ಷೇರುಮಾರುಕಟ್ಟೆ ಕುಸಿದಾಗ ಹೂಡಿಕೆದಾರನು ಏನು ಮಾಡಬೇಕು? (ಹಣಕ್ಲಾಸು)

ಬದುಕು ಎಂದರೆ ಅನಿಶ್ಚಿತತೆ ಎನ್ನುವ ಮಟ್ಟಕ್ಕೆ ಬದುಕು ಬದಲಾಗಿದೆ. ಇವತ್ತು ಖುಷಿಯಿಂದ ಕೊಂಡ ಕಾರು ಅಥವಾ ಬೈಕು ವಾರದಲ್ಲಿ ಮಾರುವವರನ್ನು ಕಂಡಿದ್ದೇನೆ. (ಹಣಕ್ಲಾಸು-416)
Share market crash
ಷೇರುಮಾರುಕಟ್ಟೆ ಕುಸಿತonline desk

ಬದುಕು ಎಂದರೆ ಅನಿಶ್ಚಿತತೆ ಎನ್ನುವ ಮಟ್ಟಕ್ಕೆ ಬದುಕು ಬದಲಾಗಿದೆ. ಇವತ್ತು ಖುಷಿಯಿಂದ ಕೊಂಡ ಕಾರು ಅಥವಾ ಬೈಕು ವಾರದಲ್ಲಿ ಮಾರುವವರನ್ನು ಕಂಡಿದ್ದೇನೆ.

ಮನೆ ಕಟ್ಟಿ ಗೃಹ ಪ್ರವೇಶ ಮಾಡಿ ಮನೆಗೆ ಶಿಫ್ಟ್ ಆಗುವ ಮೊದಲೇ ಅದನ್ನು ಮಾರಾಟಕ್ಕಿಟ್ಟ ಜನರನ್ನೂ ಕೂಡ ನಾನು ಬಲ್ಲೆ. ಎಲ್ಲಾ ಸಮಯದಲ್ಲೂ ಕೆಟ್ಟ ಕಾರಣಕ್ಕೆ ಹೀಗಾಗಬೇಕೆಂದಿಲ್ಲ. ವಿದೇಶದಿಂದ ಉತ್ತಮ ಅವಕಾಶ ಬಂದು ಭಾರತದಲ್ಲಿ ಕಟ್ಟಿಕೊಂಡಿದ್ದ ಬದುಕನ್ನು ಬಿಟ್ಟು ಹೊರಟವರನ್ನು ಕೂಡ ಕಂಡಿದ್ದೇನೆ. ಈ ಕ್ಷಣಕ್ಕೆ ಅಷ್ಟೇ ನಾವು ತೆಗೆದುಕೊಂಡ ನಿರ್ಧಾರಗಳು ಸರಿ. ನಾಳೆ? ನಾಳೆಯನ್ನು ಕಂಡವರಿಲ್ಲ. ನಾಳೆ ಹೇಗೆ ವ್ಯವಹರಿಸುತ್ತದೆ? ಯಾರಿಗೂ ಗೊತ್ತಿಲ್ಲ. ಇದಿಷ್ಟೂ ಸಾಮಾನ್ಯ ಮಾತಾಯ್ತು.

