ಭಯೋತ್ಪಾದಕರ ಹೊಸ ನೆಲೆಯಾಗಲಿದೆಯೇ ಜಮ್ಮು?; ಉಗ್ರರ ಬದಲಾದ ಕಾರ್ಯ ವಿಧಾನಕ್ಕೆ ಇತ್ತೀಚಿನ ಹಿಂಸಾಚಾರಗಳೇ ಸಾಕ್ಷಿ!

ಆಗಸ್ಟ್ 2019ರಲ್ಲಿ ಜಮ್ಮು ಮತ್ತು ಕಾಶ್ಮೀರದ ಸ್ವಾಯತ್ತತೆಯನ್ನು ರದ್ದುಪಡಿಸಿದ ಬಳಿಕ, ಮೋದಿ ಸರ್ಕಾರ ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದಕರು ಮತ್ತು ಪ್ರತ್ಯೇಕತಾವಾದಿಗಳ ವಿರುದ್ಧದ ತನ್ನ ಕಠಿಣ ಕ್ರಮಗಳನ್ನು ಇನ್ನಷ್ಟು ತೀವ್ರಗೊಳಿಸಿತು.
Army troops continued their operation against militants hiding in the dense forests of Poonch district in Jammu and Kashmir.
ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ದಟ್ಟ ಅರಣ್ಯದಲ್ಲಿ ಉಗ್ರರ ವಿರುದ್ಧ ಸೇನಾ ಪಡೆಗಳು ಕಾರ್ಯಾಚರಣೆ ನಡೆಸಿದ ದೃಶ್ಯ.File photo
Updated on

ಜೂನ್ ತಿಂಗಳಲ್ಲಿ ಜಮ್ಮು ಮತ್ತು ಕಾಶ್ಮೀರ ವ್ಯಾಪಕ ಹಿಂಸಾಚಾರಕ್ಕೆ ಸಾಕ್ಷಿಯಾಯಿತು. ಜೂನ್ 9ರಿಂದ 12ರ ನಡುವಿನ ಅವಧಿಯಲ್ಲಿ, ಭಯೋತ್ಪಾದಕರು ಜಮ್ಮು ಕೇಂದ್ರಾಡಳಿತ ಪ್ರದೇಶದಲ್ಲಿ ನಾಲ್ಕು ಭಯೋತ್ಪಾದನಾ ದಾಳಿಗಳನ್ನು ನಡೆಸಿದರು. ಇವುಗಳ ಪೈಕಿ ಮೂರು ದಾಳಿಗಳು ಕೇವಲ 24 ಗಂಟೆಗಳೊಳಗೆ ಸಂಭವಿಸಿದ್ದವು.

ಜೂನ್ 17ರಂದು ಕಾಶ್ಮೀರದ ಬಂಡಿಪೊರಾದಲ್ಲಿ ಐದನೇ ಭಯೋತ್ಪಾದನಾ ದಾಳಿ ನಡೆಯಿತು.

ಈ ದಾಳಿಗಳು ಜೂನ್ 9ರಂದು ರಿಯಾಸಿ ಜಿಲ್ಲೆಯಲ್ಲಿ ಆರಂಭಗೊಂಡವು. ಮೊದಲನೇ ದಾಳಿಯಲ್ಲಿ, ಹಿಂದೂ ಭಕ್ತರನ್ನು ವೈಷ್ಣೋದೇವಿ ದೇವಾಲಯಕ್ಕೆ ಕರೆದೊಯ್ಯುತ್ತಿದ್ದ ಬಸ್ ಒಂದರ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದರು. ಭಯೋತ್ಪಾದಕರು ದಾಳಿ ನಡೆಸುತ್ತಿದ್ದಂತೆ ಚಾಲಕ ನಿಯಂತ್ರಣ ಕಳೆದುಕೊಂಡು, ಬಸ್ ರಸ್ತೆಯಿಂದ ಕೆಳಗಿಳಿದು, ಆಳವಾದ ಕಮರಿಗೆ ಬಿತ್ತು. ಈ ದುರ್ಘಟನೆಯಲ್ಲಿ 9 ಭಕ್ತರು ಸಾವಿಗೀಡಾಗಿ, 33 ಪ್ರಯಾಣಿಕರು ಗಾಯಗೊಂಡರು.

