ಚೀನಾ: ಕಮ್ಯುನಿಸ್ಟ್ ಅಥವಾ ಕ್ಯಾಪಿಟಲಿಸ್ಟ್? (ಹಣಕ್ಲಾಸು)

ಹಣಕ್ಲಾಸು-399 -ರಂಗಸ್ವಾಮಿ ಮೂಕನಹಳ್ಳಿ
ಚೀನಾ (ಸಾಂಕೇತಿಕ ಚಿತ್ರ)
ಚೀನಾ (ಸಾಂಕೇತಿಕ ಚಿತ್ರ)

ನಮಗೆಲ್ಲಾ ಗೊತ್ತಿರುವಂತೆ 2 ಮಹಾಯುದ್ಧಗಳು ನಡೆದಿವೆ. ಆದರೆ ಜಗತ್ತಿನ ಇತಿಹಾಸದಲ್ಲಿ ಅತಿ ಹೆಚ್ಚು ಸಾವು ನೋವು ಸಂಭವಿಸಿದ್ದು ಈ ಎರಡೂ ಯುದ್ಧದಲ್ಲಿ ಅಲ್ಲ! 1840ರಲ್ಲಿ ನಡೆದ ಓಪಿಯಂ ಯುದ್ಧ (Opium Wars) ದಲ್ಲಿ ಅಷ್ಟು ದೊಡ್ಡ ಸಂಖ್ಯೆಯ ಸಾವುಗಳು ಸಂಭವಿಸುತ್ತವೆ. ಈ ಯುದ್ಧ ನಡೆದದ್ದು ಚೀನಾ ಮತ್ತು ಬ್ರಿಟನ್ ನಡುವೆ. ಇತರ ಪಾಶ್ಚ್ಯಾತ್ಯ ದೇಶಗಳು ಕೂಡ ಚೀನಾದ ವಿರುದ್ಧ ಇದ್ದವು. ಓಪಿಯಂ ಯುದ್ಧದಲ್ಲಿ ಚೀನಾ ಹೀನಾಯವಾಗಿ ಸೋಲುತ್ತದೆ. ಚೀನಾದ qing ಮನೆತನ (Qing Dynasty) ಮಣ್ಣಾಗಲು ಕೂಡ ಈ ಯುದ್ಧಗಳು ಕಾರಣವಾಗುತ್ತವೆ. ಆ ನಂತರ ಕೂಡ ಚೀನಾ, ಪಾಶ್ಚಾತ್ಯ ದೇಶಗಳು ಮಾಡಿಕೊಳ್ಳುವ ಒಮ್ಮುಖ ಒಡಂಬಡಿಕೆಯನ್ನ ಒಪ್ಪ ಬೇಕಾಗುತ್ತದೆ. ಪಕ್ಕದ ಪುಟಾಣಿ ಜಪಾನ್ 1931 ರಿಂದ ಚೀನಾ ದೇಶದ ಸರಹದ್ದಿನಲ್ಲಿ ತಗಾದೆ ತೆಗೆಯಲು ಶುರು ಮಾಡಿರುತ್ತದೆ. 1937 ರಿಂದ 1945ರ ವರೆಗೆ ಚೀನಾ ದೇಶವನ್ನ ತನ್ನ ಅಂಕೆಯಲ್ಲಿ ಇಟ್ಟುಕೊಂಡಿರುತ್ತದೆ.

ಜಗತ್ತಿನ ಬೇರೆ ದೇಶಗಳು ಇತಿಹಾಸದಿಂದ ಕಲಿತ ನಿದರ್ಶನಗಳು ಕಡಿಮೆ. ಆದರೆ ಚೀನಾ ಮಾತ್ರ ತನಗಾದ ಅವಮಾನವನ್ನ ಮರೆಯಲಿಲ್ಲ . 1949 ರಿಂದ ಮಾವೋ ಚೀನಾ ದೇಶವನ್ನ ತನ್ನ ಹಿಡಿತಕ್ಕೆ ತೆಗೆದುಕೊಳ್ಳುತ್ತಾರೆ. ಆದರೆ ಮಾವೋ ಕಮ್ಯುನಿಸಂ ಪ್ರಚಾರ ಮಾಡುವುದರಲ್ಲಿ ಹೆಚ್ಚು ಸಮಯವನ್ನ ವ್ಯಯಿಸುತ್ತಾರೆ. ತನ್ನದೇ ಮಾವೋ ಸಿದ್ಧಾಂತವನ್ನ ಸೃಷ್ಟಿಸುತ್ತಾರೆ. ಮಾವೋ ಸಿದ್ಧಾಂತವನ್ನ ನಂಬಿಕೊಂಡಿದ್ದರೆ ಚೀನಾ ಇಂದು ಈ ಮಟ್ಟಿಗೆ ಬೆಳೆದು ನಿಲ್ಲಲು ಸಾಧ್ಯವಿರಲಿಲ್ಲ.

Deng Xiaoping ಎನ್ನುವ ವ್ಯಕ್ತಿಯನ್ನ ಹೊಸ ಚೀನಾದ ಶಿಲ್ಪಿ ಎನ್ನಬಹದು. ಕಮ್ಯುನಿಸ್ಟ್ ಪಾರ್ಟಿಯಲ್ಲಿ ಹಣ ಕುರಿತು ಮತ್ತು ಬಂಡವಾಳಶಾಹಿಗಳ ಕುರಿತು ಬಹಳಷ್ಟು ರಿಸರ್ವೇಶನ್ ಗಳಿದ್ದವು. 1976ರ ನಂತರ ಅಧಿಕಾರದ ಚುಕ್ಕಾಣಿ ಹಿಡಿದ ಡೆಂಗ್ ನಿಧಾನವಾಗಿ ಚೀನಾ ಚಿಂತಿಸುವ ರೀತಿಯನ್ನ ಬದಲಾಯಿಸಿ ಬಿಡುತ್ತಾರೆ.

ಚೀನಾ (ಸಾಂಕೇತಿಕ ಚಿತ್ರ)
ಭಾರತ ಸಿರಿವಂತವಾಗಿದೆ, ಶ್ರೇಷ್ಠವಾಗುವುದು ಬಾಕಿಯಿದೆ! (ಹಣಕ್ಲಾಸು)

ಇವತ್ತಿಗೆ ಚೀನಾ ಶಿಕ್ಷಣ ನಿಂತಿರುವುದು ಪಶ್ಚಿಮದೆಡೆಗಿನ ದ್ವೇಷ (ವೆಸ್ಟರ್ನ್ ಹೇಟರ್ಡ್ ನೆಸ್) ಮತ್ತು ದೇಶ ಭಕ್ತಿ (ಪೇಟ್ರಿಯಾಟಿಸಂ) ಮೇಲೆ. ಓಪಿಯಂ ಯುದ್ಧದಲ್ಲಿ ತನ್ನ ಸೈನಿಕರು ಸತ್ತ ಜಾಗವನ್ನ ಚೀನಾ ಇಂದು ಗ್ರೌಂಡ್ ಜೀರೋ ಎಂದು ತನ್ನ ಪ್ರತಿಯೊಬ್ಬ ಮಗುವಿಗೂ ತೋರಿಸುತ್ತದೆ. ನಾವು ಪ್ರಬಲರಾಗಿದ್ದಿದ್ದರೆ ವೆಸ್ಟರ್ನ್ ವರ್ಲ್ಡ್ (western world) ನಮ್ಮನ್ನ ಮತ್ತೆ ತುಳಿಯುತ್ತದೆ, ನಮ್ಮನ್ನ ಗುಲಾಮರಂತೆ ನಡೆಸಿಕೊಳ್ಳುತ್ತಾರೆ ಎಂದು ತನ್ನ ಪ್ರತಿಯೊಬ್ಬ ವಿದ್ಯಾರ್ಥಿಯ ಮನಸ್ಸಿನಲ್ಲಿ ಅದು ಒಂದು ರೀತಿಯ ಭಯವನ್ನ ತುಂಬಿದೆ. ಈ ಭಯವನ್ನ ಧೈರ್ಯವಾಗಿ ಮತ್ತು ಆತ್ಮವಿಶ್ವಾಸವನ್ನಾಗಿ ಮಾರ್ಪಡಿಸಲು ದೇಶೀಯತೆ, ಪ್ಯಾಟ್ರಿಯಾಟಿಸಂ ತುಂಬಿದೆ. ನಾವು ನಮ್ಮದು ಎನ್ನುವುದರಲ್ಲಿ ಇಡುವ ನಂಬಿಕೆ ಮತ್ತು ಹೆಚ್ಚು ಶಕ್ತಿಶಾಲಿಯಾದರೆ ಮಾತ್ರ ನಮಗೆ ಉಳಿಗಾಲ ಎನ್ನುವುದನ್ನ ಪುಟ್ಟ ಮಕ್ಕಳಿಂದ ಶಿಕ್ಷಣದ ಮೂಲಕ ಅವರ ತಲೆಗೆ ತುಂಬಲಾಗಿದೆ. ಇಂದು ಚೀನಾದಲ್ಲಿ ಈ ನಂಬಿಕೆಯ ವಿರುದ್ಧ ಸೊಲ್ಲೆತ್ತುವ ಶಕ್ತಿ ಯಾರಿಗಿದೆ? ಚೀನಾ ಹೆದರುವುದು ಕೇವಲ ಎರಡು ವಿಷಯಕ್ಕೆ ಮಾತ್ರ ಮೊದಲೆನೆಯದಾಗಿ ಡ್ರಗ್ಸ್ ಅಥವಾ ಓಪಿಯಂ. ಇಂದಿಗೂ ಚೀನಾದಲ್ಲಿ ಡ್ರಗ್ಸ್ ಸ್ಮಗ್ಲ್ ಮಾಡುತ್ತಾ ಸಿಕ್ಕಿ ಬಿದ್ದರೆ ಮರಣ ದಂಡನೆ (death penalty) ಶಿಕ್ಷೆ ಇದೆ. ಎರಡನೆಯದು ರಿಲಿಜನ್ ಹೀಗಾಗಿ ಸರಕಾರ ಹೇಳುವುದೇ ಅಲ್ಲಿ ಧರ್ಮ. ಸರಕಾರದ ವಿರುದ್ಧದ ಯಾವುದೇ ರೀತಿಯ ನಡವಳಿಕೆ ಅಧರ್ಮ.

