
ಆಗಸ್ಟ್ ತಿಂಗಳಲ್ಲಿ ಬಾಂಗ್ಲಾದೇಶದ ಪ್ರಧಾನಿ ಹುದ್ದೆಯಿಂದ ಶೇಖ್ ಹಸೀನಾರನ್ನು ಪದಚ್ಯುತಗೊಳಿಸಿದ ಬಳಿಕ, ಬಾಂಗ್ಲಾದೇಶದ ಧಾರ್ಮಿಕ ಅಲ್ಪಸಂಖ್ಯಾತರು, ಅದರಲ್ಲೂ ಹಿಂದೂಗಳ ಮೇಲೆ ತೀವ್ರವಾದಿ ಗುಂಪುಗಳು ಅಪಾರ ಪ್ರಮಾಣದಲ್ಲಿ ದಾಳಿ ನಡೆಸುತ್ತಿವೆ.
ಜಮಾತ್ ಎ ಇಸ್ಲಾಮಿ (ಜೆಐ) ಮತ್ತು ಇತರ ತೀವ್ರವಾದಿ ಇಸ್ಲಾಮಿಕ್ ಗುಂಪುಗಳು ಬಾಂಗ್ಲಾದೇಶವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿಸಬೇಕು ಎಂಬ ಹೆಬ್ಬಯಕೆ ಹೊಂದಿದ್ದು, ಇದು ಭಾರತಕ್ಕೂ ಗಂಭೀರ ಭದ್ರತಾ ಅಪಾಯವನ್ನು ಒಡ್ಡಲಿವೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಆಗಸ್ಟ್ 5ರಂದು ಶೇಖ್ ಹಸೀನಾ ನೇತೃತ್ವದ ಸರ್ಕಾರ ಪತನಗೊಂಡ ಬಳಿಕ, ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ 88 ದಾಳಿಗಳು ನಡೆದಿರುವ ವರದಿಯಾಗಿದೆ ಎಂದು ಮೊಹಮ್ಮದ್ ಯೂನುಸ್ ನೇತೃತ್ವದ ಮಧ್ಯಂತರ ಸರ್ಕಾರ ವರದಿ ಮಾಡಿದೆ.
ಆಸಕ್ತಿಕರ ವಿಚಾರವೆಂದರೆ, ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ಡಿಸೆಂಬರ್ 9ರಂದು ಬಾಂಗ್ಲಾದೇಶಕ್ಕೆ ಭೇಟಿ ನೀಡಿದಾಗ ಅಲ್ಲಿನ ಹಿಂದೂ ಅಲ್ಪಸಂಖ್ಯಾತರ ಮೇಲಿನ ದಾಳಿಗಳು ಹೆಚ್ಚುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದ ಬೆನ್ನಲ್ಲೇ ಸರ್ಕಾರ ಈ ಮಾಹಿತಿ ನೀಡಿದೆ.
ಆದರೆ, ಬಾಂಗ್ಲಾದೇಶದ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ, ಅದರಲ್ಲೂ ಹಿಂದೂಗಳ ಮೇಲೆ ನಡೆದಿರುವ ದಾಳಿಗಳ ಸಂಖ್ಯೆ ಬಾಂಗ್ಲಾದೇಶ ಸರ್ಕಾರದ ಅಧಿಕಾರಿಗಳು ತಿಳಿಸಿರುವುದಕ್ಕಿಂತಲೂ ಬಹಳ ಹೆಚ್ಚಿನದಾಗಿದೆ ಎಂದು ಬಾಂಗ್ಲಾದೇಶದ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಾದ ಸಲಾಹ್ ಉದ್ದೀನ್ ಶೋಯೆಬ್ ಚೌಧರಿ ಅಭಿಪ್ರಾಯ ಪಟ್ಟಿದ್ದಾರೆ.