ಪ್ರಧಾನಿ ನರೇಂದ್ರ ಮೋದಿಯವರು ಸತತ ಮೂರನೇ ಬಾರಿಗೆ ಭಾರತದ ಪ್ರಧಾನ ಮಂತ್ರಿಯಾಗಿ ನವದೆಹಲಿಯಲ್ಲಿ ಪ್ರಮಾಣವಚನ ಸ್ವೀಕರಿಸುವ ಅಂದಾಜು ಒಂದು ಗಂಟೆ ಮುನ್ನ, ಅಂದರೆ ಸಂಜೆ 6:15ರ ವೇಳೆಗೆ ರಿಯಾಸಿಯಲ್ಲಿ ನಡೆದ ದಾಳಿ ಸಂಭವಿಸಿತ್ತು.

ಜೂನ್ 11-12ರ ಅವಧಿಯಲ್ಲಿ, ಇನ್ನೂ ಮೂರು ಕ್ಷಿಪ್ರ ಭಯೋತ್ಪಾದನಾ ದಾಳಿಗಳು ನಡೆದವು. ಅವುಗಳ ಪೈಕಿ ಒಂದು ದಾಳಿ ಭಾರತ - ಪಾಕಿಸ್ತಾನ ಗಡಿಯ ಸನಿಹದ ಕತುವಾ ಎಂಬ ಹಳ್ಳಿಯಲ್ಲಿ ನಡೆದಿತ್ತು. ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ, ಇಬ್ಬರು ಭಯೋತ್ಪಾದಕರು ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಓರ್ವ ಯೋಧ ಸಾವಿಗೀಡಾದರು. ಡೋಡಾ ಜಿಲ್ಲೆಯ ಗಾಂಡೋಹ್ ಮತ್ತು ಚತ್ತರ್‌ಗಲಾ ಚೆಕ್ ಪಾಯಿಂಟ್‌ಗಳಲ್ಲಿ ಇನ್ನೆರಡು ಉಗ್ರ ದಾಳಿಗಳು ನಡೆದವು. ಇದರಲ್ಲಿ ಏಳು ಭದ್ರತಾ ಸಿಬ್ಬಂದಿಗಳು ಸಾವನ್ನಪ್ಪಿದರು.

ವರದಿಗಳ ಪ್ರಕಾರ, ಜಮ್ಮುವಿನಲ್ಲಿ ನಡೆದ ದಾಳಿಗಳಲ್ಲಿ, ಅದರಲ್ಲೂ ರಿಯಾಸಿಯಲ್ಲಿ ನಡೆದ ಉಗ್ರ ದಾಳಿ ಭಾರತದ ಭದ್ರತಾ ವ್ಯವಸ್ಥೆಯಲ್ಲಿ ಗಂಭೀರ ಸವಾಲುಗಳನ್ನು ಮೂಡಿಸಿದ್ದವು.

ಆಗಸ್ಟ್ 2019ರಲ್ಲಿ ಜಮ್ಮು ಮತ್ತು ಕಾಶ್ಮೀರದ ಸ್ವಾಯತ್ತತೆಯನ್ನು ರದ್ದುಪಡಿಸಿದ ಬಳಿಕ, ಮೋದಿ ಸರ್ಕಾರ ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದಕರು ಮತ್ತು ಪ್ರತ್ಯೇಕತಾವಾದಿಗಳ ವಿರುದ್ಧದ ತನ್ನ ಕಠಿಣ ಕ್ರಮಗಳನ್ನು ಇನ್ನಷ್ಟು ತೀವ್ರಗೊಳಿಸಿತು. ಕಾಶ್ಮೀರದಲ್ಲಿ ತೀವ್ರಗೊಂಡ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳ ಪರಿಣಾಮವಾಗಿ, ಭಯೋತ್ಪಾದಕರು ತಮ್ಮ ಚಟುವಟಿಕೆಗಳನ್ನು ಜಮ್ಮುವಿಗೆ ವರ್ಗಾಯಿಸತೊಡಗಿದರು. ದ ಡಿಪ್ಲೊಮಾಟ್ ವರದಿಯ ಪ್ರಕಾರ, ಕಳೆದ ಹದಿನೈದು ವರ್ಷಗಳ ಅವಧಿಯಿಂದ ಭಯೋತ್ಪಾದನಾ ಚಟುವಟಿಕೆಗಳಿಂದ ಮುಕ್ತವಾಗಿದ್ದ ಜಮ್ಮುವಿನಲ್ಲಿ 2021ರ ಬಳಿಕ ಮತ್ತೆ ಉಗ್ರ ದಾಳಿಗಳು ಆರಂಭಗೊಂಡವು.

