ಭಗವದ್ಗೀತೆಯಿಂದ ಕಲಿಯಬಹುದಾದ ಆರ್ಥಿಕ ನಿರ್ವಹಣೆ ಸೂತ್ರಗಳು( ಸಾಂಕೇತಿಕ ಚಿತ್ರ)
ಭಗವದ್ಗೀತೆಯಿಂದ ಕಲಿಯಬಹುದಾದ ಆರ್ಥಿಕ ನಿರ್ವಹಣೆ ಸೂತ್ರಗಳು( ಸಾಂಕೇತಿಕ ಚಿತ್ರ)

Bhagavadgita lessons: ಭಗವದ್ಗೀತೆಯಿಂದ ಕಲಿಯಬಹುದಾದ ಆರ್ಥಿಕ ನಿರ್ವಹಣೆಯ 10 ಸೂತ್ರಗಳು... (ಹಣಕ್ಲಾಸು)

ಹಣಕ್ಲಾಸು-397-ರಂಗಸ್ವಾಮಿ ಮೂಕನಹಳ್ಳಿ

ಸನಾತನ ಧರ್ಮದ ನಾಲ್ಕು ಕಾಲುಗಳು ಹೀಗಿವೆ: 

ಧರ್ಮ: ಧರ್ಮವೆಂದರೆ ಒಳಿತು-ಕೆಡುಕುಗಳನ್ನ ಉಲ್ಲೇಖಿಸುವ, ಪ್ರತ್ಯೇಕಿಸುವ, ಸರಿಯಾದ ಮಾರ್ಗದಲ್ಲಿ ನಡೆಯುವಂತೆ ಪ್ರೇರೇಪಿಸುವುದು. 

ಇಂದಿನ ದಿನಗಳಲ್ಲಿ ಇದನ್ನ ನಾವು ಡ್ಯೂಟಿ, ಅಥವಾ ಕೆಲಸ ಎನ್ನಬಹುದು. ಇದರ ಜೊತೆಗೆ ಬರುವುದು ಕರ್ಮ. ಕರ್ಮವೆಂದರೆ ಆಕ್ಷನ್. ಕೆಲಸ ಮಾಡುವುದು. ನೆನಪಿರಲಿ ಯಾರೊಬ್ಬರೂ ಧರ್ಮ ಮತ್ತು ಕರ್ಮವನ್ನ ನಿರಾಕರಿಸುವಂತಿಲ್ಲ. ಅವರವರ ಪಾಲಿನ ಕೆಲಸವನ್ನ ಮಾಡುತ್ತಲೆ ಇರಬೇಕು.

ಅರ್ಥ: ಹಣ, ಸಂಪತ್ತು ಅಥವಾ ಯಾವುದೆಲ್ಲಾ ಎಕನಾಮಿಕ್ ವ್ಯಾಲ್ಯೂ ಇರುತ್ತದೆ ಅದು ಎನ್ನುವ ಅರ್ಥವನ್ನ ಇದು ನೀಡುತ್ತದೆ. ನೆಲ, ಮನೆ, ಕಾರು, ಬಂಗಾರ, ವಜ್ರ ವೈಡೂರ್ಯ, ಇತ್ಯಾದಿ ಯಾವುದೆಲ್ಲವನ್ನ ಸಮಾಜದಲ್ಲಿ ಮೌಲ್ಯವಿದೆ ಎಂದುಕೊಳ್ಳುತ್ತೇವೆ ಅವೆಲ್ಲವೂ ಇಲ್ಲಿ ಜಾಗವನ್ನ ಪಡೆದುಕೊಳ್ಳುತ್ತದೆ.

ಕಾಮ: ಭೌತಿಕ ವೈಭೋಗಗಳನ್ನ ನಾವು ಕಾಮ ಎನ್ನುತ್ತೇವೆ. ಜಗತ್ತಿನಲ್ಲಿ ಪಡೆಯಬಹುದಾದ ಎಲ್ಲಾ ರೀತಿಯ ಮೆಟಿರಿಯಲಿಸ್ಟಿಕ್ ಸುಖಗಳೆನ್ನವನ್ನ ನಾವು ಕಾಮವೆಂದು ಕರೆಯಬಹುದು.