ವಾಸ್ತವವಾಗಿ ಹಿಂದೂಗಳ ಮೇಲೆ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ದಾಳಿಗಳ ಸಂಖ್ಯೆ ಖಂಡಿತವಾಗಿಯೂ ಸರ್ಕಾರ ಒಪ್ಪಿಕೊಂಡಿರುವುದಕ್ಕಿಂತ ಹೆಚ್ಚಾಗಿದೆ. ಇದಕ್ಕೂ ಮುನ್ನ, ಬಾಂಗ್ಲಾದೇಶ ಹಿಂದೂಗಳನ್ನು ಗುರಿಯಾಗಿಸಿ ಕೋಮು ದ್ವೇಷದ ದಾಳಿಗಳು ನಡೆದಿವೆ ಎನ್ನುವುದನ್ನು ಅಲ್ಲಗಳೆದು, ಇಂತಹ ದಾಳಿಗಳನ್ನು ಕೇವಲ 'ರಾಜಕೀಯ ಹಿಂಸಾಚಾರ' ಎಂದು ಕರೆದಿತ್ತು.
ಸರ್ಕಾರ ಈಗ ಹಿಂದೂಗಳ ಮೇಲೆ ದಾಳಿಯ 88 ಪ್ರಕರಣಗಳು ನಡೆದಿವೆ ಎಂದು ಒಪ್ಪಿಕೊಂಡಿದ್ದರೂ, ಅದು ಹೆಚ್ಚುತ್ತಿರುವ ಅಂತಾರಾಷ್ಟ್ರೀಯ ಒತ್ತಡ ಮತ್ತು ಜಾಗತಿಕ ಮಾಧ್ಯಮಗಳ ಕಳವಳದಿಂದಾಗಿ ಒಪ್ಪಿಕೊಂಡಿದೆ ಎಂದು ಚೌಧರಿ ಅಭಿಪ್ರಾಯ ಪಟ್ಟಿದ್ದಾರೆ.
ಚೌಧರಿ ಅವರ ಪ್ರಕಾರ, ಬಾಂಗ್ಲಾದೇಶಿ ಹಿಂದೂಗಳು ಮತ್ತು ಇಸ್ಕಾನ್ ಸದಸ್ಯರನ್ನು ಗುರಿಯಾಗಿಸಿ ನಡೆಯುತ್ತಿರುವ ದಾಳಿಗಳನ್ನು ತೀವ್ರವಾದಿ ಗುಂಪುಗಳಾದ ಜಮಾತ್ ಎ ಇಸ್ಲಾಮಿ (ಜೆಐ), ಹಿಜ್ಬ್ ಉಲ್ ತಹ್ರಿರ್ (ಜಗತ್ತನ್ನೇ ಇಸ್ಲಾಮಿಕ್ ರಾಷ್ಟ್ರವನ್ನಾಗಿಸುವ ಗುರಿ ಹೊಂದಿರುವ ಗುಂಪು), ಮತ್ತು ಅನ್ಸರ್ ಅಲ್ ಇಸ್ಲಾಮ್ (ಅಲ್ ಖೈದಾದ ಸ್ಥಳೀಯ ಅಂಗ ಸಂಸ್ಥೆ) ಸಂಘಟಿಸುತ್ತಿವೆ. ಈ ಗುಂಪುಗಳು ಮತ್ತು ಅವುಗಳ ಮೂಲಭೂತವಾದಿ ಸದಸ್ಯರು ಇಂತಹ ಹಿಂಸಾಚಾರಕ್ಕೆ ಕಾರಣವಾಗಿದ್ದಾರೆ.