ನಾವು ಚೀನಾ ದೇಶವನ್ನ ಅದರ ಬಹಳಷ್ಟು ನಡವಳಿಕೆಗೆ ವಿರೋಧಿಸಬಹದು. ಆದರೆ ಜಗತ್ತಿನ ಇತರ ದೇಶಗಳಿಂದ ಬಹಳಷ್ಟು ಅವಮಾನ ಅನುಭವಿಸಿದ ಚೀನಾ ಕೆಚ್ಚಿನಿಂದ ಅದೇ ಜಗತ್ತನ್ನ ತನ್ನಡಿಯಲ್ಲಿ ಬರುವಂತೆ ಮಾಡಿಕೊಳ್ಳುವುದಿದೆಯಲ್ಲ ಅದರ ರೋಚಕ ಇತಿಹಾಸವನ್ನ ಓದುತ್ತಾ ನಾನು ಹಲವು ಬಾರಿ ಕಳೆದು ಹೋಗಿದ್ದೇನೆ.

Q

ಚೀನಾ ಕಮ್ಯುನಿಸ್ಟೋ ಅಥವಾ ಕ್ಯಾಪಿಟಲಿಸ್ಟೋ?

ಚೀನಾ (ಸಾಂಕೇತಿಕ ಚಿತ್ರ)
Bhagavadgita lessons: ಭಗವದ್ಗೀತೆಯಿಂದ ಕಲಿಯಬಹುದಾದ ಆರ್ಥಿಕ ನಿರ್ವಹಣೆಯ 10 ಸೂತ್ರಗಳು... (ಹಣಕ್ಲಾಸು)

