ಇಸ್ರೇಲ್ vs ಇರಾನ್
ಇಸ್ರೇಲ್ vs ಇರಾನ್

ಇಸ್ರೇಲ್ vs ಇರಾನ್: ಉದ್ವಿಗ್ನತೆಗಳ ನಡುವೆಯೇ ವಾಗ್ಯುದ್ಧ

ಇಸ್ರೇಲ್ ಮತ್ತು ಇರಾನ್ ನಡುವಿನ ಇತ್ತೀಚಿನ ವಾಗ್ಯುದ್ಧ ಡಿಸೆಂಬರ್ 2020ರಲ್ಲಿ ಇರಾನಿನ ಪರಮಾಣು ವಿಜ್ಞಾನಿ, ಮೊಹ್ಸೆನ್ ಫಕ್ರಿಜಾದೇಹ್ ಹತ್ಯೆಯ ಬಳಿಕ ನಡೆದ ಮಾತಿನ ಚಕಮಕಿಯನ್ನು ಹೋಲುತ್ತಿದೆ.

ಬರಹ: ಗಿರೀಶ್ ಲಿಂಗಣ್ಣ
ಲೇಖಕರು, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಇರಾನ್ ಮತ್ತು ಇಸ್ರೇಲ್‌ಗಳ ನಡುವೆ ಹೊಸದಾದ ಉದ್ವಿಗ್ನತೆಗಳು ತಲೆದೋರಿವೆ. ಟ್ವಿಟರ್ ಮೂಲಕ ಹೇಳಿಕೆ ನೀಡಿರುವ ಇರಾನಿನ ಸರ್ವೋಚ್ಚ ನಾಯಕ, ಅಯಾತೊಲ್ಲಾ ಅಲಿ ಖಮೇನಿ ಅವರು, ಸಿರಿಯಾದ ರಾಜಧಾನಿ ಮತ್ತು ಐತಿಹಾಸಿಕವಾಗಿ ನಿರಂತರವಾಗಿ ಜನಜೀವನ ಹೊಂದಿದ್ದ ಡಮಾಸ್ಕಸ್ ನಗರದಲ್ಲಿನ ಇರಾನ್ ರಾಯಭಾರ ಕಚೇರಿಯ ಬಳಿ ಇಸ್ರೇಲ್ ದಾಳಿ ನಡೆಸಿದ್ದು, ಈ ದಾಳಿ ಇರಾನ್ ವಿರುದ್ಧ ದಾಳಿ ನಡೆಸಿದ್ದಕ್ಕೆ ಸಮ ಎಂದಿದ್ದಾರೆ. ಇಂತಹ ದಾಳಿಗೆ ಪ್ರತಿಯಾಗಿ, ಇಸ್ರೇಲ್ ಸೂಕ್ತ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಖಮೇನಿ ಎಚ್ಚರಿಕೆ ನೀಡಿದ್ದಾರೆ.

ಎಪ್ರಿಲ್ 1, 2024ರಂದು, ಇಸ್ರೇಲ್ ನಡೆಸಿದ ವಾಯು ದಾಳಿ, ಸಿರಿಯಾ ರಾಜಧಾನಿ ಡಮಾಸ್ಕಸ್‌ನಲ್ಲಿರುವ ಇರಾನಿಯನ್ ರಾಯಭಾರ ಕಚೇರಿಯ ಪಕ್ಕದಲ್ಲಿನ ಕಟ್ಟಡಕ್ಕೆ ಅಪ್ಪಳಿಸಿತು. ಇದರ ಪರಿಣಾಮವಾಗಿ, ಕಮಾಂಡರ್ ಜ಼ಾಹೆದಿ ಮತ್ತು ಇತರ ಐದರಿಂದ ಏಳು ಜನರು ಸಾವಿಗೀಡಾಗಿದ್ದರು. ದಾಳಿಯ ಗುರಿಯಾಗಿದ್ದ ಕಟ್ಟಡ ರಾಯಭಾರ ಸಂಕೀರ್ಣವಾಗಿತ್ತು. ಸಿರಿಯಾದಲ್ಲಿನ ಇರಾನ್ ರಾಯಭಾರಿ, ಹೊಸೇನ್ ಅಕ್ಬರಿ ಅವರು ಸಾವಿನ ಸಂಖ್ಯೆಯನ್ನು ಖಚಿತಪಡಿಸಿದ್ದಾರೆ.

