ಪರಮಾಣು ಸಾಮರ್ಥ್ಯ ವೃದ್ಧಿಗೆ ಭಾರತ ಕ್ರಮ: ಪ್ರಾದೇಶಿಕ, ಜಾಗತಿಕ ಭದ್ರತೆಯ ಮೇಲೆ ಏನಾಗಲಿದೆ ಪರಿಣಾಮ? (ಜಾಗತಿಕ ಜಗಲಿ)

ಜಾಗತಿಕ ಆಯುಧಗಳು, ನಿಶ್ಶಸ್ತ್ರೀಕರಣ, ಮತ್ತು ಭದ್ರತೆಗೆ ಸಂಬಂಧಿಸಿದ ಎಸ್ಐಪಿಆರ್‌ಐ - ಸಿಪ್ರಿ ವರದಿಯ ಪ್ರಕಾರ, ಅಮೆರಿಕಾದ ಬಳಿ ಜಾಗತಿಕವಾಗಿ ಅತ್ಯಧಿಕ ಸಂಖ್ಯೆಯಲ್ಲಿ ಅಣ್ವಸ್ತ್ರಗಳಿವೆ. ಈ ಪಟ್ಟಿಯಲ್ಲಿ ರಷ್ಯಾ ಎರಡನೇ ಸ್ಥಾನದಲ್ಲಿದೆ.
India's military development (Image for representation purpose only)
ಭಾರತದ ರಕ್ಷಣಾ ವಿಕಾಸ (ಸಾಂಕೇತಿಕ ಚಿತ್ರ)online desk
Updated on

ಇಂದು ಜಗತ್ತಿನಾದ್ಯಂತ ಲೆಕ್ಕ ಹಾಕಿದರೆ 12,121 ಪರಮಾಣು ಶಸ್ತ್ರಾಸ್ತ್ರಗಳಿವೆ. ಅವುಗಳ ಪೈಕಿ, 9,585 ಆಯುಧಗಳು ಮಿಲಿಟರಿ ಬಳಕೆಗೆ ಸನ್ನದ್ಧವಾಗಿವೆ.

ಸ್ಟಾಕ್‌ಹೋಮ್ ಇಂಟರ್ನ್ಯಾಷನಲ್ ಪೀಸ್ ರಿಸರ್ಚ್ ಇನ್ಸ್ಟಿಟ್ಯೂಟ್ (ಎಸ್ಐಪಿಆರ್‌ಐ - ಸಿಪ್ರಿ) ತನ್ನ 2024ರ ವಾರ್ಷಿಕ ವರದಿಯನ್ನು ಪ್ರಕಟಿಸಿದ್ದು, ಭಾರತ ತನ್ನ ನೆರೆಯ ಶತ್ರು ರಾಷ್ಟ್ರವಾದ ಪಾಕಿಸ್ತಾನದಿಂದ ಹೆಚ್ಚಿನ ಸಂಖ್ಯೆಯ ಅಣ್ವಸ್ತ್ರಗಳನ್ನು ಹೊಂದಿದೆ ಎಂದು ತಿಳಿಸಿದೆ.

ಜಾಗತಿಕ ಆಯುಧಗಳು, ನಿಶ್ಶಸ್ತ್ರೀಕರಣ, ಮತ್ತು ಭದ್ರತೆಗೆ ಸಂಬಂಧಿಸಿದ ಈ ವರದಿಯ ಪ್ರಕಾರ, ಅಮೆರಿಕಾದ ಬಳಿ ಜಾಗತಿಕವಾಗಿ ಅತ್ಯಧಿಕ ಸಂಖ್ಯೆಯಲ್ಲಿ ಅಣ್ವಸ್ತ್ರಗಳಿವೆ. ಈ ಪಟ್ಟಿಯಲ್ಲಿ ರಷ್ಯಾ ಎರಡನೇ ಸ್ಥಾನದಲ್ಲಿದೆ. ಅವುಗಳೊಡನೆ, ಯುನೈಟೆಡ್ ಕಿಂಗ್‌ಡಮ್, ಫ್ರಾನ್ಸ್, ಚೀನಾ, ಭಾರತ, ಪಾಕಿಸ್ತಾನ, ಉತ್ತರ ಕೊರಿಯಾ, ಮತ್ತು ಇಸ್ರೇಲ್‌ಗಳೂ ಗಮನಾರ್ಹ ಪ್ರಮಾಣದಲ್ಲಿ ಪರಮಾಣು ಸಾಮರ್ಥ್ಯ ಹೊಂದಿವೆ.

