
ಭಾರತವು 100 ಟನ್ ಬಂಗಾರವನ್ನು ಲಂಡನ್ನಿನ ಬ್ಯಾಂಕ್ ಆಫ್ ಇಂಡಿಯಾದಿಂದ ಹಿಂದಕ್ಕೆ ತರಿಸಿಕೊಂಡಿತೆಂಬ ಸುದ್ದಿ ಇತ್ತೀಚೆಗೆ ಮಾಧ್ಯಮದಲ್ಲಿ ವರದಿಯಾದಾಗಿನಿಂದ ಆ ಬಗ್ಗೆ ಹಲವು ಚಕಿತ ಚರ್ಚೆಗಳು ಮುನ್ನೆಲೆಗೆ ಬರುತ್ತಿವೆ. ಕೆಲವೆಡೆಗಳಲ್ಲಿ ಭಾರತವು ಅದ್ಯಾವುದೋ ಸಾಲವನ್ನು ಈಗ ತೀರಿಸಿ ಬಂಗಾರ ಬಿಡಿಸಿಕೊಂಡು ಬಂತು ಎಂಬಂಥ ಭಾವನೆಯನ್ನೂ ಬಿತ್ತಲಾಗುತ್ತಿದೆ. ಅದೇನೂ ಸತ್ಯವಲ್ಲ.
ಬಹಳ ಮುಖ್ಯವಾಗಿ ಎರಡು ಅಂಶಗಳನ್ನು ಈ ವಿದ್ಯಮಾನ ಸಾರುತ್ತಿದೆ. ಮೊದಲನೆಯದು, ಆಫ್ ಕೋರ್ಸ್, ಭಾರತ ತನ್ನ ಮೇಲೆ ತಾನು ಹೊಂದಿರುವ ವಿಶ್ವಾಸವು ವೃದ್ಧಿಯಾಗಿರುವುದರ ಸೂಚಕ. ತನ್ನ ಬಂಗಾರವನ್ನು ತನ್ನದೇ ತಿಜೋರಿಯಲ್ಲಿ ರಕ್ಷಿಸಿಕೊಳ್ಳುವ ಸಾಮರ್ಥ್ಯ ತನಗಿದೆ ಎಂದು ಜಗತ್ತಿಗೆ ಸಾರುತ್ತಿರುವಂಥದ್ದು. ಎರಡನೆಯದು, ಜಿಯೊಪಾಲಿಟಿಕ್ಸ್ ಸೂಕ್ಷ್ಮದಲ್ಲಿ ತಾನು ಯಾರ ಮೇಲೂ ನಿರ್ಭರವಾಗುತ್ತಿಲ್ಲ ಎಂಬ ನಡೆ ಇಟ್ಟಿರುವ ಭಾರತ ಆ ಮೂಲಕ ಪಾಶ್ಚಾತ್ಯರ ಕುಗ್ಗುತ್ತಿರುವ ಜಾಗತಿಕ ಬಲದ ಬಗ್ಗೆ ಪರೋಕ್ಷ ದೃಢೀಕರಣವನ್ನೂ ಕೊಡುತ್ತಿದೆ ಎಂಬುದನ್ನು ಈ ವಿದ್ಯಮಾನ ಸಾರಿದೆ. ಈ ಪೈಕಿ ಮೊದಲನೇ ಅಂಶವನ್ನು ಸಾಕಷ್ಟು ವಿಶ್ಲೇಷಕರು ಹೇಳಿದ್ದಾರಾದರೂ ಜಿಯೊಪಾಲಿಟಿಕ್ಸ್ ನಿರ್ವಹಣೆಯಲ್ಲಿ ಭಾರತವು ಈ ವಿಚಾರದಲ್ಲಿ ಲಂಡನ್ನಿನಿಂದ ವಿಮುಖವಾಗುವುದಕ್ಕೆ ಇರಬಹುದಾಗಿರುವ ಆಯಾಮವೊಂದರ ಬಗ್ಗೆ ಅಷ್ಟೇನೂ ಚರ್ಚೆ ಆಗಿಲ್ಲ. ಅದನ್ನು ಈ ಅಂಕಣದಲ್ಲಿ ಗಮನಿಸೋಣ. ಅದಕ್ಕೂ ಮೊದಲೂ ಭಾರತವು ಬಂಗಾರವನ್ನು ಅಲ್ಲೇಕ್ಕಿಟ್ಟಿತ್ತು ಎಂಬುದರ ಬಗ್ಗೆ ಸ್ಪಷ್ಟತೆ ತಂದುಕೊಳ್ಳೋಣ.
