
ನ್ಯಾಟೋ ಒಕ್ಕೂಟ ಜೂನ್ 26, ಬುಧವಾರದಂದು ನೆದರ್ಲ್ಯಾಂಡ್ಸ್ ಪ್ರಧಾನ ಮಂತ್ರಿ ಮಾರ್ಕ್ ರುಟ್ಟೆ ಅವರನ್ನು ತನ್ನ ಮುಂದಿನ ಮುಖ್ಯಸ್ಥನನ್ನಾಗಿ ಆಯ್ಕೆ ಮಾಡಿತು. ಉಕ್ರೇನ್‌ನಲ್ಲಿ ಇನ್ನೂ ಮುಂದುವರಿದಿರುವ ಯುದ್ಧ ಪರಿಸ್ಥಿತಿ ಮತ್ತು ನ್ಯಾಟೋ ಒಕ್ಕೂಟದ ಭವಿಷ್ಯದಲ್ಲಿ ಅಮೆರಿಕಾದ ಪಾತ್ರದ ಕುರಿತು ಮುಂದುವರಿದಿರುವ ಅನಿಶ್ಚಿತತೆಗಳ ನಡುವೆ ನ್ಯಾಟೋ ಮುಖ್ಯಸ್ಥರಾಗಿ ರುಟ್ಟೆ ಅವರ ಆಯ್ಕೆಯಾಗಿರುವುದು ಮಹತ್ವದ ಬೆಳವಣಿಗೆಯಾಗಿದೆ.
ನ್ಯಾಟೋ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರುಟ್ಟೆ ಅವರೊಡನೆ ರೊಮಾನಿಯ ಅಧ್ಯಕ್ಷ ಕ್ಲಾಸ್ ಲೊಹಾನ್ನಿಸ್ ಅವರೂ ಸ್ಪರ್ಧೆಯಲ್ಲಿದ್ದರು. ಆದರೆ, ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಆಯ್ಕೆಯಾಗಲು ಅವಶ್ಯಕ ಬೆಂಬಲ ಸಂಪಾದಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಲೊಹಾನ್ನಿಸ್ ಕಳೆದ ವಾರ ಸ್ಪರ್ಧೆಯಿಂದ ಹಿಂದೆ ಸರಿದರು. ಕಳೆದ ವರ್ಷ ಉಕ್ರೇನ್‌ಗೆ ಎಫ್-16 ಯುದ್ಧ ವಿಮಾನಗಳನ್ನು ಒದಗಿಸುವ ಮತ್ತು ಉಕ್ರೇನಿಯನ್ ಪೈಲಟ್‌ಗಳಿಗೆ ತರಬೇತಿ ನೀಡುವ ಸಮಿತಿಯ ಸಹ ನಾಯಕತ್ವ ವಹಿಸುವ ಮೂಲಕ ರುಟ್ಟೆ ನ್ಯಾಟೋ ಮುಖ್ಯಸ್ಥ ಸ್ಥಾನಕ್ಕೆ ತಮ್ಮ ಉಮೇದುವಾರಿಕೆಯನ್ನು ಇನ್ನಷ್ಟು ಭದ್ರಪಡಿಸಿದ್ದರು.