ಭಾರತ ಮತ್ತು ಪಾಕಿಸ್ತಾನಗಳೆರಡೂ ತಮ್ಮ ಪರಮಾಣು ಶಸ್ತ್ರಾಸ್ತ್ರಗಳನ್ನು ಇನ್ನಷ್ಟು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ನಿರಂತರವಾಗಿ ಕಾರ್ಯಾಚರಿಸುತ್ತಿವೆ. ಭಾರತದ ಪರಮಾಣು ಕಾರ್ಯತಂತ್ರ ಮೂಲತಃ ಪಾಕಿಸ್ತಾನದ ಮೇಲೆ ಗಮನ ಕೇಂದ್ರೀಕರಿಸಿ ಅಭಿವೃದ್ಧಿ ಹೊಂದಿತ್ತು. ಆದರೆ, ಈಗ ಭಾರತ ಚೀನಾದಲ್ಲೂ ವಿವಿಧ ಗುರಿಗಳನ್ನು ತಲುಪಬಲ್ಲ ಸಾಮರ್ಥ್ಯ ಸಾಧಿಸಲು, ದೀರ್ಘ ವ್ಯಾಪ್ತಿಯ ಪರಮಾಣು ಶಸ್ತ್ರಾಸ್ತ್ರಗಳ ಅಭಿವೃದ್ಧಿಯಲ್ಲಿ ತೊಡಗಿಕೊಂಡಿದೆ.

ಸಿಪ್ರಿ ವಾರ್ಷಿಕ ವರದಿ, ಇಂತಹ ಬೆಳವಣಿಗೆಗಳು, ಬದಲಾವಣೆಗಳು ಹೇಗೆ ಪ್ರಾದೇಶಿಕ ಮತ್ತು ಜಾಗತಿಕ ಭದ್ರತೆಯ ಮೇಲೆ ಪರಿಣಾಮ ಬೀರುತ್ತವೆ ಎನ್ನುವುದನ್ನು ವಿವರಿಸಿದೆ. ಈ ವರದಿ, ಹೇಗೆ ಅಣ್ವಸ್ತ್ರ ಬತ್ತಳಿಕೆಗಳು ಅಭಿವೃದ್ಧಿ ಹೊಂದುತ್ತಿವೆ ಮತ್ತು ಬೆಳೆಯುತ್ತಿವೆ ಎಂಬ ಕುರಿತು ವಿಸ್ತೃತವಾಗಿ ವಿವರಿಸಿದ್ದು, ಜಾಗತಿಕ ಸ್ಥಿರತೆ ಮತ್ತು ಭದ್ರತೆಗಾಗಿ ಈ ಬದಲಾವಣೆಗಳ ಮಹತ್ವವನ್ನು ವಿವರಿಸಿದೆ. ಆ ಮೂಲಕ, ಪರಮಾಣು ಶಸ್ತ್ರಾಸ್ತ್ರಗಳ ಕುರಿತು ಹೊಸ ಆಯಾಮಗಳೆಡೆಗೆ ಬೆಳಕು ಚೆಲ್ಲಿದ್ದು, ಅಣ್ವಸ್ತ್ರ ತಡೆಗೆ ಸಂಬಂಧಿಸಿದ ವಿಚಾರಗಳನ್ನೂ ವಿವರಿಸಿದೆ.

India's military development (Image for representation purpose only)
ಖತಾಮಿ ಆಡಳಿತದ ನೆನಪುಗಳು: ಭಾರತ-ಇರಾನ್ ಸ್ನೇಹ ಬಲಪಡಿಸಲಿದೆಯೇ ಪೆಜೆಶ್ಕಿಯಾನ್ ಸುಧಾರಣಾವಾದಿ ಆಡಳಿತ? (ಜಾಗತಿಕ ಜಗಲಿ)

