ರಾಜಕೀಯ ಅದೃಷ್ಟ ಬದಲಾಯಿಸುವ ಹತ್ಯಾ ಯತ್ನಗಳು: ದಾಳಿಯ ಬಳಿಕ ಹೆಚ್ಚಲಿದೆಯೇ ಟ್ರಂಪ್ ಜನಪ್ರಿಯತೆ? (ಜಾಗತಿಕ ಜಗಲಿ)

ಅಮೆರಿಕಾ ಅಧ್ಯಕ್ಷ ರೊನಾಲ್ಡ್ ರೇಗನ್ ಅವರ ಹತ್ಯಾ ಪ್ರಯತ್ನ ನಡೆದ ಬಳಿಕ ಅವರು ಜನರ ಅಪಾರ ಸಹಾನುಭೂತಿ ಮತ್ತು ಬೆಂಬಲ ಪಡೆದುಕೊಂಡರು. ಈ ಬೆಂಬಲದ ಪರಿಣಾಮವಾಗಿ, ರೇಗನ್ ಅವರು ಮುಂದಿನ ಹಲವು ದಶಕಗಳ ಕಾಲ ಅಮೆರಿಕಾವನ್ನು ರೂಪಿಸಬಲ್ಲಂತಹ ವಿವಾದಾತ್ಮಕ ಆರ್ಥಿಕ ನೀತಿಗಳನ್ನು ಜಾರಿಗೆ ತಂದರು.
Former US President Donald Trump
ಅಮೇರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ದಾಳಿonline desk
Updated on

ಜುಲೈ 13, ಶನಿವಾರದಂದು ಪೆನ್ಸಿಲ್ವೇನಿಯಾದ ಬಟ್ಲರ್ ಪ್ರದೇಶದಲ್ಲಿ ಚುನಾವಣಾ ಪ್ರಚಾರ ಭಾಷಣ ನಡೆಸುತ್ತಿದ್ದ ಅಮೆರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ ನಡೆಯಿತು.

ಅದೃಷ್ಟವಶಾತ್, ಟ್ರಂಪ್ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದರು. ಗುಂಡು ಟ್ರಂಪ್ ಅವರ ಬಲ ಕಿವಿಗೆ ತಾಗಿಕೊಂಡು ಸಾಗಿದ್ದು, ಕಿವಿಗೆ ಸಣ್ಣ ಪ್ರಮಾಣದ ಗಾಯವಾಗಿತ್ತು. ಸೀಕ್ರೆಟ್ ಸರ್ವಿಸ್ ಏಜೆಂಟ್‌ಗಳು ಕ್ಷಿಪ್ರವಾಗಿ ಟ್ರಂಪ್ ಅವರನ್ನು ಸುತ್ತುವರಿದು, ವೇದಿಕೆಯಿಂದ ಹೊರಗೆ ಕರೆದೊಯ್ಯುವಾಗಲೂ ಟ್ರಂಪ್ ಗಾಯವಾಗಿದ್ದ ಬಲಗಿವಿಯ ಮೇಲೆ ಒಂದು ಕೈ ಇಟ್ಟುಕೊಂಡಿದ್ದರು. ಟ್ರಂಪ್ ಅವರು ಭಾಷಣ ಆರಂಭಿಸಿ, ಕೇವಲ ಆರು ನಿಮಿಷಗಳ ಬಳಿಕ, ಸನಿಹದ ಕಟ್ಟಡವೊಂದರ ಮೇಲ್ಭಾಗದಲ್ಲಿದ್ದ 20ರ ಹರೆಯದ ಥಾಮಸ್ ಮ್ಯಾಥ್ಯೂ ಕ್ರೂಕ್ಸ್ ಎಂಬಾತ ಟ್ರಂಪ್ ಮೇಲೆ ಬಂದೂಕಿನಿಂದ ಗುಂಡುಗಳನ್ನು ಹಾರಿಸತೊಡಗಿದ್ದ. ಇದರ ಬೆನ್ನಲ್ಲೇ ಸಮಾರಂಭದಲ್ಲಿ ಭಾರೀ ಕೋಲಾಹಲ‌ ತಲೆದೋರಿತು.