ಭಯೋತ್ಪಾದಕರು ಕಾಶ್ಮೀರದಿಂದ ಜಮ್ಮುವಿಗೆ ಸ್ಥಳಾಂತರಗೊಳ್ಳುತ್ತಿರುವುದರ ಆರಂಭಿಕ ಲಕ್ಷಣಗಳು 2021ರ ಫೆಬ್ರವರಿಯಲ್ಲಿ ಕಾಣಿಸಿಕೊಂಡವು. ಆ ವೇಳೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಸಾಂಬಾ ಜಿಲ್ಲೆಯ, ಅಂತಾರಾಷ್ಟ್ರೀಯ ಗಡಿಯ ಬಳಿ 15 ಸ್ಟಿಕ್ಕಿ ಬಾಂಬ್‌ಗಳನ್ನು (ಮ್ಯಾಗ್ನೆಟಿಕ್ ಐಇಡಿ) ವಶಪಡಿಸಿಕೊಂಡರು. ಅದೇ ವರ್ಷ, ಜೂನ್ 27ರಂದು, ನೆಲದ ಸನಿಹದಲ್ಲಿ ಹಾರುತ್ತಿದ್ದ ಡ್ರೋನ್‌ಗಳು ಜಮ್ಮು ವಾಯು ಸೇನಾ ನೆಲೆಯ ಬಳಿ ಐಇಡಿಗಳನ್ನು ಬೀಳಿಸಿದ್ದವು. ಭಯೋತ್ಪಾದಕರು ಇದೇ ಮೊದಲ ಬಾರಿಗೆ ಇಂತಹ ಕಾರ್ಯಾಚರಣೆಯನ್ನು ಭಾರತದಲ್ಲಿ ನಡೆಸಿದ್ದರು.

ಅದಾದ ಬಳಿಕ, ಬಹಳಷ್ಟು ದಾಳಿಗಳು ನಡೆಯತೊಡಗಿದವು. ಅಧಿಕೃತ ದಾಖಲೆಗಳ ಪ್ರಕಾರ, 2021ರ ಆರಂಭದಿಂದ, ಜಮ್ಮು ಪ್ರದೇಶದಲ್ಲಿ 29 ಭಯೋತ್ಪಾದಕ ದಾಳಿಗಳು ನಡೆದಿವೆ. ಇವುಗಳಲ್ಲಿ ನಾಗರಿಕರ ಸಾವಿನ ಪ್ರಮಾಣವೂ ಹೆಚ್ಚಾಗತೊಡಗಿದೆ. 2023ರಲ್ಲಿ ನಡೆದ ದಾಳಿಗಳಲ್ಲಿ 12 ನಾಗರಿಕರು ಸಾವನ್ನಪ್ಪಿದರು. ಆದರೆ, 2024ರ ಮೊದಲ ಆರು ತಿಂಗಳ ಅವಧಿಯಲ್ಲೇ 17 ನಾಗರಿಕರು ಸಾವಿಗೀಡಾಗಿದ್ದಾರೆ.

