
ಶ್ರೀಲಂಕಾದ ನೂತನ ಅಧ್ಯಕ್ಷರಾದ ಅನೂರ ಕುಮಾರ ದಿಸ್ಸನಾಯಕೆ ಅವರು ಡಿಸೆಂಬರ್ 15ರಿಂದ 17ರ ತನಕ ಭಾರತಕ್ಕೆ ಭೇಟಿ ನೀಡಿದರು. ಅವರ ಭೇಟಿ ನೆರೆಯ ರಾಷ್ಟ್ರಗಳಾದ ಭಾರತ ಮತ್ತು ಶ್ರೀಲಂಕಾಗಳ ಸಂಬಂಧ ವರ್ಧನೆಯ ನಿಟ್ಟಿನಲ್ಲಿ ಹೆಚ್ಚಿನ ಮಹತ್ವ ಹೊಂದಿತ್ತು. ಈ ಭೇಟಿ, ಭಾರತ ಮತ್ತು ಶ್ರೀಲಂಕಾಗಳ ನಡುವೆ ಬೆಳೆಯುತ್ತಿರುವ ಬಾಂಧವ್ಯ ಮತ್ತು ಸಹಕಾರಕ್ಕೆ ಸಾಕ್ಷಿಯಾಯಿತು.
ಸೆಪ್ಟೆಂಬರ್ ತಿಂಗಳಲ್ಲಿ ಶ್ರೀಲಂಕಾ ಅಧ್ಯಕ್ಷರಾದ ಬಳಿಕ, ಇದು ದಿಸ್ಸನಾಯಕೆ ಅವರ ಮೊದಲ ಅಧಿಕೃತ ವಿದೇಶ ಪ್ರವಾಸವಾಗಿತ್ತು. ಅವರ ಭೇಟಿ, ಭಾರತದೊಡನೆ ಆರ್ಥಿಕ ಸಂಬಂಧವನ್ನು ವೃದ್ಧಿಸುವ, ಮತ್ತು ಶ್ರೀಲಂಕಾದಲ್ಲಿ ಹೆಚ್ಚುತ್ತಿರುವ ಚೀನಾದ ಪಾತ್ರದ ಕುರಿತು ಭಾರತದ ಆತಂಕವನ್ನು ನಿವಾರಿಸುವಲ್ಲಿ ದಿಸ್ಸನಾಯಕೆ ಅವರ ಬದ್ಧತೆಯನ್ನು ಪ್ರದರ್ಶಿಸಿತು.
ಪ್ರಧಾನಿ ನರೇಂದ್ರ ಮೋದಿಯವರ ಜೊತೆಗಿನ ಭೇಟಿಯಲ್ಲಿ, ದಿಸ್ಸನಾಯಕೆ 2022ರ ಶ್ರೀಲಂಕಾದ ತೀವ್ರ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತ ಆ ದೇಶದ ಆರ್ಥಿಕತೆಯನ್ನು ಸ್ಥಿರಗೊಳಿಸಲು ನೆರವಾದುದಕ್ಕೆ ಧನ್ಯವಾದಗಳನ್ನು ಅರ್ಪಿಸಿದರು. ಅವರು ಸುಸ್ಥಿರ ಅಭಿವೃದ್ಧಿ ಮತ್ತು ಚೇತರಿಕೆಯನ್ನು ಕೇಂದ್ರೀಕರಿಸಿ, ಭಾರತದೊಡನೆ ಆರ್ಥಿಕ ಪ್ರಗತಿಯತ್ತ ಕಾರ್ಯಾಚರಿಸುವ ಬಯಕೆಯನ್ನು ವ್ಯಕ್ತಪಡಿಸಿದರು.
ಇಂಧನ ಸಹಕಾರ, ಪ್ರಾದೇಶಿಕ ಭದ್ರತೆ ಸೇರಿದಂತೆ, ವಿವಿಧ ಕ್ಷೇತ್ರಗಳಲ್ಲಿ ಉಭಯ ದೇಶಗಳು ಜೊತೆಯಾಗಿ ಕಾರ್ಯಾಚರಿಸುವ ಯೋಜನೆಗಳ ಕುರಿತು ಜಂಟಿ ಹೇಳಿಕೆ ಬಿಡುಗಡೆಗೊಳಿಸುವ ಮೂಲಕ ದಿಸ್ಸನಾಯಕೆ ಅವರ ಭಾರತ ಭೇಟಿ ಮುಕ್ತಾಯಗೊಂಡಿತು.