ಟ್ರಂಪ್ ಈ ಹತ್ಯಾ ಪ್ರಯತ್ನದಲ್ಲಿ ಸ್ವಲ್ಪದರಲ್ಲೇ ಪಾರಾದರೂ, ಸಮಾರಂಭದಲ್ಲಿ ಉಪಸ್ಥಿತರಿದ್ದ ಮಾಜಿ ಅಗ್ನಿಶಾಮಕ ಮುಖ್ಯಸ್ಥರೊಬ್ಬರು ಸಾವಿಗೀಡಾದರು. ಇನ್ನಿಬ್ಬರು ನಾಗರಿಕರು ಗಂಭೀರವಾಗಿ ಗಾಯಗೊಂಡರು. ಗುಂಡು ಹಾರಿಸಿದ್ದ ವ್ಯಕ್ತಿಯನ್ನು ಕೆಲವೇ ಕ್ಷಣಗಳಲ್ಲಿ ಗುರುತಿಸಿದ ಸೀಕ್ರೆಟ್ ಸರ್ವೀಸ್ ಏಜೆಂಟ್‌ಗಳು ಅವನನ್ನು ಗುಂಡಿಟ್ಟು ಹತ್ಯೆಗೈದರು.

ಹತ್ಯಾ ಯತ್ನಗಳು ಮತ್ತು ಚುನಾವಣಾ ಪ್ರಚಾರದ ಮೇಲಿನ ಪರಿಣಾಮಗಳು

ಈ ಘಟನೆ ಟ್ರಂಪ್ ಚುನಾವಣಾ ಪ್ರಚಾರದ ಮೇಲೆ ಎಂತಹ ಪರಿಣಾಮ ಬೀರಬಹುದು ಎಂದು ಈಗಲೇ ಹೇಳಲು ಸಾಧ್ಯವಿಲ್ಲವಾದರೂ, ಐತಿಹಾಸಿಕ ಘಟನೆಗಳನ್ನು ಗಮನಿಸಿದರೆ, ಚುನಾವಣಾ ಸಂದರ್ಭದಲ್ಲಿ ಈ ದಾಳಿ ಟ್ರಂಪ್ ಜನಪ್ರಿಯತೆಯನ್ನು ಹೆಚ್ಚಿಸುವ ಸಾಧ್ಯತೆಗಳು ದಟ್ಟವಾಗಿವೆ.

ಜನಪ್ರಿಯ ನಾಯಕರ ಮೇಲೆ ನಡೆದ ದಾಳಿಗಳು, ಹತ್ಯಾ ಪ್ರಯತ್ನಗಳು ಅವರ ಜನಪ್ರಿಯತೆ ಮತ್ತು ಜನರ ಬೆಂಬಲವನ್ನು ಸಾಕಷ್ಟು ಹೆಚ್ಚಿಸಿರುವುದು ಇತಿಹಾಸದಲ್ಲಿ ದಾಖಲಾಗಿದೆ.

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಕಾಲಿಗೆ ರಾಜಕೀಯ ರ್‍ಯಾಲಿಯೊಂದರಲ್ಲಿ ಗುಂಡೇಟು ಬಿತ್ತು. ಆ ಬಳಿಕ, ಖಾನ್ ಮತ್ತು ಅವರ ಪಕ್ಷಕ್ಕೆ ಇನ್ನೂ ಹೆಚ್ಚಿನ ಜನ ಬೆಂಬಲ ವ್ಯಕ್ತವಾಗತೊಡಗಿತು. ಪಾಕಿಸ್ತಾನದ ಜನರು ಇಮ್ರಾನ್ ಖಾನ್ ಅವರನ್ನು ಅಲ್ಲಿನ ಭ್ರಷ್ಟ ವ್ಯವಸ್ಥೆಯ ವಿರುದ್ಧ ಹೋರಾಡುತ್ತಿರುವ ಏಕೈಕ ವ್ಯಕ್ತಿ ಎಂದು ಪರಿಗಣಿಸತೊಡಗಿದರು.

