ಶ್ರೀಲಂಕಾ ಹಣದುಬ್ಬರದ ಕಥೆ! (ಹಣಕ್ಲಾಸು)

ಹಣಕ್ಲಾಸು-400 ರಂಗಸ್ವಾಮಿ ಮೂಕನಹಳ್ಳಿ
ಶ್ರೀಲಂಕಾದಲ್ಲಿ ಹಣದುಬ್ಬರದಿಂದ ಹೈರಾಣಾಗಿರುವ ಜನತೆ (ಸಂಗ್ರಹ ಚಿತ್ರ)
ಶ್ರೀಲಂಕಾದಲ್ಲಿ ಹಣದುಬ್ಬರದಿಂದ ಹೈರಾಣಾಗಿರುವ ಜನತೆ (ಸಂಗ್ರಹ ಚಿತ್ರ)online desk

ಶ್ರೀಲಂಕಾ ದೇಶಕ್ಕೆ ಒಂದು ವಾರ ಭೇಟಿ ನೀಡುವ ಅವಕಾಶ ನನ್ನದಾಗಿತ್ತು ಶ್ರೀಲಂಕಕ್ಕೆ ಎರಡನೇ ಭೇಟಿ. ಪ್ರಥಮ ಭೇಟಿ ನೀಡಿದ್ದು 2019ರಲ್ಲಿ ಅಂದರೆ 5 ವರ್ಷದ ಹಿಂದೆ. ಅಂದಿಗೆ ಒಂದು ಭಾರತೀಯ ರೂಪಾಯಿ ನೀಡಿದರೆ ಎರಡು ರೂಪಾಯಿ ಇಪ್ಪತೈದು ಪೈಸೆ ಶ್ರೀಲಂಕಾ ಹಣ ಸಿಗುತ್ತಿತ್ತು. ಇಂದಿಗೆ ಅದೇ ಭಾರತೀಯ ರುಪಾಯಿಗೆ ಮೂರುಮುಕ್ಕಾಲು ಶ್ರೀಲಂಕನ್ ರೂಪಾಯಿ ಸಿಗುತ್ತಿದೆ. ಇದರರ್ಥ ಶ್ರೀಲಂಕಾ ರೂಪಾಯಿ ಭಾರತೀಯ ರೂಪಾಯಿ ಎದುರು ಬಹಳ ಕುಸಿತ ಕಂಡಿದೆ. ಇಲ್ಲಿ ನಾವು ಎರಡು ಅಂಶವನ್ನು ಗಮನಿಸಬೇಕು. ಒಂದು ಅಂತರರಾಷ್ಟ್ರೀಯ ಹಣದ ಮುಂದೆ ಕುಸಿತ ಕಾಣುವುದು , ಎರಡು ಡೊಮೆಸ್ಟಿಕ್ ಖರೀದಿ ಶಕ್ತಿಯಲ್ಲೂ ಕುಸಿತ ಕಾಣುವುದು. ಮೊದಲನೆಯದು ಎಮೆರ್ಜಿಂಗ್ ದೇಶಗಳಲ್ಲಿ ಸಾಮಾನ್ಯ. ದೇಶದ ರಫ್ತು ಮತ್ತು ಆಮದು ನಡುವಿನ ಅಂತರವನ್ನು ಕಾಯ್ದುಕೊಳ್ಳಲು ಇಂತಹ ಸರ್ಕಸ್ ಮಾಡಬೇಕಾಗುತ್ತದೆ. ಎರಡನೆಯ ಅಂಶ ಆಘಾತಕಾರಿ. ಅಂದರೆ ಯಾವಾಗ ಒಂದು ದೇಶದ ಹಣ ತನ್ನ ಖರೀದಿ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಆಗ ಜನ ಸಾಮಾನ್ಯನ ಬದುಕು ಕಠಿಣವಾಗುತ್ತದೆ. ಮೊದಲನೆಯ ಅಂಶದ ಕಾರಣ ಬೆಲೆಗಳಲ್ಲಿ ವ್ಯತ್ಯಾಸವಾಗುವುದು ಸಾಮಾನ್ಯ. ಅಂದರೆ ಹತ್ತು ರೂಪಾಯಿ ಇದ್ದ ಟೊಮೊಟೊ ಬೆಲೆ 11 ಅಥವಾ 12 ರೂಪಾಯಿ ಆಗುವುದು ಸಹಜ. ಇದು ಕೂಡ ಹಣದುಬ್ಬರ ಎನ್ನಿಸಿಕೊಳ್ಳುತ್ತದೆ. ಎರಡನೆಯ ಅಂಶದಲ್ಲಿ ಮೊದಲನೆಯ ಅಂಶದ ಕಾರಣ ಕೂಡ ಸೇರಿಕೊಳ್ಳುತ್ತದೆ. ಹೀಗಾಗಿ ಇದು ಮಾಡುವ ಪರಿಣಾಮ ದುಪ್ಪಟ್ಟು. ಇದರ ಜೊತೆಗೆ ಶ್ರೀಲಂಕಾ ದೇಶದಲ್ಲಿ ಸಪ್ಪ್ಲೈ ಚೈನ್ ನಲ್ಲಿ ಆಗುವ ಸೋರಿಕೆ, ಪದಾರ್ಥಗಳು ವ್ಯರ್ಥ ವಾಗುವುದು ಸೇರಿಕೊಂಡು ಬೆಲೆಗಳು ತಾರಕಕ್ಕೇರಿವೆ. ಜನ ಸಾಮಾನ್ಯ ಬದುಕಿಗೇನು ಮಾಡಬೇಕು ಎನ್ನುವ ಮಟ್ಟಕ್ಕೆ ಅವುಗಳು ಏರಿ ಕುಳಿತಿವೆ.