ಇರಾನ್ ಈ ದಾಳಿಯನ್ನು ಖಚಿತಪಡಿಸಿದ ಕೆಲವು ಗಂಟೆಗಳ ಬಳಿಕ, ಇಸ್ರೇಲಿನ ವಿದೇಶಾಂಗ ಸಚಿವರಾದ ಇಸ್ರೇಲ್ ಕಟ್ಜ಼್ ಅವರು ಟ್ವಿಟರ್‌ನಲ್ಲಿ ಪರ್ಷಿಯನ್ ಭಾಷೆಯ ಮೂಲಕ ಸ್ಪಷ್ಟ ಸಂದೇಶವೊಂದನ್ನು ರವಾನಿಸಿದ್ದರು: ಒಂದು ವೇಳೆ, ಇರಾನ್ ಏನಾದರೂ ಇಸ್ರೇಲ್ ನೆಲದ ಮೇಲೆ ದಾಳಿ ನಡೆಸಿದರೆ, ಇಸ್ರೇಲ್ ಇರಾನಿನ ನೆಲದ ಮೇಲೆ ತೀವ್ರ ಪ್ರತಿದಾಳಿ ನಡೆಸುತ್ತದೆ ಎಂದು ಅವರು ಎಚ್ಚರಿಸಿದ್ದರು. ಅದೇ ದಿನ ಇಸ್ರೇಲ್ ರಕ್ಷಣಾ ಸಚಿವರಾದ ಯೋವ್ ಗ್ಯಾಲಂಟ್ ಅವರೂ ಇದೇ ರೀತಿಯ ಎಚ್ಚರಿಕೆ ನೀಡಿದರಾದರೂ, ಅವರು ತನ್ನ ಹೇಳಿಕೆಯಲ್ಲಿ ನಿರ್ದಿಷ್ಟವಾಗಿ ಇರಾನ್ ಹೆಸರು ಬಳಸಲಿಲ್ಲ.

ಕಳೆದ ಒಂದು ವಾರದ ಅವಧಿಯಲ್ಲಿ, ಒಂದು ವೇಳೆ ತನ್ನ ಮೇಲೆ ಏನಾದರೂ ದಾಳಿ ನಡೆಸಿದರೆ, ತಾನು ತೀವ್ರ ಪ್ರತಿದಾಳಿ ನಡೆಸುವುದಾಗಿ ಇಸ್ರೇಲ್ ಇರಾನ್‌ಗೆ ಎಚ್ಚರಿಕೆ ನೀಡುತ್ತಾ ಬಂದಿದೆ. ಈ ಎಚ್ಚರಿಕೆಗಳನ್ನು ಇಸ್ರೇಲ್ ಅಮೆರಿಕಾ ಜೊತೆಗೂ ಹಂಚಿಕೊಂಡಿದೆ. ಆದರೂ, ಇಸ್ರೇಲ್ - ಇರಾನ್ ಉದ್ವಿಗ್ನ ಪರಿಸ್ಥಿತಿಗೆ ಸಂಬಂಧಿಸಿದಂತೆ, ಎಪ್ರಿಲ್ 10ರ ತನಕವೂ ಅಮೆರಿಕಾ ಬಹಿರಂಗವಾಗಿ ಯಾವುದೇ ಹೇಳಿಕೆ ನೀಡಿರಲಿಲ್ಲ. ಸಾರ್ವಜನಿಕವಾಗಿ ಮೌನವಾಗಿ ಉಳಿದಿದ್ದರೂ, ಅಮೆರಿಕಾ ಈ ಅವಧಿಯಲ್ಲಿ ಇಸ್ರೇಲ್ ಜೊತೆಗಿನ ತನ್ನ ಮಿಲಿಟರಿ ಸಹಯೋಗವನ್ನು ಇನ್ನಷ್ಟು ಭದ್ರಗೊಳಿಸಿತ್ತು.