2018ರಲ್ಲಿ ನಡೆದ ಸಮಾರಂಭವೊಂದರಲ್ಲಿ ಬ್ರೆಜಿಲಿಯನ್ ನಾಯಕ ಜೈರ್ ಬೋಲ್ಸೊನಾರೊ ಅವರನ್ನು ದಾಳಿಕೋರನೊಬ್ಬ ಚಾಕುವಿನಿಂದ ಇರಿದಿದ್ದ. ಆ ದಾಳಿಯ ಬಳಿಕ, ಬೋಲ್ಸೊನಾರೊ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಮತದಾರರು ಬೋಲ್ಸೊನಾರೊ ಅವರ ಸೈದ್ಧಾಂತಿಕ ಎದುರಾಳಿಗಳು ಆಯೋಜಿಸಿದ ದಾಳಿಯಿಂದ ಅವರು ಪಾರಾದರು ಎಂದು ಜನರು ಪರಿಗಣಿಸಿ, ಅವರಿಗೆ ಹೆಚ್ಚಿನ ಮತ ನೀಡಿದ್ದರು.

ಅಮೆರಿಕಾ ಅಧ್ಯಕ್ಷ ರೊನಾಲ್ಡ್ ರೇಗನ್ ಅವರ ಹತ್ಯಾ ಪ್ರಯತ್ನ ನಡೆದ ಬಳಿಕ ಅವರು ಜನರ ಅಪಾರ ಸಹಾನುಭೂತಿ ಮತ್ತು ಬೆಂಬಲ ಪಡೆದುಕೊಂಡರು. ಈ ಬೆಂಬಲದ ಪರಿಣಾಮವಾಗಿ, ರೇಗನ್ ಅವರು ಮುಂದಿನ ಹಲವು ದಶಕಗಳ ಕಾಲ ಅಮೆರಿಕಾವನ್ನು ರೂಪಿಸಬಲ್ಲಂತಹ ವಿವಾದಾತ್ಮಕ ಆರ್ಥಿಕ ನೀತಿಗಳನ್ನು ಜಾರಿಗೆ ತಂದರು.

1984ರಲ್ಲಿ ಭಾರತದ ಪ್ರಧಾನಿ ಇಂದಿರಾ ಗಾಂಧಿಯವರನ್ನು ಅವರ ಅಂಗರಕ್ಷಕರು ಗುಂಡಿಟ್ಟು ಹತ್ಯೆಗೈದರು. ಆ ಬಳಿಕ ನಡೆದ ಲೋಕಸಭಾ ಚುನಾವಣೆಯಲ್ಲಿ, ಅವರ ಮಗ ರಾಜೀವ್ ಗಾಂಧಿಯವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಭರ್ಜರಿ ಗೆಲುವು ದಾಖಲಿಸಿತು. ರಾಜೀವ್ ಗಾಂಧಿಯವರ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷ 514 ಲೋಕಸಭಾ ಸ್ಥಾನಗಳ ಪೈಕಿ 404 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು.

Former US President Donald Trump
ಪರಮಾಣು ಸಾಮರ್ಥ್ಯ ವೃದ್ಧಿಗೆ ಭಾರತ ಕ್ರಮ: ಪ್ರಾದೇಶಿಕ, ಜಾಗತಿಕ ಭದ್ರತೆಯ ಮೇಲೆ ಏನಾಗಲಿದೆ ಪರಿಣಾಮ? (ಜಾಗತಿಕ ಜಗಲಿ)

