
ಕರ್ನಾಟಕದಮಟ್ಟಿಗೆ ಹೇಳುವುದಾದರೆ, ಹೆಚ್ಚೋ- ಕಡಿಮೆಯೋ ಒಟ್ಟಿನಲ್ಲಿ ಧಗೆ ಹಚ್ಚಿಸಿಕೊಂಡಿದ್ದ ಧರೆಯನ್ನು ತಂಪಾಗಿಸುವ ಕೆಲಸವನ್ನಂತೂ ಜೂನ್ ತಿಂಗಳ ಮಳೆ ಮಾಡಿದೆ. ಬಾವಿ-ಜಲಾಶಯಗಳಲ್ಲಿ ಬತ್ತಿಯೇ ಹೋಗುತ್ತಿದ್ದ ನೀರಿಗೆ ಹೊಸಸೆಲೆ ಸೇರಿಕೊಂಡಿದೆ.
ಪ್ರತಿಬಾರಿಯ ಮಳೆಗಾಲದಲ್ಲೂ ಒಂದೆರಡು ಚರ್ಚೆಗಳಾಗುತ್ತವೆ. ಈಗ ಬೀಳುತ್ತಿರುವ ನೀರನ್ನು ಹಿಡಿದಿಟ್ಟುಕೊಳ್ಳಬೇಕು, ನೀರಸೆಲೆಗಳಿಗೆ ಬತ್ತದ ಚೈತನ್ಯ ತುಂಬಬೇಕು; ಅಂತರ್ಜಲ ಸಮೃದ್ಧವಾಗಬೇಕು ಎಂಬ ಚರ್ಚೆ-ಅಭಿಯಾನಗಳು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗುತ್ತಿವೆ. ಜತೆಯಲ್ಲೇ, ಮನೆಯಲ್ಲಿ-ಊರಲ್ಲಿ ಹಳೆಯ ಮನುಷ್ಯರಿದ್ದರೆ “ನಮ್ಮ ಕಾಲದಲ್ಲಿ ಆಯಾ ನಕ್ಷತ್ರಕ್ಕೆ ತಕ್ಕಂತೆ ಸುರಿಯುತ್ತಿದ್ದ ಮಳೆಯ ನಮೂನೆ ಈಗಿಲ್ಲ…ಏನೋ ಒಟ್ಟಿನಲ್ಲಿ ಯಾವ್ಯಾವಾಗಲೋ ಹುಯ್ದು ಹೋಗುತ್ತದೆ” ಎಂಬ ಮಾತುಗಳು ಸಾಮಾನ್ಯ. ಆ ಮಾತಿಗೆ ಮಾತು ಸೇರಿಸುವುದಕ್ಕೆ ಈಗಿನ ಜಮಾನಾದವರು ಇದ್ದರೆ ಅವರೆಲ್ಲ, ಹೇಗೆ ಇಂಗಾಲದ ವಿಸರ್ಜನೆ ಹೆಚ್ಚಾಗಿ ಅದು ತಾಪಮಾನ ಏರಿಕೆಗೆ ಕಾರಣವಾಗಿದೆ ಎಂಬ ಮಾಹಿತಿಗಳನ್ನೆಲ್ಲ ಪೋಣಿಸಿಯಾರು.
ಈ ಎರಡೂ ವಿಷಯಗಳಿಗೆ ಸಂಬಂಧಿಸಿದ ಹೀರೋ ಜೀವವೊಂದನ್ನು ಈ ತಂಪುಹೊತ್ತಿನಲ್ಲಿ, ಅಂಕಣ ಬರಹದ ಮೂಲಕ ನೆನೆಯೋಣ. ಈ ಜೀವಿಯ ಹೆಸರು ಹೇಳಿದೊಡನೆ, ವಿಲನ್ ಜಾಗದಲ್ಲಿರಬೇಕಾದವರನ್ನು ಹೀರೋ ಆಗಿಸುತ್ತಿರುವುದೇಕೆ ಅಂತ ಹಲವರಿಗೆ ಅನಿಸೀತೇನೋ.