ಇನ್ನು ಷೇರು ಮಾರುಕಟ್ಟೆಯ ವಿಷಯಕ್ಕೆ ಬಂದರೆ ಅಲ್ಲಿನ ವಿಷಯ ಕೂಡ ತೀರಾ ವಿಭಿನ್ನವೇನಲ್ಲ. ಅಸ್ಥಿರತೆ ಎನ್ನುವುದು ಇಂದು ಜಾಗತಿಕ ವಿಷಯ. ನನ್ನ ಹಲವಾರು ಲೇಖನದಲ್ಲಿ ಬರೆದಿರುವಂತೆ ಭಾರತದ ಷೇರು ಮಾರುಕಟ್ಟೆ ಸ್ವರ್ಣಯುಗದಲ್ಲಿದೆ. ಇಲ್ಲಿನ ಗಳಿಕೆ ಹಣದುಬ್ಬರವನ್ನು ಮೀರಿ ಸಂಪತ್ತು ಸೃಷ್ಟಿ ಮಾಡಿಕೊಡುತ್ತಿದೆ. ಇಂತಹ ಸಮಯದಲ್ಲಿ ಆಗಲೇ ಒಡಕಿನ ಮಾತುಗಳು ಕೂಡ ಕೇಳಿಬರುತ್ತಿದೆ. ಅದೇನೆಂದರೆ ಭಾರತೀಯ ಷೇರು ಮಾರುಕಟ್ಟೆ 2024ರ ಅಂತ್ಯದಲ್ಲಿ ಅಥವಾ 2025ರ ಆರಂಭದಲ್ಲಿ ಕುಸಿತ ಕಾಣಲಿದೆ ಎನ್ನುವುದು ಆ ಋಣಾತ್ಮಕ ಮಾತು. ಇದರಲ್ಲಿ ಹುರುಳಿದೆಯೇ? ಹಾಗೊಮ್ಮೆ Share Market ಕುಸಿದರೆ ನಾವೇನು ಮಾಡಬೇಕು ಎನ್ನುವುದರ ಬಗ್ಗೆ ಒಂದಷ್ಟು ಅರಿತುಕೊಳ್ಳುವ ಪ್ರಯತ್ನವನ್ನು ಮಾಡೋಣ.

ಷೇರು ಮಾರುಕಟ್ಟೆ ಕುಸಿತ ಕಾಣಲಿದೆ ಎನ್ನುವ ಮಾತಿನಲ್ಲಿ ಹುರುಳಿದೆಯೇ?

ಮಾರುಕಟ್ಟೆಯಲ್ಲಿ ಸಣ್ಣಪುಟ್ಟ ತಿದ್ದುಪಡಿಗಳು ಅಥವಾ ಕರೆಕ್ಷನ್ ಆಗುತ್ತಲೆ ಇರುತ್ತದೆ. ಅಂದರೆ ಷೇರಿನ ಬೆಲೆ ಅದರ ಆಂತರಿಕ ಮೌಲ್ಯ (ಇಂಟ್ರಿನ್ಸಿಕ್ ವ್ಯಾಲ್ಯೂ)ಕ್ಕಿಂತ ಹೆಚ್ಚಾಗಿರುತ್ತದೆ. ಮಾರುಕಟ್ಟೆಯ ಬೇಡಿಕೆ ಇತ್ಯಾದಿ ಕಾರಣಗಳು ಈ ರೀತಿಯ ಏರಿಕೆಗೆ ದೇಣಿಗೆ ನೀಡಿರುತ್ತವೆ. ಮಾರುಕಟ್ಟೆಯಲ್ಲಿ ಇಂತಹ ನೈಜವಲ್ಲದ ಏರಿಕೆಯನ್ನು ಆಗಾಗ್ಗೆ ತಿದ್ದುಕೊಳ್ಳುವ ಕ್ರಿಯೆಗೆ ಕರೆಕ್ಷನ್ಸ್ ಎನ್ನಲಾಗುತ್ತದೆ. ಹೀಗಾಗಿ ಮಾರುಕಟ್ಟೆ ಕುಸಿತ ಎನ್ನುವುದು ಎಲ್ಲಾ ಷೇರುಗಳ, ಅಥವಾ ವಲಯದಲ್ಲಿ ಆಗುತ್ತದೆ ಎಂದು ಬಾರದು. ಆದರೂ ಜಾಗತಿಕ ಕಾರಣಗಳಿಂದ ಮಾರುಕಟ್ಟೆ ಕುಸಿಯುವ ಸಂಭಾವ್ಯತೆಯನ್ನು ತಳ್ಳಿ ಹಾಕಲು ಸಾಧ್ಯವಿಲ್ಲ. ಅಮೇರಿಕಾ ಮತ್ತು ಜಪಾನ್ ದೇಶಗಳು ಕ್ವಾನ್ಟಿಟೇಟಿವ್ ಈಸಿಂಗ್ ಹೆಸರಿನಲ್ಲಿ ಹಣವನ್ನು ಮುದ್ರಿಸಿ ಜನರ ಕೈಯಲ್ಲಿಟ್ಟ ಕಾರಣ ಆ ದೇಶಗಳಲ್ಲಿ ಹಣದ ಹರಿವು ಹೆಚ್ಚಾಗಿದೆ. ಹೆಚ್ಚಾದ ಹಣದ ಹರಿವು ವಸ್ತುಗಳ ಬೆಲೆಯನ್ನು ಇನ್ನಿಲದೆ ಏರುವಂತೆ ಮಾಡಿದೆ. ಹೀಗಾಗಿ ಅಮೆರಿಕಾದ ಷೇರು ಮಾರುಕಟ್ಟೆಯಲ್ಲಿ ಕರೆಕ್ಷನ್ ಆಗುವ ಸಾಧ್ಯತೆ ಬಹಳವಿದೆ. ಮೌಲ್ಯದಲ್ಲಿ ಇರುವ ಭಾರಿ ವ್ಯತ್ಯಾಸ ಕರೆಕ್ಷನ್ ಕುಸಿತದಂತೆ ಕಾಣುವ ಸನ್ನಿವೇಶವನ್ನು ಸೃಷ್ಟಿ ಮಾಡಲಿದೆ. ಅಮೆರಿಕಾದ ಷೇರು ಮಾರುಕಟ್ಟೆ ಕುಸಿತ ಕಂಡರೆ ಭಾರತದ ಷೇರು ಮಾರುಕಟ್ಟೆ ಸಹ ಕುಸಿತವನ್ನು ಕಾಣಲಿದೆ.

