗ್ಯದ ಪರಿಸ್ಥಿತಿಯನ್ನೇ ಅನುಕಂಪದ ಅಸ್ತ್ರವಾಗಿ ಜೆಡಿಎಸ್ ಪ್ರಚಾರಕ್ಕೆ ಬಳಸಿಕೊಂಡಿದೆ. ಇದರಿಂದ ಒಂದಷ್ಟರ ಮಟ್ಟಿಗೆ ಆ ಪಕ್ಷಕ್ಕೆ ಲಾಭ ತಂದುಕೊಡುವ ನಿರೀಕ್ಷೆಯಂತೂ ಇದೆ. ಆದರೆ ಅದರ ಪ್ರಮಾಣ ಎಷ್ಟು ಎಂಬುದು ಫಲಿತಾಂಶ ಹೊರ ಬಿದ್ದ ನಂತರವಷ್ಟೇ ಗೊತ್ತಾಗಲಿದೆ.

ಚುನಾವಣೆಯಲ್ಲಿ ಮೊದಮೊದಲು ಮೈತ್ರಿ ಅಭ್ಯರ್ಥಿ ಪರವಾಗಿ ಪ್ರಚಾರಕ್ಕೆ ಅಷ್ಟಾಗಿ ಆಸಕ್ತಿಯನ್ನು ತೋರಿಸದ ಬಿಜೆಪಿಯ ಒಂದು ವರ್ಗದ ನಾಯಕರು ಕಡೆಗೆ ಹೈಕಮಾಂಡ್ ಎಚ್ಚರಿಕೆಯ ಚಾಟಿ ಬೀಸಿದ ನಂತರವಷ್ಟೇ ಬೆದರಿ ಪ್ರಚಾರದ ಕಣಕ್ಕಿಳಿದಿದ್ದು ವಿಶೇಷ. ಆದರೆ ಆರಂಭದ ದಿನಗಳಿಂದಲೂ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ ಪಕ್ಷದ ಹಿರಿಯ ನಾಯಕ, ಮಾಜಿ ಮಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಪುತ್ರ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಕ್ಷೇತ್ರದಲ್ಲಿ ಅಲ್ಲಲ್ಲಿ ಚೆದುರಿದಂತೆ ಇರುವ ಬಿಜೆಪಿ ಪರವಾದ ಮತಗಳನ್ನು ಒಟ್ಟುಗೂಡಿಸುವಲ್ಲಿ ಶ್ರಮಿಸುವ ಮೂಲಕ ಮೈತ್ರಿ ಧರ್ಮವನ್ನು ಪಾಲನೆ ಮಾಡಿದರು ಎಂದೇ ಹೇಳಬಹುದು.

ಚೆನ್ನಪಟ್ಟಣದಲ್ಲಿ ಪುತ್ರ ಗೆದ್ದರೆ ಕೇಂದ್ರ ಸಚಿವರೂ ಆಗಿರುವ ಕುಮಾರಸ್ವಾಮಿ ಮೈತ್ರಿಕೂಟದಲ್ಲಿ ಮತ್ತಷ್ಟು ಗಟ್ಟಿಯಾಗುತ್ತಾರೆ. ಒಂದುವೇಳೆ ಫಲಿತಾಂಶ ಪ್ರತಿಕೂಲವಾದರೆ ಬಿಜೆಪಿ ಮೈತ್ರಿಯಿಂದ ನಿಧಾನವಾಗಿ ದೂರವಾಗುವ ಮೂಲಕ ತಮ್ಮಪಕ್ಷದ ಅಸ್ತಿತ್ವವನ್ನು ಗಟ್ಟಿಗೊಳಿಸಿಕೊಳ್ಳುವ ಕೆಲಸಕ್ಕೆ ಮುಂದಾಗುತ್ತಾರೆ.

ಹೀಗಾಗಿ ಯವುದೇ ದೃಷ್ಟಿಯಿಂದ ನೋಡಿದರೂ ಮುಂದಿನ ವಾರ ಪ್ರಕಟವಾಗಲಿರುವ ಚೆನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣಾ ಫಲಿತಾಂಶ ರಾಜ್ಯ ರಾಜಕಾರಣದ ದಿಕ್ಕನ್ನು ನಿರ್ಧರಿಸಲಿದೆ. ಇನ್ನುಳಿದಂತೆ ಶಿಗ್ಗಾವಿಯಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪುತ್ರ ಭರತ್ ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ. ಇಲ್ಲಿ ಅಭ್ಯರ್ಥಿ ಆಯ್ಕೆಯಲ್ಲಿ ಮೊದಲಿನಿಂದಲೂ ಇದ್ದ ಅಸಮಾಧಾನ ಚುನಾವಣೆ ಸಮೀಪಿಸಿದರೂ ಇತ್ಯರ್ಥವಾಗಿರಲಿಲ್ಲ.