ಫಕ್ರಿಜಾ಼ದೇಹ್ ಹತ್ಯೆ

ಇಸ್ರೇಲ್ ಮತ್ತು ಇರಾನ್ ನಡುವಿನ ಇತ್ತೀಚಿನ ವಾಗ್ಯುದ್ಧ ಡಿಸೆಂಬರ್ 2020ರಲ್ಲಿ ಇರಾನಿನ ಪರಮಾಣು ವಿಜ್ಞಾನಿ, ಮೊಹ್ಸೆನ್ ಫಕ್ರಿಜಾದೇಹ್ ಹತ್ಯೆಯ ಬಳಿಕ ನಡೆದ ಮಾತಿನ ಚಕಮಕಿಯನ್ನು ಹೋಲುತ್ತಿದೆ. ಆದರೆ, ಈ ಬಾರಿ ಇರಾನಿನ ಎಲ್ಲ ಪ್ರಮುಖ ನಾಯಕರೂ ಜೊತೆಯಾಗಿ ಇಸ್ರೇಲ್‌ಗೆ ಬೆದರಿಕೆ ಒಡ್ಡತೊಡಗಿದ್ದಾರೆ. ಅದರಲ್ಲೂ ಇರಾನಿನ ಪರಮೋಚ್ಛ ನಾಯಕ ಖಮೇನಿ ಎಚ್ಚರಿಕೆ ನೀಡುವುದೆಂದರೆ, ಕ್ರಮ ಕೈಗೊಳ್ಳುವುದಕ್ಕೆ ಆದೇಶ ನೀಡಿದಂತೆಯೇ ಎಂದು ಪರಿಗಣಿಸಲಾಗುತ್ತದೆ.

ಇರಾನಿನ ಪ್ರಮುಖ ಪರಮಾಣು ವಿಜ್ಞಾನಿಯಾಗಿದ್ದ ಫಕ್ರಿಜಾ಼ದೇಹ್ ಟೆಹರಾನ್ ಬಳಿ ನವೆಂಬರ್ 2020ರಲ್ಲಿ ಹತ್ಯೆಯಾಗಿದ್ದರು. ಅವರು ಚಲಿಸುತ್ತಿದ್ದ ವಾಹನದ ಮೇಲೆ ಶಸ್ತ್ರಸಜ್ಜಿತ ದಾಳಿಕೋರರು ದಾಳಿ ಮಾಡಿ, ಗುಂಡಿನ ಚಕಮಕಿ ನಡೆಸಿದರು. ಆ ವೇಳೆ ಉಂಟಾದ ಗುಂಡಿನ ಗಾಯಗಳಿಂದ ಫಕ್ರಿಜಾ಼ದೇಹ್ ಸಾವಿಗೀಡಾದರು. ಇರಾನ್ ಸಾರ್ವಜನಿಕವಾಗಿಯೇ ಈ ಹತ್ಯೆಯ ಹಿಂದಿನ ಸೂತ್ರಧಾರಿ ಇಸ್ರೇಲ್ ಎಂದು ಆರೋಪಿಸಿತು. ಆದರೆ ಇಸ್ರೇಲ್ ತನ್ನ ಪಾತ್ರ ಇದೆ ಎಂದಾಗಲಿ, ಇಲ್ಲವೆಂದಾಗಲಿ ಯಾವುದೇ ಹೇಳಿಕೆ ನೀಡಲಿಲ್ಲ. ಇಂತಹ ವಿಚಾರಗಳಲ್ಲಿ ಅಸ್ಪಷ್ಟತೆಯನ್ನು ಕಾಯ್ದುಕೊಳ್ಳುವ ತನ್ನ ನೀತಿಯನ್ನು ಇಸ್ರೇಲ್ ಈ ಹತ್ಯೆಯ ವಿಚಾರದಲ್ಲೂ ಮುಂದುವರಿಸಿತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಅಂತಾರಾಷ್ಟ್ರೀಯ ತನಿಖೆಗಳಾಗಲಿ, ಬಂಧನಗಳಾಗಲಿ ನಡೆದ ವರದಿಗಳಿಲ್ಲ.