ಕಳೆದ ಹತ್ತು ವರ್ಷಗಳಿಂದ, ನಾರ್ವೆಯ ಜೆನ್ಸ್ ಸ್ಟಾಲ್ಟನ್‌ಬರ್ಗ್ ಅವರು ನ್ಯಾಟೋ ಪ್ರಧಾನ ಕಾರ್ಯದರ್ಶಿ ಸ್ಥಾನ ನಿರ್ವಹಿಸಿದ್ದರು. ರುಟ್ಟೆ ಅಕ್ಟೋಬರ್ 1ರಂದು ಅವರಿಂದ ಅಧಿಕಾರ ಸ್ವೀಕರಿಸುವ ಮೂಲಕ ತನ್ನ ಹೊಸ ಜವಾಬ್ದಾರಿಯನ್ನು ಆರಂಭಿಸಲಿದ್ದಾರೆ. ಮಾರ್ಕ್ ರುಟ್ಟೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಕಟು ಟೀಕಾಕಾರರಾಗಿ ಮತ್ತು ಉಕ್ರೇನ್‌ನ ಪ್ರಬಲ ಬೆಂಬಲಿಗರಾಗಿ ಗುರುತಿಸಿಕೊಂಡಿದ್ದಾರೆ. ಬಹುತೇಕ ಕಳೆದ 14 ವರ್ಷಗಳ ಕಾಲ ಡಚ್ ಪ್ರಧಾನಿಯಾಗಿ ಕಾರ್ಯ ನಿರ್ವಹಿಸಿರುವ ರುಟ್ಟೆ ಅಪಾರ ರಾಜಕೀಯ ವ್ಯವಹಾರಗಳ ಅನುಭವ ಸಂಪಾದಿಸಿದ್ದಾರೆ. ರಷ್ಯಾ 2022ರಲ್ಲಿ ಉಕ್ರೇನ್ ಮೇಲೆ ಆಕ್ರಮಣ ನಡೆಸಿದಾಗ, ಯುರೋಪ್ ಉಕ್ರೇನ್‌ಗೆ ಮಿಲಿಟರಿ ಬೆಂಬಲ ನೀಡುವಂತೆ ಮಾಡುವಲ್ಲಿ 57 ವರ್ಷ ವಯಸ್ಸಿನ ರುಟ್ಟೆ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಯುರೋಪ್‌ನಲ್ಲಿ ಶಾಂತಿ ಸ್ಥಾಪನೆಯಾಗಬೇಕಾದರೆ, ಯುದ್ಧರಂಗದಲ್ಲಿ ರಷ್ಯಾವನ್ನು ಮಣಿಸುವುದು ಅನಿವಾರ್ಯವಾಗಿದೆ ಎಂದು ರುಟ್ಟೆ ಬಲವಾಗಿ ನಂಬಿದ್ದಾರೆ.
2014ರಲ್ಲಿ, ಉಕ್ರೇನ್ ಆಗಸದಲ್ಲಿ ಚಲಿಸುತ್ತಿದ್ದ ವಿಮಾನವೊಂದು ಪತನಗೊಂಡಿತು. ಅದರಲ್ಲಿದ್ದ 298 ಪ್ರಯಾಣಿಕರೂ ಸಾವಿಗೀಡಾಗಿದ್ದು, ಅವರ ಪೈಕಿ 196 ಜನರು ಡಚ್ ನಾಗರಿಕರಾಗಿದ್ದರು. ಈ ದುರ್ಘಟನೆಗೆ ರಷ್ಯಾವೇ ಜವಾಬ್ದಾರ ಎಂದು ನೆದರ್ಲ್ಯಾಂಡ್ಸ್ ಪ್ರತಿಪಾದಿಸಿದೆ. ಈ ಘಟನೆಯ ನಂತರ ರಷ್ಯಾ ಕುರಿತ ರುಟ್ಟೆ ಅವರ ಅಭಿಪ್ರಾಯಗಳು ಇನ್ನಷ್ಟು ಬಲಗೊಂಡವು. ನ್ಯಾಟೋ ಮಾಸ್ಕೋಗೆ ಸವಾಲೆಸೆಯುವಷ್ಟು ಪ್ರಬಲ ಸಂಘಟನೆಯಾಗಬೇಕು ಎನ್ನುವುದು ರುಟ್ಟೆ ಮಹತ್ವಾಕಾಂಕ್ಷೆಯಾಗಿದ್ದು, ಪುಟಿನ್‌ರ ರಷ್ಯಾದ ವಿರುದ್ಧ ಜಾಗರೂಕವಾಗಿರುವಂತೆ ರುಟ್ಟೆ ಇತರ ಐರೋಪ್ಯ ಒಕ್ಕೂಟದ ನಾಯಕರಿಗೆ ಕರೆ ನೀಡಿದ್ದರು.