ಶ್ರೀಲಂಕಾಗೆ ದ್ರವೀಕೃತ ನೈಸರ್ಗಿಕ ಅನಿಲ (ಎಲ್ಎನ್‌ಜಿ) ಒದಗಿಸುವ ಮತ್ತು ನವೀಕರಿಸಬಹುದಾದ ಇಂಧನ ಸಂಪನ್ಮೂಲ ಯೋಜನೆಗಳ ಕುರಿತು ಜೊತೆಯಾಗಿ ಕಾರ್ಯಾಚರಿಸುವ ಭಾರತದ ಯೋಜನೆಗಳು ಶ್ರೀಲಂಕಾಗೆ ತನ್ನ ಇಂಧನ ಸಂಪನ್ಮೂಲ ಆಯ್ಕೆಗಳನ್ನು ಹೆಚ್ಚಿಸಲು ಅನುಕೂಲ ಕಲ್ಪಿಸಲಿದೆ.
ಈ ಭೇಟಿಯ ವೇಳೆ ಘೋಷಿಸಲಾದ ಒಂದು ಪ್ರಮುಖ ಯೋಜನೆ ಎಂದರೆ, ಯುನೈಟೆಡ್ ಅರಬ್ ಎಮಿರೇಟ್ಸ್ ಬೆಂಬಲದೊಡನೆ, ಭಾರತ ಮತ್ತು ಶ್ರೀಲಂಕಾಗಳ ನಡುವೆ ಇಂಧನ ಪೈಪ್ ಲೈನ್ ನಿರ್ಮಾಣ. ಈ ಪೈಪ್ ಲೈನ್ ನಿರ್ಮಾಣ, ಟ್ರಿಂಕಾಮಲೆಯನ್ನು (ಶ್ರೀಲಂಕಾದ ಒಂದು ಬಂದರು ನಗರ) ಒಂದು ಪ್ರಾದೇಶಿಕ ಇಂಧನ ಕೇಂದ್ರವಾಗಿ ಅಭಿವೃದ್ಧಿ ಪಡಿಸುವ ಯೋಜನೆಗಳು ಶ್ರೀಲಂಕಾಗೆ ಅದರ ತುರ್ತು ಇಂಧನ ಅವಶ್ಯಕತೆಗಳನ್ನು ನೀಗಿಸಲು ನೆರವಾಗುವ ಜೊತೆಗೆ, ಹಿಂದೂ ಮಹಾಸಾಗರ ಪ್ರಾಂತ್ಯದಲ್ಲಿ ತನ್ನ ಉಪಸ್ಥಿತಿ ಹೆಚ್ಚಿಸುವ ಭಾರತದ ಗುರಿಗೆ ನೆರವಾಗಲಿದೆ.
ಭಾರತ ಶ್ರೀಲಂಕಾಗೆ ಗೃಹ ನಿರ್ಮಾಣ, ಸಾಗಾಣಿಕೆ ಮತ್ತು ಡಿಜಿಟಲ್ ಮೂಲಭೂತ ವ್ಯವಸ್ಥೆಗಳ ಪೂರೈಕೆಗೆ ಬೆಂಬಲ ನೀಡುತ್ತಿರುವುದು ಭಾರತದ 'ನೆರೆಹೊರೆಗೆ ಪ್ರಥಮ ಆದ್ಯತೆ' (ನೇಯ್ಬರ್ ಫಸ್ಟ್) ನೀತಿ ಮತ್ತು ಸಾಗರ್ (ಸೆಕ್ಯುರಿಟಿ ಆ್ಯಂಡ್ ಗ್ರೋತ್ ಫಾರ್ ಆಲ್ ಇನ್ ದ ರೀಜನ್ - SAGAR) ಉಪಕ್ರಮಗಳಿಗೆ ಸಾಕ್ಷಿಯಾಗಿದೆ.
