ಬಾಂಗ್ಲಾದೇಶದ ಚುನಾವಣಾ ಅನಿಶ್ಚಿತತೆ ಕೊನೆಗೊಳಿಸಲಿದೆಯೇ ಭಾರತ? (ಜಾಗತಿಕ ಜಗಲಿ)

ಯೂನುಸ್ ಹತ್ತು ಸುಧಾರಣಾ ಸಮಿತಿಗಳನ್ನು ರಚಿಸಿದ್ದು, ಚುನಾವಣೆಗೂ ಮುನ್ನ ಸುಧಾರಣೆಗಳನ್ನು ಜಾರಿಗೊಳಿಸಲೇಬೇಕೆಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಬಾಂಗ್ಲಾದೇಶದ ಚುನಾವಣಾ ಅನಿಶ್ಚಿತತೆ ಕೊನೆಗೊಳಿಸಲಿದೆಯೇ ಭಾರತ? (ಜಾಗತಿಕ ಜಗಲಿ)
Updated on

ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥರಾದ ಮೊಹಮ್ಮದ್ ಯೂನುಸ್ ಅವರು ಡಿಸೆಂಬರ್ 16, ಸೋಮವಾರದಂದು ಬಾಂಗ್ಲಾದೇಶದ ಮುಂದಿನ ಚುನಾವಣೆಯ ಕುರಿತು ಮಾಹಿತಿ ಹಂಚಿಕೊಂಡರು. ಬಾಂಗ್ಲಾದೇಶದಲ್ಲಿ ಮುಂದಿನ ಸಂಸದೀಯ ಚುನಾವಣೆ 2025ರ ಕೊನೆಯ ವೇಳೆ, ಅಥವಾ 2026ರ ಆರಂಭದಲ್ಲಿ ನಡೆಯಲಿದೆ ಎಂದು ಅವರು ಹೇಳಿದ್ದಾರೆ.

ಬಾಂಗ್ಲಾದೇಶದಲ್ಲಿ ಆವಾಮಿ ಲೀಗ್ ಪಕ್ಷ ದುರ್ಬಲಗೊಂಡ ಬಳಿಕ, ಈಗ ಬಾಂಗ್ಲಾದೇಶ್ ನ್ಯಾಷನಲ್ ಪಾರ್ಟಿ (ಬಿಎನ್‌ಪಿ) ಪಕ್ಷ ಪ್ರಬಲವಾಗಿದ್ದು, ಅದು ಚುನಾವಣೆಯ ಕುರಿತಂತೆ ಯೂನುಸ್ ಮೇಲೆ ಒತ್ತಡ ಹೇರುತ್ತಿದೆ. ಮುಂಬರುವ ಚುನಾವಣೆಗಳಿಗೆ ಸಂಬಂಧಿಸಿದಂತೆ ಸ್ಪಷ್ಟ ರೂಪುರೇಷೆಗಳನ್ನು ನೀಡುವಂತೆ ಪಕ್ಷ ಆಗ್ರಹಿಸಿದೆ.

ಇಲ್ಲಿಯ ತನಕ, ಚುನಾವಣೆಗೆ ದಿನಾಂಕ ನಿಗದಿಪಡಿಸುವ ಬಿಎನ್‌ಪಿ ಮತ್ತು ಇತರ ಪಕ್ಷಗಳ ಒತ್ತಡಕ್ಕೆ ಯೂನುಸ್ ಮಣಿದಿಲ್ಲ. ವಿವಿಧ ಕ್ಷೇತ್ರಗಳಲ್ಲಿ ಮಹತ್ವದ ಸುಧಾರಣೆಗಳನ್ನು ನಡೆಸಿದ ಬಳಿಕವಷ್ಟೇ ಬಾಂಗ್ಲಾದೇಶದ ಚುನಾವಣೆ ನಡೆಯುವುದಾಗಿ ಯೂನುಸ್ ಹೇಳಿದ್ದಾರೆ.