ಚುನಾವಣೆ ನಂತರ ಬಿಜೆಪಿಯಲ್ಲಿನ ಪ್ರತಿಕ್ರಿಯೆಗಳನ್ನು ಗಮನಿಸಿದರೆ ಅಂತಹ ಆತ್ಮವಿಶ್ವಾಸ ಕಾಣುತ್ತಿಲ್ಲ. ಸ್ವತಹಾ ಬಸವರಾಜ ಬೊಮ್ಮಾಯಿಯವರೇ ನೀಡಿರುವ ಪ್ರತಿಕ್ರಿಯೆಯ ಬಗ್ಗೆ ಆಳಕ್ಕಿಳಿದು ಗಮನಿಸಿದರೆ ಪುತ್ರನ ಗೆಲುವಿನ ಬಗ್ಗೆ ಅವರಲ್ಲೂ ಅಂತಹ ಆತ್ಮವಿಶ್ವಾಸ ಕಾಣುತ್ತಿಲ್ಲ. ಲಿಂಗಾಯಿತರ ಒಳಪಂಗಡದ ಭಿನ್ನಾಭಿಪ್ರಾಯಗಳು ನಿಜಕ್ಕೂ ಈ ಚುನಾವಣೆಯಲ್ಲಿ ವ್ಯಕ್ತವಾಗಿವೆಯೆ? ಎಂಬುದು ಫಲಿತಾಂಶ ಬಂದ ನಂತರವಷ್ಟೇ ಖಚಿತವಾಗಿ ಗೊತ್ತಾಗಲಿದೆ. ಆದರೂ ಬಿಜೆಪಿಗಿರುವ ಒಂದೇ ಒಂದು ಆತ್ಮ ವಿಶ್ವಾಸ ಎಂದರೆ ಈ ಚುನಾವಣೆಯಲ್ಲಿ ಹಿಂದೂ ಮತಗಳ ಕ್ರೂಢೀಕರಣವಾಗಿದೆ ಎಂಬುದು. ವಕ್ಫ ಆಸ್ತಿ ಕುರಿತಂತೆ ಚುನಾವಣೆ ಹೊತ್ತಿನಲ್ಲೇ ಶುರುವಾದ ವಿವಾದ ಮತ್ತು ಅಭ್ಯರ್ಥಿಆಯ್ಕೆ ಕುರಿತಂತೆ ಕಾಂಗ್ರೆಸ್ ನಲ್ಲೇ ಮೂಡಿದ್ದ ಅಸಮಾಧಾನ, ಕಡೇ ಘಳಿಗೆಯಲ್ಲಿ ಕಾಂಗ್ರೆಸ್ ನ ಮಾಜಿ ಶಾಸಕ ಅಜಂಪೀರ್ ಖಾದ್ರಿ ಅಂಬೇಡ್ಕರ್ ಅವರ ಕುರಿತು ನೀಡಿದ ವಿವಾದಾತ್ಮಕ ಹೇಳಿಕೆ ಲಾಭ ಹಿಂದೂ ಮತಗಳನ್ನು ಒಗ್ಗೂಡಿಸಲು ನೆರವಾಗಿದೆ ಎಂಬ ಲೆಕ್ಕಾಚಾರ ಬಿಜೆಪಿಯಲ್ಲಿದ್ದು ಇದು ಗೆಲುವಿಗೆ ಸಹಕಾರಿ ಆಗಲಿದೆ ಎಂಬ ಆತ್ಮ ವಿಶ್ವಾಸ ಮನೆ ಮಾಡಿದೆ. ಅಭ್ಯರ್ಥಿ ಭರತ್ ಬೊಮ್ಮಾಯಿ ಕೆಲವೇ ಸಾವಿರ ಮತಗಳ ಅಂತರದಲ್ಲಿ ಗೆಲ್ಲಬಹುದು ಎಂಬ ಲೆಕ್ಕಾಚಾರ ಬಿಜೆಪಿಯಲ್ಲಿದೆ.