ಕೊಲಂಬೊ ನಗರದ ಭಂಡಾರನಾಯಕೆ ಏರ್ಪೋರ್ಟ್ನಲ್ಲಿ ಇಳಿದು ಕುಲುತರ ಎನ್ನುವ ನಗರದ ಕಡೆಗೆ ಪ್ರಯಾಣ ಬೆಳೆಸಿದ್ದೆವು. ಕುಲುತರ ಎನ್ನುವುದು ದಕ್ಷಿಣ ಶ್ರೀಲಂಕಾದಲ್ಲಿ ಇರುವ ಒಂದು ಕೋಸ್ಟಲ್ ನಗರ. ಟೂರಿಸಂಗೆ ಪ್ರಸಿದ್ದಿ. ದಾರಿಯಲ್ಲಿ ದೊಡ್ಡ ಹೋರ್ಡಿಂಗ್ಸ್ಗಳಲ್ಲಿ ಹಣ್ಣು ಮತ್ತು ತರಕಾರಿಯ ಚಿತ್ರಗಳನ್ನು ಹಾಕಿದ್ದರು, ಜೊತೆಗೆ ಅವುಗಳ ಬೆಲೆಯನ್ನು ಕೂಡ ನಮೂದಿಸಿದ್ದರು. ಇದು ನನಗೆ ಆಶ್ಚರ್ಯ ತಂದ ವಿಷಯ. ಜಗತ್ತಿನ ಬಹುಬಾಗದಲ್ಲಿ ಯಾವುದಾದರೊಂದು ಪ್ರಸಿದ್ಧ ಸೂಪರ್ ಮಾರ್ಕೆಟ್ ಜಾಹಿರಾತು ಇರುವುದು ಸಾಮಾನ್ಯ. ಆದರೆ ಹೀಗೆ ಈರುಳ್ಳಿ, ಆಲೂಗೆಡ್ಡೆ, ಟೊಮೊಟೊಗಳು ಕೂಡ ಹೋರ್ಡಿಂಗ್ ನಲ್ಲಿ ಕಾಣಿಸಿಕೊಂಡದ್ದು ಜೊತೆಗೆ ತಮ್ಮ ಬೆಲೆ ಪಟ್ಟಿಯನ್ನು ಕೂಡ ಹಾಕಿಕೊಂಡು ಪ್ರಚಾರ ನೀಡುತ್ತಿರುವ ವಿಷಯ ನನ್ನ ಕಣ್ಣಿಗಂತೂ ಬಿದ್ದಿರಲಿಲ್ಲ. ಪ್ರಥಮ ಬಾರಿಗೆ ಶ್ರೀಲಂಕಾ ದೇಶದಲ್ಲಿ ಅದನ್ನೂ ನೋಡಿದಾಯ್ತು. ಪರವಾಗಿಲ್ಲ ಬೆಲೆಗಳು ಭಾರತಕ್ಕಿಂತ ಕಡಿಮೆ ಇದೆ ಎಂದು ಅಂದುಕೊಂಡವನಿಗೆ ಶಾಕ್ ನೀಡಿದ್ದು ಆ ಬೇಲೆಗಳು ನೂರು ಗ್ರಾಂ ಲೆಕ್ಕದಲ್ಲಿ ಹೇಳಿದ್ದಾರೆ ಎಂದು ತಿಳಿದ ಮೇಲೆ! ಶ್ರೀಲಂಕಾ ರೂಪಾಯಿ ಅದೆಷ್ಟು ದುರ್ಬಲವಾಗಿದೆ, ಖರೀದಿ ಶಕ್ತಿ ಕಳೆದುಕೊಂಡಿದೆ, ಜೊತೆಗೆ ವಸ್ತುಗಳ ಅಭಾವ, ಸಪ್ಲೈ ಚೈನ್ ಸರಿಯಾಗಿ ನಿರ್ವಹಿಸದ ಕಾರಣ, ರಾಜಕೀಯ ಇಚ್ಚಾ ಶಕ್ತಿಯ ಕೊರತೆ ಎಲ್ಲವೂ ಸೇರಿಕೊಂಡು ಅಲ್ಲಿನ ಜನರ ಜೀವನವನ್ನು ಹೊಸಕಿ ಹಾಕಿದೆ ಎನ್ನುವುದಕ್ಕೆ ಒಂದೆರೆಡು ಉದಾಹರಣೆಯನ್ನು ನೀಡುತ್ತೇನೆ.