ರಷ್ಯಾ ಉಕ್ರೇನ್ ಮೇಲೆ ಪೂರ್ಣ ಪ್ರಮಾಣದ ಆಕ್ರಮಣ ನಡೆಸಿದ ಏಳು ತಿಂಗಳ ಬಳಿಕ, ಅಂದರೆ ಸೆಪ್ಟೆಂಬರ್ 2022ರಲ್ಲಿ, ವಿಶ್ವಸಂಸ್ಥೆಯಲ್ಲಿ ರಷ್ಯಾ ವಿರುದ್ಧ ರುಟ್ಟೆ ಬಲವಾದ ಅಭಿಪ್ರಾಯ ಮಂಡಿಸಿದ್ದರು. ಒಂದು ವೇಳೆ ಪುಟಿನ್ ಅವರನ್ನು ತಕ್ಷಣವೇ ತಡೆಗಟ್ಟದಿದ್ದರೆ, ಈ ಯುದ್ಧ ಕೇವಲ ಉಕ್ರೇನ್‌ಗೆ ಮಾತ್ರವೇ ಸೀಮಿತವಾಗಿರುವುದಿಲ್ಲ ಎಂದು ಅವರು ಎಚ್ಚರಿಸಿದ್ದರು. ಇದು ಕೇವಲ ಉಕ್ರೇನ್ ಪಾಲಿನ ಯುದ್ಧ ಮಾತ್ರವಲ್ಲದೆ, ಅಂತಾರಾಷ್ಟ್ರೀಯ ಕಾನೂನನ್ನು ಎತ್ತಿಹಿಡಿಯಬೇಕಾದ ಸಂದರ್ಭವಾಗಿದೆ ಎಂದು ರುಟ್ಟೆ ಹೇಳಿದ್ದರು.
ರುಟ್ಟೆ ಅವರು 2010ರಲ್ಲಿ ಡಚ್ ಪ್ರಧಾನ ಮಂತ್ರಿಯಾಗಿ ಆಯ್ಕೆಗೊಂಡರು. ಅದಾದ ಬಳಿಕ, ಹದಿನಾಲ್ಕು ವರ್ಷಗಳ ಕಾಲ ನೆದರ್ಲ್ಯಾಂಡ್ಸ್ ಪ್ರಧಾನಿಯಾಗಿ ಅಧಿಕಾರ ನಿರ್ವಹಿಸಿರುವ ಅವರು, ಅತ್ಯಂತ ದೀರ್ಘಕಾಲ ಆಡಳಿತ ನಡೆಸಿದ ಡಚ್ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕಳೆದ ವರ್ಷ ರುಟ್ಟೆ ತಾನು ಇನ್ನು ರಾಷ್ಟ್ರೀಯ ರಾಜಕಾರಣದಿಂದ ದೂರ ಸರಿಯುವುದಾಗಿ ಘೋಷಿಸಿದ್ದರು. ಜುಲೈ 17, 2014ರಂದು ಆ್ಯಮ್‌ಸ್ಟರ್‌ಡ್ಯಾಮ್ ನಿಂದ ಕೌಲಾಲಂಪುರ್‌ಗೆ ಪ್ರಯಾಣಿಸುತ್ತಿದ್ದ ಎಂಎಚ್17 ವಿಮಾನಕ್ಕೆ ಒಂದು ಬುಕ್ ಕ್ಷಿಪಣಿ ಅಪ್ಪಳಿಸಿತು. ಇದರ ಪರಿಣಾಮವಾಗಿ, ವಿಮಾನ ಪೂರ್ವ ಉಕ್ರೇನ್‌ನಲ್ಲಿ ಪತನಗೊಂಡಿತು. ಅಲ್ಲಿಯ ತನಕ ನೆದರ್ಲ್ಯಾಂಡ್ಸ್ ಆಂತರಿಕ ವಿಚಾರಗಳ ಕುರಿತು ಮಾತ್ರವೇ ಗಮನ ಕೇಂದ್ರೀಕರಿಸಿದ್ದ ರುಟ್ಟೆ, ಜಾಗತಿಕ ವಿಚಾರಗಳ ಕುರಿತು ಗಮನ ಹರಿಸತೊಡಗಿದರು. ಐರೋಪ್ಯ ಒಕ್ಕೂಟದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ರುಟ್ಟೆ, ವಲಸೆ, ಸಾಲ ಮತ್ತು ಕೋವಿಡ್-19 ವಿಪತ್ತು ನಿರ್ವಹಣೆಯ ವಿಚಾರಗಳ ಕುರಿತ ಮಾತುಕತೆಯಲ್ಲಿ ಅಪಾರ ಪ್ರಭಾವ ಬೀರಿದ್ದರು.
