ಸರ್ಕಾರಿ ಉದ್ಯೋಗ ಕೋಟಾಗೆ ಸುಪ್ರೀಂ ಕೋರ್ಟ್ ತಡೆ: ಬಾಂಗ್ಲಾದೇಶಕ್ಕೆ ಹೊಸ ತಿರುವೇ ಅಥವಾ ಹಿಂಸಾಚಾರಕ್ಕೆ ನಾಂದಿಯೇ? (ಜಾಗತಿಕ ಜಗಲಿ)

1971ರಲ್ಲಿ ಬಾಂಗ್ಲಾದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ಹೋರಾಟಗಾರರ ಮಕ್ಕಳಿಗೆ ಸರ್ಕಾರಿ ಉದ್ಯೋಗದಲ್ಲಿ 30% ಮೀಸಲಾತಿ ಒದಗಿಸಲಾಗಿತ್ತು. ಅದನ್ನು ನ್ಯಾಯಾಲಯ ಈಗ 5%ಗೆ ಇಳಿಸಿದೆ.
quota stir in bangladesh (file pic)
ಬಾಂಗ್ಲಾದೇಶದಲ್ಲಿ ಸರ್ಕಾರಿ ನಾಗರಿಕ ಸೇವಾ ಉದ್ಯೋಗ ಕೋಟಾಗೆ ಕೋರ್ಟ್ ತಡೆ (ಸಂಗ್ರಹ ಚಿತ್ರ)
Updated on

ಜುಲೈ 21ರಂದು, ಬಾಂಗ್ಲಾದೇಶದ ಸರ್ವೋಚ್ಚ ನ್ಯಾಯಾಲಯ ನಾಗರಿಕ ಸೇವಾ ಉದ್ಯೋಗಿಗಳ ನೇಮಕಾತಿಗೆ ಸಂಬಂಧಿಸಿದ ವಿವಾದಾತ್ಮಕ ಕಾನೂನುಗಳಲ್ಲಿ ಬದಲಾವಣೆ ತಂದಿತು. ಆದರೆ, ಈ ಬದಲಾವಣೆಗಳು ವಿವಾದಾತ್ಮಕ ಕಾನೂನುಗಳ ವಿರುದ್ಧ ಹೋರಾಟ ನಡೆಸುತ್ತಿದ್ದ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಪೂರ್ಣ ಸಮಾಧಾನ ಮೂಡಿಸಿಲ್ಲ. ಅವರ ಪ್ರತಿಭಟನೆಗಳ ಪರಿಣಾಮವಾಗಿ, ಬಾಂಗ್ಲಾದೇಶದಾದ್ಯಂತ ವ್ಯಾಪಕ ಹಿಂಸಾಚಾರಗಳು ತಲೆದೋರಿ, 151 ಜನರು ಪ್ರಾಣ ಕಳೆದುಕೊಂಡಿದ್ದಾರೆ.

ನಿರ್ದಿಷ್ಟ ಅರ್ಜಿದಾರರಿಗೆ ಸರ್ಕಾರಿ ಉದ್ಯೋಗಗಳಲ್ಲಿ ಅರ್ಧದಷ್ಟು ಮೀಸಲಾತಿ ನೀಡುವುದು ಕಾನೂನುಬದ್ಧವೇ ಎಂಬ ಕುರಿತು ಬಾಂಗ್ಲಾದೇಶದ ಸುಪ್ರೀಂ ಕೋರ್ಟ್ ಮುಂದಿನ ತಿಂಗಳು ತನ್ನ ನಿರ್ಣಯ ನೀಡಬೇಕಿತ್ತು. ಆದರೆ, ದೇಶಾದ್ಯಂತ ಪ್ರತಿಭಟನೆಗಳು ಇನ್ನಷ್ಟು ತೀವ್ರವಾಗುತ್ತಿರುವುದರಿಂದ ನ್ಯಾಯಾಲಯ ತನ್ನ ನಿರ್ಣಯವನ್ನು ಅವಧಿಗೂ ಮುನ್ನವೇ ನೀಡಿತು.

ಉದ್ಯೋಗ ಮೀಸಲಾತಿ ಯೋಜ‌ನೆಯನ್ನು ಮರಳಿ ತರುವ ಕುರಿತು ಈ ಹಿಂದೆ ಕೆಳ ಹಂತದ ನ್ಯಾಯಾಲಯ ನೀಡಿರುವ ಆದೇಶವನ್ನು ಸರ್ವೋಚ್ಚ ನ್ಯಾಯಾಲಯ ಕಾನೂನುಬಾಹಿರ ಎಂದು ಘೋಷಿಸಿದೆ. ಈ ನಿರ್ಧಾರವನ್ನು ಬಾಂಗ್ಲಾದೇಶಿ ಅಟಾರ್ನಿ ಜನರಲ್ ಎ ಎಂ ಅಮೀನ್ ಉದ್ದೀನ್ ಘೋಷಿಸಿದರು.

ನ್ಯಾಯಾಲಯ ತನ್ನ ನಿರ್ಣಯ ಪ್ರಕಟಿಸಿದ ಬಳಿಕ, ಹೋರಾಟ ನಡೆಸುತ್ತಿದ್ದ ವಿದ್ಯಾರ್ಥಿಗಳು ಮರಳಿ ತಮ್ಮ ತರಗತಿಗಳಿಗೆ ಮರಳಬೇಕು ಎಂದು ಸೂಚಿಸಿದೆ ಎಂದು ಈ ಪ್ರಕರಣಕ್ಕೆ ಸಂಬಂಧಿಸಿ ವಾದ ಮಂಡಿಸಿದ್ದ ಶಾ ಮಂಜುರುಲ್ ಹಕ್ ಎಂಬ ವಕೀಲರು ತಿಳಿಸಿದ್ದಾರೆ.

ಸರ್ವೋಚ್ಚ ನ್ಯಾಯಾಲಯದ ತೀರ್ಪು ಉದ್ಯೋಗ ಮೀಸಲಾತಿಯ ಪ್ರಮಾಣವನ್ನು 56%ದಿಂದ 7%ಗೆ ಇಳಿಸಿದೆ. ಆದರೆ ಈ ನಿರ್ಧಾರವೂ ಪ್ರತಿಭಟನಾಕಾರರ ಬೇಡಿಕೆಗಳನ್ನು ಸಮಾಧಾನಪಡಿಸಲು ಸಾಧ್ಯವಾಗಲಿಲ್ಲ.

1971ರಲ್ಲಿ ಬಾಂಗ್ಲಾದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ಹೋರಾಟಗಾರರ ಮಕ್ಕಳಿಗೆ ಸರ್ಕಾರಿ ಉದ್ಯೋಗದಲ್ಲಿ 30% ಮೀಸಲಾತಿ ಒದಗಿಸಲಾಗಿತ್ತು. ಅದನ್ನು ನ್ಯಾಯಾಲಯ ಈಗ 5%ಗೆ ಇಳಿಸಿದೆ. ಇನ್ನು 1% ಉದ್ಯೋಗವನ್ನು ಬುಡಕಟ್ಟು ಸಮುದಾಯಗಳಿಗೂ, 1% ಉದ್ಯೋಗವನ್ನು ದೈಹಿಕ ಊನತೆ ಹೊಂದಿರುವವರಿಗೆ ಮತ್ತು ತೃತೀಯ ಲಿಂಗಿಗಳಿಗೆ ಮೀಸಲಿಡಲಾಗಿದೆ. ಇನ್ನುಳಿದ 93% ಉದ್ಯೋಗಗಳು ಇನ್ನು ಮುಂದೆ ಅರ್ಹತೆಯ ಆಧಾರದಲ್ಲಿ ಲಭ್ಯವಾಗಲಿವೆ.

