
ಜುಲೈ 5, 2024ರಂದು ದೆಹಲಿಯ ತಿಲಕ್ ಮಾರ್ಗ್ ಪ್ರದೇಶದಲ್ಲಿ ನೆಲೆಸಿರುವ ಇರಾನ್ ನಾಗರಿಕರ ಒಂದು ಗುಂಪು ಇರಾನಿನ ಕಲ್ಚರಲ್ ಹೌಸ್‌ನಲ್ಲಿ ನಡೆದ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಇರಾನಿನ ರಾಯಭಾರಿ ಇರಾಜ್ ಎಲಾಹಿ, ರಾಯಭಾರ ಕಚೇರಿಯ ಅಧಿಕಾರಿಗಳು, ಅವರ ಕುಟುಂಬಸ್ಥರು, ಇರಾನಿಯನ್ ವಿದ್ಯಾರ್ಥಿಗಳು, ಮತ್ತು ಒಂದಷ್ಟು ಸ್ಥಳೀಯ ಉದ್ಯಮ ವ್ಯಕ್ತಿಗಳು ಹಾಗೂ ವೃತ್ತಿಪರರು ಮತದಾನ ಮಾಡಿದ ಗುಂಪಿನ ಭಾಗವಾಗಿದ್ದರು. ಅವರೆಲ್ಲರೂ ಒಂದಾಗಿ ಬಂದು, ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.
ಮತದಾನ ಪ್ರಕ್ರಿಯೆಯ ಕೊನೆಗೆ, ಮತಪತ್ರಗಳನ್ನು ಲೆಕ್ಕ ಹಾಕಲಾಯಿತು. ಒಟ್ಟಾರೆಯಾಗಿ 97 ಮತಗಳು ಚಲಾವಣೆಗೊಂಡಿದ್ದವು. ಅವುಗಳ ಫಲಿತಾಂಶ ಈ ಕೆಳಗಿನಂತಿತ್ತು.
ಸುಧಾರಣಾವಾದಿ ಅಭ್ಯರ್ಥಿ ಡಾ. ಮಸೂದ್ ಪೆಜೆಶ್ಕಿಯಾನ್ ಅವರು 61 ಮತಗಳನ್ನು ಪಡೆದಿದ್ದರು.
ತೀವ್ರವಾದಿ ಅಭ್ಯರ್ಥಿ ಸಯೀದ್ ಜಲೀಲಿ ಅವರಿಗೆ 28 ಮತಗಳು ಲಭಿಸಿದ್ದವು.
8 ಮತಗಳು ಅಸಿಂಧು ಅಥವಾ ಖಾಲಿ ಮತಗಳಾಗಿದ್ದವು. ಅವುಗಳು ಇಬ್ಬರು ಅಭ್ಯರ್ಥಿಗಳೂ ಬೇಡ ಎನ್ನುವ ವಿರೋಧ ಅಭಿಪ್ರಾಯದ, ಪ್ರತಿಭಟನೆಯ ಸಂಕೇತವಾಗಿದ್ದವು.
ಮತದಾನ ಪ್ರಕ್ರಿಯೆ ಸಾಕಷ್ಟು ಸುಗಮವಾಗಿ ನೆರವೇರಿತ್ತು. ಇದಕ್ಕಾಗಿ ದೆಹಲಿಯಲ್ಲಿ ವಾಸಿಸುತ್ತಿರುವ ಇರಾನಿಯನ್ ಪ್ರಜೆಗಳು ಒಂದಾಗಿ ಬಂದು ಮತದಾನ ಮಾಡಿದ್ದರು.
ಭಾನುವಾರ ಬೆಳಗಿನ ವೇಳೆಗೆ, ಜಗತ್ತಿನಾದ್ಯಂತ ಇದ್ದ ಇರಾನಿಯನ್ನರಿಗೆ ತಮ್ಮ ದೇಶದಲ್ಲಿ ಭಾರೀ ಬದಲವಾಣೆಗಳು ತಲೆದೋರಿವೆ ಎನ್ನುವುದು ತಿಳಿದುಬಂತು. ಸುಧಾರಣಾವಾದಿ ಅಭ್ಯರ್ಥಿ, ಹೃದಯ ಶಸ್ತ್ರಚಿಕಿತ್ಸಕನಾಗಿದ್ದು, ಬಳಿಕ ರಾಜಕಾರಣಿಯಾದ ಡಾ. ಮಸೂದ್ ಪೆಜೆಶ್ಕಿಯಾನ್ ಅವರು ಚುನಾವಣೆಯಲ್ಲಿ ವಿಜೇತರಾಗಿದ್ದರು. ಪೆಜೆಶ್ಕಿಯಾನ್ ಅವರಿಗೆ 16.3 ಮಿಲಿಯನ್ ಮತಗಳು ಲಭಿಸಿದ್ದರೆ, ಅವರ ಎದುರಾಳಿ, ಸಯೀದ್ ಜಲೀಲಿ ಅವರು 13.5 ಮಿಲಿಯನ್ ಮತಗಳನ್ನು ಪಡೆದುಕೊಂಡಿದ್ದರು.