ಭಾರತ ಮತ್ತು ಶ್ರೀಲಂಕಾಗಳು ಕೈಗೊಂಡಿರುವ ಒಪ್ಪಂದಗಳು ಮತ್ತು ನೂತನ ಘೋಷಣೆಗಳು ಶ್ರೀಲಂಕಾದ ಆರ್ಥಿಕ ಚೇತರಿಕೆ ಮತ್ತು ಉಭಯ ದೇಶಗಳ ನಡುವೆ ಪ್ರಬಲ ಬಾಂಧವ್ಯಕ್ಕೆ ನೆರವಾಗುವ ನಿರೀಕ್ಷೆಗಳನ್ನು ಮೂಡಿಸಿವೆ. ಆದರೆ, ದೀರ್ಘಾವಧಿಯಲ್ಲಿ ಈ ಯೋಜನೆಗಳು ಶ್ರೀಲಂಕಾದ ಸ್ವಾತಂತ್ರ್ಯ ಮತ್ತು ಆರ್ಥಿಕತೆಯ ಮೇಲೆ ಅದರ ಹತೋಟಿಯ ಮೇಲೆ ಎಂತಹ ಪರಿಣಾಮಗಳನ್ನು ಬೀರಲಿವೆ ಎಂಬ ಕುರಿತು ಕಳವಳಗಳನ್ನು ಮೂಡಿಸಿವೆ.
ಶ್ರೀಲಂಕಾದಲ್ಲಿ ಈ ಕುರಿತು ಟೀಕೆಗಳು ವ್ಯಕ್ತವಾಗಿದ್ದು, ಅದರಲ್ಲೂ ಜನತಾ ವಿಮುಕ್ತಿ ಪೆರಮುನ (ಜೆವಿಪಿ) ದಿಂದ ದೂರಾಗಿರುವ ಫ್ರಂಟ್‌ಲೈನ್ ಸೋಷಿಯಲಿಸ್ಟ್ ಪಾರ್ಟಿ (ಎಫ್ಎಸ್‌ಪಿ) ಹೆಚ್ಚಿನ ಟೀಕೆ ನಡೆಸಿದೆ. ಎಫ್ಎಸ್‌ಪಿ ಈಗ ಆಡಳಿತಾರೂಢ ನ್ಯಾಷನಲ್ ಪೀಪಲ್ಸ್ ಪವರ್ (ಎನ್‌ಪಿಪಿ) ಮೈತ್ರಿಕೂಟದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದೆ.
ಅಧ್ಯಕ್ಷ ಅನೂರ ಕುಮಾರ ದಿಸ್ಸನಾಯಕೆ ಅವರ ನಾಯಕತ್ವದಲ್ಲಿ, ಎನ್‌ಪಿಪಿ ಮೈತ್ರಿಕೂಟ ಶ್ರೀಲಂಕಾದ ರಾಜಕೀಯ ವ್ಯವಸ್ಥೆಗೆ ಹೊಸ ದಿಕ್ಕನ್ನು ಪ್ರದರ್ಶಿಸಿದೆ. ಜೆವಿಪಿ ಮತ್ತು ಅದರ ಮೈತ್ರಿಕೂಟವಾದ ಎನ್‌ಪಿಪಿ ಶ್ರೀಲಂಕಾದ ಆಡಳಿತದಲ್ಲಿ ಮಹತ್ವದ ಬದಲಾವಣೆ ತಂದಿವೆ.
ಆದರೆ, ಎಫ್ಎಸ್‌ಪಿ ಕೆಲವೊಂದು ಒಪ್ಪಂದಗಳ ಕುರಿತು ತನ್ನ ಕಳವಳಗಳನ್ನು ವ್ಯಕ್ತಪಡಿಸಿದ್ದು, ಅವುಗಳು ಶ್ರೀಲಂಕಾದ ಸ್ಥಳೀಯ ಕಾರ್ಮಿಕರು, ಸಂಪನ್ಮೂಲಗಳು ಮತ್ತು ಸಾರ್ವಭೌಮತ್ವಕ್ಕೆ ಧಕ್ಕೆ ಉಂಟುಮಾಡಿ, ಭಾರತಕ್ಕೆ ಅನುಕೂಲ ಕಲ್ಪಿಸಬಹುದು ಎಂದಿದೆ.
ಇಂತಹ ಟೀಕೆಗಳು ದಿಸ್ಸನಾಯಕೆ ಆಡಳಿತದ ಪ್ರಗತಿಯನ್ನು ನಿಧಾನಗೊಳಿಸುವ ಸಾಧ್ಯತೆಗಳಿವೆ. ಗಮನಾರ್ಹ ವಿಚಾರವೆಂದರೆ, ದಿಸ್ಸನಾಯಕೆ ಅವರ ಪಕ್ಷ, ಭಾರತದ ಜೊತೆಗಿನ ಒಪ್ಪಂದಗಳಿಗೆ ಸಂಬಂಧಿಸಿದಂತೆ ಮಾಜಿ ಅಧ್ಯಕ್ಷ ರೆನಿಲ್ ವಿಕ್ರಮಸಿಂಘೆ ಅವರನ್ನು ಟೀಕಿಸುತ್ತಿತ್ತು.