ಗೆದ್ದಲು…ಆಡುಮಾತಿನಲ್ಲಿ ವರಲೆ ಅಂತಲೂ ಕೆಲವೆಡೆ ಬಳಕೆಯಲ್ಲಿರುವ ಈ ಜೀವಿಗಳ ಬಗ್ಗೆ ಕೇಳಿದೊಡನೆ ಮುಖ ಗಂಟಿಕ್ಕದವರಾರು? ಸರಿಯಾಗಿ ದೇಖರೇಖಿ ಇಲ್ಲದ ಮರದ ಪೀಠೋಪಕರಣ, ಕಂಬ, ಬಾಗಿಲು, ಪುಸ್ತಕ ಹೀಗೆ ಹಲವು ಸಂಪತ್ತುಗಳನ್ನು ಮಣ್ಣಾಗಿಸಿಬಿಡಬಲ್ಲ ಗೆದ್ದಲು ಮೇಲ್ನೋಟಕ್ಕೆ ವೈರಿಯೇ. ಆದರೆ…
ನಾವೆಷ್ಟು ಮಂದಿ ಲಭ್ಯವಿರುವ ಜಮೀನಿನಲ್ಲಿ ನೀರಿಂಗುವುದಕ್ಕೆ ಗುಂಡಿಗಳನ್ನು ತೋಡಿದ್ದೇವೋ ಇಲ್ಲವೋ, ಆದರೆ ಜಮೀನುಗಳಲ್ಲಿ ಅಲ್ಲಲ್ಲಿ ಹರಡಿಕೊಂಡಿರುವ ಹುತ್ತ ಮಾತ್ರ ಯಾವುದೇ ಅಬ್ಬರವಿಲ್ಲದೇ, ಮೇಲ್ನೋಟಕ್ಕೆ ಯಾರ ಗಮನಕ್ಕೂ ಬಾರದ ರೀತಿಯಲ್ಲಿ ನೀರಿಂಗಿಸಿಕೊಂಡಿದೆ. ಹಾವಿನ ಹುತ್ತ ಎಂದುಬಿಡುತ್ತೇವೆ. ಯಾವ ಹುತ್ತದಲ್ಲಿ ಯಾವ ಹಾವಿರುತ್ತದೆಯೋ ಎಂದು ಅದನ್ನೊಂದು ಅಪಾಯದ ಸಂಕೇತವಾಗಿ ನೋಡುತ್ತೇವೆ. ನಿಜ, ಅಲ್ಲಿ ಹಾವು ಹೊಕ್ಕಿರುವ ಸಾಧ್ಯತೆಗಳಿದ್ದರೂ ಹುತ್ತ ನಿರ್ಮಾಣದ ಶ್ರೇಯಸ್ಸು ಅದರದ್ದಲ್ಲ. ಅದು ಗದ್ದೆಯಲ್ಲಿ ತಲೆಎತ್ತಿರುವ ಹುತ್ತವಿದ್ದೀತು, ಪುರಾಣಕಾಲಕ್ಕೆ ಸಂಬಂಧಿಸಿದ ಚಿತ್ರಗಳಲ್ಲಿ ತಪಸ್ವಿಗಳ ಮೈಮೇಲೆ ಹಬ್ಬಿರುವ ಮಣ್ಣಿನ ಕುಸುರಿ ಇದ್ದೀತು ಅವೆಲ್ಲದರ ಸೃಷ್ಟಿಗೆ ಕಾರಣ ಬೆರಳುಗುರಿನ ಗಾತ್ರದಷ್ಟೂ ಇದ್ದಿರದ ಈ ಬಿಳಿ ಬಿಳಿ ಹುಳಗಳೇ.