Share market crash
ನಾವು ಹೂಡಿಕೆ ಮಾಡಿರುವ stockbroker ಸಂಸ್ಥೆ ಮುಚ್ಚಿ ಹೋದರೆ ಮುಂದೇನು? (ಹಣಕ್ಲಾಸು)

ಭಾರತದ ಷೇರು ಮಾರುಕಟ್ಟೆ ಕುಸಿದರೆ ಹೂಡಿಕೆದಾರ ಏನು ಮಾಡಬೇಕು?

ಗಮನಿಸಿ ಹಾಗೊಮ್ಮೆ ಷೇರು ಮಾರುಕಟ್ಟೆ ಕುಸಿದರೆ, ಟ್ರೇಡರ್ ಆದವರು ಅಂದಿನ ಲಾಭ ಅಥವಾ ನಷ್ಟವನ್ನು ಭರಿಸಿ ಮುಂದಕ್ಕೆ ಹೋಗಬೇಕು. ಇನ್ನು ಹೂಡಿಕೆದಾರರ ಬಳಿ ಒಂದಷ್ಟು ಆಯ್ಕೆಗಳಿಗೆ.

  • ಷೇರು ಮಾರುಕಟ್ಟೆ ಕುಸಿದು ಹೂಡಿಕೆದಾರರ ಮೌಲ್ಯ 20 ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯವನ್ನು ಕಳೆದುಕೊಂಡರೆ, ಆಗ ಇನ್ನಷ್ಟು ಹಣವನ್ನು ಷೇರು ಮಾರುಕಟ್ಟೆಗೆ ಹೂಡುವುದು ಜಾಣತನ. ನಾವು ಕೊಂಡ ಷೇರುಗಳ ಫಂಡಮೆಂಟಲ್ ಸರಿಯಾಗಿದ್ದರೆ ಹೆದರುವ ಅವಶ್ಯಕತೆ ಖಂಡಿತ ಇಲ್ಲ. ಇನ್ನಷ್ಟು ಹಣವನ್ನು ಅಲ್ಲೇ ಹೂಡಿಕೆ ಮಾಡುವುದರಿಂದ ನಷ್ಟವನ್ನು ಕಡಿಮೆ ಮಾಡಿಕೊಂಡಂತೆ ಆಗುತ್ತದೆ. ಇದಕ್ಕೆ ಅವ್ರೇಜಿಂಗ್ ಎನ್ನಲಾಗುತ್ತದೆ. ಉದಾಹರಣೆ ನೋಡೋಣ ರಾಮ ಸಂಸ್ಥೆಯ 1000 ಷೇರಿನ ಮೌಲ್ಯ 100 ರೂಪಾಯಿ ಇದ್ದದ್ದು ಮಾರುಕಟ್ಟೆಯ ಕುಸಿತದ ಕಾರಣ 80 ಕ್ಕೆ ಇಳಿದಿದೆ ಎಂದುಕೊಳ್ಳೋಣ. ಅಂದರೆ 1 ಲಕ್ಷ ಮೌಲ್ಯ ಇಂದಿಗೆ 80 ಸಾವಿರಕ್ಕೆ ಕುಸಿದಿದೆ. ಈಗ ಇನ್ನೊಂದು ಸಾವಿರ ಷೇರುಗಳನ್ನು ಕೊಂಡರೆ ಆಗ ಒಟ್ಟಾರೆ ಹೂಡಿಕೆ ಒಂದು ಲಕ್ಷ ಎಂಬತ್ತು ಸಾವಿರವಾಯ್ತು. ಮಾರುಕಟ್ಟೆ ಒಂದೆರೆಡು ತಿಂಗಳಲ್ಲಿ ಕೆಲವೊಮ್ಮೆ ವಾರಗಳಲ್ಲಿ ಮರಳಿ ತನ್ನ ಹಿಂದಿನ ಬೆಲೆಯನ್ನು ಪಡೆದುಕೊಳ್ಳುತ್ತವೆ, ಮತ್ತು ಹೊಸ ಏರಿಕೆಯನ್ನು ಸಹ ಕಾಣುತ್ತವೆ. ಹೀಗಾಗಿ ಕುಸಿತವನ್ನು ಹೂಡಿಕೆಗೆ ಸಿಕ್ಕಿದ ಸದಾವಕಾಶ ಎಂದು ಪರಿಗಣಿಸಬೇಕು. ಇದು ಎಲ್ಲಾ ಹೂಡಿಕೆದಾರರಿಗೆ ಆಗುವಂಥದ್ದಲ್ಲ. ಹಣವಿದ್ದ ಹೂಡಿಕೆದಾರರು ಇದನ್ನು ಮಾಡಬಹುದು. ಈ ಕಾರಣದಿಂದ ಹಣವುಳ್ಳ ಹೂಡಿಕೆದಾರ ಷೇರು ಮಾರುಕಟ್ಟೆಯಲ್ಲಿ ಹಣ ಕಳೆದುಕೊಳ್ಳುವ ಸಾಧ್ಯತೆ ಕಡಿಮೆ. ಇನ್ನೊಂದು ಅಂಶ ಕಾಯುವುದು. ಮಾರುಕಟ್ಟೆ ಮೇಲೇರುವವರೆಗೆ ಶಾಂತಿಯಿಂದ ಹೂಡಿಕೆಯ ಮೇಲೆ ಕೂರುವುದು ಉತ್ತಮ ಹೂಡಿಕೆದಾರನ ಲಕ್ಷಣ.

