ಪುರುಷರಲ್ಲಿ ಸಂತಾನಹೀನತೆ (ಕುಶಲವೇ ಕ್ಷೇಮವೇ)

ಪುರುಷರಲ್ಲಿ ಫಲವಂತಿಕೆಯನ್ನು ವೀರ್ಯಾಣುಗಳ ಪ್ರಮಾಣ, ಚಲನೆ ಮತ್ತು ಗುಣಮಟ್ಟಗಳು ನಿರ್ಧರಿಸುತ್ತವೆ. ವೀರ್ಯಾಣುಗಳ ಪ್ರಮಾಣ ಸಾಕಷ್ಟು ಇಲ್ಲದಿದ್ದರೆ ಅಥವಾ ಅವು ಕಡಿಮೆ ಗುಣಮಟ್ಟದ್ದಾಗಿದ್ದರೆ ಮಕ್ಕಳನ್ನು ಪಡೆಯುವುದು ಕಷ್ಟವಾಗುತ್ತದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮದುವೆಯಾದ ನಂತರ ಮಕ್ಕಳು ಯಾವಾಗ ಎಂದು ಎಲ್ಲರೂ ಕೇಳುವುದು ಸಾಮಾನ್ಯ. ಒಂದೆರಡು ವರ್ಷ ಹೋಗಲಿ ನಂತರ ಮಕ್ಕಳ ಮಾತು ಎಂದು ಅನೇಕ ಪೋಷಕರಾಗುವುದನ್ನು ಮುಂದೂಡುತ್ತಾರೆ. ಹಿಂದೆಲ್ಲಾ ಮಕ್ಕಳಾಗದೇ ಇದ್ದರೆ ಅದಕ್ಕೆ ಸ್ತ್ರೀಯರೇ ಕಾರಣ ಎಂದು ಅವರನ್ನು ದೂರಲಾಗುತ್ತಿತ್ತು. ಆದರೆ ಈಗ ಪರಿಸ್ಥಿತಿಯು ಬದಲಾಗಿದೆ. ಇಂದು ಮಕ್ಕಳಾಗದೇ ಇದ್ದಾಗ ದಂಪತಿಗಳು ವೈದ್ಯರ ಬಳಿ ಹೋದರೆ ಅವರು ಇಬ್ಬರ (ಪತಿ ಮತ್ತು ಪತ್ನಿ) ಫಲವಂತಿಕೆಯನ್ನು ಪರೀಕ್ಷಿಸುತ್ತಾರೆ. ಆಗ ಮಕ್ಕಳಾಗದೇ ಇರುವುದಕ್ಕೆ (ಸಂತಾನಹೀನತೆಗೆ) ಕೇವಲ ಸ್ರೀಯರೇ ಅಲ್ಲ ಪುರುಷರು ಕೂಡ ಕಾರಣವಾಗುತ್ತಾರೆ ಎಂಬುದು ಪರೀಕ್ಷೆಯಿಂದ ದೃಢಪಡುತ್ತದೆ. 

ಮಕ್ಕಳಾಗದೇ ಇರುವುದಕ್ಕೆ ಪುರುಷರೂ ಕಾರಣ ಹೇಗೆ?

ಪುರುಷರಲ್ಲಿ ಫಲವಂತಿಕೆಯನ್ನು ವೀರ್ಯಾಣುಗಳ ಪ್ರಮಾಣ, ಚಲನೆ ಮತ್ತು ಗುಣಮಟ್ಟಗಳು ನಿರ್ಧರಿಸುತ್ತವೆ. ವೀರ್ಯಾಣುಗಳ ಪ್ರಮಾಣ ಸಾಕಷ್ಟು ಇಲ್ಲದಿದ್ದರೆ ಅಥವಾ ಅವು ಕಡಿಮೆ ಗುಣಮಟ್ಟದ್ದಾಗಿದ್ದರೆ ಮಕ್ಕಳನ್ನು ಪಡೆಯುವುದು ಕಷ್ಟವಾಗುತ್ತದೆ. ಕೆಲವು ಪುರುಷರಲ್ಲಿ ಸರಿಯಾಗಿ ವೀರ್ಯಾಣುಗಳೇ ಇರುವುದಿಲ್ಲ. ಪತಿಪತ್ನಿಯರು ಸ್ವಾಭಾವಿಕ ಲೈಂಗಿಕ ಜೀವನ ನಡೆಸಿಯೂ ಒಂದು ಅಥವಾ ಎರಡು ವರ್ಷಗಳ ನಂತರವೂ ಪತ್ನಿಯು ಗರ್ಭಿಣಿಯಾಗದಿದ್ದರೆ ವೈದ್ಯರನ್ನು ಭೇಟಿಯಾಗುವುದು ಒಳ್ಳೆಯದು. ಸೂಕ್ತ ಪರೀಕ್ಷೆಯ ನಂತರ ಪುರುಷರ ಸಮಸ್ಯೆಯಿದ್ದಲ್ಲಿ ಅವರ ಸಂತಾನಹೀನತೆಯ ಕಾರಣ ತಿಳಿಯುತ್ತದೆ. 