ಎಫ್ಎಸ್‌ಪಿ ಪಕ್ಷ ಟ್ರಿಂಕಾಮಲೆಯನ್ನು ಭಾರತದ ಆರ್ಥಿಕ ಕೇಂದ್ರವಾಗಿ ಪರಿವರ್ತಿಸುವ ಯೋಜನೆಯ ಕುರಿತು ಆತಂಕ ವ್ಯಕ್ತಪಡಿಸಿದ್ದು, ಇದರ ಪರಿಣಾಮವಾಗಿ, ಅಲ್ಲಿ ನೆಲೆಸಿರುವ 7,000ಕ್ಕೂ ಹೆಚ್ಚು ಕುಟುಂಬಗಳನ್ನು ಅವುಗಳ ಮನೆಯಿಂದ ಹೊರ ಕಳಿಸುವ ಅಪಾಯವಿದೆ ಎಂದಿದೆ. ವಿದೇಶಿ ಯೋಜನೆಗಳಿಗೆ ಅಪಾರ ಪ್ರಮಾಣದ ಭೂ ಪ್ರದೇಶಗಳನ್ನು ನೀಡುವ ಕುರಿತೂ ಆತಂಕಗಳು ಹೆಚ್ಚಿದ್ದು, ಭಾರತ ಮನ್ನಾರ್ (ತೈಲ ಮತ್ತು ಅನಿಲ ಸಂಪನ್ಮೂಲಗಳಿಗೆ ಹೆಸರಾದ ಪ್ರದೇಶ) ಮತ್ತು ಕುಚ್ಚವೇಲಿ (ಸಮುದ್ರ ತೀರಗಳು ಮತ್ತು ಪ್ರವಾಸೋದ್ಯಮಕ್ಕೆ ಹೆಸರಾದ ಪ್ರದೇಶ) ಯಂತಹ ಪ್ರದೇಶಗಳಲ್ಲಿ ಸಂಪನ್ಮೂಲಗಳ ಅನ್ವೇಷಣೆಯ ಹಕ್ಕು ಪಡೆಯಬಹುದು ಎಂಬ ಕಳವಳಗಳು ವ್ಯಕ್ತವಾಗಿವೆ. ಇದರ ಪರಿಣಾಮವಾಗಿ, ಶ್ರೀಲಂಕಾದ ಸಂಪನ್ಮೂಲಗಳು ಶ್ರೀಲಂಕಾದ ಪ್ರಜೆಗಳ ಪ್ರಯೋಜನಕ್ಕೆ ಲಭಿಸದ ರೀತಿಯಲ್ಲಿ ಬಳಕೆಯಾಗಬಹುದು ಎಂದು ಜನರು ದಿಗಿಲು ಹೊಂದಿದ್ದಾರೆ.
ಈ ಹಿಂದೆ, ದಿಸ್ಸನಾಯಕೆ ಬಲವಾಗಿ ವಿರೋಧ ವ್ಯಕ್ತಪಡಿಸಿದ್ದ ಎಕನಾಮಿಕ್ ಆ್ಯಂಡ್ ಟೆಕ್ನಾಲಜಿ ಕೋಆಪರೇಶನ್ ಅಗ್ರಿಮೆಂಟ್ (ಇಟಿಸಿಎ) ಒಪ್ಪಂದದ ಪುನರ್ ಸ್ಥಾಪನೆಯ ಕುರಿತೂ ಹೆಚ್ಚಿನ ಆತಂಕಗಳು ವ್ಯಕ್ತವಾಗಿವೆ.
ಸೇವಾ ಕ್ಷೇತ್ರದಲ್ಲಿ ವ್ಯಾಪಾರವನ್ನು ಮುಕ್ತವಾಗಿಸುವ ಇಟಿಸಿಎ ನಿಯಮಗಳ ಪರಿಣಾಮವಾಗಿ, ಶ್ರೀಲಂಕಾದ ಉದ್ಯೋಗ ಮಾರುಕಟ್ಟೆಗೆ ಭಾರತೀಯ ವೃತ್ತಿಪರರು ಪ್ರವೇಶಿಸಿ, ಸ್ಥಳೀಯ ಉದ್ಯೋಗಿಗಳಿಂದ ಅವಕಾಶಗಳನ್ನು ಕಿತ್ತುಕೊಳ್ಳುವ ಅಪಾಯವಿದೆ ಎಂದು ಎಫ್ಎಸ್‌ಪಿ ಪಕ್ಷ ಆರೋಪಿಸಿದೆ.
