ಮತ್ತೊಂದು ಮಹಾಯುದ್ಧಕ್ಕೆ ಜಗತ್ತು ತಯಾರಾಗುತ್ತಿದೆಯೇ? ಹೀಗಿವೆ ನೋಡಿ ಸೂಚನೆಗಳು! (ತೆರೆದ ಕಿಟಕಿ)

ರಷ್ಯ ಮತ್ತು ಉಕ್ರೇನ್ ವಿಷಯದಲ್ಲಿ ಯುದ್ಧವು ಇನ್ನೊಂದು ಹಂತವನ್ನು ಪ್ರವೇಶಿಸುವುದಕ್ಕೆ ಸೂಚನೆಗಳು ಸಿಗುತ್ತಿವೆ. ಈ ಬಾರಿಯ ಉತ್ಕರ್ಷ ಜಗತ್ತನ್ನು ಎಲ್ಲಿಗೆ ತೆಗೆದುಕೊಂಡು ಹೋಗಲಿದೆ ಎಂಬುದರ ಬಗ್ಗೆ ಆತಂಕದ ಚಿತ್ರಣಗಳು ಎದುರಾಗುತ್ತವೆ.
File pic
ಸಾಂಕೇತಿಕ ಚಿತ್ರonline desk
Updated on

ಕಾರ್ಮೋಡಗಳು ಕವಿದಿವೆ ಎಂದು ಮಾತು ಪ್ರಾರಂಭಿಸಿದರೆ ಅದೀಗ ಮಾನ್ಸೂನಿನ ಕುರಿತು ಹೇಳುತ್ತಿರುವುದು ಅಂತಲೇ ಅಂದುಕೊಳ್ಳಬೇಕಿಲ್ಲ. ಜಗತ್ತನ್ನೀಗ ಯುದ್ಧದ ಕಾರ್ಮೋಡ ತಬ್ಬುತ್ತಿದೆ. ಅರೇ… ಇದರಲ್ಲಿ ತುಂಬ ಹೊಸ ಮಾತೇನಿದೆ, ಎರಡು ವರ್ಷಗಳಿಂದ ರಷ್ಯ-ಉಕ್ರೇನ್ ಸಮರ ನಡೆಯುತ್ತಲೇ ಇದೆ ಹಾಗೂ ಇಸ್ರೇಲ್ ಸಹ ಕದನಕಣದಲ್ಲಿರುವುದು ಹಳೆಯ ಸುದ್ದಿ ಎಂದು ನಿಮಗನಿಸಬಹುದೇನೋ. 

ಆದರೆ, ರಷ್ಯ ಮತ್ತು ಉಕ್ರೇನ್ ವಿಷಯದಲ್ಲಿ ಯುದ್ಧವು ಇನ್ನೊಂದು ಹಂತವನ್ನು ಪ್ರವೇಶಿಸುವುದಕ್ಕೆ ಸೂಚನೆಗಳು ಸಿಗುತ್ತಿವೆ. ಈ ಬಾರಿಯ ಉತ್ಕರ್ಷ ಜಗತ್ತನ್ನು ಎಲ್ಲಿಗೆ ತೆಗೆದುಕೊಂಡು ಹೋಗಲಿದೆ ಎಂಬುದರ ಬಗ್ಗೆ ಆತಂಕದ ಚಿತ್ರಣಗಳು ಎದುರಾಗುತ್ತವೆ. 