ಯೂನುಸ್ ಹತ್ತು ಸುಧಾರಣಾ ಸಮಿತಿಗಳನ್ನು ರಚಿಸಿದ್ದು, ಚುನಾವಣೆಗೂ ಮುನ್ನ ಸುಧಾರಣೆಗಳನ್ನು ಜಾರಿಗೊಳಿಸಲೇಬೇಕೆಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಅವರ ನಿಲುವು ವಿವಿಧ ರಾಜಕೀಯ ಪಕ್ಷಗಳು ಮತ್ತು ನಾಯಕರಲ್ಲಿ ಕಳವಳಕ್ಕೆ ಕಾರಣವಾಗಿದೆ.

ಮುಂಬರುವ ಚುನಾವಣೆಯಲ್ಲಿ ಬಿಎನ್‌ಪಿ ಪಕ್ಷ ಗೆಲುವು ಸಾಧಿಸಿ, ಸರ್ಕಾರ ರಚಿಸುವ ನಿರೀಕ್ಷೆಗಳಿವೆ. ಆದರೆ, ಯೂನುಸ್ ಚುನಾವಣೆಗಳು ಯಾವಾಗ ನಡೆಯಬಹುದು ಎಂಬ ಕುರಿತು ಸ್ಪಷ್ಟ ನಿಲುವು ತಾಳದಿರುವುದು ಬಿಎನ್‌ಪಿ ಪಕ್ಷದಲ್ಲಿ ಅಸಮಾಧಾನ ಹೆಚ್ಚಲು ಕಾರಣವಾಗಿದೆ.

ಚುನಾವಣೆಗಳ ಕಾಲಾವಧಿಯನ್ನು ಒದಗಿಸುವಂತೆ ಯೂನುಸ್ ಮೇಲೆ ಅವರ ಪಾಶ್ಚಾತ್ಯ ಬೆಂಬಲಿಗರೂ ಈಗ ಒತ್ತಡ ಹೇಳುತ್ತಿದ್ದಾರೆ. ತನ್ನ ಸ್ಥಾನವನ್ನು ಭದ್ರಪಡಿಸಲು ಯೂನುಸ್‌ಗೆ ಅವರ ಬೆಂಬಲ ಬೇಕಿರುವುದರಿಂದ, ಅವರ ನಿರೀಕ್ಷೆಗಳಿಗೆ ಯೂನುಸ್ ಸ್ಪಂದಿಸುವುದೂ ಅನಿವಾರ್ಯವಾಗಿದೆ.

ಮೊಹಮ್ಮದ್ ಯೂನುಸ್ ಮೇಲಿನ ಅತಿದೊಡ್ಡ ಒತ್ತಡ ಭಾರತದಿಂದ ಬಂದಿದೆ. ಡಿಸೆಂಬರ್ 9ರಂದು ಢಾಕಾಗೆ ಭೇಟಿ ನೀಡಿದ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ಬಾಂಗ್ಲಾದೇಶದ ವಿದೇಶಾಂಗ ಕಾರ್ಯದರ್ಶಿ ಜಶಿಮ್ ಉದ್ದೀನ್ ಹಾಗೂ ವಿದೇಶಾಂಗ ವ್ಯವಹಾರಗಳ ಸಲಹೆಗಾರ ತೌಹಿದ್ ಹೊಸೇನ್ ಅವರಿಗೆ ಭಾರತ ಬಾಂಗ್ಲಾದೇಶದ ಮಧ್ಯಂತರ ಸರ್ಕಾರದೊಡನೆ ವಾಡಿಕೆಯ ವಿಚಾರಗಳೊಡನೆ ಮಾತ್ರವೇ ಸಮಾಲೋಚನೆ ನಡೆಸುವುದಾಗಿ ತಿಳಿಸಿದ್ದಾರೆ.

ಯೂನುಸ್ ನೇತೃತ್ವದ ಮಧ್ಯಂತರ ಸರ್ಕಾರ, ಭಾರತದೊಡನೆ ಹಲವು ಮುಖ್ಯ ಒಪ್ಪಂದಗಳನ್ನು ಮಾಡಿಕೊಳ್ಳುವ ಗುರಿ ಹೊಂದಿತ್ತು. ಆ ಮೂಲಕ ಸರ್ಕಾರ ತನ್ನ ನ್ಯಾಯಸಮ್ಮತತೆಯನ್ನು ಸಾಬೀತುಪಡಿಸಲು ನೆರವಾಗುತ್ತಿತ್ತು. ಆದರೆ, ಭಾರತ ಬಾಂಗ್ಲಾದೇಶದಲ್ಲಿ ಜನರಿಂದ ಚುನಾಯಿತವಾದ ಸರ್ಕಾರದೊಡನೆ ಮಾತ್ರವೇ ವ್ಯವಹರಿಸುವುದಾಗಿ ಮಿಸ್ರಿ ಸ್ಪಷ್ಟಪಡಿಸಿದ್ದಾರೆ.