ಚೀನಾ ದೇಶದ ಬಗ್ಗೆ ಈ ಬಗೆಯ ಒಂದು ಪ್ರಶ್ನೆ ಉದ್ಭವಿಸುವುದು ಸಹಜ. ಚೀನಾ ಕಳೆದ ಮೂರು ದಶಕದಲ್ಲಿ ಬಹಳ ಬದಲಾಗಿ ಹೋಗಿದೆ. ಕಮ್ಯುನಿಸ್ಟ್ ಪಕ್ಷದ ಆಡಳಿತದಲ್ಲಿ, ನಿಯಂತ್ರಣದಲ್ಲಿ ಇರುವ ಕ್ಯಾಪಿಟಲಿಸ್ಟ್ ಸಮಾಜ ಎಂದು ನಾವು ಚೀನಾವನ್ನು ಕರೆಯಬಹುದಾಗಿದೆ. ನಾವೆಲ್ಲರೂ ಒಂದು ಎನ್ನುವ ನಿಯಮವನ್ನು ಚೀನಾ ಅದ್ಯಾವಾಗಲೂ ಗಾಳಿಗೆ ತೂರಿದೆ. ಪಾಲಿಟ್ ಬ್ಯುರೋದಲ್ಲಿನ ಸದಸ್ಯರು ಅತ್ಯಂತ ಹೆಚ್ಚು ಪ್ರಭಾವವನ್ನು, ಬಲವನ್ನು, ಸಂಪತ್ತನ್ನು ಹೊಂದಿದ್ದಾರೆ. ಕೆಲ ಮಟ್ಟದಲ್ಲಿನ ಸೈನಿಕನ ಅಥವಾ ಕಾರ್ಯಕರ್ತನ ಜೀವಕ್ಕೆ ಯಾವುದೇ ಬೆಲೆಯಿಲ್ಲ ಎನ್ನುವಂತಾಗಿದೆ. ಹಣ ಶೇಖರಣೆಯಾಗುತ್ತಾ ಹೋದಂತೆ ಅಲ್ಲಿನ ಕಮ್ಯುನಿಸ್ಟರು ತಮ್ಮ ಮೂಲ ಸಿದ್ದಾಂತವನ್ನು ಮರೆತು ಬಿಟ್ಟಿದ್ದಾರೆ. ಹೀಗಾಗಿ ಇಂದಿಗೆ ಚೀನಾ ಕೂಡ ಬೇರೆ ಯಾವುದೇ ದೇಶದಂತೆ ಬಂಡವಾಳಶಾಹಿ ದೇಶವಾಗಿ ಪರಿವರ್ತನೆ ಹೊಂದಿದೆ. ಬೇರೆ ಕಡೆ ಅಧಿಕಾರಕ್ಕೆ ಬಂದ ರಾಜಕೀಯ ಪಕ್ಷ ಬಂಡವಾಳಶಾಹಿಗಳಿಗೆ ಸಹಾಯ ಮಾಡುತ್ತದೆ. ಚೀನಾದಲ್ಲಿ ಸಣ್ಣ ಉದ್ಯಮದಿಂದ ಹಿಡಿದು ಅತಿ ದೊಡ್ಡ ಉದ್ಯಮದವರೆಗೆ ಎಲ್ಲಕ್ಕೂ ಕಮ್ಯುನಿಸ್ಟ್ ಸರಕಾರದ ಒಪ್ಪಿಗೆ ಬೇಕೇ ಬೇಕು.