ಫೆಬ್ರವರಿ 2022ರಿಂದ ಶುರುವಾಗಿರುವ ರಷ್ಯ-ಉಕ್ರೇನ್ ಕದನದ ಈವರೆಗಿನ ಗತಿಗೂ ಮುಂದಾಗಲಿರುವುದಕ್ಕೂ ಏನು ವ್ಯತ್ಯಾಸ ಎಂಬುದನ್ನು ತಿಳಿದುಕೊಳ್ಳೋಣ. ಈವರೆಗೆ ಪಾಶ್ಚಾತ್ಯ ಶಕ್ತಿಗಳು ಉಕ್ರೇನಿನ ಬೆನ್ನಿಗೆ ಇದ್ದವು ನಿಜ. ಉಕ್ರೇನಿಗೆ ತನ್ನನ್ನು ತಾನು ರಕ್ಷಿಸಿಕೊಳ್ಳುವುದಕ್ಕೆ ಬೇಕಾದ ಶಸ್ತ್ರಗಳ ಪೂರೈಕೆ, ಆ ನಿಟ್ಟಿನಲ್ಲಿ ಹಣ ಸಹಾಯಗಳು ಈವರೆಗೆ ಆಗಿದ್ದವು. ಜತೆಗೆ, ರಷ್ಯದ ಮೇಲೆ ಅಮೆರಿಕವು ಥರಹೇವಾರಿ ಆರ್ಥಿಕ ನಿರ್ಬಂಧಗಳನ್ನು ಹೇರಿತ್ತು. ಈಗ ಆ ನಿರ್ಬಂಧಗಳನ್ನು ಮತ್ತಷ್ಟು ವಿಸ್ತರಿಸಿದೆ. ಇಷ್ಟಕ್ಕೂ ಮುಖ್ಯ ವಿಷಯ ಅದಲ್ಲ. ಅಮೆರಿಕ ಸೇರಿದಂತೆ ಪಾಶ್ಚಾತ್ಯ ರಾಷ್ಟ್ರಗಳು ಈವರೆಗೆ ಉಕ್ರೇನಿಗೆ ಶಸ್ತ್ರಾಸ್ತ್ರ ಒದಗಿಸುತ್ತಲೇ ಬಂದಿರುವುದು ಹೌದಾದರೂ ಅವನ್ನೆಲ್ಲ ಉಕ್ರೇನ್ ತನ್ನ ರಕ್ಷಣೆಗೆ ಮಾತ್ರ ಬಳಸಬೇಕೆಂಬ ಷರತ್ತಿತ್ತು. ಆದರೆ, ರಷ್ಯವು ತನ್ನ ಪ್ರದೇಶಗಳನ್ನು ಆಕ್ರಮಿಸಿಕೊಳ್ಳುತ್ತ, ಖಾರ್ಕಿವ್ ನಂಥ ಮುಖ್ಯ ನಗರಗಳ ಮೇಲೆ ಬಾಂಬ್ ಮಳೆಗರೆಯುತ್ತಿರಬೇಕಾದರೆ ತಾನಿದನ್ನು ಕೇವಲ ಮುಖಾಮುಖಿ ಯುದ್ಧದ ಮೂಲಕ ಗೆಲ್ಲಲಾಗುವುದಿಲ್ಲ, ಹೀಗಾಗಿ ರಷ್ಯದ ಒಳಗೆ ಹೋಗಿ ಪಾಶ್ಚಾತ್ಯ ಶಸ್ತ್ರಗಳನ್ನು ಪ್ರಯೋಗಿಸುವುದಕ್ಕೆ ಅನುಮತಿ ಕೊಡಿ ಎಂಬುದು ಉಕ್ರೇನ್ ಬಹಳ ತಿಂಗಳುಗಳಿಂದ ಮಾಡುತ್ತಿದ್ದ ಒತ್ತಾಯ. 