ಶ್ರೀಲಂಕಾದಲ್ಲಿ ಹಣದುಬ್ಬರದಿಂದ ಹೈರಾಣಾಗಿರುವ ಜನತೆ (ಸಂಗ್ರಹ ಚಿತ್ರ)
ಶ್ರೀಲಂಕಾ, ಮಾರಿಷಸ್ ನಲ್ಲೂ ಯುಪಿಐ ಪಾವತಿ ಸೇವೆ ಆರಂಭ: 'ವಿಶೇಷ ದಿನ' ಎಂದ ಪ್ರಧಾನಿ ಮೋದಿ

ಫೆಬ್ರವರಿ 2024 ರ ಮೊದಲ ವಾರದಲ್ಲಿ ಮತ್ತು ಎರಡನೇ ವಾರದಲ್ಲಿ ಸುರಿದ ಮಳೆ ಹಣ್ಣು ಮತ್ತು ತರಕಾರಿಯ ಬೆಲೆಯನ್ನು ಶ್ರೀಲಂಕಾ ಇತಿಹಾಸದಲ್ಲಿ ಕಾಣದ ಮಟ್ಟಕ್ಕೆ ಏರಿಸಿದೆ. ಯಾವುದೇ ತರಕಾರಿ ಅಥವಾ ಹಣ್ಣು ತೆಗೆದುಕೊಳ್ಳಿ ಸಾವಿರ ಶ್ರೀಲಂಕನ್ ರುಪಾಯಿಗೆ ಕೇಜಿ ಇಲ್ಲವೇ ಇಲ್ಲ. ಕ್ಯಾರೆಟ್ ಮತ್ತು ಹುರಳಿಕಾಯಿ 1200/1500 ರೂಪಾಯಿ ಕೇಜಿ. ಇನ್ನು ಸೇಬು ಹಣ್ಣಿನ ಬೆಲೆ ಕೇಳಿದರೆ ಅದನ್ನು ತಿನ್ನುವುದೇ ಬೇಡ ಎನ್ನಿಸುತ್ತದೆ. ಫುಜಿ ಸೇಬು ಹಣ್ಣಿಗೆ 2500 ಕೇಜಿಗೆ ತೆರೆಬೇಕು ಎಂದರೆ ತಿನ್ನುವ ಮನಸ್ಸು ಹೇಗೆ ಉಳಿದೀತೆ ಅಲ್ಲವೇ? ಶ್ರೀಲಂಕಾ ದೇಶದ ಜನತೆ ಬಹಳ ಹಣ ಗಳಿಸುತ್ತಿದ್ದಾರೆ. ಪರವಾಗಿಲ್ಲ ಬಿಡು ಈ ಬೆಲೆಯನ್ನು ಅವರು ನೀಡಿ ಕೊಳ್ಳಬಲ್ಲರು ಎನ್ನಬಹುದಿತ್ತು. ನಿಮಗೆ ಗೊತ್ತೇ ಅವೆರೆಜ್ ಶ್ರೀಲಂಕನ್ ಮಾಸಿಕ ವೇತನ 30 ಸಾವಿರ ರೂಪಾಯಿ. ಹೆಚ್ಚು ಸಂಬಳ ಗಳಿಸುತ್ತಿದ್ದಾರೆ ಎಂದರೆ ಅದು ಒಂದು ಲಕ್ಷ ಹತ್ತು ಸಾವಿರ ರೂಪಾಯಿ ಇದೆ. ಈಗ ನಿಮಗೆ ಹಣದುಬ್ಬರದ ಅರಿವಾಯಿತು ಎಂದುಕೊಳ್ಳುವೇ. ಶ್ರೀಲಂಕಾ ನೈಸರ್ಗಿಕವಾಗಿ ಸಂಪದ್ಭರಿತವಾಗಿದ್ದು ಕೂಡ ಬಡ ದೇಶವಾಗಿ ಉಳಿದುಕೊಂಡಿದೆ.

ಮುಖ್ಯವಾಗಿ ಆಹಾರ ಪದಾರ್ಥಗಳ ಬೆಲೆ ಈ ಮಟ್ಟಕ್ಕೆ ಏರಿಕೆ ಕಾಣಲು ಪ್ರಮುಖ ಕಾರಣಗಳಲ್ಲಿ ಕೆಲವು ಹೀಗಿವೆ.

  • ಶ್ರೀಲಂಕಾ ದೇಶದ 25 ಪ್ರತಿಶತಕ್ಕೂ ಹೆಚ್ಚಿನ ಉದ್ಯೋಗ ಸಿಗುತ್ತಿರುವುದು ಕೃಷಿಯಿಂದ ಆದರೆ ದೇಶದ ಜಿಡಿಪಿಯ ಕೇವಲ 7 ಪ್ರತಿಶತ ಮಾತ್ರ ಕೃಷಿಯಿಂದ ಬರುತ್ತಿದೆ ಎಂದರೆ ಕೃಷಿ ಕ್ಷೇತ್ರದಲ್ಲಿ ಯಾವುದೇ ಹೊಸತನವಿಲ್ಲ, ಹೆಚ್ಚಿನ ಉತ್ಪಾದನೆಗೆ ಗಮನ ನೀಡಿಲ್ಲ ಎನ್ನುವುದು ವೇದ್ಯವಾಗುತ್ತದೆ.

  • ಉತ್ತರ ಶ್ರೀಲಂಕಾದಲ್ಲಿ LTTE ಸಂಘರ್ಷದ ಸಮಯದಲ್ಲಿ ಎಲ್ಲಂದರಲ್ಲಿ ಲ್ಯಾಂಡ್ ಮೈನ್ಸ್ ಹುಗಿದು ಇಟ್ಟಿದುರ ಪರಿಣಾಮ ಮತ್ತು ಅವಿನ್ನೂ ನೆಲದಲ್ಲಿ ಜೀವಂತವಾಗಿರುವ ಕಾರಣ ಉತ್ತರ ಶ್ರೀಲಂಕಾದಲ್ಲಿ ಕೃಷಿ ಅಷ್ಟಕಷ್ಟೇ, ಜೊತೆಗೆ ಇದು ಬರಡು ಪ್ರದೇಶ.