ಔಷಧ ಕ್ಷೇತ್ರದಂತಹ ಉದ್ಯಮಗಳಲ್ಲಿ ಭಾರತ ಬೃಹತ್ ಉದ್ಯೋಗ ಪಡೆಗಳನ್ನು ಹೊಂದಿದ್ದು, ಅವರೇನಾದರೂ ಶ್ರೀಲಂಕಾದ ಉದ್ಯೋಗ ಕ್ಷೇತ್ರಕ್ಕೆ ಪ್ರವೇಶಿಸಿದರೆ, ಈಗಾಗಲೇ ಉದ್ಯೋಗ ಕಳೆದುಕೊಂಡಿರುವ ಸ್ಥಳೀಯ ವೈದ್ಯರು ಸೇರಿದಂತೆ, ಶ್ರೀಲಂಕಾದ ಕೌಶಲಯುತ ಉದ್ಯೋಗಿಗಳ ಕೆಲಸವನ್ನು ಉಳಿಸುವುದೇ ಸವಾಲಾಗಬಹುದು.
ಇದರ ದುಷ್ಪರಿಣಾಮಗಳು ಕೇವಲ ಕೌಶಲಯುತ ವೃತ್ತಿಪರರ ಮೇಲೆ ಮಾತ್ರವಲ್ಲದೆ, ಸಾಗಾಣಿಕೆ, ಕ್ಷೌರಿಕ ವೃತ್ತಿ, ಬೀದಿ ಬದಿಯ ವ್ಯಾಪಾರದಂತಹ ಸಣ್ಣ ಪ್ರಮಾಣದ ಉದ್ಯಮ ಕ್ಷೇತ್ರಗಳ ಮೇಲೂ ಬೀರಲಿದೆ ಎಂದು ಎಫ್ಎಸ್‌ಪಿ ಎಚ್ಚರಿಸಿದೆ. ಭಾರತದಿಂದ ಕಡಿಮೆ ಬೆಲೆಗೆ ಲಭಿಸುವ ಕಾರ್ಮಿಕರು ಉದ್ಯೋಗ ಮಾರುಕಟ್ಟೆಯಲ್ಲಿ ವ್ಯಾಪಕವಾಗಿ ನುಗ್ಗಿ, ಸ್ಥಳೀಯ ಉದ್ಯೋಗಿಗಳಿಗೆ ನಷ್ಟ ಉಂಟುಮಾಡಬಹುದು ಎಂದು ಎಫ್ಎಸ್‌ಪಿ ಆತಂಕ ವ್ಯಕ್ತಪಡಿಸಿದೆ.
ದಿಸ್ಸನಾಯಕೆ ಭೇಟಿಯ ಪ್ರಮುಖ ಗಮನ ಇಂಧನ ಕ್ಷೇತ್ರದ ಮೇಲಿದ್ದು, ಆ ವಲಯವೂ ಈಗ ಟೀಕೆಗೆ ತುತ್ತಾಗಿದೆ. ಎಲ್ಎನ್‌ಜಿ ಪೂರೈಕೆಯಲ್ಲಿ ಭಾರತದ ಪಾತ್ರ, ಸಮುದ್ರ ತೀರದ ಗಾಳಿ ಯಂತ್ರ, ವಿದ್ಯುತ್ ಗ್ರಿಡ್‌ಗಳ ನಡುವಿನ ಸಂಪರ್ಕದಂತಹ ಕ್ರಮಗಳು ಶ್ರೀಲಂಕಾದ ತುರ್ತು ವಿದ್ಯುತ್ ಮತ್ತು ಇಂಧನ ಸಮಸ್ಯೆಗಳನ್ನು ಕಡಿಮೆಗೊಳಿಸಬಹುದು. ಆದರೆ, ಇಂತಹ ಸಹಯೋಗದ ಪರಿಣಾಮವಾಗಿ, ಶ್ರೀಲಂಕಾ ಭಾರತದ ಇಂಧನ ವ್ಯವಸ್ಥೆಗಳ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗುವಂತೆ ಮಾಡುವ ಅಪಾಯಗಳಿವೆ ಎಂದು ಹಲವರು ಆತಂಕ ವ್ಯಕ್ತಪಡಿಸಿದ್ದಾರೆ.