ಇದಕ್ಕೆ ಇತ್ತೀಚಿನವರೆಗೂ ಯುರೋಪ್ ಸಮ್ಮತಿಸಿರಲಿಲ್ಲ. ಏಕೆಂದರೆ, ಉಕ್ರೇನ್ ಏನಾದರೂ ರಷ್ಯದ ಪ್ರಮುಖ ನಗರವನ್ನು ದಾಳಿ ಮಾಡಿದ್ದೇ ಆದರೆ, ಆಗ ರಷ್ಯ ನೀಡುವ ಪ್ರತಿಕ್ರಿಯೆ ಕೇವಲ ಉಕ್ರೇನನ್ನು ಗುರಿಯಾಗಿರಿಸದೇ ಯುರೋಪನ್ನು ಗುರಿಯಾಗಿರಿಸಿ ಪ್ರತಿದಾಳಿ ಮಾಡಿದರೆ ಯುದ್ಧೋತ್ಕರ್ಷವು ಯಾರ ಹತೋಟಿಗೂ ಸಿಗದಂತೆ ತಿರುಗಿಬಿಡುತ್ತದೆ. ಎರಡನೇ ವಿಶ್ವಯುದ್ಧದ ಗತಿಯನ್ನೇ ಮರುಮನನ ಮಾಡಿಕೊಳ್ಳುವುದಾದರೆ, 1939ರ ಸೆಪ್ಟೆಂಬರಿನಲ್ಲಿ ಜರ್ಮನಿಯು ಪೊಲ್ಯಾಂಡ್ ಮೇಲೆ ಆಕ್ರಮಣ ಮಾಡುತ್ತಲೇ ಅವತ್ತಿನ ಜಾಗತಿಕ ಶಕ್ತಿಗಳಾದ ಇಂಗ್ಲೆಂಡ್ ಮತ್ತು ಫ್ರಾನ್ಸ್ ಜರ್ಮನಿಯ ವಿರುದ್ಧ ಕದನ ಘೋಷಿಸಿದವು. ತನ್ನ ಆರ್ಥಿಕತೆ ವಿಸ್ತರಿಸಿಕೊಳ್ಳುವುದಕ್ಕೆ ಹೆಚ್ಚಿನ ಭೂಮಿ ಬಯಸಿದ್ದ ಅವತ್ತಿನ ಜಪಾನ್ ಸಾಮ್ರಾಜ್ಯವು ಜರ್ಮನಿ-ಇಟಲಿಗಳನ್ನು ಸೇರಿಕೊಂಡಿತು. ಇವತ್ತು ಎರಡನೇ ವಿಶ್ವಯುದ್ಧದ ಸಂಬಂಧ ಪ್ರಮುಖವಾಗಿ ಅರಿತಿರುವ ಘಟನೆ ಎಂದರೆ ಹಿರೊಶಿಮಾ ಮತ್ತು ನಾಗಾಸಾಕಿಗಳ ಮೇಲಿನ ಬಾಂಬ್ ದಾಳಿ. ಆದರೆ ಅದಾಗಿದ್ದು 1945ರ ಆಗಸ್ಟಿನಲ್ಲಿ. ಅಂದರೆ, ಎರಡನೇ ವಿಶ್ವಯುದ್ಧ ಶುರುವಾಗಿ ಐದು ವರ್ಷಗಳೇ ಕಳೆದ ನಂತರ. ಇಷ್ಟಕ್ಕೂ ಅಧಿಕೃತವಾಗಿ ಅಮೆರಿಕವು ಎರಡನೇ ವಿಶ್ವಯುದ್ಧವನ್ನು ಪ್ರವೇಶಿಸಿದ್ದೇ ಡಿಸೆಂಬರ್ 7, 1941ರ ನಂತರ, ತನ್ನ ಪರ್ಲ್ ಹಾರ್ಬರ್ ನೌಕಾನೆಲೆಯ ಮೇಲೆ ಜಪಾನ್ ಮಾಡಿದ ದಾಳಿಗೆ ಉತ್ತರವಾಗಿ. 

File pic
NDA ಸರ್ಕಾರದಲ್ಲಿ ಮೋದಿ ದೊಡ್ಡ ನಿರ್ಧಾರಗಳನ್ನು ಕೈಗೊಳ್ಳಲಾಗದೇ? ಈ ವಾದದಲ್ಲಿ ಹುರುಳಿದೆಯೇ? (ತೆರೆದ ಕಿಟಕಿ)