  • ಸಪ್ಪ್ಲೈ ಚೈನ್ ನಲ್ಲಿರುವ ಅದಕ್ಷತೆ ಇನ್ನೊಂದು ದೊಡ್ಡ ಕಾರಣವಾಗಿದೆ. ಗಮನಿಸಿ ಶ್ರೀಲಂಕಾ ಪ್ರತಿವರ್ಷ 5,40,000 ಮೆಟ್ರಿಕ್ ಟನ್ ಹಣ್ಣು ಮತ್ತು ತರಕಾರಿ ಬೆಳೆಯುತ್ತದೆ. ಇದರಲ್ಲಿ 2,70,000 ಮೆಟ್ರಿಕ್ ಟನ್ ಗ್ರಾಹಕರನ್ನು, ಮಾರುಕಟ್ಟೆಯನ್ನು ತಲುಪುವುದಕ್ಕೆ ಮುನ್ನವೇ ಕೆಟ್ಟು ಹೋಗುತ್ತವೆ. ಇದೊಂದು ದೊಡ್ಡ ಮಟ್ಟದ ನಷ್ಟ. ಬೆಳೆದ ಪದಾರ್ಥಗಳ ಅರ್ಧಕ್ಕೂ ಹೆಚ್ಚು ಪದಾರ್ಥಗಳನ್ನು ಉಳಿಸಿಕೊಳ್ಳಲು ಆಗದ ವ್ಯವಸ್ಥೆಯನ್ನು ಶ್ರೀಲಂಕಾ ಹೊಂದಿದೆ. ಈ ವ್ಯವಸ್ಥೆ ಬದಲಾಗದ ಹೊರತು ಅಭಿವೃದ್ಧಿ ಸಾಧ್ಯವಿಲ್ಲದ ಮಾತು.

  • ಮೇಲಿನ ಕಾರಣಗಳಿಂದ ಜನಕ್ಕೆ ಬೇಕಾಗುವಷ್ಟು ಹಣ್ಣು ಮತ್ತು ತರಕಾರಿ ಒದಗಿಸಲು ಆಗುತ್ತಿಲ್ಲ . ಹೀಗಾಗಿ ಕಡಿಮೆಯಾದ ಹಣ್ಣು ಮತ್ತು ತರಕಾರಿಯನ್ನು ಭಾರತದಿಂದ ತರಿಸಿಕೊಳ್ಳುತ್ತಿದ್ದಾರೆ. ಇಲ್ಲಿಂದ ಅಲ್ಲಿಗೆ ತಲುಪಲು ಬೇಕಾಗುವ ಸಾರಿಗೆ ಖರ್ಚು ಹಣ್ಣು ಮತ್ತು ತರಕಾರಿ ಬೆಲೆಗೆ ಸೇರಿಕೊಳ್ಳುತ್ತದೆ. ಶ್ರೀಲಂಕಾ ಸರಕಾರ ಎಲ್ಲಾ ಆಮದಿನ ಮೇಲೆ ತೆರಿಗೆ ಕೂಡ ಹಾಕುತ್ತದೆ. ಹೀಗಾಗಿ ಹೆಚ್ಚುವರಿ ತೆರಿಗೆ ಕೂಡ ಸೇರಿಕೊಂಡು ಹಣ್ಣು ಮತ್ತು ತರಕಾರಿ ಜನ ಸಾಮಾನ್ಯನ ಕೈಗೆ ಎಟುಕದ ಮಟ್ಟಕ್ಕೆ ಹೋಗಿದೆ.

  • ಹಣ್ಣು ಮತ್ತು ತರಕಾರಿಯ ಸೆಲ್ಫ್ ಲೈಫ್ ಅಂದರೆ ಜೀವಿತಾವಧಿ ಬಹಳ ಕಡಿಮೆ. ಅವುಗಳನ್ನು ಸಂಗ್ರಹಿಸಿ ಇಡಲು ಬೇಕಾಗುವ ಉಗ್ರಾಣ ವ್ಯವಸ್ಥೆಯನ್ನು ಶ್ರೀಲಂಕಾ ಹೊಂದಿಲ್ಲ. ಇದರ ಜೊತೆಗೆ ಹವಾಮಾನ ವೈಪರೀತ್ಯ ಕೂಡ ತನ್ನದೇ ಆದ ದೇಣಿಗೆ ನೀಡಿದೆ.