ಇಸ್ರೇಲ್ vs ಇರಾನ್
ಇಸ್ರೇಲ್, ಇರಾನ್ ಗೆ ಪ್ರಯಾಣಿಸದಂತೆ ಭಾರತೀಯರಿಗೆ MEA ಸಲಹೆ

ಉತ್ತಮಗೊಂಡ ಇಸ್ರೇಲ್ - ಅಮೆರಿಕಾ ಸಹಕಾರ

ಇಸ್ರೇಲ್‌ನ ಹಿರಿಯ ಭದ್ರತಾ ಅಧಿಕಾರಿಯೊಬ್ಬರ ಪ್ರಕಾರ, ಡಮಾಸ್ಕಸ್ ನಗರದ ಮೇಲೆ ಕಳೆದ ವಾರ ನಡೆದ ದಾಳಿಯಲ್ಲಿ, ಇರಾನಿನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಪಡೆಯ ಉನ್ನತ ಕಮಾಂಡರ್ ಆಗಿದ್ದ ಮೊಹಮ್ಮದ್ ರೇಜಾ಼ ಜಾ಼ಹೆದಿ ಹತ್ಯೆಯಾಗಿದ್ದಾರೆ. ಆತನ ಹತ್ಯೆಯ ಬಳಿಕ, ಅಮೆರಿಕನ್ ಸೇನೆ ಮತ್ತು ಇಸ್ರೇಲಿ ಡಿಫೆನ್ಸ್ ಫೋರ್ಸ್ (ಐಡಿಎಫ್) ನಡುವಿನ ಸಹಯೋಗ ಬಹಳಷ್ಟು ಉತ್ತಮಗೊಂಡಿದೆ. ಈ ವಿನೂತನ ಸಹಯೋಗ, ಸಂಭಾವ್ಯ ಕ್ಷಿಪಣಿ ದಾಳಿಯ ಅಪಾಯಗಳ ಕುರಿತು ಇಸ್ರೇಲ್‌ಗೆ ಮುನ್ನೆಚ್ಚರಿಕೆ ನೀಡಿ, ಸುರಕ್ಷತೆ ಕಾಪಾಡಿಕೊಳ್ಳಲು ನೆರವಾಗುತ್ತದೆ.

ಪರ್ಷಿಯನ್ ಕೊಲ್ಲಿಯ ಬಳಿ ಅಳವಡಿಸಲಾಗಿರುವ ಅಮೆರಿಕಾದ ರೇಡಾರ್ ವ್ಯವಸ್ಥೆ ಸಂಭಾವ್ಯ ದಾಳಿಯ ಸಾಧ್ಯತೆಗಾಗಿ ಇರಾನ್ ಮೇಲಿನ ಮತ್ತು ಸುತ್ತಲಿನ ಆಕಾಶವನ್ನು ಗಮನಿಸುತ್ತಿರುತ್ತದೆ. ಇಸ್ರೇಲ್‌ನಲ್ಲಿ ಸಾಮಾನ್ಯವಾಗಿ ಚರ್ಚೆಗೆ ಒಳಗಾಗದಿದ್ದರೂ, ಅಮೆರಿಕಾ, ಇಸ್ರೇಲ್ ಮತ್ತು ಈ ವಲಯದ ಪ್ರಾದೇಶಿಕ ಸಹಯೋಗಿ ರಾಷ್ಟ್ರಗಳು ರೇಡಾರ್ ವ್ಯವಸ್ಥೆಗಳ ಒಂದು ಜಾಲವನ್ನೇ ಅಳವಡಿಸಿವೆ. ಈ ರೇಡಾರ್ ಜಾಲ ಇರಾನ್ ಕುರಿತಂತೆ ಸಮಗ್ರ ಕಣ್ಗಾವಲು ನಡೆಸುತ್ತದೆ.

ಇರಾನ್ ಕುರಿತಾಗಿ ಏನಾದರೂ ಮಾತನಾಡುವ ಮುನ್ನ ಒಂದು ವಾರದ ತನಕ ಜಾಗರೂಕತೆ ವಹಿಸಿದ್ದ ಅಮೆರಿಕಾ, ಬುಧವಾರದಂದು ಇಸ್ರೇಲ್‌ಗೆ ಭರವಸೆ ನೀಡುವ ಸಂದೇಶ ರವಾನಿಸಿತು. ಇಸ್ರೇಲ್ ಭದ್ರತೆಗೆ ಸಂಬಂಧಿಸಿದಂತೆ, ಅದರಲ್ಲೂ ಇರಾನ್ ಮತ್ತು ಅದರ ಸಹಯೋಗಿಗಳಿಂದ ಸಂಭಾವ್ಯ ಅಪಾಯ ಉಂಟಾಗುವ ಸಂದರ್ಭದಲ್ಲಿ, ಇಸ್ರೇಲ್‌ಗೆ ಅಮೆರಿಕಾದ ಬೆಂಬಲ ಅತ್ಯಂತ ಬಲಯುತವಾಗಿರುತ್ತದೆ (ಐರನ್ ಕ್ಲಾಡ್) ಎಂದು ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಹೇಳಿಕೆ ನೀಡಿದ್ದಾರೆ. ಇಸ್ರೇಲ್ ಭದ್ರತೆಗೆ ಸಂಬಂಧಿಸಿದಂತೆ ತನ್ನ ಬದ್ಧತೆ ಅತ್ಯಂತ ಸ್ಪಷ್ಟವಾಗಿದೆ ಎಂದು ಅಮೆರಿಕಾ ಸಂದೇಶ ರವಾನಿಸಿದೆ.