ನವದೆಹಲಿ ಈಗಾಗಲೇ ಅಮೆರಿಕಾ ಮತ್ತು ಇತರ ಪಾಶ್ಚಾತ್ಯ ರಾಷ್ಟ್ರಗಳೊಡನೆ ಎರಡು ಮುಖ್ಯ ವಿಚಾರಗಳ ಕುರಿತು ಸಮಾಲೋಚನೆ ನಡೆಸಿದೆ. ಅವೆಂದರೆ: ಬಾಂಗ್ಲಾದೇಶದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಹೆಚ್ಚುತ್ತಿರುವ ದಾಳಿ ಮತ್ತು ದೀರ್ಘಕಾಲ ಮುಂದುವರಿಯುತ್ತಿರುವ ಮಧ್ಯಂತರ ಸರ್ಕಾರ.

ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ಯೂನುಸ್ ಅವರನ್ನು ಆಯ್ಕೆ ಮಾಡುವಲ್ಲಿ ಅಮೆರಿಕಾ ಮತ್ತು ಪಾಶ್ಚಾತ್ಯ ಸಹಯೋಗಿಗಳು ಮುಖ್ಯಪಾತ್ರ ನಿರ್ವಹಿಸಿವೆ. ಆದರೆ, ದೀರ್ಘಕಾಲ ಯೂನುಸ್ ಆಡಳಿತ ಮುಂದುವರಿದರೆ, ಬಾಂಗ್ಲಾದೇಶ ಅಸ್ಥಿರಗೊಂಡು, ಹೊಸ ಅಶಾಂತಿ ತಲೆದೋರಬಹುದು ಎಂದು ಭಾರತ ಅವುಗಳನ್ನು ಎಚ್ಚರಿಸಿದೆ.

ಇನ್ನು ಇಸ್ಲಾಮಿಕ್ ಗುಂಪುಗಳು ಮತ್ತು ತೀವ್ರವಾದಿ ಸಂಘಟನೆಗಳನ್ನು ನಿರ್ವಹಿಸುವ ವಿಚಾರದಲ್ಲಿ ಯೂನುಸ್ ನಡೆಯ ಕುರಿತು ಭಾರತ ಕಳವಳ ವ್ಯಕ್ತಪಡಿಸಿದ್ದು, ಅವುಗಳು ನೀಡುವ ಬೆಂಬಲಕ್ಕೆ ಪ್ರತಿಯಾಗಿ, ಅವುಗಳಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡಿದ್ದಾರೆ ಎಂದು ಭಾರತ ಅಭಿಪ್ರಾಯ ಪಟ್ಟಿದೆ.

ಬಾಂಗ್ಲಾದೇಶದಲ್ಲಿ ಹೆಚ್ಚುತ್ತಿರುವ ಇಸ್ಲಾಮಿಕ್ ತೀವ್ರವಾದ ಮತ್ತು ಭಯೋತ್ಪಾದನೆಗಳ ಪರಿಣಾಮ ಸಮಸ್ತ ದಕ್ಷಿಣ ಏಷ್ಯಾಗೆ ವ್ಯಾಪಿಸಲಿದೆ ಎಂದು ಭಾರತ ಅಮೆರಿಕಾಗೆ ತಿಳಿಸಿದೆ. ಇದು ದಕ್ಷಿಣ ಏಷ್ಯಾದಲ್ಲಿ ಅಮೆರಿಕಾದ ಕಾರ್ಯತಂತ್ರ ಮತ್ತು ಆರ್ಥಿಕ ಹಿತಾಸಕ್ತಿಗಳಿಗೂ ಮುಳುವಾಗಲಿದೆ ಎಂದು ಭಾರತ ಎಚ್ಚರಿಸಿದೆ.