ಜೂನ್ 2023ರಲ್ಲಿ ಪ್ರಕಟವಾದ ವರದಿಯೊಂದರಲ್ಲಿ, ಕಾಶ್ಮೀರ ಹೆಚ್ಚಿನ ಭಯೋತ್ಪಾದನಾ ದಾಳಿಗಳನ್ನು ಎದುರಿಸಿ, ಅಲ್ಲಿ ನಾಗರಿಕರ ಸಾವಿನ ಸಂಖ್ಯೆ ಹೆಚ್ಚಾದರೂ, ಭಾರತದ ಭದ್ರತಾ ಅಧಿಕಾರಿಗಳು ಜಮ್ಮು ಪ್ರದೇಶದ ಭಯೋತ್ಪಾದನಾ ದಾಳಿಗಳನ್ನು ಹೆಚ್ಚಿನ ಹಾನಿ ಉಂಟುಮಾಡಿದ ಗಂಭೀರ ಘಟನೆಗಳು ಎಂದಿದ್ದಾರೆ ಎನ್ನಲಾಗಿತ್ತು.

Army troops continued their operation against militants hiding in the dense forests of Poonch district in Jammu and Kashmir.
ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿ ರದ್ದು, ಸಂವಿಧಾನದ ಪ್ರಯೋಜನಗಳ ಖಾತ್ರಿ: ಪ್ರಧಾನಿ ಮೋದಿ

ಜಮ್ಮುವಿನಲ್ಲಿ ಸಂಭವಿಸುವ ದಾಳಿಗಳು ಕೋಮು ಗಲಭೆಗಳನ್ನು ಉಂಟುಮಾಡುವ ಸಾಧ್ಯತೆಗಳಿರುವುದರಿಂದ, ಅಲ್ಲಿ ನಡೆಯುವ ದಾಳಿಗಳು ಹೆಚ್ಚು ಗಾಬರಿ ಮೂಡಿಸುವವಾಗಿವೆ.

ಕಾಶ್ಮೀರ ಕಣಿವೆಯಲ್ಲಿ ಬಹುಪಾಲು ಮುಸ್ಲಿಂ ಜನಸಂಖ್ಯೆ ಇದ್ದರೆ (96.4%), ಜಮ್ಮು ಹೆಚ್ಚು ವೈವಿಧ್ಯಮಯ ಜನಸಂಖ್ಯೆ ಹೊಂದಿದೆ. ಒಟ್ಟಾರೆಯಾಗಿ ಜಮ್ಮುವಿನಲ್ಲಿ ಹಿಂದೂಗಳ ಸಂಖ್ಯೆ 62.5% ಇದ್ದರೂ, ಹಿಂದೂ ಮುಸ್ಲಿಮರ ಜನಸಂಖ್ಯಾ ಅನುಪಾತ ಜಿಲ್ಲೆಯಿಂದ ಜಿಲ್ಲೆಗೆ ಬದಲಾಗುತ್ತದೆ. ನಾಗರಿಕರನ್ನು ಗುರಿಯಾಗಿಸಿಕೊಂಡು ನಡೆಯುವ ಯಾವುದೇ ಭಯೋತ್ಪಾದಕ ದಾಳಿಗಳು ಹಿಂದೂ ಮುಸ್ಲಿಂ ಮತೀಯ ಉದ್ವಿಗ್ನತೆ ಮತ್ತು ಹಿಂಸಾಚಾರಗಳಿಗೆ ಹಾದಿಮಾಡಿಕೊಡುವ ಅಪಾಯಗಳಿವೆ.

ವಾಸ್ತವವಾಗಿ, ಜಮ್ಮು ಪ್ರದೇಶದಲ್ಲಿ ಭಯೋತ್ಪಾದಕರು ನಡೆಸುತ್ತಿರುವ ದಾಳಿಗಳು ಮತೀಯ ಹಿಂಸಾಚಾರಗಳನ್ನು ಪ್ರಚೋದಿಸುವ ಉದ್ದೇಶವನ್ನೇ ಹೊಂದಿವೆ.