ಬಾಂಗ್ಲಾದೇಶದ ಬಹಳಷ್ಟು ಯುವ ಪದವೀಧರರು ಉದ್ಯೋಗದಲ್ಲಿ 'ಸ್ವಾತಂತ್ರ್ಯ ಹೋರಾಟಗಾರ' ಕೋಟಾದ ಕುರಿತು ಅಸಮಾಧಾನ ಹೊಂದಿದ್ದಾರೆ. ಈ ಮೀಸಲಾತಿ ಬಾಂಗ್ಲಾದೇಶದ ಪ್ರಧಾನಿ ಶೇಕ್ ಹಸೀನಾ ಅವರ ನೇತೃತ್ವದ ಆಡಳಿತಾರೂಢ ಆವಾಮಿ ಲೀಗ್ ಪಕ್ಷದ ಬೆಂಬಲಿಗರಿಗೆ ಪೂರಕವಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಹಿಂದಿರುವ ಪ್ರಮುಖ ಗುಂಪಾದ 'ಸ್ಟೂಡೆಂಟ್ಸ್ ಎಗೇನ್ಸ್ಟ್ ಡಿಸ್ಕ್ರಿಮಿನೇಶನ್' ವಕ್ತಾರರೊಬ್ಬರು ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ನಾವು ಸ್ವಾಗತಿಸುತ್ತೇವೆ. ಆದರೆ, ಸರ್ಕಾರ ನಮ್ಮ ಬೇಡಿಕೆಗಳನ್ನು ಪೂರೈಸುವ ತನಕ ಪ್ರತಿಭಟನೆ ಮುಂದುವರಿಸುತ್ತೇವೆ ಎಂದಿದ್ದರು.

ಟೀಕಾಕಾರರು ಶೇಕ್ ಹಸೀನಾ ಸರ್ಕಾರ ನ್ಯಾಯಾಂಗದ ಮೇಲೆ ಪ್ರಭಾವ ಬೀರಲು ಪ್ರಯತ್ನ ನಡೆಸುತ್ತಿದೆ ಎಂದು ಆರೋಪಿಸಿದ್ದು, ಪ್ರಧಾನಿ ಶೇಕ್ ಹಸೀನಾ ಅವರು ನ್ಯಾಯಾಲಯದ ತೀರ್ಪು ವಿದ್ಯಾರ್ಥಿಗಳ ಬೇಡಿಕೆಗೆ ಅನುಗುಣವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಬಾಂಗ್ಲಾದೇಶದ ನಾಗರಿಕ ಸೇವಾ ಉದ್ಯೋಗ ಕೋಟಾ ವಿರುದ್ಧ ಹೋರಾಟದ ಹಿನ್ನೆಲೆ

ಬಾಂಗ್ಲಾದೇಶದ ನಾಗರಿಕ ಸೇವಾ ಉದ್ಯೋಗಗಳಲ್ಲಿ ಭಾರೀ ಪ್ರಮಾಣದ ಮೀಸಲಾತಿಯನ್ನು ಈ ವಿವಾದಿತ ಕೋಟಾ ನೀಡುತ್ತಿತ್ತು. ಈ ಮೀಸಲಾತಿಯನ್ನು ಮರಳಿ ತಂದಿದ್ದು ವಿದ್ಯಾರ್ಥಿಗಳಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಆಕ್ರೋಶ ವ್ಯಾಪಕ ಪ್ರತಿಭಟನೆಗೆ ಹಾದಿ ಮಾಡಿಕೊಟ್ಟಿತ್ತು.

ಬಾಂಗ್ಲಾದೇಶದಲ್ಲಿ ಉದ್ಯೋಗ ಕೋಟಾ ವ್ಯವಸ್ಥೆ 1972ರಲ್ಲಿ ಆರಂಭಗೊಂಡಿದ್ದು, ಅಂದಿನಿಂದ ಅದು ಸಾಕಷ್ಟು ಬಾರಿ ಪರಿಷ್ಕರಿಸಲ್ಪಟ್ಟಿದೆ.

ಬಾಂಗ್ಲಾದೇಶದ ನಾಗರಿಕ ಸೇವಾ ಉದ್ಯೋಗಗಳಲ್ಲಿ ಕೋಟಾ ವ್ಯವಸ್ಥೆ

ಅತ್ಯಂತ ಇತ್ತೀಚಿನ ಆವೃತ್ತಿಯಲ್ಲಿ, ಕೋಟಾ ವ್ಯವಸ್ಥೆ ಬಾಂಗ್ಲಾದೇಶದ ನಾಗರಿಕ ಸೇವಾ ಉದ್ಯೋಗಗಳಲ್ಲಿ 56% ಪಾಲು ಹೊಂದಿತ್ತು. ಅತ್ಯಂತ ಮುಖ್ಯವಾಗಿ, 30% ಉದ್ಯೋಗಗಳನ್ನು 1971ರ ಬಾಂಗ್ಲಾ ವಿಮೋಚನಾ ಯುದ್ಧದಲ್ಲಿ ಪಶ್ಚಿಮ ಪಾಕಿಸ್ತಾನದ ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರ ಮಕ್ಕಳು ಮತ್ತು ಮೊಮ್ಮಕ್ಕಳಿಗಾಗಿ ಮೀಸಲಿಡಲಾಗಿತ್ತು.

ಇನ್ನುಳಿದ ಕೋಟಾದಲ್ಲಿ ಮಹಿಳೆಯರಿಗೆ ಉದ್ಯೋಗ ಮೀಸಲಾತಿ (10%), ಹಿಂದುಳಿದ ಜಿಲ್ಲೆಗಳ ಜನರಿಗೆ ಮೀಸಲಾತಿ (10%), ಸ್ಥಳೀಯ ಅಲ್ಪಸಂಖ್ಯಾತ ಗುಂಪುಗಳಿಗೆ ಮೀಸಲಾತಿ (5%) ಮತ್ತು ಅಂಗವೈಕಲ್ಯ ಹೊಂದಿರುವವರಿಗೆ (1%) ಮೀಸಲಾತಿಗಳನ್ನು ಒದಗಿಸಲಾಗಿತ್ತು.

ನಾಗರಿಕ ಸೇವಾ ಉದ್ಯೋಗಿಗಳಿಗೆ ಹೆಚ್ಚಿನ ಉನ್ನತ ಸಾಮಾಜಿಕ ಸ್ಥಾನಮಾನ, ಗೌರವ, ಉತ್ತಮ ಸಂಬಳ, ಉದ್ಯೋಗ ಭದ್ರತೆ, ಮತ್ತು ನಿವೃತ್ತಿ ವೇತನ ಸೌಲಭ್ಯಗಳಿರುವುದರಿಂದ, ಈ ಉದ್ಯೋಗಗಳು ಅತ್ಯಂತ ಜನಪ್ರಿಯವಾಗಿವೆ.