ನಿಜ. ಲಂಡನ್ನಿನಲ್ಲಿರುವ ಬ್ಯಾಂಕ್ ಆಫ್ ಇಂಗ್ಲೆಂಡಿನಲ್ಲಿ ಭಾರತವು ಚಿನ್ನವನ್ನು ಇಡುವುದಕ್ಕೆ ಪ್ರಾರಂಭಿಸಿದ್ದು 1990-91ರ ಆರ್ಥಿಕ ಸಂಕಷ್ಟದಲ್ಲಿ. ಅಗತ್ಯ ಆಮದು ಮಾಡಿಕೊಳ್ಳುವುದಕ್ಕೂ ದೇಶದ ಬಳಿ ಡಾಲರ್ ಸಂಗ್ರಹ ಇಲ್ಲದಿದ್ದಾಗ ಅಡವಿಟ್ಟಿದ್ದ ಬಂಗಾರವದು. ಅವತ್ತು 46.91 ಟನ್ ಬಂಗಾರವನ್ನು ಅಡವಿಟ್ಟು 405 ಮಿಲಿಯನ್ ಡಾಲರುಗಳ ಸಾಲ ತರಲಾಗಿತ್ತು. ಕಾಲಾಂತರದಲ್ಲಿ ಆ ಸಾಲ ತೀರಿದೆಯಾದ್ದರಿಂದ, ಇವತ್ತಿಗೆ ವಾಪಸು ತಂದಿರುವ 100 ಟನ್ ಬಂಗಾರವು ಅದರ ಭಾಗವೇನಲ್ಲ. ಆದರೆ, ಬ್ಯಾಂಕ್ ಆಫ್ ಇಂಗ್ಲೆಂಡಿನಲ್ಲಿ ಬಂಗಾರದ ಗಟ್ಟಿಗಳನ್ನು ಸಂರಕ್ಷಣೆಗೆ ಅಂತ ಇಡುವುದು ಭಾರತ ಸೇರಿದಂತೆ ಹಲವು ದೇಶಗಳು ಅನುಸರಿಸುವ ಕ್ರಮ. ಈ ಸಂರಕ್ಷಣೆಗೆ ಹಣ ತೆರಬೇಕು. ಮಾರ್ಚ್ 2024ಕ್ಕೆ ಲಭ್ಯವಿರುವ ಅಂಕಿಅಂಶದಂತೆ ಆರ್ ಬಿ ಐ ಬಳಿ 822.10 ಮೆಟ್ರಿಕ್ ಟನ್ ಬಂಗಾರವಿದೆ. ಆ ಪೈಕಿ 408.31 ಮೆಟ್ರಿಕ್ ಟನ್ ಬಂಗಾರವನ್ನು ಮಾತ್ರವೇ ದೇಶದೊಳಗಿನ ತಿಜೋರಿಯಲ್ಲಿ ಸಂರಕ್ಷಿಸಿ ಇಡಲಾಗಿದೆ.
ಅದು ದೇಶವಾಗಲೀ, ವ್ಯಕ್ತಿಯಾಗಲೀ ಬಂಗಾರವನ್ನು ಹೀಗೆ ಸಂಗ್ರಹಿಸಿಟ್ಟುಕೊಳ್ಳುವುದು ಆಪದ್ಧನ ಎಂಬರ್ಥದಲ್ಲಿ. ಹೀಗಾಗಿ, ಕಳೆದೊಂದು ದಶಕದಲ್ಲಿ ಷೇರು-ಬಾಂಡ್ ಮಾರುಕಟ್ಟೆಗಳಲ್ಲಿ ಹೂಡಿದ್ದಕ್ಕೆ ಎಷ್ಟು ಪ್ರತಿಫಲ ಬಂತು ಮತ್ತು ಬಂಗಾರದ ಮೌಲ್ಯ ಎಷ್ಟು ಹೆಚ್ಚು-ಕಮ್ಮಿ ಆಯಿತು ಎಂಬೆಲ್ಲ ಹೋಲಿಕೆಗಳನ್ನು ಇಲ್ಲಿ ತರಲಾಗುವುದಿಲ್ಲ. ಏಕೆಂದರೆ ಈ ಎಲ್ಲ ಅಸೆಟ್ ಕ್ಲಾಸುಗಳು ಬಿದ್ದಾಗಲೂ ಮೌಲ್ಯ ಇಟ್ಟುಕೊಳ್ಳುವುದು ಬಂಗಾರ ಎಂಬ ನಂಬಿಕೆಯೇ ಅದಕ್ಕಿರುವ ಮೌಲ್ಯ. ಹೀಗಾಗಿ ಜಗತ್ತು ಯುದ್ಧ-ತಿಕ್ಕಾಟಗಳ ಹಂತಕ್ಕೆ ಹೋದಾಗಲೆಲ್ಲ ಡಾಲರು, ಮಾರುಕಟ್ಟೆ ಮೌಲ್ಯ ಇವೆಲ್ಲ ನಂಬಲಾಗದ ಸಂಗತಿಗಳಾಗಿ ಇತಿಹಾಸದ ಉದ್ದಕ್ಕೂ ತನ್ನ ಭೌತಿಕ ಮೆರುಗನ್ನು ಇರಿಸಿಕೊಂಡುಬಂದಿರುವ ಬಂಗಾರವೇ ಮುಖ್ಯಸ್ಥಾನಕ್ಕೆ ಬರುತ್ತದೆ. ರಷ್ಯ-ಉಕ್ರೇನ್ ಸಂಘರ್ಷ, ಅಮೆರಿಕ ಮತ್ತು ಚೀನಾಗಳ ನಡುವಿನ ವ್ಯಾಪಾರ ಹಣಾಹಣಿ ಇಂಥವೆಲ್ಲ ಕಾರಣಗಳಿಂದ ಕಳೆದ ಕೆಲವು ವರ್ಷಗಳಿಂದ ಚೀನಾ ಸೇರಿದಂತೆ ಎಲ್ಲ ದೇಶಗಳೂ ತಮ್ಮಲ್ಲಿನ ಬಂಗಾರದ ಸಂಗ್ರಹ ಹೆಚ್ಚಿಸಿಕೊಳ್ಳುತ್ತಿವೆ.
ಇವೆಲ್ಲ ಸರಿ. ಆದರೆ ಲಂಡನ್ನಿನಲ್ಲಿರುವ ಬ್ಯಾಂಕ್ ಆಫ್ ಇಂಗ್ಲೆಂಡ್ (Bank of England) ಎಂಬ ಜಾಗವೇಕೆ ಭಾರತವೂ ಸೇರಿದಂತೆ ಇತರ ದೇಶಗಳ ಬಂಗಾರದ ಲಾಕರ್ ಆಗಿದೆ? ಏಕೆಂದರೆ ಲಂಡನ್ ಎಂಬುದು ಐತಿಹಾಸಿಕವಾಗಿ ಜಾಗತಿಕ ಬಂಗಾರದ ದೊಡ್ಡ ಮಾರುಕಟ್ಟೆ. ದೇಶೀಯವಾಗಿ ಬಂಗಾರವನ್ನು ದೊಡ್ಡಮಟ್ಟದಲ್ಲಿ ಉತ್ಪಾದಿಸಲಾಗದ ದೇಶಗಳೆಲ್ಲ ಬಂಗಾರ ಖರೀದಿಗೆ ಎಡತಾಕುವುದು ಲಂಡನ್ ಅನ್ನೇ. ಲಂಡನ್ ಗುಡ್ ಡೆಲಿವರಿ ಎಂದು ಪ್ರಚುರವಾಗಿರುವ 12.5 ಕೆಜಿಯ ಬಂಗಾರದ ಗಟ್ಟಿಗಳಿಗೆ ವಿಶ್ವಮಾನ್ಯತೆ ಇದೆ. ಹೀಗೆಲ್ಲ ಟನ್ನುಗಳ ಲೆಕ್ಕದಲ್ಲಿ ಬಂಗಾರದ ಗಟ್ಟಿಗಳನ್ನು ಖರೀದಿ ಮಾಡಿದ ನಂತರ ಅದನ್ನು ಮತ್ತೆ ತಮ್ಮ ದೇಶಗಳಿಗೆ ಸಾಗಿಸುವುದು ಯಾರಿಗೇ ಆಗಲಿ ಹೆಚ್ಚು ಅಪಾಯದ ಸಾಧ್ಯತೆ ಇರುವ ಮಾರ್ಗ. ಹಾಗೆಂದೇ ಲಂಡನ್ನಿನ ಜಾಗತಿಕ ಮಾರುಕಟ್ಟೆಯಲ್ಲಿ ಖರೀದಿಸಿದ ಚಿನ್ನವನ್ನು ಅಲ್ಲಿಯೇ ಬ್ಯಾಂಕ್ ಆಫ್ ಇಂಗ್ಲೆಂಡ್ ನಲ್ಲಿ ಇಡುವ ಪರಿಪಾಠ ಬೆಳೆದು ಬಂತು. ಅದಕ್ಕೆ ಭಾರತವೂ ಹೊರತಾಗಿಲ್ಲ.
ಈ ಬ್ಯಾಂಕ್ ಆಫ್ ಇಂಗ್ಲೆಂಡ್ ಇರುವ ತ್ರೆಡ್ ನೀಡಲ್ ಸ್ಟ್ರೀಟ್ (threadneedle street) ಮೇಲೆ ನಡೆದವರೆಲ್ಲ ಹೆಚ್ಚುಕಮ್ಮಿ ಚಿನ್ನದರಾಶಿಯ ಮೇಲೆ ನಡೆಯುತ್ತಿರುವಂತೆ ಎಂದರೆ ಉತ್ಪ್ರೇಕ್ಷೆ ಏನಲ್ಲ. ಏಕೆಂದರೆ ಇವುಗಳ ಆಳದಲ್ಲೆಲ್ಲೋ ಅಬೇಧ್ಯವಾದ ಬಂಗಾರದ ವಾಲ್ಟ್ ಗಳು (Gold vaults) ನಿರ್ಮಾಣವಾಗಿವೆ. 5,000ಕ್ಕೂ ಮಿಕ್ಕಿದ ಮೆಟ್ರಿಕ್ ಟನ್ನುಗಳ ಪರಿಮಾಣದ ಬಂಗಾರಗಳು ಒಟ್ಟೂ 8 ವಾಲ್ಟುಗಳಲ್ಲಿ ಸಂಗ್ರಹವಾಗಿವೆ. ಜಗತ್ತಿನ 30ಕ್ಕೂ ಹೆಚ್ಚು ಬೇರೆ ಬೇರೆ ದೇಶಗಳು ಹಾಗೂ ಬ್ಯಾಂಕುಗಳಿಗೆ ಸೇರಿದ ಬಂಗಾರದ ಗಟ್ಟಿಗಳಿಲ್ಲಿವೆ. 1930ರಲ್ಲಿ ಈ ವಾಲ್ಟುಗಳನ್ನು ಕಟ್ಟಲಾಯಿತು. ಎರಡನೇ ವಿಶ್ವಯುದ್ಧದ ಸಂದರ್ಭದಲ್ಲಿ ಇಂಗ್ಲೆಂಡ್ ಏನಾದರೂ ವೈರಿಗಳ ವಶವಾದರೆ ಎಚ್ಚರಿಕೆಗಿರಲಿ ಎಂದು ಇಲ್ಲಿಟ್ಟಿದ್ದ ಬಂಗಾರದ ಕೆಲಭಾಗವನ್ನು ಕೆನಡಾಕ್ಕೆ ಸಾಗಿಸಿ ಆ ಖಾಲಿ ವಾಲ್ಟುಗಳನ್ನು ಬೇರೆ ಉದ್ದೇಶಕ್ಕೆ ಬಳಸಿರುವ ಇತಿಹಾಸವೂ ಇದೆ. 1940ರಲ್ಲಿ ಕೆಲಕಾಲ ಇದನ್ನು ಬಾಂಬ್ ಶೆಲ್ಟರ್ ಆಗಿ ಬಳಸಲಾಯಿತಾದರೂ, 1945ರಿಂದೀಚೆಗೆ ನಿರಂತರವಾಗಿ ಬಂಗಾರದ ಸುರಕ್ಷಿತ ತಿಜೋರಿಯನ್ನಾಗಿಯಷ್ಟೇ ಇದನ್ನು ಬಳಸಲಾಗುತ್ತಿದೆ.