ವಿದೇಶಿ ಬಂಡವಾಳ ಹೂಡಿಕೆಯನ್ನು ಬರಮಾಡಿಕೊಳ್ಳುವುದರಲ್ಲಿ ಕೂಡ ಚೀನಾ ಭಾರತಕ್ಕಿಂತ ಮುಂದಿದೆ. ಕೇವಲ ತೋರ್ಪಡಿಕೆಗಾಗಿ ಅದು ಕಮ್ಯುನಿಸ್ಟ್ ಸರಕಾರವಾಗಿದೆ, ಉಳಿದಂತೆ ಚೀನಾ ಪೂರ್ಣ ಪ್ರಮಾಣದ ಬಂಡವಾಳಶಾಹಿ ದೇಶವಾಗಿ ಮಾರ್ಪಾಟಾಗಿದೆ. ಇದರ ಜೊತೆಗೆ ಪ್ರೆಸಿಡೆಂಟ್ ಜೀಪಿಂಗ್ ಹೊಸ ಕಾನೂನು ಜಾರಿಗೆ ತಂದಿದ್ದಾರೆ . ಇದು ಅಲಿಖಿತ ನಿಯಮ. ಮಧ್ಯಮ ಮತ್ತು ದೊಡ್ಡ, ಅತಿ ದೊಡ್ಡ ಬಿಸಿನೆಸ್ ಹೌಸ್ಗಳು ತಮ್ಮ ಹಣಕಾಸಿಗೆ ಸಂಬಂಧಿಸಿದ ಯಾವುದೇ ನಿರ್ಧಾರಗಳನ್ನು ಸ್ವತಃ ತಾವೇ ತೆಗೆದುಕೊಳ್ಳುವ ಹಾಗಿಲ್ಲ. ಅವು ಸರಕಾರವನ್ನು ಈ ಬಗ್ಗೆ ಸಲಹೆ ಕೇಳಬೇಕಾಗುತ್ತದೆ. ಸರಕಾರ ಓಕೆ ಎಂದರೆ ಮಾತ್ರ ಆ ನಿರ್ಧಾರವನ್ನು ಪ್ರಕಟಿಸಬಹುದು. ಇಲ್ಲವಾದಲ್ಲಿ ಯಾವ ಸಂಸ್ಥೆಗಳು ಕೂಡ ಸ್ವತಂತ್ರವಾಗಿ ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳುವಂತಿಲ್ಲ. ಅದು ಜಾಕ್ ಮಾ ಇರಬಹುದು ಅಥವಾ ಪ್ರಸಿದ್ದನಲ್ಲದ ವ್ಯಾಪಾರಿ, ಅದು ಯಾರೇ ಆಗಿರಲಿ ಚೀನಾದ ಸರಕಾರದ ವಿರುದ್ಧ ಯಾರೂ ಮಾತನಾಡುವಂತಿಲ್ಲ. ಈ ಅರ್ಥದಲ್ಲಿ ನೋಡಲು ಹೋದರೆ ಬಂಡವಾಳ ಯಾರೇ ಹೂಡಿರಲಿ ಅದು ಚೀನಾ ಸರಕಾರದ ವ್ಯಾಪಾರ, ಚೀನಾ ಸರಕಾರ ಅದರ ನಿಜವಾದ ಮಾಲೀಕ ಎನ್ನುವಂತಾಗಿದೆ. ಆ ಲೆಕ್ಕಾಚಾರದಲ್ಲಿ ಎಲ್ಲವೂ ಸರಕಾರದ ಅಧೀನದಲ್ಲಿ ಕಾರ್ಯನಿರ್ವಹಿಸಿದಂತೆ ಆಗುತ್ತದೆ.

ಚೀನಾದ ಮುಂದಿರುವ ಹೊಸ ಸವಾಲುಗಳೇನು?

ಚೀನಾ ಆರ್ಥಿಕತೆ ಮಂದಗತಿಯಲ್ಲಿ ಸಾಗುತ್ತಿದೆ. ಕಳೆದ ಮೂರು ದಶಕದಿಂದ ದಣಿವರಿಯದೆ ಓಡಿದ ಪರಿಣಾಮ ಚೀನಾ ಓಟಕ್ಕೆ ಬ್ರೇಕ್ ಬಿದ್ದಿದೆ. ಸದ್ಯಕ್ಕೆ ಅದರ ಮುಂದಿರುವ ಸಾವಾಲುಗಳಲ್ಲಿ ಪ್ರಮುಖವಾಗಿ:

  • ವಿಶ್ವಕ್ಕೆ ಕಾರ್ಖಾನೆಯಾಗಿ ಉತ್ಪಾದನೆಯಲ್ಲಿ ತೊಡಗಿಕೊಂಡ ಪರಿಣಾಮ ಲಾಭ ಕಡಿಮೆ ಹೆಚ್ಚು ಕೆಲಸ ಎನ್ನುವಂತಾಗಿದೆ. ಇದೀಗ ಚೀನಾ ಜನರ ಕೈಯಲ್ಲಿ ಹಣ ಸೇರಿದೆ. ಹೀಗಾಗಿ ಅವರು ಹಿಂದಿನಷ್ಟು ಕಷ್ಟಪಟ್ಟು ದುಡಿಯಲು ಸಿದ್ದರಿಲ್ಲ. ಉತ್ಪಾದನೆಯಿಂದ ಸೇವೆಗೆ ಹೊರಳಿಕೊಳ್ಳುವ ಸವಾಲು ಅವರ ಮುಂದಿದೆ.