ಆಗಸ್ಟ್ 14, 1993ರಂದು, ಭಯೋತ್ಪಾದಕರು ಕಿಶ್ತ್‌ವಾರ್‌ನಲ್ಲಿ ಒಂದು ಪ್ರಯಾಣಿಕರ ಬಸ್ ಮೇಲೆ ದಾಳಿ ನಡೆಸಿದ್ದರು. ಅವರು ಬಸ್‌ನಲ್ಲಿದ್ದ ಹಿಂದೂ ಪ್ರಯಾಣಿಕರನ್ನು ಗುರುತಿಸಿ, 17 ಜನರನ್ನು ಗುಂಡಿಟ್ಟು ಕೊಲೆಗೈದಿದ್ದರು. ಕಿಶ್ತ್‌ವಾರ್ ದಾಳಿ ಜಮ್ಮುವಿನಲ್ಲಿ ನಡೆದ ಮೊದಲ ಹಿಂದೂ ನರಮೇಧವಾಗಿದ್ದು, ಇದರ ಬೆನ್ನಲ್ಲೇ ಹಿಂದೂ ಮುಸ್ಲಿಂ ಕೋಮು ಗಲಭೆ ಆರಂಭಗೊಂಡಿತ್ತು. ಆ ಸಂದರ್ಭದಲ್ಲಿ ಪರಿಸ್ಥಿತಿ ಎಷ್ಟು ಬಿಗಡಾಯಿಸಿತ್ತೆಂದರೆ, ಅಧಿಕಾರಿಗಳು ಜಮ್ಮುವಿಗೆ ಸೇನೆ ನಿಯೋಜಿಸಿ, ಕರ್ಫ್ಯೂ ಹೇರಿ, ಪರಿಸ್ಥಿತಿಯನ್ನು ಶಮನಗೊಳಿಸಬೇಕಾಗಿ ಬಂತು.

1998ರಲ್ಲಿ, ಉಧಂಪುರ್ ಜಿಲ್ಲೆಯ (ಈಗಿನ ರಿಯಾಸಿ ಜಿಲ್ಲೆ) ಪ್ರಾಣ್‌ಕೋಟ್ ಮತ್ತು ದಾಕಿಕೋಟ್ ಗ್ರಾಮಗಳಲ್ಲಿ ಭಯೋತ್ಪಾದಕರು 26 ಹಿಂದೂಗಳ ಶಿರಚ್ಛೇದ ನಡೆಸಿ ಹತ್ಯೆ ಮಾಡಿದರು.

ಭಯೋತ್ಪಾದಕರು ಜಮ್ಮು ಪ್ರಾಂತ್ಯದಲ್ಲಿನ ಹಿಂದೂ ದೇವಾಲಯಗಳ ಮೇಲೂ ದಾಳಿ ನಡೆಸಿದರು. ಜಮ್ಮು ನಗರದ ರಘುನಾಥ ದೇವಾಲಯವನ್ನು ಗುರಿಯಾಗಿಸಿದ ಆತ್ಮಹತ್ಯಾ ದಾಳಿಕೋರರು 2002ರ ಫೆಬ್ರವರಿಯಲ್ಲಿ ಮತ್ತು ನವೆಂಬರ್ ತಿಂಗಳಲ್ಲಿ ದಾಳಿ ನಡೆಸಿದರು. ಈ ದಾಳಿಗಳಲ್ಲಿ 26 ಭಕ್ತರು ಸಾವನ್ನಪ್ಪಿ, ಇನ್ನಷ್ಟು ಜನರು ಗಾಯಗೊಂಡರು. ಹಿಂದೂ ತೀರ್ಥಯಾತ್ರಿಕರನ್ನು ಗುರಿಯಾಗಿಸಿ ದಾಳಿ ನಡೆಸಲಾಯಿತು. ಮೇ 2022ರಲ್ಲಿ, ವೈಷ್ಣೋದೇವಿ ದೇವಾಲಯದಿಂದ ಮರಳುತ್ತಿದ್ದ ಬಸ್ ಮೇಲೆ ರಿಯಾಸಿ ಜಿಲ್ಲೆಯ ಕಾತ್ರಾ ಎಂಬಲ್ಲಿ ಭಯೋತ್ಪಾದಕರು ದಾಳಿ ನಡೆಸಿ, ಬೆಂಕಿ ಹಚ್ಚಿದ್ದರು. ಈ ದಾಳಿಯಲ್ಲಿ ನಾಲ್ವರು ಹಿಂದೂ ಯಾತ್ರಿಕರು ಸಾವಿಗೀಡಾಗಿ, 24ಕ್ಕೂ ಹೆಚ್ಚು ಜನರು ಗಾಯಾಳುಗಳಾದರು. ಮೊದಲಿಗೆ ಈ ಘಟನೆಯನ್ನು ಒಂದು ಅಪಘಾತ ಎಂದು ಪರಿಗಣಿಸಲಾಗಿತ್ತು. ಆದರೆ, ನಂತರ ನಡೆದ ತನಿಖೆಗಳಲ್ಲಿ, ಭಯೋತ್ಪಾದಕರು ಬಸ್ಸಿನ ಇಂಧನ ಟ್ಯಾಂಕಿಯಲ್ಲಿ ಸ್ಟಿಕ್ಕಿ ಬಾಂಬ್ ಅಳವಡಿಸಿದ್ದರು ಎನ್ನುವ ಅಂಶ ಬೆಳಕಿಗೆ ಬಂತು.