ಅಮೆರಿಕಾದ ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ಎರಡೂ ಪಕ್ಷಗಳ ಆಡಳಿತ ಅವಧಿಯಲ್ಲೂ ಇಸ್ರೇಲ್ ತನ್ನ ಪ್ರಾದೇಶಿಕ ವೈರಿಗಳಿಗೆ ಹೋಲಿಸಿದರೆ ಹೆಚ್ಚಿನ ಮಿಲಿಟರಿ ಸಾಮರ್ಥ್ಯ ಹೊಂದಿರಬೇಕು ಎಂಬುದನ್ನು ಪ್ರತಿಪಾದಿಸಲಾಗಿದೆ. ಅದರೊಡನೆ, ಇಸ್ರೇಲಿನ ಕ್ಷಿಪಣಿ ರಕ್ಷಣಾ ವ್ಯವಸ್ಥೆಯ ಅಭಿವೃದ್ಧಿಗೆ ಅಮೆರಿಕಾ ಸಾಕಷ್ಟು ಮಹತ್ವದ ಹೂಡಿಕೆ ನಡೆಸಿದೆ.

ಇಸ್ರೇಲ್ vs ಇರಾನ್
ಇಸ್ರೇಲ್ ಮೇಲೆ ದಾಳಿ ನಡೆಸುವ ಸೂಚನೆ ನೀಡಿದ ಇರಾನ್, ಅಮೇರಿಕಾಗೆ ಹಿಂದೆಸರಿಯಲು ಸಲಹೆ

ಐರನ್ ಡೋಮ್ ವ್ಯವಸ್ಥೆ

ಕ್ಷಿಪಣಿ ದಾಳಿಯಿಂದ ರಕ್ಷಣೆಯ ವಿಚಾರದಲ್ಲಿ ಐರನ್ ಡೋಮ್ ವ್ಯವಸ್ಥೆ ಒಂದು ಮಹತ್ವದ ಸಾಧನೆಯಾಗಿದೆ. ಇದೊಂದು ಚಲಿಸುವ ರಕ್ಷಣಾ ವ್ಯವಸ್ಥೆಯಾಗಿದ್ದು, ಇದನ್ನು ದಾಳಿ ನಡೆಸುವ ಕಡಿಮೆ ವ್ಯಾಪ್ತಿಯ ರಾಕೆಟ್‌ಗಳನ್ನು ತಡೆಯಲು ವಿನ್ಯಾಸಗೊಳಿಸಲಾಗಿದೆ. ಐರನ್ ಡೋಮ್ ವ್ಯವಸ್ಥೆ ಕಳೆದ ಹತ್ತು ವರ್ಷಗಳಲ್ಲಿ ಗಾಜಾ ಪಟ್ಟಿಯಿಂದ ನಡೆದ 2,000ಕ್ಕೂ ಹೆಚ್ಚಿನ ರಾಕೆಟ್ ದಾಳಿಗಳನ್ನು ಯಶಸ್ವಿಯಾಗಿ ತಡೆದಿದೆ. ಇತ್ತೀಚೆಗೆ, ಅಮೆರಿಕನ್ ಕಾಂಗ್ರೆಸ್ಸಿನ ನಿರ್ದೇಶನದ ಮೇರೆಗೆ, ಅಮೆರಿಕಾ ಸಹ ಕ್ರೂಸ್ ಕ್ಷಿಪಣಿಗಳ ವಿರುದ್ಧ ತನ್ನ ರಕ್ಷಣಾ ಬಲವನ್ನು ಹೆಚ್ಚಿಸಲು ಎರಡು ಐರನ್ ಡೋಮ್ ವ್ಯವಸ್ಥೆಗಳನ್ನು ಪಡೆದುಕೊಂಡಿತು.

ಇಸ್ರೇಲ್ ಅಮೆರಿಕಾದ ಜೊತೆ ಹಂಚಿಕೊಂಡಿರುವ ಆತಂಕಕಾರಿ ಗುಪ್ತಚರ ಮಾಹಿತಿಗಳನ್ನು ಆಧರಿಸಿ, ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಅವರು ಆಡಿರುವ ಮಾತುಗಳು ಸ್ಪಷ್ಟವಾಗಿ ಇರಾನ್ ಕುರಿತಾಗಿವೆ. ಇಸ್ರೇಲ್ ಆಗಲಿ ಇರಾನ್ ಆಗಲಿ ದೊಡ್ಡ ಪ್ರಮಾಣದ ಯುದ್ಧ ನಡೆಯಬೇಕು ಎಂದು ಉದ್ದೇಶಿಸಿಲ್ಲವಾದರೂ, ಎಲ್ಲಿ ಅವೆರಡರ ನಡುವೆ ಯುದ್ಧ ನಡೆದು ಬಿಡುತ್ತದೋ ಎಂಬ ಆತಂಕ ಬೈಡನ್ ಆಡಳಿತಕ್ಕೆ ಇರುವಂತೆ ಕಂಡುಬರುತ್ತಿದೆ.