ಈ ಗೆದ್ದಲುಗಳು ಭೂಮಿಯ ನೀರಿಂಗಿಸಿಕೊಳ್ಳುವಿಕೆ ಪ್ರಮಾಣವನ್ನು ಉತ್ತಮಗೊಳಿಸುತ್ತವೆ ಎಂಬುದರ ಬಗ್ಗೆ ಅದಾಗಲೇ ಸಾಕಷ್ಟು ಸಂಶೋಧನೆಗಳಾಗಿವೆ. ಈ ಗೆದ್ದಲಿನ ಹುತ್ತಗಳೇನೂ ಭೂಮಿಯಾಳಕ್ಕೆ ಸುರಂಗ ಕೊರೆಯುವುದಿಲ್ಲ. ಆದರೆ ಭೂಮಿಯ ಮೇಲ್ಪದರದಲ್ಲಿ ಅವು ನರಮಂಡಳದಂಥ ಸೂಕ್ಷ್ಮ ಕೊರೆತ ಮಾಡುತ್ತವೆ. ಇವುಗಳಲ್ಲಿ ಗಾಳಿಯಾಡುವುದರಿಂದ ಅದು ಮಣ್ಣನ್ನು ಸಡಿಲಗೊಳಿಸಿ ತನ್ನ ಮೇಲೆ ಬಿದ್ದ ಮಳೆನೀರನ್ನು ಹೆಚ್ಚುಹೆಚ್ಚಾಗಿ ಆಳಕ್ಕೆ ಹನಿಸಿಕೊಳ್ಳುವುದಕ್ಕೆ ಸಹಕರಿಸುತ್ತದೆ. ಉಷ್ಣವಲಯದ ಪ್ರದೇಶಗಳಲ್ಲಿ, ಒಣಭೂಮಿಗಳಲ್ಲಿ ಎಲ್ಲೆಲ್ಲಿ ಹುತ್ತಗಳಿವೆಯೋ ಅಲ್ಲೆಲ್ಲ ಹಸಿರು ಬದುಕಿಕೊಂಡಿರುವ, ಆ ಮೂಲಕ ಆ ನೆಲವು ಸಂಪೂರ್ಣ ಒಣಭೂಮಿಯಾಗಿ ಪರಿವರ್ತನೆಗೊಳ್ಳದಂತೆ ತಡೆಯುವ ಕೆಲಸವಾಗಿದೆ ಎಂದು ಸಂಶೋಧನೆಗಳು ದೃಢಪಡಿಸಿವೆ. ಆಫ್ಕೋರ್ಸ್, ಇವಕ್ಕೆ ಮಣ್ಣಿನ ತೇವಾಂಶ ಕಾಪಿಡುವ ತರಗೆಲೆಗಳ ಸಾಥ್ ಸಹ ಬೇಕಾಗುತ್ತದೆ. ಬುರ್ಕಿನೊ ಫಾಸೊ ಎಂಬ ಆಫ್ರಿಕಾದ ದೇಶದಲ್ಲಿ ಒಂದು ಕಡೆ ತರಗೆಲೆ ಮತ್ತು ಗೆದ್ದಲುಗಳ ಸಹಯೋಗ ಬಳಸಿ ಹಾಗೂ ಇನ್ನೊಂದು ಭೂಮಿಯಲ್ಲಿ ಇವಿಲ್ಲದೇ ನೀರು ಹೀರಿಸುವ ಅಧ್ಯಯನಗಳನ್ನು ಮೂರು ವರ್ಷ ಮಳೆಗಾಲದಲ್ಲಿ ಮಾಡಲಾಯಿತು. ಗೆದ್ದಲು ಮತ್ತು ತರಗೆಲೆಗಳ ಸಂಯೋಗವಿರುವ ಭೂಮಿಯಲ್ಲಿ ನೀರು ಹಿಡಿದಿಟ್ಟುಕೊಂಡಿದ್ದ ಪ್ರಮಾಣವು ಗಣನೀಯವಾಗಿ ಹೆಚ್ಚಿತ್ತು.