File photo
ಉಪ ಚುನಾವಣೆ ನಂತರ ರಾಜ್ಯ ರಾಜಕಾರಣದಲ್ಲಿ ಬದಲಾವಣೆ? (ಸುದ್ದಿ ವಿಶ್ಲೇಷಣೆ)

ಇನ್ನುಳಿದಂತೆ ಬಳ್ಳಾರಿ ಜಿಲ್ಲೆಯ ಸಂಡೂರು ಕ್ಷೇತ್ರದ ಉಪ ಚುನಾವಣೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಷ್ಠೆಯ ಪ್ರಶ್ನೆಯಾಗಿ ತೆಗೆದುಕೊಂಡಿದ್ದಾರೆ. ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಶಾಸಕ,ಮಾಜಿ ಸಚಿವ ಜನಾರ್ಧನ ರೆಡ್ಡಿ ಹಾಗೂ ಮಾಜಿ ಸಚಿವ ಶ್ರೀರಾಮುಲು ಹಳೆಯ ಭಿನ್ನಮತವನ್ನು ಮರೆತು ಪ್ರಚಾರದ ಕಣಕ್ಕೆ ಇಳಿದಿದ್ದು ಪ್ರಮುಖ ಸಂಗತಿ. ಕಾಂಗ್ರೆಸ್ ಅಭ್ಯರ್ಥಿಯಾಗಿ ಸಂಸದ ತುಕಾರಾಂ ಅವರ ಪತ್ನಿ ಶ್ರೀಮತಿ ಅನ್ನಪೂರ್ಣ ಅವರನ್ನು ಕಣಕ್ಕಿಳಿಸಿದ್ದರ ಬಗ್ಗೆ ಆ ಪಕ್ಷದಲ್ಲಿ ಒಂದಷ್ಟರ ಮಟ್ಟಿಗೆ ಇದ್ದ ಅತೃಪ್ತಿ ಚುನಾವಣೆಯ ಕಡೇ ದಿನದ ವರೆಗೂ ಇತ್ಯರ್ಥವಾಗಲಿಲ್ಲ.ಈ ಚುನಾವಣೆಯ ಮೂಲಕ ರೆಡ್ಡಿ ಮತ್ತು ಶ್ರೀರಾಮುಲು ತಮ್ಮ ಅಸ್ತಿತ್ವ ಪುನರ್ ಸ್ಥಾಪಿಸಲು ಪ್ರಯತ್ನ ನಡೆಸಿದ್ದು ಅದರ ಫಲಿತಾಂಶ ಕಾದು ನೋಡಬೇಕಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರ ನಾಯಕತ್ವಕ್ಕೆ ಮೂರೂ ಕ್ಷೇತ್ರಗಳ ಉಪ ಚುನಾವಣೆ ಒಂದು ರೀತಿಯ ಅಗ್ನಿ ಪರೀಕ್ಷೆ. ಅವರ ನಾಯಕತ್ವದ ವಿರುದ್ಧ ಪಕ್ಷದೊಳಗೇ ಹಿರಿಯ ಮುಖಂಡ ಬಸವನಗೌಡ ಪಾಟೀಲ ಯತ್ನಾಳ್,ಸೇರಿದಂತೆ ಕೆಲವರು ಎದ್ದಿರುವ ಬಹಿರಂಗ ಬಂಡಾಯಕ್ಕೆ ಫಲಿತಾಂಶ ಉತ್ತರ ನೀಡಲಿದೆ. ಈ ಸಂಗತಿಯನ್ನು ಮುಂಚಿತವಾಗಿ ಅರಿತೇ ಅವರು ತಂತ್ರ ರೂಪಿಸಿದ್ದು ಉಪ ಚುನಾವಣೆಯಲ್ಲಿ ಮೂರೂ ಕ್ಷೇತ್ರಗಳಲ್ಲಿ ಜಯ ಸಾಧಿಸುವ ನಂಬಿಕೆ ಹೊಂದಿದ್ದಾರೆ. ಹಾಗೇನಾದರೂ ಆದರೆ ಇದು ಅವರ ನಾಯಕತ್ವಕ್ಕೆ ಸಿಕ್ಕ ಜಯವಾದಂತಾಗುತ್ತದೆ. ಹಾಗೆಯೇ ಪಕ್ಷದೊಳಗಿನ ಅವರ ವಿರೋಧಿಗಳ ಸದ್ದೂ ಅಡಗಿದಂತಾಗುತ್ತದೆ.