ನ್ಯಾಟೋ ತನ್ನ ಸದಸ್ಯ ರಾಷ್ಟ್ರಗಳು ತಮ್ಮ ಜಿಡಿಪಿಯ 2% ಮೊತ್ತವನ್ನು ರಕ್ಷಣಾ ಬಜೆಟ್‌ಗೆ ಮೀಸಲಿಡಬೇಕು ಎಂದು ಕರೆ ನೀಡಿತ್ತು. ರುಟ್ಟೆ ಅವರ ನಾಯಕತ್ವದಲ್ಲಿ ನೆದರ್ಲ್ಯಾಂಡ್ಸ್ ಈ ಗುರಿಯನ್ನು ತಲುಪಲು ತನ್ನ ರಕ್ಷಣಾ ಬಜೆಟ್‌ಗೆ ಉತ್ತೇಜನ ನೀಡಿತು. ನೆದರ್ಲ್ಯಾಂಡ್ಸ್ ತನ್ನ ಸೇನೆಗೆ ಮಹತ್ವದ ಹೂಡಿಕೆಗಳನ್ನು ನಡೆಸುವ ಜೊತೆಗೆ, ಈಗಾಗಲೇ ಉಕ್ರೇನ್‌ಗೆ ಎಫ್-16 ಯುದ್ಧ ವಿಮಾನಗಳು, ಆರ್ಟಿಲರಿ, ಡ್ರೋನ್‌ಗಳು ಮತ್ತು ಆಯುಧಗಳನ್ನು ಒದಗಿಸಿದೆ.
ರುಟ್ಟೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್‌ಕಿ ಅವರನ್ನು ಐದು ವರ್ಷಗಳ ಹಿಂದೆ ಉಕ್ರೇನ್ ರಾಜಧಾನಿ ಕೀವ್‌ನಲ್ಲಿ ಭೇಟಿ ಮಾಡಿದ್ದರು. ರುಟ್ಟೆ ಯುದ್ಧದ ಸಂದರ್ಭದಲ್ಲಿ ಜೆಲೆನ್ಸ್‌ಕಿ ಅವರಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದರು. ನೆದರ್ಲ್ಯಾಂಡ್ಸ್ ಪ್ರಧಾನಿಯಾಗಿ ಕೊನೆಯ ಕೆಲವು ತಿಂಗಳುಗಳ ಅಧಿಕಾರಾವಧಿಯಲ್ಲಿ, ರುಟ್ಟೆ ಉಕ್ರೇನ್ ಜೊತೆಗೆ ಹತ್ತು ವರ್ಷಗಳ ಭದ್ರತಾ ಒಪ್ಪಂದಕ್ಕೆ ಸಹಿ ಹಾಕಿದ್ದರು. ಈ ಒಪ್ಪಂದಕ್ಕೆ ನೆದರ್ಲ್ಯಾಂಡ್ಸ್ ಬಲಪಂಥೀಯ ನಾಯಕ, ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಗೀರ್ಟ್ ವಿಲ್ಡರ್ಸ್ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಎಲ್ಲ ಅಡಚಣೆಗಳನ್ನು ಲೆಕ್ಕಿಸದೆ ರುಟ್ಟೆ ಒಪ್ಪಂದಕ್ಕೆ ಸಹಿ ಹಾಕಿದ್ದರು. ರುಟ್ಟೆ ಯುನೈಟೆಡ್ ಕಿಂಗ್‌ಡಮ್ ಮತ್ತು ಅಮೆರಿಕಾದ ವಿವಿಧ ನಾಯಕರೊಡನೆಯೂ ಪ್ರಬಲ ಸಂಪರ್ಕ ಹೊಂದಿದ್ದಾರೆ.