ಗಾಬರಿ ಮೂಡಿಸುವ ವಿಚಾರವೆಂದರೆ, ಇಂತಹ ತೀವ್ರವಾದಿ ಚಟುವಟಿಕೆಗಳನ್ನು ನಡೆಸುತ್ತಿರುವ ಮೂಲಭೂತವಾದಿ ಇಸ್ಲಾಮಿಕ್ ಗುಂಪುಗಳು ಬಾಂಗ್ಲಾದೇಶವನ್ನು ಹಿಂದೂ ರಹಿತ ಖಿಲಾಫತ್ (ಹಿಂದೂ ರಹಿತ ಮುಸ್ಲಿಂ ರಾಷ್ಟ್ರ) ಆಗಿ ರೂಪಿಸುವ ಗುರಿ ಹೊಂದಿವೆ. ಇಂತಹ ಗುಂಪುಗಳಿಗೆ ಕೆಲವು ಆಡಳಿತಗಾರರಿಂದ ಕೆಲವೊಮ್ಮೆ ತೆರೆಮರೆಯಲ್ಲಿ, ಕೆಲವೊಮ್ಮೆ ಮುಕ್ತವಾಗಿ ಬೆಂಬಲ ಲಭಿಸುತ್ತಿದೆ ಎಂದು ಚೌಧರಿ ಆತಂಕ ವ್ಯಕ್ತಪಡಿಸಿದ್ದಾರೆ.
"ದುರದೃಷ್ಟವಶಾತ್, ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಅವರಿಂದಾಗಲಿ, ಅವರ ಸರ್ಕಾರದಿಂದಾಗಲಿ, ಅಥವಾ ಪಾಶ್ಚಾತ್ಯ ನಾಯಕರಿಂದಾಗಲಿ ಯಾವುದೇ ಗಂಭೀರ ಕ್ರಮವನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಅವರೆಲ್ಲ ಜಾರ್ಜ್ ಸೊರೋಸ್ ಮತ್ತು 'ಡೀಪ್ ಸ್ಟೇಟ್' ವ್ಯವಸ್ಥೆಯಿಂದ ಪ್ರಭಾವಿತರಾಗಿರುವಂತೆ ಕಂಡುಬರುತ್ತಿದ್ದಾರೆ. ಈ ವ್ಯಕ್ತಿಗಳು, ಕ್ಲಿಂಟನ್ ದಂಪತಿ, ಮತ್ತು ಬೈಡನ್ ಆಗಸ್ಟ್ 5 ಮತ್ತು ತದನಂತರ ನಡೆದ ಘಟನೆಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ" ಎಂದು ಚೌಧರಿ ಹೇಳಿದ್ದಾರೆ.
'ಡೀಪ್ ಸ್ಟೇಟ್' ಎನ್ನುವ ಪದ ಒಂದು ಸಿದ್ಧಾಂತವನ್ನು ಸೂಚಿಸುತ್ತಿದ್ದು, ಅದರ ಪ್ರಕಾರ, ಸರ್ಕಾರದ ಒಳಗೆ ಒಂದು ರಹಸ್ಯ, ಪ್ರಭಾವಿ ಜಾಲವಿದ್ದು, ಅದು ಸರ್ಕಾರ ಮತ್ತು ಚುನಾಯಿತ ಪ್ರತಿನಿಧಿಗಳಿಂದ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತಿದೆ. ಈ ಜಾಲ ವಿವಿಧ ರೀತಿಯ ಸದಸ್ಯರನ್ನು ಒಳಗೊಂಡಿದ್ದು, ಇದರಲ್ಲಿ ಸರ್ಕಾರಿ ನೌಕರರು, ಮಿಲಿಟರಿ ನಾಯಕರು, ಮತ್ತು ಗುಪ್ತಚರ ಸಂಸ್ಥೆಗಳು ಸೇರಿದ್ದು, ಅವರೆಲ್ಲ ನೀತಿ ಮತ್ತು ನಿರ್ಧಾರಗಳ ಮೇಲೆ ನಿಯಂತ್ರಣ ಸಾಧಿಸಿದ್ದಾರೆ. ಇಂತಹ ಕ್ರಮಗಳು ಜನರ ಗಮನಕ್ಕೆ ಬರದಂತೆಯೇ ನಡೆಯುತ್ತವೆ. ಅಂದರೆ, ಇಂತಹ ಸಂಸ್ಥೆಗಳು ತಮ್ಮದೇ ಆದ ಸ್ವಂತ ಅಜೆಂಡಾ ಹೊಂದಿದ್ದು, ಅವು ಚುನಾಯಿತ ಸರ್ಕಾರದ ಹಿತಾಸಕ್ತಿಗಳಿಗೂ ವಿರುದ್ಧವಾಗಿ ಕಾರ್ಯಾಚರಿಸಬಲ್ಲವು.