ಅವತ್ತಿನ ‘ಅನಿಷ್ಠ ತ್ರಿವಳಿ’ಗಳೆಂದು ಗುರುತಿಸಲಾಗಿದ್ದ ಜರ್ಮನಿ-ಜಪಾನ್-ಇಟಲಿ ವಿರುದ್ಧ ಇಂಗ್ಲೆಂಡ್ ಮತ್ತು ಫ್ರಾನ್ಸ್ ಗಳು ಮುಂಚೂಣಿ ಹೋರಾಟ ಮಾಡುತ್ತಿದ್ದವಷ್ಟೆ. ಆ ಸಮಯದಲ್ಲಿ ಫೆಸಿಫಿಕ್ ಪ್ರದೇಶದಲ್ಲಿ ಅಮೆರಿಕವು ಜಪಾನಿನ ಮೇಲೆ ಕೆಲವು ನಿರ್ಬಂಧಗಳನ್ನು ಹಾಕಿ ತೈಲ ಮತ್ತಿತರ ಪೂರೈಕೆಗಳನ್ನು ದುಸ್ತರವಾಗಿಸಿತ್ತು. ಹೇಗೆ ಇವತ್ತಿನ ಸಂದರ್ಭದಲ್ಲಿ ರಷ್ಯವು ವಿದೇಶಗಳಲ್ಲಿ ಹೊಂದಿರುವ ಆಸ್ತಿಗಳನ್ನು ಮಟ್ಟಗೋಲು ಹಾಕಿಕೊಳ್ಳುವ ಮೂಲಕ, ಅಂತಾರಾಷ್ಟ್ರೀಯ ಬ್ಯಾಂಕಿಂಗ್ ವ್ಯವಸ್ಥೆಗಳಿಂದ ರಷ್ಯವನ್ನು ನಿರ್ಬಂಧಿಸುವ ಮೂಲಕವೆಲ್ಲ ಆರ್ಥಿಕ ಸಮರವನ್ನು ಸಾರಿದೆಯೋ ಅಂತೆಯೇ ಅವತ್ತಿನ ಜಪಾನ್ ವಿರುದ್ಧ ಸಹ ಅಮೆರಿಕದ ನಡೆ ಹಾಗಿತ್ತು. ಯುದ್ಧಭೂಮಿಯಲ್ಲಿ ಈ ಎರಡು ದೇಶಗಳೇನೂ ಎದುರಾಗಿರಲಿಲ್ಲ. ಆದರೆ, ಅಮೆರಿಕದ ಈ ಫೆಸಿಫಿಕ್ ಸಾಗರತೀರದ ಹಿಡಿತದಿಂದ ತಪ್ಪಿಸಿಕೊಳ್ಳುವುದಕ್ಕೆ, ಆಗ್ನೇಯ ಏಷ್ಯದ ತೈಲ ಪೂರೈಕೆ ಸರಿ ಮಾಡಿಕೊಳ್ಳುವುದಕ್ಕೆ ಮೊದಲಿಗೆ ಅಮೆರಿಕದ ನೌಕಾಬಲಕ್ಕೆ ಮರ್ಮಾಘಾತ ನೀಡಬೇಕು ಎಂದು ಜಪಾನ್ ಯೋಚಿಸಿತು. ಹಾಗೆಂದೇ ಅದು ಪರ್ಲ್ ಹಾರ್ಬರ್ ನೌಕಾನೆಲೆಯ ಮೇಲೆ ದಾಳಿ ನಡೆಸಿ 2,403 ಅಮೆರಿಕನ್ನರನ್ನು ಕೊಂದು ಅದರ 21 ನೌಕೆಗಳು ಮತ್ತು 188 ವಿಮಾನಗಳನ್ನು ಧ್ವಂಸಗೊಳಿಸಿತು. ಆಗ ನೇರವಾಗಿ ಯುದ್ಧಕ್ಕೆ ಧುಮುಕಿದ್ದ ಅಮೆರಿಕವು ಅದನ್ನು ಅಣುಬಾಂಬ್ ಪ್ರಯೋಗದವರೆಗೂ ಎಳೆದು ಜಪಾನನ್ನು ಶರಣಾಗುವಂತೆ ಮಾಡಿದ್ದು ಇವತ್ತಿಗೆ ಇತಿಹಾಸ. 