2015-16ರಲ್ಲಿ ಮಲೇಷ್ಯವನ್ನು ಕಾಡಿತ್ತು ಬರ. ಅದೇ ಸಂದರ್ಭದಲ್ಲಿ ಆ ದೇಶದ ಮಳೆಕಾಡಿನ ಭಾಗವೊಂದನ್ನು ಆಯ್ದುಕೊಂಡು ಹಾಂಕಾಂಗ್ ಯುನಿವರ್ಸಿಟಿ ಪ್ರಾಧ್ಯಾಪಕ ಲೂಯಿಸ್ ಆಮಿ ಆಸ್ಟನ್ ನೇತೃತ್ವದಲ್ಲಿ ಪ್ರಯೋಗವೊಂದು ನಡೆಯಿತು. ಆಸ್ಟನ್ ಅವರ ಸಂಶೋಧನೆ ತಂಡವು ಕಾಡಿನ ಎರಡು ಜಮೀನಿನ ತುಂಡನ್ನು ಆರಿಸಿಕೊಂಡಿತು. ಒಂದರಲ್ಲಿ ಅಲ್ಲಿದ್ದ ಹುತ್ತಗಳನ್ನು ಧ್ವಂಸ ಮಾಡಿ, ಕೇವಲ ಗೆದ್ದಲುಗಳಿಗೆ ಮಾತ್ರ ಪರಿಣಾಮ ನೀಡಬಲ್ಲ ಕೀಟನಾಶಕಗಳನ್ನು ಉಪಯೋಗಿಸಿ ಅಲ್ಲಿ ಅವುಗಳ ಸಂತತಿಯೇ ಇಲ್ಲದಂತೆ ನೋಡಿಕೊಳ್ಳಲಾಯಿತು. ಇನ್ನೊಂದು ತುಂಡಿನಲ್ಲಿ ಹುತ್ತ-ಗೆದ್ದಲು ಆವಾಸಗಳನ್ನೆಲ್ಲ ಗುರುತಿಸಿ ಹಾಗೆಯೇ ಬಿಡಲಾಗಿತ್ತು.
ಯಾವ ಪ್ಲಾಟಿನಲ್ಲಿ ಗೆದ್ದಲುಗಳನ್ನು ನಾಶವಾಗದಂತೆ ಬಿಡಲಾಗಿತ್ತೋ ಅಲ್ಲಿ ವರ್ಷದ ಬರ ಮುಗಿದು ಮಳೆ ಬರುವ ಹೊತ್ತಿಗೆ ಅವುಗಳ ಸಂತಾನ ಡಬಲ್ ಆಗಿತ್ತು. ಅಲ್ಲಿ ಅವು ತರಗೆಲೆ, ಕಸ-ಕಡ್ಡಿಗಳನ್ನೆಲ್ಲ ವಿಘಟಿಸಿ ಮಣ್ಣಾಗಿಸುವ ಕಾರ್ಯವನ್ನು ಹಾಗೂ ಮಣ್ಣಿಗೆ ತೇವಾಂಶ ಇಡುವ ಕೆಲಸವನ್ನು ದೊಡ್ಡಮಟ್ಟದಲ್ಲಿ ಮಾಡಿದ್ದವು. ಗೆದ್ದಲುಗಳ ಮುಖ್ಯ ಬೇಟೆಗಾರ ಇರುವೆಗಳು ಸಹ ಬರದ ಕಾರಣದಿಂದ ಕಡಿಮೆ ಇದ್ದದ್ದು ಇವುಗಳ ಸಂಖ್ಯೆ ಹೆಚ್ಚಾಗುವುದಕ್ಕೆ ಕಾರಣವಿದ್ದಿರಬಹುದೆಂದು ಸಂಶೋಧಕರು ವಿಶ್ಲೇಷಿಸಿದರು. ಅವರ ವಿಶ್ಲೇಷಣೆ ಪ್ರಕಾರ, ಬರದ ಒಣ ವಾತಾವರಣದಲ್ಲಿ ಕಸಕಡ್ಡಿ-ಮರದ ಒಣಬೊಡ್ಡೆಗಳೆಲ್ಲ ನೆಲದ ಮೇಲೆ ಬಿದ್ದಿರುತ್ತವೆ. ಆದರೆ ನೀರಾದರೋ ಭೂಮಿಯ ಅತಿ ಆಳ ತಲುಪಿರುತ್ತದೆ. ಈ ಗೆದ್ದಲುಗಳು ತಮ್ಮ ಆಹಾರ ಸಂಸ್ಕರಣೆಗೆ ಅಗತ್ಯವಿದ್ದ ನೀರನ್ನು ಅಂತರ್ಜಲ ಸಿಗುವ ಆಳಕ್ಕೆ ಹೋಗಿ ತಂದವು. ಇದರಿಂದ ಆ ಜಾಗದಲ್ಲಿ ಭೂಮಿಯೊಳಗಿನ ಸೂಕ್ಷ್ಮನಾಡಿಗಳು ತುಂಬ ಆಳದವರೆಗೆ ರಚನೆಯಾದವು. ಪರಿಣಾಮ ಏನೆಂದರೆ, ಯಾವಾಗ ಮಳೆಯಾಯಿತೋ ಆಗ ಗೆದ್ದಲುಗಳನ್ನು ಇಲ್ಲವಾಗಿಸಿದ್ದ ಭೂಮಿಗೆ ಹೋಲಿಸಿದರೆ, ಈ ಭೂಮಿಯ ಅಂದರೆ ಗೆದ್ದಲನ್ನು ಬೆಳೆಯಲುಬಿಟ್ಟ ಭೂಮಿಯಲ್ಲಿ ಗಡ್ಡೆ-ಬೀಜೋತ್ಪನ್ನದ ಪ್ರಮಾಣ ಶೇ. 51ರಷ್ಟು ಹೆಚ್ಚಿತ್ತು. ಬರ ನಿರ್ವಹಣೆಯಲ್ಲಿ ಗೆದ್ದಲುಗಳ ಪಾತ್ರ ದೊಡ್ಡದು ಅಂತ ಈ ಸಂಶೋಧನೆ ಸಾರಿತು.
ಈಗ ಈ ಲೇಖನದ ಪ್ರಾರಂಭದಲ್ಲಿ ಪ್ರಸ್ತಾಪಿಸಿದ ಇನ್ನೊಂದು ಪರಿಸರ ಸಂಬಂಧಿ ವಿಷಯಕ್ಕೆ ಬರೋಣ. ಅದೆಂದರೆ, ಇಂಗಾಲ ವಿಸರ್ಜನೆ. ಇದೀಗ, ಅವೆಷ್ಟೋ ನವೋದ್ದಿಮೆಗಳು, ಸಂಶೋಧನಾ ಸಂಸ್ಥೆಗಳು ಹಾಗೂ ಸರ್ಕಾರಗಳೆಲ್ಲ ವಾತಾವರಣಕ್ಕೆ ಸೇರುತ್ತಿರುವ ಇಂಗಾಲದ ನಿರ್ವಹಣೆ ನಿಟ್ಟಿನಲ್ಲಿ ಆ ಇಂಗಾಲವನ್ನು ಭೂಮಿಯೊಳಗೆ ಕಳುಹಿಸುವ ತಂತ್ರಜ್ಞಾನದ ಅಭಿವೃದ್ಧಿಗೆ ಪ್ರಯತ್ನನಿರತವಾಗಿವೆ. ವಾತಾವರಣಕ್ಕೆ ಸೇರುವ ಇಂಗಾಲ ಮಾಲಿನ್ಯಕ್ಕೆ ಕಾರಣವಾದರೆ, ಭೂಮಿಯೊಳಗೆ ಇಳಿದದ್ದು ಸಸ್ಯಗಳಿಗೆ ಆಹಾರವಾಗಬಲ್ಲದು.