ಸಿಪ್ರಿ ವರದಿಯಲ್ಲಿ ನಮೂದಾಗಿರುವ ವಿವರಗಳು ಪ್ರಾಥಮಿಕವಾಗಿ ಪ್ಲುಟೋನಿಯಂ ಉತ್ಪಾದನಾ ಘಟಕಗಳು ಮತ್ತು ಯುರೇನಿಯಂ ಪುಷ್ಟೀಕರಣ ಘಟಕಗಳ ಉಪಗ್ರಹ ಛಾಯಾಚಿತ್ರಗಳನ್ನು ಆಧರಿಸಿವೆ. ಈ ಘಟಕಗಳ ಇತಿಹಾಸ ಅತ್ಯಂತ ಮೌಲ್ಯಯುತವಾದ ಹೊಳಹುಗಳನ್ನು ನೀಡುತ್ತವಾದರೂ, ಸಿಪ್ರಿ ಹಾಗೂ ಇಂಟರ್ನ್ಯಾಷನಲ್ ಪ್ಯಾನೆಲ್ ಆನ್ ಫಿಸೈಲ್ ಮೆಟೀರಿಯಲ್ಸ್ (ಐಪಿಎಫ್ಎಂ) ತಮ್ಮ ಮಾಹಿತಿಯನ್ನು ಕಲೆಹಾಕಲು ಬಳಸುವ ನಿಖರ ವಿಧಾನಗಳು ಹಾಗೂ ಲೆಕ್ಕಾಚಾರಗಳು ಇನ್ನೂ ಸ್ಪಷ್ಟವಾಗಿಲ್ಲ. ಆದ್ದರಿಂದ, ಅವುಗಳು ಒದಗಿಸಿರುವ ಅಂಕಿಅಂಶಗಳು ಎಷ್ಟು ನಿಖರವಾಗಿವೆ ಎನ್ನಲು ಸಾಧ್ಯವಿಲ್ಲ.

ದಕ್ಷಿಣ ಏಷ್ಯಾದ ಪರಮಾಣು ಸಾಮರ್ಥ್ಯಕ್ಕೆ ಸಂಬಂಧಿಸಿದಂತೆ ಪಾಶ್ಚಾತ್ಯ ಮೌಲ್ಯಮಾಪನಗಳು ರಾಜಕೀಯ ಕಾರಣಗಳ ಪ್ರಭಾವಕ್ಕೆ ಒಳಗಾಗಿವೆ. ಭಾರತದ ಸುದೀರ್ಘ ಅವಧಿಯ ಪರಮಾಣು ಕಾರ್ಯಕ್ರಮ ಮತ್ತು ಭೌಗೋಳಿಕ ರಾಜಕಾರಣದಲ್ಲಿ ಭಾರತದ ಸ್ಥಾನ ಈ ಮೌಲ್ಯಮಾಪನಕ್ಕೆ ಬೆಂಬಲ ನೀಡುತ್ತದೆ.

1974ರಲ್ಲಿ ಭಾರತ ತನ್ನ ಮೊತ್ತಮೊದಲ ಪರಮಾಣು ಪರೀಕ್ಷೆ ನಡೆಸಿತು. ಆ ಮೂಲಕ ಭಾರತವೂ ಪರಮಾಣು ಶಸ್ತ್ರಾಸ್ತ್ರ ಹೊಂದಿರುವ ರಾಷ್ಟ್ರಗಳ ಸಾಲಿಗೆ ಸೇರ್ಪಡೆಯಾಯಿತು. ಆ ಬಳಿಕದ ವರ್ಷಗಳಲ್ಲಿ, ಭಾರತ ತನ್ನ ಅಣ್ವಸ್ತ್ರ ಸಾಮರ್ಥ್ಯವನ್ನು ಗಮನಾರ್ಹವಾಗಿ ಹೆಚ್ಚಿಸಿಕೊಂಡು, ತನ್ನ ಪರಮಾಣು ಶಸ್ತ್ರಾಸ್ತ್ರಗಳನ್ನು ಭೂಮಿ, ಸಮುದ್ರ ಮತ್ತು ವಾಯುವಿನ ಮೂಲಕ ಉಡಾವಣೆಗೊಳಿಸುವ ಶಕ್ತಿಯನ್ನು ಗಳಿಸಿಕೊಂಡಿತು. ಈ ಕಾರ್ಯತಂತ್ರದ ಸಾಮರ್ಥ್ಯ, ಭಾರತದ ಪರಮಾಣು ಶಕ್ತಿಯನ್ನು ಪಾಕಿಸ್ತಾನಕ್ಕಿಂತ ಮೇಲ್ಮಟ್ಟದಲ್ಲಿ ಇರಿಸಿದೆ. ಭಾರತಕ್ಕೆ ಹೋಲಿಸಿದರೆ, ಪಾಕಿಸ್ತಾನದ ಪರಮಾಣು ಕಾರ್ಯಕ್ರಮ ಬಹಳಷ್ಟು ಇತ್ತೀಚಿನದಾಗಿದೆ.

ಭಾರತದ ಬತ್ತಳಿಕೆಯಲ್ಲಿ ಅತ್ಯಂತ ಶಕ್ತಿಶಾಲಿ ಅಣ್ವಸ್ತ್ರಗಳ ಸಂಗ್ರಹವಿದ್ದು, ಭಾರತ ಆಕಾಶ, ಭೂಮಿ ಮತ್ತು ಸಮುದ್ರಗಳಿಂದ ತನ್ನ ಆಯುಧಗಳನ್ನು ಪ್ರಯೋಗಿಸಬಲ್ಲದು. ಭಾರತ ಜಗತ್ತಿನಲ್ಲಿ ಅತ್ಯದಿಕ ಪ್ರಮಾಣಗಳಲ್ಲಿ ಒಂದಾದ, ತನ್ನದೇ ಆದ ಯುರೇನಿಯಂ ಪೂರೈಕೆಯನ್ನೂ ಹೊಂದಿದೆ.

2008ರಲ್ಲಿ, ಭಾರತ ಪರಮಾಣು ಪೂರೈಕೆದಾರರ ಗುಂಪಿನಿಂದ (ನ್ಯೂಕ್ಲಿಯರ್ ಸಪ್ಲಯರ್ಸ್ ಗ್ರೂಪ್) ಮನ್ನಾ ಮಾಡಲ್ಪಟ್ಟು, ದೊಡ್ಡ ಪ್ರಮಾಣದಲ್ಲಿ ಪರಮಾಣು ಇಂಧನವನ್ನು ಆಮದು ಮಾಡಿಕೊಳ್ಳಲು ಅನುಮತಿ ಪಡೆಯಿತು. ಈ ಮೂಲಕ ಭಾರತ ತನ್ನ ಯುರೇನಿಯಂ ಅನ್ನು ಉಳಿಸಿಕೊಂಡು, ಅದನ್ನು ಆಯುಧ ಅಭಿವೃದ್ಧಿಗೆ ಬಳಸಲು ಸಾಧ್ಯವಾಯಿತು.

ಡಿಪ್ಲೊಮಾಟ್ ವರದಿಯ ಪ್ರಕಾರ, ಪಾಕಿಸ್ತಾನದ ಮಿಲಿಟರಿ ಕಾರ್ಯತಂತ್ರ ತಾನು ಮೊದಲನೆಯದಾಗಿ ಅಣ್ವಸ್ತ್ರ ಬಳಸುವುದಿಲ್ಲ ಎಂಬ ನೀತಿಯನ್ನು (ನೋ ಫಸ್ಟ್ ಯೂಸ್ - ಎನ್ಎಫ್‌ಯು) ಅನುಸರಿಸುವುದಿಲ್ಲ. ಅದರ ಬದಲಿಗೆ, ಪಾಕಿಸ್ತಾನ ಅವಶ್ಯಕತೆ ಬಿದ್ದರೆ ತಾನೇ ಮೊದಲಾಗಿ ಅಣ್ವಸ್ತ್ರ ಪ್ರಯೋಗಿಸುತ್ತೇನೆ ಎಂಬ ನೀತಿಯನ್ನು ಅನುಸರಿಸುತ್ತದೆ. ಅದರಲ್ಲೂ, ಭಾರತದ ಸಾಂಪ್ರದಾಯಿಕ ಮತ್ತು ಪರಮಾಣು ಪಡೆಗಳ ಜೊತೆಗೆ ತಾನು ಅಸಮತೋಲನ ಹೊಂದಿದ್ದೇನೆ ಎಂದು ಪಾಕಿಸ್ತಾನ ಭಾವಿಸಿದೆ.

India's military development (Image for representation purpose only)
ಲೇಬರ್ ಪಕ್ಷ- ಭಾರತದ ನಡುವಿನ ಹಳೆಯ ಭಿನ್ನಾಭಿಪ್ರಾಯಗಳನ್ನು ಮೀರಿ ಸಹಕಾರದ ನವಯುಗ ಸ್ಥಾಪಿಸಬಲ್ಲರೇ ಮೋದಿ-ಸ್ಟಾರ್ಮರ್? (ಜಾಗತಿಕ ಜಗಲಿ)