  • ಸ್ಟಾಪ್ ಲಾಸ್ ಎಷ್ಟು ಎನ್ನುವ ನಿಖರತೆ ಹೊಂದುವುದು: ಷೇರು ಮಾರುಕಟ್ಟೆ ನಿತ್ಯವೂ ಹಲವು ಸುಳಿವುಗಳನ್ನು ನೀಡುತ್ತಿರುತ್ತದೆ. ಜೊತೆಗೆ ಅಂತರಾಷ್ಟ್ರೀಯ ಬದಲಾವಣೆಗಳನ್ನು ಗಮನಿಸುತ್ತಿದ್ದರೆ ಮಾರುಕಟ್ಟೆ ಕುಸಿತದ ಮುನ್ಸೂಚನೆ ಖಂಡಿತ ಸಿಗುತ್ತದೆ. ಹೀಗಾಗಿ ಮಾರುಕಟ್ಟೆ ಕುಸಿದಾಗ ಹೆಚ್ಚು ಹಣವನ್ನು ಮತ್ತೆ ಮಾರುಕಟ್ಟೆಗೆ ಹಾಕಲು ಹಣವಿಲ್ಲದ ಹೂಡಿಕೆದಾರ ಎಲ್ಲಿಯ ತನಕ ಕುಸಿತವನ್ನು ತಡೆದುಕೊಳ್ಳಲು ಶಕ್ತಿಯಿದೆ ಎನ್ನುವುದನ್ನು ನಿಖರತೆ ಹೊಂದಿರಬೇಕಾಗುತ್ತದ್ದೆ. ಅಂದರೆ ಮೇಲಿನ ಉದಾಹರಣೆಯನ್ನು ತೆಗೆದುಕೊಂಡು ನೋಡೋಣ. ರಾಮ ಸಂಸ್ಥೆಯ ಸಾವಿರ ಷೇರು ಪ್ರತಿ ಶೇರಿಗೆ 100 ರೂಪಾಯಿ ಇದ್ದದ್ದು 96 ರುಪಾಯಿಗೆ ಕುಸಿಯುತ್ತದೆ ಎಂದುಕೊಳ್ಳಿ , ಹೆಚ್ಚು ನಷ್ಟ ತಡೆದುಕೊಳ್ಳಲು ಆಗದವರು ಸ್ಟಾಪ್ ಲಾಸ್ 96 ಎಂದು ನಿಗದಿ ಪಡಿಸಿಕೊಂಡರೆ ಆಗ 4000 ಸಾವಿರ ನಷ್ಟ ಮಾಡಿಕೊಂಡು 96 ಸಾವಿರ ರೂಪಾಯಿ ಪಡೆದು ಹೊರಬರಬೇಕು. ಒಟ್ಟಾರೆ ಕುಸಿತ 20 ರೂಪಾಯಿ ಆಗಿ ಅದೇ ಸಾವಿರ ಷೇರು 80 ಸಾವಿರಕ್ಕೆ ಸಿಗುತ್ತದೆ , ಆಗ ಮತ್ತೆ ಕೊಳ್ಳಬಹುದು. ಕುಸಿತ ಎಂದು ಅಳುವ ಬದಲು ಬುದ್ದಿವಂತಿಕೆಯಿಂದ ಕುಸಿತದಲ್ಲೂ 16 ಸಾವಿರ ಲಾಭ ಮಾಡಬಹುದು.

  • ಅರ್ಧ ಹೂಡಿಕೆಯನ್ನು ಸ್ಟಾಪ್ ಲಾಸ್ ಮೂಲಕ ಮಾರಿಕೊಳ್ಳುವುದು, ಅರ್ಧ ಹಾಗೆ ಹೂಡಿಕೆ ಮುಂದುವರಿಸುವುದು ಕೂಡ ಮಾಡಬಹುದು. ಇದರಲ್ಲೂ ಸಹ ಮಾರುಕಟ್ಟೆಯ ಕುಸಿತಕ್ಕೆ ಉತ್ತರವನ್ನು ಕಂಡುಕೊಂಡಂತೆ ಆಗುತ್ತದೆ.

  • ದೀರ್ಘಾವಧಿ ಹೂಡಿಕೆದಾರರು ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಸುಮ್ಮನೆ ಕೂಡ ಇರಬಹುದು. ಇಳಿದದ್ದು ಏರಲೇ ಬೇಕು. ಅದರಲ್ಲೂ ಭಾರತದ ಷೇರು ಮಾರುಕಟ್ಟೆ ಇಳಿಕೆಯ ಸ್ಥಿತಯಲ್ಲಿ ಹೆಚ್ಚು ಕಾಲ ಇರಲು ಸಾಧ್ಯವಿಲ್ಲ. ಕೊಂಡ ಷೇರಿನ ಫಂಡಮೆಂಟಲ್ಸ್ ಸರಿಯಾಗಿದ್ದರೆ ಹೂಡಿಕೆಯನ್ನು ಮುಟ್ಟುವ ಅವಶ್ಯಕತೆ ಕೂಡ ಇರುವುದಿಲ್ಲ.