ಈ ಹಿಂದೆ ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ನಡೆದ ಉಪ ಚುನಾವಣೆಗಳಲ್ಲಿ ಪಕ್ಷದಲ್ಲಿ ಯಾವುದೇ ಸ್ಥಾನಮಾನಗಳನ್ನು ಹೊಂದಿರದಿದ್ದರೂ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ್ದ ವಿಜಯೇಂದ್ರ ಅವರಿಗೆ ಈ ಚುನಾವಣೆ ಹೊಸದಲ್ಲ. ಆದರೆ ಈಗಿನದು ವಿಭಿನ್ನ ಪರಿಸ್ಥಿತಿ. ಈ ಅಗ್ನಿ ಪರೀಕ್ಷೆಯಲ್ಲಿ ಅವರು ಗೆದ್ದು ಬಂದರೆ ಪಕ್ಷದಲ್ಲಿ ಅಷ್ಟೇ ಅಲ್ಲ ರಾಜ್ಯ ರಾಜಕಾಣದಲ್ಲಿ ಅವರ ಪ್ರಾಬಲ್ಯ ಗಟ್ಟಿಯಾಗುತ್ತದೆ.

ನವೆಂಬರ್ 23 ರಂದು ಪ್ರಕಟವಾಗಲಿರುವ ಉಪ ಚುನಾವಣೆ ಫಲಿತಾಂಶದ ನಂತರ ರಾಜ್ಯದಲ್ಲಿ ಆರಂಭವಾಗಲಿರುವ ರಾಜಕೀಯ ಬೆಳವಣಿಗೆಗಳತ್ತ ೀಗ ಎಲ್ಲರ ಗಮನ ನೆಟ್ಟಿದೆ. ಏನತ್ಮಧ್ಯೆ ಉಪ ಚುನಾವಣೆ ಮತದಾನ ಪ್ರಕ್ರಿಯೆ ಮುಗಿದ ನಂತರ ಚೆನ್ನಪಟ್ಟಣ ಕಾಂಗ್ರೆಸ್ ಅಭ್ಯರ್ಥಿ ಸಿಪಿ.ಯೋಗೀಶ್ಚರ್ ನೀಡಿರುವ ಪ್ರತಿಕ್ರಿಯೆಯಲ್ಲಿ ಅಂತಹ ಆತ್ಮ ವಿಶ್ವಾಸ ಏನೂ ಕಾಣುತ್ತಿಲ್ಲ. ಪ್ರಚಾರಕ್ಕೆ ಬಂದಿದ್ದ ಸಚಿವ ಜಮೀರ್ ಅಹಮದ್ ದೇವೇಗೌಡರ ಕುಟುಂಬದ ಕುರಿತು ನೀಡಿದ ವಿವಾದಾತ್ಮಕ ಹೇಳಿಕೆಯಿಂದ ತಮಗೆ ಹಿನ್ನಡೆ ಆಗಬಹುದಾದ ಸಾಧ್ಯತೆಗಳನ್ನು ವ್ಯಕ್ತಪಡಿಸಿದ್ದಾರೆ. ಮೊಮ್ಮಗನ ಪರವಾಗಿ ಗೌಡರು ಅನಾರೋಗ್ಯವನ್ನೂ ಲೆಕ್ಕಿಸದೇ ಪ್ರಚಾರಕ್ಕಿಳಿದಿದ್ದು ಬಹು ಸಂಖ್ಯಾತ ಒಕ್ಕಲಿಗ ಸಮುದಾಯದಲ್ಲಿ ಒಂದಷ್ಟರ ಮಟ್ಟಿಗೆ ಅನುಕಂಪ ಮೂಡಿಸಿದೆ ಎಂಬ ಸಂಗತಿಯನ್ನು ಒಪ್ಪಿಕೊಂಡಿದ್ದಾರೆ. ಆದರೂ ಕಾಂಗ್ರೆಸ್ ಪಾಳೇಯದಲ್ಲಿ ಗೆಲವಿನ ಭರವಸೆ ಮೂಡಿದ್ದರೆ, ಜೆಡಿಎಸ್ ಫಲಿತಾಂಶಕ್ಕೆ ಮುನ್ನವೇ ಗೆದ್ದ ಸಂತೋಷದಲ್ಲಿ ಬೀಗುತ್ತಿದೆ.

100%

-ಯಗಟಿ ಮೋಹನ್
yagatimohan@gmail.com

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com