ಇತ್ತೀಚೆಗೆ ರಿಯಾಸಿಯಲ್ಲಿ ಬಸ್ ಮೇಲೆ ನಡೆದ ಭಯೋತ್ಪಾದಕ ದಾಳಿ ಹಲವು ಕಾರಣಗಳಿಗೆ ಆತಂಕ ಉಂಟುಮಾಡಿದೆ. ಮೊದಲನೆಯದಾಗಿ, ಈ ದಾಳಿ ಭಯೋತ್ಪಾದಕರು ಜಮ್ಮು ಪ್ರದೇಶಕ್ಕೆ ತಮ್ಮ ಕಾರ್ಯಾಚರಣೆಗಳನ್ನು ವಿಸ್ತರಿಸಿದ್ದಾರೆ ಎನ್ನುವುದಕ್ಕೆ ಸಾಕ್ಷಿ ಒದಗಿಸಿತ್ತು. ಜಮ್ಮು ಪ್ರಾಂತ್ಯದಲ್ಲಿ 2021ರ ಬಳಿಕ ನಡೆದ ಬಹುಪಾಲು ದಾಳಿಗಳು ಲೈನ್ ಆಫ್ ಕಂಟ್ರೋಲ್ (ಎಲ್ಒಸಿ) ಬಳಿ ಇರುವ ರಜೌರಿ ಮತ್ತು ಪೂಂಚ್ ಜಿಲ್ಲೆಗಳಲ್ಲಿ ನಡೆದಿವೆ. ರಿಯಾಸಿ ಮತ್ತು ಡೋಡಾಗಳಲ್ಲಿ ನಡೆದ ಇತ್ತೀಚಿನ ದಾಳಿಗಳು ಭಯೋತ್ಪಾದನೆ ಜಮ್ಮುವಿನ ಆಂತರಿಕ ಜಿಲ್ಲೆಗಳಿಗೆ ಮರಳುತ್ತಿದೆಯೇ ಎಂಬ ಅನುಮಾನಗಳನ್ನು ಮೂಡಿಸಿದೆ.