ಸಿಪ್ರಿ ವಿಶ್ಲೇಷಣೆಗಳ ಅನುಸಾರ, ಭಾರತದ 'ಶೀತಲ ಆರಂಭ' ಕಾರ್ಯತಂತ್ರವನ್ನು ಎದುರಿಸಲು ಪಾಕಿಸ್ತಾನ ಸಣ್ಣ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವ ಕುರಿತು ಗಮನ ಹರಿಸುತ್ತಿದೆ. ಭಾರತದ ನೀತಿ ಯುದ್ಧದ ಪರಿಸ್ಥಿತಿ ಆರಂಭಗೊಂಡರೆ ಅತ್ಯಂತ ಕ್ಷಿಪ್ರವಾಗಿ ಸೇನಾ ಪಡೆಗಳನ್ನು ನಿಯೋಜಿಸುವ ಕ್ರಮವನ್ನು ಅನುಸರಿಸುತ್ತದೆ. ಎರಡು ದೇಶಗಳ ವಿಧಾನಗಳಲ್ಲಿನ ವ್ಯತ್ಯಾಸ ಅಣ್ವಸ್ತ್ರ ಪ್ರಯೋಗದ ಕುರಿತಂತೆ ಪಾಕಿಸ್ತಾನದ ನಿಲುವು ಏನು ಎನ್ನುವುದನ್ನು ಸ್ಪಷ್ಟಪಡಿಸುತ್ತದೆ.

ಇಂಟರ್ನ್ಯಾಷನಲ್ ಕ್ಯಾಂಪೇನ್ ಟು ಅಬಾಲಿಷ್ ನ್ಯೂಕ್ಲಿಯರ್ ವೆಪನ್ಸ್ (ಐಸಿಎಎನ್) ಒಂದು ಸಮಗ್ರ ವಿಶ್ಲೇಷಣೆ ನಡೆಸಿದ್ದು, ಪಾಕಿಸ್ತಾನ 2023ರಲ್ಲಿ ಪರಮಾಣು ಕಾರ್ಯಕ್ರಮದ ಮೇಲೆ 1 ಬಿಲಿಯನ್ ಡಾಲರ್ ವೆಚ್ಚ ಮಾಡಿದೆ ಎಂದಿದೆ. ಅಂದರೆ, ಪಾಕಿಸ್ತಾನ ಪ್ರತಿ ನಿಮಿಷಕ್ಕೆ 1,924 ಡಾಲರ್ ಖರ್ಚು ಮಾಡಿದೆ.

ಜನವರಿ 2024ರ ವೇಳೆಗೆ, ಭಾರತದ ಬಳಿ 172 ಅಣ್ವಸ್ತ್ರ ಸಿಡಿತಲೆಗಳಿವೆ ಎಂದು ಸಿಪ್ರಿ ಅಂದಾಜು ಮಾಡಿದೆ. ಇದು ಕಳೆದ ವರ್ಷದ ಸಂಖ್ಯೆಗೆ ಹೋಲಿಸಿದರೆ ಸಣ್ಣ ಪ್ರಮಾಣದಲ್ಲಿ ಹೆಚ್ಚಳ ಕಂಡಿದೆ. ಭಾರತ ತನ್ನ ಪರಮಾಣು ಸಾಮರ್ಥ್ಯವನ್ನು ಹೆಚ್ಚಿಸಲು ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಇದರಲ್ಲಿ ಅಣ್ವಸ್ತ್ರ ಸಿಡಿತಲೆಗಳ ಹೆಚ್ಚಳ, ಯುದ್ಧ ವಿಮಾನಗಳು ಮತ್ತು ಭೂಮಿಯಿಂದ ಉಡಾವಣೆಗೊಳಿಸಬಲ್ಲ ಕ್ಷಿಪಣಿಗಳ ನಿರ್ಮಾಣ, ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾವಣೆಗೊಳಿಸಬಲ್ಲ ಪರಮಾಣು ಚಾಲಿತ ಸಬ್‌ಮರೀನ್‌ಗಳ (ಎಸ್ಎಸ್‌ಬಿಎನ್) ನಿರ್ಮಾಣಗಳು ಸೇರಿವೆ.

ಈ ಹಿಂದೆ, ಭಾರತ ಶಾಂತಿಯ ಸಮಯದಲ್ಲಿ ತನ್ನ ಅಣ್ವಸ್ತ್ರಗಳು ಮತ್ತು ಅವುಗಳ ಲಾಂಚರ್‌ಗಳನ್ನು ಪ್ರತ್ಯೇಕವಾಗಿ ಇಡುತ್ತಿತ್ತು. ಆದರೆ, ಇತ್ತೀಚಿನ ಬದಲಾವಣೆಗಳಲ್ಲಿ, ಭಾರತ ಶಾಂತಿಯ ಸಮಯದಲ್ಲೂ ತನ್ನ ಕೆಲವು ಅಣ್ವಸ್ತ್ರ ಸಿಡಿತಲೆಗಳನ್ನು ಅವುಗಳ ಲಾಂಚರ್‌ಗಳ ಜೊತೆ ಅಳವಡಿಸಿ ಇರಿಸುತ್ತಿದೆ.