ಇಷ್ಟು ಕಾಲದವರೆಗೂ ಲಂಡನ್ ಈ ವಾಲ್ಟುಗಳ ವಿಷಯದಲ್ಲಿ ಸುರಕ್ಷತೆಗೆ ಯಾವುದೇ ಕುತ್ತಾಗದಂತೆ ನೋಡಿಕೊಂಡಿದೆ. ಇಂಥದೊಂದು ವಿಶ್ವಾಸಾರ್ಹತೆಯೇ ಅಲ್ಲಿ ಆಪದ್ಧನವೆಂಬಂತಿರುವ ಬಂಗಾರವನ್ನು ಇಟ್ಟು ಅದಕ್ಕೆ ಬಾಡಿಗೆಯನ್ನೂ ಕೊಡುವುದಕ್ಕೆ ಜಗತ್ತಿನ ಹಲವು ರಾಷ್ಟ್ರಗಳನ್ನು ಪ್ರೇರೇಪಿಸಿತ್ತು. ಆದರೆ, ದೀರ್ಘಾವಧಿಯಲ್ಲಿ ಲಂಡನ್ನಿನ ರಾಜಕೀಯ ಸ್ಥಿತಿಗತಿ ಬದಲಾಗಬಹುದಾ, ಮತ್ತದು ಅಲ್ಲಿನ ಆರ್ಥಿಕ ನಿರಾಳತೆಗೆ ಸವಾಲನ್ನೇನಾದರೂ ಒಡ್ಡೀತಾ ಎಂಬ ಅನುಮಾನಕ್ಕೆ ಎಡೆ ಮಾಡುವ ಕೆಲವು ಬೆಳವಣಿಗೆಗಳಿವೆ.
2010ರಲ್ಲಿ ಲಂಡನ್ ಮೇಯರ್ ವ್ಯವಸ್ಥೆಯನ್ನು ಹೊಂದಿತು. ಸಂಪನ್ಮೂಲ ಮತ್ತು ನಿರ್ಧಾರ ತೆಗೆದುಕೊಳ್ಳುವ ದೃಷ್ಟಿಯಿಂದ ಲಂಡನ್ನಿನ ಮೇಯರಿಗೆ ಬಹಳ ದೊಡ್ಡ ಬಲವಿದೆ. ಇಂಗ್ಲೆಂಡ್ ಸಂಸತ್ತು ಮಾಡಿದ ಕಾನೂನೇ ಅಂತಿಮ ಎಂಬುದು ಹೌದಾದರೂ ಲಂಡನ್ನಿನಂಥ ಒಂದು ಜಾಗತಿಕ ಪ್ರಾಮುಖ್ಯದ ಆರ್ಥಿಕ ಕೇಂದ್ರದಲ್ಲಿ ಮೇಯರ್ ಅಧಿಕಾರವ್ಯಾಪ್ತಿ ಅತಿವಿಸ್ತಾರವಾಗಿದೆ. ಉದಾಹರಣೆಗೆ, ಲಂಡನ್ನಿನಲ್ಲಿ ಪೊಲೀಸ್ ವ್ಯವಸ್ಥೆ ಬರುವುದು ಮೇಯರ್ ಅಡಿಗೆ. ಸುಮಾರು 20 ಬಿಲಿಯನ್ ಪೌಂಡ್ ಮೌಲ್ಯದ ಬಜೆಟ್ ಇರುತ್ತದೆ ಮೇಯರ್ ಎದುರಿಗೆ. ಹೀಗಾಗಿ, ಇಂಗ್ಲೆಂಡಿನಲ್ಲಿರುವ ಸರ್ಕಾರವು ಜಗತ್ತಿಗೆ ಏನೆಲ್ಲ ವಿಶ್ವಾಸ ಮತ್ತು ವಾಗ್ದಾನಗಳನ್ನು ಕೊಡುತ್ತದೋ ಅವನ್ನೆಲ್ಲ ಲಂಡನ್ ಈಡೇರಿಸಿಯೇಬಿಡುತ್ತದೆ ಎಂದುಕೊಳ್ಳುವಂತಿಲ್ಲ.