ಆದರೆ, ಇಂತಹ ಸಮಸ್ಯೆಗಳನ್ನು ನಿವಾರಿಸಲು ವಿವಿಧ ಮಾರ್ಗೋಪಾಯಗಳು ಮತ್ತು ವಿಧಾನಗಳನ್ನು ಅನುಸರಿಸಿ ಕ್ರಮ ಕೈಗೊಳ್ಳುವ ಸಾಮರ್ಥ್ಯ ಭಾರತಕ್ಕಿದೆ ಎಂದು ಚೌಧರಿ ವಿವರಿಸಿದ್ದಾರೆ.
1947ರಲ್ಲಿ ಪೂರ್ವ ಪಾಕಿಸ್ತಾನ ನಿರ್ಮಾಣಗೊಂಡ ಬಳಿಕ, ಜಮಾತ್ ಎ ಇಸ್ಲಾಮಿ ಮತ್ತು ಇತರ ಇಸ್ಲಾಮಿಕ್ ಮೂಲಭೂತವಾದಿ ಗುಂಪುಗಳು ಪಶ್ಚಿಮ ಪಾಕಿಸ್ತಾನದ ಬೆಂಬಲಿಗರಾಗಿಯೇ ಕಾರ್ಯ ನಿರ್ವಹಿಸಿದ್ದು, ಹಿಂದೂ ವಿರೋಧಿ ಮತ್ತು ಭಾರತ ವಿರೋಧಿ ಭಾವನೆಗಳನ್ನು ಪ್ರಚುರಪಡಿಸಿವೆ.
ಬಾಂಗ್ಲಾದೇಶ 1971ರಲ್ಲಿ ಭಾರತ ಮತ್ತು ಸೋವಿಯತ್ ಒಕ್ಕೂಟಗಳ ಪ್ರಮುಖ ಬೆಂಬಲದಿಂದ ಸ್ವಾತಂತ್ರ್ಯ ಗಳಿಸಿದರೂ, ಅಲ್ಲಿ ರೂಪುಗೊಂಡಿದ್ದ ಭಾರತ ವಿರೋಧಿ ಭಾವನೆಗಳು ಮುಂದುವರಿದು, ಅವುಗಳಿಗೆ ಭಾರತ ವಿರೋಧಿ ಸಿದ್ಧಾಂತವನ್ನು ಬೆಂಬಲಿಸುವ ತೀವ್ರವಾದಿಗಳು ತುಪ್ಪ ಸುರಿದಿದ್ದರು.
ಆದರೆ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಇತ್ತೀಚಿನ ಬೆಳವಣಿಗೆಗಳು, ಅದರಲ್ಲೂ ಶೇಖ್ ಹಸೀನಾ ನಿರ್ಗಮನದ ಬಳಿಕ ನಡೆದ ಘಟನೆಗಳು ಅಲ್ಲಿನ ಪರಿಸ್ಥಿತಿಯನ್ನು ಅಸ್ಥಿರಗೊಳಿಸಿವೆ.
ಬಾಂಗ್ಲಾದೇಶದ ಮೂಲಭೂತವಾದಿ ಗುಂಪುಗಳು ಮತ್ತು ಪಾಕಿಸ್ತಾನದ ಉಗ್ರವಾದಿ ಗುಂಪುಗಳ ನಡುವೆ ಹೆಚ್ಚುತ್ತಿರುವ ಸಹಭಾಗಿತ್ವದ ಕಾರಣದಿಂದ ಬಾಂಗ್ಲಾದೇಶದ ಭಾರತ ವಿರೋಧಿ ಪಡೆಗಳು ಹೆಚ್ಚಿನ ಶಕ್ತಿ ಪಡೆದುಕೊಂಡಿದ್ದು, ಭಾರತದ ಪ್ರಾದೇಶಿಕ ಭದ್ರತೆಗೆ ಅಪಾಯ ತಂದೊಡ್ಡಬಹುದು ಎಂದು ಚೌಧರಿ ಹೇಳಿದ್ದಾರೆ.