ಬಾಂಗ್ಲಾದೇಶದ ಚುನಾವಣಾ ಅನಿಶ್ಚಿತತೆ ಕೊನೆಗೊಳಿಸಲಿದೆಯೇ ಭಾರತ? (ಜಾಗತಿಕ ಜಗಲಿ)
ಬಾಂಗ್ಲಾದೇಶದಲ್ಲಿ ಮಿತಿಮೀರುತ್ತಿದೆ ತೀವ್ರವಾದ: ಭಾರತದ ಭದ್ರತೆಗೆ ಹೆಚ್ಚುತ್ತಿದೆ ಅಪಾಯ! (ಜಾಗತಿಕ ಜಗಲಿ)

ಯೂನುಸ್ ಅವರು ಆದಷ್ಟು ಶೀಘ್ರವಾಗಿ ಬಾಂಗ್ಲಾದೇಶದ ಚುನಾವಣೆಯನ್ನು ಆಯೋಜಿಸಿ, ಅಲ್ಲಿ ಬೇಗನೆ ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಸರ್ಕಾರ ಜಾರಿಗೆ ತರುವಂತೆ ಮಾಡಬೇಕು ಎಂದು ಭಾರತ ಸಲಹೆ ನೀಡಿದೆ. ಯೂನುಸ್ ಸರ್ಕಾರಕ್ಕೆ ಕಾನೂನಿನ ಮಾನ್ಯತೆ ಇಲ್ಲ. ಅವರನ್ನು ಕೇವಲ ಸಣ್ಣ ಅವಧಿಗೆ ಮಧ್ಯಂತರ ನಾಯಕನಾಗಿ ಆಯ್ಕೆ ಮಾಡಲಾಗಿತ್ತು ಎಂದು ಭಾರತ ಪ್ರತಿಪಾದಿಸಿದೆ.

ಯೂನುಸ್ ಹೆಚ್ಚು ಕಾಲ ಅಧಿಕಾರದಲ್ಲಿ ಮುಂದುವರಿದಷ್ಟೂ ಬಾಂಗ್ಲಾದೇಶದ ಪ್ರಜಾಪ್ರಭುತ್ವ ದುರ್ಬಲಗೊಂಡು, ಇಸ್ಲಾಮಿಕ್ ತೀವ್ರವಾದಿಗಳು ಹೆಚ್ಚು ಪ್ರಭಾವಶಾಲಿಗಳಾಗಬಹುದು. ಇದರಿಂದಾಗಿ ಯೂನುಸ್‌ರನ್ನು ಬೆಂಬಲಿಸುವ ದೇಶಗಳ ಗೌರವಕ್ಕೂ ಧಕ್ಕೆ ಉಂಟಾದೀತು.

ಯೂನುಸ್ ನಡೆಯ ಕುರಿತಂತೆ ಸಾಕಷ್ಟು ಆತಂಕಗಳು ಮನೆಮಾಡಿವೆ. ತನಗೆ ಅಧಿಕಾರಕ್ಕೆ ಅಂಟಿಕೊಳ್ಳುವ ಇಚ್ಛೆ ಇಲ್ಲವೆಂದು ಯೂನುಸ್ ಹೇಳಿದ್ದರೂ, ದೇಶದಲ್ಲಿ ಸುಧಾರಣೆಗಳು ನಡೆದ ಬಳಿಕವಷ್ಟೇ ಚುನಾವಣೆ ನಡೆಸಲು ಸಾಧ್ಯ ಎಂದು ಅವರು ಹೇಳಿದ್ದಾರೆ.

ಬಿಎನ್‌ಪಿ ನಾಯಕರು ಯೂನುಸ್ ಹೇಳಿಕೆಯನ್ನು ತಳ್ಳಿಹಾಕಿದ್ದು, ನಿಖರವಾದ ಮತದಾರರ ಪಟ್ಟಿ ಸಿದ್ಧಪಡಿಸುವುದು ಮತ್ತು ನ್ಯಾಯಯುತವಾದ ಚುನಾವಣಾ ಸಮಿತಿಯನ್ನು ರಚಿಸುವಂತಹ ತುರ್ತು ಸುಧಾರಣೆಗಳನ್ನು ಮಾತ್ರವೇ ಮಧ್ಯಂತರ ಸರ್ಕಾರ ನಡೆಸಬೇಕು. ಇನ್ನುಳಿದ ಸುಧಾರಣೆಗಳನ್ನು ಚುನಾಯಿತ ಸರ್ಕಾರ ನಡೆಸಬೇಕು ಎಂದಿದ್ದಾರೆ. ಜನರಿಂದ ಆಯ್ಕೆಯಾಗಿರದ, ನ್ಯಾಯಸಮ್ಮತವಲ್ಲದ ಆಡಳಿತಕ್ಕೆ ಇತರ ಬದಲಾವಣೆಗಳನ್ನು ತರುವ ಅಧಿಕಾರವಿಲ್ಲ ಎಂದು ಅವರು ಹೇಳಿದ್ದಾರೆ.