ಭಾರತ ತನ್ನ ಪರಮಾಣು ಶಸ್ತ್ರಾಸ್ತ್ರಗಳನ್ನು ಇನ್ನಷ್ಟು ಸಿದ್ಧವಾಗಿಟ್ಟುಕೊಳ್ಳುತ್ತಿದ್ದು, ತನ್ನ ಶತ್ರುಗಳು ಭಾರತದ ವಿರುದ್ಧ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವ ಮುನ್ನವೇ ಶತ್ರುವಿನ ಅಣ್ವಸ್ತ್ರವನ್ನು ಗುರಿಯಾಗಿಸಿ ದಾಳಿ ನಡೆಸುವ ಉದ್ದೇಶ ಹೊಂದಿದೆ. ಐಸಿಎಎನ್ ವರದಿಯ ಪ್ರಕಾರ, ಭಾರತ 2023ರಲ್ಲಿ ತನ್ನ ಪರಮಾಣು ಕಾರ್ಯಕ್ರಮಕ್ಕೆ 2.7 ಬಿಲಿಯನ್ ಡಾಲರ್ ವೆಚ್ಚ ಮಾಡಿದೆ.

ಭಾರತದ ಪರಮಾಣು ಸಾಮರ್ಥ್ಯ ಪ್ರಮುಖವಾಗಿ ಚೀನಾ ಮತ್ತು ಪಾಕಿಸ್ತಾನದ ಮೇಲೆ ಕೇಂದ್ರಿತವಾಗಿದೆ. ಆರಂಭಿಕ ಹಂತದಲ್ಲಿ ಭಾರತ ಪಾಕಿಸ್ತಾನದ ಮೇಲೆ ತನ್ನ ಸಂಪೂರ್ಣ ಗಮನ ಹರಿಸಿ, ಕಡಿಮೆ ವ್ಯಾಪ್ತಿಯ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿ ಪಡಿಸಿತ್ತು. ಆದರೆ ಈಗ, ಭಾರತ ದೀರ್ಘ ವ್ಯಾಪ್ತಿಯ ಕ್ಷಿಪಣಿಗಳನ್ನು ಅಭಿವೃದ್ಧಿ ಪಡಿಸಿದ್ದು, ಚೀನಾ ಸಹ ಭಾರತದ ಪ್ರಮುಖ ಗುರಿಯಾಗಿದೆ.

ಭಾರತ 1999ರಲ್ಲಿ ಜಾರಿಗೆ ತಂದ, ತಾನು ಮೊದಲನೆಯದಾಗಿ ಅಣ್ವಸ್ತ್ರ ಪ್ರಯೋಗಿಸುವುದಿಲ್ಲ (ಎನ್ಎಫ್‌ಯು) ಎಂಬ ನೀತಿ ಇಂದಿಗೂ ಚಾಲ್ತಿಯಲ್ಲಿದೆ. ಆದರೆ, 2003ರಲ್ಲಿ, ಶತ್ರುಗಳು ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸದೆ ತನ್ನ ಮೇಲೆ ದಾಳಿ ನಡೆಸಿದರೂ, ಅದಕ್ಕೆ ಪ್ರತಿಯಾಗಿ ತಾನು ಅವರ ಮೇಲೆ ಅಣ್ವಸ್ತ್ರ ಪ್ರಯೋಗಿಸಬಹುದು ಎಂದು ತನ್ನ ಪರಮಾಣು ನೀತಿಯಲ್ಲಿ ಬದಲಾವಣೆ ತಂದಿದೆ.

ಸಿಪ್ರಿ ವರದಿಯ ಪ್ರಕಾರ, ಅಮೆರಿಕಾ, ರಷ್ಯಾ, ಯುನೈಟೆಡ್ ಕಿಂಗ್‌ಡಮ್, ಫ್ರಾನ್ಸ್, ಚೀನಾ, ಭಾರತ, ಪಾಕಿಸ್ತಾನ, ಉತ್ತರ ಕೊರಿಯಾ, ಹಾಗೂ ಇಸ್ರೇಲ್‌ಗಳು ಅಣ್ವಸ್ತ್ರ ಹೊಂದಿರುವ ಒಂಬತ್ತು ರಾಷ್ಟ್ರಗಳಾಗಿವೆ. ಈ ದೇಶಗಳು ತಮ್ಮ ಆಯುಧಾಗಾರಗಳನ್ನು ನಿರಂತರವಾಗಿ ಆಧುನೀಕರಿಸುತ್ತಿದ್ದು, ಹೊಸ ಹೊಸ ಅಣ್ವಸ್ತ್ರ ಸಾಮರ್ಥ್ಯದ ಆಯುಧ ವ್ಯವಸ್ಥೆಗಳನ್ನು ಚಾಲ್ತಿಗೆ ತರುತ್ತಿವೆ.