ಮೋಕ್ಷ: ಇದು ಪ್ರತಿಯೊಂದು ಜೀವಿಯ ಕೊನೆಯ ಹಂತದ ಸಾಧನೆ ಎಂದು ಹೇಳಬಹದು. ಮೇಲಿನ ಮೂರು ಹಂತಗಳಿಂದ ದೂರಾಗಿ, ಎಲ್ಲದರಲ್ಲೂ ಅಂತರ ಕಾಪಾಡಿಕೊಂಡು ಕೊನೆಯ ಹಂತದಲ್ಲಿ ಜೀವನ್ಮರಣಗಳ ಚಕ್ರದಿಂದ ಕೂಡ ವಿಮುಕ್ತಿ ಪಡೆಯುವ ಕ್ರಿಯೆಗೆ ಮೋಕ್ಷ ಎನ್ನುತ್ತೇವೆ.

ಭಗವದ್ಗೀತೆ (Bhagavad Gita) ಯನ್ನ ನಾವು ಗೀತೆ, ಗೀತೋಪನಿಷತ್ ಎಂದು ಕೂಡ ಕರೆಯುತ್ತೇವೆ. ಇದರಲ್ಲಿ ಒಟ್ಟು ಹದಿನೆಂಟು ಅಧ್ಯಾಯಗಳಿವೆ. ಅವುಗಳಲ್ಲಿರುವ ಸಾರವನ್ನ ಇಂದಿನ ಬದುಕಿಗೆ ಬೇಕಾದವುಗಳನ್ನ, ಅರ್ಥವನ್ನ ಹೆಚ್ಚಿಸಿಕೊಳ್ಳುತ್ತಾ, ನಮ್ಮ ಕರ್ತವ್ಯದಿಂದ ವಿಮುಖರಾಗದಂತೆ, ಸಾಧ್ಯವಾದಷ್ಟೂ ಸುಖ ಮತ್ತು ಶಾಂತಿಯಿಂದ ಬದುಕಲು ಬೇಕಾಗುವ ಅಂಶಗಳನ್ನ ಹೆಕ್ಕಿ ಕೊಡುವ ಪ್ರಯತ್ನವನ್ನ ಈ ಅಧ್ಯಾಯದಲ್ಲಿ , ಮುಂದಿನ ಸಾಲುಗಳಲ್ಲಿ ನೀವು ಕಾಣಬಹುದು.

1. ನಮಗೆ ನಾವೇ ದಾರಿದೀಪ: ನಮ್ಮ ಉದ್ದಾರಕ್ಕೆ ನಾವು ಬೇರೊಬ್ಬರ ಮೇಲೆ ಅವಲಂಬಿತರಾಗಬಾರದು. ಇದು ಬದುಕಿನ ಎಲ್ಲಾ ಕಾರ್ಯಕ್ಷೇತ್ರಕ್ಕೂ , ಮಜಲುಗಳಿಗೂ ಅನ್ವಯವಾಗುತ್ತದೆ. ಅದರಲ್ಲೂ ಸಂಪತ್ತಿನ ಸೃಷ್ಟಿಯಲ್ಲಿ ಈ ಮಾತು ಹೆಚ್ಚು ಅನ್ವಯ. ನೀವೇ ಗಮನಿಸಿ ನೋಡಿ, ಬೇರೆ ಯಾರಾದರೂ ನಮ್ಮ ಉದ್ದಾರಕ್ಕೆ ಏಕೆ ಶ್ರಮಿಸುತ್ತಾರೆ? ಎಲ್ಲರೂ ಅವರವರ ಉದ್ದಾರಕ್ಕೆ ಅವರು ಶ್ರಮಿಸಬೇಕು. ಸೃಷ್ಟಿಸಿದ ಸಂಪತ್ತಿನ ರಕ್ಷಣೆ, ವೃದ್ಧಿ ಎಲ್ಲವೂ ನಾವೇ ಮಾಡಿಕೊಳ್ಳಬೇಕು. ಅವಲಂಬನೆ ಆದಷ್ಟೂ ಕಡಿಮೆ ಮಾಡಿಕೊಳ್ಳಬೇಕು.