ಅಧಿಕಾರ ವಹಿಸಿಕೊಂಡ ತಕ್ಷಣವೇ ಯೂನುಸ್ ಸಂವಿಧಾನ, ಸಾರ್ವಜನಿಕ ಆಡಳಿತ, ಭ್ರಷ್ಟಾಚಾರ ವಿರೋಧಿ ಪ್ರಯತ್ನಗಳು, ನ್ಯಾಯಾಂಗ, ಪೊಲೀಸ್ ಮತ್ತು ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಸಮಿತಿಗಳನ್ನು ರಚಿಸಿದರು. ಬಳಿಕ, ಅವರು ಆರೋಗ್ಯ, ಸಮೂಹ ಮಾಧ್ಯಮ, ಕಾರ್ಮಿಕರ ಹಕ್ಕುಗಳು ಮತ್ತು ಮಹಿಳೆಯರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ನಾಲ್ಕು ಹೊಸ ಸಮಿತಿಗಳನ್ನು ರಚಿಸಿದರು.

ಈ ಸಮಿತಿಗಳು ಈಗಷ್ಟೇ ತಮ್ಮ ಕಾರ್ಯ ಆರಂಭಿಸಿದ್ದು, ಅವುಗಳ ಮುಂದಿರುವ ಅಗಾಧ ಕಾರ್ಯ ಮತ್ತು ಸಂಕೀರ್ಣತೆಗಳನ್ನು ಗಮನಿಸಿದರೆ, ಅವುಗಳಿಗೆ ತಮ್ಮ ಕೆಲಸ ಮುಗಿಸಲು ಹಲವು ವರ್ಷಗಳೇ ಬೇಕಾಗಬಹುದು. ಅದರೊಡನೆ, ಈ ಸಮಿತಿಗಳಲ್ಲಿ ಯೂನುಸ್ ಸ್ವತಃ ಆರಿಸಿರುವ ವ್ಯಕ್ತಿಗಳು ಮತ್ತು ಶೇಖ್ ಹಸೀನಾ ಪದಚ್ಯುತಿಯಲ್ಲಿ ಮುಖ್ಯ ಪಾತ್ರ ವಹಿಸಿದ ವಿದ್ಯಾರ್ಥಿ ಹೋರಾಟದ ಮುಖಂಡರೇ ಇದ್ದಾರೆ.

ಇವರಲ್ಲಿ ಹಲವು ವಿದ್ಯಾರ್ಥಿ ನಾಯಕರು ಮಧ್ಯಂತರ ಸರ್ಕಾರದಲ್ಲಿ ಸಲಹೆಗಾರರು ಸೇರಿದಂತೆ ಮುಖ್ಯ ಹುದ್ದೆಗಳನ್ನು ಹೊಂದಿದ್ದು, ಸಚಿವರಂತೆ ಕಾರ್ಯಾಚರಿಸುತ್ತಿದ್ದಾರೆ. ಈಗ ಅಧಿಕಾರ ಅನುಭವಿಸಿದ ಬಳಿಕ, ಅವರು ಅದನ್ನು ತ್ಯಜಿಸಲು ಸಿದ್ಧರಿಲ್ಲ. ಇದೇ ರೀತಿ ಅನಿರೀಕ್ಷಿತವಾಗಿ ಪ್ರಭಾವಿಗಳಾಗಿ ಹೊರಹೊಮ್ಮಿರುವ ಸಲಹೆಗಾರ ಸ್ಥಾನಗಳಲ್ಲಿರುವವರೂ ಈಗ ಅಧಿಕಾರ ಕಳೆದುಕೊಳ್ಳಲು ಸಿದ್ಧರಿಲ್ಲ.