ಈ ಬಾರಿ ಅಮೆರಿಕಾದ ಅಧ್ಯಕ್ಷೀಯ ಚುನಾವಣೆಗೆ ಮರಳಿ ಸ್ಪರ್ಧಿಸುತ್ತಿರುವ ಡೊನಾಲ್ಡ್ ಟ್ರಂಪ್ ಅವರೊಡನೆ ರುಟ್ಟೆ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ ಎಂದು ಜನರು ಅಭಿಪ್ರಾಯ ಪಡುತ್ತಾರೆ. ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ನಿಭಾಯಿಸುವ ಕೌಶಲವನ್ನು ಹೊಂದಿದ್ದರಿಂದ ರುಟ್ಟೆ 'ಟ್ರಂಪ್ ವಿಸ್ಪರರ್' ಎಂಬ ಹೆಸರು ಪಡೆದಿದ್ದರು. 2018ರ ನ್ಯಾಟೋ ಸಮಾವೇಶದಲ್ಲಿ ಟ್ರಂಪ್ ಅವರನ್ನು ರಕ್ಷಣಾ ವೆಚ್ಚದ ಕುರಿತು ಒಪ್ಪಿಗೆ ಸೂಚಿಸುವಂತೆ ಮಾಡಿ, ನ್ಯಾಟೋ ಸಮಾವೇಶವನ್ನು ಉಳಿಸಿದ್ದು ರುಟ್ಟೆ ಎಂದು ಅಪಾರ ಶ್ಲಾಘನೆ ವ್ಯಕ್ತವಾಗಿತ್ತು. ಓವಲ್ ಆಫೀಸ್‌ನಲ್ಲಿ ಅಧ್ಯಕ್ಷರೊಡನೆ ನೇರವಾಗಿಯೇ ಅಭಿಪ್ರಾಯ ಭೇದ ವ್ಯಕ್ತಪಡಿಸುವ ಮೂಲಕ ರುಟ್ಟೆ ಡಚ್ಚರ ನೇರ ನಡೆ - ನುಡಿಯನ್ನು ಪ್ರದರ್ಶಿಸಿದ್ದರು.
ಅಂದು ಸಾಕಷ್ಟು ವೈರಲ್ ಆಗಿದ್ದ ಮಾತುಕತೆಯಲ್ಲಿ, ಟ್ರಂಪ್ ಅವರು ಅಮೆರಿಕಾ ಮತ್ತು ಯುರೋಪಿಯನ್ ಒಕ್ಕೂಟ ಒಂದು ವ್ಯಾಪಾರ ಒಪ್ಪಂದಕ್ಕೆ ಬರಲು ಸಾಧ್ಯವಾಗದಿದ್ದರೂ ಅದು ಧನಾತ್ಮಕ ಬೆಳವಣಿಗೆ ಎಂದಿದ್ದರೆ. ಆದರೆ ಅತಿಥಿಯಾಗಿ ತೆರಳಿದ್ದ ರುಟ್ಟೆ ನಗುತ್ತಾ ಪ್ರತಿಕ್ರಿಯಿಸಿ, "ಇಲ್ಲ, ಅದು ಧನಾತ್ಮಕ ಬೆಳವಣಿಗೆಯಾಗಲು ಸಾಧ್ಯವಿಲ್ಲ. ಈ ಒಪ್ಪಂದ ಏರ್ಪಡುವ ರೀತಿಯಲ್ಲಿ ಏನಾದರೂ ಪ್ರಯತ್ನ ನಡೆಸಬೇಕು" ಎಂದು ಸ್ಪಷ್ಟವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈಗ ಟ್ರಂಪ್ ಮರಳಿ ಅಮೆರಿಕಾದ ಅಧ್ಯಕ್ಷ ಸ್ಥಾನಕ್ಕೆ ಬರುವ ಸಾಧ್ಯತೆ ನ್ಯಾಟೋ ನಾಯಕರಿಗೆ ಗಾಬರಿ ಮೂಡಿಸಿರುವ ಸಂದರ್ಭದಲ್ಲಿ, ಟ್ರಂಪ್ ಜೊತೆಗೆ ಇಂತಹ ಹಿನ್ನೆಲೆ ಹೊಂದಿರುವ ರುಟ್ಟೆ ನ್ಯಾಟೋ ಅಧಿಕಾರ ವಹಿಸುವುವುದು ಪ್ರಮುಖ ಬೆಳವಣಿಗೆಯಾಗಲಿದೆ. ಒಂದು ವೇಳೆ ನ್ಯಾಟೋ ಸದಸ್ಯರ ಮೇಲೆ ಆಕ್ರಮಣವಾದರೆ, ಅಮೆರಿಕಾ ಅವರ ಬೆಂಬಲಕ್ಕೆ ಬರಲಿದೆಯೇ ಎಂದು ಟ್ರಂಪ್ ಅವರು ಹಿಂದೆಯೇ ಪ್ರಶ್ನಿಸಿದ್ದರು.