“ಉದ್ಧರೇದಾತ್ಮನಾತ್ಮನಂ ನಾತ್ಮಾನಮವಸಾದಯೇತ್। ಆತ್ಮೈವ ಹ್ಯಾತ್ಮನೋ ಬನ್ಧುರಾತ್ಮೈವ ರಿಪುರಾತ್ಮನಃ॥

“ಒಬ್ಬನು ತನ್ನನ್ನು ತಾನೇ ಉದ್ಧರಿಸಿಕೊಳ್ಳಬೇಕು. ಒಬ್ಬನು ತನ್ನನ್ನು ತಾನು ಖಿನ್ನತೆಗೆ ಒಳಗಾಗಲು ಅಥವಾ ಸೋಲಲು ಬಿಡಬಾರದು ಏಕೆಂದರೆ ನಮ್ಮ ಅತಿ ದೊಡ್ಡ ಮಿತ್ರ ಅಥವಾ ಅತಿ ದೊಡ್ಡ ಶತ್ರು ಬೇರಾರೂ ಅಲ್ಲ, ಅದು ನಾವೇ! ಎನ್ನುತ್ತದೆ ಗೀತೆಯ ಶ್ಲೋಕ. ಇದರರ್ಥ ನಾವು ಇತರರಿಂದ, ಪುಸ್ತಕಗಳ, ಗುರುಗಳ ಸಹಾಯದಿಂದ ಕಲಿಯಬೇಕು. ಕೊನೆಯ ನಿರ್ಧಾರ ಮತ್ತು ಕರ್ಮವನ್ನ ನಾವೇ ಮಾಡಬೇಕು.

2. ಮಾಡುವ ಕೆಲಸ ಮಾತ್ರ ನಿನ್ನದು ಫಲಾಫಲದ ಆಸೆಯನ್ನ ಬಿಟ್ಟು ಬಿಡು: ನಾವು ನಮ್ಮ ಕೆಲಸವನ್ನ ಮಾತ್ರ ಮಾಡಬಲ್ಲೆವು . ಕೆಲಸದ ಫಲಿತಾಂಶ ನಮ್ಮ ಕೈಲಿಲ್ಲ. ಮಾಡುವ ಕೆಲಸವನ್ನ ಸರಿಯಾಗಿ ಮಾಡುವುದಷ್ಟೇ ನಮ್ಮ ಕೆಲಸ.

ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ |
ಮಾ ಕರ್ಮಫಲಹೇತುರ್ಭೂರ್ಮಾ ತೇ ಸಂಗೋಸ್ತ್ವಕರ್ಮಣಿ ||೪೭||

ಯೋಗಸ್ಥಃ ಕುರು ಕರ್ಮಾಣಿ ಸಂಗಂ ತ್ಯಕ್ತ್ವಾ ಧನಂಜಯ | ಸಮೋಭೂತ್ವಾ ಸಮತ್ವಂ ಯೋಗ ಉಚ್ಯತೇ ||೪೮||

ನಮಗೆ ಕರ್ಮ ಮಾಡುವುದರಲ್ಲಿ ಮಾತ್ರ ಅಧಿಕಾರವಿದೆ, ಅದರ ಫಲದಲ್ಲಿ ಇಲ್ಲ. ಆದ್ದರಿಂದ ಮಾಡಿದ ಕೆಲಸಕ್ಕೆ ಪ್ರತಿಫಲಾಪೇಕ್ಷಿಯಾಗಿ ಫಲಕ್ಕೆ ಕಾರಣನೂ ತಾನೆಂದುಕೊಳ್ಳಬೇಡ ಮತ್ತು ಕರ್ಮಮಾಡದೇ ಇರಬೇಕೆಂಬ ಹಂಬಲ ನಿನ್ನಲ್ಲಿ ಉಂಟಾಗದಿರಲಿ (47). ಹಾಗೂ ಗೆಲವು-ಸೋಲುಗಳಿಗೆ ಕುಂದದೆ ಎರಡನ್ನೂ ಸಮಾನಚಿತ್ತದಿಂದ ಸ್ವೀಕರಿಸುತ್ತ ನಿನ್ನ ಕರ್ತವ್ಯಗಳನ್ನು ಮಾಡು. ಈ ಸಮತ್ತ್ವಭಾವವೇ ಯೋಗ ಎಂದು ಕರೆಯಲ್ಪಡುತ್ತದೆ (48)” ಎಂಬುದು ಈ ಶ್ಲೋಕಗಳ ಅರ್ಥ.