ಎಫ್ಎಸ್‌ಪಿ ಹಿಂದೆ ಭಾರತದ ಜೊತೆಗೆ ಬಾಂಗ್ಲಾದೇಶದ ಅನುಭವವನ್ನೂ ಉದಾಹರಣೆಯಾಗಿ ನೀಡಿದ್ದು, ಇಂಧನ ಒಪ್ಪಂದಗಳು ಅದಾನಿ ಸಮೂಹದಂತಹ ಭಾರತೀಯ ಕಂಪನಿಗಳಿಗೆ ಹೆಚ್ಚಿನ ನಿಯಂತ್ರಣ ಒದಗಿಸಿ, ಬಾಂಗ್ಲಾದೇಶಕ್ಕೆ ತನ್ನದೇ ಸಂಪನ್ಮೂಲಗಳ ಮೇಲೆ ಮಿತಿ ಹೇರಿದವು ಎಂದಿದೆ. ಇಂಧನ ಒಪ್ಪಂದಗಳಲ್ಲಿ ದೀರ್ಘಕಾಲದ ಖರ್ಚು ವೆಚ್ಚಗಳು ಮತ್ತು ಲಾಭದ ಕುರಿತು ಸ್ಪಷ್ಟ ಚಿತ್ರಣ ಇಲ್ಲದಿರುವುದರಿಂದ, ಶ್ರೀಲಂಕಾದಲ್ಲೂ ಭವಿಷ್ಯದ ಕುರಿತು ಆತಂಕಗಳು ಮೂಡಿವೆ.
ಇಂತಹ ಟೀಕೆಗಳು, ದೊಡ್ಡದಾದ ಭೌಗೋಳಿಕ ರಾಜಕಾರಣದ ಸಮಸ್ಯೆಗಳಿಗೂ ಸಂಪರ್ಕಿತವಾಗಿವೆ. ಎಫ್ಎಸ್‌ಪಿ ಪಕ್ಷದ ವಸಂತ ಮುದಲಿಗೆ ಅವರು ಭಾರತದ 'ಅಖಂಡ ಭಾರತ' ಚಿಂತನೆಯನ್ನು ಪ್ರಸ್ತಾಪಿಸಿ, ಇದು ಸಂಪೂರ್ಣ ದಕ್ಷಿಣ ಏಷ್ಯಾವನ್ನು ಭಾರತದ ಪ್ರಭಾವಕ್ಕೆ ಒಳಪಡಿಸಿ, ದೀರ್ಘಾವಧಿಯಲ್ಲಿ ಪ್ರಾದೇಶಿಕ ಪಾರಮ್ಯ ಸಾಧಿಸುವ ಗುರಿಯನ್ನು ಹೊಂದಿದೆ ಎಂದಿದ್ದಾರೆ.
ಶ್ರೀಲಂಕಾದಲ್ಲಿ ಹೆಚ್ಚುತ್ತಿರುವ ಭಾರತದ ಆರ್ಥಿಕ ಮತ್ತು ಕಾರ್ಯತಂತ್ರದ ಹಸ್ತಕ್ಷೇಪ ದೇಶದ ರಾಜಕೀಯ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಅಪಾಯವಿದೆ ಎಂದು ಮುದಲಿಗೆ ವಿವರಿಸಿದ್ದಾರೆ. ಇದೆಲ್ಲದರ ಪರಿಣಾಮವಾಗಿ, ಶ್ರೀಲಂಕಾ ಭಾರತದ ತೀವ್ರ ಪ್ರಭಾವಕ್ಕೆ ಒಳಗಾಗಿ, ತನ್ನ ಸ್ವಂತ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಾಗದೆ, ಭಾರತದ ಮೇಲೆ ಅವಲಂಬಿತವಾಗಿರುವ ದೇಶದಂತಾದೀತು ಎಂದು ಮುದಲಿಗೆ ಎಚ್ಚರಿಕೆ ನೀಡಿದ್ದಾರೆ. ಇಂತಹ ಭಾವನೆಗಳು, ಶ್ರೀಲಂಕಾದ ಸಮಾಜದಲ್ಲಿ ವಿದೇಶೀ ಸಹಯೋಗಿಗಳೊಡನೆ ಕಾರ್ಯಾಚರಿಸುವ ಸಂದರ್ಭದಲ್ಲಿ ದೇಶದ ಸ್ವಾತಂತ್ರ್ಯವನ್ನು ರಕ್ಷಿಸುವ ಕುರಿತು ಇರುವ ಕಳವಳಗಳನ್ನು ಪ್ರದರ್ಶಿಸಿದೆ.