  •  ಉತ್ಪಾದನೆಯಿಂದ ಅನುಭೋಗದ (ಕನ್ಸ್ಸಂಪ್ಷನ್ ) ಎಕಾನಾಮಿಯಾಗಿ ಕೂಡ ಬದಲಾಗಬೇಕಿದೆ. ಡೊಮೆಸ್ಟಿಕ್ ಕನ್ಸಮ್ಷನ್ ಜೊತೆಗೆ ಆಮದು ಮಾಡಿಕೊಂಡು ಕೂಡ ಖರ್ಚು ಮಾಡಾಬೇಕಿದೆ.

  • ಪರಿಸರದ ಮೇಲೆ ಚೀನಾ ಇಲ್ಲಿಯವರೆಗೆ ಮಾಡಿರುವ ದಾಳಿಯನ್ನು ಸರಿಪಡಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ.

ಚೀನಾ ಹೊಸ ಸಮಸ್ಯೆಯ ಸುಳಿಯಲ್ಲಿ ಸಿಕ್ಕಿದೆ , ಸಿಕ್ಕಲಿದೆ . ಜಪಾನ್ ದೇಶದಲ್ಲಿ ಆದಂತೆ ಸ್ಟಾಗ್ನೇಷನ್ ಗೆ ತುತ್ತಾಗುವ ಸಾಧ್ಯತೆಯಿದೆ. ಚೀನಾ ತುರ್ತಾಗಿ ತನ್ನ ಸಮಸ್ಯೆಗೆ ಸಮಾಧಾನವನ್ನು ಕಂಡುಕೊಳ್ಳಬೇಕಾಗಿದೆ.

ಕೊನೆ ಮಾತು: ಭಾರತ ಮುಂದಿನ ಎರಡು ದಶಕವನ್ನು ತನ್ನ ಹೆಸರಿಗೆ ಬರೆದುಕೊಳ್ಳುವ ಸಮಯ ನಮ್ಮ ಮುಂದಿದೆ. ನಾವು ಸ್ವಲ್ಪ ಯೋಚಿಸಿ ಹೆಜ್ಜೆ ಇಟ್ಟರೆ ಆಗ ನಾವು ಚೀನಾ ಮಾಡಿದ ತಪ್ಪನ್ನು ಮಾಡದಿರಬಹುದು. growth with stability ಎನ್ನುವುದು ನಮ್ಮ ಮಂತ್ರವಾಗಬೇಕು. ನಾವು ಚೀನಾ ಆಗಬೇಕಿಲ್ಲ, ನಮಗೆ ನಮ್ಮದೇ ಆದ ಚರಿತ್ರೆಯಿದೆ, ಸಂಸ್ಕಾರವಿದೆ. ಆದರೆ ಸಮಾಜದಲ್ಲಿ ಇಂದು ಇರುವ ಅತಿ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕದಿದ್ದರೆ ಮುಂದೆ ಇನ್ನು ದೊಡ್ಡ ಅವಘಡಕ್ಕೆ ದಾರಿ ಮಾಡಿಕೊಡಲಿದೆ. ನಾಳೆಯ ಬಗ್ಗೆ ಚಿಂತೆಯಿಲ್ಲದ ಮೊಬೈಲ್, ರೀಲ್ಸ್, ಟಿಕ್ ಟಾಕ್ ನಲ್ಲೇ ಮುಳುಗಿರುವ ಯುವಜನತೆಯನ್ನ ಎಚ್ಚರಿಸಬೇಕಿದೆ. ಕನಿಷ್ಠ ಸಾಮಾನ್ಯಜ್ಞಾನವೂ ಇಲ್ಲದ ಕೋಟಿ ಕೋಟಿ ಜನತೆಯಿಂದ ಏನು ಪ್ರಯೋಜನ? ಅವರು ಕೇವಲ ಲೈವ್ ಸ್ಟಾಕ್ ಅಷ್ಟೇ. ಮುಂದಿನ ಎರಡು ದಶಕ ನಮ್ಮ ಹೆಸರಿಗೆ ಬರೆದುಕೊಳ್ಳುವ ದರ್ದು, ಆಸೆ, ಹಸಿವು ಯುವಜನೆಯಲ್ಲಿ ಸೃಷ್ಟಿಸುವುದು ಹೇಗೆ? ತ್ವರಿತವಾಗಿ ನಾವು ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಿದೆ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com