3. ಕರ್ಮದ ಫಲಿತಾಂಶ ಮನಸ್ಸಿನ ಮೇಲೆ ಪರಿಣಾಮ ಬೀರದಿರಲಿ: ನಾವು ನಮ್ಮ ಕೆಲಸವನ್ನು ಮಾತ್ರ ಮಾಡಬೇಕು, ಫಲವನ್ನ ನಿರೀಕ್ಷಿಸಬಾರದು, ಅಥವಾ ಅದರ ಕುರಿತು ಚಿಂತಿಸದೆ ಕರ್ಮ ಮಾಡಬೇಕು ಎನ್ನುವುದು ಮೇಲಿನ ಅಂಶದ ಸಾರ. ಈ ಅಂಶದಲ್ಲಿ ಬರುವ ಫಲಿತಾಂಶ ಧನ್ಯಾತ್ಮಕವೋ ಅಥವಾ ಋಣಾತ್ಮಕವೋ ಯಾವುದೇ ಆಗಿರಲಿ, ಅದು ನಮ್ಮ ಮನಸ್ಸಿನ ಮೇಲೆ ಯಾವುದೇ ರೀತಿಯ ಪರಿಣಾಮವನ್ನ ಬೀರದಂತೆ ಸಮಚಿತ್ತತೆಯನ್ನ ಕಾಯ್ದು ಕೊಳ್ಳಬೇಕು ಎನ್ನುವುದನ್ನ ಹೇಳುತ್ತದೆ. ಅಂದರೆ ಗಮನಿಸಿ ನಾವು ಬಯಸಿದ ಫಲಿತಾಂಶ ಬರದೇ ಹೋದ ಪಕ್ಷದಲ್ಲಿ ನಾವು ಕುಗ್ಗಬೇಕಾಗಿಲ್ಲ, ಬೇಸರದಿಂದ ಕಾರ್ಯವಿಮುಖರಾಗಬೇಕಿಲ್ಲ. ಇನ್ನಷ್ಟು ಹೊಸ ಹುಮ್ಮಸ್ಸಿನಿಂದ ಕಾರ್ಯ ಸಾಧನೆಯೆಡೆಗೆ ಮುಖ ಮಾಡಬೇಕು.

4. ಬಾಹ್ಯ ಕಾರಣಗಳು ಗುರಿಯಿಂದ ವಿಮುಖರನ್ನಾಗಿಸದೆ ಇರಲಿ: ಸಮಾಜ ಎಂದಮೇಲೆ ನಾವು ಅಲ್ಲಿನ ಕಟ್ಟುಪಾಡುಗಳಿಗೆ ಬೆಲೆಯನ್ನ ಕೊಡಬೇಕಾಗುತ್ತದೆ. ಆದರೆ ಆ ಕಾರಣಗಳು ನಮ್ಮ ಗೆಲುವಿನ ಹಾದಿಯಲ್ಲಿ ಅಡ್ಡಿಯಾಗಬಾರದು. ಅವರಿವರು ಏನೆಂದುಕೊಂಡಾರು ಎನ್ನುವುದರ ಆಧಾರದ ಮೇಲೆ ನಾವು ಬಹಳಷ್ಟು ಕೆಲಸಗಳನ್ನ ಮಾರ್ಪಾಡು ಮಾಡಿಕೊಳ್ಳುತ್ತೇವೆ. ಅದು ನಮ್ಮ ಕಾರ್ಯಕ್ಕೆ ಅಡ್ಡಿಯಲ್ಲದಿದ್ದರೆ ಪರವಾಗಿಲ್ಲ. ನಮ್ಮ ಕಾರ್ಯಕ್ಕೆ ಅಡ್ಡಿಯಾಗುವುದಾದರೆ ನಾವೆಂದೂ ಅದನ್ನ ಬದಲಾಯಿಸಿಕೊಳ್ಳಬಾರದು. ಇದರ ಜೊತೆಗೆ ನಾವೇ ಕಟ್ಟಿ ಕೊಂಡ ಬದುಕು, ಸಾಲ, ಇನ್ಸ್ಟಾಲ್ಮೆಂಟ್, ಮಕ್ಕಳು, ಕುಟುಂಬ ಇವುಗಳು ಕೂಡ ಕಾರ್ಯಸಾಧನೆಗೆ ಅಡ್ಡಿಯಾಗಬರದು.