ಇವೆಲ್ಲ ಆತಂಕಗಳ ಹೊರತಾಗಿಯೂ, ದಿಸ್ಸನಾಯಕೆ ಭಾರತ ಭೇಟಿ 2022ರ ತೀವ್ರ ಆರ್ಥಿಕ ಬಿಕ್ಕಟ್ಟಿನ ಬಳಿಕ ಶ್ರೀಲಂಕಾದ ಅರ್ಥ ವ್ಯವಸ್ಥೆಯ ಪುನಶ್ಚೇತನದತ್ತ ನಡೆಸುತ್ತಿರುವ ಪ್ರಾಯೋಗಿಕ ಪ್ರಯತ್ನದಂತೆ ಕಂಡುಬರುತ್ತಿದೆ. ಆಹಾರ, ಇಂಧನ, ಔಷಧಗಳಿಗಾಗಿ ನಾಲ್ಕು ಬಿಲಿಯನ್ ಡಾಲರ್ ನೆರವು ಸೇರಿದಂತೆ, ಭಾರತ ಒದಗಿಸಿದ ಆರ್ಥಿಕ ನೆರವು ಶ್ರೀಲಂಕಾದ ಅರ್ಥ ವ್ಯವಸ್ಥೆಯನ್ನು ಅದರ ಅತ್ಯಂತ ಸಂಕಷ್ಟದ ಅವಧಿಯಲ್ಲಿ ಸ್ಥಿರಗೊಳಿಸಲು ಬಹಳಷ್ಟು ಪ್ರಯೋಜನಕಾರಿಯಾಗಿತ್ತು.
ಶ್ರೀಲಂಕಾದ ಅದ್ಯಕ್ಷರಾಗಿ ಆಯ್ಕೆಯಾದ ಬಳಿಕ, ದಿಸ್ಸನಾಯಕೆಯವರ ಮೊದಲ ನವದೆಹಲಿ ಭೇಟಿಯ ಸಂದರ್ಭದಲ್ಲಿ ಮಾಡಲಾದ ಒಪ್ಪಂದಗಳು ಹೂಡಿಕೆ ಸಹಯೋಗಗಳನ್ನು ಉತ್ತೇಜಿಸಿ, ಸಾಗಾಣಿಕಾ ವ್ಯವಸ್ಥೆಗಳನ್ನು ಬಲಪಡಿಸಿ, ವ್ಯಾಪಾರವನ್ನು ಹೆಚ್ಚಿಸುವ ಗುರಿಗಳನ್ನು ಹೊಂದಿವೆ.
ಉಭಯ ದೇಶಗಳ ನಡುವೆ ವ್ಯಾಪಾರದಲ್ಲಿ ಹಣಕಾಸಿನ ಇತ್ಯರ್ಥ ನಡೆಸಲು ಭಾರತೀಯ ರೂಪಾಯಿ (ಐಎನ್ಆರ್) ಮತ್ತು ಶ್ರೀಲಂಕಾದ ರೂಪಾಯಿ (ಎಲ್‌ಕೆಆರ್) ಬಳಸೋಣ ಎಂದು ಭಾರತ ಸಲಹೆ ನೀಡಿದ್ದು, ಶ್ರೀಲಂಕಾಗೆ ತನ್ನ ವಿದೇಶೀ ವಿನಿಮಯ ಸಂಗ್ರಹದ ಮೇಲಿನ ಒತ್ತಡವನ್ನು ಕಡಿಮೆಗೊಳಿಸಲು ನೆರವಾಗಲಿದೆ. ಅದರೊಡನೆ, ಮುಂದಿನ ಐದು ವರ್ಷಗಳಲ್ಲಿ 1,500 ನಾಗರಿಕ ಸೇವಾ ಸಿಬ್ಬಂದಿಗಳಿಗೆ ತರಬೇತಿ ನೀಡಲು ಉದ್ದೇಶಿಸಲಾಗಿದ್ದು, ಇದು ಸ್ಥಳೀಯ ಆಡಳಿತವನ್ನು ಇನ್ನಷ್ಟು ಉತ್ತಮಪಡಿಸುವ ಗುರಿಯನ್ನು ಹೊಂದಿದೆ.