ಶ್ರೀಲಂಕಾದಲ್ಲಿ ಹಣದುಬ್ಬರದಿಂದ ಹೈರಾಣಾಗಿರುವ ಜನತೆ (ಸಂಗ್ರಹ ಚಿತ್ರ)
ಚೀನಾ: ಕಮ್ಯುನಿಸ್ಟ್ ಅಥವಾ ಕ್ಯಾಪಿಟಲಿಸ್ಟ್? (ಹಣಕ್ಲಾಸು)

ಒಟ್ಟಾರೆ ಶ್ರೀಲಂಕಾ ದೇಶ ಭಾರತಕ್ಕಿಂತ ಹಲವಾರು ವಿಷಯದಲ್ಲಿ ಎರಡು ದಶಕ ಹಿಂದಿದೆ. ಟೂರಿಸಂ ಒಂದನ್ನು ನೆಚ್ಚಿ ಕೊಂಡು ಬದುಕಲು ಸಾಧ್ಯವಿಲ. ಸಮಾಜದಲ್ಲಿ ಜನ ಖುಷಿಯಿಂದ ಉಂಡುಟ್ಟು ಇದ್ದಾಗ ಆ ದೇಶಕ್ಕೆ ಭೇಟಿ ನೀಡುವ ಜನರ ಮನಸ್ಸಿನಲ್ಲೂ ಖುಷಿ ಇರುತ್ತದೆ. ಉತ್ತಮವಾದ ನೆನಪನ್ನು ಕಟ್ಟಿಕೊಂಡು ಹೋಗಬಹುದು. ಸದ್ಯದ ಮಟ್ಟಿಗೆ ಶ್ರೀಲಂಕಾದಲ್ಲಿರುವ ವ್ಯವಸ್ಥೆಯಲ್ಲಿ ಬದಲಾವಣೆ ಕಾಣದ ಹೊರತು ಇದ್ಯಾವುದೂ ಸಾಧ್ಯವಿಲ್ಲ.

ಹತ್ತು ತಿಂಗಳ ಹಿಂದೆ ಶ್ರೀಲಂಕಾ ದಿವಾಳಿ ಸನಿಹಕ್ಕೆ ಹೋಗಿತ್ತು. ನೀರು ,ಪೆಟ್ರೋಲ್, ಗ್ಯಾಸ್ಗೆ ಪರದಾಡುವ ಸ್ಥಿತಿ ಬಂದಿತ್ತು. ಗ್ಯಾಸ್ ಅಂತೂ ಎರಡು / ಮೂರು ದಿನ ಕ್ಯೂ ನಿಂತರೂ ಸಿಗುತ್ತಿರಲಿಲ್ಲ. ಇದರಿಂದ ಬೇಸತ್ತು ಜನ ಹಳೆ ಪದ್ಧತಿಗೆ ಜೈ ಅಂದಿದ್ದಾರೆ. ಕೋಲಂಬೊ ನಂತಹ ನಗರ ಹೊರತು ಪಡಿಸಿ ಬೇರೆ ಕಡೆ ಮರದ ಕಟ್ಟಿಗೆಗೆ ಜನ ಸೈ ಎಂದಿದ್ದಾರೆ. ಜಗತ್ತಿನ ಇತರ ದೇಶಗಳು AI -ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಕಾರಣದಿಂದ ಅನೇಕ ವೃತ್ತಿ ಇಲ್ಲವಾಗುತ್ತದೆ ಎನ್ನುತ್ತಿದ್ದರೆ, ಶ್ರೀಲಂಕಾದಲ್ಲಿ ಕೇವಲ ಕಟ್ಟಿಗೆ ಮಾರುವ ಅಂಗಡಿಗಳು ತಲೆ ಎತ್ತಿವೆ. ನಾವೇಷ್ಟೇ ಊಹಿಸಿದರೂ ಬದುಕು ಹೇಗೆ ಬದಲಾಗಬಹುದು ಎನ್ನುವುದನ್ನು ನಿಖರವಾಗಿ ಹೇಳಲು ಆಗುವುದಿಲ್ಲ. ಅಂದಹಾಗೆ ವಿಪರ್ಯಾಸ ಏನು ಗೊತ್ತಾ? ಆನ್ಲೈನ್ನಲ್ಲಿ ಕೂಡ ಸೌದೆ ಮಾರಾಟ ಜೋರಿದೆ. ಶ್ರೀಲಂಕಾ ಹಿಮ್ಮುಖವಾಗಿ ಚಲಿಸುತ್ತಿದೆ.