ದಕ್ಷಿಣ ಆಫ್ರಿಕಾದ ಸ್ಟೆಲ್ಲಾನ್ಬಾಶ್ ವಿಶ್ವವಿದ್ಯಾಲಯದ ಸಂಶೋಧನಾನಿರತರು ಇದೇ ಜೂನ್ ತಿಂಗಳಲ್ಲಿ ಪ್ರಕಟಿಸಿರುವ ಅಧ್ಯಯನ ವರದಿ ಪ್ರಕಾರ, ಭೂಮಿಯೊಳಕ್ಕೆ ಇಂಗಾಲ ಸಂಚಯವಾಗಿಸುವ ಬಹುದೊಡ್ಡ ಶಕ್ತಿ ಗೆದ್ದಲುಗಳಿಗಿದೆ. ಟೊಂಗೆ-ಕಡ್ಡಿ ಇತ್ಯಾದಿಗಳು ಭೂಮಿ ಮೇಲೆ ಕೊಳೆತೋ ಸುಟ್ಟೋ ಹೋದರೆ ಅದರ ಅನಿಲ ವಿಸರ್ಜನೆ ವಾತಾವರಣ ಸೇರುತ್ತದೆ. ಆದರೆ, ಗೆದ್ದಲುಗಳು ಇವನ್ನು ಭೂಮಿಯಲ್ಲಿ ಕೆಲ ಸೆಂಟಿಮೀಟರುಗಳ ಅಡಿಗೆ ಒಯ್ದು ವಿಘಟಿಸುವ ಕಾರ್ಯ ಮಾಡುತ್ತವೆ. ಅಂದಹಾಗೆ, ಈ ಸಂಶೋಧಕರು ದಕ್ಷಿಣ ಆಫ್ರಿಕಾದ ನಾಮಕ್ವಾಲ್ಯಾಂಡ್ ಪ್ರಾಂತ್ಯದ ದೊಡ್ಡ ಹುತ್ತ ಸಮೂಹಗಳ ಮೇಲೆ ಅಧ್ಯಯನ ನಡೆಸಿ, ಅವುಗಳಲ್ಲಿ ಕೆಲವು 36,000 ವರ್ಷಗಳಷ್ಟು ಹಳೆಯವು ಎಂದು ತೀರ್ಮಾನಕ್ಕೆ ಬಂದಿದ್ದಾರೆ! ಈಗಲೂ ಅಲ್ಲಿ ಒಂದು ನಿರ್ದಿಷ್ಟ ಪ್ರಬೇಧದ ಗೆದ್ದಲುಗಳಿವೆ. ರೆಡಿಯೊಕಾರ್ಬನ್ ಡೇಟಿಂಗ್ ಪದ್ಧತಿ ಮೂಲಕ ಹುತ್ತಗಳ ಆಯುಷ್ಯ ಅಳೆಯಲಾಗಿದೆ. ಇದುವರೆಗೆ ಬ್ರಾಜಿಲ್ ನಲ್ಲಿ ಕಂಡುಬಂದಿದ್ದ ಹುತ್ತವೊಂದು 4,000 ವರ್ಷಗಳಷ್ಟು ಪುರಾತನವಾಗಿದ್ದು ಅದೇ ಅತ್ಯಂತ ಹಳೆಯದ್ದೆಂಬ ದಾಖಲೆ ಇತ್ತು.
ಇಷ್ಟಕ್ಕೂ 2021ರಲ್ಲಿ ಸಂಶೋಧಕರು ನಾಮಕ್ವಾಲ್ಯಾಂಡ್ ಪ್ರದೇಶದಲ್ಲಿ ಅಧ್ಯಯನ ನಿರತರಾಗಿದ್ದು ಗೆದ್ದಲುಗಳನ್ನು ಕೇಂದ್ರೀಕರಿಸಿಕೊಂಡೇನೂ ಆಗಿರಲಿಲ್ಲ. ಅದು ಬಹಳ ಅಪರೂಪಕ್ಕೆ ಮಾತ್ರವೇ ಮಳೆ ಕಾಣುವ ಪ್ರಾಂತ್ಯ. ಹೀಗಾಗಿ ಭೂಮಿಯ ಮೇಲ್ಮಟ್ಟದಲ್ಲಿರುವ ನೀರು ಸಾಕಾಗದೆಂದು ಅಂತರ್ಜಲಕ್ಕೆ ಲಗ್ಗೆ ಹಾಕಿದಾಗಲೆಲ್ಲ ಅಲ್ಲಿಂದ ಬರುತ್ತಿದ್ದದ್ದು