ಇತ್ತೀಚಿನ ವರ್ಷಗಳಲ್ಲಿ, ಅಮೆರಿಕಾದಲ್ಲಿ ಮತ್ತು ಇತರ ದೇಶಗಳಲ್ಲಿ ರಾಜಕೀಯ ಹತ್ಯಾ ಪ್ರಯತ್ನಗಳು ಹೆಚ್ಚಾಗಿವೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಅವುಗಳಲ್ಲಿ ಹಲವು ಪ್ರಯತ್ನಗಳು ಯಶಸ್ವಿಯಾಗಿದ್ದರೆ, ಹಲವಾರು ಪ್ರಯತ್ನಗಳು ವಿಫಲವಾಗಿವೆ. 2022ರಲ್ಲಿ ಜಪಾನಿನ ಮಾಜಿ ಪ್ರಧಾನಿ ಶಿಂಜೋ ಅಬೆ ಅವರ ಹತ್ಯೆಯಾದ ಬಳಿಕ, ರಾಷ್ಟ್ರೀಯ ಭದ್ರತಾ ಪ್ರಕಟಣಾ ಸಂಸ್ಥೆಯಾದ 'ವಾರ್ ಆನ್ ದ ರಾಕ್ಸ್' ಈ ಕುರಿತು ಅಭಿಪ್ರಾಯ ಹಂಚಿಕೊಂಡಿತು. ತೀವ್ರಗಾಮಿಗಳು ರಾಜಕೀಯ ವ್ಯವಸ್ಥೆಗಳನ್ನು ಅಸ್ಥಿರಗೊಳಿಸಿ, ಸಾಮಾಜಿಕ ಕದನವನ್ನು ಉಂಟುಮಾಡಲು ಪ್ರಯತ್ನ ನಡೆಸುವುದರ ಪರಿಣಾಮವಾಗಿ ಇಂತಹ ಘಟನೆಗಳು ಹೆಚ್ಚಾಗುತ್ತಿರುವ ಸಾಧ್ಯತೆಗಳಿವೆ ಎಂದು ವಾರ್ ಆನ್ ದ ರಾಕ್ಸ್ ಅಭಿಪ್ರಾಯ ಪಟ್ಟಿತ್ತು.

ವ್ಯವಸ್ಥೆಯ ನ್ಯೂನತೆಗಳು ಮತ್ತು ತೀವ್ರಗಾಮಿಗಳ ನಂಬಿಕೆ

ತೀವ್ರಗಾಮಿಗಳು ಈಗ ಚಾಲ್ತಿಯಲ್ಲಿರುವ ರಾಜಕೀಯ ಮತ್ತು ಸಾಮಾಜಿಕ ವ್ಯವಸ್ಥೆಗಳು ಮೂಲಭೂತವಾಗಿ ಭ್ರಷ್ಟವಾಗಿವೆ ಅಥವಾ ವಿಫಲವಾಗಿವೆ ಎನ್ನುವ ಮೂಲಕ ತಮ್ಮ ನಂಬಿಕೆಗಳನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಅವರು ನಿಧಾನವಾಗಿ ತರುವ ಬದಲಾವಣೆಗಳಿಂದ ಯಾವುದೇ ಪ್ರಯೋಜನ ಉಂಟಾಗಲಾರದು ಎಂದು ನಂಬಿದ್ದು, ತೀವ್ರ ಕ್ರಮಗಳು ಮಾತ್ರವೇ ನಿರೀಕ್ಷಿತ ಸುಧಾರಣೆ ಸಾಧ್ಯ ಎಂದು ಅಭಿಪ್ರಾಯ ಪಡುತ್ತಾರೆ. ರಾಜಕೀಯ ಸಂಸ್ಥೆಗಳನ್ನು ಅಸ್ಥಿರಗೊಳಿಸುವ ಮೂಲಕ, ತಾವು ಅವುಗಳ ದುರ್ಬಲತೆಯನ್ನು ಜಾಹೀರುಗೊಳಿಸುತ್ತಿದ್ದೇವೆ, ಬಿಕ್ಕಟ್ಟು ಸೃಷ್ಟಿಸುತ್ತೇವೆ ಮತ್ತು ಸಮಾಜವನ್ನು ಉತ್ತಮವಾಗಿ ಮರು ನಿರ್ಮಾಣ ನಡೆಸುತ್ತೇವೆ ಎಂದು ಅವರು ಭಾವಿಸುತ್ತಾರೆ. ಆ ಮೂಲಕ ಸಮಾಜ ಹೆಚ್ಚು ನ್ಯಾಯಯುತವಾಗಿರಲಿದೆ ಎನ್ನುವುದು ಇಂತಹ ತೀವ್ರವಾದಿಗಳ ಅಭಿಪ್ರಾಯವಾಗಿದೆ.