ಕಳೆದ ವರ್ಷ ನಡೆದ ಮ್ಯೂನಿಚ್ ಭದ್ರತಾ ಸಮಾವೇಶದಲ್ಲಿ ಭಾಗಿಯಾಗಿದ್ದ ನಾಯಕರಿಗೆ ರುಟ್ಟೆ ಟ್ರಂಪ್ ಕುರಿತು ದೂರು ಹೇಳುವುದನ್ನು ನಿಲ್ಲಿಸಿ ಎಂದು ಸಲಹೆ ನೀಡಿದ್ದರು. ಅದರ ಬದಲು, ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಯಾರೇ ಗೆದ್ದರೂ, ನೀವು ರಕ್ಷಣೆ ಮತ್ತು ಆಯುಧ ಉತ್ಪಾದನೆಗೆ ಹೆಚ್ಚಿನ ಹಣ ಖರ್ಚು ಮಾಡಲು ಗಮನ ಹರಿಸಿ ಎಂದು ರುಟ್ಟೆ ಕಿವಿಮಾತು ಹೇಳಿದ್ದರು.
ಉಕ್ರೇನ್ ಅಧ್ಯಕ್ಷ ಜೆಲೆನ್ಸ್‌ಕಿ ಒಂದು ಸ್ಪಷ್ಟವಾದ ಗುರಿ ಹೊಂದಿದ್ದಾರೆ ಎಂದು ರುಟ್ಟೆ ನಂಬಿದ್ದು, ಜೆಲೆನ್ಸ್‌ಕಿ ಅವರ ಮನಸ್ಥಿತಿಯ ಕಾರಣದಿಂದಲೇ ಉಕ್ರೇನ್ ಮುಂದಕ್ಕೆ ಹೆಜ್ಜೆ ಇಡುತ್ತಿದೆ ಎಂದು ಅವರು ಭಾವಿಸಿದ್ದರು. ಜೂನ್ 26ರಂದು, ರುಟ್ಟೆ ನ್ಯಾಟೋ ನೂತನ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಗೊಂಡ ಬಳಿಕ, ಕೀವ್ ಅವರಿಗೆ ಅಭಿನಂದನೆ ಸಲ್ಲಿಸಿತ್ತು. ಆದರೆ ರಷ್ಯನ್ ಸೇನೆ ಈ ವೇಳೆಗಾಗಲೇ ಪೂರ್ವ ಉಕ್ರೇನ್‌ನಲ್ಲಿ ಸ್ಥಿರ ಪ್ರಗತಿ ಸಾಧಿಸುತ್ತಿದೆ ಎನ್ನುತ್ತಿವೆ ವರದಿಗಳು.
ಪುಟಿನ್ ಅವರಿಂದ ಎದುರಾಗಬಹುದಾದ ಅಪಾಯಗಳ ಕುರಿತು ಎಚ್ಚರಿಕೆ ನೀಡುತ್ತಲೇ, ರಷ್ಯಾ ಅಧ್ಯಕ್ಷ ಪುಟಿನ್ ಜಗತ್ತಿನ ಮುಂದೆ ಕಾಣುವಷ್ಟು ಶಕ್ತಿಶಾಲಿಯಲ್ಲ ಎಂದೂ ರುಟ್ಟೆ ಹೇಳಿದ್ದಾರೆ. ರುಟ್ಟೆ ಅವರ ನೇಮಕಕ್ಕೆ ಪ್ರತಿಕ್ರಿಯೆ ನೀಡಿರುವ ರಷ್ಯಾ, ರುಟ್ಟೆ ಅವರ ನೂತನ ಪಾತ್ರದಿಂದ ರಷ್ಯಾದ ನಡೆಯಲ್ಲಿ ಯಾವುದೇ ಬದಲಾವಣೆ ಉಂಟಾಗುವುದಿಲ್ಲ ಮತ್ತು ನ್ಯಾಟೋ ಇಂದಿಗೂ ರಷ್ಯಾದ ಶತ್ರುವೇ ಆಗಿದೆ ಎಂದಿದೆ.
- ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
Advertisement