ಆದರೆ, ಬಾಂಗ್ಲಾದೇಶದಲ್ಲಿ ಜಾರಿಯಲ್ಲಿದ್ದ ಕೋಟಾ ವ್ಯವಸ್ಥೆಯ ಪರಿಣಾಮವಾಗಿ, ಲಭ್ಯವಿರುವ ನಾಗರಿಕ ಸೇವಾ ಉದ್ಯೋಗಗಳಲ್ಲಿ ಅರ್ಧಕ್ಕೂ ಹೆಚ್ಚು ವಿವಿಧ ಗುಂಪುಗಳಿಗೆ ಮೀಸಲಾಗಿತ್ತು. ಇದು ಸುದೀರ್ಘ ಸಮಯದಿಂದಲೂ ವಿದ್ಯಾರ್ಥಿಗಳು ಮತ್ತು ಸಮಾಜದ ಕಣ್ಣಿಗೆ ಸಮಸ್ಯಾದಾಯಕವಾಗಿ ಕಾಣುತ್ತಿತ್ತು.

ಕೋಟಾ ವ್ಯವಸ್ಥೆಯ ಸುಧಾರಣೆಗಾಗಿ 2018ರಲ್ಲಿ ವಿದ್ಯಾರ್ಥಿಗಳ ಹೋರಾಟ

2018ರಲ್ಲಿ, ದೇಶಾದ್ಯಂತ ವಿವಿಧ ಸರ್ಕಾರಿ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಕೋಟಾ ವ್ಯವಸ್ಥೆಯಲ್ಲಿ ಸುಧಾರಣೆ ಆಗ್ರಹಿಸಿ ಭಾರೀ ಪ್ರತಿಭಟನೆಗಳನ್ನು ನಡೆಸಿದರು.

56%ದಷ್ಟು ಉದ್ಯೋಗಗಳನ್ನು ವಿವಿಧ ಗುಂಪುಗಳಿಗೆ ಮೀಸಲಾಗಿ ಇಡುವುದರಿಂದ ಆ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವವರು ಸಮರ್ಥರು ಎನ್ನಲು ಸಾಧ್ಯವಿಲ್ಲ. ಇದರಿಂದಾಗಿ ಸಮರ್ಥ ಅಭ್ಯರ್ಥಿಗಳು ತಮ್ಮ ಸಾಮರ್ಥ್ಯಕ್ಕೆ ಲಭಿಸಬೇಕಾದ ನಾಗರಿಕ ಸೇವಾ ಉದ್ಯೋಗಗಳಿಂದ ವಂಚಿತರಾಗುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಪ್ರತಿಭಟಿಸಿದ್ದರು.

ಅದರಲ್ಲೂ ಸ್ವಾತಂತ್ರ್ಯ ಹೋರಾಟಗಾರರ ಮಕ್ಕಳು ಮತ್ತು ಮೊಮ್ಮಕ್ಕಳಿಗಾಗಿ 30% ಉದ್ಯೋಗಗಳನ್ನು ಮೀಸಲಾಗಿಟ್ಟಿದ್ದು ವಿದ್ಯಾರ್ಥಿಗಳ ಕೆಂಗಣ್ಣಿಗೆ ಗುರಿಯಾಗಿತ್ತು.

ಆವಾಮಿ ಲೀಗ್ ಪಕ್ಷದ ರಾಜಕೀಯ ಕಾರ್ಯತಂತ್ರ

ಬಾಂಗ್ಲಾದೇಶದ ಆಡಳಿತಾರೂಢ ಪಕ್ಷವಾದ ಆವಾಮಿ ಲೀಗ್ ಕಳೆದ ಹದಿನೈದು ವರ್ಷಗಳಿಂದ ನಿರಂತರವಾಗಿ ಅಧಿಕಾರದಲ್ಲಿದೆ. ಆವಾಮಿ ಲೀಗ್ ಪಕ್ಷ ತಾನು ಬಾಂಗ್ಲಾ ವಿಮೋಚನಾ ಯುದ್ಧದ ನೈಜ ಮೌಲ್ಯಗಳನ್ನು ಪ್ರತಿಪಾದಿಸುತ್ತೇನೆ ಎಂದಿದ್ದು, ಆವಾಮಿ ಲೀಗ್ ಸ್ವತಂತ್ರ ಬಾಂಗ್ಲಾದೇಶದ ಸಾರ ಎಂದು ಹೇಳಿಕೊಂಡಿದೆ.

ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಾರ್ಟಿ ಸೇರಿದಂತೆ, ಇತರ ವಿರೋಧ ಪಕ್ಷಗಳು ವಿಮೋಚನಾ ಯುದ್ಧದ ಮೌಲ್ಯಗಳಿಗೂ ವಿರೋಧಿಗಳು ಎಂಬ ಭಾವನೆಯ ಮೇಲೆ ಆವಾಮಿ ಲೀಗ್‌ನ ರಾಜಕೀಯ ನಿಲುವು ರೂಪಿತವಾಗಿದೆ. ಇತರ ಪಕ್ಷಗಳು ಬಾಂಗ್ಲಾದೇಶ್ ಜಮಾತ್-ಎ-ಇಸ್ಲಾಮಿ ಎಂಬ ಮೂಲಭೂತವಾದಿ ಧಾರ್ಮಿಕ ಪಕ್ಷದೊಡನೆ ಸಂಬಂಧ ಹೊಂದಿರುವುದರಿಂದ ಆವಾಮಿ ಲೀಗ್ ಈ ನಿಲುವು ತಳೆದಿದೆ. ಜಮಾತ್-ಎ-ಇಸ್ಲಾಮಿ ನಾಯಕರು 1971ರ ಬಾಂಗ್ಲಾದೇಶದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಪಾಕಿಸ್ತಾನಿ ಸೇನೆಯೊಡನೆ ಕೈಜೋಡಿಸಿ, ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧ ಯುದ್ಧಾಪರಾಧಗಳನ್ನು ನಡೆಸಿದ ಆರೋಪಗಳಿವೆ.

ಇದೆಲ್ಲದರ ಪರಿಣಾಮವಾಗಿ, ಆವಾಮಿ ಲೀಗ್ ಸ್ವಾತಂತ್ರ್ಯ ಹೋರಾಟಗಾರರ ಕೋಟಾವನ್ನು ಉಳಿಸಿಕೊಂಡು, ತನ್ನ ರಾಜಕೀಯ ಸ್ಥಾನವನ್ನು ಇನ್ನಷ್ಟು ಭದ್ರಪಡಿಸುವ ಗುರಿ ಹೊಂದಿದೆ.

2018ರ ಪ್ರತಿಭಟನೆಗಳಿಗೆ ಸರ್ಕಾರದ ಪ್ರತಿಕ್ರಿಯೆ

2018ರ ಪ್ರತಿಭಟನೆಗಳ ಬಿಸಿ ಅದೆಷ್ಟು ತೀವ್ರವಾಗಿತ್ತೆಂದರೆ, ಸರ್ಕಾರ ನಾಗರಿಕ ಸೇವಾ ಉದ್ಯೋಗಗಳಲ್ಲಿ ಮೀಸಲಾತಿಯನ್ನು ರದ್ದುಪಡಿಸುವುದು ಅನಿವಾರ್ಯವಾಗಿತ್ತು. ಸರ್ಕಾರ ಮೀಸಲಾತಿಯನ್ನು ಹಿಂಪಡೆದ ಬಳಿಕ, ಪ್ರತಿಭಟನಾಕಾರರು ತಮ್ಮ ಹೋರಾಟವನ್ನು ನಿಲ್ಲಿಸಿ, ನಾವು ನಮ್ಮ ಗುರಿ ಸಾಧಿಸಿದೆವು ಎಂದು ಸಮಾಧಾನಗೊಂಡಿದ್ದರು.