ಅದರಲ್ಲೂ ಹಿಂದೂ ತೀರ್ಥಯಾತ್ರಿಗಳನ್ನು ಒಯ್ಯುತ್ತಿದ್ದ ಬಸ್ ಮೇಲೆ ದಾಳಿ ‌ನಡೆದಿರುವುದು, ಮರಳಿ ಕೋಮು ಗಲಭೆಗಳನ್ನು ಆರಂಭಿಸುವ ಪ್ರಯತ್ನಗಳಂತೆ ತೋರಿವೆ. ಅದರೊಡನೆ, ಪ್ರತಿವರ್ಷವೂ ಲಕ್ಷಾಂತರ ಹಿಂದೂಗಳು ಹಿಮಾಲಯ ಪರ್ವತದಲ್ಲಿನ ಗುಹಾ ದೇವಾಲಯಕ್ಕೆ ಭೇಟಿ ನೀಡುವ ವಾರ್ಷಿಕ ಅಮರನಾಥ ಯಾತ್ರೆ ಆರಂಭಗೊಳ್ಳಲು ಕೆಲವೇ ವಾರಗಳು ಬಾಕಿ ಉಳಿದಿರುವಾಗ ಭಯೋತ್ಪಾದಕ ದಾಳಿ ನಡೆದಿದೆ. ಅಮರನಾಥ ಯಾತ್ರೆ ಜೂನ್ 29ರಂದು ಆರಂಭಗೊಂಡು, ಆಗಸ್ಟ್ 19ರಂದು ಮುಕ್ತಾಯಗೊಳ್ಳಲಿದೆ.

ಲಕ್ಷಾಂತರ ಭಕ್ತಾದಿಗಳು ಅಮರನಾಥ ಯಾತ್ರೆ ನಡೆಸುವುದರಿಂದ, ಅಲ್ಲಿನ ಕಷ್ಟಕರ ಭೂ ಪ್ರದೇಶ, ಊಹಿಸಲು ಸಾಧ್ಯವಿಲ್ಲದ ಹವಾಮಾನದ ಕಾರಣದಿಂದ ಸಾಮಾನ್ಯ ಪರಿಸ್ಥಿತಿಯಲ್ಲೂ ಭಕ್ತರ ಅವಶ್ಯಕತೆಗಳನ್ನು ಪೂರೈಸುವುದು ಮತ್ತು ಭದ್ರತೆ ಒದಗಿಸುವುದು ಕಷ್ಟಕರವಾಗುತ್ತದೆ. ಇತ್ತೀಚಿನ ದಶಕಗಳಲ್ಲಿ ಭಯೋತ್ಪಾದಕರು ಭಕ್ತಾದಿಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿರುವುದರಿಂದ, ಅಲ್ಲಿಗೆ ಭದ್ರತೆ ಒದಗಿಸುವುದು ಇನ್ನಷ್ಟು ಸವಾಲಾಗಿದೆ. ಉದಾಹರಣೆಗೆ, ಜುಲೈ 10, 2017ರಂದು ಭಯೋತ್ಪಾದಕರು ದಾಳಿ ನಡೆಸಿ, ಏಳು ಅಮರನಾಥ ಯಾತ್ರಿಕರನ್ನು ಕೊಂದು, 30 ಜನರನ್ನು ಗಾಯಗೊಳಿಸಿದರು. ಭಯೋತ್ಪಾದಕರು ಮುಂದಿನ ಅಮರನಾಥ ಯಾತ್ರೆಯನ್ನೂ ಗುರಿಯಾಗಿಸಿ ದಾಳಿ ನಡೆಸಬಹುದೆಂದು ಭದ್ರತಾ ಅಧಿಕಾರಿಗಳು ಆತಂಕ ಹೊಂದಿದ್ದಾರೆ.

Army troops continued their operation against militants hiding in the dense forests of Poonch district in Jammu and Kashmir.
ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನಾ ಕೃತ್ಯಗಳು 'ಪ್ರಾಕ್ಸಿ ವಾರ್' ಗೆ ಕುಸಿತ: ಬೇರು ಸಮೇತ ಕಿತ್ತೊಗೆಯಲು ಸರ್ಕಾರ ನಿರ್ಧಾರ- ಅಮಿತ್ ಶಾ