ಇದರಿಂದಲೇ ಯೂನುಸ್ ಮತ್ತವರ ಸಲಹೆಗಾರ ಮಂಡಳಿಯ ಸದಸ್ಯರು ಚುನಾವಣೆಗೆ ಸ್ಪಷ್ಟ ಸಮಯಸೂಚಿ ನೀಡಲು ಸಿದ್ಧರಿಲ್ಲ. ಅವರು ಸುಧಾರಣಾ ಸಮಿತಿಗಳನ್ನು ನಿಧಾನವಾಗಿ ಕಾರ್ಯಾಚರಿಸಲು ಆದೇಶಿಸಿ, ಚುನಾವಣೆಯನ್ನು ಅನಿರ್ದಿಷ್ಟಾವಧಿಗೆ ವಿಳಂಬಗೊಳಿಸಲು ಪ್ರಯತ್ನ ನಡೆಸಿರಬಹುದು ಎಂದು ಬಿಎನ್‌ಪಿ ಮತ್ತು ಇತರ ಪಕ್ಷಗಳು ಅಭಿಪ್ರಾಯ ಪಟ್ಟಿವೆ.

ಭಾರತ ಯೂನುಸ್ ಮತ್ತವರ ತಂಡ ಚುನಾವಣೆಯನ್ನು ವಿಳಂಬಗೊಳಿಸಿ, ಅಧಿಕಾರ ಉಳಿಸಿಕೊಳ್ಳಲು ಹಂಚಿಕೆ ಹಾಕಿರುವುದನ್ನು ಭಾರತ ಈಗಾಗಲೇ ಅಮೆರಿಕಾ ಮತ್ತು ಐರೋಪ್ಯ ರಾಷ್ಟ್ರಗಳ ಗಮನಕ್ಕೆ ತಂದಿದೆ. ಇದರ ಪರಿಣಾಮವಾಗಿ ಅಮೆರಿಕಾದ ಸ್ಟೇಟ್ ಡಿಪಾರ್ಟ್ಮೆಂಟ್ ಮತ್ತು ಐರೋಪ್ಯ ಒಕ್ಕೂಟ ರಾಷ್ಟ್ರೀಯ ಚುನಾವಣೆಯ ರೂಪುರೇಷೆ ಸಿದ್ಧಪಡಿಸಲು ಯೂನುಸ್‌ರನ್ನು ಆಗ್ರಹಿಸಿವೆ.

ನವದೆಹಲಿ ಮತ್ತು ಢಾಕಾದಲ್ಲಿರುವ ಐರೋಪ್ಯ ಒಕ್ಕೂಟದ ರಾಯಭಾರಿಗಳು ಡಿಸೆಂಬರ್ 9ರಂದು ವಿದೇಶಾಂಗ ಕಾರ್ಯದರ್ಶಿ ಮಿಸ್ರಿ ಭೇಟಿಯ ಸಮಯದಲ್ಲಿ ಯೂನುಸ್‌ರನ್ನು ಭೇಟಿಯಾದರು.

ಭಾರತದಲ್ಲಿರುವ ಬೆಲ್ಜಿಯಂ, ಬಲ್ಗೇರಿಯ, ಈಸ್ಟೋನಿಯ, ಲಕ್ಸೆಂಬರ್ಗ್, ಸ್ಲೋವಾಕಿಯಾ, ಸೈಪ್ರಸ್, ಹಂಗರಿ, ಪೋಲೆಂಡ್, ಪೋರ್ಚುಗಲ್, ಸ್ಲೊವೇನಿಯ, ಮತ್ತು ರೊಮಾನಿಯಾಗಳ ಪ್ರತಿನಿಧಿಗಳು, ಢಾಕಾದಲ್ಲಿರುವ ಡೆನ್ಮಾರ್ಕ್, ಫ್ರಾನ್ಸ್, ಜರ್ಮನಿ, ಇಟಲಿ, ಸ್ಪೇನ್, ಸ್ವೀಡನ್, ಮತ್ತು ನೆದರ್ಲ್ಯಾಂಡ್ಸ್ ಪ್ರತಿನಿಧಿಗಳು ಯೂನುಸ್ ಜೊತೆ ಸಮಾಲೋಚನೆ ನಡೆಸಿದರು.