2024ರಲ್ಲಿ ಕೋಟಾ ವ್ಯವಸ್ಥೆಯ ಮರುಸ್ಥಾಪನೆ

ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಸ್ಥರೊಬ್ಬರು ದೂರು ಸಲ್ಲಿಸಿದ ಬಳಿಕ, ಜೂನ್ 5, 2024ರಂದು, ಬಾಂಗ್ಲಾದೇಶದ ಹೈಕೋರ್ಟ್ ಕೋಟಾ ವ್ಯವಸ್ಥೆಯನ್ನು ಮರಳಿ ಸ್ಥಾಪಿಸಿತು. ನ್ಯಾಯಾಲಯ ಕೋಟಾ ವ್ಯವಸ್ಥೆಯ ರದ್ದತಿಯನ್ನು 'ಅಸಂವಿಧಾನಿಕ, ಅಕ್ರಮ ಮತ್ತು ಪರಿಣಾಮರಹಿತ' ಎಂದು ಕರೆದಿತ್ತು. ನ್ಯಾಯಾಲಯದ ನಿರ್ಣಯದಿಂದಾಗಿ, ಸರ್ಕಾರ ತನ್ನ ವಿರುದ್ಧ ಯಾವ ಹೋರಾಟವೂ ನಡೆದೇ ಇಲ್ಲವೇನೋ ಎಂಬಂತೆ ಕೋಟಾ ವ್ಯವಸ್ಥೆ ಮರಳಿ ಜಾರಿಗೆ ಬಂದಿತ್ತು!

ಈ ಬದಲಾವಣೆ ಬಾಂಗ್ಲಾದೇಶದ ವಿದ್ಯಾರ್ಥಿಗಳಲ್ಲಿ, ಮತ್ತೆ ಅಸಮಾಧಾನ ಹೊಗೆಯಾಡುವಂತೆ ಮಾಡಿತು. ಅವರು ಮತ್ತೊಮ್ಮೆ ದೇಶಾದ್ಯಂತ ಬೀದಿಗಿಳಿದು, ಕೋಟಾ ವ್ಯವಸ್ಥೆಯ ಜಾರಿಯ ವಿರುದ್ಧ ಹೋರಾಟ ನಡೆಸತೊಡಗಿದರು. ಕೋಟಾ ವ್ಯವಸ್ಥೆಯ ಕುರಿತು 2018ರಲ್ಲೇ ನಿರ್ಣಯ ಕೈಗೊಳ್ಳಲಾಗಿದೆ ಎಂದು ಅವರು ಪ್ರತಿಪಾದಿಸಿದ್ದರು.

ಬಾಂಗ್ಲಾದೇಶದ ಅತ್ಯುನ್ನತ ಮತ್ತು ಐತಿಹಾಸಿಕ ವಿಶ್ವವಿದ್ಯಾಲಯ ಎಂದು ಪರಿಗಣಿಸಲಾಗಿರುವ ಢಾಕಾ ವಿಶ್ವವಿದ್ಯಾಲಯದಲ್ಲಿ ಪ್ರತಿಭಟನೆಗಳು ಆರಂಭಗೊಂಡವು. ಕೆಲ ಸಮಯದಲ್ಲೇ ಇತರ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳೂ ಪ್ರತಿಭಟನೆಗೆ ಜೊತೆಯಾದರು. ಕಳೆದ ಆರು ವರ್ಷಗಳ ಅವಧಿಯಲ್ಲಿ ಎರಡನೇ ಬಾರಿಗೆ ಕೋಟಾ ವಿರೋಧಿ ಪ್ರತಿಭಟನೆಗಳು ರಾಷ್ಟ್ರಾದ್ಯಂತ ಚಳುವಳಿಯಾಗಿ ರೂಪುಗೊಂಡವು.

ಪ್ರತಿಭಟನೆಗಳನ್ನು ಲೆಕ್ಕಿಸದ ಆಡಳಿತ ಪಕ್ಷ

ಆರಂಭದಲ್ಲಿ, ಆಡಳಿತಾರೂಢ ಆವಾಮಿ ಲೀಗ್ ರಾಜಕಾರಣಿಗಳು ಮತ್ತು ಬಾಂಗ್ಲಾದೇಶ ಸರ್ಕಾರ ಪ್ರತಿಭಟನೆಗಳನ್ನು ಲೆಕ್ಕಿಸದೆ ಮುಂದುವರಿದವು. ಈ ಬಾರಿ ಕೋಟಾ ವ್ಯವಸ್ಥೆಯನ್ನು ನ್ಯಾಯಾಲಯವೇ ಮರಳಿ ಜಾರಿಗೆ ತಂದಿದ್ದು, ಅದಕ್ಕೆ ಪಕ್ಷ ಮತ್ತು ಸರ್ಕಾರ ಜವಾಬ್ದಾರವಲ್ಲ ಎಂದು ಅವರು ಸಬೂಬು ನೀಡತೊಡಗಿದರು.

ಒಂದಷ್ಟು ರಾಜಕಾರಣಿಗಳು, ಆಗಸ್ಟ್ 7ರಂದು ನಡೆಯಬೇಕಿದ್ದ ನ್ಯಾಯಾಲಯದ ವಿಚಾರಣೆಯ ತನಕ ಪ್ರತಿಭಟನಾಕಾರರು ಕಾಯಬೇಕು ಎಂದು ಕರೆ ನೀಡಿದ್ದರು. ಆದರೆ ಪ್ರತಿಭಟನಾಕಾರರು ಕಾದು ನೋಡುವಷ್ಟು ತಾಳ್ಮೆ ಹೊಂದಿರಲಿಲ್ಲ. ಅವರು ಪ್ರಧಾನಿ ಶೇಕ್ ಹಸೀನಾ ಈ ಕುರಿತು ಭರವಸೆ ನೀಡಬೇಕು, ತುರ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸತೊಡಗಿದರು.

ಪ್ರಧಾನಿ ಶೇಕ್ ಹಸೀನಾ ಅವರ ವಿವಾದಾತ್ಮಕ ಹೇಳಿಕೆಗಳು

ಕೋಟಾ ವ್ಯವಸ್ಥೆಯ ಸುಧಾರಣೆಗಾಗಿ ಹೋರಾಟ ನಡೆಸುತ್ತಿದ್ದ ಪ್ರತಿಭಟನಾಕಾರರನ್ನು ಕುರಿತು ಪ್ರಧಾನಿ ಶೇಕ್ ಹಸೀನಾ ಅವರು ಜುಲೈ 14ರಂದು ಪತ್ರಕರ್ತರೊಬ್ಬರೊಡನೆ ಮಾತನಾಡುವ ಸಂದರ್ಭದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದರ ಪರಿಣಾಮವಾಗಿ, ದೇಶಾದ್ಯಂತ ಉದ್ವಿಗ್ನತೆ ಹೆಚ್ಚಾಗತೊಡಗಿತು. "ಪ್ರತಿಭಟನಾಕಾರರು ಯಾಕೆ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಇಷ್ಟೊಂದು ದ್ವೇಷದ ಭಾವನೆ ಹೊಂದಿದ್ದಾರೆ? ಸ್ವಾತಂತ್ರ್ಯ ಹೋರಾಟಗಾರರ ಮಕ್ಕಳು ಮೊಮ್ಮಕ್ಕಳಿಗೆ ಕೋಟಾ ವ್ಯವಸ್ಥೆಯ ಪ್ರಯೋಜನ ಲಭಿಸದಿದ್ದರೆ, ಇನ್ನು ರಜಾಕಾರರ ಮಕ್ಕಳು ಮೊಮ್ಮಕ್ಕಳಿಗೆ ಕೋಟಾ ಮೀಸಲಾತಿ ನೀಡಬೇಕೇ?" ಎಂದು ಶೇಕ್ ಹಸೀನಾ ಕಟುವಾಗಿ ಮಾತನಾಡಿದ್ದರು.