ಇದಕ್ಕೊಂದು ಉದಾಹರಣೆ ಕೊಡಬೇಕೆಂದರೆ, 2018ರಲ್ಲಿ ಅವತ್ತಿನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬ್ರಿಟನ್ನಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷರನ್ನು ಅಣಕಿಸುವ ಬೇಬಿ ಟ್ರಂಪ್ ಎಂಬ ಬಲೂನುಗಳನ್ನು ಆಗಸದೆತ್ತರಕ್ಕೆ ನಗರಗಳಲ್ಲಿ ಹಾರಿಸುವುದಕ್ಕೆ ಟ್ರಂಪ್ ವಿರೋಧಿಗಳು ಮುಂದಾದರು. ರಾಜಕೀಯದ ಒಲವು-ನಿಲವುಗಳೇನೇ ಇದ್ದಿರಲಿ, ಆದರೆ ಟ್ರಂಪ್ ಅವತ್ತಿಗೆ ಇಂಗ್ಲೆಂಡಿನ ಅತಿಥಿ ತಾನೇ? ಆದರೆ ಲಂಡನ್ನಿನ ಮೇಯರ್ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ಇಂಥ ಕೆಲಸ ಮಾಡುವುದಕ್ಕೆ ಅನುಮತಿ ಕೊಟ್ಟರು!
ಲಂಡನ್ ನಿಧಾನಕ್ಕೆ ಲಂಡನಿಸ್ತಾನ ಆಗುತ್ತಿದೆಯಾ, ಇಸ್ಲಾಮೀಕರಣವು ಅತಿಯಾಗುತ್ತಿದೆಯಾ ಎಂಬೆಲ್ಲ ಚರ್ಚೆಗಳು ಆಗೀಗ ಸಾಮಾಜಿಕ ಮಾಧ್ಯಮದಲ್ಲಿ ಆಗುತ್ತಿರುತ್ತವೆ. ಹಾಗೇನಿಲ್ಲ ಇವೆಲ್ಲ ಇಸ್ಲಾಮೊಫೋಬಿಯಾ ಅಷ್ಟೆ ಅಂತ ಸಮರ್ಥಿಸಿಕೊಳ್ಳುವವರೂ ಇದ್ದಾರೆ. ಅದೇನೇ ಇರಲಿ, ಲಂಡನ್ನಿನಲ್ಲಿ ಶೇ. 15ರಷ್ಟು ಮುಸ್ಲಿಂ ಜನಸಂಖ್ಯೆ ಇದೆ ಹಾಗೂ 2016ರಿಂದ ಸಾದಿಕ್ ಖಾನ್ ಮೇಯರ್ ಆಗಿದ್ದಾರೆ ಎಂಬುದಂತೂ ವಾಸ್ತವ. 2023ರಲ್ಲಿ ಮೇಯರ್ ಸಾದಿಕ್ ಖಾನ್, “ಬಿಳಿಯರ ಕುಟುಂಬಗಳು ನಿಜವಾದ ಲಂಡನಿಗರನ್ನು ಪ್ರತಿನಿಧಿಸುವುದಿಲ್ಲ” ಅಂತ ಹೇಳಿದ್ದು