ಸುಮಾರು ಮೂರನೇ ಎರಡರಷ್ಟು ಪುರುಷರಲ್ಲಿ ಸಾಕಷ್ಟು ವೀರ್ಯಾಣುಗಳ ಉತ್ಪಾದನೆ ಇಲ್ಲದಿರುವುದು ಅಥವಾ ಅವುಗಳಲ್ಲಿ ಸೂಕ್ತ ಚಲನಶೀಲತೆ ಇಲ್ಲದೇ ಇರುವುದು ಸಂತಾನಹೀನತೆಗೆ ಮುಖ್ಯ ಕಾರಣವಾಗಿದೆ. ಇದಲ್ಲದೇ ಅನುವಂಶಿಕ ಅಂಶಗಳು, ಶಿಶ್ನದ ಅಸಮರ್ಪಕ ನಿಮಿರುವಿಕೆ, ಶೀಘ್ರ ಸ್ಖಲನ, ದೈಹಿಕ ಸಮಸ್ಯೆಯೂ ಸೇರಿದಂತೆ ವಿಭಿನ್ನ ಕಾರಣಗಳಿಂದ ಪುರುಷರಲ್ಲಿ ಸಂತಾನಹೀನತೆ ಉಂಟಾಗಬಹುದು. ಕೆಲವೊಮ್ಮೆ ಮಾನಸಿಕ ಕಾರಣಗಳು, ಉದ್ಯೋಗದ ಕಾರಣಗಳು ಆತಂಕ, ಒತ್ತಡ ಮತ್ತು ಜಡ ಜೀವನಶೈಲಿಗಳು ಮಕ್ಕಳಾಗದೇ ಇರಲು ಕಾರಣವಾಗಬಹುದು. ಇವೆಲ್ಲವೂ ವೈದ್ಯರನ್ನು ಕಂಡಾಗ ಮತ್ತು ಪರೀಕ್ಷೆಯ ನಂತರ ಕಂಡುಬರುವ ವಿಷಯಗಳು. 

ಸಂತಾನಹೀನತೆಗೆ ಜೀವನಶೈಲಿ ಹೇಗೆ ಕಾರಣ?

ಇಂದಿನ ಆಧುನಿಕ ಜೀವನದಲ್ಲಿ ಹಾಸುಹೊಕ್ಕಾಗಿರುವ ಯಾವುದೇ ಬಗೆಯ ಒತ್ತಡ ಮತ್ತು ಆತಂಕ ಲೈಂಗಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದು ಎಲ್ಲರೂ ಗಮನಿಸಬೇಕಾದ ವಿಷಯ. ಕೆಲವರು ಖಿನ್ನತೆ ನಿವಾರಣೆಗೆ ಖಿನ್ನತೆ ಕೂಡ ಲೈಂಗಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಲೈಂಗಿಕ ಸಮಸ್ಯೆಯ ಭಯವಿದ್ದರೆ ಅದು ಕಡಿಮೆಯಾಗುವುದಕ್ಕಾಗಿ ವೈದ್ಯರ ಸಲಹೆ ಪಡೆದು ಚಿಕಿತ್ಸೆ ಪಡೆದುಕೊಳ್ಳಬೇಕು. ಡಯಾಬಿಟಿಸ್, ಹೈಪೋಥೈರಾಯ್ಡ್ ಸಮಸ್ಯೆ, ನರಗಳ ದೌರ್ಬಲ್ಯ, ಅತಿಯಾಗಿರುವ ಬೊಜ್ಜು ಕೂಡ ಸಮಸ್ಯೆಗೆ ಕಾರಣವಾಗಬಹುದು.