ಬಾಂಗ್ಲಾದಲ್ಲಿ ರಜಾಕರ್ ಎಂದರೆ ಸಿಟ್ಟೇಕೆ?
ರಜಾಕಾರರು 1971ರ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಪಾಕಿಸ್ತಾನಿ ಸೇನೆಗೆ ಬೆಂಬಲ ನೀಡಿದ್ದ ಸ್ಥಳೀಯರಾಗಿದ್ದರು. ಅವರು ಸ್ವಾತಂತ್ರ್ಯ ಹೋರಾಟಗಾರರು ಮತ್ತು ನಾಗರಿಕರ ವಿರುದ್ಧ ದೌರ್ಜನ್ಯ ನಡೆಸಿದ್ದು, ಬಾಂಗ್ಲಾದೇಶದ ಇತಿಹಾಸದಲ್ಲಿ ರಜಾಕಾರರು ವಿವಾದಾತ್ಮಕ ವಿಚಾರವಾಗಿದ್ದಾರೆ.

ವಿದ್ಯಾರ್ಥಿಗಳ ಆಕ್ರೋಶದ ಬೆಂಕಿಗೆ ತುಪ್ಪ ಸುರಿದ ರಜಾಕಾರ್ ಹೇಳಿಕೆ

ಶೇಕ್ ಹಸೀನಾ ಅವರ ಈ ಹೇಳಿಕೆಯ ಬಳಿಕ, ಢಾಕಾ ವಿಶ್ವವಿದ್ಯಾಲಯದ ಸಾವಿರಾರು ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟಿಸತೊಡಗಿದರು. ಅವರು 'ನಾನು ಯಾರು? ನೀನು ಯಾರು? ರಜಾಕಾರ್, ರಜಾಕಾರ್. ಹಾಗೆಂದು ಹೇಳಿದವರು ಯಾರು? ನಿರಂಕುಶ ಪ್ರಭುತ್ವ, ನಿರಂಕುಶ ಪ್ರಭುತ್ವ' ಎಂಬರ್ಥದ ಘೋಷಣೆಗಳನ್ನು ಮೊಳಗಿಸಿದರು.

ಬಾಂಗ್ಲಾದೇಶದ ಇತಿಹಾಸದಲ್ಲಿ ರಜಾಕಾರರನ್ನು ಅತ್ಯಂತ ಕೆಟ್ಟ ದೇಶದ್ರೋಹಿಗಳು ಎಂದೇ ಬಿಂಬಿಸಲಾಗಿದೆ. ಆದ್ದರಿಂದ, ಯಾವುದೇ ಬಾಂಗ್ಲಾದೇಶಿಗೆ ಆತನನ್ನು ರಜಾಕಾರ ಎಂದರೆ ಅತಿಯಾದ ಕೋಪ ಬರುವುದು ಸಜಜ. ಹೀಗಿರುವಾಗ, ಪ್ರಧಾನಿ ಶೇಕ್ ಹಸೀನಾ ಹೇಳಿಕೆ ವಿದ್ಯಾರ್ಥಿಗಳಲ್ಲಿ ಕೋಪ ಉಕ್ಕಿಸಿದ್ದರಲ್ಲೇನೂ ಆಶ್ಚರ್ಯವಿರಲಿಲ್ಲ.

ವಿದ್ಯಾರ್ಥಿಗಳ ಪ್ರತಿಭಟನೆಯನ್ನು ತಪ್ಪಾಗಿ ಅರ್ಥೈಸಿಕೊಂಡ ಸರ್ಕಾರ

ವಿದ್ಯಾರ್ಥಿಗಳು ತಮ್ಮ ಪ್ರತಿಭಟನಾ ಘೋಷಣೆಯನ್ನು ಮೊಳಗಿಸಿದ ಬಳಿಕ, ಸರ್ಕಾರ ಮತ್ತು ಒಂದಷ್ಟು ಮಾಧ್ಯಮ ಸಂಸ್ಥೆಗಳು ವಿದ್ಯಾರ್ಥಿಗಳ ಮಾತನ್ನು ತಿರುಚಿದ್ದರು. ಅವುಗಳು ವಿದ್ಯಾರ್ಥಿಗಳ ಘೋಷಣೆಯ ಮೊದಲ ಭಾಗವನ್ನು ಮಾತ್ರವೇ ಪರಿಗಣಿಸಿ, ವಿದ್ಯಾರ್ಥಿಗಳು ತಮ್ಮನ್ನು ತಾವು ರಜಾಕಾರರೆಂದು ಕರೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದವು. ಪ್ರತಿಭಟನಾ ವಿಧಾನವನ್ನು ತಪ್ಪು ತಿಳಿದ ಶೇಕ್ ಹಸೀನಾ ಮತ್ತು ಇತರ ರಾಜಕಾರಣಿಗಳು ಗಂಭೀರ ಸ್ವರೂಪದ ಹೇಳಿಕೆಗಳನ್ನು ನೀಡಿ, ವಿದ್ಯಾರ್ಥಿಗಳಿಗೆ ಬೆದರಿಕೆ ಒಡ್ಡಿದರು. ಅವರು ವಿದ್ಯಾರ್ಥಿಗಳ ಸಂಪೂರ್ಣ ಘೋಷಣೆ ಮತ್ತು ವಾಸ್ತವ ಪರಿಸ್ಥಿತಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದರು.

ಪ್ರತಿಭಟನೆಯನ್ನು ತಾರಕಕ್ಕೇರಿಸಿದ ಸರ್ಕಾರದ ಹೆಜ್ಜೆ

ರಾಜಕಾರಣಿಗಳು ಮತ್ತು ಬಾಂಗ್ಲಾದೇಶಿ ಸರ್ಕಾರ ವಿದ್ಯಾರ್ಥಿಗಳ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡು, ಬಾಂಗ್ಲಾದೇಶದ ಅತ್ಯುನ್ನತ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ತಮ್ಮನ್ನು ತಾವು ರಜಾಕಾರರು ಎಂದು ಕರೆದುಕೊಂಡಿದ್ದಾರೆ ಎಂದಿದ್ದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಇನ್ನಷ್ಟು ಆಕ್ರೋಶಗೊಳ್ಳುವಂತೆ ಮಾಡಿತ್ತು. ಸರ್ಕಾರದ ಬೆದರಿಕೆಗಳು ಪ್ರತಿಭಟನಾಕಾರರ ಕೋಪವನ್ನು ಇನ್ನಷ್ಟು ಹೆಚ್ಚಿಸಿ, ಈ ಘೋಷಣೆಗಳು ಇತರ ವಿಶ್ವವಿದ್ಯಾಲಯಗಳಿಗೂ ಹಬ್ಬುವಂತಾಯಿತು.