ಇನ್ನೂ ಮುಖ್ಯ ವಿಚಾರವೆಂದರೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಸದ್ಯದಲ್ಲೇ ವಿಧಾನಸಭಾ ಚುನಾವಣೆ ನಡೆಯಲಿದೆ. ಉದ್ವಿಗ್ನಗೊಂಡಿರುವ ಜಮ್ಮು ಕಾಶ್ಮೀರದಲ್ಲಿ ಸಹಜತೆಯನ್ನು ಮರಳಿಸಲು ಇದೊಂದು ಮಹತ್ತರ ಹೆಜ್ಜೆಯಾಗಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಕೊನೆಯ ಬಾರಿಗೆ ವಿಧಾನಸಭಾ ಚುನಾವಣೆ 2014ರಲ್ಲಿ ನಡೆದಿತ್ತು. 2018ರ ನಂತರ, ನವದೆಹಲಿ ನಿರಂತರವಾಗಿ ವಿಧಾನಸಭಾ ಚುನಾವಣೆಯನ್ನು ಮುಂದೂಡುತ್ತಾ ಬಂದಿದ್ದರಿಂದ, ಜಮ್ಮು ಕಾಶ್ಮೀರದಲ್ಲಿ ಚುನಾಯಿತ ಸರ್ಕಾರವೇ ಇರಲಿಲ್ಲ. ಕಳೆದ ವರ್ಷ, ಸರ್ವೋಚ್ಚ ನ್ಯಾಯಾಲಯ ಸೆಪ್ಟೆಂಬರ್ 30, 2024ರ ಮೊದಲಾಗಿ ಜಮ್ಮು ಕಾಶ್ಮೀರ ವಿಧಾನಸಭಾ ಚುನಾವಣೆ ನಡೆಸುವಂತೆ ಭಾರತೀಯ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿತ್ತು.

ಕಾಶ್ಮೀರ ಕಣಿವೆಯಲ್ಲಿ ತಮ್ಮ ಅಭ್ಯರ್ಥಿ ಸ್ಪರ್ಧಿಸಿದರೆ ಸೋಲುವ ಸಾಧ್ಯತೆಗಳಿವೆ ಎಂದು ಮನಗಂಡ ಮೋದಿಯವರ ಭಾರತೀಯ ಜನತಾ ಪಾರ್ಟಿ, ಎಪ್ರಿಲ್ - ಮೇ ತಿಂಗಳಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ತನ್ನ ಅಭ್ಯರ್ಥಿಗಳನ್ನು ನಿಲ್ಲಿಸಿರಲಿಲ್ಲ. ಬಿಜೆಪಿಯ ಪ್ರಾಕ್ಸಿ ಅಭ್ಯರ್ಥಿಗಳು ಎಂದು ಪರಿಗಣಿಸಲ್ಪಟ್ಟವರು ಚುನಾವಣೆಯಲ್ಲಿ ಸೋಲು ಕಂಡಿದ್ದರು.

ಜಮ್ಮು ಪ್ರಾಂತ್ಯದಲ್ಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಉತ್ತಮ ಪ್ರದರ್ಶನ ತೋರಿದ್ದರೂ, ಮುಂಬರುವ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಗೆ ಇಂಡಿ ಒಕ್ಕೂಟ ಸವಾಲೊಡ್ಡುವ ಸಾಧ್ಯತೆಗಳಿವೆ. ಕಾಶ್ಮೀರದಲ್ಲಂತೂ ಮತದಾರರು ಬಿಜೆಪಿ ಮತ್ತು ಅದರ ಬೆಂಬಲಿತ ಅಭ್ಯರ್ಥಿಗಳನ್ನು ಸೋಲಿಸುವ ಸಾಧ್ಯತೆಗಳಿವೆ.

ಮುಂದಿನ ತಿಂಗಳುಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಇನ್ನಷ್ಟು ಭಯೋತ್ಪಾದಕ ದಾಳಿಗಳು ನಡೆದರೆ, ಚುನಾವಣಾ ಪ್ರಕ್ರಿಯೆಗಳು ನಿಧಾನಗೊಳ್ಳುವ ಸಾಧ್ಯತೆಗಳಿವೆ. ಮೋದಿ ಸರ್ಕಾರಕ್ಕೆ ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆಯನ್ನು ಮುಂದೂಡಲು ಇದೊಂದು ಸಕಾರಣವಾಗಬಹುದು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com