ವರ್ತಮಾನಕ್ಕೆ ಬಂದು ಗಮನಿಸೋಣ. ರಷ್ಯದ ವಿರುದ್ಧ ಸಮರ ಶುರುವಾಗಿದ್ದು ಸಹ ಈ ಬಗೆಯ ಆರ್ಥಿಕ ದಿಗ್ಬಂಧನಗಳು ಹಾಗೂ ಉಕ್ರೇನಿಗೆ ಶಸ್ತ್ರ ಪೂರೈಕೆಗಳ ಮೂಲಕ. ಹಾಗಂತ ನ್ಯಾಟೊ ಆಗಲೀ, ಅಮೆರಿಕವಾಗಲೀ ಉಕ್ರೇನಿನ ಪಕ್ಕಪಕ್ಕ ನಿಂತೇನೂ ಯುದ್ಧ ಮಾಡುತ್ತಿಲ್ಲ. ಆದರೆ, ಈಗ ಬದಲಾಗಿರುವುದೇನೆಂದರೆ, ತಾವು ಉಕ್ರೇನಿಗೆ ಒದಗಿಸಿರುವ ಶಸ್ತ್ರವನ್ನು ಕೇವಲ ಉಕ್ರೇನಿನ ನಗರಗಳನ್ನು ಉಳಿಸಿಕೊಳ್ಳುವುದಕ್ಕಷ್ಟೇ ಉಕ್ರೇನ್ ಉಪಯೋಗಿಸಿಕೊಳ್ಳಬೇಕಿಲ್ಲ, ಬದಲಿಗೆ ರಷ್ಯದ ನಗರಗಳನ್ನು ಉದ್ದೇಶಿಸಿದ ದಾಳಿಗೂ ಬಳಸಬಹುದು ಎಂಬುದನ್ನು ಪಾಶ್ಚಾತ್ಯ ಶಕ್ತಿಗಳು ಒಪ್ಪಿಕೊಂಡಿರುವುದಾಗಿ ಹಲವು ಅಂತಾರಾಷ್ಟ್ರೀಯ ಮಾಧ್ಯಮ ವೇದಿಕೆಗಳು ವರದಿ ಮಾಡಿವೆ. ಅದಕ್ಕೆ ಸರಿಯಾಗಿ, ರಷ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜೂನ್ 18ರಂದು ಉತ್ತರ ಕೋರಿಯಾ ಎಂಬ ನಿರಂಕುಶ ನ್ಯೂಕ್ಲಿಯರ್ ದೇಶಕ್ಕೆ ಭೇಟಿ ಕೊಟ್ಟಿದ್ದಾರೆ! ರಷ್ಯವೂ ಸೇರಿದಂತೆ ಜಗತ್ತಿನ 9 ಅಣ್ವಸ್ತ್ರ ಹೊಂದಿರುವ ರಾಷ್ಟ್ರಗಳ ಪೈಕಿ ಉತ್ತರ ಕೊರಿಯಾವೂ ಒಂದು. ಇದರ ಸರ್ವಾಧಿಕಾರಿ ಕಿಮ್ ಜಾಂಗ್ ಮಹಾ ತಿಕ್ಕಲು ಬುದ್ಧಿಯವ. ಇಂಥ ವ್ಯಕ್ತಿಯ ಜತೆ ನಿಂತು ಪಾಶ್ಚಾತ್ಯ ಮೋಸದ ಶಕ್ತಿಗಳ ವಿರುದ್ಧ ನಾರ್ತ್ ಕೊರಿಯಾವನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ.

ಆರ್ಥಿಕ ದಿಗ್ಬಂಧನಗಳಿಂದ ರಷ್ಯವು ವರ್ಷವಾಗುತ್ತಲೇ ಬಸವಳಿಯುತ್ತದೆ ಎಂದು ಅಮೆರಿಕ ಗ್ರಹಿಸಿತ್ತು. ಆದರೆ, ತೈಲಕ್ಕೆ ಚೀನಾದಲ್ಲಿ ಹಾಗೂ ಸ್ವಲ್ಪಮಟ್ಟಿಗೆ ಭಾರತದಲ್ಲಿ ರಷ್ಯವು ಮಾರುಕಟ್ಟೆ ಕಂಡುಕೊಂಡಿತು. ಅಲ್ಲದೇ, ರಕ್ಷಣಾ ವಲಯದ ಉದ್ದಿಮೆಗಳಿಗೆ ಹೆಸರಾಗಿರುವ ರಷ್ಯದಲ್ಲಿ ಯುದ್ಧದ ಕಾರಣದಿಂದ ಶಸ್ತ್ರ ಉತ್ಪಾದನೆ ಹೆಚ್ಚಿ ಅದು ಜಿಡಿಪಿಯಲ್ಲಿ ಸಹ ಪ್ರತಿಫಲನಗೊಳ್ಳುತ್ತಿರುವುದರಿಂದ ಆರ್ಥಿಕತೆಯ ಸೌಧ ಬಿದ್ದಿಲ್ಲ. ಇದೀಗ ಅಮೆರಿಕವು ರಷ್ಯದ ಈ ಶಸ್ತ್ರೋದ್ದಿಮೆಗೆ ಪರೋಕ್ಷವಾಗಿ ಸಹಕರಿಸುತ್ತಿರುವ ಸುಮಾರು 300 ವ್ಯಕ್ತಿ ಹಾಗೂ ಗುಂಪುಗಳಿಗೆ ನಿರ್ದಿಷ್ಟವಾಗಿ ಆರ್ಥಿಕ ದಿಗ್ಬಂಧನ ಹಾಕಿದೆ. ಚೀನಾ, ದಕ್ಷಿಣ ಆಫ್ರಿಕಾ, ಯುಎಇ ಹಾಗೂ ಟರ್ಕಿಗೆ ಸೇರಿದ ಸಂಸ್ಥೆ ಮತ್ತು ವ್ಯಕ್ತಿಗಳು ಇದರಡಿಗೆ ಬಂದಿದ್ದಾರೆ. 