ಪ್ರತಿಭಟನೆಗಳ ವಿರುದ್ಧ ಕ್ರಮಕ್ಕೆ ಮುಂದಾದ ಸರ್ಕಾರ

ಬಾಂಗ್ಲಾದೇಶ ಸರ್ಕಾರ ತಾನು ಪ್ರತಿಭಟನಾಕಾರರ ಜೊತೆಗೆ ಶಾಂತಿಯುತ ಮಾತುಕತೆಗೆ ಮುಂದಾಗುವುದಿಲ್ಲ ಎಂದು ಹೇಳಿತು. ಅದರ ಬದಲಿಗೆ, ಬಾಂಗ್ಲಾದೇಶ್ ಪೊಲೀಸ್ ಮತ್ತು ಬಾರ್ಡರ್ ಗಾರ್ಡ್ ಬಾಂಗ್ಲಾದೇಶ್ ರೀತಿಯ ಕಾನೂನು ಜಾರಿ ಸಂಸ್ಥೆಗಳನ್ನು ಬಳಸಿಕೊಂಡು, ತನ್ನ ವಿದ್ಯಾರ್ಥಿ ಸಂಘಟನೆಯಾದ ಬಾಂಗ್ಲಾದೇಶ್ ಛಾತ್ರ ಲೀಗ್ ಅನ್ನೂ ಬಳಸಿಕೊಂಡು, ಪ್ರತಿಭಟನೆಗಳನ್ನು ಹತ್ತಿಕ್ಕಲು ಮುಂದಾಯಿತು. ಇದರ ಪರಿಣಾಮವಾಗಿ, ಜುಲೈ 16ರ ವೇಳೆಗೆ ಆರು ಜನ ಪ್ರತಿಭಟನಾಕಾರರು ಸಾವಿಗೀಡಾಗಿ, ನೂರಕ್ಕೂ ಹೆಚ್ಚು ಜ‌ನರು ಗಾಯಗೊಂಡರು.

ಅದೇ ರಾತ್ರಿ, ಪ್ರಧಾನಿ ಶೇಕ್ ಹಸೀನಾ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿ, ದೇಶಾದ್ಯಂತ ನಡೆದ ಹಿಂಸಾಚಾರವನ್ನು ಖಂಡಿಸಿದರು. ಆದರೆ, ಪ್ರಧಾನಿ ಪ್ರತಿಭಟನಾಕಾರರ ಬೇಡಿಕೆಗಳನ್ನು ಪರಿಹರಿಸುವ ಕುರಿತು ಮಾತ್ರ ಒಂದಕ್ಷರವೂ ಆಡಲಿಲ್ಲ. ಸರ್ಕಾರ ತನ್ನ ಕ್ರಮದ ಅಂಗವಾಗಿ ವಿಶ್ವವಿದ್ಯಾಲಯಗಳು, ಶಾಲಾ ಕಾಲೇಜುಗಳನ್ನು ಮುಚ್ಚಿತು. ಆದರೆ, ಇದೂ ಪ್ರತಿಭಟನೆಗಳನ್ನು ನಿಲ್ಲಿಸಲು ಶಕ್ತವಾಗಲಿಲ್ಲ.

ವಿದ್ಯಾರ್ಥಿಗಳ ಮೇಲೆ ಮುಗಿಬಿದ್ದ ಸರ್ಕಾರ

ಜುಲೈ 18ರಂದು, ಪ್ರತಿಭಟನಾಕಾರರು ರಾಷ್ಟ್ರಾದ್ಯಂತ ಬಂದ್‌ಗೆ ಕರೆ ನೀಡಿ, ಕೇವಲ ತುರ್ತು ಸೇವೆಯ ವಾಹನಗಳು ಮಾತ್ರವೇ ಕಾರ್ಯಾಚರಿಸಲು ಅನುವು ಮಾಡಿದರು. ಈ ಬಾರಿ ರಾಜಧಾನಿ ಢಾಕಾದ ಖಾಸಗಿ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳೂ ಸರ್ಕಾರಿ ವಿಶ್ವವಿದ್ಯಾಲಯ, ಕಾಲೇಜುಗಳ ವಿದ್ಯಾರ್ಥಿಗಳೊಡನೆ ಕೈಜೋಡಿಸಿದ್ದರು. ಆದರೆ ಸರ್ಕಾರ ಮಾತ್ರ ತನ್ನ ನಿಲುವಿನಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲು ಸಿದ್ಧವಿರಲಿಲ್ಲ. ಪ್ರತಿಭಟನಾಕಾರರ ವಿರುದ್ಧ ಇನ್ನಷ್ಟು ಉಗ್ರ ಕ್ರಮಕ್ಕೆ ಮುಂದಾದ ಸರ್ಕಾರ, ಪ್ರತಿಭಟನೆಗಳನ್ನು ಹತ್ತಿಕ್ಕಲು ಪ್ರಯತ್ನಿಸಿ, ಹನ್ನೆರಡು ಜನರು ಸಾವನ್ನಪ್ಪಿದರು.

ಪರಿಸ್ಥಿತಿ ಇನ್ನಷ್ಟು ಹದಗೆಡುತ್ತಿರುವುದನ್ನು ಗಮನಿಸಿದ ಬಾಂಗ್ಲಾದೇಶದ ಕಾನೂನು ಸಚಿವರು ಮಾಧ್ಯಮಗಳೊಡನೆ ಮಾತನಾಡಿ, ಸರ್ಕಾರ ಪ್ರತಿಭಟನಾಕಾರರನ್ನು ಭೇಟಿಯಾಗಿ ಮಾತುಕತೆ ನಡೆಸಲು ಸಿದ್ಧವಿದೆ ಎಂದು ಘೋಷಿಸಿದರು. ಆದರೆ, ವಿದ್ಯಾರ್ಥಿಗಳ ಮೇಲಿನ ದಾಳಿಗಳು ಮಾತ್ರ ಹಾಗೇ ಮುಂದುವರಿದಿದ್ದವು. ಸಾವನ್ನಪ್ಪಿದ ಮತ್ತು ಗಾಯಗೊಂಡ ವಿದ್ಯಾರ್ಥಿಗಳ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ್ದ ಜನರು ಪ್ರತಿಭಟನಾಕಾರರಿಗೆ ಬೆಂಬಲ ಸೂಚಿಸತೊಡಗಿದರು. ಇದರಿಂದಾಗಿ ಪ್ರತಿಭಟನೆ ನಡೆಸುತ್ತಿದ್ದವರು ಸಾವಿಗೀಡಾದ ನಮ್ಮ ಸಹಪಾಠಿಗಳ ಹೆಣಗಳ ಮೇಲೆ ನಾವು ಸರ್ಕಾರದೊಡನೆ ಮಾತುಕತೆ ನಡೆಸುವುದಿಲ್ಲ ಎಂದು ಘೋಷಿಸಿದರು.