ಇಂತಹ ಘಟನೆಗಳ ಪರಿಣಾಮಗಳು ಭಾರತಕ್ಕೆ ಗಂಭೀರವಾಗಿದ್ದು, ಭಾರತದ ಗಡಿ ಪ್ರದೇಶದ ರಾಜ್ಯಗಳಿಗೆ ಹೆಚ್ಚಿನ ಸಮಸ್ಯೆಗಳನ್ನು ತಂದೊಡ್ಡಬಹುದು.
ಇಸ್ಲಾಮಿಕ್ ಮೂಲಭೂತವಾದದ ಹೆಚ್ಚಳ ಮತ್ತು ಗಡಿಯಾಚೆಗಿನ ಭಯೋತ್ಪಾದನೆಗೆ ಬಾಂಗ್ಲಾದೇಶವನ್ನು ಬಳಸುವುದರಿಂದ, ಹೆಚ್ಚಿನ ಗಡಿ ನುಸುಳುವಿಕೆ, ಆಯುಧ ಕಳ್ಳ ಸಾಗಣೆ ನಡೆಯಬಹುದು. ಇದರ ಪರಿಣಾಮವಾಗಿ, ಈಗಾಗಲೇ ಅಕ್ರಮ ವಲಸೆಯಿಂದ ಸಮಸ್ಯೆ ಎದುರಿಸುತ್ತಿರುವ ಪಶ್ಚಿಮ ಬಂಗಾಳ, ಅಸ್ಸಾಂ, ಬಿಹಾರ, ಒಡಿಶಾ, ಮತ್ತು ಈಶಾನ್ಯ ಭಾರತದ ಭಾಗಗಳು ಇನ್ನಷ್ಟು ತೊಂದರೆಗೊಳಗಾಗಬಹುದು. ಈಗಿನ ಪರಿಸ್ಥಿತಿ ಈ ಪ್ರದೇಶಗಳ ಸುರಕ್ಷತೆ ಮತ್ತು ಭದ್ರತೆಯ ಕುರಿತು ಕಳವಳ ಮೂಡಿಸಿದೆ.
ಮೇಲ್ಕಂಡ ಭಾರತೀಯ ಪ್ರದೇಶಗಳು ಈಗಾಗಲೇ ಜನಾಂಗೀಯ ಸಂಘರ್ಷ, ಅಕ್ರಮ ವಲಸೆ, ಮತ್ತು ಸಾಮಾಜಿಕ ಅಸ್ಥಿರತೆಯ ಸಮಸ್ಯೆಗಳನ್ನು ಎದುರಿಸುತ್ತಿವೆ. ಹೀಗಿರುವಾಗ, ಬಾಂಗ್ಲಾದೇಶದಲ್ಲಿ ನಡೆಯುವ ತೀವ್ರವಾದಿ ಚಟುವಟಿಕೆಗಳು ಭಾರತದ ಸಮಸ್ಯೆಗಳನ್ನು ಇನ್ನಷ್ಟು ಗಂಭೀರವಾಗಿಸುವ ಅಪಾಯಗಳಿವೆ.
ಅದರೊಡನೆ, ಬಾಂಗ್ಲಾದೇಶದಲ್ಲಿ ಉಂಟಾಗುವ ಮೂಲಭೂತವಾದ ಸಂಪೂರ್ಣ ಪ್ರದೇಶದ ಮೇಲೆ 'ಡಾಮಿನೋ ಪರಿಣಾಮ' ಉಂಟುಮಾಡಬಹುದು. ಅಂದರೆ, ಈ ಬೆಳವಣಿಗೆಗಳು ದಕ್ಷಿಣ ಏಷ್ಯಾ ಮತ್ತು ಅದರಾಚೆಗಿನ ಮೂಲಭೂತವಾದಿ ಗುಂಪುಗಳೂ ತಮ್ಮ ಚಟುವಟಿಕೆಗಳನ್ನು ತೀವ್ರಗೊಳಿಸಲು ಪ್ರೇರಣೆ ನೀಡಬಹುದು.