ಶ್ರೀಲಂಕಾದಲ್ಲಿ ಹಣದುಬ್ಬರದಿಂದ ಹೈರಾಣಾಗಿರುವ ಜನತೆ (ಸಂಗ್ರಹ ಚಿತ್ರ)
ಭಾರತ ಸಿರಿವಂತವಾಗಿದೆ, ಶ್ರೇಷ್ಠವಾಗುವುದು ಬಾಕಿಯಿದೆ! (ಹಣಕ್ಲಾಸು)

ಕೊನೆಮಾತು: ಶ್ರೀಲಂಕಾ ದೇಶವು ಭಾರತ ಮತ್ತು ಚೀನಾದ ಮೇಲೆ ಅತಿಯಾಗಿ ಅವಲಂಬಿತವಾಗಿದೆ. ಶ್ರೀಲಂಕಾದಲ್ಲಿ ಹೂಡಿಕೆ ಮಾಡುವ ಆಟದಲ್ಲಿ ಹಿಂದಿದ್ದ ಭಾರತ ಇದೀಗ ಚೀನಾಗೆ ಸರಿಸಮನಾಗಿ ಹೂಡಿಕೆ ಮಾಡಿದೆ. ಇದರ ಜೊತೆಗೆ ಅಮೇರಿಕಾ ಕೂಡ ತನ್ನ ಇರುವಿಕೆಯನ್ನು ತೋರಿಸುತ್ತಿದೆ. ಪುಟಾಣಿ ಶ್ರೀಲಂಕಾ ದೇಶಕ್ಕೆ ಪ್ರವಾಸಿಗರಾಗಿ ಹೋಗಿ ಖರ್ಚು ಮಾಡುವುದರಲ್ಲಿ ಭಾರತೀಯರು ಪ್ರಥಮ ಸ್ಥಾನ ಪಡೆಯುತ್ತಾರೆ. ಮದುವೆ ಇಂದಿಗೆ ಬಹುಕೋಟಿ ಉದ್ಯಮವಾಗಿದೆ. ಭಾರತೀಯರು ದುಬಾರಿ ಮದುವೆಯನ್ನು ಶ್ರೀಲಂಕಾದ ಕೋಸ್ಟಲ್ ಬೆಲ್ಟ್ಗಳಲ್ಲಿ , ರೆಸಾರ್ಟ್ ಗಳಲ್ಲಿ ಮಾಡುತ್ತಿದ್ದಾರೆ. ಚೀನಿಯರು ಮತ್ತು ರಷ್ಯನ್ ಪ್ರವಾಸಿಗರ ಸಂಖ್ಯೆ ಕೂಡ ಬಹಳವಿದೆ.

ಶ್ರೀಲಂಕಾ ದೇಶದಲ್ಲಿ ಭಾರತದ ಹೂಡಿಕೆಯೆಷ್ಟು, ಅಲ್ಲಿ ನಮ್ಮ ಹಿಡಿತವೆಷ್ಟಿದೆ? ಚೀನಾ ಸುಲಭವಾಗಿ ಬಿಟ್ಟು ಕೊಡುವುದೇ ? ಕುಟುಂಬ ರಾಜಕಾರಣ ಹೇಗೆ ದೇಶದ ಅಭಿವೃದ್ಧಿಗೆ ಮಾರಕ ಎನ್ನುವುದನ್ನು ಮುಂದಿನ ಕಂತುಗಳಲ್ಲಿ ತಿಳಿದುಕೊಳ್ಳುವ ಪ್ರಯತ್ನ ಮಾಡೋಣ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com