ಸರ್ಕಾರ ತಕ್ಷಣವೇ ದೇಶಾದ್ಯಂತ ಅಂತರ್ಜಾಲ ಮತ್ತು ಮೊಬೈಲ್ ನೆಟ್‌ವರ್ಕ್ ಸ್ಥಗಿತಗೊಳಿಸಿತು. ಇದರಿಂದಾಗಿ ದೇಶದಲ್ಲಿ ಏನಾಗುತ್ತಿದೆ ಎಂದು ತಿಳಿಯುವುದೇ ಕಷ್ಟಕರವಾಯಿತು. ಆದರೆ, ವರದಿಗಳ ಪ್ರಕಾರ ಎರಡು ದಿನಗಳಲ್ಲಿ ಕನಿಷ್ಠ 39 ಪ್ರತಿಭಟನಾಕಾರರು ಸಾವಿಗೀಡಾಗಿದ್ದು, 33 ಸಾವುಗಳು ಜುಲೈ 18ರಂದು ಸಂಭವಿಸಿದ್ದವು. ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಇತರ ಅಂಕಿಅಂಶಗಳು ಸಾವಿನ ಸಂಖ್ಯೆ 64 ತಲುಪಿವೆ ಎಂದು ಅಂದಾಜಿಸಿವೆ.

ಕೋಟಾ ಸುಧಾರಣೆಯನ್ನೂ ಮೀರಿ ಹಬ್ಬಿದ ಪ್ರತಿಭಟನೆಗಳು

ಬಾಂಗ್ಲಾದೇಶ ಸರ್ಕಾರ ಮತ್ತದರ ಬೆಂಬಲಿಗರು ಕೋಟಾ ಸುಧಾರಣಾ ಪ್ರತಿಭಟನೆಗಳನ್ನು ಬಿಎನ್‌ಪಿ (ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಾರ್ಟಿ) ಮತ್ತು ಜಮಾತ್ ಎ ಇಸ್ಲಾಮಿ ಸದಸ್ಯರು ಹೈಜಾಕ್ ಮಾಡಿದ್ದಾರೆ ಎಂದು ಆರೋಪಿಸಿದ್ದು, ದೇಶಾದ್ಯಂತ ಹಿಂಸಾಚಾರ ಉಂಟುಮಾಡುವುದೇ ಅವರ ಗುರಿ ಎಂದಿದ್ದಾರೆ. ಆದರೆ ಈ ಆರೋಪವನ್ನು ದೃಢಪಡಿಸಲು ಸೂಕ್ತ ಪುರಾವೆಗಳನ್ನು ಸರ್ಕಾರ ಇನ್ನೂ ಒದಗಿಸಿಲ್ಲ.

ಒಂದು ವೇಳೆ ಪ್ರತಿಭಟನೆಯಲ್ಲಿ ಆ ಪಕ್ಷಗಳು ಪಾಲ್ಗೊಂಡಿರುವುದು ನಿಜವೇ ಆದರೆ, ಇತರ ರಾಜಕೀಯ ಪಕ್ಷಗಳು ಪ್ರತಿಭಟನೆಯಲ್ಲಿ ಕೈಜೋಡಿಸಿದರೆ ತಪ್ಪೇನು? ಅವರೂ ಬಾಂಗ್ಲಾದೇಶಿ ಪ್ರಜೆಗಳೇ ತಾನೆ? ಎಂದು ಜನರು ಪ್ರಶ್ನಿಸಿದ್ದಾರೆ. ಸರ್ಕಾರದ ಪ್ರತಿನಿಧಿಗಳು ಬಿಎನ್‌ಪಿ ಮತ್ತು ಜಮಾತ್ ಎ ಇಸ್ಲಾಮಿ ಪಕ್ಷಗಳನ್ನು ಭ್ರಷ್ಟ ಮತ್ತು ಭಯೋತ್ಪಾದಕ ಸಂಘಟನೆಗಳು ಎಂದು ಪರಿಗಣಿಸಿದ್ದು, ಆವಾಮಿ ಲೀಗ್ ಮತ್ತು ಅದರ ನಾಯಕರು ಮಾತ್ರವೇ ಬಾಂಗ್ಲಾದೇಶವನ್ನು ಆರ್ಥಿಕ ಪ್ರಗತಿ ಮತ್ತು ಅಭಿವೃದ್ಧಿಯೆಡೆಗೆ ಮುನ್ನಡೆಸುತ್ತಿದ್ದಾರೆ ಎಂದು ಭಾವಿಸಿದ್ದಾರೆ.

ಈಗ ನಡೆಯುತ್ತಿರುವ ಪ್ರತಿಭಟನೆಗಳು ಕೋಟಾ ಸುಧಾರಣೆಗೆ ಮಾತ್ರ ಸೀಮಿತವಾಗಿಲ್ಲ ಎಂದು ಸರ್ಕಾರ ಆರೋಪಿಸಿದ್ದು, ಈ ಪ್ರತಿಭಟನೆಗಳು ಸರ್ಕಾರದ ಸ್ಥಿರತೆಗೆ ಸವಾಲೊಡ್ಡುತ್ತಿವೆ ಎಂದಿದೆ.

ಇದರ ಹಿಂದಿರುವ ಕಾರಣಗಳೇನು?

ಪ್ರಸ್ತುತ ಸರ್ಕಾರ 2009ರಿಂದ ಅಧಿಕಾರದಲ್ಲಿದ್ದು, 15 ವರ್ಷಗಳ ಕಾಲ ಸುದೀರ್ಘ ಆಡಳಿತ ನಡೆಸಿದೆ. ಇದರಿಂದಾಗಿ ಬಾಂಗ್ಲಾದೇಶದ ಒಳಗೂ, ವಿದೇಶಗಳಿಗೂ 2014, 2019 ಮತ್ತು 2024ರ ಚುನಾವಣೆಗಳ ಫಲಿತಾಂಶದ ಪಾರದರ್ಶಕತೆಯ ಕುರಿತು ಅನುಮಾನಗಳಿವೆ.

ಕಳೆದ ವರ್ಷ ಬಾಂಗ್ಲಾದೇಶ ಸರ್ಕಾರ ಹಣದುಬ್ಬರವನ್ನು ನಿಯಂತ್ರಿಸಲು ಪರದಾಡಿತ್ತು. ಅದರೊಡನೆ ಬಾಂಗ್ಲಾದೇಶ ಇನ್ನಷ್ಟು ಸವಾಲುಗಳನ್ನೂ ಎದುರಿಸಿತ್ತು. ಸರ್ಕಾರ ಮತ್ತು ಖಾಸಗಿ ವಲಯಗಳಲ್ಲಿ ತಲೆದೋರಿರುವ ಭ್ರಷ್ಟಾಚಾರದ ಕುರಿತು ಸಾಕಷ್ಟು ಕಳವಳಗಳು ವ್ಯಕ್ತವಾಗಿವೆ. ಇತ್ತೀಚೆಗೆ ಬೆಳಕಿಗೆ ಬಂದ ಮಾಹಿತಿಯ ಪ್ರಕಾರ, ಪಬ್ಲಿಕ್ ಸರ್ವಿಸ್ ಕಮಿಷನ್ (ಪಿಎಸ್‌ಸಿ) ಅಧಿಕಾರಿಗಳು ಕಳೆದ 12 ವರ್ಷಗಳಿಂದ ನಾಗರಿಕ ಸೇವಾ ಪರೀಕ್ಷೆಯ ಪ್ರಶ್ನೆಗಳನ್ನು ಬಯಲು ಮಾಡುತ್ತಿದ್ದರು.