ಇರಾನಿನ ತೀವ್ರವಾದಿ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಅನಿರೀಕ್ಷಿತವಾಗಿ ಮೃತಪಟ್ಟ ಒಂದು ತಿಂಗಳಿಗೂ ಹೆಚ್ಚು ಸಮಯದ ಬಳಿಕ ಇರಾನಿನಲ್ಲಿ ಚುನಾವಣೆ ಆಯೋಜನೆಗೊಂಡಿತು. ಇಬ್ರಾಹಿಂ ರೈಸಿ ಅವರು ಮೇ ತಿಂಗಳಲ್ಲಿ ನಡೆದ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟಿದ್ದರು.
ರೈಸಿಯವರ ಮರಣದ ಸುದ್ದಿ ಬಹಳಷ್ಟು ಇರಾನಿ ಪ್ರಜೆಗಳಲ್ಲಿ ಹೊಸ ಉತ್ಸಾಹ ಮತ್ತು ಆಶಾ ಭಾವನೆ ಮೂಡಿಸಿತು. ಇರಾನಿಯನ್ನರು ಪೆಜೆಶ್ಕಿಯಾನ್ ಅವರು ಚುನಾವಣೆಯಲ್ಲಿ ಗೆದ್ದರೆ, ಇರಾನಿನಲ್ಲಿ ತರಬಹುದಾದ ಸಂಭಾವ್ಯ ಬದಲಾವಣೆಗಳು ಮತ್ತು ಸುಧಾರಣೆಗಳನ್ನು ಎದುರು ನೋಡುತ್ತಿದ್ದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸಾಮಾಜಿಕ ಜಾಲತಾಣಗಳ ಮೂಲಕ ಇರಾನಿನ ನೂತನ ಅಧ್ಯಕ್ಷರಾಗಿ ಚುನಾಯಿತರಾದ ಡಾ. ಮಸೂದ್ ಪೆಜೆಶ್ಕಿಯಾನ್ ಅವರನ್ನು ಅಭಿನಂದಿಸಿದರು.
ತನ್ನ ಸಂದೇಶದಲ್ಲಿ, ಪ್ರಧಾನಿ ಮೋದಿಯವರು ಇರಾನಿನ ನೂತನ ಅಧ್ಯಕ್ಷರೊಡನೆ ನಿಕಟವಾಗಿ ಕಾರ್ಯಾಚರಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ್ದು, ಭಾರತ ಮತ್ತು ಇರಾನ್ ನಡುವಿನ ಸುದೀರ್ಘ, ಮಧುರ ಬಾಂಧವ್ಯವನ್ನು ಇನ್ನಷ್ಟು ಬಲಪಡಿಸುವ ಉದ್ದೇಶವನ್ನು ವ್ಯಕ್ತಪಡಿಸಿದರು. ಇದರಿಂದ, ಭಾರತ ಮತ್ತು ಇರಾನ್ ಎರಡು ದೇಶಗಳಿಗೆ, ಮತ್ತು ಒಟ್ಟಾರೆ ಭೂ ಪ್ರದೇಶಕ್ಕೆ ಪ್ರಯೋಜನವಾಗಲಿದೆ ಎಂದು ಮೋದಿ ಅಭಿಪ್ರಾಯ ಪಟ್ಟಿದ್ದಾರೆ.
ಟೆಹರಾನ್‌ನಲ್ಲಿ ಸುಧಾರಣಾವಾದಿ ಗುಂಪಿನ ಅಧ್ಯಕ್ಷರು ಅಧಿಕಾರಕ್ಕೆ ಬಂದಿರುವುದರಿಂದ, ಹೊಸ ಅಧ್ಯಕ್ಷರೊಡನೆ ಸಹಯೋಗ ಹೊಂದಿ ಕಾರ್ಯಾಚರಿಸುವ ಕುರಿತು ಮೋದಿ ಆಶಾ ಭಾವನೆ ವ್ಯಕ್ತಪಡಿಸಿದ್ದಾರೆ. ಈ ಹಿಂದೆಯೂ ಇರಾನಿನಲ್ಲಿ ಸುಧಾರಣಾವಾದಿಗಳು ಅಧಿಕಾರದಲ್ಲಿದ್ದಾಗ ಇರಾನ್ ಜೊತೆಗಿನ ನವದೆಹಲಿಯ ಅನುಭವಗಳು ಧನಾತ್ಮಕವಾಗಿದ್ದವು.