  • ಇರುವ ಹೂಡಿಕೆಯನ್ನು ಒಂದಷ್ಟೂ ಕದಲಿಸಿದೆ ಇನ್ನಷ್ಟು ಹೊಸ ಹೂಡಿಕೆಯನ್ನು, ಹೊಸ ವಲಯದಲ್ಲಿ ಮಾಡುವುದು ಕೂಡ ಕುಸಿತದಿಂದ ಲಾಭ ಪಡೆಯಲು ಬಳಸಬಹುದಾದ ಇನ್ನೊಂದು ತಂತ್ರ.

ಒಟ್ಟಾರೆ ಹೂಡಿಕೆದಾರರು ಒಂದಂಶವನ್ನು ಗಮನದ್ಲಲಿರಿಸಿಕೊಳ್ಳಬೇಕು. ಪ್ರತಿ ಕುಸಿತವೂ ಹೊಸ ಜಿಗಿತಕ್ಕೆ ಮುನ್ನುಡಿ ಎನ್ನುವುದು ಆ ಅಂಶ. ಮುಂದಿನ ಕನಿಷ್ಠ ಎರಡು ದಶಕ ಭಾರತಕ್ಕೆ ಸೇರಿದ್ದು. ಹೀಗಾಗಿ ಕರೆಕ್ಷನ್ಸ್ ಇರಬಹುದು ಅಥವಾ ಕುಸಿತ ಯಾವುದೂ ಕೂಡ ಬಹಳ ವೇಳೆ ಭಾರತೀಯ ಷೇರು ಮಾರುಕಟ್ಟೆಯನ್ನು ಕಟ್ಟಿಹಾಕಲು ಸಾಧ್ಯವಿಲ್ಲ. ಸರಳವಾಗಿ ಹೇಳಬೇಕೆಂದರೆ ಪ್ಯಾನಿಕ್ ಸೆಲ್ಲಿಂಗ್ ಮಾಡದೆ ಇದ್ದರೆ ಅಲ್ಲಿಗೆ ಅರ್ಧ ಯುದ್ಧ ಗೆದ್ದಂತೆ. ಉಳ್ಳವರಿಗೆ ಪ್ರತಿ ಕುಸಿತವೂ ಹೊಸ ಅವಕಾಶ ಸೃಷ್ಟಿಸಿ ಕೊಡುತ್ತದೆ.

Share market crash
ಷೇರು ಮಾರುಕಟ್ಟೆಯಲ್ಲಿ ಹಣ ಹೂಡಲು ಇದು ಸಕಾಲವೇ? Success Formula ಗಳ ಬಗ್ಗೆ ಮಾಹಿತಿ (ಹಣಕ್ಲಾಸು)

ಕೊನೆ ಮಾತು: ನಾಳೆ ಏನೂ ಆಗುತ್ತದೆ ಎಂದು ಇಂದು ಚಿಂತಿಸುವ ಕೆಲಸ ಬೇಕಿಲ್ಲ. ಮುಂದಿನ ಆರು ತಿಂಗಳಲ್ಲಿ ಬರಗಾಲ ಬರುತ್ತದೆ ಎಂದು ನಾವು ಇಂದಿನಿಂದ ಉಪವಾಸ ಪ್ರಾಕ್ಟೀಸ್ ಮಾಡುತ್ತಾ ಕುಳಿತುಕೊಳ್ಳಲು ಆಗುವುದಿಲ್ಲ. ಷೇರು ಮಾರುಕಟ್ಟೆ ಅಥವಾ ಬದುಕು ಎಲ್ಲೆಡೆಯೂ ಕೆಲಸಕ್ಕೆ ಬರುವುದು ಫ್ಲೆಕ್ಸಿಬಿಲಿಟಿ ಮತ್ತು ಅಡಾಪ್ಟಬಿಲಿಟಿ ಎನ್ನುವ ಎರಡು ಮಹಾಮಂತ್ರಗಳು. ಇವುಗಳ ಜೊತೆಗೆ ಸ್ವಲ್ಪ ಸಂಯಮ ಮತ್ತು ಶಾಂತ ಚಿತ್ತತೆ ಬೆಳಸಿಕೊಂಡರೆ ಷೇರು ಮಾರುಕಟ್ಟೆಯ ಕುಸಿತದ ಸಮಯವನ್ನು ನಿಭಾಯಿಸುವುದು ಕಷ್ಟವಲ್ಲ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com