ಹೇಗೆ ಎರಡನೇ ವಿಶ್ವಯುದ್ಧದಲ್ಲಿ ಜರ್ಮನಿ-ಇಟಲಿ-ಜಪಾನ್ ಎಂಬ ತ್ರಿವಳಿ ಬಲಗಳು ತಲೆಎತ್ತಿದ್ದವೋ, ವರ್ತಮಾನದಲ್ಲೂ ಇರಾನ್-ರಷ್ಯ-ಚೀನಾಗಳ ಸಮೀಕರಣವೊಂದು ತುಸುಮಟ್ಟಿಗೆ ರೂಪುಗೊಂಡಿರುವುದು ಹೌದು. ಆ ಪೈಕಿ ಇರಾನ್ ಪಾಶ್ಚಾತ್ಯ ಬಲದ ವಿರುದ್ಧ ಇಸ್ರೇಲಿನಲ್ಲಿ ಪರೋಕ್ಷ ಸಮರದಲ್ಲಿದೆ. ಇದೇ ಇರಾನ್ ಬೆಳೆಸಿರುವ ಹೂತಿ ಉಗ್ರರನ್ನು ಬಳಸಿಕೊಂಡು ರೆಡ್ ಸೀ ಭಾಗದಲ್ಲಿ ಜಗತ್ತಿನ ಇತರ ರಾಷ್ಟ್ರಗಳ ಪೂರೈಕೆಗೆ ಆತಂಕ ನಿರ್ಮಿಸಿ, ಚೀನಾ ಮತ್ತು ರಷ್ಯಗಳಿಗೆ ಸೇರಿದ ನೌಕೆಯನ್ನು ಮಾತ್ರ ಹೂತಿ ಉಗ್ರರು ದಾಳಿ ಮಾಡದಂತೆ ಅವರೊಂದಿಗೆ ಒಪ್ಪಂದ ಮಾಡಿಕೊಳ್ಳುವ ಪ್ರಯತ್ನಗಳೂ ರಷ್ಯ ಮತ್ತು ಚೀನಾಗಳಿಂದ ನಡೆದಿವೆ. ಜಗತ್ತಿನ ಸೆಮಿಕಂಡಕ್ಟರ್ ಪೂರೈಕೆಯ ಶಕ್ತಿಕೇಂದ್ರವಾಗಿರುವ ತೈವಾನ್ ಅನ್ನು ವಶ ಮಾಡಿಕೊಳ್ಳಬೇಕೆಂಬ ಆಸೆ ಚೀನಾಕ್ಕೆ ಪ್ರಬಲವಾಗಿದೆ, ಆದರಲ್ಲಿ ಅಮೆರಿಕದ ಉಪಸ್ಥಿತಿ ಇದೆ. 2020ರಿಂದೀಚೆಗೆ ಆಫ್ರಿಕಾದ ಹಲವು ದೇಶಗಳಲ್ಲಿ ಅಧಿಕಾರ ಬದಲಾವಣೆಗಳು ನಡೆದು ಮಿಲಿಟರಿ ಆಡಳಿತಗಳು ಬಂದಿವೆ. ನಿಜರ್, ಗ್ಯಾಬನ್, ಬುರ್ಕಿನಾ ಫಾಸೊ, ಸುಡಾನ್, ಗಿನಿ, ಚಾಡ್, ಮಾಲಿ… ಈ ಎಲ್ಲ ದೇಶಗಳಲ್ಲಿ ಅಮೆರಿಕ ಪ್ರಣೀತ ಸರ್ಕಾರಗಳನ್ನು ಬದಲಿಸಿ ಮಿಲಿಟರಿ ಆಡಳಿತ ತಂದಿರುವುದರಲ್ಲಿ ರಷ್ಯದ ಮಧ್ಯಸ್ಥಿಕೆ ಇದೆ. ಮೇಲೆ ಉದಾಹರಿಸಿದ ಹೆಚ್ಚಿನ ದೇಶಗಳಲ್ಲಿ ವಜ್ರ, ನಿಕೆಲ್, ಮ್ಯಾಂಗನೀಸ್, ಯುರೇನಿಯಂ, ತೈಲ ಇತ್ಯಾದಿ ಗಣಿ ಸಂಪನ್ಮೂಲಗಳಿವೆ.