ಇಸ್ರೇಲ್ ಪ್ರಸ್ತುತ ಒಂದೆಡೆ ಗಾಜಾ ಪಟ್ಟಿಯಲ್ಲಿ ಚಕಮಕಿಯಲ್ಲಿ ನಿರತವಾಗಿದ್ದು, ಇನ್ನೊಂದೆಡೆ ತನ್ನ ಉತ್ತರದ ಗಡಿಯಲ್ಲಿ ಹೆಜ್ಬೊಲ್ಲಾ ಬಂಡುಕೋರರೊಡನೆ ಸೆಣಸುತ್ತಿದೆ. ಇದೇ ವೇಳೆ ಇರಾನ್ ಯುದ್ಧವನ್ನು ತನ್ನ ಕೊನೆಯ ಆಯ್ಕೆಯಾಗಿ ಪರಿಗಣಿಸಿದ್ದು, ಒಂದು ವೇಳೆ ತನ್ನ ನಾಯಕತ್ವಕ್ಕೆ ಅಪಾಯ ಎದುರಾದರೆ, ಅಥವಾ ತನ್ನ ಪರಮಾಣು ಕಾರ್ಯಕ್ರಮಗಳಿಗೆ ಅಪಾಯ ಉಂಟಾದರೆ ಅದನ್ನು ರಕ್ಷಿಸುವ ಸಲುವಾಗಿ ಮಾತ್ರವೇ ಯುದ್ಧ ಮಾಡಬೇಕೆಂದು ಭಾವಿಸಿದೆ. ನೇರವಾಗಿ ಯುದ್ಧಕ್ಕೆ ಇಳಿಯುವ ಬದಲು, ಇರಾನ್ ತನ್ನ ಯೋಜನೆಗಳನ್ನು ಜಾರಿಗೆ ತರಲು ಹೆಜ್ಬೊಲ್ಲಾದಂತಹ ತನ್ನ ಬೆಂಬಲಿತ ಪಡೆಗಳ ಮೇಲೆ ಅವಲಂಬಿತವಾಗಿದೆ.

ಈ ವರ್ಷದ ಆರಂಭದಲ್ಲಿ, ಇರಾನ್ ತನ್ನ ಜಾಗರೂಕತೆಯ ನಡೆಯಿಂದ ಕೊಂಚ ಹೊರ ನಡೆದು, ಅದರ ಪರಿಣಾಮಗಳನ್ನೂ ಅನುಭವಿಸಿತು. ಕಾಸಿಮ್ ಸೊಲೆಮಾನಿ ಸಮಾಧಿಯ ಮೇಲೆ ಐಸಿಸ್ ದಾಳಿಗೆ ಪ್ರತಿಯಾಗಿ, ಇರಾನ್ ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದ ಮೇಲೆ ದಾಳಿ ನಡೆಸಿತು. ಪಾಕಿಸ್ತಾನ ಇದಕ್ಕೆ ಅತ್ಯಂತ ತೀಕ್ಷ್ಣವಾಗಿ, ಕ್ಷಿಪ್ರವಾಗಿ ಪ್ರತಿಕ್ರಿಯೆ ನೀಡಿ, ಇರಾನ್ ಮೇಲೆ ಪ್ರತಿದಾಳಿ ನಡೆಸಿ, ಗಂಭೀರ ಎಚ್ಚರಿಕೆ ನೀಡಿತು. ಪಾಕಿಸ್ತಾನದ ಅಣ್ವಸ್ತ್ರ ಸಾಮರ್ಥ್ಯದ ಕುರಿತು ಭಯ ಹೊಂದಿದ ಇರಾನ್ ತಕ್ಷಣವೇ ತಣ್ಣಗಾಯಿತು.