ಈಗ ತಲೆದೋರಿರುವ ತೀವ್ರವಾದದ ತೊಂದರೆಗಳನ್ನು ಎದುರಿಸಲು ಒಂದಷ್ಟು ಕಾರ್ಯತಂತ್ರಗಳು:
ಸೌಮ್ಯವಾದಿ ಗುಂಪುಗಳಿಗೆ ಬೆಂಬಲ: ತೀವ್ರವಾದಿ ಆಲೋಚನೆಗಳ ಪ್ರಭಾವವನ್ನು ತಗ್ಗಿಸಲು ಶಾಂತಿ ಮತ್ತು ಸೌಹಾರ್ದತೆಯನ್ನು ಪ್ರತಿಪಾದಿಸುವ ಗುಂಪುಗಳಿಗೆ ಬೆಂಬಲ ನೀಡುವುದು.
ಆರ್ಥಿಕ ನಿರ್ಬಂಧಗಳು ಅಥವಾ ವ್ಯಾಪಾರ ನಿರ್ಬಂಧಗಳು: ಒಂದು ವೇಳೆ ಬಾಂಗ್ಲಾದೇಶ ಭಾರತ ವಿರೋಧಿ ಚಟುವಟಿಕೆಗಳಿಗೆ ಬೆಂಬಲ ನೀಡಲು ಆರಂಭಿಸಿದರೆ, ಆಗ ಭಾರತ ಆ ದೇಶದ ಮೇಲೆ ಆರ್ಥಿಕ ನಿಬಂಧನೆಗಳನ್ನು ಹೇರುವ, ಅಥವಾ ವ್ಯಾಪಾರ ವಹಿವಾಟನ್ನು ಕಡಿಮೆಗೊಳಿಸುವ ಕ್ರಮಗಳನ್ನು ಕೈಗೊಳ್ಳಬಹುದು.
ಪ್ರಬಲ ಸೇನಾ ಸಿದ್ಧತೆ: ಗಡಿಯಾದ್ಯಂತ ಯಾವುದೇ ಸಮಸ್ಯೆ ಎದುರಾದರೂ ಅದನ್ನು ಎದುರಿಸುವಂತೆ ಸೇನೆಯನ್ನು ಸಂಪೂರ್ಣ ಸನ್ನದ್ಧ ಸ್ಥಿತಿಯಲ್ಲಿ ಇಡುವುದು.
ಬಾಂಗ್ಲಾದೇಶದಲ್ಲಿ ಉಂಟಾಗಿರುವ ಇಸ್ಲಾಮಿಕ್ ತೀವ್ರವಾದದ ವೃದ್ಧಿ ಭಾರತಕ್ಕೆ ಗಂಭೀರ ಭದ್ರತಾ ಸವಾಲುಗಳನ್ನು ಒಡ್ಡಿವೆ. ಅದರಲ್ಲೂ ಗಡಿ ರಾಜ್ಯಗಳಾದ ಅಸ್ಸಾಂ, ಪಶ್ಚಿಮ ಬಂಗಾಳ, ಮತ್ತು ತ್ರಿಪುರಾಗಳು ಹೆಚ್ಚಿನ ಅಪಾಯ ಎದುರಿಸುವ ಸಾಧ್ಯತೆಗಳಿವೆ. ಈ ಪ್ರದೇಶಗಳಿಗೆ ಹಲವಾರು ವರ್ಷಗಳಿಂದ ಬಾಂಗ್ಲಾದೇಶದಿಂದ ಅಕ್ರಮ ವಲಸೆ ನಡೆದಿದೆ. ಭಾರತದ ಮಾಜಿ ಮಿಲಿಟರಿ ಗುಪ್ತಚರ ಅಧಿಕಾರಿಯಾದ ಮೇಜರ್ ನೀತಿ ಸಿಜೆ ಅವರು ಗಡಿ ರಾಜ್ಯಗಳ ಭದ್ರತೆಯ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ.