2,100 ಸಿಡಿತಲೆಗಳು ಕ್ಷಿಪ್ರ ಉಡಾವಣೆಗೆ ಸನ್ನದ್ಧ
ಇಂದು ಜಾಗತಿಕವಾಗಿ, 12,121 ಪರಮಾಣು ಶಸ್ತ್ರಾಸ್ತ್ರಗಳಿವೆ ಎಂದು ಅಂದಾಜಿಸಲಾಗಿದೆ. ಇವುಗಳ ಪೈಕಿ 9,585 ಅಣ್ವಸ್ತ್ರಗಳು ಸೇನಾಪಡೆಗಳಿಗೆ ಯಾವ ಸಂದರ್ಭದಲ್ಲಿ ಬೇಕಾದರೂ ಪ್ರಯೋಗಿಸಲು ಸಿದ್ಧವಾಗಿವೆ. ಇವುಗಳಲ್ಲಿ 2,100 ಸಿಡಿತಲೆಗಳನ್ನು ಬ್ಯಾಲಿಸ್ಟಿಕ್ ಕ್ಷಿಪಣಿಗಳಿಗೆ ಅಳವಡಿಸಲಾಗಿದ್ದು, ಕ್ಷಿಪ್ರ ಉಡಾವಣೆಗೆ ಸನ್ನದ್ಧವಾಗಿ ಇಡಲಾಗಿದೆ. ಮುಖ್ಯವಾಗಿ ಅಮೆರಿಕಾ ಮತ್ತು ರಷ್ಯಾಗಳು ಅಣ್ವಸ್ತ್ರ ಸಿಡಿತಲೆಗಳನ್ನು ಪ್ರಯೋಗ ಸನ್ನದ್ಧ ಸ್ಥಿತಿಯಲ್ಲಿ ಇಟ್ಟಿದ್ದು, ಈಗ ಚೀನಾ ಸಹ ಈ ಸಾಲಿಗೆ ಸೇರ್ಪಡೆಯಾಗಿದೆ.

ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವ ದೇಶಗಳು ತಮ್ಮ ಸಾಮರ್ಥ್ಯವನ್ನು ನಿರಂತರವಾಗಿ ಹೆಚ್ಚಿಸುತ್ತಲೇ ಸಾಗುತ್ತಿವೆ. ಈ ಕ್ರಮಗಳಲ್ಲಿ, ಮಲ್ಟಿಪಲ್ ಇಂಡಿಪೆಂಡೆಂಟ್ಲಿ ಟಾರ್ಗೆಟೇಬಲ್ ರಿಎಂಟ್ರಿ ವೆಹಿಕಲ್ಸ್ (ಎಂಐಆರ್‌ವಿ) ಅಭಿವೃದ್ಧಿ ಮತ್ತು ಈಗಾಗಲೇ ಇರುವ ಶಸ್ತ್ರಾಸ್ತ್ರಗಳ ಮೇಲ್ದರ್ಜೆಗೇರಿಸುವಿಕೆಗಳು ಮುಖ್ಯವಾಗಿವೆ.

ಉತ್ತರ ಕೊರಿಯಾ, ಪಾಕಿಸ್ತಾನ ಮತ್ತು ಭಾರತಗಳು ಎಂಐಆರ್‌ವಿ ರೀತಿಯ ಸಾಮರ್ಥ್ಯ ಸಾಧಿಸಲು ಪ್ರಯತ್ನ ನಡೆಸುತ್ತಿದ್ದು, ಇದರ ಯಶಸ್ಸು ಪ್ರಯೋಗಿಸಬಲ್ಲ ಸಿಡಿತಲೆಗಳ ಸಂಖ್ಯೆಯನ್ನು ಹೆಚ್ಚಿಸಿ, ಯುದ್ಧ ಸಂದರ್ಭದಲ್ಲಿ ಹೆಚ್ಚಿನ ವಿನಾಶ ಉಂಟಾಗುವಂತೆ ಮಾಡಲಿವೆ.