5. ಮನಸ್ಸಿನ ಸಹಜತೆಯನ್ನ ಕಾಪಿಡಿಕೊಳ್ಳುವುದು ಅತಿ ಮುಖ್ಯ: ನಾವು ಒಬ್ಬರಂತೆ ಒಬ್ಬರಿಲ್ಲ. ನಮ್ಮ ಸ್ನೇಹಿತನೊಬ್ಬ ಹೊಸ ಉದ್ದಿಮೆಯನ್ನ ತೆರೆದು, ಅದಕ್ಕೆ ಬೇಕಾದ ಹೂಡಿಕೆದಾರರನ್ನ ಕೂಡ ಓಲೈಸಿ, ಕರೆತಂದು ಅದರಲ್ಲಿ ಯಶಸ್ಸು ಪಡೆದುಕೊಂಡ ಎಂದು ನಾವು ಉದ್ದಿಮೆಯನ್ನ, ಅದು ಅದೇ ಉದ್ದಿಮೆಯನ್ನ ತೆರೆಯಲು ಹೊರಡುವುದು ಸಹಜವಲ್ಲ. ನಮ್ಮ ಕಾಲಿಂಗ್, ಮನಸ್ಸಿನ ಕೂಗೇನು ಎನ್ನುವುದನ್ನ ನಾವು ತಿಳಿದುಕೊಳ್ಳಬೇಕು. ಗಮನಿಸಿ ನೋಡಿ ಇತರರನ್ನ ನಾವು ನಕಲು ಮಾಡುವಂತಿಲ್ಲ, ಏಕೆಂದರೆ ಆತನ ಜೀವನದ ಪ್ರಶ್ನೆಗೆ ಆತನ ಉತ್ತರ ಸರಿ ಇರುತ್ತದೆ. ನಮ್ಮ ಜೀವನದ ಪ್ರಶ್ನೆಗೆ ನಮ್ಮ ಉತ್ತರವನ್ನ ನಾವೇ ಸಿದ್ಧಗೊಳಿಸಬೇಕು. ನಕಲು ಮಾಡುವುದರಿಂದ ಉತ್ತರ ತಪ್ಪಾಗುತ್ತದೆ, ಜೊತೆಗೆ ಸಮಯವೂ ನಷ್ಟವಾಗುತ್ತದೆ. ಹೀಗಾಗಿ ನಮ್ಮ ನಿಜವಾದ ಬಯಕೆಯೇನು? ನಾವೇನಾಗಬೇಕು ಎನ್ನುವುದನ್ನ ಕೇಳಿಕೊಳ್ಳಬೇಕು.