ಚುನಾವಣಾ ರ್‍ಯಾಲಿಯ ವೇಳೆ ನಡೆದ ಗುಂಡಿನ ದಾಳಿಯ ಬಳಿಕ, ಮುಖದಲ್ಲಿ ರಕ್ತ ಸುರಿಯುತ್ತಿದ್ದರೂ ಡೊನಾಲ್ಡ್ ಟ್ರಂಪ್ ಸೇರಿದ್ದ ಬೆಂಬಲಿಗರೆಡೆಗೆ ಮುಷ್ಟಿ ತೋರಿಸಿ, ತಾನು ಇದನ್ನು ಎದುರಿಸಲು ಸಿದ್ಧನಿದ್ದೇನೆ ಎಂಬ ಸಂದೇಶ ನೀಡಿದ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯವಾಯಿತು. ಆ ಛಾಯಾಚಿತ್ರವನ್ನು ನೋಡಿದ ಟ್ರಂಪ್ ಬೆಂಬಲಿಗರು, ಟ್ರಂಪ್ ಅವರ ಧೈರ್ಯ ಮತ್ತು ದಾಳಿಯ ವಿರುದ್ಧದ ಪ್ರತಿಭಟನೆಯನ್ನು ಶ್ಲಾಘಿಸಿದರು.

ಟ್ರಂಪ್ ಹತ್ಯೆಗೆ ಯತ್ನಿಸಿದಾತನನ್ನು ಅಡುಗೆ ಕೆಲಸ ಮಾಡುತ್ತಿದ್ದ ಥಾಮಸ್ ಕ್ರೂಕ್ಸ್ ಎಂದು ಗುರುತಿಸಲಾಗಿದೆ. ಸ್ಥಳೀಯ ವ್ಯಕ್ತಿಯಾದ ಥಾಮಸ್ ಮ್ಯಾಥ್ಯೂ ಕ್ರೂಕ್ಸ್‌ನನ್ನು ಡೊನಾಲ್ಡ್ ಟ್ರಂಪ್ ಅವರ ಕೊಲೆ ಪ್ರಯತ್ನ ನಡೆಸಿದಾತ ಎಂದು ಎಫ್‌ಬಿಐ ಗುರುತಿಸಿದ ಬಳಿಕ ಪೆನ್ಸಿಲ್ವೇನಿಯಾದ ಪಿಟ್ಸ್‌ಬರ್ಗ್‌ನ ಬೆತೆಲ್ ಪಾರ್ಕ್ ಉಪನಗರ ಸ್ತಂಭೀಭೂತವಾಗಿದೆ. ಈ ಘಟನೆ ಇಡಿಯ ಅಮೆರಿಕಾವನ್ನೇ ಒಂದು ಬಾರಿ ನಲುಗಿಸಿದೆ.

Former US President Donald Trump
ಲೇಬರ್ ಪಕ್ಷ- ಭಾರತದ ನಡುವಿನ ಹಳೆಯ ಭಿನ್ನಾಭಿಪ್ರಾಯಗಳನ್ನು ಮೀರಿ ಸಹಕಾರದ ನವಯುಗ ಸ್ಥಾಪಿಸಬಲ್ಲರೇ ಮೋದಿ-ಸ್ಟಾರ್ಮರ್? (ಜಾಗತಿಕ ಜಗಲಿ)