ಇರಾನಿನ ಅಧಿಕಾರ ವ್ಯವಸ್ಥೆ: ಇರಾನಿನ ಅಧಿಕಾರ ವ್ಯವಸ್ಥೆಯಲ್ಲಿ, ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ, ಇರಾನಿನ ಅಧ್ಯಕ್ಷರು ಬಹುತೇಕ ಇರಾನಿನ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿಯವರಿಗೆ ಉಪ ನಾಯಕನ ರೀತಿಯಲ್ಲಿ ಕಾರ್ಯಾಚರಿಸುತ್ತಾರೆ. ಇರಾನಿನ ವಿಚಾರಗಳಿಗೆ ಸಂಬಂಧಿಸಿದಂತೆ, ಅಂತಿಮ ನಿರ್ಧಾರ ತೆಗೆದುಕೊಳ್ಳುವ ಪರಮಾಧಿಕಾರ ಪರಮೋಚ್ಚ ನಾಯಕನದಾಗಿರುತ್ತದೆ.
ಡಾ. ಪೆಜೆಶ್ಕಿಯಾನ್ ಅವರು ಇರಾನ್ - ಇರಾಕ್ ಯುದ್ಧದಲ್ಲಿ ಪಾಲ್ಗೊಂಡ ಅನುಭವಿಯಾಗಿದ್ದಾರೆ. ಅವರು ಇರಾನ್ ಸಂಸತ್ತಿನಲ್ಲಿ ಇರಾನಿನ ಆರೋಗ್ಯ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇರಾನಿನ ಜನಾಂಗೀಯ ಅಲ್ಪಸಂಖ್ಯಾತ ಗುಂಪು ಅಜೆರಿಯ ಭಾಗವಾದ ಡಾ. ಪೆಜೆಶ್ಕಿಯಾನ್ ಅವರಿಗೆ ಮಾಜಿ ಅಧ್ಯಕ್ಷರಾದ ಮೊಹಮ್ಮದ್ ಖತಾಮಿ ಅಪಾರ ಬೆಂಬಲ ಒದಗಿಸಿದ್ದರು.
ಅಮೆರಿಕಾ ನೇತೃತ್ವದ ನಿರ್ಬಂಧಗಳು ಇರಾನಿನ ಆರ್ಥಿಕ ಪರಿಸ್ಥಿತಿ ಹದಗೆಡುವಂತೆ ಮಾಡಿರುವುದರಿಂದ, ಪೆಜೆಶ್ಕಿಯಾನ್ ಅವರು ಪಾಶ್ಚಾತ್ಯ ದೇಶಗಳೊಡನೆ ಇರಾನಿನ ಪರಮಾಣು ಕಾರ್ಯಕ್ರಮದ ಕುರಿತು ಮಾತುಕತೆ ನಡೆಸಲು ಸಿದ್ಧರಿದ್ದಾರೆ ಎನ್ನಲಾಗಿದೆ. ಇರಾನಿನ ಆರ್ಥಿಕ ಪರಿಸ್ಥಿತಿಯನ್ನು ಸರಿಪಡಿಸಲು ಇದೊಂದು ಅವಶ್ಯಕ ಮತ್ತು ಅನಿವಾರ್ಯ ಕ್ರಮವಾಗಿದೆ ಎನ್ನುವುದನ್ನು ಪೆಜೆಶ್ಕಿಯಾನ್ ಮನಗಂಡಿದ್ದಾರೆ.