File pic
ಭಾರತ ಲಂಡನ್ನಿನಿಂದ 100 ಟನ್ ಬಂಗಾರ ವಾಪಸು ತಂದಿದ್ದೇಕೆಂಬ ಕಾರಣವ ಕೆದಕುತ್ತ…! (ತೆರೆದ ಕಿಟಕಿ)

ಅಮೆರಿಕ, ಯುರೋಪ್ ಎಲ್ಲವೂ ಹಣದುಬ್ಬರ, ಆರ್ಥಿಕ ಮಂದಗತಿಗಳಿಗೆ ಒಳಗಾಗುತ್ತಿರುವ ಸಂದರ್ಭ ಇದು. ಒಂದು ಕಡೆ ಚಿನ್ನದ ಬೆಲೆ ಹೆಚ್ಚುತ್ತಿದ್ದರೆ, ಪೇಪರ್ ಚಿನ್ನ ಎಂದೇ ಪರಿಗಣಿತವಾಗಿದ್ದ ಡಾಲರಿಗೆ ಪರ್ಯಾಯಗಳು ಹುಟ್ಟುತ್ತಿವೆ. ಇಂಥ ಹೊಯ್ದಾಟಗಳು ಹೆಚ್ಚಿದಾಗಲೆಲ್ಲ ಯುದ್ಧ-ಸಂಘರ್ಷಗಳ ಹಾದಿ ಹಿಡಿಯುವ ವರ್ತನೆಗಳನ್ನು ದೇಶಗಳು ತೋರುತ್ತವೆ ಅಂತ ಚರಿತ್ರೆ ಉದಾಹರಿಸುತ್ತದೆ. ಜರ್ಮನಿಯು 13 ವರ್ಷಗಳ ಕಾಲ ನಿಲ್ಲಿಸಿದ್ದ ಕಡ್ಡಾಯ ಮಿಲಿಟರಿ ಸೇವೆ ನೀತಿಯನ್ನು ಮರುಜಾರಿಗೆ ತರಲು ಯತ್ನಿಸಿತು.ಅದಕ್ಕೆ ತೀವ್ರ ಪ್ರತಿರೋಧ ಬಂದಿದ್ದರಿಂದ ಕಡ್ಡಾಯ ಸೇವೆ ಬದಲಿಗೆ ಸೇನೆ ಸೇರುವವರನ್ನು ಉತ್ತೇಜಿಸುವ ಕಾರ್ಯಕ್ರಮಗಳನ್ನು ಅಲ್ಲಿನ ಸರ್ಕಾರ ಹಾಕಿಕೊಂಡಿದೆ. ರಷ್ಯದ ಜತೆಗೆ ಸಮರ ತೆರೆದುಕೊಂಡರೆ ತನ್ನ ಸೇನೆಯಲ್ಲಿ ಹೆಚ್ಚು ಜನರಿರಬೇಕೆಂಬ ಅಪೇಕ್ಷೆ ಜರ್ಮನಿಯದ್ದು. 

ಪರೋಕ್ಷ ಸಮರ, ಆರ್ಥಿಕ ಹಣಾಹಣಿ ಮಟ್ಟದಲ್ಲೇ ಹುಟ್ಟಿಕೊಂಡ ಎರಡನೇ ವಿಶ್ವಯುದ್ಧವು ಕೊನೆಗೆ ಅನೂಹ್ಯ ತಿರುವುಗಳನ್ನು ತೆಗೆದುಕೊಂಡಿದ್ದನ್ನು ಮೇಲೆ ವಿವರಿಸಲಾಗಿದೆಯಷ್ಟೆ. ರಷ್ಯ-ಚೀನ-ಇರಾನುಗಳ ವಿರುದ್ಧದ ಪಾಶ್ಚಾತ್ಯರ ಈಗಿನ ತಿಕ್ಕಾಟಗಳು ಸಹ ಇತಿಹಾಸದ ಪುನರಾವರ್ತನೆಯತ್ತ ನಮ್ಮನ್ನು ಕರೆದೊಯ್ಯುತ್ತಿವೆಯೇ ಎನ್ನುವುದು ಈಗ ಬಲವಾಗುತ್ತಿರುವ ಶಂಕೆ!

-ಚೈತನ್ಯ ಹೆಗಡೆ

cchegde@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com