6. ಮನಸ್ಸಿನ ಸಹಜತೆ, ಸ್ವಾಭಾವಿಕತೆಯನ್ನ ಅಭ್ಯಾಸಗಳ ಮೂಲಕ ಹೆಚ್ಚಿಸಿಕೊಳ್ಳಬಹುದು: ನಮ್ಮ ಒಟ್ಟು ಅಭ್ಯಾಸಗಳ ಮೊತ್ತವೇ ನಾವು ಎನ್ನುವ ಮಾತನ್ನ ನಾವು ಕೇಳಿದ್ದೇವೆ. ಗೀತೆ ಕೂಡ ಅದನ್ನೇ ಹೇಳುತ್ತದೆ. ನಮಗೇನು ಬೇಕು ಎನ್ನುವುದನ್ನ ನಿತ್ಯ ಪಠಿಸುತ್ತಿದ್ದರೆ , ಅದೇ ನಾವಾಗುತ್ತೇವೆ. ಅದೇ ಸಹಜವಾಗುತ್ತದೆ. ಅದು ಸ್ವಾಭಾವಿಕವಾಗಿ ಪರಿವರ್ತನೆಗೊಳ್ಳುತ್ತದೆ. ಮನಸ್ಸಿಗೆ ಯಾವುದು ಸಹಜ, ಸ್ವಾಭಾವಿಕವೋ ಅದನ್ನ ಗಳಿಸುವುದು ಬಹಳ ಕಷ್ಟವೇನೂ ಆಗದು. ವ್ಯಾಪಾರ ಮಾಡಿ ಹಣ ಸಂಪಾದನೆಯ ದಾರಿಯನ್ನ ಹಿಡಿದವರಿಗೆ ಅದು ಸುಲಭ. ಬದುಕಿನುದ್ದಕ್ಕೂ ಭೋದನೆಯಲ್ಲಿ ಕಳೆದು, ಅಚಾನಕ್ಕಾಗಿ ವ್ಯಾಪಾರಸ್ಥನಾಗಬೇಕು ಎನ್ನುವುದು ಸಹಜವಾಗುವುದಿಲ್ಲ. ಸಹಜತೆಯನ್ನ ಅಭ್ಯಾಸದ ಮೂಲಕ ಗಳಿಸಿಕೊಳ್ಳಬಹುದು. ಪ್ರತಿ ದಿನದ ಅಭ್ಯಾಸ ಜೀವನದ ಅಂಗವೇ ಆಗಿಹೋಗುತ್ತದೆ.

7. ಬದುಕಿನಲ್ಲಿ ಎಲ್ಲವೂ ಪ್ರಮುಖವಾಗಿರುವುದಿಲ್ಲ. ಆದ್ಯತೆಯ ಪಟ್ಟಿಯನ್ನ ಸಿದ್ದ ಮಾಡಿಕೊಳ್ಳುವುದು ಅತಿ ಮುಖ್ಯ: ಹಣಗಳಿಕೆಗೆ ಗುರಿ ಬೇಕು ಎಂದು ತಿಳಿದೆವು. ಗುರಿಯಲ್ಲಿ ಹಲವು ಗುರಿಗಳಿರುತ್ತವೆ. ಉದಾಹರಣೆಗೆ ವಿದೇಶ ಪ್ರವಾಸ, ಮಗ /ಮಗಳ ವಿದ್ಯಾಭ್ಯಾಸ, ಹೊಸ ಕಾರು, ಮನೆ ಬದಲಾವಣೆ ಅಥವಾ ಮನೆ ಶೃಂಗಾರ, ರಿಟೈರ್ಮೆಂಟ್ ಪ್ಲಾನ್.. ಹೀಗೆ ಪಟ್ಟಿ ಸಾಗುತ್ತದೆ. ಆದ್ಯತೆ ಎಂದರೆ ಯಾವುದು ಅತ್ಯಂತ ಮುಖ್ಯವಾಗಿ ಮಾಡಲೇಬೇಕು ಎನ್ನುವುದ ಸೂಚಿಸುತ್ತದೆ . ಮಕ್ಕಳ ವಿದ್ಯಾಭ್ಯಾಸ ಪಟ್ಟಿಯಲ್ಲಿ ಪ್ರಥಮ ಸ್ಥಾನ, ರಿಟೈರ್ಮೆಂಟ್ ಪ್ಲಾನ್ ಎರಡನೆಯ ಸ್ಥಾನ ಪಡೆಯುತ್ತೆ. ವಿದೇಶ ಪ್ರವಾಸ ಪಟ್ಟಿಯ ಕೊನೆಯ ಸ್ಥಾನ ನೀಡಬೇಕು. ಆದ್ಯತೆಯ ಪಟ್ಟಿಯನ್ನ ಹಂತ ಹಂತವಾಗಿ ಪರಿಶೀಲಿಸುತ್ತಾ ಬರಬೇಕು. ಗಮನಿಸಿ ಇವುಗಳಲ್ಲಿ ಮುಕ್ಕಾಲು ಪಾಲು ಎಲ್ಲವೂ ಧೀರ್ಘಾವಧಿ ಯೋಜನೆಗಳು. ಇವನ್ನ ನಿಮ್ಮ ಮನಸ್ಸಿಗೆ ಬಂದಂತೆ ಪ್ಲಾನ್ ಮಾಡುವ ಹಾಗಿಲ್ಲ. ನಾಳಿನ ಹಣದುಬ್ಬರದಿಂದ ಹಿಡಿದು ಸಾಮಾಜಿಕ ಬದಲಾವಣೆಗಳನ್ನ ಗಮನದಲ್ಲಿ ಇರಿಸಿಕೊಂಡು ಗಳಿಕೆ -ಉಳಿಕೆ ಶುರು ಮಾಡಬೇಕು. ಆದ್ಯತೆಯ ಪಟ್ಟಿಯಲ್ಲಿ ಬದಲಾವಣೆಗಳಾಗುವ ಸಾಧ್ಯತೆ ಕೂಡ ಇದ್ದೆ ಇರುತ್ತದೆ.