ಇಂತಹ ಒಪ್ಪಂದಗಳಿಂದ ಉಂಟಾಗುವ ಪ್ರಯೋಜನಗಳು ಮತ್ತು ಅವುಗಳಿಂದ ಬರಬಹುದಾದ ಅಪಾಯಗಳನ್ನು ಸಮತೋಲನಗೊಳಿಸುವ ಸವಾಲು ದಿಸ್ಸನಾಯಕೆ ಸರ್ಕಾರದ ಮುಂದಿದೆ. ಇಂತಹ ಸಹಯೋಗಗಳಿಂದ ನೈಜ ಪ್ರಯೋಜನ ಪಡೆದು, ಶ್ರೀಲಂಕಾದ ಜನರಿಗೆ ಅವರ ಅವಶ್ಯಕತೆಗಳನ್ನು ಹೊಂದುವಂತೆ ಮಾಡುವ ಸಲುವಾಗಿ ಶ್ರೀಲಂಕಾ ಇವುಗಳನ್ನು ಜಾಗರೂಕವಾಗಿ ನಿರ್ವಹಿಸಬೇಕು ಎಂದು ತಜ್ಞರು ಭಾವಿಸಿದ್ದಾರೆ.
ಭಾರತದೊಡನೆ ಕಾರ್ಯಾಚರಿಸುವುದು ಶ್ರೀಲಂಕಾಗೆ ಆರ್ಥಿಕ ಪ್ರಯೋಜನಗಳನ್ನು ನೀಡಬಹುದು. ಆದರೆ, ಇಂತಹ ವ್ಯವಹಾರಗಳಲ್ಲಿ ಪಾರದರ್ಶಕತೆ, ಸಂಪನ್ಮೂಲಗಳ ನ್ಯಾಯಯುತ ಹಂಚಿಕೆ, ಮತ್ತು ಸ್ಥಳೀಯ ಉದ್ಯಮಗಳ ರಕ್ಷಣೆಯನ್ನು ಕಾಯ್ದುಕೊಳ್ಳುವುದು ಅಷ್ಟೇ ಮುಖ್ಯವಾಗಿದೆ. ದಿಸ್ಸನಾಯಕೆ ಇಂತಹ ಒಪ್ಪಂದಗಳನ್ನು ಶ್ರೀಲಂಕಾದ ಆರ್ಥಿಕ ಪ್ರಗತಿ ಸಾಧಿಸಲು ಬಳಸಲಿದ್ದು, ಇದೇ ವೇಳೆ ಶ್ರೀಲಂಕಾದ ಸ್ವಾತಂತ್ರ್ಯ ಮತ್ತು ಜನರ ಜೀವನೋಪಾಯವನ್ನು ರಕ್ಷಿಸುವುದು ಅವರ ಜವಾಬ್ದಾರಿಯಾಗಿದೆ. ಈ ಮೂಲಕ, ದಿಸ್ಸನಾಯಕೆ ಅವರ ನಾಯಕತ್ವ ನಿಜಕ್ಕೂ ಪರೀಕ್ಷೆಗೆ ಒಳಪಡಲಿದೆ.
ದಿಸ್ಸನಾಯಕೆ ಅವರ ಭಾರತ ಭೇಟಿ ಉಭಯ ದೇಶಗಳ ಸಂಬಂಧದ ವೃದ್ಧಿಗೆ ಹೊಸ ಬಾಗಿಲು ತೆರೆದಿದೆ. ಆದರೆ, ಈ ಒಪ್ಪಂದಗಳನ್ನು ಹೇಗೆ ಕಾರ್ಯರೂಪಕ್ಕೆ ತರಲಾಗುತ್ತದೆ, ಅವುಗಳು ನಿಜಕ್ಕೂ ಶ್ರೀಲಂಕಾದ ಜನರಿಗೆ ನೆರವಾಗಲಿವೆಯೇ ಎನ್ನುವುದರ ಮೇಲೆ ಒಪ್ಪಂದಗಳ ಯಶಸ್ಸು ಅವಲಂಬಿಸಿದೆ.
ಶ್ರೀಲಂಕಾ ಈಗ ತನ್ನ ಚೇತರಿಕೆಗಾಗಿ ಕಾರ್ಯಾಚರಿಸುತ್ತಿದ್ದು, ದಿಸ್ಸನಾಯಕೆ ಸರ್ಕಾರ ಭಾರತದ ಬೆಂಬಲವನ್ನು ಬಳಸಿಕೊಂಡು, ತನ್ನ ದೇಶದ ಸ್ವಾತಂತ್ರ್ಯವನ್ನು ಕಾಪಾಡಿಕೊಂಡು, ಆರ್ಥಿಕ, ಮತ್ತು ದೀರ್ಘಕಾಲೀನ ಸ್ಥಿರತೆಯನ್ನು ಕಾಯ್ದುಕೊಳ್ಳಬೇಕಿದೆ.
ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
Advertisement