ಪುರುಷರಲ್ಲಿ ಅತಿಯಾಗಿ ಸಿಗರೇಟು ಸೇದುವುದು, ಅತಿಯಾದ ಮದ್ಯಪಾನ, ದೇಹದಾರ್ಢ್ಯ ಪಟುಗಳು ಮತ್ತು ಅಥ್ಲೀಟುಗಳು ಸ್ಟೀರಾಯಿಡ್ಡುಗಳನ್ನು ಸೇವಿಸುವುದು, ಮಾದಕ ಪದಾರ್ಥಗಳ ಸೇವನೆ ಮತ್ತು ದೈಹಿಕ ತಾಪಮಾನವನ್ನು ಹೆಚ್ಚಿಸುವ ಅತಿ ಬಿಗಿಯಾಗಿರುವ ಒಳ ಉಡುಪುಗಳನ್ನು ಧರಿಸುವುದು ಸಂತಾನಹೀನತೆಗೆ ದಾರಿ ಮಾಡಿಕೊಡಬಹುದು. ಇದ್ಯೋಗಕ್ಕೆ ಅನುಗುಣವಾಗಿ ಮಾಡುವಾಗ ರಕ್ಷಣೆಗೆ ಉಪಕರಣಗಳನ್ನು ಧರಿಸುತ್ತಿದ್ದರೆ ಅದು ಫಲವಂತಿಕೆಯ ಮೇಲೆ ಪರಿಣಾಮ ಬೀರದಂತೆ ಎಚ್ಚರ ವಹಿಸಬೇಕು. ಜೊತೆಗೆ ಹಾರ್ಮೋನುಗಳ ಅಸಮತೋಲನವೂ ಒಂದು ಕಾರಣವಾಗಬಹುದು. ವೀರ್ಯ ಉತ್ಪಾದನೆಯಲ್ಲಿ ಹಾರ್ಮೋನುಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಟೆಸ್ಟೋಸ್ಟೆರಾನ್, ಲ್ಯುಟೈನೈಜಿಂಗ್ ಹಾರ್ಮೋನ್ (ಎಲ್‌ಎಚ್) ಮತ್ತು ಫಾಲಿಕಲ್ ಸ್ಟಿಮ್ಯುಲೇಟಿಂಗ್ ಹಾರ್ಮೋನಿನಂತಹ (ಎಫ್‌ಎಚ್‌ಎಸ್) ಹಾರ್ಮೋನುಗಳ ಅಸಮತೋಲನವು ವೀರ್ಯ ಉತ್ಪಾದನೆ ಮತ್ತು ಪಕ್ವತೆಯ ಮೇಲೆ ಪರಿಣಾಮ ಬೀರಬಹುದು. 

ಪುರುಷರ ಸಂತಾನಹೀನತೆ ನಿರ್ಣಯಿಸುವ ಅಂಶಗಳು

ಪುರುಷರ ಸಂತಾನಹೀನತೆ ನಿರ್ಣಯವು ಸಂಪೂರ್ಣ ವೈದ್ಯಕೀಯ ವಿವರ, ದೈಹಿಕ ಪರೀಕ್ಷೆ ಮತ್ತು ಪ್ರಯೋಗಾಲಯ ಪರೀಕ್ಷೆಗಳ ಸಮಗ್ರ ಮೌಲ್ಯಮಾಪನವನ್ನು ಒಳಗೊಂಡಿರುತ್ತದೆ. ವೀರ್ಯ ವಿಶ್ಲೇಷಣೆಯು ನಿರ್ಣಾಯಕ ಅಂಶವಾಗಿದೆ, ವೀರ್ಯಾಣುಗಳ ಸಂಖ್ಯೆ, ಸ್ಥಿತಿ ಮತ್ತು ಅವುಗಳ ಚಲನಶೀಲತೆಯ ಮಾಹಿತಿಯನ್ನು ವಿಶ್ಲೇಷಿಸಲಾಗುವುದು. ಈ ಸಮಸ್ಯೆಯನ್ನು ಪರಿಹರಿಸಲು ಚಿಕಿತ್ಸೆಯ ಆಯ್ಕೆಗಳು ಸಮಸ್ಯೆಯ ಕಾರಣವನ್ನು ಅವಲಂಬಿಸಿರುತ್ತದೆ. ಕೆಲವು ಸಂದರ್ಭಗಳಲ್ಲಿ, ಜೀವನಶೈಲಿಯ ಮಾರ್ಪಾಡುಗಳಾದ ಧೂಮಪಾನವನ್ನು ತ್ಯಜಿಸುವುದು, ಆಲ್ಕೋಹಾಲ್ ಸೇವನೆಯನ್ನು ಕಡಿಮೆ ಮಾಡುವುದು ಮತ್ತು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದರಿಂದ ಫಲವಂತಿಕೆಯನ್ನು ಸುಧಾರಿಸಬಹುದು. 