8. ನಮ್ಮ ಉತ್ಸಾಹ, ಅತ್ಯುತ್ಸಾಹ (ಪ್ಯಾಶನ್) ನಮ್ಮ ಕೆಲಸಕ್ಕೆ ಅಡ್ಡಿಯಾಗಬಾರದು: ನಮಗೆ ಅತಿ ಇಷ್ಟವಾದ ಕೆಲಸವನ್ನ ಮಾಡಲು ಶುರು ಮಾಡಿದರೆ ಅದು ಕೆಲಸ ಎನ್ನಿಸುವುದಿಲ್ಲ. ಅಲ್ಲದೆ ಪ್ಯಾಶನ್ ಹಿಂದೆ ಹೋದರೆ ದಾರಿಯಲ್ಲಿ ಬರುವ ಕಷ್ಟಗಳು ಕೂಡ ದೊಡ್ಡದು ಎನ್ನಿಸುವುದಿಲ್ಲ. ನಮ್ಮಲ್ಲಿ ಇಂದಿಗೆ ಪ್ಯಾಶನ್ ಎನ್ನುವ ಪದವು ಕೂಡ ಬಹಳ ಸವಕಲಾಗಿದೆ. ನಿಜಕ್ಕೂ ನಮ್ಮ ಅಂತರಾತ್ಮದ ಕೂಗನ್ನ ನಾವು ಗಮನಿಸಿ ಅದರ ಬೆನ್ನೆತ್ತಿದರೆ ಅದು ನಿಜಕ್ಕೂ ಶ್ಲಾಘನೀಯ. ನಿಜವಾದ ಪ್ಯಾಶನ್ ನಿಮ್ಮನ್ನ ಸೋಲಲು ಎಂದಿಗೂ ಬಿಡುವುದಿಲ್ಲ. ನೀವು ಸೋತರೆ ಅದು ನಿಮ್ಮ ಪ್ಯಾಶನ್ ಆಗಿರಲೇ ಇಲ್ಲ ಎನ್ನುವುದು ಕೂಡ ಸತ್ಯ.