ಅಸ್ಸಾಂ, ಪಶ್ಚಿಮ ಬಂಗಾಳ, ಮತ್ತು ತ್ರಿಪುರಾದಂತಹ ರಾಜ್ಯಗಳಲ್ಲಿ ಜನಸಂಖ್ಯಾ ಹಂಚಿಕೆಯನ್ನು ಬದಲಾಯಿಸುವ ಪ್ರಯತ್ನಗಳು ನಡೆದಿವೆ ಎಂದು ಮೇಜರ್ ನೀತಿ ಹೇಳಿದ್ದಾರೆ. ಇಂತಹ ಪ್ರಯತ್ನಗಳು ಬಾಂಗ್ಲಾದೇಶದಲ್ಲಿ ಜಮಾತ್ ಎ ಇಸ್ಲಾಮಿ ರೀತಿಯ ಗುಂಪುಗಳು ಹೆಚ್ಚು ಸಕ್ರಿಯವಾಗಲು ಪೂರಕವಾಗಿವೆ. ಅಂದರೆ, ಇಂತಹ ಗುಂಪುಗಳು ತಮ್ಮ ಪ್ರಭಾವ ಮತ್ತು ಆಲೋಚನೆಗಳನ್ನು ಹರಡುವ ಪ್ರಯತ್ನಗಳನ್ನು ಇನ್ನಷ್ಟು ತೀವ್ರಗೊಳಿಸಿ, ಭಾರತದ ಗಡಿ ರಾಜ್ಯಗಳ ಜನಸಂಖ್ಯಾಶಾಸ್ತ್ರ ಮತ್ತು ಸಾಮಾಜಿಕ ಆಯಾಮವನ್ನು ಬದಲಾಯಿಸುವ ಸಾಧ್ಯತೆಗಳಿವೆ.
ಉದಾಹರಣೆಗೆ, ದಕ್ಷಿಣ ಅಸ್ಸಾಮಿನ ಕರೀಮ್ ಗಂಜ್ ಜಿಲ್ಲೆಯಲ್ಲಿ ಈಗಾಗಲೇ ಸಾಕಷ್ಟು ಬಾಂಗ್ಲಾದೇಶಿ ಅಕ್ರಮ ವಲಸಿಗರಿದ್ದು, ಅವರಿಗೆ ಸ್ಥಳೀಯ ರಾಜಕಾರಣಿಗಳು ರಹಸ್ಯವಾಗಿ ಬೆಂಬಲ ನೀಡುತ್ತಿದ್ದಾರೆ. ಭಾರತೀಯ ಅಧಿಕಾರಿಗಳಲ್ಲಿ ಎಚ್ಚರಿಕೆ ಮೂಡಿಸಬೇಕಾದ ವಿಚಾರವೆಂದರೆ, ಭಾರತವನ್ನು ಅಕ್ರಮವಾಗಿ ಪ್ರವೇಶಿಸಿರುವ ಈ ವಲಸಿಗರು ಈಗಾಗಲೇ ಮತದಾರರ ಗುರುತಿನ ಚೀಟಿಯಂತಹ ದಾಖಲೆಗಳನ್ನು ಸಹ ಹೊಂದಿದ್ದಾರೆ. ಇದರ ನೆರವಿನಿಂದ, ಅವರು ಅಧಿಕಾರಿಗಳ ಕಣ್ಣಿಗೂ ಮಣ್ಣೆರಚಬಹುದು ಎಂದು ಮೇಜರ್ ನೀತಿ ಅಭಿಪ್ರಾಯ ಪಟ್ಟಿದ್ದಾರೆ.