ಪೆಜೆಶ್ಕಿಯಾನ್ ಅವರು ಯುವ ಜನತೆ ಮತ್ತು ಮಹಿಳಾ ಮತದಾರರಲ್ಲಿ ಬಹಳಷ್ಟು ಜನಪ್ರಿಯರಾಗಿದ್ದು, ಇರಾನ್ ಸರ್ಕಾರವನ್ನು ಬಹಳಷ್ಟು ಬಾರಿ ಬಹಿರಂಗವಾಗಿಯೇ ಟೀಕಿಸಿದ್ದಾರೆ. 2022ರಲ್ಲಿ ಇರಾನಿಯನ್ ಕುರ್ದಿಶ್ ಮಹಿಳೆ ಮಾಹ್ಸಾ ಅಮೀನಿಯ ಸಾವಿನ ಬಳಿಕ ನಡೆದ ಪ್ರತಿಭಟನೆಯನ್ನು ಹತ್ತಿಕ್ಕಲು ಸರ್ಕಾರ ಕೈಗೊಂಡ ತೀವ್ರ ಕ್ರಮಗಳನ್ನೂ ಪೆಜೆಶ್ಕಿಯಾನ್ ವಿರೋಧಿಸಿದ್ದರು.
ಭಾರತ - ಇರಾನ್ ಸಂಬಂಧದ ಮೈಲಿಗಲ್ಲುಗಳು
ಭಾರತ ಮತ್ತು ಇರಾನ್ ಮಾರ್ಚ್ 15, 1950ರಂದು ಸ್ನೇಹದ ಒಪ್ಪಂದಕ್ಕೆ ಸಹಿ ಹಾಕಿದವು. 1997ರಿಂದ 2005ರ ತನಕ ಸುಧಾರಣಾವಾದಿ ಅಧ್ಯಕ್ಷ ಖತಾಮಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ, ಭಾರತ ಇರಾನ್ ಸಂಬಂಧಗಳು ಪರಿಣಾಮಕಾರಿಯಾಗಿ ಸುಧಾರಿಸಿದವು.
2001ರಲ್ಲಿ ಭಾರತದ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಟೆಹರಾನ್‌ಗೆ ತೆರಳಿ, ಟೆಹರಾನ್ ಘೋಷಣೆಗೆ ಸಹಿ ಹಾಕಿದರು. ಆ ಬಳಿಕ, 2003ರಲ್ಲಿ ಭಾರತಕ್ಕೆ ಭೇಟಿ ನೀಡಿದ ಇರಾನ್ ಅಧ್ಯಕ್ಷ ಖತಾಮಿ ನವದೆಹಲಿ ಘೋಷಣೆಗೆ ಸಹಿ ಹಾಕಿದರು. ಇವೆರಡು ಘಟನೆಗಳು ಭಾರತ - ಇರಾನ್ ಸಹಕಾರಕ್ಕೆ ಹೊಸ ಉತ್ತೇಜನ ನೀಡಿದ ಘಟನೆಗಳಾಗಿವೆ ಎಂದು ಟೆಹರಾನ್ ಮತ್ತು ನವದೆಹಲಿಯ ಭಾರತೀಯ ರಾಜತಂತ್ರಜ್ಞರು ಅಭಿಪ್ರಾಯ ಪಡುತ್ತಾರೆ.
2003ರಲ್ಲಿ, ಅಧ್ಯಕ್ಷ ಖತಾಮಿ ಅವರು ಭಾರತದ ಗಣರಾಜ್ಯೋತ್ಸವ ಸಮಾರಂಭಕ್ಕೆ ಅತಿಥಿಯಾಗಿ ಆಗಮಿಸಿದ ಪ್ರಥಮ ಇರಾನ್ ಅಧ್ಯಕ್ಷ ಎಂಬ ಕೀರ್ತಿಗೆ ಪಾತ್ರರಾದರು.
ಚಬಹಾರ್ ಬಂದರನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ, 2002ರಲ್ಲಿ ಇರಾನಿನ ಆಗಿನ ರಾಷ್ಟ್ರೀಯ ಭದ್ರತಾ ಸಲಹೆಗಾರ ಹಸ್ಸನ್ ರೌಹಾನಿ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿದ್ದ ಬ್ರಜೇಶ್ ಮಿಶ್ರಾ ಅವರೊಡನೆ ಮಾತುಕತೆ ನಡೆಸಿದರು. ಆ ಬಳಿಕ, ಭಾರತ ಚಬಹಾರ್ ಬಂದರು ಅಭಿವೃದ್ಧಿ ಯೋಜನೆಯ ಭಾಗವಾಯಿತು.
ಜನವರಿ 2003ರಲ್ಲಿ, ಖತಾಮಿ ಮತ್ತು ವಾಜಪೇಯಿ ಅವರು ಕಾರ್ಯತಂತ್ರದ ಸಹಯೋಗಕ್ಕೆ ಸಂಬಂಧಿಸಿದಂತೆ ಸಮಗ್ರ ಮಾರ್ಗಸೂಚಿಯೊಂದಕ್ಕೆ ಸಹಿ ಹಾಕಿ, ಭಾರತ - ಇರಾನ್ ಸಹಯೋಗಕ್ಕೆ ಕಾರ್ಯತಂತ್ರದ ದೂರದೃಷ್ಟಿ ಒದಗಿಸಿದರು.