9. ಸಾಧನೆಯ ಹಾದಿಯಲ್ಲಿ ಬರುವ ಎಡರುತೊಡರುಗಳನ್ನ ಹೊಡೆದೋಡಿಸಲು ಸನ್ನದ್ಧರಾಗಿರಬೇಕು: ಒಂದು ವಿಷಯ ಚನ್ನಾಗಿ ನೆನೆಪಿರಲಿ , ಕಷ್ಟವಿಲ್ಲದೆ ಯಾವುದೂ ಸುಲಭಕ್ಕೆ ದಕ್ಕುವುದಿಲ್ಲ. ಈ ಪ್ರಪಂಚದಲ್ಲಿ ಯಾರೂ ಯಾರಿಗೂ ಸುಮ್ಮನೆ ಜಾಗ ಬಿಟ್ಟುಕೊಡುವುದಿಲ್ಲ. ಇಲ್ಲಿ ನಮ್ಮ ಜಾಗವನ್ನ ನಾವೇ ಸೃಷ್ಟಿಸಿಕೊಳ್ಳಬೇಕು. ನಮಗೇನು ಬೇಕು ಎನ್ನುವ ನಿಖರತೆ ಅರ್ಧ ದಾರಿಯನ್ನ ಸುಗಮಮಾಡುತ್ತದೆ. ಆ ಹಾದಿಯಲ್ಲಿ ಒಂದಲ್ಲ ಹತ್ತು ಅಡೆತಡೆಗಳು ಬಂದೆ ಬರುತ್ತವೆ. ಅವೆಲ್ಲಕ್ಕೂ ನಗು ಮುಖದಿಂದ ಉತ್ತರಿಸಬೇಕಾಗುತ್ತದೆ. ಸಂಯಮ ಕಳೆದುಕೊಂಡರೆ ಅಲ್ಲಿಗೆ ಮಾಡಿದ ಕೆಲಸವೂ ಹಾಳಾಗುತ್ತದೆ. 

10. ಇಲ್ಲಿ ಯಾವುದೂ ಶಾಶ್ವತವಲ್ಲ, ನಾವು ಕೇವಲ ದಾರಿಹೋಕರು, ನಮ್ಮದೆನ್ನುವುದು ಏನೂ ಇಲ್ಲ ಎನ್ನುವ ತತ್ವಜ್ಞಾನವೇ ಗೆಲುವಿಗೆ ರಹದಾರಿ: ಈ ಜಗತ್ತಿನಲ್ಲಿ ಎಲ್ಲವೂ ಸೈಕ್ಲಿಕಲ್. ಪರ್ಮನೆಂಟ್ ಎನ್ನುವುದು ಇಲ್ಲಿ ಯಾವುದೂ ಇಲ್ಲ. ಈ ಭಾವನೆಯ ಮಾಲೀಕರಾಗಿ ನೋಡಿ, ನಿಮಗೆ ವೇದ್ಯವಾಗುತ್ತದೆ.

ನೆನಪಿರಲಿ: ಫಲಾಫಲವನ್ನ ಅಪೇಕ್ಷಿಸದೆ ಕೆಲಸ ಮಾಡುವುದು, ಫಲಿತಾಂಶ ಮನಸನ್ನ ಸವಾರಿ ಮಾಡಲು ಬಿಡದಿರುವುದು, ಆದ್ಯತೆಯ ಪಟ್ಟಿ ಮಾಡುವುದು, ಎಲ್ಲವೂ ಇದ್ದು ಏನೂ ಇಲ್ಲದ ಮನಸ್ಥಿತಿಯ ಒಡೆಯರಾಗುವುದು ಬಹಳ ಮುಖ್ಯ . ನೆನಪಿರಲಿ ಇಲ್ಲಿ ಎಲ್ಲವೂ ಸೈಕ್ಲಿಕಲ್. ಮೇಲೇರಿದ್ದು ಕೆಳಗಿಳಿಯಬೇಕು. ಕೆಳಗಿಳಿದದ್ದು ಮೇಲೇರಬೇಕು. ಡಿಟ್ಯಾಚ್ಮೆಂಟ್ ಬೆಳಸಿಕೊಂಡಷ್ಟೂ ಬೇಕಾದ್ದು ಸಿಗುವ ಸಾಧ್ಯತೆ ಹೆಚ್ಚು. ಸಿಗದಿದ್ದರೂ ನೋವಾಗುವುದಿಲ್ಲ. ಅಂತಹ ದಾರಿ ನಮ್ಮದಾಗಲಿ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

Related Stories

No stories found.

Advertisement

X
Kannada Prabha
www.kannadaprabha.com