ಅಣ್ವಸ್ತ್ರದ ಆಯ್ಕೆ

ಇರಾನ್ ಮುಂದಿರುವ ಇನ್ನೊಂದು ಸಾಧ್ಯತೆ ಎಂದರೆ, ತನ್ನ ಯುರೇನಿಯಂ ಪುಷ್ಟೀಕರಣದ ಪ್ರಯತ್ನಗಳನ್ನು ಇನ್ನಷ್ಟು ವೇಗಗೊಳಿಸಿ, ಅಣ್ವಸ್ತ್ರಗಳನ್ನು ಅಭಿವೃದ್ಧಿ ಪಡಿಸುವೆಡೆಗೆ ಸಾಗುವುದು. ಇತ್ತೀಚೆಗೆ, ಎರಡು ಪ್ರತ್ಯೇಕ ಸಂದರ್ಭಗಳಲ್ಲಿ ಇರಾನಿನ ಅತ್ಯುನ್ನತ ಅಧಿಕಾರಿಗಳು ಅಣ್ವಸ್ತ್ರ ಹೊಂದುವ ಕುರಿತಾಗಿ ಖಮೇನಿಯನ್ನು ಒತ್ತಾಯಿಸಿದ್ದಾರೆ. ಈ ಹಿಂದೆ ಖಮೇನಿ ಅಣ್ವಸ್ತ್ರಗಳನ್ನು ನಿರ್ಮಿಸುವುದು ಇಸ್ಲಾಮಿಗೆ ವಿರುದ್ಧವಾಗಿದ್ದು, ಅಣ್ವಸ್ತ್ರ ನಿರ್ಮಿಸಬಾರದು ಎಂದು ಫತ್ವಾ ಹೊರಡಿಸಿದ್ದರು.

ಇದೆಲ್ಲದರ ಹೊರತಾಗಿಯೂ, ರಂಜಾನ್ ಪ್ರಾರ್ಥನೆಯ ಸಂದರ್ಭದಲ್ಲಿ, ಇರಾನಿನ ಪ್ರಮುಖ ಇಸ್ಲಾಮಿಕ್ ಧರ್ಮಗುರು ಒಬ್ಬರು ಖಮೇನಿ ಅವರ ಬಳಿ ಫತ್ವಾ ಹಿಂಪಡೆದು, ಇರಾನಿನ ಪರಮಾಣು ಸಂಸ್ಥೆಗೆ ಬಾಂಬ್ ತಯಾರಿಸಲು ಆದೇಶ ನೀಡುವಂತೆ ಆಗ್ರಹಿಸಿದ್ದರು. ಈ ಹೇಳಿಕೆ ಒಂದು ರೀತಿ, ಇರಾನಿನ ಓರ್ವ ಮುಖ್ಯ ಧಾರ್ಮಿಕ ಮುಖಂಡ ಇರಾನಿನ ಪರಮೋಚ್ಚ ನಾಯಕನಿಗೆ ಬಹಿರಂಗವಾಗಿ ಸವಾಲು ಹಾಕುವ ರೀತಿ ಕಂಡಿದ್ದರಿಂದ, ಈ ಬೆಳವಣಿಗೆ ಜಗತ್ತಿನ ಗಮನ ಸೆಳೆದಿತ್ತು. ಒಂದು ವೇಳೆ ಖಮೇನಿ ಉದ್ದೇಶಪೂರ್ವಕವಾಗಿ ತಾನೇ ಧಾರ್ಮಿಕ ಮುಖಂಡರ ಬಳಿ ಇಂತಹ ಒತ್ತಡಗಳನ್ನು ಹೇರುವಂತೆ ಆಗ್ರಹಿಸಿ, ಆ ಮೂಲಕ ಅಣ್ವಸ್ತ್ರ ನಿರ್ಮಾಣದ ಮೇಲಿನ ನಿರ್ಬಂಧ ಹಿಂಪಡೆಯಲು ಪ್ರಯತ್ನ ನಡೆಸುತ್ತಿರಬಹುದೇ ಎಂಬ ಅನುಮಾನಗಳೂ ವ್ಯಕ್ತವಾಗಿವೆ.