ಬಾಂಗ್ಲಾದೇಶಿ ಮತ್ತು ಭಾರತದ ಪ್ರಜೆಗಳು ಮಾತನಾಡುವ ಭಾಷೆ, ಅವರ ದೈಹಿಕ ಲಕ್ಷಣಗಳು ಬಹುತೇಕ ಒಂದೇ ರೀತಿಯಾಗಿದ್ದು, ಬಾಂಗ್ಲಾದೇಶಿ ಮತ್ತು ಭಾರತೀಯರ ನಡುವೆ ವ್ಯತ್ಯಾಸ ಪತ್ತೆಹಚ್ಚುವುದು ಬಹಳ ಪ್ರಯಾಸಕರ ಸವಾಲಾಗಿದೆ.
ಅದರೊಡನೆ, ಮಾನವ ಕಳ್ಳಸಾಗಣೆಯ ಮೂಲಕ ಬಾಂಗ್ಲಾದೇಶಿಗಳನ್ನು ಚಮ್ಮಾರ, ಮೇಸ್ತ್ರಿ, ಚಿಂದಿ ಆಯುವಂತಹ ಕಡಿಮೆ ವೇತನದ ಕೆಲಸಕ್ಕೆ ಭಾರತಕ್ಕೆ ತರಲಾಗುತ್ತದೆ. ಈ ವಲಸಿಗರು ತಮ್ಮದೇ ಆದ ಸಮುದಾಯವನ್ನು ನಿರ್ಮಿಸಿಕೊಂಡು, ಭ್ರಷ್ಟ ಸರ್ಕಾರಿ ಅಧಿಕಾರಿಗಳ ನೆರವಿನಿಂದ ಭಾರತದ ಸಾಮಾಜಿಕ ಅಭಿವೃದ್ಧಿ ಯೋಜನೆಗಳ ಪ್ರಯೋಜನ ಪಡೆಯುತ್ತಾರೆ. ಇಂತಹ ಪರಿಸ್ಥಿತಿ ಭಾರತದ ಆರ್ಥಿಕತೆಯ ಮೇಲೆ ಭಾರೀ ಹೊರೆಯಾಗುತ್ತದೆ ಎಂದು ನೀತಿ ವಿವರಿಸಿದ್ದಾರೆ.
ಅದಲ್ಲದೆ, ಒಂದು ವೇಳೆ ಯಾರಾದರೂ ಬಾಂಗ್ಲಾದೇಶಿ ಪ್ರಜೆ ಭಾರತದಲ್ಲಿ ಅಕ್ರಮವಾಗಿ ವಾಸಿಸುತ್ತಿರುವುದು ಕಂಡುಬಂದರೂ, ಅವರನ್ನು ಬಾಂಗ್ಲಾದೇಶಕ್ಕೆ ಮರಳಿ ಕಳಿಸುವುದು ಬಹಳ ನಿಧಾನಗತಿಯ ಪ್ರಕ್ರಿಯೆಯಾಗಿದೆ.
ಅಸ್ಸಾಮಿನಲ್ಲಿ ನ್ಯಾಯಾಲಯದ ನಿರ್ವಹಣೆಯಡಿ ನಡೆದು, 2019ರಲ್ಲಿ ಪೂರ್ಣಗೊಂಡ ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ಸ್ (ಎನ್ಆರ್‌ಸಿ) ಪ್ರಕ್ರಿಯೆಯ ಪ್ರಕಾರ, ಅಸ್ಸಾಮಿನಲ್ಲಿ ಇಂದಿಗೂ 7 ಲಕ್ಷಕ್ಕೂ ಹೆಚ್ಚು ಅಕ್ರಮ ಬಾಂಗ್ಲಾದೇಶಿಗಳು ವಾಸಿಸುತ್ತಿದ್ದು, ಅವರನ್ನು ಮರಳಿ ಬಾಂಗ್ಲಾದೇಶಕ್ಕೆ ಕಳುಹಿಸಲು ಸಾಧ್ಯವಾಗಿಲ್ಲ.
ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
Advertisement