ಅವರು ಬಾಂಗ್ಲಾದೇಶದ ರಾಷ್ಟ್ರೀಯ ಚುನಾವಣೆಗಳು ನಡೆಯಬೇಕು ಎಂದು ಯೂನುಸ್‌ಗೆ ಸೂಚಿಸಿದ್ದು, ಚುನಾವಣೆಯ ಸಮಯ ಸೂಚಿಯನ್ನು ಘೋಷಿಸುವಂತೆ ತಿಳಿಸಿದ್ದರು.

ಬಾಂಗ್ಲಾದೇಶದ ಚುನಾವಣಾ ಅನಿಶ್ಚಿತತೆ ಕೊನೆಗೊಳಿಸಲಿದೆಯೇ ಭಾರತ? (ಜಾಗತಿಕ ಜಗಲಿ)
2025ರ ಹೊಸ್ತಿಲಲ್ಲಿ ಭಾರತದ 'ನೆರೆಮನೆ' ಗತಿ ಹೇಗೆಲ್ಲ ಕೆಟ್ಟುನಿಂತಿದೆ ನೋಡಿ… (ತೆರೆದ ಕಿಟಕಿ)

ಯೂನುಸ್ ಈ ಪ್ರತಿನಿಧಿಗಳ ಬಳಿ ಮಧ್ಯಂತರ ಸರ್ಕಾರಕ್ಕೆ ಎರಡು ಮುಖ್ಯ ಗುರಿಗಳನ್ನು ನೀಡಲಾಗಿದ್ದು, ಅವೆಂದರೆ: ಸಂವಿಧಾನದ ಪರಿಷ್ಕರಣೆ, ಹಾಗೂ ಚುನಾವಣೆ ನಡೆಸಿ, ಚುನಾಯಿತ ಸರ್ಕಾರಕ್ಕೆ ಅಧಿಕಾರ ಹಸ್ತಾಂತರ. ಆದರೆ ಇದಕ್ಕಾಗಿ ಸಮಯ ಬೇಕಾಗುತ್ತದೆ ಎನ್ನುತ್ತಾ ಯೂನುಸ್ ವಿಳಂಬಗೊಳಿಸಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.

ಆದರೆ, ಚುನಾವಣಾ ಸುಧಾರಣೆಗಳು ಬೇಗನೆ ನಡೆದು, ಶೀಘ್ರವೇ ಜಾರಿಗೆ ಬರಬೇಕು ಎಂದು ಯೂನುಸ್‌ಗೆ ಪ್ರತಿನಿಧಿಗಳು ಸೂಚಿಸಿದ್ದಾರೆ. ಒಂದು ವೇಳೆ ಸ್ಪಷ್ಟ ಚುನಾವಣಾ ದಿನಾಂಕ ಘೋಷಿಸಲು ಸಾಧ್ಯವಿಲ್ಲದಿದ್ದರೂ, ಒಂದು ಕಾಲಾವಧಿಯನ್ನಾದರೂ ಘೋಷಿಸಬೇಕು ಎಂದು ಅವರು ಹೇಳಿದ್ದಾರೆ.

ಹೀಗೆ ತನ್ನ ಪಾಶ್ಚಾತ್ಯ ಬೆಂಬಲಿಗರು, ಭಾರತ, ಬಿಎನ್‌ಪಿಯಂತಹ ಪ್ರಬಲ ರಾಜಕೀಯ ಗುಂಪುಗಳ ಒತ್ತಡದ ಪರಿಣಾಮವಾಗಿ, ಯೂನುಸ್ ಡಿಸೆಂಬರ್ 16ರಂದು ಚುನಾವಣಾ ದಿನಾಂಕದ ಘೋಷಣೆ ಮಾಡಬೇಕಾಯಿತು.

ಆದರೆ ಬುದ್ಧಿವಂತ ಯೂನುಸ್ ಚುನಾವಣಾ ಯೋಜನೆಗೆ ಷರತ್ತುಗಳನ್ನೂ ವಿಧಿಸಿದ್ದು, ಅಗತ್ಯ ಬಿದ್ದರೆ ಚುನಾವಣೆಗಳನ್ನು ವಿಳಂಬಗೊಳಿಸುವ ಮಾರ್ಗವನ್ನೂ ಇಟ್ಟುಕೊಂಡಿದ್ದಾರೆ.