ಉಪ್ಪು ನೀರು. ಇಲ್ಲಿನ ಅಂತರ್ಜಲದ ನೀರೇಕೆ ಉಪ್ಪು ಎಂದು ಸಂಶೋಧನೆ ಮಾಡುತ್ತ ಸಾಗಿದವರಿಗೆ ತಿಳಿದುಬಂದಿದ್ದೇನೆಂದರೆ, ಇಲ್ಲಿ ನೀರಿಂಗುತ್ತಿರುವುದು ದೊಡ್ಡ ದೊಡ್ಡ ಹುತ್ತಗಳ ಮೂಲಕ. ಈ ಹುತ್ತಗಳೋ 36 ಸಾವಿರ, 13 ಸಾವಿರ ಹೀಗೆಲ್ಲ ಒಂದೊಂದು ಒಂದೊಂದು ಬಗೆಯಲ್ಲಿ ಪ್ರಾಚೀನತೆ ಇರುವಂಥದ್ದು. ಸಹಸ್ರಾರು ವರ್ಷಗಳಲ್ಲಿ ಈ ಬೃಹತ್ ಹುತ್ತಗಳ ಮೇಲೆ ಖನಿಜ-ಲವಣಗಳೆಲ್ಲ ಸಂಗ್ರಹವಾಗಿವೆ. ಎಷ್ಟೋ ವರ್ಷಕ್ಕೊಮ್ಮೆ ಬರುವ ಮಳೆಯ ನೀರನ್ನು ಈ ಹುತ್ತಗಳು ಭೂತಳಕ್ಕೆ ಬಸಿಯುವಾಗ ಈ ಸಂಗ್ರಹಿತ ಲವಣಾಂಶವೂ ಕೆಳಕ್ಕಿಳಿದಿದೆ. ಇದು ಅಲ್ಲಿನ ಅಂತರ್ಜಲದ ನೀರು ಉಪ್ಪಾಗಿರುವುದಕ್ಕೆ ಸಿಕ್ಕ ಕಾರಣವಾದರೆ, ಇದೇ ರೀತಿ ಬಹುದೊಡ್ಡ ಪ್ರಮಾಣದಲ್ಲಿ ಇಂಗಾಲವನ್ನು ಸಹ ಈ ಹುತ್ತಗಳು ಕೆಳಗಿಳಿಸಿವೆ ಎಂಬಂಶ ಅವರ ಅಧ್ಯಯನಕ್ಕೆ ಸಿಕ್ಕಿದೆ.
ಇಂಗಾಲಚಕ್ರದಲ್ಲಿ ಗೆದ್ದಲುಗಳ ಪಾತ್ರವಿದೆ ಎಂಬುದು ಮೊದಲಿನಿಂದಲೂ ಗೊತ್ತಿದ್ದ ಅಂಶವೇ. ಆದರೆ, ದಕ್ಷಿಣ ಆಫ್ರಿಕಾದ ಹುತ್ತಗಳ ಅಧ್ಯಯನದ ನಂತರ ಸಂಶೋಧಕರು ಹೇಳುತ್ತಿರುವುದೇನೆಂದರೆ- ಇಂಗಾಲವನ್ನು ಭೂಮಿಗೆ ಇಳಿಸುವಲ್ಲಿ ನಾವಂದುಕೊಂಡಿದ್ದಕ್ಕಿಂತ ದೊಡ್ಡ ಪಾತ್ರವನ್ನು ಗೆದ್ದಲುಗಳು ನಿರ್ವಹಿಸುತ್ತಿವೆ, ಈ ಬಗ್ಗೆ ಇನ್ನೂ ಆಳ ಅಧ್ಯಯನಗಳು ನಡೆದರೆ ಅದೀಗ ವಿಜ್ಞಾನಲೋಕವು ಪ್ರಯತ್ನಿಸುತ್ತಿರುವ ಭೂಮಿಯಾಳಕ್ಕೆ ಇಂಗಾಲ ಸಂಚಯಗೊಳಿಸಿ ವಾತಾವರಣದ ಮಾಲಿನ್ಯವನ್ನು ತಡೆಯುವ ಯತ್ನಗಳಿಗೆ ಹೊಸದಾರಿಗಳನ್ನು ತೋರಿಸೀತು ಅನ್ನೋದು.
-ಚೈತನ್ಯ ಹೆಗಡೆ
cchegde@gmail.com
Advertisement