India's military development (Image for representation purpose only)
ನ್ಯಾಟೋಗೆ ಮಾರ್ಕ್ ರುಟ್ಟೆ ನೂತನ ಮುಖ್ಯಸ್ಥ; ರಷ್ಯಾ ವಿರುದ್ಧದ ಕಠಿಣ ಹೆಜ್ಜೆಗೆ ನಾಂದಿ? (ಜಾಗತಿಕ ಜಗಲಿ)

ಭಾರತ ಸುದೀರ್ಘ ವ್ಯಾಪ್ತಿಯ ಆಯುಧಗಳನ್ನು ಅಭಿವೃದ್ಧಿ ಪಡಿಸುತ್ತಿದೆ ಎಂದು ಸಿಪ್ರಿ ವರದಿ ತಿಳಿಸಿದ್ದು, ಈ ಆಯುಧಗಳು ಚೀನಾ ಮತ್ತು ಪಾಕಿಸ್ತಾನಗಳ ಯಾವ ಪ್ರದೇಶವನ್ನು ಬೇಕಾದರೂ ಗುರಿಯಾಗಿಸಿ ದಾಳಿ ನಡೆಸುವ ಸಾಮರ್ಥ್ಯವನ್ನು ಭಾರತಕ್ಕೆ ನೀಡಲಿವೆ.

ಭಾರತದ ಮಿಲಿಟರಿ ಅಭಿವೃದ್ಧಿ ದಕ್ಷಿಣ ಏಷ್ಯಾದ ಕಾರ್ಯತಂತ್ರದ ಸ್ಥಿರತೆಯ ಮೇಲೆ ಪರಿಣಾಮ ಬೀರುವ ಮತ್ತು ಸಮತೋಲನವನ್ನು ಬದಲಾಯಿಸುವ ಸಾಧ್ಯತೆಗಳಿವೆ.

ಭಾರತ ಪ್ರಮುಖ ಪ್ರಾದೇಶಿಕ ಶಕ್ತಿಯಾಗಿ ಹೊರಹೊಮ್ಮುವ ಗುರಿ ಹೊಂದಿದ್ದು, ಮಿಲಿಟರಿ ಸಾಮರ್ಥ್ಯವನ್ನು ಹೆಚ್ಚಿಸುವುದು ಈ ಗುರಿ ಸಾಧಿಸಲು ಪೂರಕವಾಗಿದೆ.

ಭಾರತದ ಮಿಲಿಟರಿ ಆಧುನೀಕರಣ ದಕ್ಷಿಣ ಏಷ್ಯಾದಲ್ಲಿ ಸಂಕೀರ್ಣ ಭದ್ರತಾ ಪರಿಸ್ಥಿತಿಯನ್ನು ಉಂಟುಮಾಡುತ್ತಿದೆ. ಭಾರತದ ಕ್ರಮಗಳಿಗೆ ಪ್ರತಿಕ್ರಿಯೆಯಾಗಿ, ಆರ್ಥಿಕವಾಗಿ ಪತನದ ಅಂಚಿನಲ್ಲಿರುವ ಪಾಕಿಸ್ತಾನವೂ ಸಹ ಭಾರತದ ಬೆಳೆಯುತ್ತಿರುವ ಮಿಲಿಟರಿ ಸಾಮರ್ಥ್ಯಕ್ಕೆ ಸಮನಾಗಿ ತನ್ನ ಸೇನಾ ಸಾಮರ್ಥ್ಯವನ್ನು ಹೆಚ್ಚಿಸಲು ಪ್ರಯತ್ನ ನಡೆಸುತ್ತಿದೆ.

Summary

ಇದು ಇನ್ನೊಂದು ತೀಕ್ಷ್ಣವಾದ ಆಯುಧ ಸ್ಪರ್ಧೆಗೆ ಹಾದಿ ಮಾಡಿಕೊಟ್ಟು, ಆ ಮೂಲಕ ದಕ್ಷಿಣ ಏಷ್ಯಾದ ಸೂಕ್ಷ್ಮ ಮತೋಲನವನ್ನು ಅಸ್ಥಿರಗೊಳಿಸಿ, ಪಾಕಿಸ್ತಾನದ ಪ್ರತಿಷ್ಠೆಯನ್ನು ಇನ್ನಷ್ಟು ಹಾಳುಗೆಡವುವ ಸಾಧ್ಯತೆಗಳಿವೆ.

- ಗಿರೀಶ್ ಲಿಂಗಣ್ಣ

(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com