ಅಂದಿನಿಂದ ಎರಡೂ ದೇಶಗಳ ಸಂಬಂಧ ಸಾಕಷ್ಟು ಏಳು ಬೀಳುಗಳನ್ನು ಅನುಭವಿಸಿದೆ. ತೀವ್ರಗಾಮಿ ಅಧ್ಯಕ್ಷ ಮಹ್ಮೂದ್ ಅಹ್ಮದಿನೆಜಾದ್ ಅವಧಿಯಲ್ಲಿ (2005-2013), ಭಾರತ ಮತ್ತು ಅಮೆರಿಕಾಗಳು ಪರಮಾಣು ಒಪ್ಪಂದಕ್ಕೆ ಸಹಿ ಹಾಕಿದ್ದರಿಂದ ಮತ್ತು ಇರಾನಿನ ಪರಮಾಣು ಯೋಜನೆಗೆ ಅಮೆರಿಕಾ ನಿರ್ಬಂಧ ಹೇರಿದ್ದರಿಂದ, ಭಾರತ - ಇರಾನ್ ಸಂಬಂಧವೂ ಹದಗೆಟ್ಟಿತು.
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 2018ರಲ್ಲಿ ಜೆಸಿಪಿಒಎ ನಿಂದ ಹೊರನಡೆದಾಗ, ನಿರ್ಬಂಧಗಳು ಮರಳಿ ಹೇರಲ್ಪಟ್ಟವು. ಇದರ ಪರಿಣಾಮವಾಗಿ, ಭಾರತ ತನ್ನ ದೀರ್ಘಕಾಲೀನ ತೈಲ ಪೂರೈಕೆದಾರ ಇರಾನ್‌ನಿಂದ ತೈಲ ಖರೀದಿಸುವುದನ್ನು ಬಲವಂತವಾಗಿ ನಿಲ್ಲಿಸಬೇಕಾಯಿತು. ಚಬಹಾರ್ ಬಂದರು ಯೋಜನೆ ಈ ನಿರ್ಬಂಧದಿಂದ ಹೊರಗಿದ್ದರೂ, ಬಂದರು ಅಭಿವೃದ್ಧಿ ಯೋಜನೆ ಬಹಳಷ್ಟು ನಿಧಾನಗೊಂಡಿತು.
ತೀವ್ರಗಾಮಿ ಅಧ್ಯಕ್ಷ ಇಬ್ರಾಹಿಂ ರೈಸಿ (2021-2024) ಜೋ ಬಿಡನ್ ನೇತೃತ್ವದ ಅಮೆರಿಕಾ ಆಡಳಿತದೊಡನೆ ಪರೋಕ್ಷ ಮಾತುಕತೆ ನಡೆಸಿದ್ದರಾದರೂ, ಅದರಿಂದ ಹೇಳಿಕೊಳ್ಳುವಂತಹ ಯಾವುದೇ ಬದಲಾವಣೆಗಳು ತೋರಲಿಲ್ಲ.
ಮುಂದಿನ ಆರು ತಿಂಗಳ ಅವಧಿಯಲ್ಲಿ, ಡೊನಾಲ್ಡ್ ಟ್ರಂಪ್ ಅಮೆರಿಕಾದ ಅಧ್ಯಕ್ಷರಾಗಿ ಶ್ವೇತ ಭವನಕ್ಕೆ ಮರಳುವ ಸಾಧ್ಯತೆಗಳು ಇರುವುದರಿಂದ, ಭಾರತ ಕಾದುನೋಡುವ ತಂತ್ರವನ್ನು ಅನುಸರಿಸುತ್ತಿದೆ. ಇದರ ಪರಿಣಾಮವಾಗಿ, ನವದೆಹಲಿ ಇತ್ತೀಚಿನ ವರ್ಷಗಳಲ್ಲಿ ಹಿನ್ನೆಲೆಗೆ ಸರಿದಿದ್ದ ಇರಾನ್ ಜೊತೆಗಿನ ಸಂಬಂಧದ ವಿಚಾರದಲ್ಲಿ ಜಾಗರೂಕವಾಗಿ ಮುಂದಕ್ಕೆ ಹೆಜ್ಜೆ ಇಡಲಿದೆ.
- ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
Advertisement