ವಿವಾದಕ್ಕೆ ಕಾರಣವಾಗಿತ್ತು. ಇಸ್ಲಾಮಿಗೆ ವಿರುದ್ಧ ಧಿರಿಸು ಹಾಕಿದ್ದಾರೆಂದು ಆರೋಪಿಸಿ “ಮುಸ್ಲಿಂ ಪೆಟ್ರೊಲ್” ಎಂಬ ಗುಂಪು 2013ರಲ್ಲಿ ಲಂಡನ್ನಿನಲ್ಲಿ ಸ್ಕರ್ಟ್ ಹಾಕಿದ್ದ ಹುಡುಗಿಯರಿಗೆ ಕಿರುಕುಳ ನೀಡಿತ್ತು. ಲಂಡನ್ ಒಂದೇ ಎಂದಲ್ಲ, ಇಂಗ್ಲೆಂಡಿನ ಹಲವು ಪ್ರದೇಶಗಳಲ್ಲಿ ಶರಿಯಾ ಕೋರ್ಟುಗಳು ಸಕ್ರಿಯವಾಗಿದ್ದು, ಮುಸ್ಲಿಮರು ಇಂಗ್ಲೆಂಡ್ ಕಾಯ್ದೆಯ ಮೂಲಕ ನಡೆಯುವ ಕೋರ್ಟುಗಳಿಗೆ ಬದಲಾಗಿ ಶರಿಯಾ ಮೂಲಕವೇ ನ್ಯಾಯ ಪಡೆದುಕೊಳ್ಳುವುದಕ್ಕೆ ಹೋಗುತ್ತಿದ್ದಾರೆ ಎಂದು ಬಿಬಿಸಿ 2012ರಲ್ಲೇ ವರದಿ ಮಾಡಿತ್ತು. ಹೀಗಾಗಿ ಮುಂದೊಮ್ಮೆ ಲಂಡನ್ ಅರಾಜಕತೆಗೆ ಅಥವಾ ಇನ್ಯಾವುದೇ ಬಗೆಯ ಒತ್ತಡಗಳಿಗೆ ಸಿಲುಕಲಾರದು ಎಂದು ಹೇಳಲಾಗದ ಸ್ಥಿತಿ ಇದೆ.
ಲಂಡನ್ನಿನಿಂದ ತಾನೇಕೆ ಬಂಗಾರ ಎತ್ತಿಕೊಂಡು ಬಂದೆ ಎಂಬ ಬಗ್ಗೆ ಆರ್ ಬಿಐ ಏನೂ ಅಧಿಕೃತವಾಗಿ ಯಾವುದೇ ವಿವರ ನೀಡಿಲ್ಲ. ಆದರೆ ಲಭ್ಯ ವಿವರಗಳನ್ನೆಲ್ಲ ಜೋಡಿಸಿ ನೋಡಿದಾಗ ಲಂಡನ್ನಿನ ಬದಲಾಗುತ್ತಿರುವ ಜನಸಂಖ್ಯಾರಚನೆ ಮತ್ತದು ನಿರ್ಧರಿಸಲಿರುವ ಆ ನಗರದ ರಾಜಕೀಯ ಭವಿಷ್ಯ ಸಹ ಭಾರತವು ತನ್ನ ಬಂಗಾರವನ್ನು ತನ್ನಲ್ಲೇ ಸುರಕ್ಷಿತಗೊಳಿಸಿಕೊಳ್ಳುವ ನಿರ್ಧಾರಕ್ಕೆ ಬರುವುದಕ್ಕೆ ಪ್ರೇರೇಪಣೆ ಒದಗಿಸಿದ್ದಿರಬಹುದು.
- ಚೈತನ್ಯ ಹೆಗಡೆ
cchegde@gmail.com
Advertisement