ಇನ್ನು ಆಡಳಿತ ಪಕ್ಷದ ವಿದ್ಯಾರ್ಥಿ ಸಂಘಟನೆಯಾದ ಛಾತ್ರಾ ಲೀಗ್ ಬಹಳಷ್ಟು ವರ್ಷಗಳಿಂದ ವಿರೋಧಿ ಗುಂಪಿನ ವಿದ್ಯಾರ್ಥಿಗಳು ಮಾತ್ರವಲ್ಲದೆ, ಸಾಮಾನ್ಯ ವಿದ್ಯಾರ್ಥಿಗಳನ್ನೂ ಕೆಟ್ಟದಾಗಿ ನಡೆಸಿಕೊಳ್ಳುತ್ತಿತ್ತು ಎನ್ನಲಾಗಿದೆ.

quota stir in bangladesh (file pic)
ರಾಜಕೀಯ ಅದೃಷ್ಟ ಬದಲಾಯಿಸುವ ಹತ್ಯಾ ಯತ್ನಗಳು: ದಾಳಿಯ ಬಳಿಕ ಹೆಚ್ಚಲಿದೆಯೇ ಟ್ರಂಪ್ ಜನಪ್ರಿಯತೆ? (ಜಾಗತಿಕ ಜಗಲಿ)

ಛಾತ್ರಾ ಲೀಗ್ ಸರ್ಕಾರದ ಒಂದು ಬೆಂಬಲ ಪಡೆಯಾಗಿದ್ದು, ಈ ಪ್ರತಿಭಟನೆಯ ವೇಳೆಯಲ್ಲಂತೂ ಸಕ್ರಿಯವಾಗಿ ಸರ್ಕಾರದ ಪರವಾಗಿ ಕಾರ್ಯಾಚರಿಸಿದೆ. ಆಘಾತಕಾರಿ ಬೆಳವಣಿಗೆಯಲ್ಲಿ, ಆಡಳಿತ ಪಕ್ಷದ ಪ್ರಧಾನ ಕಾರ್ಯದರ್ಶಿ ಛಾತ್ರಾ ಲೀಗ್‌ಗೆ ಛಾತ್ರಾ ದಳ್ (ಬಿಎನ್‌ಪಿಯ ವಿದ್ಯಾರ್ಥಿ ವಿಭಾಗ) ಮತ್ತು ಛಾತ್ರಾ ಶಿಬಿರ್ (ಜಮಾತ್ ಎ ಇಸ್ಲಾಮಿಯ ವಿದ್ಯಾರ್ಥಿ ಅಂಗ) ಸದಸ್ಯರನ್ನು 'ನೋಡಿಕೊಳ್ಳುವಂತೆ' ಕರೆನೀಡಿದ್ದರು. ಅವೆರಡೂ ಸಂಘಟನೆಗಳ ವಿದ್ಯಾರ್ಥಿಗಳು ಪ್ರಸ್ತುತ ಪ್ರತಿಭಟನೆಯ ಭಾಗ ಎಂದು ಪರಿಗಣಿಸಲಾಗಿದೆ. ತಮ್ಮ ನಾಯಕರ ಕರೆಯ ಮೇರೆಗೆ, ಛಾತ್ರಾ ಲೀಗ್ ಸದಸ್ಯರು ಪ್ರತಿಭಟನಾಕಾರರ ಮೇಲೆ ದಾಳಿ ನಡೆಸಲಾರಂಭಿಸಿದರು.

ಇವೆಲ್ಲ ಬೆಳವಣಿಗೆಗಳು ಯುವಕರು ಮತ್ತು ಜನರಿಗೆ ಸರ್ಕಾರದ ಮೇಲೆ ಕೋಪ ತರಿಸಿವೆ. ಇದರ ಪರಿಣಾಮವಾಗಿ, ಪ್ರತಿಭಟನೆಗಳು ತಮ್ಮ ಮೂಲ ಉದ್ದೇಶವಾದ ಕೋಟಾ ಸುಧಾರಣೆಯಿಂದಲೂ ಭಿನ್ನ ಹಾದಿ ಹಿಡಿದಿರುವಂತೆ ತೋರುತ್ತಿವೆ.

ಆಡಳಿತಾರೂಢ ಆವಾಮಿ ಲೀಗ್ ಅಂತೂ ಪ್ರಸ್ತುತ ಪ್ರತಿಭಟನೆಗಳನ್ನು ತನ್ನ ಉಳಿವಿಗೆ ಗಂಭೀರ ಸಮಸ್ಯೆ ಎಂಬಂತೆ ಪರಿಗಣಿಸಿದೆ. ಹಾಗೇನಾದರೂ ಆದರೆ, ಸರ್ಕಾರ ಮಾತುಕತೆಗೆ ಮುಂದಾಗಲು ನಿರಾಕರಿಸಿದ್ದಕ್ಕಾಗಿ ತನ್ನನ್ನು ತಾನು ದೂರಬೇಕಷ್ಟೇ. ಸರ್ಕಾರದ ಅಸಡ್ಡೆಯ ಕ್ರಮಗಳು, ಭ್ರಷ್ಟಾಚಾರ ನಿಗ್ರಹಿಸುವಲ್ಲಿನ ವೈಫಲ್ಯ, ವಿದ್ಯಾರ್ಥಿಗಳನ್ನೇ ಪರಸ್ಪರರ ವಿರುದ್ಧ ಎತ್ತಿಕಟ್ಟುವುದು, ಸಾರ್ವಜನಿಕರ ಮತದಾನದ ಹಕ್ಕು ಕಿತ್ತುಕೊಂಡು ತಾನು ಪ್ರಜಾಪ್ರಭುತ್ವವಾದಿ ಎಂಬಂತೆ ವರ್ತಿಸುವುದು, ಎಲ್ಲವೂ ಜನರಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ಅದು ಈಗ ಬಾಂಗ್ಲಾದೇಶದಾದ್ಯಂತ ವ್ಯಾಪಿಸುತ್ತಿದೆ.

ಪ್ರತಿಭಟನೆಗಳು ಈಗ ಕೋಟಾ ಸುಧಾರಣೆಯ ಬೇಡಿಕೆಗೆ ಮಾತ್ರ ಸೀಮಿತವಾಗಿಲ್ಲ ಎಂದು ಸರ್ಕಾರ ಹೇಳಿರುವುದು ನಿಜವೇ ಆಗಿರಬಹುದು. ಆದರೆ, ಬಾಂಗ್ಲಾ ಸರ್ಕಾರ ಪ್ರಸ್ತುತ ಪರಿಸ್ಥಿತಿಗೆ ತನ್ನ ಕ್ರಮಗಳು ಹೇಗೆ ಕಾರಣವಾದವು ಎಂಬುದನ್ನು ಅರ್ಥ ಮಾಡಿಕೊಂಡು, ಕೇವಲ ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ದೂರುವುದು ಮತ್ತು ಅವರಿಗೆ ಹಾನಿ ಉಂಟುಮಾಡುವುದನ್ನು ತಕ್ಷಣವೇ ನಿಲ್ಲಿಸಬೇಕಿದೆ.

- ಗಿರೀಶ್ ಲಿಂಗಣ್ಣ

(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com