ಸಂತಾನಹೀನತೆಗೆ ಚಿಕಿತ್ಸೆ

ಆಯುರ್ವೇದದಲ್ಲಿ ಸಂತಾನಹೀನತೆ ಚಿಕಿತ್ಸೆ ಮತ್ತು ಔಷಧೋಪಚಾರಗಳು ಲಭ್ಯ. ವಾಜೀಕರಣ ಮತ್ತು ಪಂಚಕರ್ಮ ಚಿಕಿತ್ಸೆಯಿಂದ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆಯನ್ನು ಮತ್ತು ಅವುಗಳ ಚಲನಶೀಲತೆಯನ್ನು ಹೆಚ್ಚಿಸಬಹುದು. ಆಶ್ವಗಂಧದಂತಹ ಔಷಧಿಗಳು ವೀರ್ಯಾಣುಗಳ ಆರೋಗ್ಯಕ್ಕೆ ಸಹಾಯಕ. ಆಧುನಿಕ ವೈದ್ಯವಿಜ್ಞಾನದ ಸಹಾಯಕ ಸಂತಾನೋತ್ಪತ್ತಿ ತಂತ್ರಜ್ಞಾನ (ಎಆರ್ಟಿ) ಹೆಚ್ಚುವರಿ ಆಯ್ಕೆಗಳನ್ನು ನೀಡುತ್ತವೆ. ಇನ್‌ವಿಟ್ರೊ ಫರ್ಟಿಲೈಸೇಶನ್ (ಐವಿಎಫ್) ಮತ್ತು ಇಂಟ್ರಾಸೈಟೋಪ್ಲಾಸ್ಮಿಕ್ ಸ್ಪರ್ಮ್ ಇಂಜೆಕ್ಷನ್ ಕೆಲವು ಪುರುಷ ಫಲವಂತಿಕೆಯ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುವ ಎಆರ್ಟಿ ಕಾರ್ಯವಿಧಾನಗಳ ಉದಾಹರಣೆಗಳಾಗಿವೆ. ಹಾರ್ಮೋನ್ ರಿಪ್ಲೇಸ್‌ಮೆಂಟ್ ಥೆರಪಿಯು ಹಾರ್ಮೋನ್ ಅಸಮತೋಲನವನ್ನು ನಿವಾರಿಸುತ್ತದೆ.

ಸಂತಾನಹೀನತೆಯನ್ನು ನಿಭಾಯಿಸುವುದು ಪತಿ ಮತ್ತು ಪತ್ನಿ ಇಬ್ಬರಿಗೂ ಭಾವನಾತ್ಮಕವಾಗಿ ಸವಾಲಾಗಬಹುದು. ಫಲವಂತಿಕೆ ಕುರಿತಂತೆ ಇರುವ ಸಾಮಾಜಿಕ ನಿರೀಕ್ಷೆಗಳು ಮತ್ತು ಮಕ್ಕಳನ್ನು ಪಡೆಯುವ ಬಯಕೆಯು ಒತ್ತಡಕ್ಕೆ ಕಾರಣವಾಗಬಹುದು. ಆರೋಗ್ಯ ವೃತ್ತಿಪರರು ಮತ್ತು ಆಪ್ತ ಸಲಹೆಗಾರರ ಸಹಾಯದಿಂದ ಭಾವನಾತ್ಮಕ ಅಂಶಗಳನ್ನು ನಿಭಾಯಿಸಬಹುದು. ಕೆಲವು ಪುರುಷರು ಆಪ್ತ ಸಲಹೆ (ಕೌನ್ಸೆಲಿಂಗ್) ಪಡೆಯಲು ಒಪ್ಪುವುದಿಲ್ಲ. ಅವರು ಸಮಸ್ಯೆ ನಿವಾರಣೆಗೆ ಸಲಹೆಗಳನ್ನು ತೆಗೆದುಕೊಳ್ಳುವುದು ಒಳಿತು. ಒಟ್ಟಾರೆ ಹೇಳುವುದಾದರೆ ಪುರುಷರಲ್ಲಿ ಸಂತಾನಹೀನತೆ ಚಿಕಿತ್ಸೆಗೆ ಸಮಗ್ರ ವಿಧಾನದ ಅಗತ್ಯವಿದೆ. ಸಂತಾನೋತ್ಪತ್ತಿ ಚಿಕಿತ್ಸೆ ಮತ್ತು ಔಷಧಿವಿಜ್ಞಾನದಲ್ಲಿ ಆಗಿರುವ ಪ್ರಗತಿ ಫಲವಂತಿಕೆಯ ಸವಾಲುಗಳನ್ನು ಎದುರಿಸುತ್ತಿರುವ ದಂಪತಿಗಳಿಗೆ ಹೊಸ ಹೊಸ ಸಾಧ್ಯತೆಗಳ ಆಶಾಕಿರಣವನ್ನು ಮೂಡಿಸಿದೆ. 

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com