ಘಟನೆಯ ಕುರಿತು ತನಿಖೆ ನಡೆಸುತ್ತಿರುವ ತನಿಖಾಧಿಕಾರಿಗಳು ಕ್ರೂಕ್ಸ್ ಸೆಮಿ ಆಟೋಮ್ಯಾಟಿಕ್ ಎಆರ್-15 ಎಂಬ ಬಂದೂಕು ಹೊಂದಿದ್ದ. ಡೊನಾಲ್ಡ್ ಟ್ರಂಪ್ ಅವರು ಪೆನ್ಸಿಲ್ವೇನಿಯಾದ ಬಟ್ಲರ್‌ನಲ್ಲಿ ಭಾಷಣ ಆರಂಭಿಸುತ್ತಿದ್ದಂತೆ ಗುಂಡು ಹಾರಿಸಲು ಆರಂಭಿಸಿದ ಎಂದಿದ್ದಾರೆ.

ಸೀಕ್ರೆಟ್ ಸರ್ವಿಸ್ ಸ್ನೈಪರ್ ಕ್ರೂಕ್ಸ್‌ನನ್ನು ತಕ್ಷಣವೇ ಗುಂಡಿಟ್ಟು ಹತ್ಯೆ ಮಾಡಿರುವುದಾಗಿ ಅಧಿಕಾರಿಗಳು ವಿವರಿಸಿದ್ದಾರೆ. ಆ ಶ್ರೀಮಂತ ಪರಿಸರದ ನಿವಾಸಿಗಳು ಇಷ್ಟೊಂದು ಸಣ್ಣ ವಯಸ್ಸಿನ, ತಮ್ಮದೇ ಪ್ರದೇಶದ ಯುವಕ ಅದು ಹೇಗೆ ಇಂತಹ ಹಿಂಸಾ ಕೃತ್ಯ ನಡೆಸಲು ಸಾಧ್ಯವಾಯಿತು ಎಂದು ಆಘಾತಕ್ಕೊಳಗಾಗಿದ್ದಾರೆ.

ಎಫ್‌ಬಿಐ ಕ್ರೂಕ್ಸ್‌ನನ್ನು 'ಮಾಜಿ ಅಧ್ಯಕ್ಷರ ಹತ್ಯಾ ಪ್ರಯತ್ನದಲ್ಲಿ ಭಾಗಿಯಾಗಿದ್ದ ಅಪರಾಧಿ' ಎಂದು ಗುರುತಿಸಿದ್ದು, ಈ ಕುರಿತು ತನಿಖೆ ಇನ್ನೂ ಮುಂದುವರಿದಿದೆ ಎಂದಿದೆ.

Summary

ಪೆನ್ಸಿಲ್ವೇನಿಯಾದ ಬಟ್ಲರ್‌ನಲ್ಲಿ ನಡೆದ ಚುನಾವಣಾ ರ್‍ಯಾಲಿ ವೇಳೆ ಡೊನಾಲ್ಡ್ ಟ್ರಂಪ್ ಮೇಲೆ ನಡೆದ ಗುಂಡಿನ ದಾಳಿ, ಅವರ ಜನಪ್ರಿಯತೆಯನ್ನು ಹೆಚ್ಚಿಸಬಹುದಾದ ಘಟನೆಯಾಗಿದೆ. ಇತಿಹಾಸದಲ್ಲಿ ಜನಪ್ರಿಯ ನಾಯಕರ ಮೇಲೆ ನಡೆದ ದಾಳಿಗಳು, ಹತ್ಯಾ ಪ್ರಯತ್ನಗಳು ಅವರ ಬೆಂಬಲವನ್ನು ಹೆಚ್ಚಿಸಿರುವುದನ್ನು ಗಮನಿಸಿದರೆ, ಟ್ರಂಪ್ ಅವರ ಜನಪ್ರಿಯತೆ ಹೆಚ್ಚುವ ಸಾಧ್ಯತೆ ಇದೆ.

- ಗಿರೀಶ್ ಲಿಂಗಣ್ಣ

(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com