ಒಂದು ವೇಳೆ ಕನಿಷ್ಠ ಮಟ್ಟದ ಸುಧಾರಣೆಗಳನ್ನು ಕೈಗೊಂಡು, ತಕ್ಷಣವೇ ಚುನಾವಣೆ ನಡೆಸಬೇಕೆಂದು ರಾಜಕೀಯ ಪಕ್ಷಗಳು ಆಗ್ರಹಿಸಿದರೆ, ಅದಕ್ಕೆ ದೇಶದ ಒಪ್ಪಿಗೆ ಬೇಕು ಎಂದು ಯೂನುಸ್ ಹೇಳಿದ್ದಾರೆ. ದೇಶದ ಒಪ್ಪಿಗೆ ಪಡೆಯುವ ಪ್ರಕ್ರಿಯೆಯಡಿ ಇನ್ನೂ ಒಪ್ಪಿಗೆ ದೊರೆತಿಲ್ಲ ಎನ್ನುತ್ತಾ ಯೂನುಸ್‌ಗೆ ಚುನಾವಣೆಯನ್ನು ವಿಳಂಬಗೊಳಿಸಲು ಸಾಕಷ್ಟು ಕಾಲಾವಧಿ ಲಭಿಸಲಿದೆ.

ಯೂನುಸ್ ತನ್ನೊಡನೆ ಜುಲೈ ತಿಂಗಳ ಸಂಘರ್ಷದ ಬಳಿಕ ಸ್ಥಾಪಿಸಲಾದ ಜತಿಯೋ ನಗೋರಿಕ್ ಸಮಿತಿಯಂತಹ ತನ್ನ ಬೆಂಬಲಿಗರನ್ನೂ ಸೇರಿಸಿಕೊಂಡಿದ್ದಾರೆ. ಈ ಸಮಿತಿ ಜನಪ್ರಿಯ ನಾಗರಿಕರು ಮತ್ತು ವಿದ್ಯಾರ್ಥಿ ಮುಖಂಡರನ್ನು ಒಳಗೊಂಡಿದೆ. ಈ ಸಮಿತಿ ಆವಾಮಿ ಲೀಗ್ ಸರ್ಕಾರದ ಅವಧಿಯಲ್ಲಿ ಅಪರಾಧಗಳನ್ನು ನಡೆಸಿದ ಮಾಜಿ ಪ್ರಧಾನಿ ಶೇಖ್ ಹಸೀನಾ ಮತ್ತಿತರರ ವಿಚಾರಣೆ ನಡೆಸಿ, ನ್ಯಾಯ ದೊರೆತ ಬಳಿಕವೇ ಚುನಾವಣೆ ನಡೆಯಬೇಕೆಂದು ಆಗ್ರಹಿಸಿದ್ದಾರೆ.

ಇತರ ಗುಂಪುಗಳು ಚುನಾವಣೆಗೂ ಮುನ್ನ ಸುಧಾರಣಾ ಸಮಿತಿಗಳ ಕಾರ್ಯ ಪೂರ್ಣಗೊಂಡು, ಅವುಗಳ ಪ್ರಸ್ತಾಪಿತ ಸುಧಾರಣೆಗಳನ್ನು ಜಾರಿಗೊಳಿಸಬೇಕು ಎಂದಿವೆ.

ಈ ಕಾರಣದಿಂದಲೇ ಭಾರತ ನೇರವಾಗಿ ಮತ್ತು ಅಮೆರಿಕಾ, ಪಾಶ್ಚಾತ್ಯ ದೇಶಗಳ ಮೂಲಕ ಯೂನುಸ್ ಮೇಲೆ ಒತ್ತಡ ಹೇರಿ, ಅವರು ಭರವಸೆ ನೀಡಿರುವಂತೆ ಮುಂದಿನ ವರ್ಷಾಂತ್ಯದೊಳಗೆ ಚುನಾವಣೆ ನಡೆಸುವಂತೆ ಮಾಡುವ ಪ್ರಯತ್ನವನ್ನು ಮುಂದುವರಿಸಬೇಕಿದೆ.

- ಗಿರೀಶ್ ಲಿಂಗಣ್ಣ

(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com