ಅದಾದ ಒಂದು ವಾರದ ಬಳಿಕ, ಟೆಹರಾನಿನ ಶಹೀದ್ ಬೆಹೆಸ್ತಿ ವಿಶ್ವವಿದ್ಯಾಲಯದ ಮುಖ್ಯಸ್ಥ ಮತ್ತು ಸ್ವತಃ ಪರಮಾಣು ಭೌತಶಾಸ್ತ್ರ ಉಪನ್ಯಾಸಕ ಮಹ್ಮೂದ್ ರೇಜಾ಼ ಅಘಾಮಿರ್ ಇರಾನಿಯನ್ ಟಿವಿಯಲ್ಲಿ ಒಂದು ಸಂವಾದದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಅವರು ಇರಾನ್ ಪರಮೋಚ್ಚ ನಾಯಕ ಖಮೇನಿ ತನ್ನ ಫತ್ವಾವನ್ನು ಹಿಂಪಡೆಯುವ ಸಾಧ್ಯತೆಗಳಿವೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇರಾನ್ ಆಡಳಿತದೊಡನೆ ಆತ್ಮೀಯ ಸಂಬಂಧ ಹೊಂದಿರುವ ಅಘಾಮಿರ್ ಅವರು, ಇರಾನ್ ಬಳಿ ಪ್ರಸ್ತುತ ಇರುವ ಪರಮಾಣು ಕಾರ್ಯಕ್ರಮಕ್ಕೆ ಅನುಗುಣವಾಗಿ, ತನ್ನಲ್ಲಿರುವ ಅತ್ಯುನ್ನತ ಗುಣಮಟ್ಟದ ಪುಷ್ಟೀಕರಿಸಿದ ಯುರೇನಿಯಂ ಅನ್ನು ಸಂಗ್ರಹಿಸಿ ಇಡುವುದಕ್ಕಿಂತಲೂ, ಅದರಿಂದ ಪರಮಾಣು ಬಾಂಬ್‌ಗಳನ್ನು ತಯಾರಿಸುವುದು ಅತ್ಯಂತ ಸುಲಭವಾಗಿದೆ ಎಂದು ವಿವರಿಸಿದ್ದಾರೆ. ಈಗ ಇರಾನ್‌ ಸಂಗ್ರಹದಲ್ಲಿ 150 ಕೆಜಿಯಷ್ಟು 60% ಪುಷ್ಟೀಕರಿಸಿದ ಯುರೇನಿಯಂ ಇದ್ದು, ಇದರಿಂದ ಮೂರು ಪರಮಾಣು ಬಾಂಬ್‌ಗಳನ್ನು ನಿರ್ಮಿಸಲು ಸಾಧ್ಯವಿದೆ.

ಇಸ್ರೇಲ್ ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ನಿರ್ಮಿಸುವ ಸಂಭಾವ್ಯತೆಯ ಕುರಿತು ಸೂಕ್ಷ್ಮವಾಗಿ ಕಣ್ಣಿಟ್ಟಿದೆ. ಒಂದು ವೇಳೆ ಇರಾನ್ ಏನಾದರೂ ಅಣ್ವಸ್ತ್ರ ನಿರ್ಮಿಸಲು ಮುಂದಾದರೆ, ಆಗ ಅಮೆರಿಕಾ ತಾನು ಇದಕ್ಕೆ ವಿರುದ್ಧವಿದ್ದೇನೆ ಎಂಬ ನಿಲುವನ್ನು ಇರಾನ್‌ಗೆ ಸ್ಪಷ್ಟಪಡಿಸಲು ಬಲವಾದ ಮಿಲಿಟರಿ ಪ್ರತಿಕ್ರಿಯೆ ನೀಡುವ ಸಂಭನೀಯತೆಯಿದೆ. ಆದರೆ, ಇದರಲ್ಲೂ ಒಂದು ಅಪಾಯವಿದೆ. ಒಂದು ವೇಳೆ ಖಮೇನಿ ರಹಸ್ಯವಾಗಿ ಪರಮಾಣು ಬಾಂಬ್ ನಿರ್ಮಿಸಲು ಆದೇಶ ನೀಡಿದರೆ, ಅದು ಕೇವಲ ಗುಪ್ತಚರ ವರದಿಗಳಿಂದ ಮಾತ್ರವೇ ತಿಳಿದುಬರಬಹುದು. ಇರಾನ್ ಏನಾದರೂ ಅಣ್ವಸ್ತ್ರ ಸಿಡಿತಲೆ ನಿರ್ಮಾಣವನ್ನು ಪೂರ್ಣಗೊಳಿಸುವ ಹಂತ ತಲುಪಿದರೆ, ಅದು ತನಗೆ ತಿಳಿದುಬರಲಿದೆ ಎಂದು ಇಸ್ರೇಲ್ ಹಿಂದೆಯೇ ಹೇಳಿಕೆ ನೀಡಿತ್ತು. ಆದರೆ, ಅಕ್ಟೋಬರ್ 7ರಂದು ನಡೆದ ತೀವ್ರ ದಾಳಿಯ ಬಳಿಕ, ಇಸ್ರೇಲ್ ಈಗ ಇರಾನ್ ಕುರಿತು ಸೇರಿದಂತೆ, ತನ್ನ ಎಲ್ಲ ಗುಪ್ತಚರ ಮಾಹಿತಿಗಳ ನಂಬಿಕಾರ್ಹತೆಯನ್ನು ಮರಳಿ ಲೆಕ್ಕಾಚಾರ ಹಾಕತೊಡಗಿದೆ.

Related Stories

No stories found.

Advertisement

X
Kannada Prabha
www.kannadaprabha.com